ಪದ್ಯ ೬೦: ದುರ್ಯೋಧನನು ಪಾಂಡವರನ್ನು ಹೇಗೆ ಸೊಲಿಸಬಹುದೆಂದ?

ನೀವು ಚಿತ್ತವಿಸಿದೊಡೆ ನೆತ್ತದೊ
ಳಾವು ಸೋಲಿಸಿ ಕೊಡುವೆವರನು
ನೀವು ಕರೆಸುವುದಿಲ್ಲಿಗುಚಿತ ಪ್ರೀತಿವಚನದಲಿ
ನಾವು ಜಾಣರು ಜೀಯ ಜೂಜಿನ
ಜೀವ ಕಲೆಯಲಿ ಧರ್ಮಸುತನಿದ
ನಾವ ಹವಣೆಂದರಿಯನಾತನ ಜಯಿಸಬಹುದೆಂದ (ಸಭಾ ಪರ್ವ, ೧೩ ಸಂಧಿ, ೬೦ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಾಮನು ಹೇಳಿದ ಉಪಾಯವನ್ನು ಬಿಚ್ಚಿಟ್ಟನು. ತಂದೆ ನೀವು ಒಪ್ಪುವುದಾದರೆ, ನಾವು ಪಗಡೆಯಾಟದಲ್ಲಿ ಅವರನ್ನು ಸೋಲಿಸಿ ರಾಜ್ಯವನ್ನು ನಿಮಗೆ ಕೊಡಿಸುತ್ತೇವೆ. ನೀವು ಪ್ರಿಯವಚನಗಳಿಂದ ಅವರನ್ನಿಲ್ಲಿಗೆ ಕರೆಸಿಕೊಡಿ. ನಾವು ಜೂಜೆಂಬ ಜೀವಕಲೆಯಲ್ಲಿ ನಿಪುಣರು. ಯುಧಿಷ್ಠಿರನಿಗೆ ಜೂಜೆಂದರೆ ಏನು ಎಂಬದೂ ತಿಳಿದಿಲ್ಲ. ಅವನನ್ನು ಗೆಲ್ಲಬಹುದು ಎಂದು ದುರ್ಯೋಧನನು ತನ್ನ ಕೃತ್ರಿಮ ಉಪಾಯವನ್ನು ತಿಳಿಸಿದನು.

ಅರ್ಥ:
ಚಿತ್ತವಿಸು: ಗಮನವಿಟ್ಟು ಕೇಳು; ನೆತ್ತ: ಪಗಡೆಯ ದಾಳ; ಸೋಲಿಸು: ಪರಾಭವಗೊಳಿಸು; ಕರೆಸು: ಬರೆಮಾಡು; ಉಚಿತ: ಸರಿಯಾದ; ಪ್ರೀತಿ: ಒಲವು; ವಚನ: ಮಾತು; ಜಾಣರು: ಬುದ್ಧಿವಂತರು; ಜೀಯ: ಒಡೆಯ; ಜೂಜು: ಸಟ್ಟ, ಏನಾದರು ಒತ್ತೆ ಇಟ್ಟು ಆಡುವುದು, ಪಂದ್ಯ; ಜೀವ: ಉಸಿರು; ಕಲೆ: ಕುಶಲವಿದ್ಯೆ, ಸೂಕ್ಷ್ಮ; ಹವಣ: ಮಿತಿ, ಅಳತೆ; ಅರಿ: ತಿಳಿ; ಜಯಿಸು: ಗೆಲ್ಲು;

ಪದವಿಂಗಡಣೆ:
ನೀವು +ಚಿತ್ತವಿಸಿದೊಡೆ+ ನೆತ್ತದೊಳ್
ಆವು +ಸೋಲಿಸಿ +ಕೊಡುವೆವರನು
ನೀವು +ಕರೆಸುವುದ್+ಇಲ್ಲಿಗ್+ಉಚಿತ +ಪ್ರೀತಿ+ವಚನದಲಿ
ನಾವು +ಜಾಣರು +ಜೀಯ +ಜೂಜಿನ
ಜೀವ +ಕಲೆಯಲಿ +ಧರ್ಮಸುತನ್+ಇದನ್
ಆವ +ಹವಣೆಂದ್+ಅರಿಯನ್+ಆತನ+ ಜಯಿಸಬಹುದೆಂದ

ಅಚ್ಚರಿ:
(೧) ಜ ಕಾರದ ತ್ರಿವಳಿ ಪದ – ಜಾಣರು ಜೀಯ ಜೂಜಿನ ಜೀವ

ಪದ್ಯ ೫೯: ಧೃತರಾಷ್ಟ್ರನು ತನ್ನ ಮಗನನ್ನು ಏನು ಮಾಡಬೇಕೆಂದು ಕೇಳಿದನು?

ತಿಂದ ವಿಷವಳ್ಕಿದವು ಮಡುವಿನೊ
ಳಂದು ಬಿಸುಟರೆ ಮುಳುಗಿ ಸುಖದಲಿ
ಮಿಂದು ಹೊರವಂಟರು ಮಹಾಗ್ನಿಯ ಭವನ ಭಂಗದಲಿ
ಒಂದು ಕೂದಲು ಸೀಯದನಿಬರು
ಬಂದರಿವು ಮೊದಲಾದ ಕೃತ್ರಿಮ
ದಿಂದ ಪಾಂಡವರಳಿದುದಿಲ್ಲಿದಕೇನು ಹದನೆಂದ (ಸಭಾ ಪರ್ವ, ೧೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಹಿಂದೆ ಮಾಡಿದ ಮೋಸದ ಆಟಗಳನ್ನು ನೆನೆಯುತ್ತಾ, ಅವರು ತಿಂದ ವಿಷವೇ ಅವರನ್ನು ಕೊಲ್ಲಲು ಹೆದರಿತು. ಹಗ್ಗದಿಂದ ಕಟ್ಟಿ ಮಡುವಿನಲ್ಲಿ ಹಾಕಿದರೆ ಸ್ನಾನ ಮಾಡಿದವರಂತೆ ಹೊರಕ್ಕೆ ಬಂದರು. ಅರಗಿನ ಮನೆಯಲ್ಲಿ ಬೆಂಕಿಯಿಂದ ಸುಡಲು ಹೋದರೆ ಅವರ ಒಂದು ಕೂದಲೂ ಸೀಯಲಿಲ್ಲ. ಏನು ಮೋಸಮಾಡಿದರೂ ಅವರು ಸಾಯಲಿಲ್ಲ. ಇದಕ್ಕೇನು ಮಾಡಬೇಕು ಎಂದು ಧೃತರಾಷ್ಟ್ರ ಕೇಳಿದನು.

ಅರ್ಥ:
ತಿಂದ: ಉಟ ಮಾಡಿದ; ವಿಷ: ನಂಜು; ಅಳುಕು: ಹೆದರು; ಮಡು: ನದಿ, ಹೊಳೆ ಮುಂ.ವುಗಳಲ್ಲಿ ಆಳವಾದ ನೀರಿರುವ ಪ್ರದೇಶ; ಬಿಸುಟು: ಬಿಸಾಕು; ಮುಳುಗು: ನೀರಿನಲ್ಲಿ ಮೀಯು; ಸುಖ: ಸಂತೋಷ, ನಲಿವು; ಮಿಂದು: ಮುಳುಗು; ಹೊರವಂಟರ: ಮುನ್ನಡೆದರು; ಮಹಾಗ್ನಿ: ದೊಡ್ಡದಾದ ಬೆಂಕಿ; ಭವನ: ಆಲಯ; ಭಂಗ: ಮುರಿಯುವಿಕೆ, ತುಂಡು; ಕೂದಲು: ರೋಮ; ಸೀಯು: ಕರಕಲಾಗು; ಅನಿಬರು: ಅಷ್ಟುಜನ; ಬಂದರು: ಆಗಮಿಸಿದರು; ಕೃತ್ರಿಮ: ಕಪಟ, ಮೋಸ; ಅಳಿ: ಸಾವು, ಮರಣ; ಹದ: ಸ್ಥಿತಿ, ರೀತಿ;

ಪದವಿಂಗಡಣೆ:
ತಿಂದ +ವಿಷವ್+ಅಳ್ಕಿದವು +ಮಡುವಿನೊಳ್
ಅಂದು +ಬಿಸುಟರೆ +ಮುಳುಗಿ +ಸುಖದಲಿ
ಮಿಂದು +ಹೊರವಂಟರು +ಮಹಾಗ್ನಿಯ +ಭವನ +ಭಂಗದಲಿ
ಒಂದು +ಕೂದಲು +ಸೀಯದ್+ಅನಿಬರು
ಬಂದರ್+ಇವು+ ಮೊದಲಾದ +ಕೃತ್ರಿಮ
ದಿಂದ +ಪಾಂಡವರ್+ಅಳಿದುದಿಲ್+ಇದಕೇನು +ಹದನೆಂದ

ಅಚ್ಚರಿ:
(೧) ವಿಷವೇ ಹೆದರಿತು ಎಂದು ಹೇಳುವ ಪರಿ – ತಿಂದ ವಿಷವಳ್ಕಿದವು

ಪದ್ಯ ೫೮: ಧೃತರಾಷ್ಟ್ರನು ದುರ್ಯೋಧನನನ್ನು ಏನು ಕೇಳಿದ?

ಏನ ನೆನೆದೈ ಮಗನೆ ಕುಂತೀ
ಸೂನುಗಳ ರಾಜ್ಯಾಪಹಾರದೊ
ಳೇನು ಬುದ್ಧಿ ವಿಳಾಸವಾವುದು ಕಾರ್ಯಗತಿ ನಿನಗೆ
ದಾನದಲಿ ಮೇಣ್ ಸಾಮ್ದಲಿ ಭೇ
ದಾನುಮತದಲಿ ದಂಡದಲಿ ನೀ
ವೇನ ನಿಶ್ಚೈಸಿದಿರಿ ಹೇಳಿನ್ನಂಜಬೇಡೆಂದ (ಸಭಾ ಪರ್ವ, ೧೩ ಸಂಧಿ, ೫೮ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ನೀನು ಪಾಂಡವರ ರಾಜ್ಯವನ್ನು ಅಪಹರಿಸಲು ಏನು ಮಾಡಬೇಕೆಂದು ನಿಶ್ಚೈಸಿರುವೆ, ಅದನ್ನು ಹೇಗೆ ಕಾರ್ಯರೂಪಕ್ಕೆ ತರುತ್ತೀಯ? ಸಾಮ, ದಾನ, ಭೇದ, ದಂಡ ಈ ನಾಲ್ಕರಲ್ಲಿ ಯಾವ ಮಾರ್ಗವನ್ನು ಆರಿಸಿಕೊಂಡಿರುವೆ ಅಂಜದೆ ಹೇಳು ಎಂದು ಕೇಳಿದನು.

ಅರ್ಥ:
ನೆನೆ:ವಿಚಾರಿಸು, ಆಲೋಚಿಸು; ಮಗ: ಕುಮಾರ; ಸೂನು: ಪುತ್ರ; ರಾಜ್ಯ: ರಾಷ್ಟ್ರ; ಅಪಹಾರ: ದೋಚುವ; ಬುದ್ಧಿ: ಮನಸ್ಸು, ಚಿತ್ತ; ವಿಳಾಸ: ಯೋಜನೆ, ವಿಚಾರ; ಕಾರ್ಯ: ಕೆಲಸ; ಗತಿ: ವೇಗ; ಕಾರ್ಯಗತಿ: ಕಾರ್ಯರೂಪ; ದಾನ, ಸಾಮ, ಭೇದ, ದಂಡ: ಚತುರೋಪಾಯಗಳು; ನಿಶ್ಚೈಸು: ತೀರ್ಮಾನಿಸು; ಅಂಜು: ಹೆದರು;

ಪದವಿಂಗಡಣೆ:
ಏನ +ನೆನೆದೈ+ ಮಗನೆ +ಕುಂತೀ
ಸೂನುಗಳ +ರಾಜ್ಯ+ಅಪಹಾರದೊಳ್
ಳೇನು +ಬುದ್ಧಿ +ವಿಳಾಸವಾವುದು +ಕಾರ್ಯಗತಿ +ನಿನಗೆ
ದಾನದಲಿ +ಮೇಣ್ +ಸಾಮದಲಿ +ಭೇ
ದ+ಆನು+ಮತದಲಿ +ದಂಡದಲಿ+ ನೀ
ವೇನ+ ನಿಶ್ಚೈಸಿದಿರಿ+ ಹೇಳ್+ಇನ್+ಅಂಜಬೇಡೆಂದ

ಅಚ್ಚರಿ:
(೧) ಚತುರೋಪಾಯಗಳು – ಸಾಮ, ದಾನ, ಭೇದ, ದಂಡ

ಪದ್ಯ ೫೭: ಧೃತರಾಷ್ಟ್ರನು ದುರ್ಯೋಧನನನ್ನು ಹೇಗೆ ಕರೆಸಿದನು?

ಎಲೆಗೆ ಕರೆಯೋ ಪಾಪಿ ಕೌರವ
ಕುಲ ಕುಠಾರನ ನಿನ್ನ ಮಗನೊಡ
ನಳಿವೆನೈಸಲೆ ಪಾಂಡುಪುತ್ರರ ವೈರಬಂಧದಲಿ
ತಿಳುಹಿ ತಾಯೆನಲಾಕೆ ಶಕುನಿಯ
ಕಳುಹಿ ಕರೆಸಿದಡಾತ ಮರಳಿದ
ನಳಲುದೊರೆಯಲಿ ಮೂಡಿ ಮುಳುಗಿದನಂದು ಧೃತರಾಷ್ಟ್ರ (ಸಭಾ ಪರ್ವ, ೧೩ ಸಂಧಿ, ೫೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಆಲಯದಿಂದ ಹೊರಹೋಗಲು, ಧೃತರಾಷ್ಟ್ರನು ದುಃಖಭರಿತನಾಗಿ, ಎಲೋ ಕರೆಯಿರಿ, ಕುಲಕ್ಕೆ ಕೊಡಲಿಯಂತಿರುವ ಆ ದುರ್ಯೋಧನನನ್ನು ಕರೆಯಿರಿ, ನಿನ್ನ ಪಾಪಿಮಗನನ್ನು ಕರೆ, ಪಾಂಡವರೊಡನೆ ವೈರವನು ಕಟ್ಟಿಕೊಂಡು ನಿನ್ನ ಮಗನೊಡನೆ ಸಾಯುತ್ತೇನೆ ಅವನನ್ನು ಕರೆ ಎನ್ನಲು ಗಾಂಧಾರಿಯು ಶಕುನಿಯನ್ನು ಕಳಿಸಿ ಅವನನ್ನು ಕರೆಸಿದಳು, ಧೃತರಾಷ್ಟ್ರನು ದುಃಖದ ತೊರೆಯಲ್ಲಿ ಮುಳುಗಿದನು.

ಅರ್ಥ:
ಕರೆ: ಬರೆಮಾಡು; ಪಾಪಿ: ದುಷ್ಟ; ಕುಲ: ವಂಶ; ಕುಠಾರ: ಕೊಡಲಿ, ಗುದ್ದಲಿ; ಮಗ: ಸುತ; ಅಳಿ: ಸಾವು, ಮರಣ; ಐಸಲೆ: ಅಲ್ಲವೆ; ಪುತ್ರ: ಮಕ್ಕಳು; ವೈರ: ಹಗೆ, ಶತ್ರುತ್ವ; ಬಂಧ: ಬಿಗಿ; ತಿಳುಹು: ತಿಳಿದು, ಅರಿತು; ಕಳುಹಿ: ತೆರಳು; ಕರೆಸು: ಬರೆಮಾಡು; ಮರಳು: ಹಿಂದಿರುಗು; ಅಳಲು: ದುಃಖ; ಒರೆ: ಬಳಿ, ಸವರು; ಮೂಡು: ಭರ್ತಿಮಾಡು, ತುಂಬು; ಮುಳುಗು: ಮರೆಯಾಗು, ಮುಚ್ಚಿಹೋಗು;

ಪದವಿಂಗಡಣೆ:
ಎಲೆಗೆ +ಕರೆಯೋ +ಪಾಪಿ +ಕೌರವ
ಕುಲ+ ಕುಠಾರನ+ ನಿನ್ನ+ ಮಗನೊಡನ್
ಅಳಿವೆನ್+ಐಸಲೆ +ಪಾಂಡುಪುತ್ರರ+ ವೈರ+ಬಂಧದಲಿ
ತಿಳುಹಿ+ ತಾ+ಎನಲ್+ಆಕೆ +ಶಕುನಿಯ
ಕಳುಹಿ+ ಕರೆಸಿದಡ್+ಆತ +ಮರಳಿದನ್
ಅಳಲುದ್+ಒರೆಯಲಿ +ಮೂಡಿ +ಮುಳುಗಿದನಂದು +ಧೃತರಾಷ್ಟ್ರ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೌರವ ಕುಲ ಕುಠಾರ
(೨) ಧೃತರಾಷ್ಟ್ರನ ದುಃಖ – ಅಳಲುದೊರೆಯಲಿ ಮೂಡಿ ಮುಳುಗಿದನಂದು ಧೃತರಾಷ್ಟ್ರ
(೩) ದುರ್ಯೋಧನನನ್ನು ಬಯ್ಯುವ ಪರಿ – ಪಾಪಿ, ಕೌರವ ಕುಲ ಕುಠಾರನ

ಪದ್ಯ ೫೬: ದುರ್ಯೋಧನನು ಏನು ಹೇಳಿ ಹೊರಟನು?

ಮಾತು ಸೊಗಸದಲಾ ವೃಥಾ ನೀ
ವೇತಕೆನ್ನನು ಕರೆಸಿದಿರಿ ನಿ
ಮ್ಮಾತಗಳು ಭೀಮಾರ್ಜುನರು ಸಹಿತೀ ಮಹೀತಳವ
ತಾತ ನೀವಾಳುವುದು ತಾಯೆ ಸು
ನೀತನಾ ಧರ್ಮಜನು ಧರ್ಮ ವಿ
ಘಾತಕರು ನಾವೆಮ್ಮ ಕಳುಹುವುದೆನುತ ಹೊರವಂಟ (ಸಭಾ ಪರ್ವ, ೧೩ ಸಂಧಿ, ೫೬ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ತಂದೆ ತಾಯಿಯನ್ನು ಭಾವುಕವಾಗಿ ತನ್ನ ಬಳಿ ಸಳೆಯಲು ತನ್ನ ಮಾತನ್ನು ಮುಂದುವರಿಸುತ್ತಾ, ನನ್ನ ಮಾತು ನಿಮಗೆ ಹಿತವೆನಿಸುತ್ತಿಲ್ಲ, ನನ್ನನ್ನೇಕೆ ಸುಮ್ಮನೆ ಇಲ್ಲಿಗೆ ಕರೆಸಿದಿರಿ? ಅಪ್ಪ, ನಿಮ್ಮವರಾದ ಭೀಮಾರ್ಜುನರೊಡನೆ ಈ ಭೂಮಿಯನ್ನು ನೀವೇ ಆಳಿರಿ, ಅಮ್ಮಾ, ಧರ್ಮಜನು ನ್ಯಾಯಮಾರ್ಗದಲ್ಲಿ ಸುಶಿಕ್ಷಿತನು, ನಿಮ್ಮ ಮಕ್ಕಳಾದ ನಾವು ಅಧರ್ಮದವರು, ಧರ್ಮದಿಂದ ದೂರವುಳಿದವರು, ಅವರೊಂದಿಗೆ ನೀವು ಈ ಭೂಮಿಯನ್ನು ಆಳಿರಿ, ನಮಗೆ ತೆರಳಲು ಅಪ್ಪಣೆ ನೀಡಿ ಎಂದು ಹೇಳಿ ತೆರಳಿದನು.

ಅರ್ಥ:
ಮಾತು: ವಾಣಿ; ಸೊಗಸು: ಚೆಂದ; ವೃಥ: ಸುಮ್ಮನೆ; ಕರೆಸು: ಬರೆಮಾಡು; ಸಹಿತ: ಜೊತೆ; ಮಹೀತಳ: ಭೂಮಿ; ತಾತ: ತಂದೆ; ಆಳು: ಅಧಿಕಾರ ನಡೆಸು; ತಾಯಿ: ಮಾತೆ; ಸುನೀತ: ಒಳ್ಳೆಯ ನಡತೆ; ವಿಘಾತ: ಕೇಡು, ಹಾನಿ; ಕಳುಹು: ಕಳಿಸು, ಬೀಳ್ಕೊಡು; ಹೊರವಂಟ: ತೆರಳು;

ಪದವಿಂಗಡಣೆ:
ಮಾತು+ ಸೊಗಸದಲಾ+ ವೃಥಾ +ನೀ
ವೇತಕ್+ಎನ್ನನು +ಕರೆಸಿದಿರಿ+ ನಿ
ಮ್ಮಾತಗಳು+ ಭೀಮಾರ್ಜುನರು +ಸಹಿತೀ +ಮಹೀತಳವ
ತಾತ +ನೀವಾಳುವುದು +ತಾಯೆ +ಸು
ನೀತನ್+ಆ+ಧರ್ಮಜನು +ಧರ್ಮ +ವಿ
ಘಾತಕರು +ನಾವೆಮ್ಮ +ಕಳುಹುವುದ್+ಎನುತ +ಹೊರವಂಟ