ಪದ್ಯ ೬: ಪಾಂಡವರ ಸ್ವಾಗತ ಹೇಗಾಯಿತು?

ಸೇನೆ ಬಿಟ್ಟುದು ಪುರದ ಬಹಿರೋ
ದ್ಯಾನ ವೀಧಿಗಳೊಳಗೆ ಕುಂತೀ
ಸೂನುಗಳು ಸುಮ್ಮಾನಮಿಗೆ ನಡೆತಂದರಿಭಪುರಿಗೆ
ಆ ನಗರದೊತ್ತೊತ್ತೆಗಳನಾ
ಮಾನಿನಿಯರುಪ್ಪಾರತಿಯ ನವ
ರಾನನೇಂದು ಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ (ಸಭಾ ಪರ್ವ, ೧೪ ಸಂಧಿ, ೬ ಪದ್ಯ)

ತಾತ್ಪರ್ಯ:
ಪಾಂಡವರ ಸೇನೆಯು ಊರಹೊರಗಿನ ಉದ್ಯಾನದಲ್ಲಿ ಬೀಡು ಬಿಟ್ಟಿತು, ಪಾಂಡವರು ಹಸ್ತಿನಾಪುರವನ್ನು ಹೊಕ್ಕರು. ಜನ ಗುಂಪುಗುಂಪಾಗಿ ಅವರನ್ನು ನೋಡಲು ಸೇರಿದ್ದರು. ನಗರದ ಹೆಣ್ಣುಮಕ್ಕಳು ಪಾಂಡವರಿಗೆ ಉಪ್ಪಿನಾರತಿಯನ್ನು ಎತ್ತಿದರು. ಉಪ್ಪಾರತಿಯ ಬೆಳಕನ್ನೂ ಬಿಸಿಲಿನ ತಾಪವನ್ನು ಆ ಹೆಂಗಳೆಯರ ಮುಖಚಂದ್ರಗಳು ತಂಪುಮಾಡುತ್ತಿದ್ದವು.

ಅರ್ಥ:
ಸೇನೆ: ಸೈನ್ಯ; ಬಿಟ್ಟು: ತೊರೆ; ಪುರ: ಊರು; ಬಹಿರ: ಹೊರಗೆ; ಉದ್ಯಾನ: ಕೈತೋಟ; ವೀಧಿ: ದಾರಿ, ಮಾರ್ಗ; ಸೂನು: ಮಕ್ಕಳು; ಸುಮ್ಮಾನ: ವಿನೋದ, ಸಂತೋಷ; ಮಿಗೆ: ಅಧಿಕವಾಗಿ; ಇಭಪುರಿ: ಹಸ್ತಿನಾಪುರ; ಇಭ: ಆನೆ; ನಗರ: ಊರು; ಮಾನಿನಿ: ಹೆಣ್ಣು; ಉಪ್ಪಾರತಿ: ಉಪ್ಪಿನ ಆರತಿ, ಉಪ್ಪನ್ನು ನಿವಾಳಿಸಿ ದೃಷ್ಟಿ ತೆಗೆಯುವುದು; ನವ: ಹೊಸ; ಆನನ: ಮುಖ; ಇಂದು: ಚಂದ್ರ; ಪ್ರಭೆ: ಕಾಂತಿ; ವಿಭಾಡಿಸು: ನಾಶಮಾಡು; ಬಿಸಿಲು: ಸೂರ್ಯನ ಶಾಖ; ಬೇಗೆ:ತಾಪ, ಕಾವು;

ಪದವಿಂಗಡಣೆ:
ಸೇನೆ +ಬಿಟ್ಟುದು +ಪುರದ +ಬಹಿರ
ಉದ್ಯಾನ +ವೀಧಿಗಳ್+ಒಳಗೆ+ ಕುಂತೀ
ಸೂನುಗಳು +ಸುಮ್ಮಾನಮಿಗೆ+ ನಡೆತಂದರ್+ಇಭಪುರಿಗೆ
ಆ+ ನಗರದೊತ್ತೊತ್ತೆಗಳನ್+ಆ
ಮಾನಿನಿಯರ್+ಉಪ್ಪಾರತಿಯ+ ನವರ್
ಆನನ+ಇಂದು +ಪ್ರಭೆ +ವಿಭಾಡಿಸೆ +ಬಿಸಿಲ +ಬೇಗೆಗಳ

ಅಚ್ಚರಿ:
(೧) ಸುಂದರವಾದ ಕಲ್ಪನೆ – ಹೇಗೆ ಆರತಿಯ ತಾಪವು ಕಡಿಮೆಯಾಯಿತು – ಆ ನಗರದೊತ್ತೊತ್ತೆಗಳನಾ ಮಾನಿನಿಯರುಪ್ಪಾರತಿಯ ನವರಾನನೇಂದು ಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ

ಪದ್ಯ ೫: ಯುಧಿಷ್ಠಿರನ ಪುರಪ್ರವೇಶ ಹೇಗಿತ್ತು?

ಹರಿದರರಸಾಳುಗಳು ರಾಯನ
ಬರವನರುಹಿದರಂಧ ಭೂಪತಿ
ಪುರದೊಳಗೆ ಗುಡಿಗಟ್ಟಿಸಿದನತ್ಯಧಿಕ ಹರುಷದಲಿ
ಸುರನದೀಜ ದ್ರೋಣ ಗೌತಮ
ಗುರುಜ ಕರ್ಣ ಜಯದ್ರಥಾದಿಗ
ಳುರು ವಿಭವದಿಂದಿದಿರುಗೊಂಡರು ಹೊಗಿಸಿದರು ಪುರವ (ಸಭಾ ಪರ್ವ, ೧೪ ಸಂಧಿ, ೫ ಪದ್ಯ)

ತಾತ್ಪರ್ಯ:
ಅರಸನ ಆಳುಗಳು ಧರ್ಮರಾಯನ ಆಗಮನವನ್ನು ಧೃತರಾಷ್ಟ್ರನಿಗೆ ತಿಳಿಸಿದರು, ಇದನ್ನು ಅರಿತ ಧೃತರಾಷ್ಟ್ರನು ಸಂತಸಗೊಂಡು, ಊರನ್ನಲಂಕರಿಸಿ, ಧ್ವಜಗಳನ್ನು ಕಟ್ಟಿಸಿದನು. ಭೀಷ್ಮ, ದ್ರೋಣ, ಕೃಪ, ಅಶ್ವತ್ಥಾಮ ಕರ್ಣ ಜಯದ್ರಥ ಮೊದಲಾದವರು ಪಾಂಡವರನ್ನು ವೈಭವದಿಂದ ಊರೊಳಗೆ ಕರೆತಂದರು.

ಅರ್ಥ:
ಹರಿ: ಚದುರು; ಅರಸು: ರಾಜ; ಆಳು: ಸೇವಕ; ರಾಯ: ದೊರೆ; ಬರವನು: ಆಗಮನ; ಅರುಹಿ: ತಿಳಿದು; ಅಂಧ: ಕುರುಡ; ಭೂಪತಿ: ರಾಜ; ಪುರ: ಊರು; ಒಳಗೆ: ಅಂತರ್ಯ ಗುಡಿ: ಬಾವುಟ; ಗುಡಿಕಟ್ಟು: ಸಂತೋಷಗೊಳ್ಳು; ಅತ್ಯಧಿಕ: ಹೆಚ್ಚು; ಹರುಷ: ಸಂತೋಷ; ಸುರನದೀಜ: ಗಂಗಾಪುತ್ರ (ಭೀಷ್ಮ); ಗುರುಜ: ಅಶ್ವತ್ಥಾಮ; ಆದಿ: ಮುಂತಾದ; ಉರು: ಶ್ರೇಷ್ಠ; ವಿಭವ: ವೈಭವ, ಸಿರಿ, ಸಂಪತ್ತು; ಇದಿರುಗೊಂಡು: ಎದುರುನೋಡು; ಹೊಗಿಸು: ಒಳಹೋಗಿಸು; ಪುರ: ಊರು;

ಪದವಿಂಗಡಣೆ:
ಹರಿದರ್+ಅರಸ್+ಆಳುಗಳು +ರಾಯನ
ಬರವನ್+ಅರುಹಿದರ್+ಅಂಧ+ ಭೂಪತಿ
ಪುರದೊಳಗೆ +ಗುಡಿಗಟ್ಟಿಸಿದನ್+ಅತ್ಯಧಿಕ +ಹರುಷದಲಿ
ಸುರನದೀಜ +ದ್ರೋಣ +ಗೌತಮ
ಗುರುಜ+ ಕರ್ಣ+ ಜಯದ್ರಥಾದಿಗಳ್
ಉರು +ವಿಭವದಿಂದ್+ಇದಿರುಗೊಂಡರು+ ಹೊಗಿಸಿದರು+ ಪುರವ

ಅಚ್ಚರಿ:
(೧) ರಾಯ, ಅರಸ, ಭೂಪತಿ – ಸಮನಾರ್ಥಕ ಪದ
(೨) ಸುರನದೀಜ, ಗುರುಜ – ಪದಗಳ ಬಳಕೆ

ಪದ್ಯ ೪:ಯುಧಿಷ್ಠಿರನು ಜ್ಯೋತಿಷಿಗಳ ಮಾತನ್ನು ಏಕೆ ಜರೆದನು?

ಮರಳಲಹುದೈ ದೈವವಿಕ್ಕಿದ
ಕೊರಳುಗಣ್ಣಿಯ ಕುಣಿಕೆ ಯಾರಲಿ
ಹರಿವುದೈ ಮನ್ನಿಸಿದನೇ ಮೌಹೂರ್ತಕರ ನುಡಿಯ
ಕರೆಸುವನು ಧೃತರಾಷ್ಟ್ರ ನಮಗೀ
ನರಿಮೊಲಂಗಳ ಹಕ್ಕಿ ಹರಿಣಿಯ
ಕರಹವೇಗುವವೆಂದು ಜರೆದನು ಶುಕನಕೋವಿದರ (ಸಭಾ ಪರ್ವ, ೧೪ ಸಂಧಿ, ೪ ಪದ್ಯ)

ತಾತ್ಪರ್ಯ:
ಧರ್ಮರಾಯನು ಜ್ಯೋತಿಷಿಗಳ ಸಲಹೆಯಂತೆ ಇಂದ್ರಪ್ರಸ್ಥಕ್ಕೆ ಮರಳಬಹುದಿತ್ತು, ಆದರೆ ದೈವವು ಕೊರಳಿಗಿಟ್ಟ ಕುಣಿಕೆ ಯಾರನ್ನೂ ಬಿಡುವುದಿಲ್ಲ. ತಾನು ಹರಿಯುವುದಿಲ್ಲ. ಧರ್ಮರಾಯನು ಜ್ಯೋತಿಷ್ಯರ ಮಾತನ್ನು ಮನ್ನಿಸಲಿಲ್ಲ. ನಮ್ಮನ್ನು ಕರೆದಿರುವವನು ಧೃತರಾಷ್ಟ್ರ, ಹೀಗಿರುವಾಗ ನರಿ, ಮೊಲ, ಹಕ್ಕಿ, ಜಿಂಕೆಗಳು ಏನು ಮಾಡುತ್ತವೆ ಎಂದು ಶಕುನ ಬಲ್ಲವರ ಮಾತನ್ನು ಜರೆದನು.

ಅರ್ಥ:
ಮರಳು: ಹಿಂದಿರುಗು; ದೈವ: ಭಗವಂತ; ಕೊರಳು: ಗಂಟಲು, ಕುತ್ತಿಗೆ; ಕುಣಿಕೆ:ಸರಗಂಟು; ಹರಿ: ಕಡಿ, ಕತ್ತರಿಸು; ಮನ್ನಿಸು: ಸಮಾಧಾನ ಮಾಡು, ಕ್ಷಮಿಸು; ಮೌಹೂರ್ತಕ: ಜೋತಿಷಿ; ನುಡಿ: ಮಾತು; ಕರೆಸು: ಬರೆಮಾಡು; ಕರಹ: ಆಹ್ವಾನ; ಜರೆ: ಬಯ್ಯು; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಕೋವಿದ: ಪಂಡಿತ;

ಪದವಿಂಗಡಣೆ:
ಮರಳಲ್+ಅಹುದೈ +ದೈವವ್+ಇಕ್ಕಿದ
ಕೊರಳುಗಣ್ಣಿಯ +ಕುಣಿಕೆ +ಯಾರಲಿ
ಹರಿವುದೈ +ಮನ್ನಿಸಿದನೇ +ಮೌಹೂರ್ತಕರ+ ನುಡಿಯ
ಕರೆಸುವನು +ಧೃತರಾಷ್ಟ್ರ +ನಮಗೀ
ನರಿ+ಮೊಲಂಗಳ+ ಹಕ್ಕಿ +ಹರಿಣಿಯ
ಕರಹವ್+ಏಗುವವ್+ಎಂದು +ಜರೆದನು +ಶುಕನ+ಕೋವಿದರ

ಅಚ್ಚರಿ:
(೧) ದೈವಿಚ್ಛೆ ಯಾರನ್ನು ಬಿಡುವುದಿಲ್ಲ ಎಂದು ಹೇಳಲು – ದೈವವಿಕ್ಕಿದ ಕೊರಳುಗಣ್ಣಿಯ ಕುಣಿಕೆ ಯಾರಲಿ ಹರಿವುದೈ

ನುಡಿಮುತ್ತುಗಳು: ಸಭಾ ಪರ್ವ, ೧೪ ಸಂಧಿ

  • ಮರಳಲಹುದೈ ದೈವವಿಕ್ಕಿದ ಕೊರಳುಗಣ್ಣಿಯ ಕುಣಿಕೆ ಯಾರಲಿ ಹರಿವುದೈ ಮನ್ನಿಸಿದನೇ ಮೌಹೂರ್ತಕರ ನುಡಿಯ – ಪದ್ಯ ೪
  • ಆ ನಗರದೊತ್ತೊತ್ತೆಗಳನಾ ಮಾನಿನಿಯರುಪ್ಪಾರತಿಯ ನವರಾನನೇಂದು ಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ – ಪದ್ಯ ೬
  • ಕುಲತಿಲಕ ಬಾ ಕಂದ ಭರತಾವಳಿ ವನದ ಮಾಕಂದ ಧರ್ಮಸ್ಥಳ ಲತಾವಳಿಕಂದ ಬಾಯೆಂದಪ್ಪಿದನು ನೃಪನ – ಪದ್ಯ ೮
  • ಚಿತ್ತದ ತಾಮಸದ ತನಿಬೀಜ ಮುಸುಕಿತು ಹರ್ಷರಚನೆಯಲಿ – ಪದ್ಯ ೯
  • ಚಂದಮಿಗೆ ಸಾವಿರದ ಸಂಖ್ಯೆಯಲಿಂದು ಮುಖಿಯರ ತಳಿಗೆಯಾರತಿ ಸಂದಣಿಸಿದವು – ಪದ್ಯ ೧೧
  • ಬಾಲಮೃಗವೊಳಗಾಯ್ತಲಾ ತೊಡುಕೋಲನೆಂದರು ನಗುತ ಮನದಲಿ ಕೌಳಿಕದ ಕುಹಕಿಗಳು ಕೌರವರಾಯ ಶಕುನಿಗಳು – ಪದ್ಯ ೧೩
  • ಅಳುಪಿದರೆ ಮಧುಕರನ ಮರಿ ಬೊಬ್ಬುಲಿಯ ವನದೊಳಗೇನಹುದು – ಪದ್ಯ ೧೪
  • ವೊಂದೊಂದನೌಕಿದವವಿರಳಿತ ಮಣಿ ಕಿರಣ ವೇಣೀ ಬಂಧ ಬಂದುರದಿ – ಪದ್ಯ ೨೬
  • ಸೂಸಕಂಗಳ ಮುರಿದ ಮುತ್ತಿನ ದೇಶಿಕಾರಿಯರಾನನೇಂದುಗಳಾ ಸುಧಾಕರನೆನಲು – ಪದ್ಯ ೩೦
  • ಖೋಡಿಯಿಲ್ಲದ ಸರಸ ನೆತ್ತವನಾಡಲರಿಯದ ನೃಪತಿ ಮೃಗವೆಂದಾಡುತಿಹರರಿವವರು – ಪದ್ಯ ೩೪
  • ನೀವೇ ಕುಹಕ ವಿದ್ಯಾ ಸಾರ್ವಭೌಮರು ಶಕುನಿ ಕೌರವರು – ಪದ್ಯ ೩೫
  • ನಿಮ್ಮಲಿ ನಾವು ನಮ್ಮಲಿ ನೀವೆಯೆಂದನು ನಗುತ ಕುರುರಾಯ – ಪದ್ಯ ೩೬
  • ದ್ಯೂತ ದುರ್ವ್ಯಸನ ಪ್ರಪಂಚವಿದು – ಪದ್ಯ ೩೭
  • ದ್ಯೂತ ಮೃಗಯಾ ಸ್ತ್ರೀವ್ಯಸನನೃಪ ಜಾತಿಗೋಸುಗರಾದ ವಿದರರ ಸಾತಿಶಯವರಿಯದವ ನರಮೃಗವೆಂದನಾ ಶಕುನಿ – ಪದ್ಯ ೩೮
  • ಕಾಳಗಕೆ ಜೂಜಿಗೆ ಕರೆದೊಡೋಸರಿಸಿದೊಡೆ ಬಳಿಕವ ಗುರುವನೇ ಕ್ಷತ್ರಿಯರೊಳಗೆ – ಪದ್ಯ ೩೯
  • ಕಳವಿನ ಜೂಜು ಧರ್ಮದ ಮಗನೊ ಮೊಮ್ಮನೊ – ಪದ್ಯ ೪೦
  • ಧೀರನಲ್ಲಾ ಧರ್ಮಶಾಸ್ತ್ರ ವಿಚಾರ ಸಾರಜ್ಞಾನ ನಿಷ್ಠೆಯೊಳೋರೆಯುಂಟೇ ದ್ಯೂತಕೇಳಿಗೆ ಮಾಡಿದನು ಮನವ – ಪದ್ಯ ೪೧
  • ಗಬ್ಬರಿಸಿತೈ ಧರ್ಮಜನ ಗಾಢದ ಬುದ್ಧಿ ಪರ್ವತವ – ಪದ್ಯ ೪೩
  • ಪರಿಭವದೊಸಗೆಯನು ಸೂಚಿಸಿತು ಲಕ್ಷ್ಮಿಗೆ ಧರ್ಮಜನ ಹೃದಯ – ಪದ್ಯ ೪೪
  • ಮುಸುಡ ತಿರುಹಿತು ತಿಳಿವು ಲಜ್ಜೆಯ ದೆಸೆಗೆ ದುರ್ಘಟವಾಯ್ತು –ಪದ್ಯ ೪೪
  • ವ್ಯಸನ ತೃಷ್ಣೆಯು ಕೀಳು ಚಿತ್ತದ ಮಿಸುನಿಯೊಳು ಬೆರೆಸಿತು – ಪದ್ಯ ೪೪
  • ಸುಬುದ್ಧಿಯ ರಸವು ಹಾರಿತು ಹುದಿದ ರಾಗದೇಷ ವಹ್ನಿಯಲಿ – ಪದ್ಯ ೪೪
  • ಭೂಪತಿ ಕೆಲಕೆ ಸಿಲುಕಿದನವದಿರೊಡ್ಡಿದ ಬಲೆಗೆ ಬಂದನು ನೆತ್ತಸಾರಿಯ ಗುರಿಯ ಗದ್ದುಗೆಗೆ – ಪದ್ಯ ೪೫
  • ವಿಜಯ ಸಿರಿವಾಚಾಟರಿಗೆ ಮೆಚ್ಚುವಳೆ – ಪದ್ಯ ೪೫
  • ಸಾರಿ ಗ್ರಾಮವನು ಕೆದರಿದರು ದ್ಯೂತದ ತಾಮಸದಲುಬ್ಬೆದ್ದುದಿಬ್ಬರ ಕರಣ ವೃತ್ತಿಗಳು – ಪದ್ಯ ೪೯
  • ಉಗಿವಸೆರೆಗಳ ಬಳಿದು ಹಾರದ ಬಿಗುಹುಗಳ ಬೀದಿಗಳ ತಳಿ ಸಾರಿಗಳ ಧಾಳಾ ಧೂಳಿ ಮಸಗಿತು – ಪದ್ಯ ೫೦
  • ಆಯತದ ಕೃತ್ರಿಮವಲೇ ಕೌರವರ ಸಂಕೇತ – ಪದ್ಯ ೫೧
  • ದೈವಾನುರಾಗದ ಕುಣಿಕೆ ಬೇರಹುದು – ಪದ್ಯ ೫೬
  • ಚತುರಂಬುನಿಧಿ ಮೇಖಲೆಯ ಉತ್ತರ ಕುರುನರೇಂದ್ರರ ಸೀಮೆ ಪರಿಯಂತ ನೆಲವಿದೆಮ್ಮದು – ಪದ್ಯ ೫೯
  • ದಾಯ ಕಂದೆರೆವರೆ ಸುಯೋಧನರಾಯನುಪಚಿತ ಪುಣ್ಯ – ಪದ್ಯ ೬೫
  • ಸೋಲವ ಬಿತ್ತಿ ಬೆಳೆದನುಪದ್ಯ ೬೬
  • ಮರಿಗುದುರೆ ಮರಿಯಾನೆಗಳನುಚ್ಚರಿಸಿ ಸಾರಿಯ ಸೋಕಿದಾಗಲೆ ಸೋತನಾ ಭೂಪಪದ್ಯ ೬೭
  • ಸೋಲವಿದು ಕಾಲಾಂತಕನ ಮೈಸಾಲ ಸಾರಿದೆನಕಟ – ಪದ್ಯ ೭೦
  • ವಿಷದ ಮಧುರವು ಕೊಲುವುದೋ ಮನ್ನಿಸುವುದೋ – ಪದ್ಯ ೭೧
  • ಕುಂತೀ ಸುತರೊಡನೆ ಸಮ್ಮೇಳವೆಮ್ಮೊಳು ವೈಮನಸ್ಯಗತಿ – ಪದ್ಯ ೭೪
  • ಐಹಿಕಾಮುಷ್ಮಿಕದ ವಿಭವೋತ್ಸಾಹ ನಿಸ್ಪೃಹರಾವಲೇ ಸಂದೇಹವೇ ನೀವರಿಪಿರೆಂದನು ತೂಗಿ ತುದಿವೆರಳ – ಪದ್ಯ ೭೫
  • ನೀಪರಮತತ್ವಜ್ಞಾನಿಯೇ ಕಾತರಿಸದಿರು ನೀನೆಂದು ಟಕ್ಕರಿಗಳೆದನಾ ಭೂಪ – ಪದ್ಯ ೭೬
  • ಅವನಿಪತಿ ನಿಜಹುಬ್ಬಿನಲಿ ಹೂಳಿದನು ಪರಿಚರರ – ಪದ್ಯ ೭೭

ಪದ್ಯ ೩: ಬ್ರಾಹ್ಮಣರು ಯುಧಿಷ್ಠಿರನಿಗೆ ಏನು ಹೇಳಿದರು?

ಶಕುನಗತಿ ಸಾಮಾನ್ಯವಿದು ಕಂ
ಟಕದ ನೆಲೆ ಜನ್ಮದಲಿ ಸಪ್ತಾ
ಧಿಕದೊಳಿದ್ದರು ಸೌರಿ ಗುರು ಭೌಮಾಬ್ಜಬಾಂಧವರು
ವಿಕಳದೆಸೆ ನಿಮ್ಮಡಿಗೆ ವೈರಿ
ಪ್ರಕರಕುನ್ನತದೆಸೆ ಮಹೀ ಪಾ
ಲಕ ಶಿರೋಮಣಿ ಪುರಕೆ ಮರಳೆಂದರು ಮಹೀಸುರರು (ಸಭಾ ಪರ್ವ, ೧೩ ಸಂಧಿ, ೩ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಜೊತೆಗೆ ಹೋಗುತ್ತಿದ್ದ ಬ್ರಾಹ್ಮಣರು ದಾರಿಯಲ್ಲಿ ಕಂಡುಬಂದ ಶಕುನಗಳನ್ನು ನೋಡಿ, ಈ ಶಕುನಗಳು ಒಳ್ಳೆಯದಲ್ಲ. ಇದರಿಂದ ಪ್ರಯಾಣಮಾಡುವವರಿಗೆ ಕಂಟಕವಾಗುತ್ತದೆ. ಜನ್ಮ ರಾಶಿಯಲ್ಲೂ ಅಷ್ಟಮದಲ್ಲೂ ಶನಿ, ಗುರು, ಕುಜ, ಸೂರ್ಯರಿದ್ದಾರೆ. ನಿಮಿಗಿದು ದುರ್ದೆಸೆ. ನಿಮ್ಮ ಶತ್ರುಗಳಿಗೆ ಉನ್ನತಿಯನ್ನು ಉಂಟುಮಾಡುವದೆಸೆ. ಹೇ ರಾಜರಿಗೆ ಶ್ರೇಷ್ಠನಾದವನೇ, ನೀವು ಊರಿಗೆ ಮರಳಿರಿ ಎಂದು ಬ್ರಾಹ್ಮಣರು ಸಲಹೆ ನೀಡಿದರು.

ಅರ್ಥ:
ಶಕುನ: ನಿಮಿತ್ತ; ಭವಿಷ್ಯ; ಗತಿ: ಇರುವ ಸ್ಥಿತಿ, ಅವಸ್ಥೆ; ಸಾಮಾನ್ಯ: ಸಾರ್ವತ್ರಿಕವಾದುದು; ಕಂಟಕ: ತೊಂದರೆ; ನೆಲೆ: ವಾಸಸ್ಥಾನ; ಜನ್ಮ: ಹುಟ್ಟು; ಸಪ್ತ: ಏಳು; ಅಧಿಕ: ಹೆಚ್ಚು; ಸೌರಿ: ಕೃಷ್ಣ, ಶನಿ; ಭೌಮ: ಮಂಗಳ ಗ್ರಹ, ಅಂಗಾರಕ; ಅಬ್ಜ: ತಾವರೆ; ಬಾಂಧವ: ಸಂಬಂಧಿಕರು; ವಿಕಳ: ಭ್ರಮೆ, ಭ್ರಾಂತಿ; ದೆಸೆ: ದಿಕ್ಕು, ನಿಮಿತ್ತ; ಅಡಿ: ಪಾದ, ಹೆಜ್ಜೆ; ವೈರಿ: ಶತ್ರು; ಪ್ರಕರ: ಗುಂಪು; ಉನ್ನತ: ಹೆಚ್ಚು, ಏರಿಕೆ; ಮಹೀ: ಭೂಮಿ; ಪಾಲಕ: ಒಡೆಯ, ರಕ್ಷಿಸುವ; ಶಿರೋಮಣಿ: ಶ್ರೇಷ್ಠ; ಪುರ: ಊರು; ಮರಳು: ಹಿಂದಿರುಗು; ಮಹೀಸುರ: ಬ್ರಾಹ್ಮಣ;

ಪದವಿಂಗಡಣೆ:
ಶಕುನಗತಿ +ಸಾಮಾನ್ಯವ್+ಇದು +ಕಂ
ಟಕದ +ನೆಲೆ +ಜನ್ಮದಲಿ +ಸಪ್ತ
ಅಧಿಕದೊಳ್+ಇದ್ದರು +ಸೌರಿ +ಗುರು +ಭೌಮ+ಅಬ್ಜ+ಬಾಂಧವರು
ವಿಕಳದೆಸೆ +ನಿಮ್ಮಡಿಗೆ +ವೈರಿ
ಪ್ರಕರಕ್+ಉನ್ನತದೆಸೆ+ ಮಹೀ +ಪಾ
ಲಕ +ಶಿರೋಮಣಿ +ಪುರಕೆ+ ಮರಳ್+ಎಂದರು +ಮಹೀಸುರರು

ಅಚ್ಚರಿ:
(೧) ಎಂಟು ಎಂದು ಹೇಳಲು – ಸಪ್ತಾಧಿಕ ಪದದ ಬಳಕೆ
(೨) ಸೂರ್ಯನನ್ನು ಅಬ್ಜಬಾಂಧವ (ಕಮಲದ ಸಂಬಂಧಿ) ಎಂದು ಕರೆದಿರುವುದು
(೩) ವಿಕಳದೆಸೆ, ಉನ್ನತದೆಸೆ – ಪದಗಳ ಬಳಕೆ
(೪) ಯುಧಿಷ್ಠಿರನನ್ನು ಮಹೀಪಾಲಕ ಶಿರೋಮಣಿ ಎಂದು ಕರೆದಿರುವುದು