ಪದ್ಯ ೨: ಯಾವ ಅಪಶಕುನಗಳು ಪಾಂಡವರನ್ನು ಎದುರಾದವು?

ಹರಡೆ ಕೆದರಿತು ಬಲದ ಉದಯದ
ಲುರಿಯಲೊದರಿತು ಹಸುಬನೆಡದಲಿ
ಕರಿಯ ಹಕ್ಕಿಯ ತಾರುಹಂಗನ ವಾಮದುಡಿಕೆಗಳ
ನರಿಗಳೊದರಿದವಿದಿರಿನಲಿ ಮೋ
ಹರವ ಮೊಲನಡಹಾಯ್ದವಾನೆಗ
ಳರಚಿ ಕೆಡೆದವು ಮುಗ್ಗಿದವು ರಥವಾಜಿಗಳು ನೃಪರ (ಸಭಾ ಪರ್ವ, ೧೪ ಸಂಧಿ, ೨ ಪದ್ಯ)

ತಾತ್ಪರ್ಯ:
ಪಾಂಡವರ ಪಯಣದಲ್ಲಿ ಅವರಿಗೆ ಹಲವಾರು ಅಪಶಕುನಗಳು ಎದುರಾದವು. ಹಾಲಕ್ಕಿ ಬಲದಲ್ಲೂ, ಹಸುಬವು ಸೂರ್ಯೋದಯದ ಸಮಯಕ್ಕೆ ಉರಿಯಲ್ಲಿ ಚೀರಿಕೊಂಡಿತು. ಕಾಗೆಯು ಎಡಕ್ಕೂ ಹಂಗವು ಬಲಕ್ಕೂ ಹಾರಿದವು. ಸೈನ್ಯದ ಇದಿರಲ್ಲೇ ನರಿಗಳು ಅರಚಿದವು. ಮೊಲಗಳು ಸೈನ್ಯವನ್ನು ತಡೆದವು. ಆನೆಗಳು ಘೀಳಿಟ್ತು ಬಿದ್ದವು. ರಥಕ್ಕೆ ಕಟ್ಟಿದ ಕುದುರೆಗಳು ಮುಗ್ಗುರಿಸಿದವು.

ಅರ್ಥ:
ಹರಡೆ: ಶಕುನದ ಹಕ್ಕಿ, ಹಾಲಕ್ಕಿ; ಕೆದರು: ಹರಡು, ಚದರಿಸು, ಬೆದಕು; ಉದಯ: ಹುಟ್ಟ; ಉರಿ: ಸಂಕಟ; ಒದರು: ಚೀರು; ಹಸುಬ: ಹಾರೀತವೆಂಬ ಹಕ್ಕಿ; ಎಡ: ವಾಮಭಾಗ; ಕರಿಯ ಹಕ್ಕಿ: ಕಾಗೆ; ಹಕ್ಕಿ: ಪಕ್ಷಿ; ವಾಮ: ಎಡ; ಒದರು: ಚೀರು; ಇದಿರು: ಎದುರು; ಮೋಹರ: ಸೈನ್ಯ; ಅಡಹಾಯ್ದು: ಅಡ್ಡ ಹಾಕು; ಆನೆ: ಕರಿ, ಇಭ; ಅರಚು: ಕೂಗು; ಕೆಡೆ: ಬೀಳು; ಮುಗ್ಗು: ಮುಗ್ಗುರಿಸು; ರಥ: ಬಂಡಿ; ವಾಜಿ: ಕುದುರೆ; ನೃಪ: ರಾಜ; ತಾರು: ಒಣಗು, ಗುಂಪು; ಹಂಗ: ಶಕುನದ ಹಕ್ಕಿ;

ಪದವಿಂಗಡಣೆ:
ಹರಡೆ+ ಕೆದರಿತು +ಬಲದ +ಉದಯದಲ್
ಉರಿಯಲ್+ಒದರಿತು +ಹಸುಬನ್+ಎಡದಲಿ
ಕರಿಯ +ಹಕ್ಕಿಯ +ತಾರುಹಂಗನ+ ವಾಮ+ದುಡಿಕೆಗಳ
ನರಿಗಳ್+ಒದರಿದವ್+ಇದಿರಿನಲಿ+ ಮೋ
ಹರವ +ಮೊಲನ್+ಅಡಹಾಯ್ದವ್+ಆನೆಗಳ್
ಅರಚಿ +ಕೆಡೆದವು +ಮುಗ್ಗಿದವು +ರಥ+ವಾಜಿಗಳು +ನೃಪರ

ಅಚ್ಚರಿ:
(೧) ಪಕ್ಷಿಗಳ ಹೆಸರು – ಹರಡೆ, ಹಸುಬ, ಕರಿಯ ಹಕ್ಕಿ, ಹಂಗ
(೨) ಕಾಗೆಯನ್ನು ಕರಿಯ ಹಕ್ಕಿ ಎಂದು ಕರೆದ ಬಗೆ
(೩) ಒದರು, ಅರಚು – ಸಾಮ್ಯಾರ್ಥ ಪದ

ಪದ್ಯ ೧: ಪಾಂಡವರಿಗೆ ಇಭಪುರಿಯಲ್ಲಿ ಏನು ಕಾದಿತ್ತು?

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡವ ನೃಪರನರಮನೆ
ಬೀಳುಗೊಂಡುದು ವಿಳಸದಿಂದ್ರಪ್ರಸ್ಥ ಪುರಸಹಿತ
ಮೇಲೆ ನೆಗಳುವ ದುರ್ನಿಮಿತ್ತವ
ನಾಲಿಸಿದರೇ ದೈವದೋಷ ನಿ
ಮೀಲಿತಾಂತಃಕರಣ ಹತರೈತಂದರಿಭಪುರಿಗೆ (ಸಭಾ ಪರ್ವ, ೧೪ ಸಂಧಿ, ೧ ಪದ್ಯ)

ತಾತ್ಪರ್ಯ:
ಇಂದ್ರಪ್ರಸ್ಥದ ಅರಮನೆಯು ವೈಭವಯುತವಾದ ನಗರದೊಂದಿಗೆ ಪಾಂಡವರನ್ನು ಕಳುಹಿಸಿಕೊಟ್ಟಿತು. ಮುಂದೆ ಅನೇಕ ದುಶ್ಶಕುನಗಳನ್ನು ಕಂಡೂ ಕಂಡೂ ದೈವ ದೋಷವು ಅವರ ಮನಸ್ಸನ್ನು ಮುಚ್ಚಿ ಬಿಟ್ಟಿತು. ಮುಂದಾಗುವ ಅನಾಹುತವನ್ನು ಅವರು ಊಹಿಸದಂತೆ ಮಾಡಿತು. ಪಾಂಡವರು ಹಸ್ತಿನಾಪುರಕ್ಕೆ ಬಂದರು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಪಾಲ; ಒಡೆಯ, ರಕ್ಷಿಸುವ; ನೃಪ: ರಾಜ; ಅರಮನೆ: ರಾಜರ ವಾಸಸ್ಥಾನ; ಬೀಳುಕೊಡು: ತೆರಳು; ವಿಳಸ: ವೈಭವ; ಪುರ: ಊರು; ಸಹಿತ: ಜೊತೆ; ಮೇಲೆ:ಮುಂದೆ; ನೆಗಳು: ಉಂಟಾಗು; ದುರ್ನಿಮಿತ್ತ: ಕೆಟ್ಟ ಶಕುನ; ಆಲಿಸು: ಕೇಳು; ದೈವ: ಭಗವಂತ; ದೋಷ: ತೊಡಕು; ನಿಮೀಲಿತ: ರೆಪ್ಪೆ ಮುಚ್ಚಿದ; ಅಂತಃಕರಣ: ಮನಸ್ಸು; ಹತ: ನಾಶವಾದ, ಭಂಗವಾದ; ಐತರು: ಬಂದು ಸೇರು; ಇಭಪುರಿ: ಹಸ್ತಿನಾಪುರ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಪಾಂಡವ +ನೃಪರನ್+ಅರಮನೆ
ಬೀಳುಗೊಂಡುದು +ವಿಳಸದ್+ಇಂದ್ರಪ್ರಸ್ಥ +ಪುರಸಹಿತ
ಮೇಲೆ +ನೆಗಳುವ +ದುರ್ನಿಮಿತ್ತವನ್
ಆಲಿಸಿದರೇ +ದೈವದೋಷ+ ನಿ
ಮೀಲಿತ+ಅಂತಃಕರಣ+ ಹತರ್+ಐತಂದರ್+ಇಭಪುರಿಗೆ

ಅಚ್ಚರಿ:
(೧) ಧರಿತ್ರೀಪಾಲ, ನೃಪ – ಸಮನಾರ್ಥಕ ಪದ
(೨) ಅರಮನೆ ಬೀಳುಗೊಂಡುದು ವಿಳಸದಿಂದ್ರಪ್ರಸ್ಥ ಪುರಸಹಿತ ಎಂದು ಹೇಳುವ ಮೂಲಕ ಮುಂದೆ ಬರುವ ಕಷ್ಟಗಳ ಸೂಕ್ಷ್ಮ ಪರಿಚಯ ಮಾಡಿದ್ದಾರೆ

ಪದ್ಯ ೧೦೧: ಧರ್ಮರಾಯನು ಹಸ್ತಿನಾಪುರವನ್ನು ಹೇಗೆ ಸೇರಿದನು?

ಭೂರಿ ಭೇರೀ ವಾದ್ಯರವ ಕೈ
ವಾರಿಗಳ ಕಳಕಳದೊಳಡಗಿತು
ನಾರಿಯರ ನೇವುರದ ಮೊಳಗಿನೊಳದ್ದುದಾ ರಭಸ
ಆರು ಹೊಗಳುವರಾ ವಿಭವ ವಿ
ಸ್ತಾರ ಪಣವನು ಪಯಣಗತಿಯೈ
ಭೂರಮಣನೈತಂದು ಹೊಕ್ಕನು ಹಸ್ತಿನಾಪುರವ (ಸಭಾ ಪರ್ವ, ೧೩ ಸಂಧಿ, ೧೦೧ ಪದ್ಯ)

ತಾತ್ಪರ್ಯ:
ಭೇರಿಗಳ ಅಬ್ಬರ, ದೂತರ ಭಟರ ಪರಾಕುಗಳಲ್ಲಿ ಅಡಗಿತು. ಆ ಸದ್ದು ಸ್ತ್ರೀಯರ ಕಾಲಂದುಗೆಗಳ ಸದ್ದಿನಲ್ಲಿ ಅಡಗಿತು. ಧರ್ಮನಂದನದ ಪ್ರಯಾಣದ ವಿಭವವನ್ನು ಹೊಗಳಲು ಯಾರಿಗೆ ಸಾಧ್ಯ? ಪಯಣದ ಮೇಲೆ ಪಯಣವನ್ನು ಮಾಡುತ್ತಾ ಧರ್ಮಜನು ಹಸ್ತಿನಾಪುರವನ್ನು ಪ್ರವೇಶಿಸಿದನು.

ಅರ್ಥ:
ಭೂರಿ: ಹೆಚ್ಚು, ಅಧಿಕ; ಭೇರಿ: ನಗಾರಿ, ದುಂದುಭಿ; ವಾದ್ಯ: ಸಂಗೀತದ ಸಾಧನ; ರವ: ಶಬ್ದ; ಕೈವಾರಿ: ಹೊಗಳು ಭಟ್ಟ, ಸ್ತುತಿಪಾಠಕ; ಕಳಕಳ: ವ್ಯಥೆ; ಅಡಗು: ಅವಿತುಕೊಳ್ಳು; ನಾರಿ: ಹೆಣ್ಣು; ನೇವುರ: ಅಂದುಗೆ, ನೂಪುರ; ಮೊಳಗು: ಧ್ವನಿ, ಸದ್ದು; ಅದ್ದು: ಮುಳುಗಿಸು; ರಭಸ: ವೇಗ; ಹೊಗಳು: ಸ್ತುತಿ, ಕೊಂಡಾಟ; ವಿಭವ: ಸಿರಿ, ಸಂಪತ್ತು; ವಿಸ್ತಾರ: ವಿಶಾಲ; ಪಣವ: ಹವಣ; ಸುಲಭ; ಪಯಣ: ಪ್ರಯಾನ; ಗತಿ: ವೇಗ; ಭೂರಮಣ: ರಾಜ; ಐತರು: ಬಂದು ಸೇರು; ಹೊಕ್ಕು: ಸೇರು;

ಪದವಿಂಗಡಣೆ:
ಭೂರಿ+ ಭೇರೀ ವಾದ್ಯ+ರವ+ ಕೈ
ವಾರಿಗಳ+ ಕಳಕಳದೊಳ್+ಅಡಗಿತು
ನಾರಿಯರ+ ನೇವುರದ+ ಮೊಳಗಿನೊಳ್+ಅದ್ದುದಾ +ರಭಸ
ಆರು+ ಹೊಗಳುವರಾ +ವಿಭವ +ವಿ
ಸ್ತಾರ+ ಪಣವನು +ಪಯಣ+ಗತಿಯೈ
ಭೂರಮಣನ್+ಐತಂದು +ಹೊಕ್ಕನು +ಹಸ್ತಿನಾಪುರವ

ಅಚ್ಚರಿ:
(೧) ಕೈವಾರಿ, ನಾರಿ – ಪ್ರಾಸ ಪದ
(೨) ಯಾವ ಶಬ್ದ ಪ್ರಮುಖವಾಗಿತ್ತು ಎಂದು ಹೇಳಲು – ಭೂರಿ ಭೇರೀ ವಾದ್ಯರವ ಕೈ
ವಾರಿಗಳ ಕಳಕಳದೊಳಡಗಿತು ನಾರಿಯರ ನೇವುರದ ಮೊಳಗಿನೊಳದ್ದುದಾ ರಭಸ

ಪದ್ಯ ೧೦೦: ದ್ರೌಪದಿಯ ಪಲ್ಲಕ್ಕಿಯ ಸುತ್ತಲು ಯಾರಿದ್ದರು?

ಉಡಿಗೆಗಳ ದೇಸಿಯ ವಿಳಾಸದ
ತೊಡಿಗೆಗಳ ಮೌಳಿಯ ನವಾಯಿಯ
ಮುಡಿಗಳೆಡಬಲದೋರೆನೋಟದ ಬಳ್ಳಿ ಬೆಳಗುಗಳ
ಕಡು ಬೆಮರ ತನುಪರಿಮಳದೊಳೆಡೆ
ವಿಡದ ಗಗನೋದರದ ಗರುವೆಯ
ರಡಸಿದರು ದ್ರುಪದಾತ್ಮಜೆಯ ದಂಡೆಗೆಯ ಬಳಸಿನಲಿ (ಸಭಾ ಪರ್ವ, ೧೩ ಸಂಧಿ, ೧೦೦ ಪದ್ಯ)

ತಾತ್ಪರ್ಯ:
ಚೆಲುವಾದ ದೇಸಿಯ ಬಟ್ಟೆಗಳನ್ನು ಧರಿಸಿ, ವಿಲಾಸಪೂರ್ಣ ಆಭರಣಗಳನ್ನು ತೊಟ್ಟು; ನೂತನ ರೀತಿಯ ಕೇಶವಿನ್ಯಾಸಗಳನ್ನೂ, ಓರೆ ನೋಟದ ಮಿಂಚಿನ ಬಳ್ಳಿಗಳನ್ನೂ, ಬೆವರಿನ ಪರಿಮಳವನ್ನೂ, ಕೃಶೋದರಗಳನ್ನೂ ಹೊಂದಿದ ಸಖಿಯರು ದ್ರೌಪದಿಯ ಪಲ್ಲಕ್ಕಿಯ ಸುತ್ತಲೂ ಸಂದಣಿಸಿದ್ದರು.

ಅರ್ಥ:
ಉಡಿಗೆ: ಧರಿಸುವ ವಸ್ತ್ರ, ಬಟ್ಟೆ; ದೇಸಿಯ: ಚೆಲುವು, ಜಾನಪದ, ಆಚಾರ; ವಿಳಾಸ: ವಿಹಾರ; ತೊಡಿಗೆ: ಆಭರಣ; ಮೌಳಿ: ಶಿರ; ನವಾಯಿ: ಹೊಸರೀತಿ, ಠೀವಿ; ಮುಡಿ: ತಲೆ; ಎಡಬಲ: ಅಕ್ಕಪಕ್ಕ; ಓರೆ: ಡೊಂಕು; ನೋಟ: ವೀಕ್ಷಣೆ; ಬಳ್ಳಿ: ಲತೆ; ಬೆಳಗು: ಹೊಳಪು, ಕಾಂತಿ; ಕಡು: ಬಹಳ; ಬೆಮರು: ಬೆವರು; ತನು: ದೇಹ; ಪರಿಮಳ: ಸುಗಂಧ; ಎಡವಿಡದೆ: ಬಿಡುವಿಲ್ಲದೆ; ಗಗನೋದರ: ಆಕಾಶವೇ ಹೊಟ್ಟೆಯಾರಿರುವ; ಗರುವ: ಶ್ರೇಷ್ಠ; ಅಡಸು: ಬಿಗಿಯಾಗಿ ಒತ್ತು, ಮುತ್ತು; ಆತ್ಮಜೆ: ಮಗಳು; ದಂಡಿಗೆ: ಪಲ್ಲಕ್ಕಿ; ಬಳಸು: ಆವರಿಸು;

ಪದವಿಂಗಡಣೆ:
ಉಡಿಗೆಗಳ +ದೇಸಿಯ +ವಿಳಾಸದ
ತೊಡಿಗೆಗಳ +ಮೌಳಿಯ +ನವಾಯಿಯ
ಮುಡಿಗಳ್+ಎಡಬಲದ್+ಓರೆನೋಟದ +ಬಳ್ಳಿ +ಬೆಳಗುಗಳ
ಕಡು+ ಬೆಮರ+ ತನು+ಪರಿಮಳದೊಳ್+ ಎಡೆ
ವಿಡದ +ಗಗನ+ಉದರದ +ಗರುವೆಯರ್
ಅಡಸಿದರು +ದ್ರುಪದ್+ಆತ್ಮಜೆಯ +ದಂಡೆಗೆಯ +ಬಳಸಿನಲಿ

ಅಚ್ಚರಿ:
(೧) ಉಡಿಗೆ, ತೊಡಿಗೆ – ಪ್ರಾಸ ಪದ
(೨) ಕಣ್ಣನ್ನು ವರ್ಣಿಸುವ ಬಗೆ – ಓರೆನೋಟದ ಬಳ್ಳಿ ಬೆಳಗುಗಳ
(೩) ಬೆವರು ಸಹ ಸುವಾಸನೆ ಭರಿತವಾಗಿದ್ದವು ಎಂದು ಹೇಳಲು – ಕಡು ಬೆಮರ ತನು ಪರಿಮಳದೊಳೆಡೆವಿಡದ

ಪದ್ಯ ೯೯: ಪಯಣವು ಹೇಗೆ ಸಾಗಿತ್ತು?

ಮುಂದೆ ಮೋಹರ ತೆಗೆದು ನಡೆದುದು
ಸಂದಣಿಸಿ ನಕುಲಾದಿ ಭೂಪರು
ಹಿಂದೆ ಮಣಿಕೇವಣದ ದಡ್ಡಿಯ ಬಿಗಿದ ಬೀಯಗದ
ಗೊಂದಣದ ಹೆಮ್ಮಕ್ಕಳಿದ್ದೆಸೆ
ಯಂದಣದ ಸಂದಣಿಗಳಲಿ ನಡೆ
ತಂದವನಿಬರ ರಾಣಿವಾಸದ ದಂಡಿಗೆಗಳಂದು (ಸಭಾ ಪರ್ವ, ೧೩ ಸಂಧಿ, ೯೯ ಪದ್ಯ)

ತಾತ್ಪರ್ಯ:
ಪಯಣದ ಮುಂದಿನ ಸಾಲಿನಲ್ಲಿ ನಕುಲನೇ ಮೊದಲಾದವರ ಸೈನ್ಯಗಳು ನಡೆದವು. ಪಾಂಡವರ ಮಕ್ಕಳು ಮುಂದೆ ಹೋಗುತ್ತಿದ್ದರು. ಹಿಂಭಾಗದಲ್ಲಿ ರಾಣಿವಾಸದವರ ಪಲ್ಲಕ್ಕಿಗಳು ಎರಡು ಸಾಲಿನಲ್ಲಿ ಬರುತ್ತಿದ್ದವು. ರಾಣಿವಾಸದವರ ಪಲ್ಲಕ್ಕಿಗಳು ಮಣಿ ಖಚಿತವಾಗಿದ್ದು ಅವುಗಳ ಬಾಗಿಲುಗಳನ್ನು ಬೀಗದಿಂದ ಭದ್ರಪಡಿಸಿದ್ದರು.

ಅರ್ಥ:
ಮುಂದೆ: ಮೊದಲು; ಮೋಹರ: ಸೈನ್ಯ, ದಂಡು; ತೆಗೆದು: ಹೊರತಂದು; ನಡೆ: ಚಲಿಸು; ಸಂದಣಿ: ಗುಂಪು, ಸಮೂಹ; ಭೂಪ: ರಾಜ; ಹಿಂದೆ: ಹಿಂಭಾಗದಲ್ಲಿ; ಮಣಿ: ಬೆಲಬಾಳುವ ರತ್ನ; ಕೇವಣ: ತಳ್ಳುವುದು, ನೂಕುವುದು; ಗೊಂದಣ: ಗುಂಪು, ಹಿಂಡು; ಹೆಮ್ಮಕ್ಕಳು: ಹಿರಿಯ ಮಕ್ಕಳು; ಅಂದಣ: ಸುಂದರ; ಸಂದಣಿ: ಗುಂಪು, ಸಮೂಹ; ಅನಿಬರು: ಅಷ್ಟುಜನ; ರಾಣಿ: ಅರಸಿ; ದಂಡಿಗೆ: ಪಲ್ಲಕ್ಕಿ;

ಪದವಿಂಗಡಣೆ:
ಮುಂದೆ +ಮೋಹರ +ತೆಗೆದು +ನಡೆದುದು
ಸಂದಣಿಸಿ +ನಕುಲಾದಿ +ಭೂಪರು
ಹಿಂದೆ +ಮಣಿಕೇವಣದ+ ದಡ್ಡಿಯ +ಬಿಗಿದ +ಬೀಯಗದ
ಗೊಂದಣದ +ಹೆಮ್ಮಕ್ಕಳ್+ಇದ್ದೆಸೆ
ಅಂದಣದ +ಸಂದಣಿಗಳಲಿ+ ನಡೆ
ತಂದವ್+ಅನಿಬರ+ ರಾಣಿವಾಸದ+ ದಂಡಿಗೆಗಳ್+ಅಂದು

ಅಚ್ಚರಿ:
(೧) ಣ ಕಾರದಿಂದ ಕೊನೆಗೊಳ್ಳುವ ಪದಗಳ ಬಳಕೆ – ಗೊಂದಣ, ಅಂದಣ, ಸಂದಣಿ, ಕೇವಣ, ಮಣಿ, ರಾಣಿ