ಪದ್ಯ ೫೩: ದ್ರೌಪದಿಯ ಚಿಂತನೆ ಹೇಗಿತ್ತು?

ತಾಗಿದುದಲಾ ನಾರದಾದ್ಯರ
ನಾಗತವನರುಹಿದರು ಹಿಂದೆ ವಿ
ಯೋಗವಾಯಿತೆ ಲಕ್ಷ್ಮಿಗಿಂದ್ರ ಪ್ರಸ್ಥಪುರವರದ
ಹೋಗಲದು ಮುನ್ನೇನ ನೊಡ್ಡಿದ
ನೀಗಿದನು ಗಡ ತನ್ನನೆಂತಿದ
ರಾಗು ಹೋಗೇನೆಂದು ನುಡಿದಳು ಪ್ರಾತಿಕಾಮಿಕನ (ಸಭಾ ಪರ್ವ, ೧೫ ಸಂಧಿ, ೫೩ ಪದ್ಯ)

ತಾತ್ಪರ್ಯ:
ಅಯ್ಯೋ ಹಿಂದೆ ನಾರದಾದಿಗಳು ಎಚ್ಚರಿಸಿದ ಮಾತು ಸತ್ಯವಾಯಿತೇ? ಅವರು ಮುಂದೆ ಬರುವ ಅನಾಹುತಕ್ಕೆ ಎಚ್ಚರಿಸಿದ್ದರು, ಇಂದ್ರಪ್ರಸ್ಥನಗರಕ್ಕೂ ರಾಜ್ಯಲಕ್ಷ್ಮಿಗೂ ಅಗಲಿಕೆಯಾಯಿತೇ? ಅದು ಹಾಗಿರಲಿ, ಎಲೈ ಪ್ರಾತಿಕಾಮಿಕ, ರಾಜನು ಮೊದಲು ಏನನ್ನು ಪಣಕ್ಕೆ ಒಡ್ಡಿ ಸೋತನು? ನಂತರ ತನ್ನನ್ನು ಸೋತನೇ? ಇದರ ವಿಷಯವನ್ನು ತಿಳಿಸು ಎಂದು ಪ್ರಾತಿಕಾಮಿಕನನ್ನು ದ್ರೌಪದಿ ಕೇಳಿದಳು.

ಅರ್ಥ:
ತಾಗು: ಮುಟ್ಟು; ಆದಿ: ಮುಂತಾದ; ಆಗತ: ಬರುವುದನ್ನು; ಅರುಹು: ಹೇಳು; ಹಿಂದೆ: ಮೊದಲು; ವಿಯೋಗ: ಬೇರಾಗುವಿಕೆ; ಲಕ್ಷ್ಮ: ರಾಜ್ಯಲಕ್ಷ್ಮಿ; ಪುರ: ಊರು; ವರ: ಶ್ರೇಷ್ಠ; ಹೋಗಲುದು: ಹಾಗಿರಲಿ; ಮುನ್ನ: ಮೊದಲು; ಒಡ್ಡು: ದ್ಯೂತದಲ್ಲಿ ಪಣಕ್ಕೆ ಇಡು; ಆಗುಹೋಗು: ನಡೆದ; ನುಡಿ: ಮಾತಾಡು; ನೀಗು: ಕಳೆದುಕೊಳ್ಳು; ಗಡ: ಅಲ್ಲವೆ, ಬೇಗನೆ;

ಪದವಿಂಗಡಣೆ:
ತಾಗಿದುದಲಾ +ನಾರದಾದ್ಯರನ್
ಆಗತವನ್+ಅರುಹಿದರು +ಹಿಂದೆ +ವಿ
ಯೋಗವಾಯಿತೆ +ಲಕ್ಷ್ಮಿಗ್ + ಇಂದ್ರಪ್ರಸ್ಥ+ಪುರವರದ
ಹೋಗಲದು +ಮುನ್+ಏನನ್+ಒಡ್ಡಿದ
ನೀಗಿದನು +ಗಡ +ತನ್ನನ್+ಎಂತಿದರ್
ಆಗು ಹೋಗ್+ಏನೆಂದು +ನುಡಿದಳು +ಪ್ರಾತಿಕಾಮಿಕನ

ಅಚ್ಚರಿ:
(೧) ದ್ರೌಪದಿಯು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ವಿವೇಚಿಸುವ ಪರಿ – ಮುನ್ನೇನ ನೊಡ್ಡಿದ
ನೀಗಿದನು ಗಡ ತನ್ನನೆಂತಿದರಾಗು ಹೋಗೇನೆಂದು ನುಡಿದಳು ಪ್ರಾತಿಕಾಮಿಕನ
(೨) ದ್ರೌಪದಿ ದುಃಖಿತಳಾದಳೆಂದು ಹೇಳುವ ಪರಿ – ವಿಯೋಗವಾಯಿತೆ ಲಕ್ಷ್ಮಿಗಿಂದ್ರ ಪ್ರಸ್ಥಪುರವರದ

ಪದ್ಯ ೫೨: ದ್ರೌಪದಿಯು ಪ್ರಾತಿಕಾಮಿಕನನ್ನು ಏನು ಕೇಳಿದಳು?

ದೂತ ಹೇಳೈ ತಂದೆ ಜೂಜನ
ಜಾತರಿಪುವಾಡಿದನೆ ಸೋತನೆ
ಕೈತವದ ಬಲೆಗಾರರವದಿರು ಶಕುನಿ ಕೌರವರು
ದ್ಯೂತದಲಿ ಮುನ್ನೇನನೊಡ್ಡಿದ
ಸೋತನೇನನು ಶಿವ ಶಿವಾ ನಿ
ರ್ಧೂತ ಕಿಲ್ಬಿಷನರಸನೆಂದಳು ದ್ರೌಪದಾದೇವಿ (ಸಭಾ ಪರ್ವ, ೧೫ ಸಂಧಿ, ೫೨ ಪದ್ಯ)

ತಾತ್ಪರ್ಯ:
ಅಪ್ಪ ಪ್ರಾತಿಕಾಮಿಕ, ಜೂಜನ್ನು ಶತ್ರುವೇ ಇಲ್ಲದವನಾದ ಧರ್ಮರಾಯನು ಆಡಿದನೇ, ಆಡಿ ಸೋತನೇ? ಮೋಸದ ಬಲೆಬೀಸುವಲ್ಲಿ ಶಕುನಿ, ದುರ್ಯೋಧನರು ನಿಪುಣರು. ದೊರೆಯು ಜೂಜಿನಲ್ಲಿ ಮೊದಲು ಏನನೊಡ್ಡಿ ಸೋತನು, ಶಿವ ಶಿವಾ ಕಲ್ಮಷ ರಹಿತನಾದ ಧರ್ಮರಾಯನಿಗೆ ಈ ಸ್ಥಿತಿಯೇ ಎಂದು ನೊಂದಳು ದ್ರೌಪದಿ.

ಅರ್ಥ:
ದೂತ: ಚರ, ಸೇವಕ; ಹೇಳು: ತಿಳಿಸು; ತಂದೆ: ಅಪ್ಪ, ಪಿತ; ಜೂಜು: ದ್ಯೂತ; ಅಜಾತರಿಪು: ವೈರಿಯಿಲ್ಲದವ; ರಿಪು: ವೈರಿ; ಅಜಾತ: ಹುಟ್ಟು ಇಲ್ಲದ; ಆಡು: ಕ್ರೀಡಿಸು; ಸೋಲು: ಪರಾಭವ; ಕೈತ: ಮೋಸ, ಕೆಲಸ; ಬಲೆ: ಮೋಸ, ಜಾಲ; ಮುನ್ನ: ಮೊದಲು; ಒಡ್ಡು: ಪಣವಾಗಿಡು; ನಿರ್ಧೂತ: ತೊಡೆದು ಹಾಕುವುದು; ಕಿಲ್ಭಿಷ: ಕಲ್ಮಷ ರಹಿತನಾದ; ಅರಸ: ರಾಜ;

ಪದವಿಂಗಡಣೆ:
ದೂತ +ಹೇಳೈ +ತಂದೆ +ಜೂಜನ್
ಅಜಾತರಿಪುವ್+ಆಡಿದನೆ +ಸೋತನೆ
ಕೈತವದ +ಬಲೆಗಾರರ್+ಅವದಿರು +ಶಕುನಿ +ಕೌರವರು
ದ್ಯೂತದಲಿ +ಮುನ್+ಏನನ್+ಒಡ್ಡಿದ
ಸೋತನ್+ಏನನು +ಶಿವ +ಶಿವಾ+ ನಿ
ರ್ಧೂತ +ಕಿಲ್ಬಿಷನ್+ಅರಸನ್+ಎಂದಳು +ದ್ರೌಪದಾದೇವಿ

ಅಚ್ಚರಿ:
(೧) ಧರ್ಮರಾಯನನ್ನು ದ್ರೌಪದಿ ಕರೆಯುವ ಪರಿ – ಅಜಾತರಿಪು, ನಿರ್ಧೂತ ಕಿಲ್ಬಿಷನರಸ
(೨) ಕೌರವರ ಬಗ್ಗೆ ದ್ರೌಪದಿಗಿದ್ದ ಅಭಿಪ್ರಾಯ – ಕೈತವದ ಬಲೆಗಾರರವದಿರು ಶಕುನಿ ಕೌರವರು

ಪದ್ಯ ೫೧: ಪ್ರಾತಿಕಾಮಿಕನ ಮಾತು ಯಾವ ಸಾಗರವನ್ನು ಸೃಷ್ಟಿಸಿತು?

ಅರಳಿದಂಬುಜ ವನಕೆ ಮಂಜಿನ
ಸರಿಯು ಸುರಿವಂದದಲಿ ಸುಗ್ಗಿಯ
ಸಿರಿಯ ಹೊಸ ಬೆಳುದಿಂಗಳನು ಬಲುಮುಗಿಲು ಕವಿವಂತೆ
ಚರನ ಬಿನ್ನಹಕರಸಿ ಮೊದಲಾ
ಗಿರೆ ಸಮಸ್ತ ಸಖೀಜನದ ಮುಖ
ಸರಸಿರುಹ ಬಾಡಿದವು ಮುಸುಕಿತು ಮೌನಮಯ ಜಲಧಿ (ಸಭಾ ಪರ್ವ, ೧೫ ಸಂಧಿ, ೫೧ ಪದ್ಯ)

ತಾತ್ಪರ್ಯ:
ಸೂರ್ಯನ ರಶ್ಮಿಗೆ ಅರಳಿದ ಕಮಲದ ಮೇಲೆ ಒಮ್ಮೆಲೆ ಹಿಮದ ಮಳೆಯು ಸುರಿವಂತೆ, ಸುಗ್ಗಿಯ ಸಂಭ್ರಮದ ಕಾಲದ ಬೆಳುದಿಂಗಳ ಪ್ರಕಾಶಮಯನಾದ ಚಂದ್ರನನ್ನು ಮೋಡವು ಕವಿಯುವಂತೆ, ಪ್ರಾತಿಕಾಮಿಕನ ಮಾತುಗಳು ಸಂತೋಷದಲ್ಲಿ ಮುಳುಗಿದ್ದ ಆ ಸಭೆಯನ್ನು ಆವರಿಸಿತು, ದ್ರೌಪದಿಯಾದಿಯಾಗಿ ಅವಳ ಜೊತೆಯಲ್ಲಿದ್ದ ಸಾವಿರಾರು ಸಖಿಯರು ಈ ಮಾತನ್ನು ಕೇಳಿ ದಿಗ್ಭ್ರಮೆಗೊಂಡು ಮೌನಕ್ಕೆ ಶರಣಾದರು, ಅವರ ಮುಖದ ಕಾಂತಿಯು ಬಾಡಿದವು, ಸಂತಸದ ಮಾತುಗಳು ನಿಂತವು ಮೌನದ ಸಮುದ್ರವು ಆ ಸ್ತ್ರಿಯರ ಓಲಗವನ್ನು ಆವರಿಸಿತು.

ಅರ್ಥ:
ಅರಳು: ವಿಕಸಿಸು; ಅಂಬುಜ: ಕಮಲ; ವನ: ಬನ, ಕಾಡು; ಮಂಜು: ಹಿಮ; ಸರಿ:ಮಳೆ, ವೃಷ್ಟಿ; ಸುರಿ: ವರ್ಷಿಸು, ಧಾರೆ; ಸುಗ್ಗಿ: ಬೆಳೆಯನ್ನು ಕೊಯ್ಯುವ ಕಾಲ, ಹಬ್ಬ, ಪರ್ವ; ಸಿರಿ: ಐಶ್ವರ್ಯ; ಹೊಸ: ನವೀನ; ಬೆಳುದಿಂಗಳು: ಪೂರ್ಣಿಮೆ; ಬಲು: ದೊಡ್ಡದಾದ; ಮುಗಿಲು: ಮೋಡ, ಮೇಘ; ಕವಿ: ಆವರಿಸು; ಚರ:ದೂತ; ಬಿನ್ನಹ: ಮನವಿ; ಮೊದಲು: ಮುಂಚೆ; ಸಮಸ್ತ: ಎಲ್ಲಾ; ಸಖಿ: ದಾಸಿ; ಜನ: ಗುಂಪು; ಮುಖ: ಆನನ; ಸರಸಿರುಹ: ಕಮಲ; ಬಾಡು: ಒಣಗು, ಕಳೆಗುಂದು; ಮುಸುಕು: ಆವರಿಸು; ಮೌನ: ನಿಶ್ಯಬ್ದತೆ, ನೀರವತೆ; ಜಲಧಿ: ಸಾಗರ;

ಪದವಿಂಗಡಣೆ:
ಅರಳಿದ್+ಅಂಬುಜ +ವನಕೆ +ಮಂಜಿನ
ಸರಿಯು +ಸುರಿವಂದದಲಿ +ಸುಗ್ಗಿಯ
ಸಿರಿಯ +ಹೊಸ +ಬೆಳುದಿಂಗಳನು +ಬಲುಮುಗಿಲು +ಕವಿವಂತೆ
ಚರನ +ಬಿನ್ನಹಕರಸಿ+ ಮೊದಲಾ
ಗಿರೆ+ ಸಮಸ್ತ +ಸಖೀಜನದ +ಮುಖ
ಸರಸಿರುಹ +ಬಾಡಿದವು +ಮುಸುಕಿತು+ ಮೌನಮಯ +ಜಲಧಿ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಸಂತಸವು ಬಾಡಿತು ಎಂದು ಹೇಳುವ ಪರಿ – ಅರಳಿದಂಬುಜ ವನಕೆ ಮಂಜಿನ ಸರಿಯು ಸುರಿವಂದದಲಿ; ಸುಗ್ಗಿಯ ಸಿರಿಯ ಹೊಸ ಬೆಳುದಿಂಗಳನು ಬಲುಮುಗಿಲು ಕವಿವಂತೆ
(೨) ಮೌನದ ಗಾಢತೆಯನ್ನು ವಿವರಿಸುವ ಪರಿ – ಮೌನಮಯ ಜಲಧಿ