ಪದ್ಯ ೬೬: ದುರ್ಯೋಧನನು ಎಂದು ಕೃತಕೃತ್ಯನಾಗುವೆನೆಂದ?

ನೀ ಕರುಣದಲಿ ನಮ್ಮ ಸಲಹುವ
ಡಾ ಕುಮಾರರ ಕರೆಸಿಕೊಟ್ಟರೆ
ಸಾಕು ಮತ್ತೊಂದಿಹುದಲೇ ಪಾಂಚಾಲನಂದನೆಯ
ನೂಕಿ ಮುಂದಲೆವಿಡಿದು ತೊತ್ತಿರೊ
ಳಾಕೆಯನು ಕುಳ್ಳಿರಿಸಿದಂದು ವಿ
ಶೋಕನಹೆನಾ ದಿವಸದಲಿ ಕೃತಕೃತ್ಯ ತಾನೆಂದ (ಸಭಾ ಪರ್ವ, ೧೩ ಸಂಧಿ, ೬೬ ಪದ್ಯ)

ತಾತ್ಪರ್ಯ:
ದುರ್ಯೋಧನನು ತಂದೆಯ ನುಡಿಗಳನ್ನು ಕೇಳಿ, ಅಪ್ಪಾ ನೀನು ಕರುಣೆಯಿಂದ ಪಾಂಡವರನ್ನು ಕರೆಸಿದರೆ ಸಾಕು. ಆದರೆ ನನ್ನ ಇನ್ನೊಂದು ಅಭಿಲಾಷೆಯಿದೆ, ದ್ರೌಪದಿಯ ಮುಂದಲೆಯನ್ನು ಹಿಡಿದೆಳೆದು, ದಾಸಿಯರೊಡನೆ ಕೂಡಿಸಿದ ದಿನ ನಾನು ಶೋಕವನ್ನು ಕಳೆದುಕೊಂಡು ಕೃತಕೃತ್ಯನಾಗುತ್ತೇನೆ ಎಂದನು.

ಅರ್ಥ:
ಕರುಣ: ದಯೆ; ಸಲಹು: ರಕ್ಷಿಸು; ಕುಮಾರ: ಮಕ್ಕಳು; ಕರೆಸು: ಬರೆಮಾಡು; ಸಾಕು: ಕೊನೆ, ಪೂರೈಸು; ಮತ್ತೊಂದು: ಇನ್ನೊಂದು; ನಂದನೆ: ಮಗಳು; ನೂಕು: ತಳ್ಳು; ಮುಂದಲೆ: ಮುಂಗುರುಳು, ಕೂದಲು; ವಿಡಿದು: ಹಿಡಿದು; ತೊತ್ತು: ದಾಸಿ, ಸೇವಕಿ; ಕುಳ್ಳಿರಿಸು: ಕೂರಿಸು; ವಿಶೋಕ: ಶೋಕರಹಿತ; ದಿವಸ: ದಿನ; ಕೃತಕೃತ್ಯ: ಧನ್ಯ, ಕೃತಾರ್ಥ;

ಪದವಿಂಗಡಣೆ:
ನೀ+ ಕರುಣದಲಿ +ನಮ್ಮ +ಸಲಹುವಡ್
ಆ+ ಕುಮಾರರ+ ಕರೆಸಿಕೊಟ್ಟರೆ
ಸಾಕು +ಮತ್ತೊಂದ್+ಇಹುದಲೇ +ಪಾಂಚಾಲ+ನಂದನೆಯ
ನೂಕಿ +ಮುಂದಲೆವಿಡಿದು +ತೊತ್ತಿರೊಳ್
ಆಕೆಯನು +ಕುಳ್ಳಿರಿಸಿದ್+ಅಂದು +ವಿ
ಶೋಕನಹೆನ್+ಆ+ ದಿವಸದಲಿ +ಕೃತಕೃತ್ಯ +ತಾನೆಂದ

ಅಚ್ಚರಿ:
(೧) ದ್ರೌಪದಿಯನ್ನು ಅಪಮಾನ ಮಾಡುವ ಹುನ್ನಾರ – ಪಾಂಚಾಲನಂದನೆಯ ನೂಕಿ ಮುಂದಲೆವಿಡಿದು ತೊತ್ತಿರೊಳಾಕೆಯನು ಕುಳ್ಳಿರಿಸಿದಂದು ವಿಶೋಕನಹೆನಾ ದಿವಸದಲಿ ಕೃತಕೃತ್ಯ ತಾನೆಂದ

ನಿಮ್ಮ ಟಿಪ್ಪಣಿ ಬರೆಯಿರಿ