ಪದ್ಯ ೭೭: ವಿದುರನು ಧೃತರಾಷ್ಟ್ರನನ್ನು ಹೇಗೆ ಬಯ್ದನು?

ಹಾ ಮರುಳೆ ಕೆಣಕುವರೆ ಫಲುಗುಣ
ಭೀಮರನು ಮಿಗೆ ಹೆಚ್ಚಿ ಬೆಳೆದು
ದ್ದಾಮ ಸಿರಿಯಿದು ಹಸ್ತಿನಾಪುರವಕಟ ಕೆಡಿಸಿದೆಲ
ಕೈ ಮಗುಚದೇ ವಿಭವವಿದು ನಿ
ರ್ನಾಮರಾರೋ ಬಿತ್ತಿದರು ಕುರು
ಭೂಮಿಯಲಿ ವಿಷಬೀಜವನು ಹಾಯೆನುತ ಬಿಸುಸುಯ್ದ (ಸಭಾ ಪರ್ವ, ೧೩ ಸಂಧಿ, ೭೭ ಪದ್ಯ)

ತಾತ್ಪರ್ಯ:
ಅಯ್ಯೋ ಹುಚ್ಚ, ಪುರಾತನಕಾಲದಿಂದ ಬೆಳೆದು ಬಂದ ಮಹೋನ್ನತ ಸಂಪತ್ತಿನ ಹಸ್ತಿನಾಪುರವನ್ನು ಹಾಳುಮಾಡಿದೆ, ಭೀಮಾರ್ಜುನರನ್ನು ಕೆಣಕಬಹುದೇ? ನಿನ್ನ ವೈಭವವು ಕೈತಪ್ಪಿ ಬೀಳುವುದಿಲ್ಲವೇ? ಕುರು ಭೂಮಿಯಲ್ಲಿ ಯಾರೋ ಅನಾಮಧೇಯರು ವಿಷಬೀಜವನ್ನು ಬಿತ್ತಿದ್ದಾರೆ ಎಂದು ವಿದುರನು ನಿಟ್ಟುಸಿರಿಟ್ಟನು.

ಅರ್ಥ:
ಮರುಳು: ಬುದ್ಧಿಭ್ರಮೆ, ಹುಚ್ಚು; ಕೆಣಕು: ರೇಗಿಸು, ಪ್ರಚೋದಿಸು; ಮಿಗೆ: ಮತ್ತು, ಅಧಿಕವಾಗಿ; ಹೆಚ್ಚು: ಅಧಿಕ; ಬೆಳೆದು: ಮೂಡು, ಅಂಕುರಿಸು, ಸಮೃದ್ಧವಾಗು; ಉದ್ದಾಮ: ಶ್ರೇಷ್ಠ; ಸಿರಿ: ಐಶ್ವರ್ಯ; ಅಕಟ: ಅಯ್ಯೋ; ಕೆಡಿಸು: ಹಾಳುಮಾಡು; ಕೈ: ಹಸ್ತ; ಮಗುಚು: ಹಿಂದಿರುಗಿಸು, ಮರಳಿಸು; ವಿಭವ: ಸಿರಿ, ಸಂಪತ್ತು; ನಿರ್ನಾಮ: ನಾಶ; ಬಿತ್ತು: ಹುಟ್ಟುಹಾಕು, ಉಂಟುಮಾಡು; ಭೂಮಿ: ಅವನಿ; ವಿಷ: ಗರಲ, ನಂಜು; ಬೀಜ: ಧಾನ್ಯದ ಕಾಳು; ಹಾ: ಅಯ್ಯೋ; ಬಿಸುಸುಯ್ದ: ನಿಟ್ಟುಸಿರು;

ಪದವಿಂಗಡಣೆ:
ಹಾ +ಮರುಳೆ +ಕೆಣಕುವರೆ+ ಫಲುಗುಣ
ಭೀಮರನು +ಮಿಗೆ +ಹೆಚ್ಚಿ +ಬೆಳೆದ್
ಉದ್ಧಾಮ +ಸಿರಿ+ಇದು +ಹಸ್ತಿನಾಪುರವ್+ಅಕಟ +ಕೆಡಿಸಿದೆಲ
ಕೈ +ಮಗುಚದೇ +ವಿಭವವಿದು +ನಿ
ರ್ನಾಮರ್+ಆರೋ +ಬಿತ್ತಿದರು +ಕುರು
ಭೂಮಿಯಲಿ +ವಿಷಬೀಜವನು +ಹಾ+ಎನುತ +ಬಿಸುಸುಯ್ದ

ಅಚ್ಚರಿ:
(೧) ವಿದುರನ ಚಾಣಕ್ಷತೆ – ಆರೋ ಬಿತ್ತಿದರು ಕುರುಭೂಮಿಯಲಿ ವಿಷಬೀಜವನು
(೨) ಹಸ್ತಿನಾಪುರದ ಬಗ್ಗೆ ಒಲವು – ಬೆಳೆದುದ್ದಾಮ ಸಿರಿಯಿದು ಹಸ್ತಿನಾಪುರವ

ಪದ್ಯ ೭೬: ವಿದುರನು ಧೃತರಾಷ್ಟ್ರನ ಯೋಚನೆಗೆ ಹೇಗೆ ಉತ್ತರಿಸಿದನು?

ಮಾತು ಹೊಲಸಿನ ಗಂಧವಾಗಿದೆ
ಭೀತಿ ರಸದಲಿ ಮನ ಮುಳುಗಿತೀ
ಪ್ರೀತಿ ಮಾರಿಯ ಮುಸುಕನುಗಿವುದನಾರು ಕಲಿಸಿದರು
ಕೈತವದ ಕಣಿ ನಿನ್ನ ಮಗ ನೀ
ಸೋತೆಲಾ ಶಿವಶಿವ ಸುಖಾಂಗ
ದ್ಯೂತವೇ ಹಾ ಹಾಯೆನುತ ತಲೆದೂಗಿದನು ವಿದುರ (ಸಭಾ ಪರ್ವ, ೧೩ ಸಂಧಿ, ೭೬ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಮಾತನ್ನು ಕೇಳಿದ ವಿದುರನು, ನಿನ್ನ ಮಾತು ಹೊಲಸು ವಾಸನೆಯಿಂದ ತುಂಬಿದೆ, ನಿನ್ನ ಪ್ರೀತಿಯ ಮಾತುಗಳನ್ನು ಕೇಳಿ, ನನ್ನ ಮನಸ್ಸು ಭೀತಿಯಲ್ಲಿ ಮುಳುಗಿದೆ, ಮಾರಿಯ ಮುಸುಕನ್ನು ತೆಗೆಯುವುದನ್ನು ನಿನಗೆ ಯಾರು ಹೇಳಿಕೊಟ್ಟರು? ನಿನ್ನ ಮಗನು ಮೋಸದ ಗಣಿ, ಅವನ ಮಾತಿಗೆ ನೀನು ಒಪ್ಪಿದೆಯೋ? ಶಿವ ಶಿವಾ ಸುಖದ್ಯೂತಾ ಹಾಹಹಹ ಎಂದು ತಲೆದೂಗಿದನು ವಿದುರ.

ಅರ್ಥ:
ಮಾತು: ವಾಣಿ; ಹೊಲಸು: ಕೊಳಕು; ಗಂಧ: ವಾಸನೆ; ಭೀತಿ: ಭಯ; ರಸ: ಸಾರ; ಮನ: ಮನಸ್ಸು; ಮುಳುಗು: ಮುಚ್ಚಿಹೋಗು, ತೋಯು; ಪ್ರೀತಿ: ಒಲವು; ಮಾರಿ: ಕ್ಷುದ್ರದೇವತೆ; ಮುಸುಕು: ಆವರಿಸು, ಮುಚ್ಚು; ಉಗಿ: ಹೊರಹಾಕು; ಕಲಿಸು: ಹೇಳಿಕೊಟ್ಟರು; ಕೈತ: ಮೋಸ; ಕಣಿ: ಗಣಿ, ಆಕರ; ಮಗ: ಸುತ; ಸೋತೆ: ಪರಾಭವ ಹೊಂದು; ಸುಖ: ಸಂತಸ; ದ್ಯೂತ: ಜೂಜು, ಪಗಡೆ; ತಲೆ: ಶಿರ; ದೂಗು: ಅಲ್ಲಾಡಿಸು;

ಪದವಿಂಗಡಣೆ:
ಮಾತು +ಹೊಲಸಿನ +ಗಂಧವಾಗಿದೆ
ಭೀತಿ +ರಸದಲಿ +ಮನ +ಮುಳುಗಿತ್+ಈ
ಪ್ರೀತಿ +ಮಾರಿಯ +ಮುಸುಕನ್+ಉಗಿವುದನ್+ಆರು +ಕಲಿಸಿದರು
ಕೈತವದ +ಕಣಿ +ನಿನ್ನ +ಮಗ +ನೀ
ಸೋತೆಲಾ +ಶಿವಶಿವ+ ಸುಖಾಂಗ
ದ್ಯೂತವೇ +ಹಾ +ಹಾ+ಎನುತ +ತಲೆದೂಗಿದನು+ ವಿದುರ

ಅಚ್ಚರಿ:
(೧) ವಿದುರನ ಉತ್ತರವನ್ನು ಚಿತ್ರಿಸಿರುವ ಪದ್ಯ
(೨) ಕೆಟ್ಟ ಮಾತು ಎಂದು ಹೇಳಲು – ಮಾತು ಹೊಲಸಿನ ಗಂಧವಾಗಿದೆ
(೨) ಭಯವನ್ನುಂಟುಮಾಡುತ್ತದೆ ಎಂದು ಹೇಳಲು – ಭೀತಿ ರಸದಲಿ ಮನ ಮುಳುಗಿತೀ
(೪) ದುರ್ಯೋಧನನನ್ನು ಬಯ್ಯುವ ಪರಿ – ಕೈತವದ ಕಣಿ ನಿನ್ನ ಮಗ

ಪದ್ಯ ೭೫: ಏತಕ್ಕಾಗಿ ಪಾಂಡವರನ್ನು ಬರಹೇಳಲು ವಿದುರನಿಗೆ ಧೃತರಾಷ್ಟ್ರ ಹೇಳಿದ?

ಅವರ ವಿಭವವನವರ ಯಾಗೋ
ತ್ಸವವನಿಂದ್ರಪ್ರಸ್ಥದಲಿ ಕಂ
ಡೆವು ಮನೋಹರವಾಯ್ತು ಬೆಳವಿಗೆ ಪಾಂಡುನಂದನರ
ಅವರು ಹಸ್ತಿನಪುರಿಗೆ ಬಂದು
ತ್ಸವದಲೀ ಸಭೆಯಲಿ ಸುಖ ದ್ಯೂ
ತವನು ರಮಿಸಲಿ ಸೇರಿ ಬದುಕಲಿ ಪಾಂಡುಸುತರೆಂದ (ಸಭಾ ಪರ್ವ, ೧೩ ಸಂಧಿ, ೭೫ ಪದ್ಯ)

ತಾತ್ಪರ್ಯ:
ಪಾಂಡವರ ರಾಜಸೂಯಯಾಗವನ್ನು ವೈಭವವನ್ನೂ ಇಂದ್ರಪ್ರಸ್ಥದಲ್ಲಿ ನಾವು ನೋಡಿದುದು ಆಯಿತು. ಪಾಂಡವರ ಅಭ್ಯುದಯವನ್ನು ನಾವು ನೋಡಿದೆವು. ಈಗ ಅವರು ಹಸ್ತಿನಾಪುರಕ್ಕೆ ಬಂದು ಕೌರವರೊಡನೆ ಸುಖದ್ಯೂವನ್ನಾಡಿ ಜೊತೆಗೂಡಿ ಸುಖಿಸಲಿ ಎಂದು ಧೃತರಾಷ್ಟ್ರ ವಿದುರನಿಗೆ ಹೇಳಿದನು.

ಅರ್ಥ:
ವಿಭವ: ವೈಭವ; ಯಾಗ: ಕ್ರತು, ಅಧ್ವರ; ಉತ್ಸವ: ಸಮಾರಂಭ; ಕಂಡೆವು: ನೋಡಿದೆವು; ಮನೋಹರ: ಚೆಲುವು; ಬೆಳವು: ಅಭ್ಯುದಯ; ನಂದನ: ಮಕ್ಕಳು; ಬಂದು: ಆಗಮಿಸಿ; ಸಭೆ: ಓಲಗ; ಸುಖ: ಸಂತಸ; ದ್ಯೂತ: ಜೂಜು; ರಮಿಸು: ಆನಂದಿಸು; ಸೇರಿ: ಒಟ್ಟಿಗೆ ಬದುಕು: ಜೀವಿಸು; ಸುತ: ಮಕ್ಕಳು;

ಪದವಿಂಗಡಣೆ:
ಅವರ +ವಿಭವವನ್+ಅವರ+ ಯಾಗ
ಉತ್ಸವವನ್+ಇಂದ್ರಪ್ರಸ್ಥದಲಿ +ಕಂ
ಡೆವು +ಮನೋಹರವಾಯ್ತು +ಬೆಳವಿಗೆ+ ಪಾಂಡುನಂದನರ
ಅವರು+ ಹಸ್ತಿನಪುರಿಗೆ +ಬಂದ್
ಉತ್ಸವದಲ್+ಈ+ ಸಭೆಯಲಿ +ಸುಖ +ದ್ಯೂ
ತವನು +ರಮಿಸಲಿ +ಸೇರಿ +ಬದುಕಲಿ+ ಪಾಂಡುಸುತರೆಂದ

ಅಚ್ಚರಿ:
(೧) ನಂದನ, ಸುತ – ಸಮನಾರ್ಥಕ ಪದ
(೨) ಉತ್ಸವ – ೨, ೫ ಸಾಲಿನ ಮೊದಲ ಪದ

ಪದ್ಯ ೭೪: ಧೃತರಾಷ್ಟ್ರ ವಿದುರನಿಗೆ ಏನು ಹೇಳಿದ?

ವಿದುರ ಕೇಳೈ ಪಾಂಡವರ ಸಂ
ಪದಕೆ ಸರಿಯೋ ಮಿಗಿಲೊ ಸಭೆ ತಾ
ನಿದು ವಿಶೇಷವಲಾ ಸಮಸ್ತ ಕ್ಷತ್ರ ವಿಭವದಲಿ
ಇದರೊಳೋಲಗವಿತ್ತು ಹರ್ಷಾ
ಸ್ಪದರು ಕುರು ನೃಪರಲ್ಲಿ ಸುಖ ದ್ಯೂ
ತದಲಿ ರಮಿಸಲಿ ಕರೆದು ತಾ ಕುಂತೀಕುಮಾರಕರ (ಸಭಾ ಪರ್ವ, ೧೩ ಸಂಧಿ, ೭೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ವಿದುರನನ್ನು ಕರೆದು, ಕೇಳು ವಿದುರಾ, ಈ ಸಭಾಭವನವು ಪಾಂಡವರ ಆಸ್ಥಾನ ಭವನಕ್ಕೆ ಸರಿಯೋ, ಹೆಚ್ಚೋ ಹೇಳು, ಈ ಆಸ್ಥಾನಭವನದಲ್ಲಿ ಓಲಗವನ್ನಿತ್ತು, ಕೌರವರು ಪಾಂಡವರೊಡನೆ ಸುಖದ್ಯೂತವನಾಡಲಿ, ಅವರನ್ನು ಕರೆದುಕೊಂಡು ಬಾ ಎಂದು ಹೇಳಿದನು.

ಅರ್ಥ:
ಕೇಳು: ಆಲಿಸು; ಸಂಪದ: ಐಶ್ವರ್ಯ, ಸಂಪತ್ತು; ಸರಿ: ಸಮಾನ; ಮಿಗಿಲು: ಹೆಚ್ಚು; ಸಭೆ: ಓಲಗ; ವಿಶೇಷ: ಅಸಾಮಾನ್ಯವಾದ, ವಿಶಿಷ್ಟವಾದ; ಸಮಸ್ತ: ಎಲ್ಲಾ; ಕ್ಷತ್ರ; ಕ್ಷತ್ರಿಯ; ವಿಭವ: ಸಿರಿ, ಸಂಪತ್ತು; ಓಲಗ: ದರ್ಬಾರು; ಹರ್ಷ: ಸಂತೋಷ; ನೃಪ: ರಾಜ; ಸುಖ: ಸಂತಸ; ದ್ಯೂತ: ಪಗಡೆ, ಜೂಜು; ರಮಿಸು: ಆನಂದಿಸು; ಕರೆ: ಬರೆಮಾಡು; ಕುಮಾರ: ಮಕ್ಕಳು;

ಪದವಿಂಗಡಣೆ:
ವಿದುರ+ ಕೇಳೈ +ಪಾಂಡವರ +ಸಂ
ಪದಕೆ +ಸರಿಯೋ +ಮಿಗಿಲೊ +ಸಭೆ+ ತಾ
ನಿದು +ವಿಶೇಷವಲಾ+ ಸಮಸ್ತ +ಕ್ಷತ್ರ +ವಿಭವದಲಿ
ಇದರೊಳ್+ಓಲಗವಿತ್ತು +ಹರ್ಷಾ
ಸ್ಪದರು +ಕುರು +ನೃಪರಲ್ಲಿ +ಸುಖ +ದ್ಯೂ
ತದಲಿ +ರಮಿಸಲಿ +ಕರೆದು +ತಾ +ಕುಂತೀಕುಮಾರಕರ

ಅಚ್ಚರಿ:
(೧) ಸಂಪದ, ವಿಭವ – ಸಾಮ್ಯಾರ್ಥ ಪದ

ಪದ್ಯ ೭೩: ಧೃತರಾಷ್ಟ್ರನು ಯಾರ ಅಭಿಮತವನ್ನು ಸಮರ್ಥಿಸಿದನು?

ಮಾಡಿತಗ್ಗದ ಸಭೆ ಸುಧರ್ಮೆಯ
ನೇಡಿಸುವ ಚೆಲುವಿನಲಿ ಪುರದಲಿ
ರೂಢಿಸಿತು ಬಳಿಕಂಧನೃಪನೇಕಾಂತಭವನದಲಿ
ಕೂಡಿಕೊಂಡು ಕುಲಪಘಾತದ
ಕೇಡಿಗರ ಕಲ್ಪನೆಯ ಕಲುಪದ
ಜೋಡಿಯನೆ ನಿಶ್ಚೈಸಿ ವಿದುರಂಗರುಹಿದನು ಕರೆಸಿ (ಸಭಾ ಪರ್ವ, ೧೩ ಸಂಧಿ, ೭೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಆಜ್ಞೆಯ ಮೇರೆಗೆ ರತ್ನಾಭರಣಗಳಿಂದ ಕಂಗೊಳಿಸುವ ಉತ್ತಮ ಸಭಾಭವನವು ನಿರ್ಮಾಣವಾಯಿತು, ಇದು ಇಂದ್ರನ ಸುಧರ್ಮವನ್ನು ಅಣುಕಿಸುವಂತಿತ್ತು. ಧೃತರಾಷ್ಟ್ರನು ಏಕಾಂತಭವನದಲ್ಲಿ ಕುಳಿತು ವಿದುರನಿಗೆ ಹೇಳಿಕಳುಹಿಸಿದನು. ಕುಲನಾಶವನ್ನೇ ಮಾಡಲು ನಿರ್ಧರಿಸಿದ ಕೇಡಿಗರಾದ ಕೌರವರ ಸಂಕಲ್ಪವನ್ನೇ ಬೆಂಬಲಿಸಿದನು.

ಅರ್ಥ:
ಮಾಡು: ನಿರ್ಮಿಸು; ಅಗ್ಗ: ಶ್ರೇಷ್ಠ; ಸಭೆ: ಓಲಗ; ಏಡಿಸು: ಅವಹೇಳನ ಮಾಡು, ನಿಂದಿಸು; ಚೆಲುವು: ಸುಂದರ; ಪುರ: ಊರು; ರೂಢಿಸು: ನೆಲಸು, ಇರು; ಬಳಿಕ: ನಂತರ; ಅಂಧನೃಪ: ಕುರುಡ ರಾಜ (ಧೃತರಾಷ್ಟ್ರ); ಏಕಾಂತ: ಒಬ್ಬನೆ; ಭವನ: ಆಲಯ; ಕೂಡಿ: ಸೇರು; ಕುಲ: ವಂಶ; ಕುಲಪ: ಮನೆಯ ಯಜಮಾನ; ಘಾತ: ಹೊಡೆತ, ಪೆಟ್ಟು; ತೊಂದರೆ; ಕೇಡಿಗ: ದುಷ್ಟ; ಕಲ್ಪನೆ: ಯೋಚನೆ; ನಿಶ್ಚೈಸು: ನಿರ್ಧರಿಸು; ಅರುಹು: ತಿಳಿಸು; ಕರೆಸು: ಬರಹೇಳು;

ಪದವಿಂಗಡಣೆ:
ಮಾಡಿತ್+ಅಗ್ಗದ +ಸಭೆ +ಸುಧರ್ಮೆಯನ್
ಏಡಿಸುವ +ಚೆಲುವಿನಲಿ +ಪುರದಲಿ
ರೂಢಿಸಿತು +ಬಳಿಕ್+ಅಂಧ+ನೃಪನ್+ಏಕಾಂತ+ಭವನದಲಿ
ಕೂಡಿಕೊಂಡು +ಕುಲಪ+ಘಾತದ
ಕೇಡಿಗರ+ ಕಲ್ಪನೆಯ+ ಕಲುಪದ
ಜೋಡಿಯನೆ+ ನಿಶ್ಚೈಸಿ +ವಿದುರಂಗ್+ಅರುಹಿದನು +ಕರೆಸಿ

ಅಚ್ಚರಿ:
(೧) ಕ ಕಾರದ ಸಾಲು ಪದಗಳು – ಕೂಡಿಕೊಂಡು ಕುಲಪಘಾತದ ಕೇಡಿಗರ ಕಲ್ಪನೆಯ ಕಲುಪದ