ಪದ್ಯ ೨೧: ದುರ್ಯೋಧನನು ಯಾವ ದೇವರಬಳಿ ಹರಕೆ ಮಾಡಿಕೊಂಡನು?

ಕರೆಸಿದನು ಶಕುನಿಯನು ಕರ್ಣಂ
ಗರುಹಿದನು ಸೈಂಧವನನೆಕ್ಕಟಿ
ಗರೆದು ಹೇಳಿದ ಕೃತ್ರಿಮದ ಹಾಸಂಗಿಗಳ ರಚಿಸಿ
ಹರಸಿಕೊಂಡರು ಗಣಪ ಯಕ್ಷೇ
ಶ್ವರಿ ಕಳಾವತಿ ದುರ್ಗಿ ಭುವನೇ
ಶ್ವರಿಗಳಿಗೆ ವಿವಿಧೋಪಚಾರದ ಬಲಿ ವಿಧಾನದಲಿ (ಸಭಾ ಪರ್ವ, ೧೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಶಕುನಿಯನ್ನು ಕರೆಸಿದನು. ಕರ್ಣನಿಗೆ ತಿಳಿಸಿದನು. ಜಯದ್ರಥನನ್ನು ಏಕಾಂತದಲ್ಲಿ ಕರೆದು ಮೋಸದ ದಾಲಗಳನ್ನು ನಿಮಿಸಿದರು. ಗಣಪತಿ, ಯಕ್ಷೇಶ್ವರಿ, ಕಲಾವತಿ, ದುರ್ಗಾ, ಭುವನೇಶ್ವರಿ ದೇವತೆಗಳಿಗೆ ಬಲಿಯನ್ನು ಕೊಟ್ಟು ವಾಮಮಾರ್ಗದ ಅನೇಕ ಉಪಚಾರಗಳನ್ನು ಮಾಡಿ ಹರಕೆ ಮಾಡಿಕೊಂಡರು.

ಅರ್ಥ:
ಕರೆಸು: ಬರೆಮಾಡು, ಆಮಂತ್ರಿಸು; ಅರುಹು: ಹೇಳು; ಸೈಂಧವ: ಜಯದ್ರಥ; ಎಕ್ಕಟಿ: ಏಕಾಂತವಾದ; ಹೇಳು: ತಿಳಿಸು; ಕೃತ್ರಿಮ: ಮೋಸ; ಹಾಸಂಗಿ: ಜೂಜಿನ ದಾಳ; ರಚಿಸು: ನಿರ್ಮಿಸು; ಹರಸಿ: ಆಶೀರ್ವಾದ, ಸಂಕಲ್ಪ; ವಿವಿಧ; ಹಲವಾರು; ಉಪಚಾರ: ಸತ್ಕಾರ; ಬಲಿ: ಕಾಣಿಕೆ, ಕೊಡುಗೆ; ವಿಧಾನ; ರೀತಿ;

ಪದವಿಂಗಡಣೆ:
ಕರೆಸಿದನು +ಶಕುನಿಯನು +ಕರ್ಣಂಗ್
ಅರುಹಿದನು +ಸೈಂಧವನನ್+ಎಕ್ಕಟಿ
ಕರೆದು +ಹೇಳಿದ +ಕೃತ್ರಿಮದ +ಹಾಸಂಗಿಗಳ +ರಚಿಸಿ
ಹರಸಿಕೊಂಡರು +ಗಣಪ +ಯಕ್ಷೇ
ಶ್ವರಿ+ ಕಳಾವತಿ+ ದುರ್ಗಿ +ಭುವನೇ
ಶ್ವರಿಗಳಿಗೆ +ವಿವಿಧ+ಉಪಚಾರದ+ ಬಲಿ+ ವಿಧಾನದಲಿ

ಅಚ್ಚರಿ:
(೧) ಯಕ್ಷೇಶ್ವರಿ, ಭುವನೇಶ್ವರಿ – ಪ್ರಾಸ ಪದ

ಪದ್ಯ ೨೦: ಧೃತರಾಷ್ಟ್ರನು ಧರ್ಮಜನನ್ನು ಹೇಗೆ ಬರೆಮಾಡಿಕೊಂಡನು?

ಬಂದು ಧೃತರಾಷ್ಟ್ರನ ಪದಾಬ್ಜಕ್ಕೆ
ವಂದಿಸಿದೊಡೆನ್ನಾನೆ ಬಾರೈ
ತಂದೆ ಬಾರೆಂದೆಳೆದು ಕುಳ್ಳಿರಿಸಿದನು ಮಂಚದಲಿ
ನಂದನರು ಭೀಮಾರ್ಜುನಾದಿಗ
ಳಂದು ಪರಿವೇಷ್ಠಿಸಿದರಿತ್ತಲು
ಕಂದು ಹೃದಯದ ಕೌರವೇಂದ್ರನ ಹದನ ಕೇಳೆಂದ (ಸಭಾ ಪರ್ವ, ೧೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜನಮೇಜಯನಿಗೆ ಕಥೆಯನ್ನು ಹೇಳುತ್ತಾ, ಯುಧಿಷ್ಠಿರನು ಧೃತರಾಷ್ಟ್ರನ ಅರಮನೆಗೆ ಬಂದು ಅವನ ಪಾದಗಳಿಗೆ ವಂದಿಸಲು, ಧೃತರಾಷ್ಟ್ರನು ಯುಧಿಷ್ಠಿರನನ್ನು ಆಲಂಗಿಸಿ ಬಾ ಎನ್ನಾನೆ, ನನ್ನ ಕಂದ ಎಂದು ಪ್ರೀತಿಮಾತುಗಳಿಂದ ಬರೆಮಾಡಿಕೊಂಡು ಆಸನದಲ್ಲಿ ಕುಳ್ಳಿರಿಸಿದನು. ಅವನ ಸುತ್ತಲೂ ತಮ್ಮಂದಿರಾದ ಭೀಮಾರ್ಜುನರು ಆವರಿಸಿದರು. ಇತ್ತ ಕಳಂಕ ಹೃದಯದ ದುರ್ಯೋಧನನ ವಿಷಯವನ್ನು ಹೇಳುತ್ತೇನೆ ಕೇಳು ಎಂದು ವೈಶಂಪಾಯನರು ಕಥೆಯನ್ನು ಮುಂದುವರೆಸಿದರು.

ಅರ್ಥ:
ಬಂದು: ಆಗಮಿಸು; ಪದಾಬ್ಜ: ಪಾದ ಕಮಲಗಳು; ವಂದಿಸು: ನಮಸ್ಕರಿಸು; ಎನ್ನಾನೆ: ನನ್ನ ಆನೆಯೆ (ಮಕ್ಕಳನ್ನು ಪ್ರೀತಿಯಿಂದ ಕರೆಯುವ ಪದ); ಬಾ: ಆಗಮಿಸು; ಎಳೆದು: ಸೆಳೆದು; ಕುಳ್ಳಿರಿಸು: ಕೂರಿಸು, ಆಸೀನನಾಗು; ಮಂಚ: ಪಲ್ಲಂಗ; ನಂದನ: ಮಕ್ಕಳು; ಪರಿವೇಷ್ಟಿಸು: ಆವರಿಸು; ಕಂದು: ಕಳಂಕ; ಹೃದಯ: ಎದೆ; ಹದ: ಸ್ಥಿತಿ, ರೀತಿ; ಕೇಳು: ಆಲಿಸು;

ಪದವಿಂಗಡಣೆ:
ಬಂದು +ಧೃತರಾಷ್ಟ್ರನ +ಪದಾಬ್ಜಕ್ಕೆ
ವಂದಿಸಿದೊಡ್+ಎನ್ನಾನೆ +ಬಾರೈ
ತಂದೆ +ಬಾರೆಂದ್+ಎಳೆದು +ಕುಳ್ಳಿರಿಸಿದನು +ಮಂಚದಲಿ
ನಂದನರು +ಭೀಮಾರ್ಜುನಾದಿಗಳ್
ಅಂದು +ಪರಿವೇಷ್ಠಿಸಿದರ್+ಇತ್ತಲು
ಕಂದು +ಹೃದಯದ +ಕೌರವೇಂದ್ರನ+ ಹದನ+ ಕೇಳೆಂದ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಬಗೆ – ಕಂದು ಹೃದಯದ ಕೌರವೇಂದ್ರ
(೨) ಪ್ರೀತಿಯನ್ನು ತೋರುವ ಬಗೆ – ಎನ್ನಾನೆ ಬಾರೈ ತಂದೆ ಬಾರೆಂದೆಳೆದು

ಪದ್ಯ ೧೯: ಯುಧಿಷ್ಠಿರನು ಎಲ್ಲಿಗೆ ಹೊರಟನು?

ಜನಪ ಕಳುಹಿದ ದೂತರಿವರರ
ಮನೆಗೆ ಬಂದರು ಜೀಯ ಧೃತರಾ
ಷ್ಟ್ರನ ಸಮಯವಾಯಿತ್ತು ನಿಮ್ಮಡಿ ಬಿಜಯಮಾಡುವುದು
ಎನಲು ತನ್ನ ಕುಮಾರರನು ತ
ನ್ನನುಜರನು ಸಚಿವ ಪ್ರಧಾನರ
ನನಿಬರನು ಕರೆಸಿದನು ನೃಪ ಹೊರವಂಟನರಮನೆಯ (ಸಭಾ ಪರ್ವ, ೧೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ದೂತರು ಪಾಂಡವರಿದ್ದ ಅರಮನೆಗೆ ಬಂದರು. ಒಡೆಯ ದಯಮಾಡಿಸಿ ರಾಜ ಧೃತರಾಷ್ಟ್ರನು ನಿಮ್ಮನ್ನು ಮಾತಿಗೆ ಕರೆಯುತ್ತಿದ್ದಾನೆ ಎಂದರು. ಧರ್ಮಜನು ತನ್ನ ಮಕ್ಕಳು, ತಮ್ಮಂದಿರು, ಸಚಿವರುಗಳನ್ನು ಕರೆಸಿ ಅವರೊಡನೆ ತನ್ನ ಅರಮನೆಯಿಂದ ಹೊರಟನು.

ಅರ್ಥ:
ಜನಪ: ರಾಜ; ಕಳುಹಿದ: ಕಳಿಸು; ದೂತ: ಸೇವಕ; ಮನೆ: ಆಲಯ; ಬಂದರು: ಆಗಮಿಸು; ಜೀಯ: ಒಡೆಯ; ಸಮಯ: ಕಾಲ; ಅಡಿ: ಪಾದ; ಬಿಜಯ: ದಯಮಾಡಿಸು; ಎನಲು: ಹೇಳಲು; ಕುಮಾರ: ಮಕ್ಕಳು; ಅನುಜ: ತಮ್ಮಂದಿರು; ಸಚಿವ: ಮಂತ್ರಿ; ಪ್ರಧಾನ: ಮುಖ್ಯ; ಅನಿಬರು: ಅಷ್ಟು ಜನ; ಕರೆಸು: ಬರೆಮಾಡು; ನೃಪ: ರಾಜ; ಹೊರವಂಟ: ತೆರಳು; ಅರಮನೆ: ರಾಜನ ಆಲಯ;

ಪದವಿಂಗಡಣೆ:
ಜನಪ +ಕಳುಹಿದ+ ದೂತರ್+ಇವರ್+ಅರ
ಮನೆಗೆ+ ಬಂದರು +ಜೀಯ +ಧೃತರಾ
ಷ್ಟ್ರನ +ಸಮಯವಾಯಿತ್ತು+ ನಿಮ್ಮಡಿ+ ಬಿಜಯಮಾಡುವುದು
ಎನಲು +ತನ್ನ +ಕುಮಾರರನು+ ತನ್ನ್
ಅನುಜರನು +ಸಚಿವ +ಪ್ರಧಾನರನ್
ಅನಿಬರನು+ ಕರೆಸಿದನು +ನೃಪ +ಹೊರವಂಟನ್+ಅರಮನೆಯ

ಅಚ್ಚರಿ:
(೧) ತೆರಳಿ ಎಂದು ಹೇಳಲು – ನಿಮ್ಮಡಿ ಬಿಜಯಮಾಡುವುದು
(೨) ಜನಪ, ಜೀಯ, ನೃಪ – ಸಮನಾರ್ಥಕ ಪದ

ಪದ್ಯ ೧೮: ಯುಧಿಷ್ಠಿರನು ಧೌಮ್ಯನಿಗೆ ಏನೆಂದು ಹೇಳಿದ?

ಪುರದೊಳೆಲ್ಲಿಯ ಶಾಂತಿ ನಾರದ
ನೊರೆದನುತ್ಪಾತ ಪ್ರಬಂಧದ
ಹೊರಿಗೆಯನು ನಿಮ್ಮೈಶ್ವರಿಯ ವಿಧ್ವಂಸಕರವೆಂದು
ಇರುಳು ನಾನಾ ಸ್ವಪ್ನಕಾನನ
ಗಿರಿ ಪರಿಭ್ರಮಣೈಕ ಚಿಂತಾ
ಭರಿತನಾದೆನು ದೈವಕೃತವುಪಭೋಗವೆನಗೆಂದ (ಸಭಾ ಪರ್ವ, ೧೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧೌಮ್ಯನು ಊರಿಗೆ ತೆರಳಿದ ಮೇಲೆ ಶಾಂತಿಕಾರ್ಯವನ್ನು ಮಾಡಿಸೋಣ ಎಂದುದಕ್ಕೆ, ಯುಧಿಷ್ಠಿರನು ಊರಿಗೆ ತೆರಳಿದ ಮೇಲೆ ಶಾಂತಿ ಕಾರ್ಯ ಮಾಡಿಸಿ ಏನು ಪ್ರಯೋಜನ. ಅಲ್ಲಿರುವಾಗ ನಾರದನು ನನ್ನ ಸ್ವಪ್ನಗಳ ವಿಷಯವನ್ನು ಕೇಳಿ ಇದು ನಿಮ್ಮ ಐಶ್ವರ್ಯನಾಶವನ್ನು ಸೂಚಿಸುತ್ತದೆ ಎಂದನು. ನಿನ್ನೆ ರಾತ್ರಿ ಕನಸಿನಲ್ಲಿ ಬೆಟ್ಟ ಅಡವಿಗಳಲ್ಲಿ ತಿರುಗಾಡಿದಂತೆ ಕನಸನ್ನು ಕಂಡೆ. ದೈವಚಿತ್ತದಿಂದ ಬಂದುದನ್ನು ಉಪಭೋಗಿಸೋಣ ಎಂದನು.

ಅರ್ಥ:
ಪುರ: ಊರು; ಒರೆ: ಹೇಳು; ಉತ್ಪಾತ: ಅಪಶಕುನ; ಪ್ರಬಂಧ: ವ್ಯವಸ್ಥೆ, ಏರ್ಪಾಡು; ಹೊರಿಗೆ: ಭಾರ, ಹೊರೆ; ಐಶ್ವರ್ಯ: ಸಂಪತ್ತು, ಸಿರಿ; ವಿಧ್ವಂಸಕ: ವಿನಾಶ; ಇರುಳು: ಕತ್ತಲೆ; ಸ್ವಪ್ನ: ಕನಸು; ಕಾನನ: ಅಡವಿ; ಗಿರಿ: ಬೆಟ್ಟ; ಪರಿಭ್ರಮಣೆ: ತಿರುಗು; ಚಿಂತೆ: ಯೋಚನೆ; ಭರಿತ: ಮುಳುಗು; ದೈವ: ಭಗವಂತ; ಕೃತ: ನಿರ್ಮಿಸಿದ; ಉಪಭೋಗ: ವಿಷಯಾನುಭವ;

ಪದವಿಂಗಡಣೆ:
ಪುರದೊಳ್+ಎಲ್ಲಿಯ +ಶಾಂತಿ +ನಾರದನ್
ಒರೆದನ್+ಉತ್ಪಾತ +ಪ್ರಬಂಧದ
ಹೊರಿಗೆಯನು +ನಿಮ್+ಐಶ್ವರಿಯ +ವಿಧ್ವಂಸಕರವೆಂದು
ಇರುಳು +ನಾನಾ +ಸ್ವಪ್ನ+ಕಾನನ
ಗಿರಿ+ ಪರಿಭ್ರಮಣೈಕ+ ಚಿಂತಾ
ಭರಿತನಾದೆನು+ ದೈವಕೃತವ್+ಉಪಭೋಗವೆನಗೆಂದ

ಅಚ್ಚರಿ:
(೧) ಮನಸ್ಸಿನ ಸ್ಥೈರ್ಯವನ್ನು ಹೆಚ್ಚಿಸುವ ನುಡಿ – ದೈವಕೃತವುಪಭೋಗವೆನಗೆಂದ

ಪದ್ಯ ೧೭: ಯುಧಿಷ್ಠಿರನು ತನ್ನ ಸ್ವಪ್ನದ ವಿವರವನ್ನು ಯಾರಿಗೆ ನೀಡಿದನು?

ಅರಸನುಪ್ಪವಡಿಸಿದ ನವನೀ
ಶ್ವರ ವಿಹಿತ ಸತ್ಕ್ರಿಯೆಗಳನು ವಿ
ಸ್ತರಿಸಿದನು ದುಃಸ್ವಪ್ನ ಕುಂತ ವಿಭಿನ್ನಚೇತನನು
ಕರೆಸಿ ಧೌಮ್ಯನಿಗರುಹಲತಿ ದು
ಸ್ತರದ ಕನಸಿದು ಶಾಂತಿ ಕರ್ಮವ
ಪುರದೊಳಗೆ ವಿರಚಿಸುವೆನಂಜದಿರೆಂದನಾ ಧೌಮ್ಯ (ಸಭಾ ಪರ್ವ, ೧೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಆ ಕನಸನ್ನು ನೋಡಿ ಮೇಲೆದ್ದನು. ನಿತ್ಯ ಕರ್ಮಗಳನ್ನು ಮುಗಿಸಿದನು. ಅವನ ಮನಸ್ಸು ಕದಡಿಹೋಗಿತ್ತು. ಅವನು ಧೌಮ್ನ್ಯನನ್ನು ಬರೆಮಾಡಿಕೊಂಡು ತಾನು ಕಂಡ ಕನಸಿನ ಬಗ್ಗೆ ವಿವರಿಸಿದನು. ಇದನ್ನು ಕೇಳಿದ ದೌಮ್ಯನು ಈ ಕನಸಿನ ದುಷ್ಫಲಗಳು ದುಸ್ತರವಾಗಿದೆ, ಊರಿಗೆ ಹಿಂದಿರುಗಿದ ಮೇಲೆ ಶಾಂತಿಕರ್ಮವನ್ನು ಮಾಡೋಣ ಹೆದರಬೇಡಿ ಎಂದು ಹೇಳಿದನು.

ಅರ್ಥ:
ಅರಸ: ರಾಜ; ಉಪ್ಪವಡಿಸು: ಮೇಲೇಳು; ಅವನೀಶ್ವರ: ರಾಜ; ಅವನೀ: ಭೂಮಿ; ಈಶ್ವರ: ಒಡೆಯ; ವಿಹಿತ: ಔಚಿತ್ಯಪೂರ್ಣ, ಹೊಂದಿಸಿದ; ಸತ್ಕ್ರಿಯೆ: ಕಾರ್ಯ, ಕರ್ಮ; ವಿಸ್ತರಿಸು: ಹಬ್ಬು, ಹರಡು; ದುಃಸ್ವಪ್ನ: ಕೆಟ್ಟ ಕನಸು; ಕುಂತ:ಈಟಿ, ಭರ್ಜಿ; ವಿಭಿನ್ನ: ಒಡೆದ, ಛಿದ್ರಗೊಳಿಸುವ; ಚೀತನ: ಮನಸ್ಸು; ಕರೆಸು: ಬರೆಮಾಡು; ಅರುಹು: ಹೇಳು; ಅತಿ: ಬಹಳ; ದುಸ್ತರ: ಪರಿಹರಿಸಲಾಗದ; ಕನಸು: ಸ್ವಪ್ನ; ಶಾಂತಿ: ನೆಮ್ಮದಿ, ಚಿತ್ತಸ್ವಾಸ್ಥ್ಯ; ಕರ್ಮ: ಕೆಲಸ; ಪುರ: ಊರು; ವಿರಚಿಸು: ಕಟ್ಟು, ನಿರ್ಮಿಸು; ಅಂಜು: ಹೆದರು;

ಪದವಿಂಗಡಣೆ:
ಅರಸನ್+ಉಪ್ಪವಡಿಸಿದನ್ + ಅವನೀ
ಶ್ವರ +ವಿಹಿತ +ಸತ್ಕ್ರಿಯೆಗಳನು +ವಿ
ಸ್ತರಿಸಿದನು +ದುಃಸ್ವಪ್ನ +ಕುಂತ +ವಿಭಿನ್ನ+ಚೇತನನು
ಕರೆಸಿ+ ಧೌಮ್ಯನಿಗ್+ಅರುಹಲ್+ಅತಿ+ ದು
ಸ್ತರದ+ ಕನಸಿದು +ಶಾಂತಿ +ಕರ್ಮವ
ಪುರದೊಳಗೆ+ ವಿರಚಿಸುವೆನ್+ಅಂಜದಿರೆಂದನಾ+ ಧೌಮ್ಯ

ಅಚ್ಚರಿ:
(೧) ಅರಸ, ಅವನೀಶ್ವರ – ಸಮನಾರ್ಥಕ ಪದ, ೧ ಸಾಲಿನ ಮೊದಲ ಹಾಗು ಕೊನೆ ಪದ