ಪದ್ಯ ೮೨: ವಿದುರನನ್ನು ಪಾಂಡವರು ಹೇಗೆ ಬರೆಮಾಡಿಕೊಂಡರು?

ಶುಭ ಮುಹೂರ್ತ ವಿಳಾಸಲಗ್ನದೊ
ಳಿಭಪುರಿಯ ಒರವಂಟು ಸುರ ಸ
ನ್ನಿಭನು ಬಂದನು ಹಲವು ಪಯಣದಲಿವರ ಪಟ್ಟಣಕೆ
ರಭಸ ಮಿಗಿಲಿದಿರ್ಗೊಂಡು ತಂದರು
ಸಭೆಗೆ ಮಾನ್ಯ ಯಥೋಪಚಾರ
ಪ್ರಭವ ಸತ್ಕಾರದಲಿ ಕೇಳ್ದರು ಕುಶಲ ಸಂಗತಿಯ (ಸಭಾ ಪರ್ವ, ೧೩ ಸಂಧಿ, ೮೨ ಪದ್ಯ)

ತಾತ್ಪರ್ಯ:
ಒಂದು ಶುಭ ಮುಹೂರ್ತ, ಶುಭ ಲಗ್ನದಲ್ಲಿ ದೇವತೆಗಳಿಗೆ ಸಮಾನನಾದ ವಿದುರನು ಹಸ್ತಿನಾಪುರದಿಂದ ಪಾಂಡವರನ್ನು ಭೇಟಿಯಾಗಲು ಹೊರಟನು. ಹಲವು ದಿನಗಳ ಕಾಲ ಪ್ರಯಾಣವನ್ನು ಮಾಡಿ ಇಂದ್ರಪ್ರಸ್ಥನಗರಕ್ಕೆ ಬಂದನು. ಪಾಂಡವರು ಮಹಾ ವೈಭವದಿಂದ ವಿದುರನನ್ನು ಸ್ವಾಗತಿಸಿ, ಉಚಿತ ಸತ್ಕಾರವನ್ನು ಮಾಡಿ ಕ್ಷೇಮ ಸಮಾಚಾರವನ್ನು ಕೇಳಿದರು.

ಅರ್ಥ:
ಶುಭ: ಮಂಗಳ; ಮುಹೂರ್ತ: ಸಮಯ; ವಿಲಾಸ: ಉಲ್ಲಾಸ, ಸಂಭ್ರಮ, ಚೆಲುವು; ಲಗ್ನ: ಮುಹೂರ್ತ; ಇಭಪುರಿ: ಹಸ್ತಿನಾಪುರ; ಪುರಿ: ಊರು; ಇಭ: ಆನೆ; ಹೊರವಂಟು: ತೆರಳು; ಸುರ:ದೇವತೆ; ಸನ್ನಿಭ: ಸಮಾನವಾದ; ಬಂದ: ಆಗಮಿಸು; ಹಲವು: ಬಹಳ; ಪಯಣ: ಪ್ರಯಾಣ, ಸಂಚಾರ; ಪಟ್ಟಣ: ಊರು; ರಭಸ: ವೇಗ,ಜೋರು; ಮಿಗೆ: ಅಧಿಕ; ಇದಿರುಕೊಂಡು: ಎದುರುನೋಡಿ; ತಂದರು: ಬರೆಮಾಡಿದರು; ಸಭೆ: ಓಲಗ; ಮಾನ್ಯ: ಗೌರವ; ಉಪಚಾರ: ಸತ್ಕಾರ; ಪ್ರಭವ: ಉತ್ತಮವಾದ; ಸತ್ಕಾರ: ಸನ್ಮಾನ; ಕೇಳು: ಆಲಿಸು; ಕುಶಲ: ಕ್ಷೇಮ; ಸಂಗತಿ: ವಿಚಾರ;

ಪದವಿಂಗಡಣೆ:
ಶುಭ +ಮುಹೂರ್ತ +ವಿಳಾಸ+ಲಗ್ನದೊಳ್
ಇಭಪುರಿಯ +ಹೊರವಂಟು ಸುರ ಸ
ನ್ನಿಭನು ಬಂದನು ಹಲವು ಪಯಣದಲ್+ಇವರ +ಪಟ್ಟಣಕೆ
ರಭಸ +ಮಿಗಿಲ್+ಇದಿರ್ಗೊಂಡು +ತಂದರು
ಸಭೆಗೆ+ ಮಾನ್ಯ +ಯಥ+ಉಪಚಾರ
ಪ್ರಭವ +ಸತ್ಕಾರದಲಿ +ಕೇಳ್ದರು +ಕುಶಲ +ಸಂಗತಿಯ

ಅಚ್ಚರಿ:
(೧) ವಿದುರನನ್ನು ಸುರ ಸನ್ನಿಭ ಎಂದು ಕರೆದಿರುವುದು
(೨) ವಿದುರನಿಗೆ ಸತ್ಕಾರ ಮಾಡಿದ ರೀತಿ – ರಭಸ ಮಿಗಿಲಿದಿರ್ಗೊಂಡು ತಂದರು ಸಭೆಗೆ ಮಾನ್ಯ ಯಥೋಪಚಾರ ಪ್ರಭವ ಸತ್ಕಾರ

ಪದ್ಯ ೮೧: ಭೀಷ್ಮ ದ್ರೋಣರು ವಿದುರನಿಗೆ ಏನು ಹೇಳಿದರು?

ಅರುಹಿದನು ಭೀಷ್ಮಂಗೆ ಗುರು ಕೃಪ
ರರಿದರಿನ್ನಪಮೃತ್ಯವೇನೆಂ
ದರಿಯದಿನ್ನುತ್ಸಾಹ ಶಕ್ತಿಗೆ ಮನವ ಮಾಡಿತಲ
ಹರಿದುದೇ ಕುರುವಂಶ ಲತೆ ಹೊ
ಕ್ಕಿರಿದನೇ ಧೃತರಾಷ್ಟ್ರ ನೀ ಬೇ
ಸರದಿರವರನು ಕರೆದು ತಾ ಹೋಗೆಂದರವರಂದು (ಸಭಾ ಪರ್ವ, ೧೩ ಸಂಧಿ, ೮೧ ಪದ್ಯ)

ತಾತ್ಪರ್ಯ:
ವಿದುರನು ಧೃತರಾಷ್ಟ್ರನು ಹೇಳಿದ ವಿಚಾರವನ್ನು ಭೀಷ್ಮ, ದ್ರೋಣ, ಕೃಪಾಚಾರ್ಯರಿಗೆ ತಿಳಿಸಿದನು. ಅವರೆಲ್ಲರು ಅಕಾಲದ ಮರಣವನ್ನು ತಿಳಿಯದೆ ಉತ್ಸಾಹಶಕ್ತಿಗೆ ಮನಸ್ಸು ಮಾಡಿತೇ? ಕೌರವ ವಂಶದ ಬಳ್ಳಿ ಹರಿದು ಹೋಯಿತೇ? ಧೃತರಾಷ್ಟ್ರನೇ ವಂಶಲತೆಯನ್ನು ಕತ್ತರಿಸಿದನೇ? ಎಂದು ನೋವಿನಿಂದ ಹೇಳುತ್ತಾ ವಿದುರನಿಗೆ ಬೇಸರಗೊಳ್ಳಬೇಡ, ಪಾಂಡವರನ್ನು ಕರೆದು ತಾ ಎಂದು ಹೇಳಿದರು.

ಅರ್ಥ:
ಅರುಹು: ತಿಳಿವಳಿಕೆ; ಅರಿ: ತಿಳಿ; ಅಪಮೃತ್ಯು: ಅಕಾಲ ಮರಣ; ಉತ್ಸಾಹ: ಶಕ್ತಿ, ಬಲ; ಶಕ್ತಿ: ಬಲ; ಮನ: ಮನಸ್ಸು; ಹರಿ: ಸೀಳೂ; ವಂಶ: ಕುಲ; ಲತೆ: ಬಳ್ಳಿ; ಹೊಕ್ಕು: ಸೇರು; ಬೇಸರ: ದುಃಖ; ಕರೆ: ಬರೆಮಾಡು; ಹೋಗು: ತೆರಳು;

ಪದವಿಂಗಡಣೆ:
ಅರುಹಿದನು+ ಭೀಷ್ಮಂಗೆ +ಗುರು +ಕೃಪರ್
ಅರಿದರ್+ಇನ್+ಅಪಮೃತ್ಯವೇನೆಂದ್
ಅರಿಯದ್+ಇನ್+ಉತ್ಸಾಹ +ಶಕ್ತಿಗೆ+ ಮನವ +ಮಾಡಿತಲ
ಹರಿದುದೇ+ ಕುರುವಂಶ +ಲತೆ +ಹೊಕ್
ಇರಿದನೇ +ಧೃತರಾಷ್ಟ್ರ +ನೀ +ಬೇ
ಸರದಿರ್+ಅವರನು +ಕರೆದು +ತಾ +ಹೋಗ್+ಎಂದರ್+ಅವರ್+ಅಂದು

ಅಚ್ಚರಿ:
(೧) ಭೀಷ್ಮರ ನೋವಿನ ನುಡಿ – ಹರಿದುದೇ ಕುರುವಂಶ ಲತೆ ಹೊಕ್ಕಿರಿದನೇ ಧೃತರಾಷ್ಟ್ರ
(೨) ಅರಿ, ಹರಿ, ಇರಿ – ಪ್ರಾಸ ಪದಗಳ ಬಳಕೆ

ಪದ್ಯ ೮೦: ಧೃತರಾಷ್ಟ್ರನು ವಿದುರನಿಗೆ ಯಾವ ಕಾರ್ಯವನ್ನು ನೀಡಿದನು?

ಕರೆದುತಾನೀನವರ ನಾನುಪ
ಚರಿಸುವಂದವ ನೋಡು ನಿನ್ನಯ
ಕರಣವೃತ್ತಿಗೆ ಕಠಿಣವಹವೇ ನಮ್ಮ ಮಾತುಗಳು
ದುರುಳರವರಿವರೆಂಬರದನಾ
ದರಿಸದಿರು ನೀ ಹೋಗು ಪಾಂಡವ
ಧರಣಿಪರನೊಡಗೊಂಡು ಬಾಯೆಂದಟ್ಟಿದನು ನೃಪತಿ (ಸಭಾ ಪರ್ವ, ೧೩ ಸಂಧಿ, ೮೦ ಪದ್ಯ)

ತಾತ್ಪರ್ಯ:
ವಿದುರ ನೀನು ಪಾಂಡವರನ್ನು ಇಲ್ಲಿಗೆ ಕರೆದುಕೊಂಡು ಬಾ, ನಾನು ಅವರನ್ನು ಉಪಚರಿಸುವ ಬಗೆಯನ್ನು ನೀನೇ ನೋಡುವೆ, ನಿನ್ನ ಕಿವಿಗೆ ನಮ್ಮ ಮಾತುಗಳು ಕಠಿಣವೆನಿಸುತ್ತಿದೆಯೇ? ದುಷ್ಟರು ಏನೇನನ್ನೋ ಆಡುತ್ತಾರೆ ಅವನ್ನು ನಂಬಬೇಡ. ನೀನು ಹೋಗಿ ಪಾಂಡವರನ್ನು ಕರೆದುಕೊಂಡು ಬಾ ಎಂದು ವಿದುರನನ್ನು ಕಳುಹಿಸಿದನು.

ಅರ್ಥ:
ಕರೆ: ಬರೆಮಾಡು; ಉಪಚಾರ: ಸತ್ಕಾರ, ಶುಶ್ರೂಷೆ; ಅಂದವ: ರೀತಿಯ; ನೋಡು: ವೀಕ್ಷಿಸು; ಕರಣ: ಕಿವಿ; ವೃತ್ತಿ: ಕೆಲಸ; ಕಠಿಣ: ಕಷ್ಟ; ಮಾತು: ವಾಣಿ; ದುರುಳ: ದುಷ್ಟ; ಆದರ: ಗೌರವ, ಸತ್ಕಾರ; ಹೋಗು: ತೆರಳು; ಧರಣಿಪ: ರಾಜ; ಒಡಗೊಂಡು: ಜೊತೆ; ಬಾ: ಆಗಮಿಸು; ಅಟ್ಟು: ಕಳುಹಿಸು; ನೃಪತಿ: ರಾಜ;

ಪದವಿಂಗಡಣೆ:
ಕರೆದುತಾ+ ನೀನ್+ಅವರ +ನಾನ್+ಉಪ
ಚರಿಸುವ್+ಅಂದವ +ನೋಡು +ನಿನ್ನಯ
ಕರಣವೃತ್ತಿಗೆ +ಕಠಿಣವಹವೇ+ ನಮ್ಮ+ ಮಾತುಗಳು
ದುರುಳರ್+ಅವರಿವರ್+ಎಂಬರ್+ಅದನ್
ಆದರಿಸದಿರು+ ನೀ +ಹೋಗು +ಪಾಂಡವ
ಧರಣಿಪರನ್+ಒಡಗೊಂಡು +ಬಾ+ಎಂದ್+ಅಟ್ಟಿದನು +ನೃಪತಿ

ಅಚ್ಚರಿ:
(೧) ಕಳುಹಿಸಿದನು ಎಂಬದನ್ನು ಹೇಳಲು – ಅಟ್ಟಿದನು ಪದದ ಬಳಕೆ
(೨) ಕೇಳು ಎಂದು ತಿಳಿಸಲು – ಕರಣವೃತ್ತಿ ಪದದ ಬಳಕೆ

ಪದ್ಯ ೭೯: ವಿದುರನು ಧೃತರಾಷ್ಟ್ರನ ಮಾತನ್ನು ಏಕೆ ಒಪ್ಪಿದನು?

ಮೊದಲಲಿದು ಸದ್ಯೂತವವಸಾ
ನದಲಿ ವಿಷಮ ದ್ಯೂತದಲಿ ನಿಲು
ವುದು ನಿವಾರಣವುಂಟೆ ಮರ್ಮವನಿರಿದ ಸಬಳದಲಿ
ತುದಿಗೆ ತಾನಿದಪಥ್ಯ ಕುರುವ
ರ್ಗದಿ ವಿನಾಶಕ ಬೀಜವದು ನಿಮ
ಗಿದರೊಳಗೆ ಸೊಗಸಾದುದೇ ಕೈಕೊಂಡೆ ನಾನೆಂದ (ಸಭಾ ಪರ್ವ, ೧೩ ಸಂಧಿ, ೭೯ ಪದ್ಯ)

ತಾತ್ಪರ್ಯ:
ಮೊದಲನೆಯದಾಗಿ ಇದು ಒಳ್ಳೆಯ ದ್ಯೂತ ಪಂದ್ಯವಾಗಿ ಆರಂಭವಾದರೂ ಕೊನೆಗೆ ಕಷ್ಟಕರವಾದ ದ್ಯೂತವಾಗಿಬಿಡುತ್ತದೆ. ಮರ್ಮವನ್ನು ಚುಚ್ಚುವ ಕತ್ತಿಯನ್ನು ತಪ್ಪಿಸಲಾಗುತ್ತದೆಯೇ? ಈ ದ್ಯೂತವು ಕೊನೆಗೆ ಕೌರವರ ವಿನಾಶದ ಬೀಜವಾಗುತ್ತದೆ. ನಿಮಗೆ ಇದು ಸರಿಯೆಂದು ಕಾಣಿಸಿತೇ? ಆಗಲಿ ನಾನು ಒಪ್ಪಿಕೊಂಡೆ ಎಂದು ವಿದುರನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಮೊದಲು: ಮುನ್ನ; ಸುದ್ಯೂತ: ಒಳ್ಳೆಯ ಪಗಡೆಯಾಟ; ವಿಷಮ: ಕೆಟ್ಟ, ದುಷ್ಟ; ಅವಸಾನ:ಅಂತ್ಯ, ಮುಕ್ತಾಯ; ದ್ಯೂತ: ಪಗಡೆ, ಜೂಜು; ನಿಲುವುದು: ನಿಂತುಕೊಳ್ಳು, ಸ್ಥಾನ; ನಿವಾರಣೆ: ಕಳೆಯುವಿಕೆ; ಮರ್ಮ: ಒಳ ಅರ್ಥ, ಗುಟ್ಟು; ಸಬಳ: ಈಟಿ, ಭರ್ಜಿ; ಇರಿ: ಚುಚ್ಚು; ತುದಿ: ಕೊನೆ; ಪಥ್ಯ: ಯೋಗ್ಯವಾದುದು; ವರ್ಗ: ಗುಂಫು; ವಿನಾಶ: ಹಾಳು, ಅಂತ್ಯ; ಬೀಜ: ಮೂಲ, ಕಾರಣ; ಸೊಗಸು: ಚೆಲುವು; ಕೈಕೊಂಡು: ಒಪ್ಪು;

ಪದವಿಂಗಡಣೆ:
ಮೊದಲಲ್+ಇದು +ಸದ್ಯೂತವ್+ಅವಸಾ
ನದಲಿ +ವಿಷಮ +ದ್ಯೂತದಲಿ +ನಿಲು
ವುದು +ನಿವಾರಣವುಂಟೆ +ಮರ್ಮವನ್+ಇರಿದ +ಸಬಳದಲಿ
ತುದಿಗೆ+ ತಾನಿದ+ಪಥ್ಯ +ಕುರು+ವ
ರ್ಗದಿ +ವಿನಾಶಕ +ಬೀಜವದು+ ನಿಮಗ್
ಇದರೊಳಗೆ+ ಸೊಗಸಾದುದೇ +ಕೈಕೊಂಡೆ +ನಾನೆಂದ

ಅಚ್ಚರಿ:
(೧) ಸದ್ಯೂತ, ವಿಷಮದ್ಯೂತ – ಪದಗಳ ಬಳಕೆ
(೨) ಉಪಮಾನದ ಪ್ರಯೋಗ – ನಿವಾರಣವುಂಟೆ ಮರ್ಮವನಿರಿದ ಸಬಳದಲಿ

ಪದ್ಯ ೭೮: ಧೃತರಾಷ್ಟ್ರ ತನ್ನ ಮಾತು ಏಕೆ ಹೊಲ್ಲ ಎಂದ?

ವಿದುರ ಬೆಂಬೀಳದಿರು ಬಿಂಕದ
ಹದನ ಬಲ್ಲೆನು ಭೀಮ ಪಾರ್ಥರ
ಮುದವ ಬಯಸುವೆ ಮುನಿಯಲಾಪೆನೆ ಹೇಳು ತನಯರಿಗೆ
ಇದು ಮಹಾಸಭೆಯಲ್ಲಿ ಮೇಳಾ
ಪದಲಿ ಕುರು ಪಾಂಡವರು ಸದ್ಯೂ
ತದಲಿ ರಮಿಸುವರೇನು ಹೊಲ್ಲೆಹವಂದನಂಧನೃಪ (ಸಭಾ ಪರ್ವ, ೧೩ ಸಂಧಿ, ೭೮ ಪದ್ಯ)

ತಾತ್ಪರ್ಯ:
ವಿದುರನು ನಿನ್ನ ಮಾತು ಹೊಲ್ಲ ಎಂದು ಕೇಳಿದ ಧೃತರಾಷ್ಟ್ರ ವಿದುರ, ನನ್ನ ಮಾತನ್ನು ಅಲ್ಲಗೆಳಬೇಡ, ಭೀಮಾರ್ಜುನರ ಸಾಹಸ ಪರಾಕ್ರಮಗಳು ನನಗೆ ತಿಳಿದಿದೆ. ನನ್ನ ಮಕ್ಕಳ ಮೇಲೆ ನನಗೆ ಸಿಟ್ಟೇ? ಏನೋ ಸಂತೋಷದಿಂದಿರಲಿ ಎಂದು ಬಯಸುತ್ತೇನೆ. ಇದು ಮಹಾ ಸಭೆ, ಇಲ್ಲಿ ಕೌರವ ಪಾಂಡವರು ಒಳ್ಳೆಯ ಜೂಜಿನಿಂದ ಸಮ್ತೋಷಿಸುತ್ತಾರೆ, ಇದರಲ್ಲಿ ಕೆಡುಕೇನಿದೆ ಎಂದು ಧೃತರಾಷ್ಟ್ರ ತನ್ನ ಮಾತುಗಳನ್ನು ಸಮರ್ಥಿಸಿಕೊಂಡ.

ಅರ್ಥ:
ಬೆಂಬೀಳು:ಹಿಂಬಾಲಿಸು; ಬಿಂಕ: ಗರ್ವ, ಜಂಬ, ಸೊಕ್ಕು; ಹದ: ಸರಿಯಾದ ಸ್ಥಿತಿ; ಬಲ್ಲೆ: ತಿಳಿದಿರುವೆ; ಮುದ: ಸಂತಸ; ಬಯಸು: ಇಚ್ಛಿಸು; ಮುನಿ: ಕೋಪ; ಹೇಳು: ತಿಳಿಸು; ತನಯ: ಮಕ್ಕಳು; ಮಹಾಸಭೆ: ಓಲಗ; ಮೇಳ: ಸೇರುವಿಕೆ; ದ್ಯೂತ: ಪಗಡೆ, ಜೂಜು; ರಮಿಸು: ರಂಜಿಸು, ಸಂತೋಷಪಡು; ಹೊಲ್ಲೆ: ಹೊಲಸು; ಅಂಧನೃಪ: ಕುರುಡು ರಾಜ;

ಪದವಿಂಗಡಣೆ:
ವಿದುರ+ ಬೆಂಬೀಳದಿರು+ ಬಿಂಕದ
ಹದನ +ಬಲ್ಲೆನು +ಭೀಮ +ಪಾರ್ಥರ
ಮುದವ+ ಬಯಸುವೆ +ಮುನಿಯಲಾಪೆನೆ+ ಹೇಳು+ ತನಯರಿಗೆ
ಇದು +ಮಹಾಸಭೆ+ಅಲ್ಲಿ +ಮೇಳಾ
ಪದಲಿ +ಕುರು +ಪಾಂಡವರು +ಸದ್ಯೂ
ತದಲಿ +ರಮಿಸುವರೇನು+ ಹೊಲ್ಲೆಹವ್+ಅಂದನ್+ಅಂಧನೃಪ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬೆಂಬೀಳದಿರು ಬಿಂಕದ ಹದನ ಬಲ್ಲೆನು ಭೀಮ