ಪದ್ಯ ೧೬: ಧರ್ಮಜನಿಗೆ ಯಾವ ಕನಸು ಬಿದ್ದಿತು?

ಆ ದಿವಸವನು ಮಧುರಗೇಯ ನಿ
ನಾದದಲಿ ಕವಿ ವಾದಿ ವಾಗ್ಮಿ ವಿ
ನೋದದಲಿ ನೂಕಿದರು ಮಜ್ಜನ ಭೋಜನಾದಿಯಲಿ
ಆದುದುತ್ಸಹವಂದಿನಿರುಳು ದಿ
ನಾದಿಯಲಿ ಕಂಡನು ಕನಸ ಪ್ರಾ
ಸಾದ ಶಿಖರವು ಮುರಿದು ಬಿದ್ದುದನಡವಿಮಧ್ಯದಲಿ (ಸಭಾ ಪರ್ವ, ೧೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಆ ದಿನ ಯುಧಿಷ್ಠಿರನು ಸಂತೋಷದಲ್ಲಿ ಕಳೆದನು. ಸಂಗೀತದ ಮಧುರ ಧ್ವನಿಯಲ್ಲಿ ತೇಲುತ್ತ, ಕವಿ ವಾಗ್ಮಿಗಳ ಮಾತನ್ನು ಸವಿಯುತ್ತಾ, ಸ್ಸಾನ ಭೋಜನಾದಿಗಳನ್ನು ಪೂರೈಸಿ ರಾತ್ರಿ ನಿದ್ರೆಗೆ ಜಾರಿದನು. ಬೆಳಗಿನ ಜಾವದಲ್ಲಿ ಉನ್ನತವಾದ ಪ್ರಾಕಾರದ ಶಿಖರವು ಮುರಿದು ಕಾಡಿನ ಮಧ್ಯದಲ್ಲಿ ಬಿದ್ದಂತೆ ಕನಸನ್ನು ಕಂಡನು.

ಅರ್ಥ:
ದಿವಸ: ದಿನ; ಮಧುರ: ಸವಿಯಾದ; ನಿನಾದ: ಉಲಿವು, ಧ್ವನಿ; ಕವಿ: ಕಬ್ಬಿಗ; ಗೇಯ: ಗಾಯನ; ವಾದಿ: ವ್ಯಾಖ್ಯಾನಕಾರ; ವಾಗ್ಮಿ: ವಾಕ್ಪಟು; ವಿನೋದ: ಹಾಸ್ಯ, ತಮಾಷೆ; ನೂಕು: ತಳ್ಳು; ಮಜ್ಜನ: ಸ್ನಾನ; ಭೋಜನ: ಊಟ; ಆದಿ: ಮುಂತಾದ; ಉತ್ಸಹ: ಉತ್ಸವ, ಸಂಭ್ರಮ; ಇರುಳು: ರಾತ್ರಿ; ದಿನ: ವಾರ; ಆದಿ: ಮೊದಲು; ಕಂಡನು: ನೋಡಿದನು; ಕನಸು: ಸ್ವಪ್ನ; ಪ್ರಾಸಾದ: ಪ್ರಾಕಾರ; ಶಿಖರ: ತುದಿ; ಮುರಿ: ಸೀಳು; ಬಿದ್ದು: ನೆಲಕ್ಕೆ ಬೀಳು; ಅಡವಿ: ಕಾಡು; ಮಧ್ಯ: ನಡುವೆ;

ಪದವಿಂಗಡಣೆ:
ಆ +ದಿವಸವನು +ಮಧುರ+ಗೇಯ +ನಿ
ನಾದದಲಿ +ಕವಿ +ವಾದಿ +ವಾಗ್ಮಿ +ವಿ
ನೋದದಲಿ+ ನೂಕಿದರು+ ಮಜ್ಜನ +ಭೋಜನ+ಆದಿಯಲಿ
ಆದುದ್+ಉತ್ಸಹವ್+ಅಂದಿನ್+ಇರುಳು +ದಿನ
ಆದಿಯಲಿ +ಕಂಡನು +ಕನಸ +ಪ್ರಾ
ಸಾದ +ಶಿಖರವು +ಮುರಿದು +ಬಿದ್ದುದನ್+ಅಡವಿ+ಮಧ್ಯದಲಿ

ಅಚ್ಚರಿ:
(೧) ದಿವಸ, ದಿನ – ಸಮನಾರ್ಥಕ ಪದ
(೨) ನಿನಾದ, ವಿನೋದ – ಪ್ರಾಸ ಪದ
(೩) ಒಂದೇ ಪದವಾಗಿ ರಚನೆ – ಆದುದುತ್ಸಹವಂದಿನಿರುಳು

ಪದ್ಯ ೧೫: ಧರ್ಮಜನನ್ನು ಕಾಣಲು ಯಾರು ಬಂದರು?

ಬಂದು ಕಂಡುದು ನಿಖಿಳ ಪುರಜನ
ವಂದು ಕಾಣಿಕೆಗೊಟ್ಟು ಕೌರವ
ನಂದನರು ಸಚಿವರು ಪಸಾಯ್ತನಿಯೋಗಿ ಮಂತ್ರಿಗಳು
ಸಂದಣಿಸಿದುದು ಕವಿ ಗಮಕಿ ನಟ
ವಂದಿ ಮಾಗಧ ಮಲ್ಲಗಾಯಕ
ವೃಂದ ದೀನಾನಾಥರೋಲಗಿಸಿದರು ಧರ್ಮಜನ (ಸಭಾ ಪರ್ವ, ೧೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪಾಂಡವರು ಬಂದಿರುವುದನ್ನು ತಿಳಿದ ಹಸ್ತಿನಾಪುರದ ಜನರು ಅವರನ್ನು ನೋಡಲು ಬಂದರು. ಪುರದ ಜನ, ಕೌರವರ ಮಕ್ಕಳು, ಸಚಿವರು, ಆಪ್ತರು, ನಿಯೋಗಿಗಳು, ಮಂತ್ರಿಗಳು ಬಂದು ಯುಧಿಷ್ಠಿರನನ್ನು ಕಂಡು ಕಾಣಿಕೆಯನ್ನು ಕೊಟ್ಟರು. ಕವಿಗಳು, ಗಮಕಿಗಳು, ನಟರು, ವಂದಿಮಾಗಧರು, ಜಟ್ಟಿಗಳು, ಗಾಯಕರು, ದೀನರು, ಅನಾಥರು ಮೊದಲಾದವರು ಓಲಗಕ್ಕೆ ಬಂದರು.

ಅರ್ಥ:
ಬಂದು: ಆಗಮಿಸು; ಕಂಡು: ನೋಡಿ; ನಿಖಿಳ: ಎಲ್ಲಾ; ಪುರಜನ: ಊರಿನ ಜನ; ಕಾಣಿಕೆ: ಉಡುಗೊರೆ, ದಕ್ಷಿಣೆ; ನಂದನ: ಮಕ್ಕಳು; ಸಚಿವ: ಮಂತ್ರಿ; ಪಸಾಯ್ತ: ಸಾಮಂತರಾಜ; ನಿಯೋಗಿ: ವಿಶೇಷಾಧಿಕಾರಿ; ಮಂತ್ರಿ: ಸಚಿವ; ಸಂದಣಿ: ಗುಂಪು, ಸಮೂಹ; ಕವಿ: ಕಬ್ಬಿಗ; ಗಮಕಿ: ಹಾಡುವವ; ವಂದಿ ಮಾಗಧ: ಹೊಗಳುಭಟ್ಟರು; ಮಲ್ಲ: ಜಟ್ಟಿ; ಗಾಯಕ: ಹಾಡುಗಾರ; ವೃಂದ: ಗುಂಪು; ದೀನ: ಬಡವ, ದರಿದ್ರ; ಅನಾಥ: ತಬ್ಬಲಿ, ನಿರ್ಗತಿಕ; ಓಲಗಿಸು: ಸೇವೆಮಾಡು, ಉಪಚರಿಸು;

ಪದವಿಂಗಡಣೆ:
ಬಂದು +ಕಂಡುದು +ನಿಖಿಳ +ಪುರಜನವ್
ಅಂದು +ಕಾಣಿಕೆಗೊಟ್ಟು +ಕೌರವ
ನಂದನರು+ ಸಚಿವರು+ ಪಸಾಯ್ತ+ನಿಯೋಗಿ +ಮಂತ್ರಿಗಳು
ಸಂದಣಿಸಿದುದು +ಕವಿ+ ಗಮಕಿ+ ನಟ
ವಂದಿ +ಮಾಗಧ+ ಮಲ್ಲ+ಗಾಯಕ
ವೃಂದ+ ದೀನ+ಅನಾಥರ್+ಓಲಗಿಸಿದರು+ ಧರ್ಮಜನ

ಪದ್ಯ ೧೪: ಸುಜನರು ದುಷ್ಟರ ವಿಷವನ್ನು ಅರಿಯಲು ಸಾಧ್ಯವೇ?

ಖಳರ ಹೃದಯದ ಕಾಳಕೂಟದ
ಹುಳುಕ ಬಲ್ಲರೆ ಮಾನ್ಯರವದಿರ
ಲಲಿತ ಮಧುರ ವಚೋವಿಳಾಸಕೆ ಮರುಳುಗೊಂಡರಲೈ
ಅಳುಪಿದರೆ ಮಧುಕರನ ಮರಿ ಬೊ
ಬ್ಬುಲಿಯ ವನದೊಳಗೇನಹುದು ನೃಪ
ತಿಲಕರಿದ್ದರು ಬೇರೆ ರಚಿಸಿದ ರಾಜಭವನದಲಿ (ಸಭಾ ಪರ್ವ, ೧೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಮಾನ್ಯರಾದವರು, ಸುಜನರು ದುಷ್ಟರ ಹೃದಯದ ಕಾಳಕೂಟ ವಿಷವನ್ನು ತಿಳಿಯಲು ಸಾಧ್ಯವೇ? ಕೌರವರ ಲಲಿತವೂ ಮಧುರವೂ ಆದ ಮಾತುಗಳಿಗೆ ಮೋಸಹೋದರು. ಬೊಬ್ಬುಲಿಯ ವನವನ್ನು ಮರಿದುಂಬಿಯು ಹೊಕ್ಕರೆ ಅದಕ್ಕೇನು ಪ್ರಯೋಜನ? ಪಾಂಡವರು ತಮಗಾಗಿ ರಚಿಸಿದ ಬೇರೊಂದು ರಾಜಭವನದಲ್ಲಿದ್ದರು.

ಅರ್ಥ:
ಖಳ: ದುಷ್ಟ; ಹೃದಯ: ಎದೆ; ಕಾಳಕೂಟ: ಘೋರವಿಷ; ಹುಳುಕ: ಕ್ಷುದ್ರ ವ್ಯಕ್ತಿ, ನೀಚ; ಬಲ್ಲರು: ತಿಳಿದವರು; ಮಾನ್ಯರು: ಉತ್ತಮ, ಶ್ರೇಷ್ಠ; ಅವದಿರ: ಅವರ; ಲಲಿತ: ಚೆಲುವಾದ; ಮಧುರ: ಸಿಹಿಯಾದ, ಸವಿಯಾದ; ವಚೋವಿಳಾಸ: ಮಾತಿನ ಸೌಂದರ್ಯ; ಮರುಳು: ಬುದ್ಧಿಭ್ರಮೆ; ಅಳುಕು: ಹೆದರು; ಮಧುಕರ: ಜೇನು; ಮರಿ: ಚಿಕ್ಕ; ಬೊಬ್ಬುಲಿ: ದೊಡ್ಡ ಹುಲಿ; ವನ: ಕಾಡು; ನೃಪತಿಲಕ: ರಾಜಶ್ರೇಷ್ಠ; ಬೇರೆ: ಅನ್ಯ; ರಚಿಸು: ನಿರ್ಮಿಸು; ರಾಜಭವನ: ಅರಮನೆ;

ಪದವಿಂಗಡಣೆ:
ಖಳರ+ ಹೃದಯದ +ಕಾಳಕೂಟದ
ಹುಳುಕ +ಬಲ್ಲರೆ +ಮಾನ್ಯರ್+ಅವದಿರ
ಲಲಿತ +ಮಧುರ+ ವಚೋವಿಳಾಸಕೆ+ ಮರುಳುಗೊಂಡರಲೈ
ಅಳುಪಿದರೆ+ ಮಧುಕರನ+ ಮರಿ +ಬೊ
ಬ್ಬುಲಿಯ +ವನದೊಳಗ್+ಏನಹುದು +ನೃಪ
ತಿಲಕರಿದ್ದರು +ಬೇರೆ +ರಚಿಸಿದ +ರಾಜಭವನದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಳುಪಿದರೆ ಮಧುಕರನ ಮರಿ ಬೊಬ್ಬುಲಿಯ ವನದೊಳಗೇನಹುದು

ಪದ್ಯ ೧೩: ದುರ್ಯೋಧನನು ಮನಸ್ಸಿನಲ್ಲಿ ಏಕೆ ಸಂತಸಪಟ್ಟನು?

ಬೀಳುಕೊಟ್ಟಳು ಬಳಿಕ ಕುರುನೃಪ
ನಾಲಯಕೆ ನಡೆತಂದು ಕುಂತಿಯ
ಕಾಲಿಗೆರಗಿದನಿವರನುಚಿತೋಕ್ತಿಯಲಿ ಮನ್ನಿಸಿದ
ಬಾಲಮೃಗವೊಳಗಾಯ್ತಲಾ ತೊಡು
ಕೋಲನೆಂದರು ನಗುತ ಮನದಲಿ
ಕೌಳಿಕದ ಕುಹಕಿಗಳು ಕೌರವರಾಯ ಶಕುನಿಗಳು (ಸಭಾ ಪರ್ವ, ೧೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ಗಾಂಧಾರಿಯು ಪಾಂಡವರನ್ನು ಕಳಿಸಿಕೊಟ್ಟಳು. ಅವರೆಲ್ಲರು ಅವರ ಬೀಡಿಗೆ ಹಿಂದಿರುಗಿದರು. ದುರ್ಯೋಧನನು ಪಾಂಡವರ ಬೀಡಿಗೆ ಬಂದು ಕುಂತಿಗೆ ನಮಸ್ಕರಿಸಿದನು. ಎಲ್ಲರನ್ನೂ ಉಚಿತವಾದ ಮಾತುಗಳಿಂದ ಉಪಾರಿಸಿದನು. ಮೋಸಗಾರರು, ಕಪಟಿಗಳಾದ ದುರ್ಯೋಧನ, ಶಕುನಿಗಳು ಮನಸ್ಸಿನಲ್ಲಿಯೇ ನಕ್ಕು, ಮರಿ ಜಿಂಕೆಯು ಬಲೆಯಲ್ಲಿ ಬಿದ್ದಿದೆ, ಬಾಣವನ್ನು ಹೂಡು ಎಂದುಕೊಂಡರು.

ಅರ್ಥ:
ಬೀಳುಕೊಡು: ತೆರಳು; ಬಳಿಕ: ನಂತರ; ನೃಪ: ರಾಜ; ಆಲಯ: ಮನೆ; ನಡೆ: ಚಲಿಸು; ಕಾಲು: ಪಾದ; ಎರಗು: ನಮಸ್ಕರಿಸು; ಉಚಿತ: ಸರಿಯಾದ; ಉಕ್ತಿ: ಮಾತು; ಮನ್ನಿಸು: ಗೌರವಿಸು; ಬಾಲ: ಚಿಕ್ಕ; ಮೃಗ: ಜಿಂಕೆ; ತೊಡು: ಹೂಡು; ಕೋಲ: ಬಾಣ; ನಗುತ: ಸಂತಸ; ಮನ: ಮನಸ್ಸು; ಕೌಳಿಕ: ಕಟುಕ, ಕಸಾಯಿಗಾರ, ಮೋಸ; ಕುಹಕಿ: ಮೋಸಗಾರ;

ಪದವಿಂಗಡಣೆ:
ಬೀಳುಕೊಟ್ಟಳು +ಬಳಿಕ +ಕುರುನೃಪನ್
ಆಲಯಕೆ +ನಡೆತಂದು +ಕುಂತಿಯ
ಕಾಲಿಗ್+ಎರಗಿದನ್+ಇವರನ್+ಉಚಿತ+ಉಕ್ತಿಯಲಿ +ಮನ್ನಿಸಿದ
ಬಾಲ+ಮೃಗವೊಳಗಾಯ್ತಲಾ +ತೊಡು
ಕೋಲನ್+ಎಂದರು +ನಗುತ+ ಮನದಲಿ
ಕೌಳಿಕದ+ ಕುಹಕಿಗಳು+ ಕೌರವರಾಯ +ಶಕುನಿಗಳು

ಅಚ್ಚರಿ:
(೧) ದುರ್ಯೊಧನನ ಮನಸ್ಸಿನ ಸಂತಸ – ಬಾಲಮೃಗವೊಳಗಾಯ್ತಲಾ ತೊಡುಕೋಲನೆಂದರು ನಗುತ ಮನದಲಿ ಕೌಳಿಕದ ಕುಹಕಿಗಳು ಕೌರವರಾಯ ಶಕುನಿಗಳು
(೨) ಕ ಕಾರದ ತ್ರಿವಳಿ ಪದ – ಕೌಳಿಕದ ಕುಹಕಿಗಳು ಕೌರವರಾಯ

ಪದ್ಯ ೧೨: ಗಾಂಧಾರಿಯು ಪಾಂಡವರನ್ನು ಹೇಗೆ ಬರೆಮಾಡಿಕೊಂಡಳು?

ಅರಸಿ ಕಾಣಿಸಿಕೊಂಡಳೀ ನೃಪ
ರರಸಿಯನು ಸುಕುಮಾರಕರನವ
ರರಸಿಯರ ಸಖಿಯರ ವಿಳಾಸಿನಿಯರ ಪಸಾಯ್ತೆಯರ
ತರಿಸಿಕೊಟ್ಟಳು ಬೇರೆ ಬೇರನಿ
ಬರಿಗೆ ಉಡುಗೊರೆ ಗಂಧ ಮಾಲ್ಯಾ
ಭರಣವನು ರಾಜೋಪಚಾರ ವಿಳಾಸ ವಿಭವದಲಿ (ಸಭಾ ಪರ್ವ, ೧೪ ಸಂಧಿ, ೧೨ ಪದ್ಯ)

ತಾತ್ಪರ್ಯ:
ಗಾಂಧಾರಿಯು ದ್ರೌಪದಿ, ಪಾಂಡವರ ಮಕ್ಕಳು, ಸೊಸೆಯರು, ಅವರ ಸಖಿಯರು, ದಾಸಿಯರು, ಆಪ್ತೆಯರನ್ನು ಕಂಡು ಅವರಿಗೆಲ್ಲ ಉಡುಗೊರೆ, ಗಂಧ, ಪುಷ್ಪ, ಆಭರಣಗಳನ್ನು ನೀಡಿ ರಾಜೋಪಚಾರ ಮಾಡಿದಳು.

ಅರ್ಥ:
ಅರಸಿ: ರಾಣಿ; ಕಾಣಿಸು: ತೋರು, ಗೋಚರ; ನೃಪ: ರಾಜ; ಸುಕುಮಾರ: ಮಕ್ಕಳು; ಸಖಿ: ದಾಸಿ; ವಿಳಾಸಿನಿ: ಒಯ್ಯಾರಿ, ದಾಸಿ; ಪಸಾಯ್ತ: ಸಾಮಂತರಾಜ; ತರಿಸು: ಬರೆಮಾದು; ಬೇರೆ: ಅನ್ಯ; ಅನಿಬರು: ಅಷ್ಟು ಜನ; ಉಡುಗೊರೆ: ಕಾಣಿಕೆ, ಬಳುವಳಿ; ಗಂಧ: ಚಂದನ; ಮಾಲೆ: ಹಾರ; ಆಭರಣ: ಒಡವೆ; ಉಪಚಾರ: ಸತ್ಕಾರ; ವಿಲಾಸ: ಅಂದ, ಸೊಬಗು, ಉಲ್ಲಾಸ; ವಿಭವ: ಸಿರಿ, ಸಂಪತ್ತು, ಘನತೆ;

ಪದವಿಂಗಡಣೆ:
ಅರಸಿ +ಕಾಣಿಸಿಕೊಂಡಳ್+ಈ+ ನೃಪರ್
ಅರಸಿಯನು +ಸುಕುಮಾರಕರನ್+ಅವರ್
ಅರಸಿಯರ+ ಸಖಿಯರ+ ವಿಳಾಸಿನಿಯರ +ಪಸಾಯ್ತೆಯರ
ತರಿಸಿಕೊಟ್ಟಳು+ ಬೇರೆ+ ಬೇರ್+ಅನಿ
ಬರಿಗೆ+ ಉಡುಗೊರೆ+ ಗಂಧ+ ಮಾಲ+
ಆಭರಣವನು +ರಾಜೋಪಚಾರ+ ವಿಳಾಸ +ವಿಭವದಲಿ

ಅಚ್ಚರಿ:
(೧) ಅರಸಿ – ೧-೩ ಸಾಲಿನ ಮೊದಲ ಪದ, ಗಾಂಧಾರಿ, ದ್ರೌಪದಿ, ಸೊಸೆಯರು