ಪದ್ಯ ೯೮: ಧರ್ಮರಾಯನ ಪ್ರಯಾಣದ ದಿಬ್ಬಣ ಹೇಗಿತ್ತು?

ತಳಿತವಿನನುದಯದಲಿ ತಾರಾ
ವಳಿಗಳದ್ಭುತವೆನಲು ಮುಕ್ತಾ
ವಳಿಯ ಧವಳಚ್ಛತ್ರದೆಡಬಲಕೊಲೆವ ಚೌರಿಗಳ
ಕೆಲಬಲದ ಭೀಮಾರ್ಜುನರ ಗಜ
ದಳದ ಮುಂದೆ ಕುಮಾರವರ್ಗದ
ಸುಳುವುಗಳ ಸೌರಂಭದಲಿ ಹೊರವಂಟನಾ ಭೂಪ (ಸಭಾ ಪರ್ವ, ೧೩ ಸಂಧಿ, ೯೮ ಪದ್ಯ)

ತಾತ್ಪರ್ಯ:
ಬೆಳಗಿನ ಜಾವದಲ್ಲಿ ಆಗತಾನೆ ಹೊರಹೊಮ್ಮುತ್ತಿರುವ ಸೂರ್ಯನ ಕಾಂತಿಯಿಂದ ರಂಜಿಸುವ ಅಂಬಾರಿ, ಮೊಗರಂಬ, ಬಂಗಾರದ ಮಿಣಿಗಳ ಪಕ್ಕದಲ್ಲಿ ಸೂರ್ಯೋದಯ ಸಮಯದಲ್ಲಿ ತಾರಾವಳಿಗಳು ಅದ್ಭುತವಾಗಿ ಮಿನುಗುತ್ತಿವೆ ಎಂಬಂತೆ ಮುತ್ತಿನ ಹಾರ, ಶ್ವೇತಛತ್ರ, ಚಾಮರಗಳು ಅತ್ತಿತ್ತ ಒಲೆಯುತ್ತಿದ್ದವು. ಅಕ್ಕಪಕ್ಕದಲ್ಲಿ ಭೀಮಾರ್ಜುನರ ಗಜದಳಗಳು ಬರುತ್ತಿದ್ದವು. ಮುಂಭಾಗದಲ್ಲಿ ಕುಮಾರವರ್ಗದವರು ಚಲಿಸುತ್ತಿದ್ದರು. ಹೀಗೆ ಧರ್ಮರಾಯನು ಪ್ರಯಾಣವನ್ನು ಆರಂಭಿಸಿದನು.

ಅರ್ಥ:
ತಳಿತ: ಚಿಗುರಿದ; ಇನ: ಸೂರ್ಯ; ಉದಯ: ಹುಟ್ಟುವ; ತಾರಾವಳಿ: ನಕ್ಷತ್ರದ ಸಾಲು; ಅದ್ಭುತ: ವಿಸ್ಮಯವನ್ನುಂಟು ಮಾಡುವ; ಮುಕ್ತಾವಳಿ: ಮುತ್ತಿನ ಸಾಲು; ಧವಳ: ಬಿಳಿ; ಛತ್ರ: ಚಾಮರ; ಎಡಬಲ: ಅಕ್ಕ ಪಕ್ಕ; ಒಲಿ: ಒಪ್ಪು, ಸಮ್ಮತಿಸು; ಚೌರಿ: ಚೌರಿಯ ಕೂದಲು; ಕೆಲಬಲ: ಸ್ವಲ್ಪ ಸೈನ್ಯ; ಗಜ: ಆನೆ; ದಳ: ಸೈನ್ಯ; ಮುಂದೆ: ಎದುರು; ವರ್ಗ: ಗುಂಪು; ಕುಮಾರ: ಮಕ್ಕಳ; ಸುಳುವು: ಗುರುತು, ಕುರುಹು; ಸೌರಂಭ:ಸಂಭ್ರಮ, ಸಡಗರ; ಹೊರವಂಟ: ತೆರಳು; ಭೂಪ: ರಾಜ;

ಪದವಿಂಗಡಣೆ:
ತಳಿತವ್+ಇನನ್+ಉದಯದಲಿ+ ತಾರಾ
ವಳಿಗಳ್+ಅದ್ಭುತವ್+ಎನಲು +ಮುಕ್ತಾ
ವಳಿಯ +ಧವಳ+ಚ್ಛತ್ರದ್+ಎಡಬಲಕ್+ಒಲೆವ +ಚೌರಿಗಳ
ಕೆಲಬಲದ +ಭೀಮಾರ್ಜುನರ +ಗಜ
ದಳದ +ಮುಂದೆ +ಕುಮಾರ+ವರ್ಗದ
ಸುಳುವುಗಳ+ ಸೌರಂಭದಲಿ+ ಹೊರವಂಟನಾ +ಭೂಪ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಳಿತವಿನನುದಯದಲಿ ತಾರಾವಳಿಗಳದ್ಭುತವೆನಲು ಮುಕ್ತಾ
ವಳಿಯ ಧವಳಚ್ಛತ್ರದೆಡಬಲಕೊಲೆವ ಚೌರಿಗಳ
(೨) ಮುಕ್ತಾವಳಿ, ತಾರಾವಳಿ – ಪ್ರಾಸ ಪದ

ಪದ್ಯ ೯೭ : ರಾಜನು ಹೊರಟ ಅಂಬಾರಿ ಹೇಗಿತ್ತು?

ಬಿಗಿದ ರಂಚೆಯ ಹೊಮ್ಮಿಣಿಯ ಹೊರ
ಜೆಗಳ ಜೋಡಿಯ ಪಕ್ಕ ಘಂಟೆಯ
ಝಗೆಯ ಮೊಗರಂಬದ ನವಾಯಿಯ ಮಣಿಯ ಜಲವಟೆಯ
ಬಿಗಿದ ಕೂರಂಕುಶದ ಮಾವಂ
ತಿಗನ ಸನ್ನೆಗೆ ಕುಸಿದ ದಂತಿಯ
ಹೆಗಲ ಹೊಂಗದ್ದುಗೆಗೆ ಬಿಜಯಂಗೈದನಾ ಭೂಪ (ಸಭಾ ಪರ್ವ, ೧೩ ಸಂಧಿ, ೯೭ ಪದ್ಯ)

ತಾತ್ಪರ್ಯ:
ಧರ್ಮರಾಯನನ್ನು ಹೊರುವ ಆನೆ ಅಲಂಕಾರವಾಗಿತ್ತು. ಆನೆಗೆ ರಂಚಿ ದಡಿಯನ್ನು ಜೋಡು ಬಂಗಾರದ ಮಿಣಿಗಳಿಂದ ಕಟ್ಟಿದರು. ಪಕ್ಕದ ಘಂಟೆಗಳನ್ನು ಅಳವಡಿಸಿದರು. ಹೊಳೆಯುವ ಮುಖಾಲಂಕಾರವನ್ನು ಕಟ್ಟಿದರು. ಹೊಸ ಮಣಿಗಳ ಜಲವಟೆಯನ್ನು ಜೋಡಿಸಿದರು. ಮಾಹುತನು ಅಂಕುಶದಿಂದ ತಿವಿದು ಅದನ್ನು ತಗ್ಗಿಸಿದನು. ಆಗ ಯುಧಿಷ್ಠಿರನು ಆನೆಯ ಮೇಲಿನ ಬಂಗಾರದ ಅಂಬಾರಿಗೆ ಹತ್ತಿಕುಳಿತನು.

ಅರ್ಥ:
ಬಿಗಿ: ಕಟ್ಟು, ಬಂಧಿಸು; ಮಿಣಿ: ಚರ್ಮದ ಹಗ್ಗ; ಹೊಮ್ಮಿಣಿ: ಬಂಗಾರದ ಹಗ್ಗ; ಹೊರಜೆ: ದಪ್ಪವಾದ ಹಗ್ಗ, ಸರಪಣಿ; ಜೋಡಿ: ಜೊತೆ; ಪಕ್ಕ: ಬದಿ; ಘಂಟೆ: ಘಣಘಣ ಎಂದು ಶಬ್ದ ಮಾಡುವ ಸಾಧನ; ಝಗೆ: ಕಾಂತಿ, ಪ್ರಕಾಶ; ಮೊಗ:ಮುಖ; ನವಾಯಿ: ಹೊಸರೀತಿ, ಠೀವಿ; ಮಣಿ: ಬೆಲೆಬಾಳುವ ರತ್ನ; ಜಲವಟೆ: ಕಂಠಾಭರಣ; ಬಿಗಿ: ಕಟ್ಟು; ಕೂರಂಕುಶ: ಹರಿತವಾದ ಅಂಕುಶ; ಮಾವಂತಿಗ: ಮಾವುತ, ಆನೆ ಓಡಿಸುವವ; ಸನ್ನೆ: ಸಂಜ್ಞೆ, ಸುಳಿವು; ಕುಸಿ: ಕೆಳಗೆ ಬಾ; ದಂತಿ: ಆನೆ; ಹೆಗಲು: ಭುಜ; ಹೊಂಗದ್ದುಗೆ: ಚಿನ್ನದ ಅಂಬಾರಿ; ಬಿಜಯಂಗೈ: ದಯಮಾಡಿಸು, ಚಲಿಸು; ಭೂಪ: ರಾಜ;

ಪದವಿಂಗಡಣೆ:
ಬಿಗಿದ +ರಂಚೆಯ +ಹೊಮ್ಮಿಣಿಯ+ ಹೊರ
ಜೆಗಳ +ಜೋಡಿಯ +ಪಕ್ಕ +ಘಂಟೆಯ
ಝಗೆಯ +ಮೊಗರಂಬದ+ ನವಾಯಿಯ +ಮಣಿಯ +ಜಲವಟೆಯ
ಬಿಗಿದ +ಕೂರಂಕುಶದ+ ಮಾವಂ
ತಿಗನ+ ಸನ್ನೆಗೆ +ಕುಸಿದ +ದಂತಿಯ
ಹೆಗಲ+ ಹೊಂಗದ್ದುಗೆಗೆ+ ಬಿಜಯಂಗೈದನಾ+ ಭೂಪ

ಅಚ್ಚರಿ:
(೧) ಅಂಬಾರಿ ಎಂದು ಹೇಳಲು – ಹೊಂಗದ್ದುಗೆ
(೨) ಆನೆ ಕೆಳಗೆ ಬಂತು ಎಂದು ಹೇಳಲು – ಕುಸಿದ ದಂತಿಯ

ಪದ್ಯ ೯೬:ಇಂದ್ರಪ್ರಸ್ಥನಗರವನ್ನು ಯಾರ ಸುಪರ್ದಿಗೆ ಬಿಟ್ಟು ಧರ್ಮರಾಯನು ಹೊರಟನು?

ಇರುಳ ನೂಕಿದರುದಯದಲಿ ಭೂ
ಸುರರ ಕರೆಸಿದರಮಳ ಸಾಂವ
ತ್ಸರಿಕ ಸುಮುಹೂರ್ತದಲಿ ಹೊಯಿಸಿದರಂದು ಹೊರಗುಡಿಯ
ಪುರದ ಕಾಹನು ಸಚಿವ ಸಾವಂ
ತರಿಗೆ ನೇಮಿಸಿ ಸಕಲದಳ ಮೋ
ಹರದ ದೆಖ್ಖಾಳವನು ಕಂಡನು ಪುರವ ಹೊರವಂಟ (ಸಭಾ ಪರ್ವ, ೧೩ ಸಂಧಿ, ೯೬ ಪದ್ಯ)

ತಾತ್ಪರ್ಯ:
ಧರ್ಮರಾಯನು ಆ ರಾತ್ರಿಯನ್ನು ಕಳೆದು, ಬೆಳಗಾದ್ ಮೇಲೆ ಬ್ರಾಹ್ಮಣರನ್ನು ಕರೆಸಿ ಪ್ರಯಾಣಮಾಡಲು ಮುಹೂರ್ತವನ್ನು ನಿಶ್ಚಯಿಸಿದರು. ಆ ಮುಹೂರ್ತದಲ್ಲಿ ಹೊರಬೀಡನ್ನು ಬಿಟ್ಟರು ಇಂದ್ರಪ್ರಸ್ಥನಗರವನ್ನು ಕಾಯುವ ಕೆಲಸಕ್ಕೆ ಮಂತ್ರಿಗಳು ಸಾಮಂತರುಗಳನ್ನು ನೇಮಿಸಿ, ತನ್ನ ಬಲವನ್ನು ನೊಡುತ್ತಾ ಊರನ್ನು ಬೀಳ್ಕೊಟ್ಟನು.

ಅರ್ಥ:
ಇರುಳು: ರಾತ್ರಿ; ನೂಕು: ತಳ್ಳು; ಉದಯ: ಹುಟ್ಟು, ಬೆಳಗಾಗು; ಭೂಸುರ: ಬ್ರಾಹ್ಮಣ; ಕರೆಸು: ಬರೆಮಾಡು; ಅಮಳ: ನಿರ್ಮಲ; ಸಾಂವತ್ಸರಿಕ: ಜೋಯಿಸ; ಮುಹೂರ್ತ: ಸಮಯ, ಒಳ್ಳೆಯ ಗಳಿಗೆ; ಹೊಯಿಸು: ಹೊಯ್ಯುವಂತೆ ಮಾಡು, ಸುರಿಸು; ಹೊರಗುಡಿ: ಆಚೆಯ ಬೀಡು; ಪುರ: ಊರು; ಕಾಹು: ರಕ್ಷಣೆ, ಕಾವಲು; ಸಚಿವ: ಮಂತ್ರಿ; ಸಾವಂತ: ಆಶ್ರಿತರಾಜ, ಮಾಂಡಲೀಕ; ನೇಮಿಸು: ಅಪ್ಪಣೆ ಮಾಡು; ಸಕಲ: ಎಲ್ಲಾ; ದಳ: ಸೈನ್ಯ; ಮೋಹರ: ಸೈನ್ಯ, ದಂಡು; ದೆಖ್ಖಾಳ: ಗಲಭೆ, ನೋಟ; ಕಂಡು: ನೋಡು; ಪುರ: ಊರು; ಹೊರವಂಟ: ತೆರಳು;

ಪದವಿಂಗಡಣೆ:
ಇರುಳ +ನೂಕಿದರ್+ಉದಯದಲಿ +ಭೂ
ಸುರರ +ಕರೆಸಿದರ್+ಅಮಳ+ ಸಾಂವ
ತ್ಸರಿಕ+ ಸುಮುಹೂರ್ತದಲಿ+ ಹೊಯಿಸಿದರ್+ಅಂದು +ಹೊರಗುಡಿಯ
ಪುರದ +ಕಾಹನು +ಸಚಿವ +ಸಾವಂ
ತರಿಗೆ+ ನೇಮಿಸಿ+ ಸಕಲ+ದಳ+ ಮೋ
ಹರದ+ ದೆಖ್ಖಾಳವನು +ಕಂಡನು +ಪುರವ +ಹೊರವಂಟ

ಅಚ್ಚರಿ:
(೧) ರಾತ್ರಿಕಳೆದರು ಎಂದು ಹೇಳಲು – ಇರುಳು ನೂಕಿದರು
(೨) ಸಾಂವತ್ಸರಿಕ, ಸಾವಂತರಿಗೆ – ಪದಗಳ ಬಳಕೆ

ಪದ್ಯ ೯೫: ಧರ್ಮರಾಯನ ನಿಶ್ಚಯವೇನು?

ಕರೆಸುವನು ಧೃತರಾಷ್ಟ್ರ ನಮ್ಮನು
ಕರೆವ ಮಣಿಹ ಸುಯೋಧನಾದ್ಯರ
ಮರುಳುಗಳ ಮಾತೇನು ಹಿತವರು ನೀವಲಾ ನನಗೆ
ಧರಣಿಯಿದು ಶಾಶ್ವತವೆ ತಂದೆಗೆ
ಹಿರಿಯನಾ ಧೃತರಾಷ್ಟ್ರನಾಜ್ಞೆಯ
ಶಿರದೊಳಾಂತೆನು ಬಹೆನೆನುತ ನಿಶ್ಚೈಸಿದನು ನೃಪತಿ (ಸಭಾ ಪರ್ವ, ೧೩ ಸಂಧಿ, ೯೫ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರನು ನಮ್ಮನ್ನು ಕರೆಯುತ್ತಿದ್ದಾನೆ, ನಾವು ತಲೆಬಾಗಿ ಅವರ ಕರೆಯನ್ನು ಮನ್ನಿಸೋಣ. ದುರ್ಯೋಧನನೇ ಮೊದಲಾದವರ ಮೂಢರ ಮಾತನ್ನು ನಾವೇಕೆ ಲೆಕ್ಕಿಸಬೇಕು? ನೀವುಗಳು ನನಗೆ ಹಿತೈಶಿಗಳು. ಭೀಮಿಯೊಡೆತನ ಶಾಶ್ವತವಲ್ಲ, ದೊಡ್ಡಪ್ಪನ ಮಾತನ್ನು ತಲೆಯ ಮೇಲೆ ಹೊತ್ತು ಬರುತ್ತೇನೆ ಎಂದು ಯುಧಿಷ್ಠಿರನು ನಿಶ್ಚೈಸಿದನು.

ಅರ್ಥ:
ಕರೆಸು: ಬರೆಮಾಡು; ಮಣಿ: ಬಾಗು; ಆದಿ: ಮುಂತಾದ; ಮರುಳು: ಮೂಢ; ಮಾತು: ವಾಣಿ; ಹಿತ: ಒಳ್ಳೆಯದನ್ನು ಹಾರೈಸುವವನು; ಧರಣಿ: ಭೂಮಿ; ಶಾಶ್ವತ: ನಿತ್ಯವಾದುದು; ಹಿರಿ: ದೊಡ್ಡವ; ಆಜ್ಞೆ: ಅಪ್ಪಣೆ; ಶಿರ: ತಲೆ; ಬಹೆ: ಬರುವೆ; ನಿಶ್ಚೈಸು: ನಿರ್ಧಾರ ಮಾಡು; ತಂದೆ: ಪಿತ;

ಪದವಿಂಗಡಣೆ:
ಕರೆಸುವನು +ಧೃತರಾಷ್ಟ್ರ +ನಮ್ಮನು
ಕರೆವ +ಮಣಿಹ +ಸುಯೋಧನಾದ್ಯರ
ಮರುಳುಗಳ +ಮಾತೇನು +ಹಿತವರು +ನೀವಲಾ+ ನನಗೆ
ಧರಣಿಯಿದು +ಶಾಶ್ವತವೆ ತಂದೆಗೆ
ಹಿರಿಯನಾ+ ಧೃತರಾಷ್ಟ್ರನ್+ಆಜ್ಞೆಯ
ಶಿರದೊಳಾಂತೆನು+ ಬಹೆನೆನುತ+ ನಿಶ್ಚೈಸಿದನು +ನೃಪತಿ

ಪದ್ಯ ೯೪:ಭೀಮನ ಅಭಿಪ್ರಾಯವೇನು?

ಜೀಯ ಬಿನ್ನಹವಿಂದು ದೇಹ
ಚ್ಛಾಯೆಗುಂಟೇ ಬೇರೆ ಚೇಷ್ಟೆನ
ವಾಯಿಯೇ ನಮ್ಮಿನಿಬರಿಗೆ ರಾಜಾಭಿಮಾನದಲಿ
ನೋಯೆ ನೋವುದು ನಿಮ್ಮ ದೇಹದ
ಬೀಯದಲಿ ತಾ ಬೀಯವಹುದೆ
ಮ್ಮಾಯತವು ಸ್ವಾತಂತ್ರ್ಯವೆಮಗಿಲ್ಲೆಂದನಾ ಭೀಮ (ಸಭಾ ಪರ್ವ, ೧೩ ಸಂಧಿ, ೯೪ ಪದ್ಯ)

ತಾತ್ಪರ್ಯ:
ಭೀಮನು ತನ್ನ ಅಭಿಪ್ರಾಯವನ್ನು ಹೇಳುತ್ತಾ, ಒಡೆಯ, ನಮ್ಮ ರಾಜಾಭಿಮಾನವು ಎಂದಿನಂತೆಯೇ ಹೆಚ್ಚಾಗಿದೆ. ದೇಹದಂತೆ ನೆರಳು ಇರುತ್ತದೆಯೇ ಹೊರತು ದೇಹವನ್ನು ಬಿಟ್ಟು ನೆರಳು ಪ್ರತ್ಯೇಕವಾಗಿ ವರ್ತಿಸುವುದಿಲ್ಲ. ನಿಮಗೆ ನೋವಾದರೆ ನಮಗೂ ನೋವು. ನೀವು ಹೋದರೆ ನಾವೂ ಹೋದ ಹಾಗೆಯೇ, ನಮಗೆ ಬೇರೆ ಸ್ವಾತಂತ್ರ್ಯವಿಲ್ಲ ಎಂದು ಹೇಳಿದನು.

ಅರ್ಥ:
ಜೀಯ: ಒಡೆಯ; ಬಿನ್ನಹ: ಕೋರಿಕೆ; ದೇಹ: ತನು; ಛಾಯ: ನೆರಳು; ಬೇರೆ; ಅನ್ಯ; ಚೇಷ್ಟ: ಕಾರ್ಯ, ಚಾಲನೆ; ನವಾಯಿ: ಹೊಸರೀತಿ, ಠೀವಿ; ಇನಿಬರು: ಇಷ್ಟು ಜನ; ಅಭಿಮಾನ: ಹೆಮ್ಮೆ, ಅಹಂಕಾರ; ನೋವು: ಬೇನೆ, ಶೂಲೆ; ಬೀಯ: ವ್ಯಯ, ಹಾಳು; ಆಯತ: ಉಚಿತವಾದ ; ಸ್ವಾತಂತ್ರ್ಯ: ಬಿಡುಗಡೆ;

ಪದವಿಂಗಡಣೆ:
ಜೀಯ+ ಬಿನ್ನಹವಿಂದು+ ದೇಹ
ಚ್ಛಾಯೆಗುಂಟೇ+ ಬೇರೆ+ ಚೇಷ್ಟೆ+ನ
ವಾಯಿಯೇ +ನಮ್ಮ್+ಇನಿಬರಿಗೆ +ರಾಜ+ಅಭಿಮಾನದಲಿ
ನೋಯೆ +ನೋವುದು +ನಿಮ್ಮ +ದೇಹದ
ಬೀಯದಲಿ+ ತಾ +ಬೀಯವಹುದ್
ಎಮ್ಮಾಯತವು+ ಸ್ವಾತಂತ್ರ್ಯವ್+ಎಮಗಿಲ್ಲೆಂದನಾ +ಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ದೇಹಚ್ಛಾಯೆಗುಂಟೇ ಬೇರೆ ಚೇಷ್ಟೆ