ಪದ್ಯ ೧೪: ಶಕುನಿ ನಕುಲನನ್ನು ಗೆದ್ದನೆ?

ವಾಸಿಗನುಜನನೊಡ್ಡಿದರೆ ನಮ
ಗೀಸರಲಿ ಭಯವೇನು ನೋಡುವೆ
ವೈಸಲೇ ನೃಪ ಹಾಯ್ಕು ಹಾಸಂಗಿಗಳ ಹಾಯ್ಕೆನುತ
ಆ ಶಕುನಿ ಪೂರ್ವಾರ್ಜಿತದ ಡೊ
ಳ್ಳಾಸದಲಿ ಡಾವರಿಸಿ ಧರ್ಮ ವಿ
ನಾಶಿ ನಕುಲನ ಗೆಲಿದು ಬೊಬ್ಬಿರಿದವನಿಪಗೆ ನುಡಿದ (ಸಭಾ ಪರ್ವ, ೧೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಶಕುನಿಯು ತನ್ನ ಮಾತನ್ನು ಮುಂದುವರೆಸುತ್ತಾ, ಹಠದಿಂದ ತಮ್ಮನನ್ನು ಒಡ್ಡಿದರೆ ನಮಗೇನು ಭಯವಿಲ್ಲ, ಒಂದು ಕೈಯಿ ನೋಡೋಣ, ದಾಳವನ್ನು ಹಾಕು ಎಂದನು. ಪೂರ್ವಜನ್ಮದಲ್ಲಿ ಗಳಿಸಿದ ಮೋಸದಿಂದ ಧರ್ಮವಿನಾಶಮಾಡುವ ರಭಸದಿಂದ ನಕುಲನನ್ನು ಗೆದ್ದು ಆರ್ಭಟಿಸುತ್ತಾ ಹೀಗೆ ಹೇಳಿದನು.

ಅರ್ಥ:
ವಾಸಿ: ಪ್ರತಿಜ್ಞೆ, ಶಪಥ; ಅನುಜ: ತಮ್ಮ; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ; ಸರ: ರೀತಿ; ಭಯ: ಅಂಜಿಕೆ; ಐಸಲೇ: ಅಲ್ಲವೇ; ನೃಪ: ರಾಜ; ಹಾಯ್ಕು: ಇಡು, ಇರಿಸು, ಧರಿಸು; ಹಾಸಂಗಿ: ಜೂಜಿನ ದಾಳ; ಪೂರ್ವಾರ್ಜಿತ: ಹಿಂದೆಯೇ ಗಳಿಸಿದ; ಡೊಳ್ಳಾಸ: ಮೋಸ, ಕಪಟ; ಡಾವರಿಸು: ಸುತ್ತು, ತಿರುಗಾಡು; ಧರ್ಮ: ಧಾರಣ ಮಾಡಿದುದು, ನಿಯಮ; ವಿನಾಶ: ಹಾಳು, ಸರ್ವನಾಶ; ಗೆಲಿ: ಗೆಲ್ಲು, ಜಯ; ಬೊಬ್ಬಿರಿ: ಗರ್ಜಿಸು, ಆರ್ಭಟ; ನುಡಿ: ಮಾತಾಡು; ಅವನಿಪ: ರಾಜ;

ಪದವಿಂಗಡಣೆ:
ವಾಸಿಗ್+ಅನುಜನನ್+ಒಡ್ಡಿದರೆ+ ನಮಗ್
ಈಸರಲಿ +ಭಯವೇನು +ನೋಡುವೆವ್
ಐಸಲೇ +ನೃಪ +ಹಾಯ್ಕು +ಹಾಸಂಗಿಗಳ +ಹಾಯ್ಕೆನುತ
ಆ +ಶಕುನಿ +ಪೂರ್ವಾರ್ಜಿತದ +ಡೊ
ಳ್ಳಾಸದಲಿ +ಡಾವರಿಸಿ+ ಧರ್ಮ +ವಿ
ನಾಶಿ +ನಕುಲನ +ಗೆಲಿದು +ಬೊಬ್ಬಿರಿದ್+ಅವನಿಪಗೆ+ ನುಡಿದ

ಅಚ್ಚರಿ:
(೧) ಶಕುನಿಯ ವರ್ಣನೆ – ಪೂರ್ವಾರ್ಜಿತದ ಡೊಳ್ಳಾಸದಲಿ ಡಾವರಿಸಿ ಧರ್ಮ ವಿನಾಶಿ
(೨) ಹ ಕಾರದ ತ್ರಿವಳಿ ಪದ – ಹಾಯ್ಕು ಹಾಸಂಗಿಗಳ ಹಾಯ್ಕೆನುತ

ನಿಮ್ಮ ಟಿಪ್ಪಣಿ ಬರೆಯಿರಿ