ಪದ್ಯ ೪೬: ದ್ರೌಪದಿಯನ್ನು ಯಾರು ಸುತ್ತುವರೆದಿದ್ದರು?

ಹೊಳೆವ ಕಂಗಳ ಕಾಂತಿಗಳ ಥಳ
ಥಳಿಪ ವದನ ಪ್ರಭೆಯ ರತ್ನಾ
ವಳಿಯ ಬಹುವಿಧ ರಶ್ಮಿಗಳ ಲಾವಣ್ಯಲಹರಿಗಳ
ಎಳನಗೆಯ ಸುಲಿಪಲ್ಲ ಮುಕ್ತಾ
ವಳಿಯ ನಖ ದೀಧಿತಿಯ ಬೆಳಗಿನ
ಬಳಗವನೆ ಬಾಲಕಿಯರಿದ್ದರು ಸತಿಯ ಬಳಸಿನಲಿ (ಸಭಾ ಪರ್ವ, ೧೫ ಸಂಧಿ, ೪೬ ಪದ್ಯ)

ತಾತ್ಪರ್ಯ:
ಪ್ರಕಾಶಮಾನವಾಗಿ ಹೊಳೆಯುವ ಕಣ್ಣುಗಳ ಕಾಂತಿ, ಮುಖದಲ್ಲಿ ಥಳಥಳಿಸುವ ಬೆಳಕಿನ ಹೊಳಪು, ಧರಿಸಿದ ಆಭರಣಗಳ ರತ್ನಗಳ ಕಿರಣಗಳು, ಸೊಬಗಿನ ಉಲ್ಲಾಸದ ಪ್ರವಾಹ, ಸುಂದರವಾದ ಹಲ್ಲುಗಳು, ಮಂದಸ್ಮಿತ, ಮುತ್ತಿನ ಹಾರ, ಉಗುರುಗಳ ಕಾಂತಿಗಳಿಂದ ಬೆಳಕಿನ ಬಳಗದಂತೆ ಶೋಭಿಸುವ ತರುಣಿಯರು ದ್ರೌಪದಿಯ ಸುತ್ತ ನೆರೆದಿದ್ದರು.

ಅರ್ಥ:
ಹೊಳೆ: ಕಾಂತಿ, ಹೊಳಪು; ಕಂಗಳು: ನಯನ, ಅಂಬಕ; ಕಾಂತಿ: ಪ್ರಕಾಶ; ಥಳಥಳ: ಬೆಳಕು, ಕಾಂತಿಯನ್ನು ವರ್ಣಿಸುವ ಪದ; ವದನ: ಮುಖ; ಪ್ರಭೆ: ಕಾಂತಿ; ರತ್ನ: ಬೆಲೆಬಾಳುವ ಮಣಿ; ಆವಳಿ: ಸಾಲು; ಬಹುವಿಧ: ಬಹಳ, ಹಲವಾರು; ರಶ್ಮಿ: ಕಾಂತಿ; ಲಾವಣ್ಯ: ಚೆಲುವು; ಲಹರಿ: ಕಾಂತಿ, ಪ್ರಭೆ, ಅಲೆ; ಎಳನಗೆ: ಮಂದಸ್ಮಿತ; ಸುಲಿಪಲ್ಲ: ಶುಭ್ರವಾಗಿ ಹೊಳೆಯುವ ಹಲ್ಲು; ಮುಕ್ತಾವಳಿ: ಮುತ್ತಿನಹಾರ; ನಖ: ಉಗುರು; ದೀಧಿತಿ: ಹೊಳಪು, ಕಾಂತಿ; ಬೆಳಗು: ಬೆಳಕು; ಬಳಗ: ಸಂಬಂಧಿಕ, ಗುಂಪು; ಬಾಲಕಿ: ಹುಡುಗಿ; ಸತಿ: ಸ್ತ್ರೀ; ಬಳಸು: ಹತ್ತಿರ;

ಪದವಿಂಗಡಣೆ:
ಹೊಳೆವ +ಕಂಗಳ +ಕಾಂತಿಗಳ+ ಥಳ
ಥಳಿಪ +ವದನ +ಪ್ರಭೆಯ +ರತ್ನಾ
ವಳಿಯ +ಬಹುವಿಧ+ ರಶ್ಮಿಗಳ +ಲಾವಣ್ಯ+ಲಹರಿಗಳ
ಎಳನಗೆಯ +ಸುಲಿಪಲ್ಲ +ಮುಕ್ತಾ
ವಳಿಯ +ನಖ+ ದೀಧಿತಿಯ+ ಬೆಳಗಿನ
ಬಳಗವನೆ+ ಬಾಲಕಿಯರಿದ್ದರು +ಸತಿಯ +ಬಳಸಿನಲಿ

ಅಚ್ಚರಿ:
(೧) ಹೊಳೆ, ಕಾಂತಿ, ಪ್ರಭೆ, ರಶ್ಮಿ, ಲಹರಿ, ದೀಧಿತಿ – ಸಾಮ್ಯಾರ್ಥ ಪದಗಳು
(೨) ಉಪಮಾನದ ಪ್ರಯೋಗ – ಬೆಳಗಿನ ಬಳಗವನೆ ಬಾಲಕಿಯರಿದ್ದರು ಸತಿಯ ಬಳಸಿನಲಿ

ನಿಮ್ಮ ಟಿಪ್ಪಣಿ ಬರೆಯಿರಿ