ಪದ್ಯ ೧೧: ಸೋತ ಧರ್ಮರಾಯನನ್ನು ಶಕುನಿ ಏನೆಂದು ಕೇಳಿದನು?

ಸೋತೆಲಾ ಕೌಂತೇಯ ನಿಮಿಷಕೆ
ಬೀತುದೇ ನಿನ್ನಖಿಳಸಿರಿ ವಿ
ಖ್ಯಾತಿ ಬರತುದೆ ವೇಡೆಗೆದರಿತೆ ಮನದ ವಾಸಿಗಳ
ಪ್ರೀತಿಯುಂಟೇ ನಿಮಗೆ ಮತ್ತೀ
ದ್ಯೂತದಲಿ ಧನವಿಲ್ಲಲಾ ಗ
ರ್ವಾತಿರೇಕವ ಬೀಳುಗೊಂಡಿರೆಯೆಂದನಾ ಶಕುನಿ (ಸಭಾ ಪರ್ವ, ೧೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕೌಂತೇಯ, ಒಂದೇ ನಿಮಿಷದಲ್ಲಿ ನಿನ್ನ ಐಶ್ವರ್ಯವೆಲ್ಲವನ್ನೂ ಸೋತೆಯಲ್ಲವೇ? ನಿನ್ನ ಐಶ್ವರ್ಯದ ಖ್ಯಾತಿ ಬತ್ತಿತೆ? ಮನಸ್ಸಿನ ಛಲವನ್ನೆಲ್ಲಾ ಕಿತ್ತೆಸೆಯಿತೇ? ನಿನಗೆ ಜೂಜಿನಲ್ಲಿ ಇನ್ನೂ ಆಸೆಯಿದೆಯೇ? ಆದರೆ ನಿನ್ನಲ್ಲಿ ಹಣವಿಲ್ಲವಲ್ಲಾ? ನಿನ್ನ ಗರ್ವವನ್ನು ಕಳಿಸಿಕೊಟ್ಟೆಯಾ? ಎಂದು ಶಕುನಿ ಕೇಳಿದನು.

ಅರ್ಥ:
ಸೋತು: ಪರಾಭವ; ಕೌಂತೇಯ: ಕುಂತಿಯ ಮಗ; ನಿಮಿಷ: ಅತ್ಯಲ್ಪ ಕಾಲ; ಬೀತುದು: ಕ್ಷಯವಾಯಿತು, ಮುಗಿಯಿತು; ಅಖಿಳ: ಎಲ್ಲಾ, ಸರ್ವ; ಸಿರಿ: ಐಶ್ವರ್ಯ; ವಿಖ್ಯಾತಿ: ಪ್ರಸಿದ್ಧಿ, ಕೀರ್ತಿ; ಬರತು: ಬತ್ತು, ಒಣಗು; ವೇಡೆ: ಆಕ್ರಮಣ, ಆವರಣ; ಮನ: ಮನಸ್ಸು; ವಾಸಿ: ಪ್ರತಿಜ್ಞೆ, ಶಪಥ; ಪ್ರೀತಿ: ಒಲವು; ದ್ಯೂತ: ಜೂಜು; ಧನ: ಐಶ್ವರ್ಯ; ಗರ್ವ: ಅಹಂಕಾರ; ಅತಿರೇಕ: ಅತಿಶಯ; ಬೀಳುಗೊಂಡಿರೆ: ಕಳಿಸಿಕೊಡು;

ಪದವಿಂಗಡಣೆ:
ಸೋತೆಲಾ+ ಕೌಂತೇಯ +ನಿಮಿಷಕೆ
ಬೀತುದೇ +ನಿನ್+ಅಖಿಳ+ಸಿರಿ+ ವಿ
ಖ್ಯಾತಿ +ಬರತುದೆ+ ವೇಡೆಗೆದ್+ಅರಿತೆ+ ಮನದ+ ವಾಸಿಗಳ
ಪ್ರೀತಿಯುಂಟೇ +ನಿಮಗೆ +ಮತ್ತೀ
ದ್ಯೂತದಲಿ+ ಧನವಿಲ್ಲಲಾ+ ಗರ್ವ
ಅತಿರೇಕವ+ ಬೀಳುಗೊಂಡಿರೆ+ಎಂದನಾ +ಶಕುನಿ

ಅಚ್ಚರಿ:
(೧) ಧರ್ಮಜನನ್ನು ಹಂಗಿಸುವ ಪರಿ – ಸೋತೆಲಾ ಕೌಂತೇಯ; ನಿಮಿಷಕೆ ಬೀತುದೇ ನಿನ್ನಖಿಳಸಿರಿ; ವಿಖ್ಯಾತಿ ಬರತುದೆ ವೇಡೆಗೆದರಿತೆ ಮನದ ವಾಸಿಗಳ; ಧನವಿಲ್ಲಲಾ ಗರ್ವಾತಿರೇಕವ ಬೀಳುಗೊಂಡಿರೆಯೆಂದನಾ

ನಿಮ್ಮ ಟಿಪ್ಪಣಿ ಬರೆಯಿರಿ