ಪದ್ಯ ೮೮: ಧರ್ಮರಾಯನು ವಿದುರನಿಗೆ ಏನುತ್ತರವನ್ನಿತ್ತನು?

ಕರೆಸುವನು ಧೃತರಾಷ್ಟ್ರಗಡ ನ
ಮ್ಮರಸನಲಿ ಧೃತರಾಷ್ಟ್ರನಲಿ ನಮ
ಗೆರಡು ಮನವೇ ಭಾವ ಭೇದವೆ ಪಾಂಡು ಬೊಪ್ಪನಲಿ
ವರವೆ ದೊರಕಲಿ ಶಾಪವೇ ಮೇ
ಣ್ಬರಲಿ ಭಯವಿಲ್ಲೆಮಗೆ ಬೊಪ್ಪನ
ಕರಣ ಕೃತಿಗೆ ಹಸಾದವೆಂದನು ಧರ್ಮನಂದನನು (ಸಭಾ ಪರ್ವ, ೧೩ ಸಂಧಿ, ೮೮ ಪದ್ಯ)

ತಾತ್ಪರ್ಯ:
ವಿದುರನ ಮಾತಿಗೆ ಧರ್ಮರಾಯನು, ಕರೆಯುತ್ತಿರುವವನು ಧೃತರಾಷ್ಟ್ರ ನಮ್ಮ ದೊಡ್ಡಪ್ಪ, ಅವರಲ್ಲಿ ನಮ್ಮ ತಂದೆ ಪಾಂಡುವಿನಲ್ಲಿ ನಮಗೆ ಭೇದವಿಲ್ಲ. ನಾವು ಹೋಗುವುದರಿಂದ ನಮಗೆ ವರ ಸಿಕ್ಕರೂ ಶಾಪ ಸಿಕ್ಕರೂ ನಮಗೆ ಭಯವಿಲ್ಲ. ದೊಡ್ಡಪ್ಪನ ಮನಸ್ಸಿನ ಸಂಕಲ್ಪಕ್ಕೆ ನಾವು ಬದ್ಧರು ಅವರ ಆಜ್ಞೆಯೇ ನಮಗೆ ಪ್ರಸಾದ ಎಂದು ಧರ್ಮರಾಯನು ತಿಳಿಸಿದನು.

ಅರ್ಥ:
ಕರೆಸು: ಬರೆಮಾಡು; ಗಡ: ಅಲ್ಲವೆ; ಅರಸ: ರಾಜ, ತಂದೆ; ಎರಡು: ದ್ವಂದ್ವ, ಭೇದ; ಮನ: ಮನಸ್ಸು; ಭಾವ: ಭಾವನೆ, ಚಿತ್ತವೃತ್ತಿ; ಭೇದ: ಮುರಿ, ಸೀಳು; ಬೊಪ್ಪ: ತಂದೆ; ವರ: ಅನುಗ್ರಹ; ದೊರಕು: ಸಿಕ್ಕು; ಶಾಪ: ನಿಷ್ಠುರದ ನುಡಿ; ಮೇಣ್: ಅಥವಾ; ಭಯ: ಅಂಜಿಕೆ; ಕರಣ: ಕಿವಿ, ಮನಸ್ಸು; ಕೃತಿ: ಕೆಲಸ; ಹಸಾದ: ಪ್ರಸಾದ, ಅನುಗ್ರಹ; ನಂದನ: ಮಗ;

ಪದವಿಂಗಡಣೆ:
ಕರೆಸುವನು +ಧೃತರಾಷ್ಟ್ರ+ಗಡ+ ನಮ್ಮ್
ಅರಸನಲಿ+ ಧೃತರಾಷ್ಟ್ರನಲಿ+ ನಮಗ್
ಎರಡು +ಮನವೇ +ಭಾವ +ಭೇದವೆ+ ಪಾಂಡು +ಬೊಪ್ಪನಲಿ
ವರವೆ +ದೊರಕಲಿ +ಶಾಪವೇ+ ಮೇಣ್
ಬರಲಿ+ ಭಯವಿಲ್+ಎಮಗೆ +ಬೊಪ್ಪನ
ಕರಣ +ಕೃತಿಗೆ +ಹಸಾದವೆಂದನು +ಧರ್ಮನಂದನನು

ಅಚ್ಚರಿ:
(೧) ಧರ್ಮರಾಯನ ದಿಟ್ಟನುಡಿ: ವರವೆ ದೊರಕಲಿ ಶಾಪವೇ ಮೇಣ್ಬರಲಿ ಭಯವಿಲ್ಲೆಮಗೆ
(೨) ಧರ್ಮರಾಯನ ನಿರ್ಮಲ ಮನಸ್ಸು – ನಮ್ಮರಸನಲಿ ಧೃತರಾಷ್ಟ್ರನಲಿ ನಮಗೆರಡು ಮನವೇ ಭಾವ ಭೇದವೆ ಪಾಂಡು ಬೊಪ್ಪನಲಿ
(೩) ಧೃತರಾಷ್ಟ್ರ – ೧, ೨ ಸಾಲಿನ ಮೊದಲ ಪದ

ಪದ್ಯ ೮೭: ವಿದುರನು ಧರ್ಮರಾಯನಿಗೆ ಯಾರ ಅಭಿಪ್ರಾಯವನ್ನು ತಿಳಿಸಿದ?

ನಂಬಿಸುವ ನಿಮ್ಮಯ್ಯನಿದ ಬೇ
ಡೆಂಬವರು ಗುರು ಭೀಷ್ಮರುಳಿದವ
ರಂಬಿನೋಪಾದಿಯಲಿ ನಿಲುವರು ಹಲವು ಮಾತೇನು
ಡಂಬಕರು ನೃಪ ಕರ್ಣ ಶಕುನಿಗ
ಳೆಂಬವರು ನಿಮ್ಮೊಡನೆ ವಚನಾ
ಡಂಬರವೆ ಬಹುದುಂಟೆ ಬಿಜಯಂಗೈಯಿ ನೀವೆಂದ (ಸಭಾ ಪರ್ವ, ೧೩ ಸಂಧಿ, ೮೭ ಪದ್ಯ)

ತಾತ್ಪರ್ಯ:
ನಿಮ್ಮ ದೊಡ್ಡಪ್ಪನು ನಿಮ್ಮನ್ನು ನಂಬುಗೆಯ ಮಾತುಗಳನ್ನಾಡಿ ಕರೆಯುತ್ತಿದ್ದಾನೆ, ದ್ರೋಣ ಭೀಷ್ಮರು ಇದನ್ನು ಬೇಡವೆನ್ನುತ್ತಿದ್ದಾರೆ. ಉಳಿದವರು ಬಾಣದಂತೆ ನೆಟ್ಟಗೆ ನಿಂತಿದ್ದಾರೆ. ದುರ್ಯೋಧನ, ಕರ್ಣ, ಶಕುನಿಗಳು ನಯವಂಚಕರು, ನಿಮ್ಮೊಡನೆ ಹೆಚ್ಚುಮಾತಿನಿಂದೇನು? ನೀವು ಬರುವ ಹಾಗಿದ್ದರೆ ದಯಮಾಡಿಸಿ ಎಂದು ವಿದುರನು ಧರ್ಮರಾಯನಿಗೆ ತಿಳಿಸಿದನು.

ಅರ್ಥ:
ನಂಬು: ವಿಶ್ವಾಸವಿಡು; ಅಯ್ಯ: ತಂದೆ; ಬೇಡ: ಸಲ್ಲದು; ಗುರು: ಆಚಾರ್ಯ; ಉಳಿದ: ಮಿಕ್ಕ; ಅಂಬು: ಬಾಣ; ನಿಲು: ನಿಂತುಕೊಳ್ಳು; ಹಲವು: ಬಹಳ; ಮಾತು: ವಾಣಿ; ಡಂಬಕ: ಆಡಂಬರದವ, ಮೋಸಗಾರ; ನೃಪ: ರಾಜ; ವಚನ: ಮಾತು; ಆಡಂಬರ: ತೋರಿಕೆ, ಢಂಭ; ಬಹು: ಬಹಳ; ಬಿಜಯಂಗೈ: ದಯಮಾಡಿಸಿ, ಬನ್ನಿ;

ಪದವಿಂಗಡಣೆ:
ನಂಬಿಸುವ+ ನಿಮ್ಮಯ್ಯನ್+ಇದ+ ಬೇಡ್
ಎಂಬವರು+ ಗುರು +ಭೀಷ್ಮರ್+ಉಳಿದವರ್
ಅಂಬಿನೋಪಾದಿಯಲಿ +ನಿಲುವರು +ಹಲವು +ಮಾತೇನು
ಡಂಬಕರು+ ನೃಪ +ಕರ್ಣ +ಶಕುನಿಗಳ್
ಎಂಬವರು +ನಿಮ್ಮೊಡನೆ +ವಚನ
ಆಡಂಬರವೆ+ ಬಹುದುಂಟೆ +ಬಿಜಯಂಗೈಯಿ +ನೀವೆಂದ

ಅಚ್ಚರಿ:
(೧) ಪಾಂಡವರಿಗೆ ಬರುವುದಾದರೆ ಬನ್ನಿ ಎಂದು ಹೇಳುವ ಪರಿ – ಬಹುದುಂಟೆ ಬಿಜಯಂಗೈಯಿ ನೀವೆಂದ
(೨) ಡಂಬ, ಆಡಂಬ; ನಂಬಿ, ಅಂಬಿ – ಪ್ರಾಸ ಪದಗಳು
(೩) ಉಪಮಾನದ ಪ್ರಯೋಗ – ಉಳಿದವರಂಬಿನೋಪಾದಿಯಲಿ ನಿಲುವರು

ಪದ್ಯ ೮೬: ಪಾಂಡವರ ಕೀರ್ತಿ ಯಾರನ್ನು ಅಣಕಿಸುತ್ತದೆ ಎಂದು ವಿದುರನು ಹೇಳಿದನು?

ನೋಡುವುದು ಬಾಂಧವರ ನಿಮ್ಮಡಿ
ಮಾಡುವುದು ಸೌಖ್ಯವನು ಭಯದಲಿ
ಬಾಡುವುದಲೇ ರಿಪುನೃಪಾಲರ ಸಮರ ಜಯಬೀಜ
ಜೋಡಿಸುವುದಗಲದಲಿ ಕೀರ್ತಿಯ
ಝಾಡಿಯನು ನಿಮ್ಮಭ್ಯುದಯ ಬಳಿ
ಕೇಡಿಸುವುದೈ ದುಂದುಮಾರ ದಿಲೀಪ ದಶರಥರ (ಸಭಾ ಪರ್ವ, ೧೩ ಸಂಧಿ, ೮೬ ಪದ್ಯ)

ತಾತ್ಪರ್ಯ:
ಬಾಂಧವರನ್ನು ನೋಡಿ, ಸೌಖ್ಯವನ್ನು ಇಮ್ಮಡಿ ಹೆಚ್ಚಿಸಿದರೆ ಶತ್ರುರಾಜರ ಯುದ್ಧಜಯದ ಬೀಜ ಬಾಡಿಹೋಗುತ್ತದೆ. ಕೀರ್ತಿಯನ್ನು ಎಲ್ಲೆಡೆಗೆ ಹಬ್ಬಿಸಬೇಕು. ಆನಂತರ ನಿಮ್ಮ ಅಭ್ಯುದಯವು ದುಂದುಮಾರ, ದಿಲೀಪ, ದಶರಥರ ಕೀರ್ತಿಯನ್ನು ಅಣಕಿಸುತ್ತದೆ ಎಂದು ವಿದುರನು ಹೇಳಿದನು.

ಅರ್ಥ:
ನೋಡು: ವೀಕ್ಷಿಸು; ಬಾಂಧವ: ಸಂಬಂಧಿಕರು; ಇಮ್ಮಡಿ: ಎರಡುಪಟ್ಟು; ಮಾಡು: ನಿರ್ವಹಿಸು; ಸೌಖ್ಯ: ನೆಮ್ಮದಿ, ಸಂತಸ; ಭಯ: ಅಂಜಿಕೆ; ಬಾಡು: ಒಣಗು, ಮುರುಟು; ರಿಪು: ವೈರಿ; ನೃಪಾಲ: ರಾಜ; ಸಮರ: ಯುದ್ಧ; ಜಯ: ಗೆಲುವು; ಬೀಜ: ಮೂಲ; ಜೋಡಿಸು: ಕೂಡಿಸು; ಅಗಲ: ವಿಸ್ತಾರ; ಕೀರ್ತಿ: ಯಶಸ್ಸು; ಝಾಡಿ: ಕಾಂತಿ; ಅಭ್ಯುದಯ: ಏಳಿಗೆ; ಬಳಿಕ: ನಂತರ; ಏಡಿಸು: ನಿಂದಿಸು, ಅವಹೇಳನ ಮಾಡು;

ಪದವಿಂಗಡಣೆ:
ನೋಡುವುದು +ಬಾಂಧವರ +ನಿಮ್ಮಡಿ
ಮಾಡುವುದು +ಸೌಖ್ಯವನು +ಭಯದಲಿ
ಬಾಡುವುದಲೇ +ರಿಪು+ನೃಪಾಲರ+ ಸಮರ+ ಜಯಬೀಜ
ಜೋಡಿಸುವುದ್+ಅಗಲದಲಿ +ಕೀರ್ತಿಯ
ಝಾಡಿಯನು +ನಿಮ್ಮ್+ಅಭ್ಯುದಯ +ಬಳಿಕ್
ಏಡಿಸುವುದೈ +ದುಂದುಮಾರ +ದಿಲೀಪ +ದಶರಥರ

ಅಚ್ಚರಿ:
(೧) ವೈರಿಗಳು ಹೆದರುತ್ತಾರೆ ಎಂದು ಹೇಳುವ ಪರಿ – ಭಯದಲಿ ಬಾಡುವುದಲೇ ರಿಪುನೃಪಾಲರ ಸಮರ ಜಯಬೀಜ

ಪದ್ಯ ೮೫: ವಿದುರನು ಪಾಂಡವರಿಗೆ ಏನು ಹೇಳಿದನು?

ಧರಣಿಪತಿ ಬೆಸಸಿದನು ನೀವೈ
ವರು ಕುಮಾರರು ರಾಜಸೂಯಾ
ಧ್ವರ ಮಹಾವ್ರತದೇಕ ಭುಕ್ತಾದಿಯಲಿ ಬಳಲಿದಿರಿ
ವರಸಭೆಯ ರಚಿಸಿದರು ಹಸ್ತಿನ
ಪುರಿಗೆ ಬಿಜಯಂಗೈದು ವಿಭವೋ
ತ್ಕರದ ವಿಮಳದ್ಯೂತದಲಿ ರಮಿಸುವುದು ನೀವೆಂದ (ಸಭಾ ಪರ್ವ, ೧೩ ಸಂಧಿ, ೮೫ ಪದ್ಯ)

ತಾತ್ಪರ್ಯ:
ನೀವೈವರು ರಾಜಸೂಯ ಮಹಾಯಾಗದ ಕಾಲದಲ್ಲಿ ದಿನಕ್ಕೊಂದು ಊಟ ಮುಂತಾದ ಕಠಿಣ ಕ್ರಮಗಳನ್ನು ಆಚರಿಸಿ ದಣಿದಿದ್ದೀರಿ, ಕೌರವರು ಹೊಸದೊಂದು ಸಭಾಸ್ಥಾನವನ್ನು ಕಟ್ಟಿಸಿದ್ದಾರೆ, ನೀವು ಹಸ್ತಿನಾಪುರಕ್ಕೆ ಬಂದು, ವೈಭವದಿಂದ ಸುಖದ್ಯೂತದಲ್ಲಿ ಆನಂದಿಸಿರಿ ಎಂದು ಧೃತರಾಷ್ಟ್ರ ಭೂಪತಿ ಹೇಳಿಕಳಿಸಿದ್ದಾನೆ.

ಅರ್ಥ:
ಧರಣಿಪತಿ: ರಾಜ; ಧರಣಿ: ಭೂಮಿ; ಪತಿ: ಒಡೆಯ; ಬೆಸಸು: ಕೇಳು; ಕುಮಾರ: ಮಕ್ಕಳು; ಅಧ್ವರ: ಯಾಗ; ವ್ರತ: ನಿಯಮ; ಮಹಾ: ಶ್ರೇಷ್ಠ; ಭುಕ್ತ: ಅನುಭವಿಸಿದ; ಆದಿ: ಮುಂತಾದ; ಬಳಲು: ಆಯಾಸ; ವರ: ಶ್ರೇಷ್ಠ; ಸಭೆ: ಓಲಗ; ರಚಿಸಿ: ನಿರ್ಮಿಸಿ; ಬಿಜಯಂಗೈದು: ಬಂದು; ವಿಭವ: ಸಿರಿ, ಸಂಪತ್ತು; ಉತ್ಕರ: ಸಮೂಹ; ವಿಮಳ: ನಿರ್ಮಲ; ದ್ಯೂತ: ಪಗಡೆ, ಜೂಜು; ರಮಿಸು: ಆನಂದಿಸು;

ಪದವಿಂಗಡಣೆ:
ಧರಣಿಪತಿ +ಬೆಸಸಿದನು +ನೀವೈ
ವರು+ ಕುಮಾರರು+ ರಾಜಸೂಯ
ಅಧ್ವರ +ಮಹಾವ್ರತದ್+ಏಕ ಭುಕ್ತ +ಆದಿಯಲಿ +ಬಳಲಿದಿರಿ
ವರಸಭೆಯ +ರಚಿಸಿದರು +ಹಸ್ತಿನ
ಪುರಿಗೆ+ ಬಿಜಯಂಗೈದು +ವಿಭವ
ಉತ್ಕರದ +ವಿಮಳ+ದ್ಯೂತದಲಿ +ರಮಿಸುವುದು +ನೀವೆಂದ

ಅಚ್ಚರಿ:
(೧) ಒಂದು ಹೊತ್ತು ಊಟ ಎಂದು ಹೇಳಲು – ಏಕಭುಕ್ತ ಪದ ಪ್ರಯೋಗ

ಪದ್ಯ ೮೪: ವಿದುರನು ದಿನವನ್ನು ಹೇಗೆ ಕಳೆದನು?

ಪಾವುಡಂಗಳನಿತ್ತು ಭೂಪನ
ನೋವಿದನು ನಾನಾ ಕಥಾ ಸಂ
ಭಾವನಾಂನಂತರದ ಮಜ್ಜನ ಭೋಜನಾದಿಗಳ
ಆ ವಿವಿಧ ಸತ್ಕಾರದಲಿ ದಿವ
ಸಾವಸಾನವ ಕಳೆದು ಬಳಿಕ ಸ
ಭಾವಳಯದಲಿ ಪಾಂಡುಸುತರಿಗೆ ನುಡಿದನಾ ವಿದುರ (ಸಭಾ ಪರ್ವ, ೧೩ ಸಂಧಿ, ೮೪ ಪದ್ಯ)

ತಾತ್ಪರ್ಯ:
ಕೌರವರು ಕಳಿಸಿದ್ದ ಉಡುಗೊರೆಗಳನ್ನು ವಿದುರನು ಯುಧಿಷ್ಠಿರನಿಗೆ ಕೊಟ್ಟನು. ಅನೇಕ ಧರ್ಮ ಕಥಾಪ್ರಸಂಗಗಳನ್ನು ಹೇಳಿ ಸಂತೋಷಪಡಿಸಿದನು. ಸ್ನಾನ ಭೋಜನಗಳಾದ ಮೇಲೆ ಸಂಜೆಯನ್ನು ಕಳೆದು, ರಾತ್ರಿಯ ಓಲಗದಲ್ಲಿ ವಿದುರನು ಪಾಂಡವರಿಗೆ ಹೀಗೆಂದು ಹೇಳಿದನು.

ಅರ್ಥ:
ಪಾವುಡ: ಬಟ್ಟೆ, ವಸ್ತ್ರ; ಭೂಪ: ರಾಜ; ಓವು: ರಕ್ಷಿಸು, ಕಾಪಾಡು; ನಾನಾ: ಹಲವಾರು; ಸಂಭಾವನ: ಉಡುಗೊರೆ;ಆನಂತರ: ಬಳಿಕ; ಮಜ್ಜನ: ಸ್ನಾನ; ಭೋಜನ: ಊಟ; ಆದಿ: ಮುಂತಾದ; ವಿವಿಧ: ಹಲವಾರು; ಸತ್ಕಾರ: ಗೌರವ; ದಿವಸ: ದಿನ; ಅವಸಾನ: ಕೊನೆ; ಕಳೆದು: ಸಂದುಹೋಗು; ಬಳಿಕ: ನಂತರ; ಸಭಾವಳಯ: ಸಭೆಯ ಪ್ರದೇಶ; ಸುತ: ಮಕ್ಕಳು; ನುಡಿ: ಮಾತಾಡು;

ಪದವಿಂಗಡಣೆ:
ಪಾವುಡಂಗಳನಿತ್ತು+ ಭೂಪನನ್
ಓವಿದನು+ ನಾನಾ +ಕಥಾ +ಸಂ
ಭಾವನಾಂನ್+ಅಂತರದ+ ಮಜ್ಜನ +ಭೋಜನಾದಿಗಳ
ಆ +ವಿವಿಧ +ಸತ್ಕಾರದಲಿ +ದಿವ
ಸ+ಅವಸಾನವ +ಕಳೆದು +ಬಳಿಕ+ ಸ
ಭಾವಳಯದಲಿ+ ಪಾಂಡುಸುತರಿಗೆ+ ನುಡಿದನಾ +ವಿದುರ

ಅಚ್ಚರಿ:
(೧) ಸಂಭಾವ, ಸಭಾವ – ಪದಗಳ ಬಳಕೆ
(೨) ಸಂಜೆ ಎಂದು ಹೇಳಲು – ದಿವಸಾವಸಾನವ ಕಳೆದು

ಪದ್ಯ ೮೩: ವಿದುರನು ಯಾರ ಕ್ಷೇಮದ ವಿಚಾರವನ್ನು ತಿಳಿಸಿದನು?

ಧರಣಿಪತಿ ಗಾಂಗೇಯ ಗೌತಮ
ಗುರುತನುಜ ಗುರು ಕರ್ಣ ಸೌಬಲ
ಕುರು ನೃಪತಿಯನುಜಾತ್ಮಜರು ಗಾಂಧಾರಿ ಭಾನುಮತಿ
ವರಸಚಿವ ಸಾಮಂತ ಪರಿಜನ
ಪುರಜನಂಗಳ ಕುಶಲವನು ವಿ
ಸ್ತರಿಸಿದನು ವಿದುರನು ಮಹೀಪತಿಗಾತ್ಮಬಾಂಧವರ (ಸಭಾ ಪರ್ವ, ೧೩ ಸಂಧಿ, ೮೩ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ, ಭೀಷ್ಮ, ಕೃಪ, ಅಶ್ವತ್ಥಾಮ, ದ್ರೋಣ, ಕರ್ಣ, ಶಕುನಿ, ದುರ್ಯೋಧನ ಮತ್ತು ಅವನ ತಮ್ಮಂದಿರು ಮತ್ತು ಮಕ್ಕಳು, ಗಾಂಧಾರಿ, ಭಾನುಮತಿ, ಸಚಿವರು, ಸಾಮಂತರು, ಪರಿಜನ ಪುರಜನಗಳ ಕುಶಲಗಳನ್ನು ಯುಧಿಷ್ಠಿರನಿಗೆ ವಿದುರನು ತಿಳಿಸಿದನು.

ಅರ್ಥ:
ಧರಣಿಪತಿ: ರಾಜ; ಧರಣಿ: ಭೂಮಿ; ಪತಿ: ಒಡೆಯ; ತನುಜ: ಮಗ; ನೃಪತಿ: ರಾಜ; ಅನುಜ: ತಮ್ಮ; ವರ: ಆತ್ಮಜ: ಮಕ್ಕಳು; ಶ್ರೇಷ್ಠ; ಸಚಿವ: ಮಂತ್ರಿ; ಪರಿಜನ: ಬಂಧುಜನ; ಪುರಜನ: ಊರಿನ ಜನ; ಕುಶಲ: ಕ್ಷೇಮ; ವಿಸ್ತರಿಸು: ವಿವರಣೆ; ಮಹೀಪತಿ: ರಾಜ; ಮಹೀ: ಭೂಮಿ; ಆತ್ಮಬಾಂಧವ: ತಮ್ಮಂದಿರು;

ಪದವಿಂಗಡಣೆ:
ಧರಣಿಪತಿ +ಗಾಂಗೇಯ +ಗೌತಮ
ಗುರುತನುಜ+ ಗುರು +ಕರ್ಣ +ಸೌಬಲ
ಕುರು +ನೃಪತಿ+ಅನುಜ+ಆತ್ಮಜರು+ ಗಾಂಧಾರಿ +ಭಾನುಮತಿ
ವರಸಚಿವ +ಸಾಮಂತ +ಪರಿಜನ
ಪುರಜನಂಗಳ+ ಕುಶಲವನು+ ವಿ
ಸ್ತರಿಸಿದನು +ವಿದುರನು +ಮಹೀಪತಿಗ್+ಆತ್ಮಬಾಂಧವರ

ಅಚ್ಚರಿ:
(೧) ಧರಣಿಪತಿ, ಮಹೀಪತಿ, ನೃಪತಿ – ಸಮನಾರ್ಥಕ ಪದ
(೨) ಗ ಕಾರದ ಸಾಲು ಪದಗಳು – ಗಾಂಗೇಯ ಗೌತಮ ಗುರುತನುಜ ಗುರು