ಪದ್ಯ ೫೬: ಧರ್ಮರಾಯನು ಪಣದಲ್ಲಿ ಏನನ್ನು ಸೋತನು?

ಏನನಾಡಿದಡೇನು ಫಲ ದೈ
ವಾನುರಾಗದ ಕುಣಿಕೆ ಬೇರಹು
ದಾ ನರೇಂದ್ರನ ಸಾರಿ ಸೋತದು ನಿಮಿಷಮಾತ್ರದಲಿ
ಆ ನಿರೂಢಿಯ ಹತ್ತು ಸಾವಿರ
ಮಾನಿನಿಯರನು ಮತ್ತೆ ಸೋತನು
ಮಾನನಿಧಿಯೇ ಮತ್ತೆ ಪಣವೇನೆಂದನಾ ಶಕುನಿ (ಸಭಾ ಪರ್ವ, ೧೪ ಸಂಧಿ, ೫೬ ಪದ್ಯ)

ತಾತ್ಪರ್ಯ:
ಏನು ಹೇಳಿದರೇನು ಪ್ರಯೋಜನ, ದೈವದ ಒಲವೇ ಬೇರೆಯಾಗಿತ್ತು, ಧರ್ಮರಾಯನ ಕಾಯಿಗಳು ನಿಮಿಷದಲ್ಲಿ ಸೋತುಹೋದವು. ಮತ್ತೆ ಹತ್ತು ಸಾವಿರ ಸ್ತ್ರೀಯರನ್ನು ಒಡ್ಡಿ ಸೋತನು. ಶಕುನಿಯು ಹೇ ಸ್ವಾಭಿಮಾನನಿಧಿಯೇ ಮತ್ತೇನು ಪಣೆ ಎಂದು ಕೇಳಿದನು.

ಅರ್ಥ:
ಆಡು: ಮಾತಾಡು; ಫಲ: ಪ್ರಯೋಜನ; ದೈವಾನುರಾಗ: ಭಗವಂತನ ಕೃಪೆ; ಕುಣಿಕೆ: ಕೊನೆ, ತುದಿ; ಬೇರಹುದು: ಬೇರೆ, ಅನ್ಯ; ನರೇಂದ್ರ: ರಾಜ; ಸಾರಿ: ಬಾರಿ, ಸರರ್ತಿ; ಸೋತು: ಸೋಲು, ಪರಾಭವ; ನಿಮಿಷ: ಕ್ಷಣ; ನಿರೂಢಿ: ಸಾಮಾನ್ಯ; ಹತ್ತು: ದಶ; ಸಾವಿರ: ಸಹಸ್ರ; ಮಾನಿನಿ: ಹೆಣ್ಣು; ಮಾನನಿಧಿ: ಮಾನವನ್ನೇ ನಿಧಿಯಾಗಿಟ್ಟುಕೊಂಡಿರುವ; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ;

ಪದವಿಂಗಡಣೆ:
ಏನನಾಡಿದಡ್+ಏನು +ಫಲ +ದೈ
ವಾನುರಾಗದ +ಕುಣಿಕೆ +ಬೇರಹುದ್
ಆ+ ನರೇಂದ್ರನ +ಸಾರಿ +ಸೋತದು +ನಿಮಿಷಮಾತ್ರದಲಿ
ಆ +ನಿರೂಢಿಯ +ಹತ್ತು +ಸಾವಿರ
ಮಾನಿನಿಯರನು+ ಮತ್ತೆ +ಸೋತನು
ಮಾನನಿಧಿಯೇ +ಮತ್ತೆ +ಪಣವ್+ಏನೆಂದನಾ +ಶಕುನಿ

ಅಚ್ಚರಿ:
(೧) ಧರ್ಮರಾಯನನ್ನು ಶಕುನಿ ಕರೆದ ಬಗೆ – ಮಾನನಿಧಿಯೇ
(೨) ಮಾನಿನಿ, ಮಾನನಿಧಿ – ಪದಗಳ ಬಳಕೆ
(೩) ದೈವದ ಅನುಗ್ರಹ ಮುಖ್ಯವೆಂದು ಹೇಳುವ ಸಾಲು – ದೈವಾನುರಾಗದ ಕುಣಿಕೆ ಬೇರಹುದು

ಪದ್ಯ ೫೫: ಧರ್ಮರಾಯನು ಯಾರನ್ನು ಪಣಕ್ಕೆ ಹೂಡಲು ಯೋಚಿಸಿದ?

ಫಡ ದರಿದ್ರನೆ ತಾನು ತನ್ನೆಯ
ಮಡದಿಯರ ಕೆಳದಿಯರು ಸಾವಿರ
ಮಡಿ ಸುಯೋಧನ ರಾಜಭವನದ ವಾರನಾರಿಯರ
ನುಡಿಯಬೇಕೇ ಧರ್ಮಸುತ ನಿ
ಮ್ಮಡಿಗಳೊಡ್ಡಿದ ಬಳಿಕ ಗೆಲಿದವ
ರೊಡವೆಯೈಸಲೆ ಹಾಯ್ಕು ಹಾಯ್ಕೆಂದೊದರಿದನು ಶಕುನಿ (ಸಭಾ ಪರ್ವ, ೧೪ ಸಂಧಿ, ೫೫ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಶಕುನಿಯ ಹಂಗಿಸುವ ಮಾತಿಗೆ ಪ್ರತಿಕ್ರಯಿಸುತ್ತಾ, ನಾನು ದರಿದ್ರನೇ, ನನ್ನ ರಾಣಿಯರ ಸಖಿಯರು, ದುರ್ಯೋಧನನ ಅಂತಃಪುರದ ವಾರನಾರಿಯರು ಸಾವಿರದಷ್ಟಿದ್ದಾರೆ ಎಂದನು, ಇದಕ್ಕೆ ಶಕುನಿಯು, ಅಲ್ಲವೇ ನಿಮ್ಮಪಾದ, ಪಣವನ್ನೊಡ್ಡಿದ ಮೇಲೆ ಅವರು ಗೆದ್ದವರ ಆಸ್ತಿಯಾಗುತ್ತಾರೆ, ದಾಳವನ್ನು ಹಾಕು ಎಂದು ಕೂಗಿದನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ದರಿದ್ರ: ಹೀನವಾದ, ಕೆಟ್ಟ; ಮಡದಿ: ಹೆಂಡತಿ; ಕೆಳದಿ: ಗೆಳತಿ, ಸ್ನೇಹಿತೆ; ಸಾವಿರ: ಸಹಸ್ರ; ಮಡಿ: ಪಟ್ಟು; ರಾಜಭವನ: ಅರಮನೆ; ವಾರನಾರಿ: ವೇಶ್ಯೆ; ನಾರಿ: ಹೆಣ್ಣು; ನುಡಿ: ಮಾತು; ನಿಮ್ಮಡಿ: ನಿಮ್ಮ ಪಾದ; ಒಡ್ಡು: ಪಣಕ್ಕೆ ಹಾಕು; ಬಳಿಕ: ನಂತರ; ಗೆಲಿ: ಗೆಲುವು, ಜಯ; ಒಡವೆ: ಆಭರಣ; ಐಸಲೆ: ಅಲ್ಲವೇ; ಹಾಯ್ಕು: ಹೂಡು; ಒದರು: ಹೇಳು;

ಪದವಿಂಗಡಣೆ:
ಫಡ +ದರಿದ್ರನೆ +ತಾನು +ತನ್ನೆಯ
ಮಡದಿಯರ+ ಕೆಳದಿಯರು +ಸಾವಿರ
ಮಡಿ +ಸುಯೋಧನ+ ರಾಜಭವನದ+ ವಾರನಾರಿಯರ
ನುಡಿಯಬೇಕೇ+ ಧರ್ಮಸುತ +ನಿ
ಮ್ಮಡಿಗಳ್+ಒಡ್ಡಿದ +ಬಳಿಕ +ಗೆಲಿದವರ್
ಒಡವೆ+ಐಸಲೆ +ಹಾಯ್ಕು +ಹಾಯ್ಕೆಂದ್+ಒದರಿದನು +ಶಕುನಿ

ಅಚ್ಚರಿ:
(೧) ನುಡಿ, ನಿಮ್ಮಡಿ – ಪ್ರಾಸ ಪದ
(೨) ಗೆದ್ದವರ ಸ್ವತ್ತು ಎಂದು ಹೇಳಲು – ಗೆಲಿದವರೊಡವೆ ಪದದ ಬಳಕೆ

ಪದ್ಯ ೫೪: ಶಕುನಿ ಯುಧಿಷ್ಠಿರನನ್ನು ಏನು ಕೇಳಿದ?

ಆದವೆಮಗಿವುಗಜಘಟೆಗಳೆಂ
ದಾದುರಾತ್ಮಕನಾಡಿದನು ದು
ರ್ಭೇದವಿವದಿರ ಕಪಟಮಂತ್ರವನಾವನರಿವವನು
ಆದುದರಸಗೆ ಸೋಲವಿನ್ನೇ
ನಾದುದೈ ಭೂಪತಿಯೆ ಗಜಘಟೆ
ತೀದವೇ ಮೇಲೇಣು ಪಣವುಂಟೆಂದನಾ ಶಕುನಿ (ಸಭಾ ಪರ್ವ, ೧೪ ಸಂಧಿ, ೫೪ ಪದ್ಯ)

ತಾತ್ಪರ್ಯ:
ಶಕುನಿಯ ದಾಳದ ಪ್ರಭಾವ ಆನೆಗಳ ಗುಂಪನ್ನು ಧರ್ಮರಾಯ ಸೋತನು. ಇವು ನಮಗಾದವು ಯುಧಿಷ್ಠಿರ ಎಂದು ದುಷ್ಟ ಶಕುನಿ ನುಡಿದನು, ಅವರ ಕಪಟ ಮಂತ್ರವನ್ನು ಭೇದಿಸುವುದು ಕಷ್ಟ. ಅದನ್ನ್ ತಿಳಿಯಬಲ್ಲವರಾರು? ಧರ್ಮರಾಯನು ಸೋತನು, ರಾಜ ಆನೆಗಳ ನಂತರ ಪಣಕ್ಕೆ ಮತ್ತೇನನ್ನು ಇಡುವೆ ಎಂದು ಶಕುನಿ ಕೇಳಿದನು.

ಅರ್ಥ:
ಆದವ್: ಆಯಿತು; ಎಮಗ್: ನಮಗೆ; ಗಜಘಟೆ: ಆನೆಗಳು ಗುಂಪು; ದುರಾತ್ಮ: ದುಷ್ಟ; ಆಡು: ಮಾತಾಡು; ಭೇದ: ಒಡೆ, ಬಿರುಕು; ಇವದಿರ: ಇವರ; ಕಪಟ: ಮೋಸ; ಮಂತ್ರ: ವಿಚಾರ, ಆಲೋಚನೆ; ಅರಿ: ತಿಳಿ; ಅರಸ: ರಾಜ; ಸೋಲು: ಪರಾಭವ; ಭೂಪತಿ: ರಾಜ; ಮೇಲೇನು: ಮುಂದೇನು; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ತೀದು: ಮುಗಿಸಿ;

ಪದವಿಂಗಡಣೆ:
ಆದವ್+ಎಮಗ್+ಇವು+ಗಜಘಟೆಗಳೆಂದ್
ಆ+ದುರಾತ್ಮಕನ್+ಆಡಿದನು+ ದು
ರ್ಭೇದವ್+ಇವದಿರ +ಕಪಟ+ಮಂತ್ರವನ್+ಆವನ್+ಅರಿವವನು
ಆದುದ್+ಅರಸಗೆ +ಸೋಲ್+ಅವಿನ್ನೇ
ನಾದುದೈ +ಭೂಪತಿಯೆ +ಗಜಘಟೆ
ತೀದವೇ +ಮೇಲ್+ಏಣು+ ಪಣ+ವುಂಟೆಂದನಾ+ ಶಕುನಿ

ಅಚ್ಚರಿ:
(೧) ಶಕುನಿಯ ಕಪಟ ಆಟವನ್ನು ಸೂಚಿಸುವ ಪರಿ – ದುರ್ಭೇದವಿವದಿರ ಕಪಟಮಂತ್ರವನಾವನರಿವವನು
(೨) ದುರ್ಭೇದ, ದುರಾತ್ಮ – ಶಕುನಿಗೆ ಬಳಸಿದ ಪದಗಳು

ಪದ್ಯ ೫೩: ಧರ್ಮರಾಯನು ಪಣಕ್ಕೆ ಏನನ್ನು ಒಡ್ಡಿದನು?

ಸೋತೆಯರಸಾ ನಿನಗೆ ಜೂಜಿನ
ಭೀತಿಯುಂಟೇ ಮಾಣು ಮೇಣ್ನಿ
ರ್ಭೀತನೇ ನುಡಿ ಮೇಲಣೊಡ್ಡವ ಹಲವು ಮಾತೇನು
ಕಾತರಿಸ ಬೇಡೆನಲು ಫಡ ಪಣ
ಭೀತನೇ ತಾನಕಟೆನುತ ಕುಂ
ತೀತನುಜ ನೊಡ್ಡಿದನು ಸಾವಿರ ಮತ್ತಗಜಘಟೆಯ (ಸಭಾ ಪರ್ವ, ೧೪ ಸಂಧಿ, ೫೩ ಪದ್ಯ)

ತಾತ್ಪರ್ಯ:
ಶಕುನಿಯು ಆಟದ ಆರ್ಭಟವನ್ನು ಹೆಚಿಸುತ್ತಾ, ಧರ್ಮರಾಯ ನೀನು ಸೋತೆ, ಜೂಜಾಡಲು ಹೆದರಿದರೆ ಬೇಡ, ಬಿಟ್ಟುಬಿಡು. ಭಯವಿಲ್ಲದಿದ್ದರೆ ಮುಂದಿನ ಪಣವನ್ನೊಡ್ಡು. ಹೆಚ್ಚೇನು ಹೆದರಬೇಡ ಎಂದು ಶಕುನಿಯು ಹೇಳಲು ಧರ್ಮರಾಯನು ನಾನು ಪಣವೊಡ್ಡಲು ಹೆದರುವವನೇ ಎನ್ನುತ್ತಾ ಒಂದು ಸಾವಿರ ಮದಗಜಗಳನ್ನು ಒಡ್ಡಿದನು.

ಅರ್ಥ:
ಸೋಲು: ಪರಾಭವ; ಅರಸ: ರಾಜ; ಜೂಜು: ದ್ಯೂತ; ಭೀತಿ: ಭಯ; ಮಾಣು: ಸ್ಥಗಿತಗೊಳ್ಳು, ಸುಮ್ಮನಿರು; ಮೇಣ್: ಅಥವಾ, ಇಲ್ಲವೆ; ನಿರ್ಭೀತ: ಧೈರ್ಯಶಾಲಿ; ನುಡಿ: ಮಾತು; ಮೇಲಣ: ಹೆಚ್ಚು, ಮುಂದೆ; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ; ಕಾತರ: ಕಳವಳ, ಉತ್ಸುಕತೆ; ಬೇಡ: ಸಲ್ಲದು, ಕೂಡದು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ಭೀತ: ಹೆದರಿಕೆ; ತಾನ್: ನಾನು; ಅಕಟ: ಅಯ್ಯೋ; ತನುಜ: ಮಗ; ನೋಡು: ವೀಕ್ಷಿಸು; ಸಾವಿರ: ಸಹಸ್ರ; ಮತ್ತ: ಸೊಕ್ಕಿದ, ಉನ್ಮತ್ತ; ಗಜ: ಆನೆ; ಘಟೆ: ಆನೆಗಳ ಗುಂಪು;

ಪದವಿಂಗಡಣೆ:
ಸೋತೆ+ಅರಸಾ+ ನಿನಗೆ +ಜೂಜಿನ
ಭೀತಿಯುಂಟೇ+ ಮಾಣು +ಮೇಣ್
ನಿರ್ಭೀತನೇ +ನುಡಿ +ಮೇಲಣ+ಒಡ್ಡವ+ ಹಲವು +ಮಾತೇನು
ಕಾತರಿಸ+ ಬೇಡ್+ಎನಲು +ಫಡ +ಪಣ
ಭೀತನೇ +ತಾನ್+ಅಕಟೆನುತ +ಕುಂ
ತೀತನುಜ+ ನೊಡ್ಡಿದನು +ಸಾವಿರ +ಮತ್ತಗಜಘಟೆಯ

ಅಚ್ಚರಿ:
(೧) ಭೀತಿ, ನಿರ್ಭೀತಿ – ವಿರುದ್ಧ ಪದಗಳು
(೨) ಯುಧಿಷ್ಠಿರನನ್ನು ಹಂಗಿಸುವ ಪರಿ – ಸೋತೆಯರಸಾ ನಿನಗೆ ಜೂಜಿನ ಭೀತಿಯುಂಟೇ