ಪದ್ಯ ೧೦: ವಿಧಿಯು ಧರ್ಮಜನ ಮೇಲೆ ಹೇಗೆ ಕೋಪಗೊಂಡಿತು?

ನಕುಲ ಸಹದೇವಾರ್ಜುನರ ಮಣಿ
ಮಕುಣ ಕರ್ಣಾಭರಣ ಪದಕಾ
ಧಿಕ ಸಮಸ್ತಾಭರಣವೊಡ್ಡಿತು ಹಲಗೆಯೊಂದರಲಿ
ವಿಕಟ ಮಾಯಾ ವಿಷಮ ಕರ್ಮವ
ನಕಟ ಬಲ್ಲನೆ ಸಾಧುಜನ ಸೇ
ವಕನು ಸೋತನು ಸಾಧ್ಯವಹುದೇ ವಿಧಿಯ ಮುಳಿಸಿನಲಿ (ಸಭಾ ಪರ್ವ, ೧೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ನಕುಲ ಸಹದೇವ ಅರ್ಜುನರ ಮಣಿಭರಿತ ಮಕುಟ, ಧರಿಸಿದ್ದ ಪದಕ, ಕರ್ಣಾಭರಣವೇ ಮೊದಲಾದ ಸಮಸ್ತ ಒಡವೆಗಳನ್ನೂ ಒಂದು ಹಲಗೆಯಲ್ಲಿ ಸೋತನು. ಸಾಧುಜನರ ಸೇವಕನಾದ ಧರ್ಮಜನು ಮಾಯೆಯ ತಳಮೇಲು ಮಾಡುವ ಕರ್ಮವನ್ನು ಅರಿಯುವುದಾದರೂ ಹೇಗೆ? ವಿಧಿಯು ಯುಧಿಷ್ಠಿರನ ಮೇಲೆ ಕೋಪಗೊಂಡಿತು. ವಿಧಿಯ ಕೋಪವನ್ನು ತಡೆಯಲು ಸಾಧ್ಯವೇ?
ವಿಧಿಯು ಯುಧಿಷ್ಠಿರನ ಮೇಲೆ ಮುಳಿಯಿತು.

ಅರ್ಥ:
ಮಣಿ: ಬೆಲೆಬಾಳುವ ರತ್ನ; ಮಕುಟ: ಕಿರೀಟ; ಕರ್ಣ: ಕಿವಿ; ಆಭರಣ: ಒಡವೆ; ಪದಕ: ಹಾರಗಳಲ್ಲಿ ಅಳವಡಿಸುವ ಅಲಂಕಾರದ ಬಿಲ್ಲೆ; ಅಧಿಕ: ಹೆಚ್ಚು; ಸಮಸ್ತ: ಎಲ್ಲಾ; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಹಲಗೆ: ಮರದ ಅಗಲವಾದ ಹಾಗೂ ತೆಳುವಾದ ಸೀಳು, ಪಟ; ವಿಕಟ: ವಕ್ರವಾದ, ವಿಡಂಬನ; ಮಾಯ: ಗಾರುಡಿ, ಭ್ರಾಂತಿ; ವಿಷಮ: ಕಷ್ಟಕರ; ಕರ್ಮ: ಕೆಲಸ, ಕಾರ್ಯದ ಫಲ; ಅಕಟ: ಅಯ್ಯೋ; ಬಲ್ಲನೆ: ತಿಳಿದವ; ಸಾಧುಜನ: ಸಜ್ಜನ; ಸೇವಕ: ಆಳು; ಸೋತು: ಪರಾಭವ; ಸಾಧ್ಯ: ಸಾಧಿಸಬಹುದಾದುದು; ವಿಧಿ: ಆಜ್ಞೆ, ಆದೇಶ, ನೇಮ; ಮುಳಿಸು: ಕೆರಳು, ಕೋಪಗೊಳ್ಳು;

ಪದವಿಂಗಡಣೆ:
ನಕುಲ +ಸಹದೇವ+ಅರ್ಜುನರ +ಮಣಿ
ಮಕುಣ +ಕರ್ಣಾಭರಣ +ಪದಕ+
ಅಧಿಕ +ಸಮಸ್ತ+ಆಭರಣವ್+ಒಡ್ಡಿತು +ಹಲಗೆ+ಒಂದರಲಿ
ವಿಕಟ +ಮಾಯಾ +ವಿಷಮ +ಕರ್ಮವನ್
ಅಕಟ +ಬಲ್ಲನೆ +ಸಾಧುಜನ +ಸೇ
ವಕನು +ಸೋತನು +ಸಾಧ್ಯವಹುದೇ +ವಿಧಿಯ +ಮುಳಿಸಿನಲಿ

ಅಚ್ಚರಿ:
(೧) ವಿಕಟ, ಅಕಟ – ಪ್ರಾಸಪದ
(೨) ವಿಧಿಯ ಕೋಪದ ಪ್ರತಾಪ – ಸಾಧುಜನ ಸೇವಕನು ಸೋತನು ಸಾಧ್ಯವಹುದೇ ವಿಧಿಯ ಮುಳಿಸಿನಲಿ
(೩) ಯುಧಿಷ್ಠಿರನನ್ನು ಸಾಧುಜನ ಸೇವಕ ಎಂದು ಹೊಗಳಿರುವುದು

ಪದ್ಯ ೯: ಮಿಕ್ಕಾವ ವಸ್ತುಗಳನ್ನು ಯುಧಿಷ್ಠಿರನು ಸೋತನು?

ತೀರಿತಿಂದ್ರಪ್ರಸ್ಥದುರು ಭಂ
ಡಾರ ತನ್ನರಮನೆಯ ಪೈಕದ
ವಾರಕದ ಭಂಗಾರವೊಡ್ಡಿತು ಕೋಟಿ ಸಂಖ್ಯೆಯಲಿ
ಸೇರಿತದು ಕುರುಪತಿಗೆ ರಾಯನ
ನಾರಿಯರ ವಿವಿಧಾಭರಣ ಸಿಂ
ಗಾರವೊಡ್ಡಿತು ಕೊಂಡು ಮುಳುಗಿತು ಖಡ್ಡತನ ನೃಪನ (ಸಭಾ ಪರ್ವ, ೧೫ ಸಂಧಿ, ೯ ಪದ್ಯ)

ತಾತ್ಪರ್ಯ:
ಇಂದ್ರಪ್ರಸ್ಥಪುರದ ಬೊಕ್ಕಸವು ಖಾಲಿಯಾಯಿತು, ಎಲ್ಲಾ ಹಣವು ಪಣವಾಗಿಟ್ಟು ಧರ್ಮಜನು ಸೋತನು. ಪರಿವಾರದವರಿಗೆ ಬಳುವಳಿಯಾಗಿ ಬಂದಿದ್ದ ಹೊನ್ನಿನ ಆಭರಣ, ಧನಗಳನ್ನು ಕೋಟಿಗಟ್ಟಲೆ ಒಡ್ಡದನು. ಅವೆಲ್ಲವೂ ಕೌರವನ ವಶವಾಯಿತು. ಅಂತಃಪುರ ಸ್ತ್ರೀಯರ ಆಭರಣಗಳನ್ನೂ ಒಡ್ಡಿದ ಯುಧಿಷ್ಠಿರನ ತಿಳಿಗೇಡಿತನವು ಅದನ್ನೂ ಸೋತಿತು.

ಅರ್ಥ:
ತೀರಿತು: ಮುಗಿಯಿತು; ಉರು: ಅತಿದೊಡ್ಡ, ಶ್ರೇಷ್ಠ; ಭಂಡಾರ: ಬೊಕ್ಕಸ; ಅರಮನೆ: ರಾಜರ ಆಲಯ; ಪೈಕ: ಪರಿವಾರ, ಪಂಗಡ; ವಾರಕ: ಅಂತಃಪುರ; ಭಂಗಾರ: ಚಿನ್ನ; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಕೋಟಿ: ಲೆಕ್ಕವಿಲ್ಲದಷ್ಟು; ಸಂಖ್ಯೆ: ಎಣಿಕೆ; ಸೇರು: ತಲುಪು; ರಾಯ: ರಾಜ; ನಾರಿ: ಹೆಣ್ಣು; ವಿವಿಧ: ಹಲವಾರು; ಆಭರಣ: ಒಡವೆ; ಸಿಂಗಾರ: ಶೃಂಗಾರ, ಚೆಲುವು; ಮುಳುಗು: ತೋಯು; ಖಡ್ಡ: ತಿಳಿಗೇಡಿ, ಹೆಡ್ಡ; ನೃಪ: ರಾಜ;

ಪದವಿಂಗಡಣೆ:
ತೀರಿತ್+ಇಂದ್ರಪ್ರಸ್ಥದ್+ಉರು +ಭಂ
ಡಾರ +ತನ್+ಅರಮನೆಯ +ಪೈಕದ
ವಾರಕದ+ ಭಂಗಾರವೊಡ್ಡಿತು+ ಕೋಟಿ +ಸಂಖ್ಯೆಯಲಿ
ಸೇರಿತದು +ಕುರುಪತಿಗೆ +ರಾಯನ
ನಾರಿಯರ +ವಿವಿಧ+ಆಭರಣ +ಸಿಂ
ಗಾರವ್+ಒಡ್ಡಿತು +ಕೊಂಡು +ಮುಳುಗಿತು +ಖಡ್ಡತನ+ ನೃಪನ

ಅಚ್ಚರಿ:
(೧) ಪೈಕ, ವಾರಕ – ಪದಗಳ ಬಳಕೆ
(೨) ಧರ್ಮಜನನ್ನು ಖಡ್ಡತನ ನೃಪ ಎಂದು ಕರೆದಿರುವುದು

ಪದ್ಯ ೮: ಯುಧಿಷ್ಠಿರನು ಎಷ್ಟು ಪಣವನ್ನು ಇಟ್ಟನು?

ಬರಹಕಿಮ್ಮಡಿ ನೂರುಮಡಿ ಸಾ
ವಿರದಮಡಿ ಪರಿಯಂತವಿಕ್ಕಿತು
ಹರುಷ ನನೆಕೊನೆಯಾಯ್ತು ಹೆಚ್ಚಿತು ಕಲಿಮಲಾವೇಶ
ಸ್ಥಿರವೆ ಹಿಂಗಿತು
ವಾಸಿ ಪಾಡಿನ
ದುರುಳತನವುಬ್ಬೆದ್ದುದಡಿಗಡಿ
ಗರಸನೊಡ್ಡಿದ ಮೇಲೆ ಮೇಲೊಡ್ಡವನು ವಿರಚಿಸಿದ (ಸಭಾ ಪರ್ವ, ೧೫ ಸಂಧಿ, ೮ ಪದ್ಯ)

ತಾತ್ಪರ್ಯ:
ಹೇಳಿದ್ದಕ್ಕೆರಡರಷ್ಟು, ನೂರರಷ್ಟು, ಸಾವಿರದಷ್ಟು ಹಣವನ್ನೊಡ್ಡಿದನು. ಸಂತಸದ ಮೊಗ್ಗು ಕೊನೆಯಾಯಿತು, ಕಲಿಯ ದೋಷವು ಹೆಚ್ಚಿತು. ಮನಸ್ಸಿನ ಸಮತೆಯನ್ನು ಕಳೆದುಕೊಂಡು ಛಲದ ದುಷ್ಟತನವು ಮನಸ್ಸಿನಲ್ಲಿ ಹೆಚ್ಚಿತು. ಒಡ್ಡದ ಮೇಲೆ ಒಡ್ಡವನ್ನು ಇಟ್ಟನು.

ಅರ್ಥ:
ಬರಹ:ಬರವಣಿಗೆ, ಚಿತ್ರಣ; ಇಮ್ಮಡಿ: ಎರಡರಷ್ಟು, ದುಪ್ಪಟ; ಸಾವಿರ ಸಹಸ್ರ; ಮಡಿ: ಪಟ್ಟು; ಪರಿಯಂತ: ವರೆಗೆ, ತನಕ; ಹರುಷ: ಸಂತಸ; ನನೆ: ಮೊಗ್ಗು, ಮುಗುಳು; ಕೊನೆ: ಅಂತ್ಯ; ಹೆಚ್ಚು: ಅಧಿಕ; ಕಲಿ: ವೀರ; ಕಲಿಮಲಾವೇಶ: ಕಲಿಗಾಲದ ಮಲದಿಂದ ಆವೇಶಗೊಂಡವ; ಆವೇಶ: ರೋಷ; ಸ್ಥಿರ: ನಿತ್ಯವಾದುದು, ಶಾಶ್ವತವಾದುದು; ಹಿಂಗು: ಹಿಂದಕ್ಕೆ ಹೋಗು, ಹಿಂದೆ ಸರಿ, ಕಡಮೆಯಾಗು; ವಾಸಿ: ಛಲ, ಹಠ; ಪಾಡಿನ: ರೀತಿ, ಬಗೆ; ದುರುಳ: ದುಷ್ಟ; ಉಬ್ಬೆದ್ದು: ಹೆಚ್ಚಾಗು; ಅಡಿಗಡಿಗೆ: ಪುನಃ ಪುನಃ; ಅರಸ: ರಾಜ; ಒಡ್ಡು: ನೀಡು, ಜೂಜಿನ ಪಣ; ಮೇಲೆ ಮೇಲೆ: ಮತ್ತೆ ಮತ್ತೆ; ವಿರಚಿಸು: ನಿರ್ಮಿಸು, ರಚಿಸು;

ಪದವಿಂಗಡಣೆ:
ಬರಹಕ್+ಇಮ್ಮಡಿ +ನೂರು+ಮಡಿ ಸಾ
ವಿರದ+ಮಡಿ ಪರಿಯಂತ+ಇಕ್ಕಿತು
ಹರುಷ +ನನೆಕೊನೆಯಾಯ್ತು +ಹೆಚ್ಚಿತು +ಕಲಿಮಲ+ಆವೇಶ
ಸ್ಥಿರವೆ+ ಹಿಂಗಿತು+ವಾಸಿ +ಪಾಡಿನ
ದುರುಳತನವ್+ಉಬ್ಬೆದ್ದುದ್+ಅಡಿಗಡಿಗ್
ಅರಸನ್+ಒಡ್ಡಿದ +ಮೇಲೆ +ಮೇಲ್+ಒಡ್ಡವನು +ವಿರಚಿಸಿದ

ಅಚ್ಚರಿ:
(೧) ಮಡಿ ಪದದ ಬಳಕೆ – ಇಮ್ಮಡಿ, ನೂರ್ಮಡಿ, ಸಾವಿರಮಡಿ
(೨) ದುರ್ಯೋಧನನ ಸ್ಥಿತಿಯನ್ನು ಹೇಳುವ ಪರಿ – ಹರುಷ ನನೆಕೊನೆಯಾಯ್ತು ಹೆಚ್ಚಿತು ಕಲಿಮಲಾವೇಶ; ಸ್ಥಿರವೆ ಹಿಂಗ್ತು ವಾಸಿ ಪಾಡಿನ ದುರುಳತನವುಬ್ಬೆದ್ದುದಡಿಗಡಿಗೆ