ಪದ್ಯ ೧೦೦: ದ್ರೌಪದಿಯ ಪಲ್ಲಕ್ಕಿಯ ಸುತ್ತಲು ಯಾರಿದ್ದರು?

ಉಡಿಗೆಗಳ ದೇಸಿಯ ವಿಳಾಸದ
ತೊಡಿಗೆಗಳ ಮೌಳಿಯ ನವಾಯಿಯ
ಮುಡಿಗಳೆಡಬಲದೋರೆನೋಟದ ಬಳ್ಳಿ ಬೆಳಗುಗಳ
ಕಡು ಬೆಮರ ತನುಪರಿಮಳದೊಳೆಡೆ
ವಿಡದ ಗಗನೋದರದ ಗರುವೆಯ
ರಡಸಿದರು ದ್ರುಪದಾತ್ಮಜೆಯ ದಂಡೆಗೆಯ ಬಳಸಿನಲಿ (ಸಭಾ ಪರ್ವ, ೧೩ ಸಂಧಿ, ೧೦೦ ಪದ್ಯ)

ತಾತ್ಪರ್ಯ:
ಚೆಲುವಾದ ದೇಸಿಯ ಬಟ್ಟೆಗಳನ್ನು ಧರಿಸಿ, ವಿಲಾಸಪೂರ್ಣ ಆಭರಣಗಳನ್ನು ತೊಟ್ಟು; ನೂತನ ರೀತಿಯ ಕೇಶವಿನ್ಯಾಸಗಳನ್ನೂ, ಓರೆ ನೋಟದ ಮಿಂಚಿನ ಬಳ್ಳಿಗಳನ್ನೂ, ಬೆವರಿನ ಪರಿಮಳವನ್ನೂ, ಕೃಶೋದರಗಳನ್ನೂ ಹೊಂದಿದ ಸಖಿಯರು ದ್ರೌಪದಿಯ ಪಲ್ಲಕ್ಕಿಯ ಸುತ್ತಲೂ ಸಂದಣಿಸಿದ್ದರು.

ಅರ್ಥ:
ಉಡಿಗೆ: ಧರಿಸುವ ವಸ್ತ್ರ, ಬಟ್ಟೆ; ದೇಸಿಯ: ಚೆಲುವು, ಜಾನಪದ, ಆಚಾರ; ವಿಳಾಸ: ವಿಹಾರ; ತೊಡಿಗೆ: ಆಭರಣ; ಮೌಳಿ: ಶಿರ; ನವಾಯಿ: ಹೊಸರೀತಿ, ಠೀವಿ; ಮುಡಿ: ತಲೆ; ಎಡಬಲ: ಅಕ್ಕಪಕ್ಕ; ಓರೆ: ಡೊಂಕು; ನೋಟ: ವೀಕ್ಷಣೆ; ಬಳ್ಳಿ: ಲತೆ; ಬೆಳಗು: ಹೊಳಪು, ಕಾಂತಿ; ಕಡು: ಬಹಳ; ಬೆಮರು: ಬೆವರು; ತನು: ದೇಹ; ಪರಿಮಳ: ಸುಗಂಧ; ಎಡವಿಡದೆ: ಬಿಡುವಿಲ್ಲದೆ; ಗಗನೋದರ: ಆಕಾಶವೇ ಹೊಟ್ಟೆಯಾರಿರುವ; ಗರುವ: ಶ್ರೇಷ್ಠ; ಅಡಸು: ಬಿಗಿಯಾಗಿ ಒತ್ತು, ಮುತ್ತು; ಆತ್ಮಜೆ: ಮಗಳು; ದಂಡಿಗೆ: ಪಲ್ಲಕ್ಕಿ; ಬಳಸು: ಆವರಿಸು;

ಪದವಿಂಗಡಣೆ:
ಉಡಿಗೆಗಳ +ದೇಸಿಯ +ವಿಳಾಸದ
ತೊಡಿಗೆಗಳ +ಮೌಳಿಯ +ನವಾಯಿಯ
ಮುಡಿಗಳ್+ಎಡಬಲದ್+ಓರೆನೋಟದ +ಬಳ್ಳಿ +ಬೆಳಗುಗಳ
ಕಡು+ ಬೆಮರ+ ತನು+ಪರಿಮಳದೊಳ್+ ಎಡೆ
ವಿಡದ +ಗಗನ+ಉದರದ +ಗರುವೆಯರ್
ಅಡಸಿದರು +ದ್ರುಪದ್+ಆತ್ಮಜೆಯ +ದಂಡೆಗೆಯ +ಬಳಸಿನಲಿ

ಅಚ್ಚರಿ:
(೧) ಉಡಿಗೆ, ತೊಡಿಗೆ – ಪ್ರಾಸ ಪದ
(೨) ಕಣ್ಣನ್ನು ವರ್ಣಿಸುವ ಬಗೆ – ಓರೆನೋಟದ ಬಳ್ಳಿ ಬೆಳಗುಗಳ
(೩) ಬೆವರು ಸಹ ಸುವಾಸನೆ ಭರಿತವಾಗಿದ್ದವು ಎಂದು ಹೇಳಲು – ಕಡು ಬೆಮರ ತನು ಪರಿಮಳದೊಳೆಡೆವಿಡದ

ನಿಮ್ಮ ಟಿಪ್ಪಣಿ ಬರೆಯಿರಿ