ಪದ್ಯ ೫೦: ಪ್ರಾತಿಕಾಮಿಕನು ದ್ರೌಪದಿಗೆ ಏನು ತಿಳಿಸಿದನು?

ತಾಯೆ ಬಿನ್ನಹವಿಂದು ನಿಮ್ಮಯ
ರಾಯ ಸೋತನು ಜೂಜಿನಲಿ ಕುರು
ರಾಯ ಗೆಲಿದನು ಕೋಶವನು ಗಜತುರಗ ರಥ ಸಹಿತ
ನೋಯಲಾಗದು ಹಲವು ಮಾತೇ
ನಾ ಯುಧಿಷ್ಠಿರ ನೃಪತಿ ಸೋತನು
ತಾಯೆ ಭೀಮಾರ್ಜುನ ನಕುಲ ಸಹದೇವ ನೀವ್ಸಹಿತ (ಸಭಾ ಪರ್ವ, ೧೫ ಸಂಧಿ, ೫೦ ಪದ್ಯ)

ತಾತ್ಪರ್ಯ:
ಪ್ರಾತಿಕಾಮಿಕನು ದ್ರೌಪದಿಯ ಬಳಿ ಬಂದು ನಮಸ್ಕರಿಸಿ, ತಾಯೆ ನಾನು ಒಂದು ವಿಷಯವನ್ನು ನಿವೇದಿಸಲು ಬಂದಿದ್ದೇನೆ, ಇಂದು ಯುಧಿಷ್ಠಿರನು ಜೂಜಿನಲ್ಲಿ ಸೋತನು. ದುರ್ಯೋಧನನು ಗೆದ್ದನು. ಇಂದ್ರಪ್ರಸ್ಥ ರಾಜ್ಯದ ಕೋಶ, ಚತುರಂಗ ಸೈನ್ಯವೆಲ್ಲವೂ ಕೌರವನ ವಶವಾಯಿತು. ನೀವು ಮನಸ್ಸಿನಲ್ಲಿ ನೊಂದುಕೊಳ್ಳಬೇಡಿರಿ, ಹೆಚ್ಚಿಗೆ ಹೇಳುವುದೇನಿದೆ, ಯುಧಿಷ್ಠಿರನು ತನ್ನನ್ನೂ ಸೋಲುವುದಲ್ಲದೆ, ಭೀಮಾರ್ಜುನ, ನಕುಲ ಸಹದೇವ ಹಾಗೂ ನಿಮ್ಮನ್ನೂ ಜೂಜಿನಲ್ಲಿ ಪಣಕಿಟ್ಟು ಸೋತನೆಂದು ಪ್ರಾತಿಕಾಮಿಕನು ತಿಳಿಸಿದನು.

ಅರ್ಥ:
ತಾಯೆ: ಮಾತೆ; ಬಿನ್ನಹ: ಮನವಿ; ಇಂದು: ಈ ದಿನ; ರಾಯ: ಒಡೆಯ; ಸೋಲು: ಪರಾಭವ; ಜೂಜು: ದ್ಯೂತ; ಗೆಲುವು: ಜಯ; ಕೋಶ: ಖಜಾನೆ, ಭಂಡಾರ; ಗಜ: ಆನೆ; ತುರಗ: ಅಶ್ವ; ರಥ: ಬಂಡಿ; ಸಹಿತ: ಜೊತೆ; ನೋವು: ಬೇಸರ, ಸಂಕಟ; ಹಲವು: ಬಹಳ; ಮಾತು: ನುಡಿ; ನೃಪತಿ: ರಾಜ;

ಪದವಿಂಗಡಣೆ:
ತಾಯೆ+ ಬಿನ್ನಹವ್+ಇಂದು +ನಿಮ್ಮಯ
ರಾಯ +ಸೋತನು +ಜೂಜಿನಲಿ+ ಕುರು
ರಾಯ +ಗೆಲಿದನು+ ಕೋಶವನು+ ಗಜ+ತುರಗ +ರಥ +ಸಹಿತ
ನೋಯಲಾಗದು+ ಹಲವು+ ಮಾತೇನ್
ಆ+ ಯುಧಿಷ್ಠಿರ +ನೃಪತಿ +ಸೋತನು
ತಾಯೆ +ಭೀಮಾರ್ಜುನ +ನಕುಲ+ ಸಹದೇವ+ ನೀವ್+ಸಹಿತ

ಅಚ್ಚರಿ:
(೧) ತಾಯೆ – ೧, ೬ ಸಾಲಿನ ಮೊದಲ ಪದ
(೨) ಸೋತನು, ಗೆಲಿದನು – ವಿರುದ್ಧ ಪದಗಳು
(೩) ರಾಯ, ನೃಪತಿ – ಸಮನಾರ್ಥ ಪದ
(೪) ಸಹಿತ – ೩, ೬ ಸಾಲಿನ ಕೊನೆ ಪದ

ಪದ್ಯ ೪೯: ಪ್ರಾತಿಕಾಮಿಕನು ದ್ರೌಪದಿಯನ್ನು ಎಷ್ಟು ಸಖಿಯರ ಮಧ್ಯೆ ನೋಡಿದನು?

ಸುತ್ತಲೆಸೆವ ವಿಳಾಸಿನೀ ಜನ
ಹತ್ತು ಸಾವಿರ ನಡುವೆ ಕಂಡನು
ಮತ್ತ ಕಾಶಿನಿಯನು ಪತಿವ್ರತೆಯರ ಶಿರೋಮಣಿಯ
ಹತ್ತಿರೈತರಲಂಜಿದನು ತ
ನ್ನುತ್ತಮಾಂಗಕೆ ಕರಯುಗವ ಚಾ
ಚುತ್ತ ಬಿನ್ನಹ ಮಾಡಿದನು ಪಾಂಚಾಲ ನಂದನೆಗೆ (ಸಭಾ ಪರ್ವ, ೧೫ ಸಂಧಿ, ೪೯ ಪದ್ಯ)

ತಾತ್ಪರ್ಯ:
ಪ್ರಾತಿಕಾಮಿಕನು ಹತ್ತು ಸಾವಿರ ಸಖಿಯರ ನಡುವೆ ಅತ್ಯಂತ ಸುಂದರಿಯಾದ, ಪತಿವ್ರತೆಯರಲ್ಲಿ ಶ್ರೇಷ್ಠಳಾದ ದ್ರೌಪದಿಯನ್ನು ಕಂಡನು. ಅವಳ ಬಳಿಗೆ ಹೋಗಲು ಹೆದರಿದನು, ಎರಡು ಕೈಗಳನ್ನು ಹಣೆಗೆ ಚಾಚಿ ಹೀಗೆ ತನ್ನ ಮನವಿಯನ್ನು ನುಡಿದನು.

ಅರ್ಥ:
ಸುತ್ತ: ಎಲ್ಲಾ ಕಡೆ; ಎಸೆ: ತೋರು; ವಿಳಾಸಿನಿ: ಸಖಿ, ದಾಸಿ; ಸಾವಿರ: ಸಹಸ್ರ; ಹತ್ತು: ದಶ; ನಡುವೆ: ಮಧ್ಯೆ; ಕಂಡು: ನೋಡು; ಮತ್ತಕಾಶಿನಿ: ಸುಂದರಿ; ಪತಿವ್ರತೆ: ಗಂಡನಿಗೆ ವಿಧೇಯಳಾದ ಗರತಿ; ಶಿರೋಮಣಿ: ಶ್ರೇಷ್ಠ; ಹತ್ತಿರ: ಸಮೀಪ; ಅಂಜು: ಹೆದರು; ಉತ್ತಮಾಂಗ: ಶಿರ; ಕರ: ಹಸ್ತ; ಕರಯುಗ: ಎರಡುಕೈಗಳನ್ನೂ; ಚಾಚು: ಮುಂದೆ ಒಡ್ಡು; ಬಿನ್ನಹ: ಮನವಿ; ನಂದನೆ: ಮಗಳು;

ಪದವಿಂಗಡಣೆ:
ಸುತ್ತಲ್+ಎಸೆವ +ವಿಳಾಸಿನೀ +ಜನ
ಹತ್ತು +ಸಾವಿರ+ ನಡುವೆ +ಕಂಡನು
ಮತ್ತ +ಕಾಶಿನಿಯನು +ಪತಿವ್ರತೆಯರ +ಶಿರೋಮಣಿಯ
ಹತ್ತಿರೈತರಲ್+ಅಂಜಿದನು +ತನ್ನ್
ಉತ್ತಮಾಂಗಕೆ+ ಕರಯುಗವ+ ಚಾ
ಚುತ್ತ +ಬಿನ್ನಹ +ಮಾಡಿದನು +ಪಾಂಚಾಲ +ನಂದನೆಗೆ

ಅಚ್ಚರಿ:
(೧) ನಮಸ್ಕರಿಸಿದನು ಎಂದು ಹೇಳುವ ಪರಿ – ತನ್ನುತ್ತಮಾಂಗಕೆ ಕರಯುಗವ ಚಾಚುತ್ತ
(೨) ದ್ರೌಪದಿಯ ಸೇವೆಯಲ್ಲಿದ್ದ ಸಖಿಯರು – ಸುತ್ತಲೆಸೆವ ವಿಳಾಸಿನೀ ಜನ ಹತ್ತು ಸಾವಿರ ನಡುವೆ
(೩) ದ್ರೌಪದಿಯನ್ನು ವರ್ಣಿಸುವ ಪರಿ – ಮತ್ತ ಕಾಶಿನಿ, ಪತಿವ್ರತೆಯರ ಶಿರೋಮಣಿ

ಪದ್ಯ ೪೮: ದ್ರೌಪದಿಯು ಹೇಗೆ ಶೋಭಿಸುತ್ತಿದ್ದಳು?

ಸಕಲ ಶಕ್ತಿಪರೀತ ವಿಮಳಾಂ
ಬಿಕೆಯವೋಲ್ವರಮಂತ್ರ ದೇವೀ
ನಿಕರ ಮಧ್ಯದಿ ಶೋಭಿಸುವ ಸಾವಿತ್ರಿಯಂದದಲಿ
ವಿಕಟ ರಶ್ಮಿನಿಬದ್ಧ ರತ್ನ
ಪ್ರಕರ ಮಧ್ಯದ ಕೌಸ್ತುಭದವೋ
ಲ್ಚಕಿತ ಬಾಲಮೃಗಾಕ್ಷಿ ಮೆರೆದಳು ಯುವತಿ ಮಧ್ಯದಲಿ (ಸಭಾ ಪರ್ವ, ೧೫ ಸಂಧಿ, ೪೮ ಪದ್ಯ)

ತಾತ್ಪರ್ಯ:
ಎಲ್ಲಾ ಶಕ್ತಿದೇವತೆಯರು ಸುತ್ತುವರೆದ ವಿಮಳಾಂಬಿಕೆಯಂತೆ, ಎಲ್ಲಾ ಮಂತ್ರಾದಿದೇವತೆಯರ ನಡುವೆ ಶೋಭಿಸುವ ಸಾವಿತ್ರಿ (ಗಾಯತ್ರಿ)ದೇವಿಯಂತೆ, ಥಳಥಳಿಸುವ ರಶ್ಮಿಗಳ ರತ್ನಗಳ ನದುವೆ ಶೋಭಿಸುವ ಕೌಸ್ತುಭರತ್ನದಂತೆ, ಜಿಂಕೆಯ ಮರಿಯ ಕಣ್ಣುಗಳಂತಿರುವ ಮನೋಹರವಾದ ನಯನಗಳಿಂದ ಶೋಭಿಸುವ ದ್ರೌಪದಿಯು ಆ ಚೆಲುವೆಯರ ನಡುವೆ ಕುಳಿತಿದ್ದಳು.

ಅರ್ಥ:
ಸಕಲ: ಎಲ್ಲಾ; ಶಕ್ತಿ: ಬಲ; ವಿಮಲ: ಶುದ್ಧವಾದ; ಅಂಬಿಕೆ: ತಾಯಿ, ದೇವತೆ; ವರ: ಶ್ರೇಷ್ಠ; ಮಂತ್ರ: ದೇವತಾಸ್ತುತಿಯ ವಾಕ್ಯ ಸಮೂಹ; ನಿಕರ: ಗುಂಪು; ಮಧ್ಯ: ನಡುವೆ; ಶೋಭಿಸು: ಪ್ರಜ್ವಲಿಸು; ಸಾವಿತ್ರಿ: ಗಾಯತ್ರಿ; ವಿಕಟ: ಚೆಲುವಾದ, ಅಂದವಾದ; ರಶ್ಮಿ: ಕಾಂತಿ; ನಿಬದ್ಧ:ಕಟ್ಟಿದ; ರತ್ನ: ಬೆಲೆಬಾಳುವ ಮಣಿ; ಪ್ರಕರ: ಗುಂಪು; ಕೌಸ್ತುಭ: ವಿಷ್ಣುವಿನ ಎದೆಯನ್ನು ಅಲಂಕರಿಸಿರುವ ಒಂದು ರತ್ನ;ಚಕಿತ: ವಿಸ್ಮಿತ; ಬಾಲ: ಚಿಕ್ಕ; ಮೃಗ: ಜಿಂಕೆ; ಅಕ್ಷಿ: ಕಣ್ಣು; ಮೆರೆ: ಹೊಳೆ, ಪ್ರಕಾಶಿಸು; ಯುವತಿ: ಹೆಣ್ಣು, ಸುಂದರಿ;

ಪದವಿಂಗಡಣೆ:
ಸಕಲ +ಶಕ್ತಿಪರೀತ+ ವಿಮಳಾಂ
ಬಿಕೆಯವೋಲ್+ವರ+ಮಂತ್ರ +ದೇವೀ
ನಿಕರ+ ಮಧ್ಯದಿ+ ಶೋಭಿಸುವ +ಸಾವಿತ್ರಿ+ಯಂದದಲಿ
ವಿಕಟ +ರಶ್ಮಿ+ನಿಬದ್ಧ +ರತ್ನ
ಪ್ರಕರ +ಮಧ್ಯದ +ಕೌಸ್ತುಭದವೋಲ್
ಚಕಿತ +ಬಾಲ+ಮೃಗಾಕ್ಷಿ+ ಮೆರೆದಳು+ ಯುವತಿ +ಮಧ್ಯದಲಿ

ಅಚ್ಚರಿ:
(೧) ವಿಮಳಾಂಬಿಕೆ, ಸಾವಿತ್ರಿ, ಕೌಸುಭ, ಬಾಲಮೃಗಾಕ್ಷಿ – ದ್ರೌಪದಿಯನ್ನು ಹೋಲಿಸುವ ಪರಿ
(೨) ದ್ರೌಪದಿ ಅನರ್ಘ್ಯ ರತ್ನ ವೆಂದು ಹೇಳುವ ಉಪಮಾನಗಳಿಂದ ಕೂಡಿರುವ ಪದ್ಯ

ಪದ್ಯ ೪೭: ದ್ರೌಪದಿಯ ಸುತ್ತಲ್ಲಿದ್ದ ಸಖಿಯರು ಏನು ಮಾಡುತ್ತಿದ್ದರು?

ಗಿಳಿಯ ಮೆಲುನುಡಿಗಳ ವಿನೋದದಿ
ಕೆಲರು ವೀಣಾಧ್ವನಿಯ ರಹಿಯಲಿ
ಕೆಲರು ಸರಸ ಸುಗಂಧ ಸಂಗೀತದ ಸಮಾಧಿಯಲಿ
ಕೆಲರು ನೆತ್ತದಲಮಳ ಮುಕ್ತಾ
ವಳಿಯ ಚೆಲುವಿನ ಚದುರೆಯರು ಕಂ
ಗೊಳಿಸಿತಬಲೆಯ ಮಣಿಯ ಮಂಚದ ಸುತ್ತುವಳಯದಲಿ (ಸಭಾ ಪರ್ವ, ೧೫ ಸಂಧಿ, ೪೭ ಪದ್ಯ)

ತಾತ್ಪರ್ಯ:
ದ್ರೌಪದಿಯ ಸಖಿಯರಲ್ಲಿ ಕೆಲವರು ಗಿಳಿಗಳೊಂದಿಗೆ ಮೃದು ಧ್ವನಿಯಲ್ಲಿ ಮಾತನಾಡುತ್ತಾ ಸಂತಸದಲ್ಲಿದ್ದರು, ಕೆಲವರು ವೀಣಾವಾದನದದಲ್ಲಿ ಸಂಭ್ರಮಿಸುತ್ತಿದ್ದರು, ಕೆಲವರು ಇಂಪಾದ
ಸಂಗೀತದ ನಾದದಲ್ಲಿ ಮಗ್ನರಾಗಿದ್ದರು, ಕೆಲವರು ಪಗಡೆಯಾಟದ ವಿನೋದದಲ್ಲಿ ಕ್ರೀಡಿಸುತ್ತಿದ್ದರು, ಚೆಲುವಾದ ಚೆಲುವೆಯರು ಮುತ್ತಿನ ಹಾರಗಳನ್ನು ಧರಿಸಿ ಕಂಗೊಳಿಸುತ್ತಿದ್ದ ಕೆಲವರು ದ್ರೌಪದಿಯ ಪೀಠದ ಸುತ್ತಲೂ ಕುಳಿತಿದ್ದರು.

ಅರ್ಥ:
ಗಿಳಿ: ಶುಕ; ಮೆಲು: ಮೃದು; ನುಡಿ: ಮಾತು; ವಿನೋದ: ವಿಲಾಸ, ಸಂತೋಷ; ಕೆಲರು: ಕೆಲವರು, ಸ್ವಲ್ಪ; ಧ್ವನಿ: ರವ, ಶಬ್ದ; ರಹಿ:ಪ್ರಕಾರ, ಸಂಭ್ರಮ; ಸರಸ: ಚೆಲ್ಲಾಟ, ವಿನೋದ; ಸುಗಂಧ: ಪರಿಮಳ; ಸಂಗೀತ: ಗೀತೆ; ಸಮಾಧಿ: ಮಗ್ನರಾಗಿರುವ ಸ್ಥಿತಿ; ನೆತ್ತ: ಪಗಡೆಯ ದಾಳ; ಅಮಳ: ನಿರ್ಮಲ; ಮುಕ್ತಾವಳಿ: ಮುತ್ತಿನ ಹಾರ; ಚೆಲುವು: ಸೌಂದರ್ಯ; ಚದುರೆ: ಜಾಣೆ, ಪ್ರೌಢೆ; ಕಂಗೊಳಿಸು: ಶೋಭಿಸು; ಮಣಿ: ಬೆಲೆಬಾಳುವ ರತ್ನ; ಮಂಚ: ಪಲ್ಲಂಗ; ಸುತ್ತು: ಆವರಿಸು; ವಳಯ: ಆವರಣ;

ಪದವಿಂಗಡಣೆ:
ಗಿಳಿಯ+ ಮೆಲುನುಡಿಗಳ+ ವಿನೋದದಿ
ಕೆಲರು +ವೀಣಾ+ಧ್ವನಿಯ +ರಹಿಯಲಿ
ಕೆಲರು +ಸರಸ+ ಸುಗಂಧ +ಸಂಗೀತದ +ಸಮಾಧಿಯಲಿ
ಕೆಲರು +ನೆತ್ತದಲ್+ಅಮಳ +ಮುಕ್ತಾ
ವಳಿಯ +ಚೆಲುವಿನ +ಚದುರೆಯರು +ಕಂ
ಗೊಳಿಸಿತ್+ಅಬಲೆಯ +ಮಣಿಯ +ಮಂಚದ +ಸುತ್ತು+ವಳಯದಲಿ

ಅಚ್ಚರಿ:
(೧) ಸ ಕಾರದ ಸಾಲು ಪದ – ಸರಸ ಸುಗಂಧ ಸಂಗೀತದ ಸಮಾಧಿಯಲಿ
(೨) ಜೋಡಿ ಪದಗಳು – ಚೆಲುವಿನ ಚೆದುರೆಯರು; ವಿನೋದದ ವೀಣಾಧ್ವನಿ; ಮಣಿಯ ಮಂಚದ

ಪದ್ಯ ೪೬: ದ್ರೌಪದಿಯನ್ನು ಯಾರು ಸುತ್ತುವರೆದಿದ್ದರು?

ಹೊಳೆವ ಕಂಗಳ ಕಾಂತಿಗಳ ಥಳ
ಥಳಿಪ ವದನ ಪ್ರಭೆಯ ರತ್ನಾ
ವಳಿಯ ಬಹುವಿಧ ರಶ್ಮಿಗಳ ಲಾವಣ್ಯಲಹರಿಗಳ
ಎಳನಗೆಯ ಸುಲಿಪಲ್ಲ ಮುಕ್ತಾ
ವಳಿಯ ನಖ ದೀಧಿತಿಯ ಬೆಳಗಿನ
ಬಳಗವನೆ ಬಾಲಕಿಯರಿದ್ದರು ಸತಿಯ ಬಳಸಿನಲಿ (ಸಭಾ ಪರ್ವ, ೧೫ ಸಂಧಿ, ೪೬ ಪದ್ಯ)

ತಾತ್ಪರ್ಯ:
ಪ್ರಕಾಶಮಾನವಾಗಿ ಹೊಳೆಯುವ ಕಣ್ಣುಗಳ ಕಾಂತಿ, ಮುಖದಲ್ಲಿ ಥಳಥಳಿಸುವ ಬೆಳಕಿನ ಹೊಳಪು, ಧರಿಸಿದ ಆಭರಣಗಳ ರತ್ನಗಳ ಕಿರಣಗಳು, ಸೊಬಗಿನ ಉಲ್ಲಾಸದ ಪ್ರವಾಹ, ಸುಂದರವಾದ ಹಲ್ಲುಗಳು, ಮಂದಸ್ಮಿತ, ಮುತ್ತಿನ ಹಾರ, ಉಗುರುಗಳ ಕಾಂತಿಗಳಿಂದ ಬೆಳಕಿನ ಬಳಗದಂತೆ ಶೋಭಿಸುವ ತರುಣಿಯರು ದ್ರೌಪದಿಯ ಸುತ್ತ ನೆರೆದಿದ್ದರು.

ಅರ್ಥ:
ಹೊಳೆ: ಕಾಂತಿ, ಹೊಳಪು; ಕಂಗಳು: ನಯನ, ಅಂಬಕ; ಕಾಂತಿ: ಪ್ರಕಾಶ; ಥಳಥಳ: ಬೆಳಕು, ಕಾಂತಿಯನ್ನು ವರ್ಣಿಸುವ ಪದ; ವದನ: ಮುಖ; ಪ್ರಭೆ: ಕಾಂತಿ; ರತ್ನ: ಬೆಲೆಬಾಳುವ ಮಣಿ; ಆವಳಿ: ಸಾಲು; ಬಹುವಿಧ: ಬಹಳ, ಹಲವಾರು; ರಶ್ಮಿ: ಕಾಂತಿ; ಲಾವಣ್ಯ: ಚೆಲುವು; ಲಹರಿ: ಕಾಂತಿ, ಪ್ರಭೆ, ಅಲೆ; ಎಳನಗೆ: ಮಂದಸ್ಮಿತ; ಸುಲಿಪಲ್ಲ: ಶುಭ್ರವಾಗಿ ಹೊಳೆಯುವ ಹಲ್ಲು; ಮುಕ್ತಾವಳಿ: ಮುತ್ತಿನಹಾರ; ನಖ: ಉಗುರು; ದೀಧಿತಿ: ಹೊಳಪು, ಕಾಂತಿ; ಬೆಳಗು: ಬೆಳಕು; ಬಳಗ: ಸಂಬಂಧಿಕ, ಗುಂಪು; ಬಾಲಕಿ: ಹುಡುಗಿ; ಸತಿ: ಸ್ತ್ರೀ; ಬಳಸು: ಹತ್ತಿರ;

ಪದವಿಂಗಡಣೆ:
ಹೊಳೆವ +ಕಂಗಳ +ಕಾಂತಿಗಳ+ ಥಳ
ಥಳಿಪ +ವದನ +ಪ್ರಭೆಯ +ರತ್ನಾ
ವಳಿಯ +ಬಹುವಿಧ+ ರಶ್ಮಿಗಳ +ಲಾವಣ್ಯ+ಲಹರಿಗಳ
ಎಳನಗೆಯ +ಸುಲಿಪಲ್ಲ +ಮುಕ್ತಾ
ವಳಿಯ +ನಖ+ ದೀಧಿತಿಯ+ ಬೆಳಗಿನ
ಬಳಗವನೆ+ ಬಾಲಕಿಯರಿದ್ದರು +ಸತಿಯ +ಬಳಸಿನಲಿ

ಅಚ್ಚರಿ:
(೧) ಹೊಳೆ, ಕಾಂತಿ, ಪ್ರಭೆ, ರಶ್ಮಿ, ಲಹರಿ, ದೀಧಿತಿ – ಸಾಮ್ಯಾರ್ಥ ಪದಗಳು
(೨) ಉಪಮಾನದ ಪ್ರಯೋಗ – ಬೆಳಗಿನ ಬಳಗವನೆ ಬಾಲಕಿಯರಿದ್ದರು ಸತಿಯ ಬಳಸಿನಲಿ

ಪದ್ಯ ೪೫: ದ್ರೌಪದಿಗೆ ಸಂದೇಶವು ಹೇಗೆ ತಲುಪಿತು?

ಬಂದು ಬಾಗಿಲ ಕಾಹಿಗಳ ಕರೆ
ದೆಂದನರಸಿಗೆ ಬಿನ್ನವಿಸಿ ತಾ
ಬಂದ ಹದನನು ಕಾರ್ಯವುಂಟೆನೆ ಹಲವು ಬಾಗಿಲಲಿ
ಬಂದುದಲ್ಲಿಯದಲ್ಲಿಗರುಹಿಸ
ಲಿಂದುಮುಖಿ ಕೇಳಿದಳು ಬರಹೇ
ಳೆಂದರಾತನ ಹೊಗಿಸಿದರು ಹೊಕ್ಕನು ಸತೀ ಸಭೆಯ (ಸಭಾ ಪರ್ವ, ೧೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ದುರ್ಯೋಧನನ ಆದೇಶವನ್ನು ಹೊತ್ತ ಪ್ರಾತಿಕಾಮಿಕನು ದ್ರೌಪದಿಯ ಅರಮನೆಯ ಬಾಗಿಲಿಗೆ ಬಂದು ಅಲ್ಲಿದ್ದ ಕಾವಲುಗಾರನನ್ನು ಕರೆದು ತಾನು ಬಂದಿರುವುದನ್ನು ರಾಣಿಗೆ ತಿಳಿಸಿ ಅವರ ಬಳಿ ನನಗೆ ಸ್ವಲ್ಪ ಕೆಲವಿದೆ ಎಂದು ಹೇಳಲು ತಿಳಿಸಿದನು. ಹೊರಬಾಗಿಲಿನ ಕಾವಲುಗಾರ ಎರಡನೆಯ ಬಾಗಿಲಿನವನಿಗೆ, ಎರಡನೆಯವ ಮೂರನೆಯವನಿಗೆ, ಹೀಗೆ ಹಲವು ಬಾಗಿಲನ್ನು ದಾಟಿ ಆ ಸುದ್ದಿಯು ದ್ರೌಪದಿಗೆ ತಿಳಿಯಿತು. ಅವನನ್ನು ಬರಹೇಳಿರೆಂದು ದ್ರೌಪದಿಯು ಹೇಳಲು, ಪಾತಿಕಾಮಿಕನನ್ನು ಒಳಗೆ ಹೋಗಲು ಬಿಡಲು ಅವನು ದ್ರೌಪದಿಯಿದ್ದ ಸ್ತ್ರಿಯರ ಸಭೆಗೆ ಬಂದನು.

ಅರ್ಥ:
ಬಂದು: ಆಗಮಿಸು; ಬಾಗಿಲು: ಕದ; ಕಾಹಿ: ಕಾಯುವವ; ಕರೆ: ಬರೆಮಾಡು; ಅರಸಿ: ರಾಣಿ; ಬಿನ್ನವಿಸು: ತಿಳಿಸು; ಹದನ: ಔಚಿತ್ಯ, ರೀತಿ; ಕಾರ್ಯ: ಕೆಲಸ; ಹಲವು: ಬಹಳ; ಅರುಹು:ತಿಳಿಸು, ಹೇಳು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ದ್ರೌಪದಿ); ಕೇಳು: ಪ್ರಶ್ನಿಸು; ಹೊಗಿಸು: ಪ್ರವೇಶಕ್ಕೆ ಅನುಮತಿಯನ್ನು ಕೊಡು; ಹೊಕ್ಕು: ಸೇರು; ಸತೀ: ಸ್ತ್ರೀ; ಸಭೆ: ಓಲಗ;

ಪದವಿಂಗಡಣೆ:
ಬಂದು +ಬಾಗಿಲ +ಕಾಹಿಗಳ+ ಕರೆ
ದೆಂದನ್+ಅರಸಿಗೆ +ಬಿನ್ನವಿಸಿ +ತಾ
ಬಂದ +ಹದನನು +ಕಾರ್ಯವುಂಟ್+ಎನೆ +ಹಲವು +ಬಾಗಿಲಲಿ
ಬಂದುದ್+ಅಲ್ಲಿಯದ್+ಅಲ್ಲಿಗ್+ಅರುಹಿಸಲ್
ಇಂದುಮುಖಿ +ಕೇಳಿದಳು +ಬರಹೇ
ಳೆಂದರ್+ಆತನ +ಹೊಗಿಸಿದರು +ಹೊಕ್ಕನು +ಸತೀ +ಸಭೆಯ

ಅಚ್ಚರಿ:
(೧) ರಾಣಿಯರ ಅರಮನೆಯ ರಕ್ಷಣೆಯನ್ನು ವಿವರಿಸುವ ಪರಿ – ಹಲವು ಬಾಗಿಲಲಿ ಬಂದುದಲ್ಲಿಯದಲ್ಲಿ
(೨) ಜೋಡಿ ಪದಗಳು – ಹೊಗಿಸಿದರು ಹೊಕ್ಕನು; ಸತೀ ಸಭೆಯ

ಪದ್ಯ ೪೪: ದುರ್ಯೋಧನನು ದ್ರೌಪದಿಯನ್ನು ಕರೆತರಲು ಯಾರನ್ನು ಕಳಿಸಿದನು?

ಇವನವರ ಬಹಿರಂಗ ಜೀವ
ವ್ಯವಹರಣೆಯಾತನು ವೃಥಾ ತಾ
ನಿವನ ಕೆಣಕಿದೆನಕಟ ಬೋಧಭ್ರಾಂತಿ ಬಾಹಿರನ
ಇವನಿರಲಿ ಬಾ ಪ್ರಾತಿಕಾಮಿಕ
ಯುವತಿಯನು ಕರೆಹೋಗು ನೀನೆನ
ಲವ ಹಸಾದವ ಹಾಯ್ಕಿ ಬಂದನು ದೇವಿಯರಮನೆಗೆ (ಸಭಾ ಪರ್ವ, ೧೫ ಸಂಧಿ, ೪೪ ಪದ್ಯ)

ತಾತ್ಪರ್ಯ:
ದುರ್ಯೋಧನನು ವಿದುರನ ಮಾತಿಗೆ ಕಿಮ್ಮತ್ತು ಕೊಡದೆ, ವಿದುರನು ಪಾಂಡವರ ದೇಹದ ಹೊರಗಿರುವ ಜೀವದಂತೆ ವ್ಯವಹರಿಸುತ್ತಿದ್ದಾನೆ, ತಿಳಿದಿದ್ದರೂ ಬುದ್ಧಿಭ್ರಮಣೆಯಾಗಿರುವವ, ನಮ್ಮ ಗುಂಪಿನ ಹೊರಗಿನವನಾಗಿದ್ದಾನೆ, ಇವನನ್ನು ನಾನೇಕೆ ಕೆಣಕಿದೆ, ಎಲೈ ಪಾತಿಕಾಮಿಕ, ಈ ವಿದುರ ಇಲ್ಲಿರಲಿ, ನೀನು ಹೋಗಿ ದ್ರೌಪದಿಯನ್ನು ಕರೆದುಕೊಂಡು ಬಾ ಎನಲು, ಪ್ರತಿಕಾಮಿಕನು ಅಪ್ಪಣೆ ಜೀಯ ಎಂದು ಹೇಳಿ ದ್ರೌಪದಿಯ ಅರಮನೆಗೆ ತೆರಳಿದನು.

ಅರ್ಥ:
ಬಹಿರಂಗ: ಹೊರಗೆ; ಜೀವ: ಉಸಿರು; ವ್ಯವಹರಣೆ: ಉದ್ಯೋಗ; ವೃಥ: ಸುಮ್ಮನೆ; ಕೆಣಕು: ರೇಗಿಸು, ಪ್ರಚೋದಿಸು; ಬೋಧ: ಬೋಧಿಸುವಿಕೆ, ವಿಚಾರ; ಭ್ರಾಂತಿ: ತಪ್ಪು ತಿಳಿವಳಿಕೆ, ಭ್ರಮೆ; ಬಾಹಿರ: ಹೊರಗಿನವ; ಯುವತಿ: ಹೆಣ್ಣು; ಕರೆ: ಬರೆಮಾಡು: ಹೋಗು: ತೆರಳು; ಹಸಾದ: ಅಪ್ಪಣೆ; ಹಾಯ್ಕು: ತೊಡು; ಬಂದನು: ಆಗಮಿಸು; ದೇವಿ: ಸ್ತ್ರೀ, ಲಲನೆ; ಅರಮನೆ: ಆಲಯ;

ಪದವಿಂಗಡಣೆ:
ಇವನ್+ಅವರ +ಬಹಿರಂಗ+ ಜೀವ
ವ್ಯವಹರಣೆ+ ಆತನು+ ವೃಥಾ +ತಾನ್
ಇವನ +ಕೆಣಕಿದೆನ್+ಅಕಟ +ಬೋಧ+ಭ್ರಾಂತಿ +ಬಾಹಿರನ
ಇವನಿರಲಿ+ ಬಾ +ಪ್ರಾತಿಕಾಮಿಕ
ಯುವತಿಯನು +ಕರೆಹೋಗು +ನೀನ್+ಎನಲ್
ಅವ+ ಹಸಾದವ+ ಹಾಯ್ಕಿ +ಬಂದನು +ದೇವಿ+ಅರಮನೆಗೆ

ಅಚ್ಚರಿ:
(೧) ವಿದುರನನ್ನು ಬಯ್ಯುವ ಪರಿ – ಬೋಧಭ್ರಾಂತಿ ಬಾಹಿರನ
(೨) ವಿದುರನು ಪಾಂಡವರ ಪಕ್ಷಪಾತಿ ಎಂದು ಹೇಳುವ ಪರಿ – ಇವನವರ ಬಹಿರಂಗ ಜೀವ
ವ್ಯವಹರಣೆ

ಪದ್ಯ ೪೩: ಪಾಂಡವರು ಮುಂದೆ ಏನನ್ನು ನೋಡುತ್ತಾರೆಂದು ವಿದುರನು ಎಚ್ಚರಿಸಿದನು?

ಎಳೆದು ತರಿಸಾ ದ್ರೌಪದಿಯ ನೀ
ಕಳಕಳಕೆ ಕೈಗೊಟ್ಟವೋಲ
ಸ್ಖಲಿತರಿಹರಕ್ಷಮತೆಯಲಿ ತತ್ಸಮಯ ಪರಿಯಂತ
ಬಳಿಕ ನೂರ್ವರ ಸತಿಯರಕ್ಕೆಯ
ಕಳವಳದ ಬಿಡುಮುಡಿಯ ಬಿಸುರಿನ
ತಳದ ಬಿರುವೊಯ್ಲುಗಳ ಭಂಗವ ಕಾಂಬರಿವರೆಂದ (ಸಭಾ ಪರ್ವ, ೧೫ ಸಂಧಿ, ೪೩ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ಎಳೆದು ತಾ ದ್ರೌಪದಿಯನ್ನು, ಇದರಿಂದ ನೀನು ದೊಡ್ಡ ಅನಾಹುತಕ್ಕೆ ದಾರಿಮಾಡಿಕೊಡುವೆ. ಕಾಲ ಬರುವವರೆಗೂ ತಮ್ಮ ನಿಲುಮೆಯಿಂದ ಜಾರದೆ ಅಸಹಾಯಕರಾಗಿ ಇವರಿರುತ್ತಾರೆ. ಆದರೆ ಮುಂದೊಂದು ಕಾಲ ಬರುತ್ತದೆ. ಆಗ ನೀವು ನೂರು ಜನರ ನಿಮ್ಮ ಹೆಂಡಂದಿರು ಕಳವಳಿಸ್ತುತ್ತಾ ಅಳುತ್ತಾ ತಮ್ಮ ಮುಡಿಗಳನ್ನು ಚದುರಿ ಕಿಬ್ಬೊಟ್ಟೆಯನ್ನು ಹೊಡೆದುಕೊಳ್ಳುತ್ತಾ ಜೋರಾಗಿ ಅಳುವ ಭಂಗಿಯನ್ನು ಈ ಪಾಂಡವರು ನೋಡುತ್ತಾರೆ ಎಂದು ವಿದುರನು ಮುಂದಾಗುವ ಅನಾಹುತವನ್ನು ಹೇಳಿದನು.

ಅರ್ಥ:
ಎಳೆ: ತನ್ನ ಕಡೆಗೆ ಸೆಳೆದುಕೊ; ತರಿಸು: ಬರೆಮಾಡು; ಕಳಕಳ: ಗೊಂದಲ; ಕೈಗೊಟ್ಟ: ದಾರಿಮಾದು; ಸ್ಖಲಿತ: ಜಾರಿಬಿದ್ದ; ಕ್ಷಮತೆ: ಶಕ್ತಿ, ಪರಾಕ್ರಮ; ಸಮಯ: ಕಾಲ; ಪರಿಯಂತ: ವರೆಗೆ, ತನಕ; ಬಳಿಕ: ನಂತರ; ನೂರು: ಶತ; ಸತಿ: ಹೆಂಡತಿ; ಅಕ್ಕೆ: ಅಳುವಿಕೆ, ವಿಲಾಪ; ಬಿಡು:ಚದರಿದ; ಮುಡಿ: ಕೂದಲು; ಬಸುರು: ಹೊಟ್ಟೆ; ತಳ: ಕೆಳಭಾಗ; ಉಯ್ಲು: ಸೆಳೆವು; ಬಿರು: ಗಟ್ಟಿಯಾದುದು; ಭಂಗ: ರೀತಿ, ಭಂಗಿ; ಕಾಂಬರು: ನೋಡುವರು;

ಪದವಿಂಗಡಣೆ:
ಎಳೆದು +ತರಿಸ್+ಆ+ ದ್ರೌಪದಿಯ +ನೀ
ಕಳಕಳಕೆ +ಕೈಗೊಟ್ಟವೋಲ್
ಅಸ್ಖಲಿತರ್+ಇಹರ್+ಅಕ್ಷಮತೆಯಲಿ+ ತತ್ಸಮಯ +ಪರಿಯಂತ
ಬಳಿಕ+ ನೂರ್ವರ +ಸತಿಯರ್+ಅಕ್ಕೆಯ
ಕಳವಳದ +ಬಿಡುಮುಡಿಯ +ಬಿಸುರಿನ
ತಳದ +ಬಿರುವೊಯ್ಲುಗಳ+ ಭಂಗವ+ ಕಾಂಬರಿವರೆಂದ

ಅಚ್ಚರಿ:
(೧) ಮುಂದಿನ ಘೋರ ದೃಶ್ಯದ ವಿವರಣೆ – ನೀವೆಲ್ಲರೂ ಸಾಯುತ್ತೀರ ಎಂದು ಹೇಳುವ ಪರಿ- ನೂರ್ವರ ಸತಿಯರಕ್ಕೆಯಕಳವಳದ ಬಿಡುಮುಡಿಯ ಬಿಸುರಿನ ತಳದ ಬಿರುವೊಯ್ಲುಗಳ ಭಂಗವ
(೨) ಪಾಂಡವರ ಸ್ಥಿತಿಯನ್ನು ಹೇಳುವ ಪರಿ – ಅಸ್ಖಲಿತರಿಹರಕ್ಷಮತೆಯಲಿ ತತ್ಸಮಯ ಪರಿಯಂತ