ಪದ್ಯ ೫೫: ಗಾಂಧಾರಿ ಮತ್ತು ಧೃತರಾಷ್ಟ್ರರು ಮಗನ ಮಾತು ಕೇಳಿ ಹೇಗಾದರು?

ಕರಗಿದಳು ಗಾಂಧಾರಿ ಕಂಬನಿ
ದುರುಗಲಲಿ ಧೃತರಾಷ್ಟ್ರನೆದೆ ಜ
ರ್ಝರಿತವಾದುದು ಮಗನ ಮಾತಿನ ಮುಸಲ ಹತಿಗಳಲಿ
ಸುರಿವ ನಯನಾಂಬುಗಳ ಮೂಗಿನ
ಬೆರಳ ತೂಗುವ ಮಕುಟದವನೀ
ಶ್ವರನು ಮೌನದೊಳಿದ್ದನೊಂದು ವಿಗಳಿಗೆ ಮಾತ್ರದಲಿ (ಸಭಾ ಪರ್ವ, ೧೩ ಸಂಧಿ, ೫೫ ಪದ್ಯ)

ತಾತ್ಪರ್ಯ:
ಮಗನ ಮಾತುಗಳನ್ನು ಕೇಳಿ ಗಾಂಧಾರಿಯ ಕಣ್ಣುಗಳಲ್ಲಿ ಆಶ್ರುಧಾರೆಯುಂಟಾಗಿ, ಕರಗಿಹೋದಳು. ಧೃತರಾಷ್ಟ್ರನು ತನ್ನ ಮಗನ ನೋವಿನ ಮಾತುಗಳನ್ನು ಕೇಳಿ ಒನಕೆಯ ಪೆಟ್ಟು ಬಡಿದವನಂತೆ ಅವನ ಎದೆ ಒಡೆದುಹೋಯಿತು. ಕಣ್ಣೀರು ಸುರಿಯುತ್ತಿರಲು, ಮೂಗಿನ ಮೇಲೆ ಬೆರಳನ್ನಿಟ್ಟು, ತಲೆದೂಗುತ್ತಾ, ಧೃತರಾಷ್ಟ್ರನು ಒಂದು ಗಳಿಗೆ ಮೌನದಿಂದಿದ್ದನು.

ಅರ್ಥ:
ಕರಗು: ಕನಿಕರ ಪಡು, ನೀರಾಗಿಸು; ಕಂಬನಿ: ಕಣ್ಣೀರು; ಉರು: ಹೆಚ್ಚಾದ; ಎದೆ: ವಕ್ಷಸ್ಥಳ; ಜರ್ಝರಿತ: ಬಿರುಕು, ಒಡೆ; ಮಗ: ಪುತ್ರ; ಮಾತು: ವಾಣಿ; ಮುಸಲ: ಒನಕೆ, ಗದೆ; ಹತಿ: ಪೆಟ್ಟು, ಹೊಡೆತ; ಸುರಿ: ಹರಿ; ನಯನ: ಕಣ್ಣು; ಅಂಬು: ನೀರು; ಮೂಗು: ನಾಸಿಕ; ಬೆರಳು: ಅಂಗುಲಿ; ತೂಗು: ಅಲ್ಲಾಡಿಸು; ಮಕುಟ: ಕಿರೀಟ; ಅವನೀಶ್ವರ: ರಾಜ; ಅವನೀ: ಭೂಮಿ; ಮೌನ: ನಿಶ್ಯಬ್ದ; ಗಳಿಗೆ: ಕಾಲ;

ಪದವಿಂಗಡಣೆ:
ಕರಗಿದಳು +ಗಾಂಧಾರಿ +ಕಂಬನಿದ್
ಉರುಗಲಲಿ +ಧೃತರಾಷ್ಟ್ರನ್+ಎದೆ +ಜ
ರ್ಝರಿತವಾದುದು+ ಮಗನ+ ಮಾತಿನ +ಮುಸಲ +ಹತಿಗಳಲಿ
ಸುರಿವ +ನಯನ+ಅಂಬುಗಳ +ಮೂಗಿನ
ಬೆರಳ +ತೂಗುವ +ಮಕುಟದ್+ಅವನೀ
ಶ್ವರನು +ಮೌನದೊಳ್+ಇದ್ದನ್+ಒಂದು +ವಿಗಳಿಗೆ +ಮಾತ್ರದಲಿ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮಗನ ಮಾತಿನ ಮುಸಲ
(೨) ದುಃಖವನ್ನು ವರ್ಣಿಸುವ ಪದ – ಕರಗಿದಳು, ಜರ್ಝರಿತವಾದುದು

ನಿಮ್ಮ ಟಿಪ್ಪಣಿ ಬರೆಯಿರಿ