ಪದ್ಯ ೫೫: ಗಾಂಧಾರಿ ಮತ್ತು ಧೃತರಾಷ್ಟ್ರರು ಮಗನ ಮಾತು ಕೇಳಿ ಹೇಗಾದರು?

ಕರಗಿದಳು ಗಾಂಧಾರಿ ಕಂಬನಿ
ದುರುಗಲಲಿ ಧೃತರಾಷ್ಟ್ರನೆದೆ ಜ
ರ್ಝರಿತವಾದುದು ಮಗನ ಮಾತಿನ ಮುಸಲ ಹತಿಗಳಲಿ
ಸುರಿವ ನಯನಾಂಬುಗಳ ಮೂಗಿನ
ಬೆರಳ ತೂಗುವ ಮಕುಟದವನೀ
ಶ್ವರನು ಮೌನದೊಳಿದ್ದನೊಂದು ವಿಗಳಿಗೆ ಮಾತ್ರದಲಿ (ಸಭಾ ಪರ್ವ, ೧೩ ಸಂಧಿ, ೫೫ ಪದ್ಯ)

ತಾತ್ಪರ್ಯ:
ಮಗನ ಮಾತುಗಳನ್ನು ಕೇಳಿ ಗಾಂಧಾರಿಯ ಕಣ್ಣುಗಳಲ್ಲಿ ಆಶ್ರುಧಾರೆಯುಂಟಾಗಿ, ಕರಗಿಹೋದಳು. ಧೃತರಾಷ್ಟ್ರನು ತನ್ನ ಮಗನ ನೋವಿನ ಮಾತುಗಳನ್ನು ಕೇಳಿ ಒನಕೆಯ ಪೆಟ್ಟು ಬಡಿದವನಂತೆ ಅವನ ಎದೆ ಒಡೆದುಹೋಯಿತು. ಕಣ್ಣೀರು ಸುರಿಯುತ್ತಿರಲು, ಮೂಗಿನ ಮೇಲೆ ಬೆರಳನ್ನಿಟ್ಟು, ತಲೆದೂಗುತ್ತಾ, ಧೃತರಾಷ್ಟ್ರನು ಒಂದು ಗಳಿಗೆ ಮೌನದಿಂದಿದ್ದನು.

ಅರ್ಥ:
ಕರಗು: ಕನಿಕರ ಪಡು, ನೀರಾಗಿಸು; ಕಂಬನಿ: ಕಣ್ಣೀರು; ಉರು: ಹೆಚ್ಚಾದ; ಎದೆ: ವಕ್ಷಸ್ಥಳ; ಜರ್ಝರಿತ: ಬಿರುಕು, ಒಡೆ; ಮಗ: ಪುತ್ರ; ಮಾತು: ವಾಣಿ; ಮುಸಲ: ಒನಕೆ, ಗದೆ; ಹತಿ: ಪೆಟ್ಟು, ಹೊಡೆತ; ಸುರಿ: ಹರಿ; ನಯನ: ಕಣ್ಣು; ಅಂಬು: ನೀರು; ಮೂಗು: ನಾಸಿಕ; ಬೆರಳು: ಅಂಗುಲಿ; ತೂಗು: ಅಲ್ಲಾಡಿಸು; ಮಕುಟ: ಕಿರೀಟ; ಅವನೀಶ್ವರ: ರಾಜ; ಅವನೀ: ಭೂಮಿ; ಮೌನ: ನಿಶ್ಯಬ್ದ; ಗಳಿಗೆ: ಕಾಲ;

ಪದವಿಂಗಡಣೆ:
ಕರಗಿದಳು +ಗಾಂಧಾರಿ +ಕಂಬನಿದ್
ಉರುಗಲಲಿ +ಧೃತರಾಷ್ಟ್ರನ್+ಎದೆ +ಜ
ರ್ಝರಿತವಾದುದು+ ಮಗನ+ ಮಾತಿನ +ಮುಸಲ +ಹತಿಗಳಲಿ
ಸುರಿವ +ನಯನ+ಅಂಬುಗಳ +ಮೂಗಿನ
ಬೆರಳ +ತೂಗುವ +ಮಕುಟದ್+ಅವನೀ
ಶ್ವರನು +ಮೌನದೊಳ್+ಇದ್ದನ್+ಒಂದು +ವಿಗಳಿಗೆ +ಮಾತ್ರದಲಿ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮಗನ ಮಾತಿನ ಮುಸಲ
(೨) ದುಃಖವನ್ನು ವರ್ಣಿಸುವ ಪದ – ಕರಗಿದಳು, ಜರ್ಝರಿತವಾದುದು

ಪದ್ಯ ೫೪: ಯಾವುದರಿಂದ ಹೊರಬರಲಾಗುತ್ತಿಲ್ಲ ಎಂದು ದುರ್ಯೊಧನನು ಹೇಳಿದನು?

ಅರಸನಭ್ಯುದಯವನು ಭೀಮನ
ಧರಧುರವನರ್ಜುನನ ಬಿಂಕವ
ನರಸಿಯಾಟೋಪವನು ಮಾದ್ರೀಸುತರ ಸಂಭ್ರಮವ
ಹೊರೆಯ ಧೃಷ್ಟದ್ಯುಮ್ನ ದ್ರುಪದಾ
ದ್ಯರ ವೃಥಾಡಂಬರವ ಕಂಡೆದೆ
ಬಿರಿದುದಳುಕಿದೆನಳುಕಿದೆನು ಸಂತವಿಸಲರಿದೆಂದ (ಸಭಾ ಪರ್ವ, ೧೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಏಳಿಗೆ, ಭೀಮನ ಅಬ್ಬರ, ಅರ್ಜುನನ ಠೀವಿ, ದ್ರೌಪದಿಯ ಆಡಂಬರ, ನಕುಲ ಸಹದೇವರ ಸಂಭ್ರಮ, ಅವರ ಪರಿವಾರದವರಾದ ಧೃಷ್ಟದ್ಯುಮ್ನ, ದ್ರುಪದನೇ ಮೊದಲಾದವರ ಒಣಬಿಂಕಗಳನ್ನು ಕಂಡು ನನ್ನ ಎದೆ ಬಿರಿದು ಅಳುಕುತ್ತಿದೆ. ಅದರಿಂದ ಮೇಲೆ ಬರಲು ಆಗುತ್ತಿಲ್ಲ ಎಂದು ದುರ್ಯೋಧನನು ಕಡುನೊಂದು ಹೇಳಿದನು.

ಅರ್ಥ:
ಅರಸ: ರಾಜ; ಅಭ್ಯುದಯ: ಏಳಿಗೆ; ಧರಧುರ: ಆರ್ಭಟ; ಬಿಂಕ: ಗರ್ವ, ಜಂಬ; ಅರಸಿ: ರಾಣಿ; ಆಟೋಪ: ಆಡಂಬರ, ದರ್ಪ; ಸುತ: ಮಕ್ಕಳು; ಸಂಭ್ರಮ: ಉತ್ಸಾಹ, ಸಡಗರ; ಹೊರೆ: ಭಾರ; ಆದಿ: ಮುಂತಾದ; ವೃಥ: ಸುಮ್ಮನೆ; ಆಡಂಬರ: ತೋರಿಕೆ, ಢಂಭ; ಕಂಡು: ನೋಡಿ; ಬಿರಿ: ಸೀಳು; ಅಳುಕು: ಹಿಂಜರಿ, ಅಂಜು; ಸಂತವಿಸು: ಸಂತೋಷಿಸು; ಅರಿ: ತಿಳಿ;

ಪದವಿಂಗಡಣೆ:
ಅರಸನ್+ಅಭ್ಯುದಯವನು +ಭೀಮನ
ಧರಧುರವನ್+ಅರ್ಜುನನ +ಬಿಂಕವನ್
ಅರಸಿ+ಆಟೋಪವನು +ಮಾದ್ರೀಸುತರ+ ಸಂಭ್ರಮವ
ಹೊರೆಯ+ ಧೃಷ್ಟದ್ಯುಮ್ನ +ದ್ರುಪದಾ
ದ್ಯರ+ ವೃಥ+ಆಡಂಬರವ +ಕಂಡೆದೆ
ಬಿರಿದುದ್+ಅಳುಕಿದೆನ್+ಅಳುಕಿದೆನು+ ಸಂತವಿಸಲ್+ಅರಿದೆಂದ

ಅಚ್ಚರಿ:
(೧) ಹಿಂಜರಿಪಟ್ಟೆ ಎಂದು ಹೇಳಲು – ಅಳುಕಿದೆನ್ ೨ ಬಾರಿ ಪ್ರಯೋಗ
(೨) ಅಭ್ಯುದಯ, ಧರಧುರ, ಬಿಂಕ, ಆಟೋಪ, ಸಂಭ್ರಮ, ಆಡಂಬರ – ಪದಗಳ ಬಳಕೆ

ಪದ್ಯ ೫೩: ದುರ್ಯೋಧನನು ತನ್ನ ಕೀರ್ತಿಯನ್ನು ಹೇಗೆ ಉಳಿಸಿಕೊಳ್ಳುತ್ತೇನೆಂದನು?

ಆಯ ಛಲವಭಿಮಾನ ಹೋಗಲಿ
ಕಾಯ ಬೇಕೆಂಬರೆ ನೃಪಾಲರ
ಬಾಯ ತಂಬುಲ ತಿಂದು ಹೊರೆವೆವು ಬೆಂದ ಬಸುರುಗಳ
ಆಯ ಛಲವಾಚಂದ್ರ ತಾರಕ
ಕಾಯವಧ್ರುವವೆಂಬಡಿದಕೆ ಸ
ಹಾಯವಿದೆಲಾ ಕಾಲಕೂಟ ಕಠೋರ ನದಿಯೆಂದ (ಸಭಾ ಪರ್ವ, ೧೩ ಸಂಧಿ, ೫೩ ಪದ್ಯ)

ತಾತ್ಪರ್ಯ:
ನಮ್ಮ ರಾಜ್ಯ, ನಮ್ಮ ಛಲ, ಸ್ವಾಭಿಮಾನಗಳು ಬೇಡವೇ ಬೇಡ. ಅವಉ ಎಲ್ಲಿಗಾದರೂ ಹೋಗಲಿ; ಬೆಂದು ಹೋದ ನಮ್ಮ ಹೊಟ್ಟೆಗಳನ್ನು ಪರರಾಜರ ಬಾಯ ತಂಬುಲವನ್ನು ತಿಂದಾದರೂ ಬದುಕುತ್ತೇವೆ. ರಾಜ್ಯ, ಛಲ, ಸ್ವಾಭಿಮಾನಗಳು ಶಾಶ್ವತ, ದೇಹವು ನಶ್ವರ ಎಂದು ನೀವು ಹೇಳುವುದಾದರೆ, ಈ ದೇಹಗಳನ್ನು ಕಠೋರ ಕಾಲಕೂಟ ವಿಷದ ನದಿಗೆ ಕೊಟ್ಟು ನಮ್ಮ ಕೀರ್ತಿಯನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದನು.

ಅರ್ಥ:
ಆಯ: ರೀತಿ, ಉದ್ದೇಶ; ಛಲ: ನೆಪ, ವ್ಯಾಜ; ಅಭಿಮಾನ: ಹೆಮ್ಮೆ, ಅಹಂಕಾರ; ಹೋಗು: ತೆರಳು; ಕಾಯ: ದೇಹ; ನೃಪಾಲ: ರಾಜ; ಬಾಯ: ಬಾಯಿ, ಮುಖದ ಅಂಗ; ತಂಬುಲ: ಅಗಿದು ಉಗುಳುವ ಕವಳ, ತಾಂಬೂಲ; ಹೊರೆ: ಭಾರ; ಬೆಂದ: ಪಕ್ವವಾದ; ಬಸುರು: ಹೊಟ್ಟೆ; ಆಚಂದ್ರ: ಯಾವಾಗಲು; ತಾರಕ: ರಕ್ಷಕ, ಅಂಬಿಗ; ಅಧ್ರುವ: ಸ್ಥಿರವಲ್ಲದ; ಸಹಾಯ: ನೆರವು; ಕಾಲಕೂಟ: ವಿಷ; ಕಠೋರ: ಭೀಕರ; ನದಿ: ಸರೋವರ;

ಪದವಿಂಗಡಣೆ:
ಆಯ+ ಛಲವ್+ಅಭಿಮಾನ +ಹೋಗಲಿ
ಕಾಯ +ಬೇಕೆಂಬರೆ+ ನೃಪಾಲರ
ಬಾಯ+ ತಂಬುಲ+ ತಿಂದು +ಹೊರೆವೆವು+ ಬೆಂದ +ಬಸುರುಗಳ
ಆಯ+ ಛಲವ್+ಆಚಂದ್ರ +ತಾರಕ
ಕಾಯವ್+ಅಧ್ರುವವ್+ಎಂಬಡಿದಕೆ+ ಸ
ಹಾಯವಿದೆಲಾ+ ಕಾಲಕೂಟ+ ಕಠೋರ +ನದಿಯೆಂದ

ಅಚ್ಚರಿ:
(೧) ಸ್ವಾಭಿಮಾನದ ನುಡಿ – ನೃಪಾಲರ ಬಾಯ ತಂಬುಲ ತಿಂದು ಹೊರೆವೆವು ಬೆಂದ ಬಸುರುಗಳ; ಕಾಯವಧ್ರುವವೆಂಬಡಿದಕೆ ಸಹಾಯವಿದೆಲಾ ಕಾಲಕೂಟ ಕಠೋರ ನದಿಯೆಂದ

ಪದ್ಯ ೫೨: ದುರ್ಯೋಧನನು ಯಾವುದು ತನ್ನ ಸಾಮ್ರಾಜ್ಯವೆಂದು ಹೇಳಿದನು?

ಅರಸ ಧರ್ಮಿಷ್ಠನು ಯುಧಿಷ್ಠಿರ
ಧರಣಿಪತಿಯುತ್ತಮನು ಪವನಜ
ನರರು ವಿನಯಾನ್ವಿತರು ನೀವೇ ಪುತ್ರವತ್ಸಲರು
ಧರಣಿಗಾಗಿನ್ನೈಸಲೇ ನೂ
ರ್ವರು ಕುಮಾರರು ಹೊರಗೆ ನಿಮ್ಮಯ
ಕರುಣವೇ ಸಾಮ್ರಾಜ್ಯ ನಮ್ಮನು ಬೀಳುಗೊಡಿರೆಂದ (ಸಭಾ ಪರ್ವ, ೧೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ತನ್ನ ತಾಯಿಯೊಂದಿಗೆ ಮಾತನ್ನು ಮುಂದುವರಿಸುತ್ತಾ, ನಮ್ಮ ತಂದೆಯು ಧರ್ಮಿಷ್ಠನು, ಯುಧಿಷ್ಠಿರನು ಉತ್ತಮನಾದವನು, ಭೀಮಾರ್ಜುನರು ವಿನಯ ಸಂಪನ್ನರು, ನಿಮ್ಮ ನೂರು ಜನ ಮಕ್ಕಳಾದ ನಾವು ಭೂಮಿಗೆ ಭಾಗಕ್ಕೆ ಸಲ್ಲದವರಲ್ಲವೇ? ನಿಮ್ಮ ಕರುಣೆಯೇ ನಮಗೆ ಸಾಮ್ಯಾಜ್ಯ, ಅದೇ ಸಾಕು, ಹೊರಡಲು ಅಪ್ಪಣೆನೀಡಿ ಎಂದು ದುರ್ಯೋಧನನು ತನ್ನ ತಾಯಿಗೆ ಹೇಳಿದನು.

ಅರ್ಥ:
ಅರಸ: ರಾಜ; ಧರ್ಮಿಷ್ಠ: ಧರ್ಮ ಮಾರ್ಗದಲ್ಲಿ ನಡೆವವ; ಧರಣಿಪತಿ: ರಾಜ; ಧರಣಿ: ಭೂಮಿ; ಉತ್ತಮ: ಶ್ರೇಷ್ಠ; ಪವನಜ: ವಾಯುಪುತ್ರ (ಭೀಮ); ನರ: ಅರ್ಜುನ; ವಿನಯ: ಒಳ್ಳೆಯತನ, ಸೌಜನ್ಯ; ಅನ್ವಿತ: ಒಡಗೂಡಿದ; ಪುತ್ರ: ಮಕ್ಕಳು; ವತ್ಸಲ: ಪ್ರೀತಿಸುವ, ಒಲುಮೆಯಿಂದ ಕೂಡಿದ; ಐಸಲೇ: ಅಲ್ಲವೇ; ನೂರು: ಶತ; ಕುಮಾರ: ಮಕ್ಕಳು; ಹೊರಗೆ: ಆಚೆ; ಕರುಣ: ದಯೆ; ಸಾಮ್ರಾಜ್ಯ: ರಾಷ್ಟ್ರ; ಬೀಳುಗೊಡು: ಕಳಿಸು;

ಪದವಿಂಗಡಣೆ:
ಅರಸ +ಧರ್ಮಿಷ್ಠನು +ಯುಧಿಷ್ಠಿರ
ಧರಣಿಪತಿ+ಉತ್ತಮನು +ಪವನಜ
ನರರು +ವಿನಯಾನ್ವಿತರು+ ನೀವೇ +ಪುತ್ರ+ವತ್ಸಲರು
ಧರಣಿಗಾಗ್+ಇನ್+ಐಸಲೇ +ನೂ
ರ್ವರು +ಕುಮಾರರು +ಹೊರಗೆ +ನಿಮ್ಮಯ
ಕರುಣವೇ +ಸಾಮ್ರಾಜ್ಯ +ನಮ್ಮನು+ ಬೀಳುಗೊಡಿರೆಂದ

ಅಚ್ಚರಿ:
(೧) ಅರಸ, ಧರಣಿಪತಿ – ಸಮನಾರ್ಥಕ ಪದ
(೨) ಕರುಣೆಯನ್ನು ಹುಟ್ಟಿಸುವ ಮಾತು – ನಿಮ್ಮಯ ಕರುಣವೇ ಸಾಮ್ರಾಜ್ಯ ನಮ್ಮನು ಬೀಳುಗೊಡಿರೆಂದ

ಪದ್ಯ ೫೧: ದುರ್ಯೋಧನನು ಗಾಂಧಾರಿಗೆ ಏನು ಹೇಳಿದ?

ತಾಯೆ ನೇಮವಗೊಂಡೆನಯ್ಯಂ
ಗಾ ಯುಧಿಷ್ಠಿರನಾತ್ಮಜನಲೇ
ವಾಯುಸುತ ನರ ನಕುಲ ಸಹದೇವರು ಕುಮಾರರಲೆ
ಈ ಯುಗದಲಿನ್ನವರ ಸಂತತಿ
ದಾಯಭಾಗಿಗಳಾಗಿ ಬದುಕಲಿ
ರಾಯರಿಲ್ಲಾ ಮತ್ತೆ ನಮ್ಮನು ರಕ್ಷಿಸುವರೆಂದ (ಸಭಾ ಪರ್ವ, ೧೩ ಸಂಧಿ, ೫೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಗಾಂಧಾರಿಗೆ, ಅಮ್ಮ ನಾನು ಹೊರಡಲು ನಿಮ್ಮ ಅಪ್ಪಣೆಯನ್ನು ತೆಗೆದುಕೊಂಡಿದ್ದೇನೆ, ಅಪ್ಪನಿಗೆ ಧರ್ಮಜ, ಭೀಮ, ಅರ್ಜುನ, ನಕುಲ ಸಹದೇವರು ಮಕ್ಕಳಲ್ಲವೇ? ಈಗ ಇನ್ನು ಮುಂದೆ ಅವರ ಮಕ್ಕಳುಗಳೇ ನಮ್ಮ ಪಾಲನ್ನು ಪಡೆದುಕೊಂಡು ಸುಖವಾಗಿ ಬಾಳಲಿ, ನಮ್ಮನ್ನು ಕಾಪಾಡುವ ಬೇರೆಯ ರಾಜರು ಇಲ್ಲವೇ ಎಂದು ಅಮ್ಮನ ಮನಸ್ಸನ್ನು ತನ್ನೆಡೆಗೆ ಪರಿವರ್ತಿಸುವ ಯೋಚನೆಯಿಂದ ಮಾತನಾಡಿದನು.

ಅರ್ಥ:
ತಾಯೆ: ಮಾತೆ, ಅಮ್ಮ; ನೇಮ: ನಿಯಮ; ಅಯ್ಯ: ತಮ್ದೆ; ಆತ್ಮಜ: ಮಗ; ವಾಯುಸುತ: ಭೀಮ; ವಾಯು: ಗಾಳಿ; ಸುತ: ಮಗ; ನರ: ಅರ್ಜುನ; ಕುಮಾರ: ಮಕ್ಕಳು; ಯುಗ: ಸಮಯ; ಸಂತತಿ: ವಂಶ; ದಾಯ: ಹಂಚಿಕೆ, ಉಪಾಯ; ಭಾಗ: ಅಂಶ, ಪಾಲು; ಬದುಕು: ಜೀವನ; ರಾಯ: ದೊರೆ; ರಕ್ಷಿಸು: ಪೋಷಿಸು, ಕಾಪಾಡು;

ಪದವಿಂಗಡಣೆ:
ತಾಯೆ +ನೇಮವಗೊಂಡ್+ಎನ್+ಅಯ್ಯಂಗ್
ಆ+ ಯುಧಿಷ್ಠಿರನ್+ಆತ್ಮಜನಲೇ
ವಾಯುಸುತ +ನರ +ನಕುಲ +ಸಹದೇವರು +ಕುಮಾರರಲೆ
ಈ +ಯುಗದಲಿನ್+ಅವರ +ಸಂತತಿ
ದಾಯಭಾಗಿಗಳಾಗಿ+ ಬದುಕಲಿ
ರಾಯರಿಲ್ಲಾ+ ಮತ್ತೆ +ನಮ್ಮನು +ರಕ್ಷಿಸುವರೆಂದ

ಅಚ್ಚರಿ:
(೧)ತಾಯಿಯ ಮನಸ್ಸಿನ ಮೇಲೆ ಕನಿಕರ ಬರಲೆಂದು ಹೇಳುವ ನುಡಿಗಳು – ರಾಯರಿಲ್ಲಾ ಮತ್ತೆ ನಮ್ಮನು ರಕ್ಷಿಸುವರೆಂದ