ಪದ್ಯ ೨೦: ಧೃತರಾಷ್ಟ್ರನು ಧರ್ಮಜನನ್ನು ಹೇಗೆ ಬರೆಮಾಡಿಕೊಂಡನು?

ಬಂದು ಧೃತರಾಷ್ಟ್ರನ ಪದಾಬ್ಜಕ್ಕೆ
ವಂದಿಸಿದೊಡೆನ್ನಾನೆ ಬಾರೈ
ತಂದೆ ಬಾರೆಂದೆಳೆದು ಕುಳ್ಳಿರಿಸಿದನು ಮಂಚದಲಿ
ನಂದನರು ಭೀಮಾರ್ಜುನಾದಿಗ
ಳಂದು ಪರಿವೇಷ್ಠಿಸಿದರಿತ್ತಲು
ಕಂದು ಹೃದಯದ ಕೌರವೇಂದ್ರನ ಹದನ ಕೇಳೆಂದ (ಸಭಾ ಪರ್ವ, ೧೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜನಮೇಜಯನಿಗೆ ಕಥೆಯನ್ನು ಹೇಳುತ್ತಾ, ಯುಧಿಷ್ಠಿರನು ಧೃತರಾಷ್ಟ್ರನ ಅರಮನೆಗೆ ಬಂದು ಅವನ ಪಾದಗಳಿಗೆ ವಂದಿಸಲು, ಧೃತರಾಷ್ಟ್ರನು ಯುಧಿಷ್ಠಿರನನ್ನು ಆಲಂಗಿಸಿ ಬಾ ಎನ್ನಾನೆ, ನನ್ನ ಕಂದ ಎಂದು ಪ್ರೀತಿಮಾತುಗಳಿಂದ ಬರೆಮಾಡಿಕೊಂಡು ಆಸನದಲ್ಲಿ ಕುಳ್ಳಿರಿಸಿದನು. ಅವನ ಸುತ್ತಲೂ ತಮ್ಮಂದಿರಾದ ಭೀಮಾರ್ಜುನರು ಆವರಿಸಿದರು. ಇತ್ತ ಕಳಂಕ ಹೃದಯದ ದುರ್ಯೋಧನನ ವಿಷಯವನ್ನು ಹೇಳುತ್ತೇನೆ ಕೇಳು ಎಂದು ವೈಶಂಪಾಯನರು ಕಥೆಯನ್ನು ಮುಂದುವರೆಸಿದರು.

ಅರ್ಥ:
ಬಂದು: ಆಗಮಿಸು; ಪದಾಬ್ಜ: ಪಾದ ಕಮಲಗಳು; ವಂದಿಸು: ನಮಸ್ಕರಿಸು; ಎನ್ನಾನೆ: ನನ್ನ ಆನೆಯೆ (ಮಕ್ಕಳನ್ನು ಪ್ರೀತಿಯಿಂದ ಕರೆಯುವ ಪದ); ಬಾ: ಆಗಮಿಸು; ಎಳೆದು: ಸೆಳೆದು; ಕುಳ್ಳಿರಿಸು: ಕೂರಿಸು, ಆಸೀನನಾಗು; ಮಂಚ: ಪಲ್ಲಂಗ; ನಂದನ: ಮಕ್ಕಳು; ಪರಿವೇಷ್ಟಿಸು: ಆವರಿಸು; ಕಂದು: ಕಳಂಕ; ಹೃದಯ: ಎದೆ; ಹದ: ಸ್ಥಿತಿ, ರೀತಿ; ಕೇಳು: ಆಲಿಸು;

ಪದವಿಂಗಡಣೆ:
ಬಂದು +ಧೃತರಾಷ್ಟ್ರನ +ಪದಾಬ್ಜಕ್ಕೆ
ವಂದಿಸಿದೊಡ್+ಎನ್ನಾನೆ +ಬಾರೈ
ತಂದೆ +ಬಾರೆಂದ್+ಎಳೆದು +ಕುಳ್ಳಿರಿಸಿದನು +ಮಂಚದಲಿ
ನಂದನರು +ಭೀಮಾರ್ಜುನಾದಿಗಳ್
ಅಂದು +ಪರಿವೇಷ್ಠಿಸಿದರ್+ಇತ್ತಲು
ಕಂದು +ಹೃದಯದ +ಕೌರವೇಂದ್ರನ+ ಹದನ+ ಕೇಳೆಂದ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಬಗೆ – ಕಂದು ಹೃದಯದ ಕೌರವೇಂದ್ರ
(೨) ಪ್ರೀತಿಯನ್ನು ತೋರುವ ಬಗೆ – ಎನ್ನಾನೆ ಬಾರೈ ತಂದೆ ಬಾರೆಂದೆಳೆದು

ನಿಮ್ಮ ಟಿಪ್ಪಣಿ ಬರೆಯಿರಿ