ಪದ್ಯ ೧೧: ಜೈಕಾರವು ಎಲ್ಲಿಯವರೆಗೆ ತಲುಪಿತು?

ಬಂದು ಕಾಣಿಕೆಗೊಟ್ಟುವಂದಿಸಿ
ನಿಂದರಿವರು ತನ್ನ ಕೆಳದಿಯ
ರಿಂದ ತರಿಸಿದಳಾರತಿಯನುಪ್ಪಾರತಿಯನೊಲಿದು
ಚಂದಮಿಗೆ ಸಾವಿರದ ಸಂಖ್ಯೆಯ
ಲಿಂದು ಮುಖಿಯರ ತಳಿಗೆಯಾರತಿ
ಸಂದಣಿಸಿದವು ಜಯ ಸಬುದ ಝೋಂಪಿಸಿದುದಂಬರವ (ಸಭಾ ಪರ್ವ, ೧೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಾಂಧಾರಿಯನ್ನು ನೋಡಲು ಪಾಂಡವರು ಬಂದರು. ಸಪರಿವಾರದೊಡನೆ ಆಕೆಗೆ ನಮಸ್ಕರಿಸಿ ಕಾಣಿಕೆ ಗೌರವಗಳನ್ನು ಸಮರ್ಪಿಸಿದರು. ತನ್ನ ಸಖಿಯರಿಂದ ಆರತಿಯನ್ನು ತರಿಸಿದಳು. ಅನೇಕ ಸುಂದರ ಸಖಿಯರು ಪಾಂಡವರಿಗೆ ಆರತಿಯ ತಟ್ಟೆಗಳನ್ನು ತಂದು, ಆರತಿ, ಉಪ್ಪಿನಾರತಿಯನ್ನು ಮಾಡಿ ಜಯಕಾರವನ್ನು ಹಾಕಿದರು. ಆ ಜಯಕಾರವು ಎಲ್ಲೆಲ್ಲೂ ಕೇಳಿ ಆಗಸವನ್ನು ಮುಟ್ಟಿತು.

ಅರ್ಥ:
ಬಂದು: ಆಗಮಿಸು; ಕಾಣಿಕೆ: ಉಡುಗೊರೆ; ಕೊಟ್ಟು: ನೀಡಿ; ವಂದಿಸು: ನಮಸ್ಕರಿಸು; ನಿಂದು: ನಿಲ್ಲು; ಕೆಳದಿ: ಸಖಿ; ತರಿಸು: ಬರೆಮಾಡು; ಆರತಿ: ನೀರಾಜನ; ಒಲಿದು: ಪ್ರೀತಿಯಲಿ; ಚಂದ: ಅಂದ, ಕ್ಷೇಮ; ಮಿಗೆ: ಹೆಚ್ಚು, ಅಧಿಕ; ಸಾವಿರ: ಸಹಸ್ರ; ಸಂಖ್ಯೆ: ಎಣಿಕೆ; ಇಂದು: ಚಂದ್ರ; ಇಂದುಮುಖಿ: ಚಂದಿರನಂತ ಮುಖವುಳ್ಳವರು (ಸುಂದರಿಯರು); ತಳಿಗೆ: ತಟ್ಟೆ; ಸಂದಣಿಸು: ಗುಂಪು ಗೂಡು, ಒಟ್ಟಾಗು; ಜಯ: ಜೈಕಾರ; ಸಬುದ: ಶಬ್ದ; ಝೋಂಪಿಸು: ಬೆಚ್ಚಿಬೀಳು; ಅಂಬರ: ಆಗಸ;

ಪದವಿಂಗಡಣೆ:
ಬಂದು +ಕಾಣಿಕೆ+ಕೊಟ್ಟು+ವಂದಿಸಿ
ನಿಂದರ್+ಇವರು +ತನ್ನ +ಕೆಳದಿಯ
ರಿಂದ+ ತರಿಸಿದಳ್+ಆರತಿಯನ್+ಉಪ್ಪಾರತಿಯನ್+ಒಲಿದು
ಚಂದಮಿಗೆ +ಸಾವಿರದ+ ಸಂಖ್ಯೆಯಲ್
ಇಂದು +ಮುಖಿಯರ +ತಳಿಗೆ+ಆರತಿ
ಸಂದಣಿಸಿದವು+ ಜಯ+ ಸಬುದ+ ಝೋಂಪಿಸಿದುದ್+ಅಂಬರವ

ಅಚ್ಚರಿ:
(೧) ಬಂದು, ಇಂದು – ಪ್ರಾಸ ಪದ
(೨) ಆರತಿಯ ಸೊಬಗು – ಚಂದಮಿಗೆ ಸಾವಿರದ ಸಂಖ್ಯೆಯಲಿಂದು ಮುಖಿಯರ ತಳಿಗೆಯಾರತಿ
ಸಂದಣಿಸಿದವು

ಪದ್ಯ ೧೦: ಧೃತರಾಷ್ಟ್ರನ ನಂತರ ಯಾರ ಬಳಿಗೆ ಪಾಂಡವರು ಹೋದರು?

ಹರಸಿದನು ಕಾಣಿಕೆಯ ಕೊಂಡೈ
ವರ ಮಹಾಸತಿಯನು ಕುಮಾರರ
ನರಸಿಯರನನಿಬರ ವಚೋರಚನೆಯಲಿ ಮನ್ನಿಸಿದ
ಅರಸ ಗಾಂಧಾರಿಯನು ವಂದಿಸಿ
ದರುಶನವ ಕೊಡು ಹೋಗೆನಲು ಕಡು
ಹರುಷಮಿಗಲೈತಂದರಾ ಗಾಂಧಾರಿಯರಮನೆಗೆ (ಸಭಾ ಪರ್ವ, ೧೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಪಾಂಡವರನ್ನು, ಅವರ ಪತ್ನಿ, ಅಂತಃಪುರದ ಜನರನ್ನು ಹರಸಿ, ಕಾಣಿಕೆಯನ್ನು ಸ್ವೀಕರಿಸಿ ಮಧುರವಾದ ಮಾತುಗಳಿಂದ ಉಪಚರಿಸಿದನು. ಗಾಂಧಾರಿಯನ್ನು ಕಾಣಲು ಹೋಗಿರೆಂದು ಧೃತರಾಷ್ಟ್ರನು ಹೇಳಲು ಅವರೆಲ್ಲರು ಗಾಂಧಾರಿಯ ಬಳಿಗೆ ಬಂದರು.

ಅರ್ಥ:
ಹರಸು: ಆಶೀರ್ವದಿಸು; ಕಾಣಿಕೆ: ಉಡುಗೊರೆ; ಕೊಂಡು: ತೆಗೆದು; ವರ: ಶ್ರೇಷ್ಠ; ಮಹಾಸತಿ: ಪತಿವ್ರತೆ; ಕುಮಾರ: ಮಕ್ಕಳು; ಅರಸಿ: ರಾಣಿ; ಅನಿಬರು: ಅಷ್ಟು ಜನ; ವಚೋರಾನೆ: ಮಾತಿನಲ್ಲಿ; ಮನ್ನಿಸು: ಗೌರವಿಸು, ಮರ್ಯಾದೆ ಮಾಡು; ಅರಸ: ರಾಜ; ವಂದಿಸು: ನಮಸ್ಕರಿಸು; ದರುಶನ: ನೋಟ; ಕೊಡು: ನೀಡು; ಹರುಷ: ಸಂತೋಷ; ಅರಮನೆ: ರಾಜರ ಆಲಯ;

ಪದವಿಂಗಡಣೆ:
ಹರಸಿದನು +ಕಾಣಿಕೆಯ +ಕೊಂಡ್
ಐವರ +ಮಹಾಸತಿಯನು +ಕುಮಾರರನ್
ಅರಸಿಯರ್+ಅನಿಬರ +ವಚೋರಚನೆಯಲಿ +ಮನ್ನಿಸಿದ
ಅರಸ+ ಗಾಂಧಾರಿಯನು +ವಂದಿಸಿ
ದರುಶನವ+ ಕೊಡು +ಹೋಗ್+ಎನಲು +ಕಡು
ಹರುಷಮಿಗಲೈತಂದರಾ+ ಗಾಂಧಾರಿ+ಅರಮನೆಗೆ

ಅಚ್ಚರಿ:
(೧) ಹರಸಿ, ಅರಸಿ – ಪ್ರಾಸ ಪದ
(೨) ಮಾತಾಡಿದರು ಎಂದು ಹೇಳಲು – ವಚೋರಚನೆ ಪದದ ಬಳಕೆ
(೩) ದ್ರೌಪದಿಯನ್ನು ಮಹಾಸತಿ ಎಂದು ಕರೆದಿರುವುದು

ಪದ್ಯ ೯: ಧೃತರಾಷ್ಟ್ರನು ಎಲ್ಲರನ್ನು ಹೇಗೆ ಸ್ವಾಗತಿಸಿದನು?

ಬಾ ಮಗನೆ ರಿಪುರಾಯಮನ್ಮಥ
ಭೀಮಬಾರೈ ಭೀಮರಣನಿ
ಸ್ಸೀಮ ಫಲುಗುಣ ಬಾ ನಕುಲ ಸಹದೇವ ಬಾ ಯೆನುತ
ಪ್ರೇಮರಸದಲಿ ಬೇರೆ ಬೇರು
ದ್ದಾಮ ಭುಜನಪ್ಪಿದನು ಚಿತ್ತದ
ತಾಮಸದ ತನಿಬೀಜ ಮುಸುಕಿತು ಹರ್ಷರಚನೆಯಲಿ (ಸಭಾ ಪರ್ವ, ೧೪ ಸಂಧಿ, ೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಅತ್ಯಂತ ಪ್ರೀತಿಭಾವದಿಂದ, ಬಾ ಮಗನೇ ಯುಧಿಷ್ಠಿರ, ವೈರಿಗಳೆಂಬ ಮನ್ಮಥರಿಗೆ ಶಿವನಾದ ಭೀಮನೆ ಬಾ, ಯುದ್ಧದಲ್ಲಿ ಭಯಂಕರನಾದ ಅರ್ಜುನನೇ ಬಾ, ಬನ್ನಿ ನಕುಲ ಸಹದೇವರೆ ಎಂದು ಎಲ್ಲರನ್ನು ಪ್ರೀತಿಯ ರಸದಿಂದ ತಬ್ಬಿಕೊಂಡು ಬರೆಮಾಡಿದನು. ಅವನ ಮನಸ್ಸಿನ ತಾಮಸವು ತೋರುಗಾಣಿಕೆಯ ಪ್ರೀತಿಯಿಂದ ಮುಚ್ಚಿಹೋಯಿತು.

ಅರ್ಥ:
ಮಗ: ಪುತ್ರ; ರಿಪು: ವೈರಿ; ರಾಯ: ರಾಜ; ಮನ್ಮಥ: ಕಾಮ; ಭೀಮ: ಭಯಂಕರ; ರಣ: ಯುದ್ಧ; ನಿಸ್ಸೀಮ: ಪರಿಮಿತಿಯಿಲ್ಲದುದು; ಬಾ: ದಯಮಾಡಿಸು, ಆಗಮಿಸು; ಪ್ರೇಮ: ಒಲವು; ರಸ: ಸಾರ; ಉದ್ದಾಮ: ಶ್ರೇಷ್ಠ; ಭುಜ: ಬಾಹು; ಅಪ್ಪು: ತಬ್ಬಿಕೊ; ಚಿತ್ತ: ಮನಸ್ಸು; ತಾಮಸ: ಕತ್ತಲೆ, ಅಂಧಕಾರ; ತನಿ: ಪಕ್ವವಾದ; ಬೀಜ: ಉತ್ಪತ್ತಿ ಸ್ಥಾನ, ಮೂಲ, ಕಾರಣ; ಮುಸುಕು: ಆವರಿಸು; ಹರ್ಷ: ಸಂತಸ; ರಚನೆ: ನಿರ್ಮಾಣ;

ಪದವಿಂಗಡಣೆ:
ಬಾ +ಮಗನೆ +ರಿಪುರಾಯ+ಮನ್ಮಥ
ಭೀಮ+ಬಾರೈ+ ಭೀಮ+ರಣ+ನಿ
ಸ್ಸೀಮ +ಫಲುಗುಣ +ಬಾ +ನಕುಲ+ ಸಹದೇವ +ಬಾ +ಯೆನುತ
ಪ್ರೇಮರಸದಲಿ +ಬೇರೆ+ ಬೇರ್
ಉದ್ದಾಮ +ಭುಜನ್+ಅಪ್ಪಿದನು +ಚಿತ್ತದ
ತಾಮಸದ+ ತನಿಬೀಜ+ ಮುಸುಕಿತು +ಹರ್ಷ+ರಚನೆಯಲಿ

ಅಚ್ಚರಿ:
(೧) ಧೃತರಾಷ್ಟ್ರನ ಮನಸ್ಸನ್ನು ವರ್ಣಿಸುವ ಸಾಲು – ಚಿತ್ತದ ತಾಮಸದ ತನಿಬೀಜ ಮುಸುಕಿತು ಹರ್ಷರಚನೆಯಲಿ
(೨) ಭೀಮ ಪದದ ಬಳಕೆ – ಭೀಮಾ ಬಾರೈ, ಭೀಮರಣನಿಸ್ಸೀಮ

ಪದ್ಯ ೮: ಧೃತರಾಷ್ಟ್ರನು ಧರ್ಮರಾಯನನ್ನು ಹೇಗೆ ಹೊಗಳಿದನು?

ಇಳಿದರಾನೆಯನಮಳ ರತ್ನಾ
ವಳಿಯ ಕಾಣಿಕೆಗಳನು ಸುರಿದರು
ಖಳ ಶಿರೋಮಣಿಗೆರಗಿದರು ಧೃತರಾಷ್ಟ್ರಭೂಪತಿಗೆ
ಕುಲತಿಲಕ ಬಾ ಕಂದ ಭರತಾ
ವಳಿ ವನದ ಮಾಕಂದ ಧರ್ಮ
ಸ್ಥಳ ಲತಾವಳಿಕಂದ ಬಾಯೆಂದಪ್ಪಿದನು ನೃಪನ (ಸಭಾ ಪರ್ವ, ೧೪ ಸಂಧಿ, ೮ ಪದ್ಯ)

ತಾತ್ಪರ್ಯ:
ಪಾಂಡವರು ಆನೆಯನ್ನಿಳಿದು, ತಾವು ತಂದಿದ್ದ ರತ್ನಗಳ ಕಾಣಿಕೆಯನ್ನು ದುಷ್ಟ ರಾಜರಿಗೆ ಕಿರೀಟಪ್ರಾಯನಾದ ಧೃತರಾಷ್ಟ್ರನಿಗೆ ನೀಡಿ ಅವನಿಗೆ ನಮಸ್ಕರಿಸಿದರು. ಆಗ ಆ ಅಂಧ ನೃಪನು ಯುಧಿಷ್ಠಿರನನ್ನು ಹೊಗಳುತ್ತಾ, ಕುಲಕ್ಕೆ ತಿಲಕಪ್ರಾಯನಾದವನೇ, ಭರತವಂಶದಲ್ಲಿನ ಕಾಡಿನಲ್ಲಿ ಮಾವಿನ ಮರದಂತಿರುವವನೆ, ಧರ್ಮ ಭೂಮಿಯ ಬಳ್ಳಿಗಳಿಗೆ ಉಗಮವಾದ ಕಂದದಂತಿರುವವನೇ ಬಾ ಎಂದು ಧರ್ಮರಾಯನನ್ನು ಆಲಂಗಿಸಿದನು.

ಅರ್ಥ:
ಇಳಿ: ಕೆಳಕ್ಕೆ ಬಾ; ಆನೆ: ಗಜ; ಅಮಳ: ನಿರ್ಮಳ; ರತ್ನ: ಬೆಲೆಬಾಳುವ ಮುತ್ತು/ಹವಳ; ಆವಳಿ: ಸಾಲು, ಗುಂಪು; ಕಾಣಿಕೆ: ಉಡುಗೊರೆ; ಸುರಿ: ಹರಡು; ಖಳ: ದುಷ್ಟ; ಶಿರೋಮಣಿ: ಶ್ರೇಷ್ಠ, ಉತ್ತಮ; ಭೂಪತಿ: ರಾಜ; ಎರಗು: ಬಾಗು, ನಮಸ್ಕರಿಸು; ಕುಲ: ವಂಶ; ತಿಲಕ: ಶ್ರೇಷ್ಠ; ಬಾ: ಆಗಮಿಸು; ಕಂದ: ಮಗು; ಆವಳಿ: ಸಾಲು; ವನ: ಕಾಡು; ಮಾಕಂದ: ಮಾವಿನಮರ; ಧರ್ಮ: ಧಾರಣ ಮಾಡಿದುದು, ನಿಯಮ; ಸ್ಥಳ:ನೆಲೆ; ಲತಾವಳಿ: ಬಳ್ಳಿಯ ಸಾಲು; ಅಪ್ಪು: ತಬ್ಬಿಕೊ; ನೃಪ: ರಾಜ;

ಪದವಿಂಗಡಣೆ:
ಇಳಿದರ್+ಆನೆಯನ್+ಅಮಳ +ರತ್ನಾ
ವಳಿಯ +ಕಾಣಿಕೆಗಳನು+ ಸುರಿದರು
ಖಳ +ಶಿರೋಮಣಿಗ್+ಎರಗಿದರು +ಧೃತರಾಷ್ಟ್ರ+ಭೂಪತಿಗೆ
ಕುಲತಿಲಕ+ ಬಾ +ಕಂದ +ಭರತಾ
ವಳಿ+ ವನದ+ ಮಾಕಂದ+ ಧರ್ಮ
ಸ್ಥಳ+ ಲತಾವಳಿಕಂದ +ಬಾಯೆಂದ್+ಅಪ್ಪಿದನು +ನೃಪನ

ಅಚ್ಚರಿ:
(೧) ಧೃತರಾಷ್ಟ್ರನನ್ನು ಖಳ ಶಿರೋಮಣಿ ಎಂದು ಕರೆದಿರುವುದು
(೨) ಭೂಪತಿ, ನೃಪ – ಸಮನಾರ್ಥಕ ಪದ – ೩, ೬ ಸಾಲಿನ ಕೊನೆಯ ಪದ
(೩) ಹೊಗಳಿಕೆಗಳು – ಕುಲತಿಲಕ, ಮಾಕಂದ, ಲತಾವಳಿಕಂದ

ಪದ್ಯ ೭: ಊರಿನವರು ಪಾಂಡವರನ್ನು ಹೇಗೆ ಸ್ವಾಗತಿಸಿದರು?

ಪೌರನಾರೀಜನದ ತಳಿಗೆಗ
ಳಾರತಿಯ ಸೇಸೆಗಳ ಲಾಜೆಯ
ತೋರಮುತ್ತಿನ ಮಳೆಯ ಮಂಗಳರವದ ಕಳಕಳದ
ಓರಣದ ತೋರಣದ ಗುಡಿಗಳ
ಚಾರುವೀಧಿಗಳೊಳಗೆ ಬಂದರು
ಭೂರಮಣರುತ್ಸಾಹದಲಿ ಧೃತರಾಷ್ಟ್ರನರಮನೆಗೆ (ಸಭಾ ಪರ್ವ, ೧೪ ಸಂಧಿ, ೭ ಪದ್ಯ)

ತಾತ್ಪರ್ಯ:
ಪುರ ಸ್ತ್ರೀಯರು ಹಿಡಿದ ಆರತಿಯ ತಟ್ಟೆಗಳು, ಅವರಿಟ್ಟ ಸೇಸೆ, ಅರಳಿನ ಮಳೆ, ಮುತ್ತಿನ ಮಳೆ, ಮಂಗಳವಾದ್ಯಗಳ ಇಂಪಾದ ಸದ್ದು, ಓರಣವಾಗಿ ತೋರಣಕಟ್ಟಿ ಧ್ವಜಗಳನ್ನೇರಿಸಿದ ಸುಂದರವಾದ ಬೀದಿಗಳನ್ನು ನೋಡುತ್ತಾ ಪಾಂಡವರು ಹಸ್ತಿನಾಪುರದೊಳಗೆ ನಡೆಯುತ್ತಾ ಧೃತರಾಷ್ಟ್ರನ ಅರಮನೆಗೆ ಬಂದರು.

ಅರ್ಥ:
ಪೌರ: ಊರು; ನಾರಿ: ಹೆಣ್ಣು; ಜನ: ಮನುಷ್ಯ, ಗುಂಪು; ತಳಿಗೆ: ತಟ್ಟೆ; ಆರತಿ: ನೀರಾಜನ; ಸೇಸೆ: ಮಂಗಳಾಕ್ಷತೆ; ಲಾಜೆ: ಭತ್ತದ ಹರಳು; ಮುತ್ತು: ಬೆಲೆಬಾಳುವ ರತ್ನ; ಮಳೆ: ವರ್ಷ; ಮಂಗಳ: ಶುಭ; ರವ: ಶಬ್ದ; ಕಳಕಳ: ಉದ್ವಿಗ್ನತೆ; ಓರಣ: ಕ್ರಮ, ಸಾಲು; ತೋರಣ: ಬಾಗಿಲಿಗೆ ಕಟ್ಟುವ ತಳಿರು; ಗುಡಿ: ಧ್ವಜ; ಚಾರು: ಸುಂದರ; ವೀಧಿ: ಬೀದಿ, ಮಾರ್ಗ; ಬಂದರು: ಆಗಮಿಸು; ಭೂರಮಣ: ರಾಜ; ಉತ್ಸಾಹ: ಹುರುಪು, ಆಸಕ್ತಿ; ಅರಮನೆ: ರಾಜರ ಆಲಯ;

ಪದವಿಂಗಡಣೆ:
ಪೌರ+ನಾರೀಜನದ +ತಳಿಗೆಗಳ್
ಆರತಿಯ +ಸೇಸೆಗಳ +ಲಾಜೆಯ
ತೋರ+ಮುತ್ತಿನ +ಮಳೆಯ +ಮಂಗಳ+ರವದ +ಕಳಕಳದ
ಓರಣದ+ ತೋರಣದ +ಗುಡಿಗಳ
ಚಾರು+ವೀಧಿಗಳ್+ಒಳಗೆ +ಬಂದರು
ಭೂರಮಣರ್+ಉತ್ಸಾಹದಲಿ +ಧೃತರಾಷ್ಟ್ರನ್+ಅರಮನೆಗೆ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮುತ್ತಿನ ಮಳೆಯ ಮಂಗಳರವದ
(೨) ಓರಣ, ತೋರಣ, ಭೂರಮಣ – ಪ್ರಾಸ ಪದಗಳು