ಪದ್ಯ ೯೩: ಧರ್ಮರಾಯನು ತನ್ನ ವಿಚಾರದ ಬಗ್ಗೆ ಯಾರನ್ನು ಕೇಳಿದನು?

ಹೋಹುದೇನಭಿಮತವೆ ಧೂರ್ತ
ವ್ಯೂಹವದು ಭೀಷ್ಮಾದಿ ಹಿರಿಯರು
ಸಾಹಸಿಗರಲ್ಲದೆ ರಹಸ್ಯಕೆ ಸಲ್ಲರವರುಗಳು
ಕಾಹುರರು ಕೌರವರು ಸಮರೋ
ತ್ಸಾಹಶಕ್ತಿಗೆ ಠಾವದಲ್ಲ
ವ್ಯಾಹತವೆ ಮತವೆಂದು ಭೀಮಾದಿಗಳ ಬೆಸಗೊಂಡ (ಸಭಾ ಪರ್ವ, ೧೩ ಸಂಧಿ, ೯೩ ಪದ್ಯ)

ತಾತ್ಪರ್ಯ:
ನಾವೆಲ್ಲರು ಈ ಆಮಂತ್ರಣದ ಮೇರೆಗೆ ಹಸ್ತಿನಾಪುರಕ್ಕೆ ಹೊಗುವುದು ನಿಮಗೆ ಒಪ್ಪಿಗೆಯೇ? ಅದು ಧೂರ್ತರ ಕೂಟ, ಭೀಷ್ಮರೇ ಮೊದಲಾದ ವೀರರೊಂದಿಗೆ ಅವರು ಸಮಾಲೋಚನೆ ಮಾಡಿರುವುದಿಲ್ಲ. ಕೌರವರು ಕೋಪೋದ್ವೇಗದವರು. ಅದು ಯುದ್ಧಮಾಡುವ ಸ್ಥಳವಲ್ಲ. ನನ್ನ ಅಭಿಪ್ರಾಯ ಸರಿಯಿದಿಯೇ? ಎಂದು ಭೀಮನೇ ಮೊದಲಾದವರನ್ನು ಕೇಳಿದನು.

ಅರ್ಥ:
ಹೋಹುದು: ತೆರಳು, ಹೋಗು; ಅಭಿಮತ: ಅಭಿಪ್ರಾಯ, ವಿಆರ; ಧೂರ್ತ: ದುಷ್ಟ; ವ್ಯೂಹ: ಗುಂಪು; ಹಿರಿಯರು: ದೊಡ್ಡವರು; ಸಾಹಸಿ: ಪರಾಕ್ರಮಿ; ರಹಸ್ಯ: ಗುಪ್ತ; ಸಲ್ಲರು: ಸರಿಹೊಂದು, ಅನ್ವಯಿಸು; ಕಾಹುರ: ಆವೇಶ, ಸೊಕ್ಕು, ಕೋಪ; ಸಮರ: ಯುದ್ಧ; ಉತ್ಸಾಹ: ಹುರುಪು; ಶಕ್ತಿ: ಬಲ; ಠಾವ: ಸ್ಥಳ; ಅವ್ಯಾಹತ: ತಡೆಯಿಲ್ಲದ, ಅಖಂಡ; ಮತ: ವಿಚಾರ; ಆದಿ: ಮುಂತಾದ; ಬೆಸಸು: ತಿಳಿಸು;

ಪದವಿಂಗಡಣೆ:
ಹೋಹುದೇನ್+ಅಭಿಮತವೆ+ ಧೂರ್ತ
ವ್ಯೂಹವದು +ಭೀಷ್ಮಾದಿ +ಹಿರಿಯರು
ಸಾಹಸಿಗರಲ್ಲದೆ+ ರಹಸ್ಯಕೆ+ ಸಲ್ಲರ್+ಅವರುಗಳು
ಕಾಹುರರು+ ಕೌರವರು+ ಸಮರೋ
ತ್ಸಾಹ+ಶಕ್ತಿಗೆ+ ಠಾವದಲ್ಲ್
ಅವ್ಯಾಹತವೆ +ಮತವೆಂದು +ಭೀಮಾದಿಗಳ+ ಬೆಸಗೊಂಡ

ಅಚ್ಚರಿ:
(೧) ಕೌರವರನ್ನು ವರ್ಣಿಸುವ ಬಗೆ – ಕಾಹುರರು ಕೌರವರು, ಧೂರ್ತ ವ್ಯೂಹವದು

ಪದ್ಯ ೯೨: ವಿದುರನು ಧರ್ಮರಾಯನಿಗೆ ಯಾರ ಅಭಿಪ್ರಾಯವನ್ನು ಕೇಳಲು ಹೇಳಿದನು?

ಕರೆಸಿ ನಿಮ್ಮಯ ಮಂತ್ರಿಜನ ಮು
ಖ್ಯರ ಪಸಾಯ್ತರ ಕೇಳುವುದು ಮನ
ದೊರೆಗೆ ತೂಕಕೆ ಬಹರೆ ಭೀಮಾದಿಗಳ ಮತವಿಡಿದು
ಅರಸ ನಿಶ್ಚೈಸುವುದೆನಲು ನೀ
ಮರುಳೆ ವಿದುರ ಭವದ್ವಚೋವಿ
ಸ್ತರಕೆ ಪಡಿಸಣವುಂಟೆ ಶಿವ ಶಿವಯೆಂದನಾ ಭೂಪ (ಸಭಾ ಪರ್ವ, ೧೩ ಸಂಧಿ, ೯೨ ಪದ್ಯ)

ತಾತ್ಪರ್ಯ:
ಯುಧಿಷ್ಠಿರ ನಿಮ್ಮಯ ಮಂತ್ರಿವರ್ಗದವರನ್ನು, ಸಾಮಂತರಾಜರು, ಕರೆದು ನಿನ್ನ ವಿಚಾರವು ಅವರೊಂದಿಗೆ ಒಂದಾದರೆ, ನಿನ್ನ ಅನುಜರಾದ ಭೀಮಾದಿಯರ ಅಭಿಪ್ರಾಯದಂತೆ ನಿಶ್ಚಯಿಸು ಎಂದು ವಿದುರನು ತಿಳಿಸಿದನು. ಅದಕ್ಕೆ ಧರ್ಮರಾಯನು ವಿದುರ ಇದೇನು ಮೂರ್ಖತನ, ನಿನ್ನ ಮಾತನ್ನು ಪರೀಕ್ಷೆ ಮಾಡುವುದುಂಟೆ ಶಿವ ಶಿವಾ ಎಂದನು.

ಅರ್ಥ:
ಕರೆಸು: ಬರೆಮಾಡು; ಮಂತ್ರಿ: ಸಚಿವ; ಮುಖ್ಯ: ಪ್ರಮುಖರು; ಪಸಾಯ್ತ: ಸಾಮಂತರಾಜ; ಕೇಳು: ಆಲಿಸು; ಮನ: ಮನಸ್ಸು; ಒರೆ: ಪರೀಕ್ಷೆಸುವ ಕಲ್ಲು; ತೂಕ: ಭಾರ, ಗುರುತ್ವ; ಬಹರೆ: ಬರುವರೆ; ಆದಿ: ಮುಂತಾದ; ಮತ: ವಿಚಾರ; ಅರಸ: ರಾಜ; ನಿಶ್ಚೈಸು: ನಿರ್ಣಯ; ಮರುಳು: ಬುದ್ಧಿಭ್ರಮೆ, ಹುಚ್ಚು; ಭವದ್: ನಿಮ್ಮ; ವಚೋವಿಸ್ತರ: ಮಾತಿನ ವಿಸ್ತಾರ; ಪಡಿಸಣ: ಪರೀಕ್ಷೆ,ಪರಿಶೀಲನೆ; ಭೂಪ: ರಾಜ;

ಪದವಿಂಗಡಣೆ:
ಕರೆಸಿ +ನಿಮ್ಮಯ +ಮಂತ್ರಿಜನ+ ಮು
ಖ್ಯರ +ಪಸಾಯ್ತರ +ಕೇಳುವುದು +ಮನದ್
ಒರೆಗೆ +ತೂಕಕೆ+ ಬಹರೆ +ಭೀಮಾದಿಗಳ +ಮತವಿಡಿದು
ಅರಸ+ ನಿಶ್ಚೈಸುವುದ್+ಎನಲು +ನೀ+
ಮರುಳೆ+ ವಿದುರ+ ಭವದ್+ವಚೋವಿ
ಸ್ತರಕೆ +ಪಡಿಸಣವುಂಟೆ +ಶಿವ ಶಿವ+ಎಂದನಾ +ಭೂಪ

ಅಚ್ಚರಿ:
(೧) ವಿದುರನ ಮೇಲಿನ ವಿಶ್ವಾಸ – ಭವದ್ವಚೋವಿಸ್ತರಕೆ ಪಡಿಸಣವುಂಟೆ ಶಿವ ಶಿವಯೆಂದನಾ ಭೂಪ

ಪದ್ಯ ೯೧: ಯಾರನ್ನು ನಂಬಿ ಬರುವೆವು ಎಂದು ಧರ್ಮರಾಯನು ತಿಳಿಸಿದನು?

ಪ್ರಕಟವದು ಸಲೆ ಕರ್ಣ ಕೌರವ
ಶಕುನಿಗಳ ದುಶ್ಚೇಷ್ಟೆ ಭೀಷ್ಮಾ
ದ್ಯಕುಟಿಲರು ಸಲ್ಲರು ಸುಯೋಧನ ಮಂತ್ರಸಂಗತಿಗೆ
ಮುಕುರಪಥವೆಮ್ಮಯ್ಯನೆಂಬುದು
ವಿಕಳವಲ್ಲಲೆ ವಿದುರ ಪರಿಪಾ
ಲಕನಲೇ ಧೃತರಾಷ್ಟ್ರನಾತನ ನಂಬಿ ಬಹೆವೆಂದ (ಸಭಾ ಪರ್ವ, ೧೩ ಸಂಧಿ, ೯೧ ಪದ್ಯ)

ತಾತ್ಪರ್ಯ:
ಕರ್ಣ, ಶಕುನಿ, ಕೌರವರು ಅತೀವ ದುಷ್ಟಮಾರ್ಗದಲ್ಲಿ ನಡೆವವರೆಂದು ಎಲ್ಲರಿಗೂ ತಿಳಿದ ವಿಚಾರವೆ. ಭೀಷ್ಮನೇ ಮೊದಲಾದವರು ಕುಟಿಲವನ್ನರಿಯದವರು, ದುರ್ಯೋಧನನ ಮಂತ್ರಾಲೋಚನೆಗೆ ದೂರವಿರುವವರು. ನಮ್ಮ ದೊಡ್ಡಪ್ಪ ಅವರ ಮಕ್ಕಳ ಕನ್ನಡಿಯಂತೆ ಎನ್ನುವುದೂ ತಪ್ಪಲ್ಲ. ಆದರೆ ಧೃತರಾಷ್ಟ್ರನು ನಮ್ಮನ್ನು ರಕ್ಷಿಸುವನಾದುದರಿಂದ ಅವನನ್ನು ನಂಬಿ ಬರುತ್ತೇವೆ ಎಂದು ಯುಧಿಷ್ಠಿರನು ವಿದುರನಿಗೆ ತಿಳಿಸಿದನು.

ಅರ್ಥ:
ಪ್ರಕಟ: ಸ್ಪಷ್ಟವಾದುದು; ಸಲೆ: ಲೇಸಾಗಿ, ಪೂರ್ಣ; ದುಶ್ಚೇಷ್ಟೆ: ಕೆಟ್ಟ ವ್ಯಸನ; ಕುಟಿಲ: ಮೋಸ; ಸಲ್ಲು: ತಕ್ಕುದಾಗಿರು; ಮಂತ್ರ: ವಿಚಾರ; ಸಂಗತಿ: ಸೇರುವಿಕೆ, ಸಹವಾಸ; ಮುಕುರ: ಕನ್ನಡಿ; ಪಥ: ಮಾರ್ಗ; ಅಯ್ಯ: ತಂದೆ; ವಿಕಳ: ಭ್ರಮೆ, ಭ್ರಾಂತಿ; ಪರಿಪಾಲಕ: ರಕ್ಷಿಸುವ, ಕಾಪಾಡುವ; ನಂಬು: ವಿಶ್ವಾಸ; ಬಹೆ: ಬರುವೆ;

ಪದವಿಂಗಡಣೆ:
ಪ್ರಕಟವದು +ಸಲೆ +ಕರ್ಣ +ಕೌರವ
ಶಕುನಿಗಳ +ದುಶ್ಚೇಷ್ಟೆ+ ಭೀಷ್ಮ
ಆದಿ+ಕುಟಿಲರು +ಸಲ್ಲರು +ಸುಯೋಧನ+ ಮಂತ್ರ+ಸಂಗತಿಗೆ
ಮುಕುರ+ಪಥವ್+ಎಮ್ಮ್+ಅಯ್ಯನ್+ಎಂಬುದು
ವಿಕಳವಲ್ಲಲೆ+ ವಿದುರ+ ಪರಿಪಾ
ಲಕನಲೇ +ಧೃತರಾಷ್ಟ್ರನ್+ಆತನ +ನಂಬಿ +ಬಹೆವೆಂದ

ಅಚ್ಚರಿ:
(೧) ಧರ್ಮರಾಯನು ನಂಬಿದ ಸಂಗತಿ – ಪರಿಪಾಲಕನಲೇ ಧೃತರಾಷ್ಟ್ರನಾತನ ನಂಬಿ ಬಹೆವೆಂದ

ಪದ್ಯ ೯೦: ಕೌರವರ ಬಗ್ಗೆ ವಿದುರನು ಏನು ಹೇಳಿದ?

ಖಳರು ಕೌರವರಕ್ಷಧೂರ್ತರ
ತಿಲಕ ಶಕುನಿ ವಿಕಾರಿಯಾದು
ಶ್ಶಳೆಯ ಪತಿ ದೌರ್ಜನ್ಯ ಮಖದೀಕ್ಷಿತನು ಕಲಿಕರ್ಣ
ಉಳಿದ ಭೀಷ್ಮದ್ರೋಣರೇ ನಿ
ಷ್ಫಲ ವಿಧಾನರು ನಿಮ್ಮ ಬೊಪ್ಪನ
ಬಳಕೆ ಕನ್ನಡಿ ನೋಡಿಕೊಳಿ ನೀವೆಂದನಾ ವಿದುರ (ಸಭಾ ಪರ್ವ, ೧೩ ಸಂಧಿ, ೯೦ ಪದ್ಯ)

ತಾತ್ಪರ್ಯ:
ಕೌರವರು ಮಹಾದುಷ್ಟರು, ದಾಳದಿಂದ ವಂಚಿಸಿ ಪಗಡೆಯಾಟವನ್ನು ಗೆಲ್ಲುವ ಧೂರ್ತರ ಗುರು ಶಕುನಿ, ಕೌರವನ ತಂಗಿ ದುಶ್ಶಳೆಯ ಗಂಡ ಜಯದ್ರಥ ಕೆಟ್ಟವ, ಕರ್ಣನು ದೌರ್ಜನ್ಯಯಜ್ಞದಲ್ಲಿ ದೀಕ್ಷೆ ಪಡೆದವನು, ಭೀಷ್ಮ ದ್ರೋಣರ ವಿಧಾನಗಳಿಗೆ ಫಲ ದೊರಕುವುದಿಲ್ಲ. ನಿಮ್ಮ ದೊಡ್ಡಪ್ಪ ಕನ್ನಡಿಯಂತೆ, ಮಕ್ಕಳ ಅಭಿಪ್ರಾಯವನ್ನು ಪ್ರತಿಬಿಂಬಿಸುತ್ತಾನೆ. ಇದನ್ನು ನೋಡಿಕೊಂಡು ಆಲೋಚಿಸಿ, ತೀರ್ಮಾನಿಸಿ ಎಂದು ವಿದುರನು ಹೇಳಿದನು.

ಅರ್ಥ:
ಖಳ: ದುಷ್ಟ; ಅಕ್ಷ: ಪಗಡೆ ಆಟದ ದಾಳ; ಧೂರ್ತ: ದುರುಳ, ದುಷ್ಟ; ತಿಲಕ: ಶ್ರೇಷ್ಠ; ವಿಕಾರ: ರೂಪಾಂತರ; ಪತಿ: ಗಂಡ; ದೌರ್ಜನ್ಯ: ದುಷ್ಟತನ; ಮಖ: ಯಜ್ಞ; ದೀಕ್ಷಿತ: ದೀಕ್ಷೆ ಪಡೆದವ; ದೀಕ್ಷೆ: ಸಂಸ್ಕಾರ; ಉಳಿದ: ಮಿಕ್ಕ; ನಿಷ್ಫಲ: ಪ್ರಯೋಜನವಿಲ್ಲದ; ವಿಧಾನ: ನಿಯಮ, ಕಟ್ಟಳೆ; ಬೊಪ್ಪ: ತಂದೆ; ಬಳಕೆ: ಉಪಯೋಗ; ಕನ್ನಡಿ: ಮುಕುರ; ನೋಡು: ವೀಕ್ಷಿಸು;

ಪದವಿಂಗಡಣೆ:
ಖಳರು+ ಕೌರವರ್+ಅಕ್ಷ+ಧೂರ್ತರ
ತಿಲಕ+ ಶಕುನಿ+ ವಿಕಾರಿ+ಆ+ದು
ಶ್ಶಳೆಯ +ಪತಿ +ದೌರ್ಜನ್ಯ +ಮಖದೀಕ್ಷಿತನು+ ಕಲಿಕರ್ಣ
ಉಳಿದ +ಭೀಷ್ಮ+ದ್ರೋಣರೇ+ ನಿ
ಷ್ಫಲ +ವಿಧಾನರು +ನಿಮ್ಮ +ಬೊಪ್ಪನ
ಬಳಕೆ +ಕನ್ನಡಿ +ನೋಡಿಕೊಳಿ+ ನೀವೆಂದನಾ +ವಿದುರ

ಅಚ್ಚರಿ:
(೧) ಶಕುನಿಯನ್ನು ಕರೆದ ಬಗೆ – ಅಕ್ಷಧೂರ್ತರ ತಿಲಕ ಶಕುನಿ
(೨) ಕರ್ಣನನ್ನು ಕರೆದ ಬಗೆ – ದೌರ್ಜನ್ಯ ಮಖದೀಕ್ಷಿತನು ಕಲಿಕರ್ಣ
(೩) ದ್ರೋಣ ಭೀಷ್ಮರು – ಭೀಷ್ಮದ್ರೋಣರೇ ನಿಷ್ಫಲ ವಿಧಾನರು

ಪದ್ಯ ೮೯: ಯಾವುದು ಸಪ್ತವ್ಯಸನಗಳು?

ದ್ಯೂತ ಮೃಗಯಾವ್ಯಸನ ಪಾರು
ಷ್ಯಾತಿಶಯ ಮಧುಪಾನ ಕಾಂತಾ
ಪ್ರೀತಿ ದಂಡವಿಘಾತಿ ದೂಷಣವರ್ಥಸಂಗತಿಯು
ಜಾತ ಸಪ್ತವ್ಯಸನವಿವು ಸಂ
ಪ್ರೀತಿಕರ ಮೊದಲಲಿ ವಿಷಾಕದೊ
ಳಾತು ಕೆಡಿಸುವ ಹದನನರಿದಿಹುದೆಂದನಾ ವಿದುರ (ಸಭಾ ಪರ್ವ, ೧೩ ಸಂಧಿ, ೮೯ ಪದ್ಯ)

ತಾತ್ಪರ್ಯ:
ಧರ್ಮರಾಯನು ದ್ಯೂತಕ್ಕೆ ಒಪ್ಪಿಕೊಂಡೆ ಎಂದು ಹೇಳಿದ ಬಳಿಕ ವಿದುರನು ತನ್ನ ನೀತಿ ವಚನವನ್ನು ಹೇಳುತ್ತಾ, ಜೂಜು, ಬೇಟೆ, ಮಾತಿನಲ್ಲಿ ಅತಿಕ್ರೂರತೆ, ಮದ್ಯಪಾನ, ಸ್ತ್ರೀಲೋಲುಪತೆ, ಶಿಕ್ಷೆಕೊಡುವುದರಲ್ಲಿ ಕ್ರೌರ್ಯ, ಧನ ವ್ಯಯದಲ್ಲಿ ತಪ್ಪೆಸಗುವಿಕೆ ಇವು ಏಳು ದುರಭ್ಯಾಸಗಳು ಮೊದಮೊದಲಲ್ಲಿ ಪ್ರೀತಿಯನ್ನುಂಟುಮಾಡುತ್ತವೆ. ಹದ ತಪ್ಪಿದರೆ ವಿರೋಧವಾಗಿ ನಿಂತು ಕೆಡಿಸುತ್ತವೆ. ಈ ವಿಷಯವನ್ನು ರಾಜನು ಅರಿತಿರಬೇಕು ಎಂದು ವಿದುರನು ತಿಳಿಸಿದನು.

ಅರ್ಥ:
ದ್ಯೂತ: ಜೂಜು; ಮೃಗ: ಪ್ರಾಣಿ; ಪಾರುಷ್ಯ: ಪೌರುಷ, ಕ್ರೂರತೆ; ಅತಿಶಯ: ಹೆಚ್ಚಳ; ಮಧುಪಾನ: ಮದ್ಯಪಾನ; ಕಾಂತ: ಹೆಣ್ಣು; ಪ್ರೀತಿ: ಒಲವು; ದಂಡ: ಶಿಕ್ಷೆ; ವಿಘಾತ: ನಾಶ, ಧ್ವಂಸ; ದೂಷಣ: ತಪ್ಪು; ಅರ್ಥ: ಸಂಪತ್ತು; ಸಂಗತಿ: ವಿಚಾರ; ಜಾತ: ಹುಟ್ಟು; ಸಪ್ತ: ಏಳು; ವ್ಯಸನ: ಅಭ್ಯಾಸ; ಸಂಪ್ರೀತಿ: ಅತಿಶಯವಾದ ಪ್ರೀತಿ, ಒಲವು; ಮೊದಲು: ಆದಿ; ವಿಷ: ನಂಜು; ಆತು: ಹೊಂದಿಕೊಂಡು; ಕೆಡಿಸು: ಹಾಳುಮಾಡು; ಹದ: ಸರಿಯಾದ ಸ್ಥಿತಿ; ಅರಿ: ತಿಳಿ;

ಪದವಿಂಗಡಣೆ:
ದ್ಯೂತ +ಮೃಗಯಾವ್ಯಸನ+ ಪಾರು
ಷ್ಯ+ಅತಿಶಯ +ಮಧುಪಾನ +ಕಾಂತಾ
ಪ್ರೀತಿ +ದಂಡವಿಘಾತಿ+ ದೂಷಣವ್+ಅರ್ಥ+ಸಂಗತಿಯು
ಜಾತ+ ಸಪ್ತವ್ಯಸನವ್+ಇವು +ಸಂ
ಪ್ರೀತಿಕರ +ಮೊದಲಲಿ +ವಿಷಾಕದೊಳ್
ಆತು +ಕೆಡಿಸುವ +ಹದನನ್+ಅರಿದ್+ಇಹುದೆಂದನಾ +ವಿದುರ

ಅಚ್ಚರಿ:
(೧) ಸಪ್ತವ್ಯಸನಗಳನ್ನು ತಿಳಿಸುವ ಪದ್ಯ
(೨) ಸಪ್ತವ್ಯಸನಗಳ ಪರಿಣಾಮ – ಸಪ್ತವ್ಯಸನವಿವು ಸಂಪ್ರೀತಿಕರ ಮೊದಲಲಿ ವಿಷಾಕದೊ
ಳಾತು ಕೆಡಿಸುವ ಹದ