ಪದ್ಯ ೪೫: ದುರ್ಯೋಧನನು ಎಲ್ಲಿ ರಾಜನಾಗಿರುವೆನೆಂದು ಹೇಳಿದನು?

ಆ ಯುಧಿಷ್ಠಿರ ಸಹಿತ ನೀನೇ
ರಾಯನಾಗಿರು ಮೇಣು ನಮ್ಮೀ
ತಾರ್ಯಿ ಸಂತಸಬಡಲಿ ದುಶ್ಯಾಸನನ ಪಟ್ಟದಲಿ
ರಾಯತನವೆಮಗಿಂದ್ರ ಲೋಕದ
ಲಾಯದಲಿ ದಿಟವೆಂದು ನುಡಿವರು
ಜೋಯಿಸರು ಸಾಕವರ ವಚನ ನಿರರ್ಥವಲ್ಲೆಂದ (ಸಭಾ ಪರ್ವ, ೧೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ಯುಧಿಷ್ಠಿರನೊಡನೆ ನೀನೇ ರಾಜನಾಗಿರು. ಇಲ್ಲದಿದ್ದರೆ ನಮ್ಮ ತಾಯಿಯು ದುಶ್ಯಾಸನನಿಗೆ ಪಟ್ಟಕಟ್ಟಿ ಸಂತೋಷದಿಮ್ದಿರಲಿ, ನಾನು ದೇವಲೋಕದ ಲಾಯದಲ್ಲಿ ರಾಜನಾಗಿರುವೆನೆಂದು ಜೋಯಿಸರು ಹೇಳುತ್ತಾರೆ, ಅವರ ಮಾತು ವ್ಯರ್ಥವಾಗದಿರಲಿ ಎಂದು ತನ್ನ ನೋವನ್ನು ತೋಡಿಕೊಂಡನು.

ಅರ್ಥ:
ರಾಯ: ರಾಜ; ಮೇಣ್: ಮತ್ತು; ತಾಯಿ: ಮಾತೆ; ಸಂತಸ: ಸಂತೋಷ; ಪಟ್ಟ: ಪದವಿ; ಇಂದ್ರ: ಶಕ್ರ, ಸುರರ ರಾಜ; ಲೋಕ: ಜಗತ್ತು; ಲಾಯ: ಅಶ್ವಶಾಲೆ, (ಇಲ್ಲಿ ಇಂದ್ರಲೋಕ ಎಂದು ಅರ್ಥೈಸುವುದು); ದಿಟ:ಸತ್ಯ; ನುಡಿ: ಮಾತು; ಜೋಯಿಸರು: ಶುಭ ಮತ್ತು ಅಶುಭಕಾರ್ಯಗಳಲ್ಲಿ ನೆರವಾಗಿ ಕೆಲಸಗಳನ್ನು ನಡೆಸಿಕೊಡುವವರು; ಸಾಕು: ಕೊನೆ; ವಚನ: ಮಾತು; ನಿರರ್ಥಕ: ವ್ಯರ್ಥವಾದುದು;

ಪದವಿಂಗಡಣೆ:
ಆ +ಯುಧಿಷ್ಠಿರ +ಸಹಿತ +ನೀನೇ
ರಾಯನಾಗಿರು +ಮೇಣು +ನಮ್ಮೀ
ತಾಯಿ +ಸಂತಸಬಡಲಿ +ದುಶ್ಯಾಸನನ +ಪಟ್ಟದಲಿ
ರಾಯತನವ್+ಎಮಗ್+ಇಂದ್ರ +ಲೋಕದ
ಲಾಯದಲಿ +ದಿಟವೆಂದು +ನುಡಿವರು
ಜೋಯಿಸರು+ ಸಾಕ್+ಅವರ+ ವಚನ +ನಿರರ್ಥವಲ್ಲೆಂದ

ಅಚ್ಚರಿ:
(೧) ಸಾಯುತ್ತೇನೆ ಎಂದು ಹೇಳಲು – ರಾಯತನವೆಮಗಿಂದ್ರ ಲೋಕದಲಾಯದಲಿ

ಪದ್ಯ ೪೪: ದುರ್ಯೋಧನನು ಹೇಗೆ ಸಾಯುತ್ತೇನೆಂದು ಹೇಳಿದನು?

ಸಿಂಗಿಯನು ಬಿತ್ತಿದೆನು ಪಾಂಡವ
ರಂಗದಲಿ ತತ್ಫಲದ ಬೆಳಸಿನ
ಸಿಂಗಿಯಲಿ ತಾ ಸಾವೆನಲ್ಲದೊಡಗ್ನಿ ಕುಂಡದಲಿ
ಭಂಗಿಸುವೆನಾ ಫಲದೊಳೆನ್ನನು
ನುಂಗಬೇಹುದು ವಹ್ನಿ ಮೇಣೀ
ಗಂಗೆಯಲಿ ಬಿದ್ದೊಡಲ ನೀಗುವೆನೆನುತ ಬಿಸುಸುಯ್ದ (ಸಭಾ ಪರ್ವ, ೧೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ನಾನು ಪಾಂಡವರಿಗೆ ಘೋರವಾದ ವಿಷವನ್ನುಣಿಸಿದೆನು. ಅದರ ಫಲವು ಹಿರಿದಾಗಿ ಬೆಳೆದು ಆ ವಿಷದಿಂದಲೇ ನಾನು ಸಾಯುತ್ತೇನೆ. ಇಲ್ಲದಿದ್ದರೆ ಬೆಂಕಿಯ ಕುಂಡದಲ್ಲೋ ನೀರಿನಲ್ಲಿ ಬಿದ್ದೋ ಈ ದೇಹವನ್ನು ಬಿಡುತ್ತೇನೆ ಎಂದು ತನ್ನ ನೋವನ್ನು ತೋಡಿಕೊಂಡನು.

ಅರ್ಥ:
ಸಿಂಗಿ: ಒಂದು ಬಗೆಯ ಘೋರ ವಿಷ; ಬಿತ್ತು: ಉಂಟುಮಾಡು, ಪ್ರಚಾರ ಮಾಡು; ರಂಗ: ವೇದಿಕೆ; ಫಲ: ಪ್ರಯೋಜನ; ಬೆಳಸು: ವಿಕಸನಗೊಳ್ಳು; ಸಾವು: ಮರಣ; ಅಗ್ನಿ: ಬೆಂಕಿ; ಕುಂಡ: ಗುಣಿ, ಹೋಮದ ಗುಳಿ; ಭಂಗಿಸು: ಅಪಮಾನ ಮಾಡು, ನಾಶಮಾಡು, ಸೋಲಿಸು; ಫಲ: ಪ್ರಯೋಜನ; ನುಂಗು: ಸ್ವಾಹ ಮಾಡು; ವಹ್ನಿ: ಅಗ್ನಿ; ಮೇಣ್; ಅಥವ; ಗಂಗೆ: ನೀರು; ಬಿದ್ದು: ಬೀಳು; ನೀಗು: ಬಿಡು, ತೊರೆ, ತ್ಯಜಿಸು; ಬಿಸುಸುಯ್ದ: ನಿಟ್ಟುಸಿರು ಬಿಡು;

ಪದವಿಂಗಡಣೆ:
ಸಿಂಗಿಯನು +ಬಿತ್ತಿದೆನು +ಪಾಂಡವ
ರಂಗದಲಿ +ತತ್ಫಲದ +ಬೆಳಸಿನ
ಸಿಂಗಿಯಲಿ +ತಾ +ಸಾವೆನಲ್ಲದೊಡ್+ಅಗ್ನಿ +ಕುಂಡದಲಿ
ಭಂಗಿಸುವೆನಾ +ಫಲದೊಳ್+ಎನ್ನನು
ನುಂಗಬೇಹುದು +ವಹ್ನಿ +ಮೇಣ್
ಈ+ಗಂಗೆಯಲಿ +ಬಿದ್+ಒಡಲ +ನೀಗುವೆನ್+ಎನುತ +ಬಿಸುಸುಯ್ದ

ಅಚ್ಚರಿ:
(೧) ಸಾಯುವೆನು ಎನ್ನುವ ಪರಿ – ಭಂಗಿಸುವೆನಾ ಫಲದೊಳೆನ್ನನು ನುಂಗಬೇಹುದು ವಹ್ನಿ ಮೇಣೀ ಗಂಗೆಯಲಿ ಬಿದ್ದೊಡಲ ನೀಗುವೆನೆನುತ ಬಿಸುಸುಯ್ದ

ಪದ್ಯ ೪೩: ದುರ್ಯೋಧನನ ಸ್ಥಿತಿ ಹೇಗಾಗಿದೆ ಎಂದು ಆತ ಹೇಳಿದನು?

ಒಡ್ಡವಿಸಿತೆನ್ನಾಟ ನಗೆಯೊಳ
ಗಡ್ಡಬಿದ್ದಳು ಪಾಂಡುಪುತ್ರರ
ಬೊಡ್ಡಿ ಬಿಂಕದಲವರು ಬಿರಿದರು ಭೀಮ ಫಲುಗುಣರು
ಖಡ್ಡಿ ಗರುವೆನ್ನಿಂದ ರೋಷದ
ಗೊಡ್ಡು ನಾನಾದೆನು ವಿಘಾತಿಯ
ಬಡ್ಡಿಗಿನ್ನಕ ಬದುಕಿದೆನು ಧೃತರಾಷ್ಟ್ರ ಕೇಳೆಂದ (ಸಭಾ ಪರ್ವ, ೧೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ನನ್ನ ವರ್ತೆನೆಯು ಹೀಗೆ ಗೊಂದಲಮಯವಾಗಲು, ಪಾಂಡವರ ಬೊಡ್ಡಿ ದ್ರೌಪದಿಯ ನಗುವು ಹೆಚ್ಚಾಗಿ ಆಕೆ ಅಡ್ಡಬಿದ್ದಳು. ಭೀಮಾರ್ಜುನರು ಹೆಮ್ಮೆಯಿಂದ ಬೀಗಿದರು. ನಾನೋ ಗೊಡ್ಡು ರೋಷದಿಂದ ಕುದಿದು ಅದರ ಬಡ್ಡಿಯಾಗಿ ಬದುಕಿದ್ದೇನೆ ಎಂದು ದುರ್ಯೋಧನನು ತನ್ನ ನೋವನ್ನು ಧೃತರಾಷ್ಟ್ರನಿಗೆ ಹೇಳಿಕೊಂಡನು.

ಅರ್ಥ:
ಒಡ್ಡ: ಮೂರ್ಖ, ಕೆಲಸಮಾಡುವವ; ನಗೆ: ನಗು, ಸಂತೋಷ, ಹರ್ಷ; ಅಡ್ಡಬೀಳು: ಕೆಳಕ್ಕೆ ಬೀಳು, ಹೊರಳು; ಪುತ್ರ: ಮಕ್ಕಳು; ಬೊಡ್ಡಿ: ವೇಶ್ಯೆ; ಬಿಂಕ: ಗರ್ವ, ಜಂಬ, ಠೀವಿ; ಬಿರಿ: ಬಿರುಕು, ಸೀಳು; ಖಡಿ: ಕತ್ತರಿಸು; ಗರುವ: ಹಿರಿಯ, ಶ್ರೇಷ್ಠ; ರೋಷ: ಕೋಪ; ಗೊಡ್ಡು: ಬಂಜೆ, ನಿಷ್ಫಲತೆ; ವಿಘಾತಿ: ಹೊಡೆತ, ವಿರೋಧ; ಬಡ್ಡಿ: ಸಾಲವಾಗಿ ಕೊಡುವ ಯಾ ಪಡೆಯುವ ಹಣದ ಮೇಲೆ ತೆರುವ ಯಾ ಪಡೆಯುವ ಹೆಚ್ಚಿನ ಹಣ, ಹೆಚ್ಚಾಗಿ; ಬದುಕು: ಜೀವಿಸು; ಕೇಳು: ಆಲಿಸು;

ಪದವಿಂಗಡಣೆ:
ಒಡ್ಡವಿಸಿತೆನ್+ಆಟ +ನಗೆಯೊಳಗ್
ಅಡ್ಡಬಿದ್ದಳು +ಪಾಂಡುಪುತ್ರರ
ಬೊಡ್ಡಿ +ಬಿಂಕದಲ್+ಅವರು +ಬಿರಿದರು+ ಭೀಮ +ಫಲುಗುಣರು
ಖಡ್ಡಿ+ ಗರುವೆನ್ನಿಂದ +ರೋಷದ
ಗೊಡ್ಡು +ನಾನಾದೆನು+ ವಿಘಾತಿಯ
ಬಡ್ಡಿಗಿನ್ನಕ+ ಬದುಕಿದೆನು+ ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ದ್ರೌಪದಿಯನ್ನು ಕರೆದ ಪರಿ – ಪಾಂಡುಪುತ್ರರ ಬೊಡ್ಡಿ
(೨) ದುರ್ಯೋಧನನ ಸ್ಥಿತಿಗೆ ಉಪಮಾನದ ಪ್ರಯೋಗ – ಖಡ್ಡಿ ಗರುವೆನ್ನಿಂದ ರೋಷದ
ಗೊಡ್ಡು ನಾನಾದೆನು ವಿಘಾತಿಯ ಬಡ್ಡಿಗಿನ್ನಕ ಬದುಕಿದೆನು

ಪದ್ಯ ೪೨: ದುರ್ಯೋಧನನ ಸ್ಥಿತಿ ಹೇಗಾಗಿತ್ತು?

ನಗೆಗೆ ನಗೆ ಕುಂಟಣಿ ವಿವೇಕದ
ಹೊಗೆಗೆ ಹೊಗೆ ಸಖಿಯಾದುದಲ್ಲಿಯ
ಹಗರಣಿಗೆ ನಾನಾದೆನದು ನೋಟಕದ ಜನವಾಯ್ತು
ನಗುವವರ ಜರೆದನೆ ಯುಧಿಷ್ಠಿರ
ನಗೆಯ ಮರೆದೆನೆ ಬೊಪ್ಪ ನಿಮ್ಮಯ
ಮಗನವಸ್ಥಾರೂಪವಿದು ಚಿತ್ತವಿಸಿ ನೀವೆಂದ (ಸಭಾ ಪರ್ವ, ೧೩ ಸಂಧಿ, ೪೨ ಪದ್ಯ)

ತಾತ್ಪರ್ಯ:
ಆಲಯದಲ್ಲಿದ್ದ ದಾಸಿಯರ ನಗೆ ಹಿಂದೆ ಕೇಳಿದುದು ಈಗ ಮತ್ತೆ ಆ ನಗೆಯೇ ಕೇಳಿತು, ಆಗ ನಾನು ವಿವೇಕರಹಿತನಾಗಿದ್ದೆನಲ್ಲ, ಈಗ ಮತ್ತೆ ಅವಿವೇಕಿಯಾದೆ, ನಾನು ಅವರೆದುರು ಹಾಸ್ಯಪಾತ್ರಧಾರಿಯಾದೆ, ಅಲ್ಲಿದ್ದವರೆಲ್ಲರೂ ಪ್ರೇಕ್ಷಕರಾದರು. ನನ್ನನ್ನು ನೋಡಿ ನಗುವವರನ್ನು ಯುಧಿಷ್ಠಿರನು ತಡೆಯಲಿಲ್ಲ. ಆ ನಗುವನ್ನು ನಾನು ಮರೆತೆನೇ? ಅಪ್ಪ ನಿನ್ನ ಮಗನ ದುರವಸ್ಥೆಯ ರೂಪವನ್ನು ಮನಸ್ಸಿಟ್ಟು ಕೇಳು ಎಂದು ತನ್ನ ನೋವನ್ನು ದುರ್ಯೋಧನನು ತೋಡಿಕೊಂಡನು.

ಅರ್ಥ:
ನಗೆ: ನಕ್ಕು, ಹರ್ಷ; ಕುಂಟಣಿ: ತಲೆಹಿಡುಕಿ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಹೊಗೆ: ಧೂಮ; ಸಖಿ: ಸ್ನೇಹಿತೆ; ಹಗರಣಿಗ: ವಿವಿಧ ವೇಷ, ಅಭಿನಯಗಳಿಂದ ಜನರನ್ನು ನಗಿಸುವವನು, ವೇಷಧಾರಿ; ನೋಟಕ: ನೋಡುವವರ, ಪ್ರೇಕ್ಷಕ; ಜನ: ಮನುಷ್ಯರ ಗುಂಪು; ಜರೆ: ಬಯ್ಯು; ಮರೆ: ಜ್ಞಾಪಕದಿಂದ ದೂರವಿಡು; ಬೊಪ್ಪ: ತಂದೆ; ಮಗ: ಪುತ್ರ; ಅವಸ್ಥ: ಸ್ಥಿತಿ; ಚಿತ್ತವಿಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ನಗೆಗೆ +ನಗೆ +ಕುಂಟಣಿ +ವಿವೇಕದ
ಹೊಗೆಗೆ +ಹೊಗೆ +ಸಖಿಯಾದುದ್+ಅಲ್ಲಿಯ
ಹಗರಣಿಗೆ+ ನಾನಾದೆನ್+ಅದು +ನೋಟಕದ+ ಜನವಾಯ್ತು
ನಗುವವರ +ಜರೆದನೆ+ ಯುಧಿಷ್ಠಿರ
ನಗೆಯ+ ಮರೆದೆನೆ+ ಬೊಪ್ಪ +ನಿಮ್ಮಯ
ಮಗನ್+ಅವಸ್ಥಾ+ರೂಪವಿದು+ ಚಿತ್ತವಿಸಿ+ ನೀವೆಂದ

ಅಚ್ಚರಿ:
(೧) ನಗೆಗೆ ನಗೆ; ಹೊಗೆಗೆ ಹೊಗೆ – ಜೋಡಿ ಪದಗಳು
(೨) ದುರ್ಯೋಧನನ ಸ್ಥಿತಿ – ಹಗರಣಿಗೆ ನಾನಾದೆನದು
(೩) ನಗೆ, ಹೊಗೆ; ಜರೆದನೆ, ಮರೆದೆನೆ – ಪ್ರಾಸ ಪದ

ಪದ್ಯ ೪೧: ದುರ್ಯೋಧನನು ಮುಂದೆ ಹೇಗೆ ತಡವರಿಸಿದನು?

ನೊಂದುದೇ ಹಣೆ ಮನದೊಳಗೆ ಕಡು
ನೊಂದೆನವದಿರ ನಗೆಗೆ ನಡೆದೆನು
ಮುಂದಣೋವರಿ ಬಾಗಿಲನು ಕಂಡೆನ್ನ ಮನದೊಳಗೆ
ಹಿಂದೆ ಹೇರಿದ ಭಂಗವೇ ಸಾ
ಕೆಂದು ಸುಪ್ರೌಢಿಯಲಿ ಬಾಗಿಲ
ನೊಂದು ಠಾವಿನೊಳರಸಿ ತಡವರಿಸಿದೆನು ಭಿತ್ತಿಗಳ (ಸಭಾ ಪರ್ವ, ೧೩ ಸಂಧಿ, ೪೧ ಪದ್ಯ)

ತಾತ್ಪರ್ಯ:
ಗೋಡೆಗೆ ಡಿಕ್ಕಿ ಹೊಡೆದುದರಿಂದ ನನ್ನ ಹಣೆಗೆ ಬುಗುಟು ಬಂದು ನೋವಾಯಿತು ಮಾತ್ರವಲ್ಲ ಮನಸ್ಸೂ ಬಹಳವಾಗಿ ನೊಂದಿತು. ಮುಂದೆ ಒಂದು ಬಾಗಿಲು ಕಾಣಿಸಿತು. ಹಿಂದಿನ ಅಪಮಾನವೇ ಸಾಕೆಂದು ಹುಷಾರಾಗಿ ಬಾಗಿಲನ್ನು ಕೈಯಿಂದ ತಡವರಿಸಿ ನೋಡಿದೆನು.

ಅರ್ಥ:
ನೊಂದು: ಬೇಸರ, ಬೇನೆ; ಹಣೆ: ಲಲಾಟ; ಮನ: ಮನಸ್ಸು; ಕಡು: ತುಂಬ; ನೊಂದೆ: ನೋವು ಪಟ್ಟೆ; ಅವದಿರ; ಅವರ; ನಗೆ: ಹಾಸ್ಯ; ನಡೆ: ಮುಂದೆ ಹೋಗು; ಬಾಗಿಲು: ಕದ; ಕಂಡು: ನೋಡಿ; ಓವರಿ: ಒಳಮನೆ, ಕೋಣೆ, ಪಕ್ಕ, ಪಾರ್ಶ್ವ; ಮನ: ಮನಸ್ಸು; ಹಿಂದೆ: ಪೂರ್ವ; ಹೇರು: ಹೊರೆ, ಭಾರ; ಭಂಗ: ಮೋಸ, ವಂಚನೆ; ಸಾಕು: ತಡೆ, ನಿಲ್ಲುಸು; ಪ್ರೌಢಿ: ಧೈರ್ಯ, ಪ್ರಬುದ್ಧನಾದವನು; ಠಾವು:ಎಡೆ, ಸ್ಥಳ, ತಾಣ; ಅರಸು: ಹುಡುಕು; ತಡವರಿಸು: ಅಡ್ಡಿ, ತಡೆ, ತಡಕಾಡು; ಭಿತ್ತಿ: ಒಡೆಯುವುದು, ಸೀಳುವುದು;

ಪದವಿಂಗಡಣೆ:
ನೊಂದುದೇ +ಹಣೆ +ಮನದೊಳಗೆ +ಕಡು
ನೊಂದೆನ್+ಅವದಿರ +ನಗೆಗೆ +ನಡೆದೆನು
ಮುಂದಣ್+ಓವರಿ +ಬಾಗಿಲನು +ಕಂಡ್+ಎನ್ನ +ಮನದೊಳಗೆ
ಹಿಂದೆ +ಹೇರಿದ +ಭಂಗವೇ +ಸಾ
ಕೆಂದು +ಸುಪ್ರೌಢಿಯಲಿ +ಬಾಗಿಲನ್
ಒಂದು+ ಠಾವಿನೊಳ್+ಅರಸಿ +ತಡವರಿಸಿದೆನು +ಭಿತ್ತಿಗಳ

ಅಚ್ಚರಿ:
(೧) ನೊಂದೆ, ಹಿಂದೆ -ಪ್ರಾಸ ಪದ
(೨) ದುರ್ಯೋಧನನ ದುಃಖಕ್ಕೆ ಕಾರಣ – ಮನದೊಳಗೆ ಕಡು ನೊಂದೆನವದಿರ ನಗೆಗೆ ನಡೆದೆನು

ಪದ್ಯ ೪೦: ದುರ್ಯೋಧನನು ಯಾವುದಕ್ಕೆ ಡಿಕ್ಕಿ ಹೊಡೆದನು?

ನಂಬಿಸಿದುದೊಂದೆಡೆಯ ಬಾಗಿಲು
ಬಿಂಬಿಸಿತು ಭಿತ್ತಿಯಲಿ ತತ್ಪ್ರತಿ
ಬಿಂಬವೆಂದಾನರಿಯದೊಡಹಾಯಿದೆನು ಚೌಕಿಗೆಯ
ಎಂಬೆನೇನನು ಹೊರಳಿ ನಗುವ ನಿ
ತಂಬಿನಿಯರನು ಭೀಮ ಪಾರ್ಥರ
ಡಂಬರವ ಕಂಡಸುವ ಹಿಡಿದೆನು ನೋಡಿಕೊಳ್ಳೆಂದ (ಸಭಾ ಪರ್ವ, ೧೩ ಸಂಧಿ, ೪೦ ಪದ್ಯ)

ತಾತ್ಪರ್ಯ:
ಒಂದು ಕಡೆ ಬಾಗಿಲು ಗೋಡೆಯೊಂದರ ಭಿತ್ತಿಯಲ್ಲಿ ಪ್ರತಿಬಿಂಬಿಸಿ ಬಾಗಿಲಿನಂತೆ ಕಾಣಿಸಿ ನನ್ನನ್ನು ನಂಬಿಸಿತು. ಅದು ಬಾಗಿಲೆಂದು ತಿಳಿದು ನಾನು ಹೋಗಲು ಯತ್ನಿಸಿದಾಗ ಅದು ಗೋಡೆಯಾಗಿತ್ತು ಅದಕ್ಕೆ ಡಿಕ್ಕಿ ಹೊಡೆದೆ. ಇದನ್ನು ನೋಡಿದ ಹೆಂಗಸರು ಹೊರಳಿ ಹೊರಳಿ ನಕ್ಕರು. ಭೀಮಾರ್ಜುನರು ಬಿಂಕದಿಂದಿದ್ದರು. ಅದನ್ನು ನೋಡಿಯೂ ನಾನು ಜೀವ ಹಿಡಿದುಕೊಂಡೆ, ನನ್ನ ದುರವಸ್ಥೆಯನ್ನು ನೀವೇ ನೋಡಿ ಎಂದು ತನ್ನ ಅಳಲನ್ನು ತೋಡಿಕೊಂಡನು.

ಅರ್ಥ:
ನಂಬಿಕೆ: ವಿಶ್ವಾಸ, ಶ್ರದ್ಧೆ; ಒಂದೆಡೆ: ಒಂದು ಬದಿ; ಬಾಗಿಲು: ಕದ; ಬಿಂಬಿಸು: ತೋರು; ಭಿತ್ತಿ: ಒಡೆಯುವುದು, ಸೀಳುವುದು; ಪ್ರತಿ: ಸಾಟಿ, ಸಮಾನ; ಬಿಂಬ: ಪ್ರತಿರೂಪ, ಪಡಿನೆಳಲು; ಹಾಯಿ: ಹಾರು, ಜಿಗಿ; ಅರಿ: ತಿಳಿ; ಚೌಕಿ:ಮನೆಯ ಒಳ ಅಂಗಳ, ಪೀಠ, ಮಣೆ; ಹೊರಳು: ತಿರುವು, ಬಾಗು, ಉರುಳು; ನಗು: ಸಂತೋಷ; ನಿತಂಬಿನಿ: ಯುವತಿ; ಡಂಬರ: ಆಡಂಬರ, ಜಂಬ; ಕಂಡು: ನೋಡು; ಅಸು: ಪ್ರಾಣ; ಹಿಡಿ: ಬಂಧಿಸು, ತಳೆ, ಗ್ರಹಿಸು; ನೋಡು: ವೀಕ್ಷಿಸು;

ಪದವಿಂಗಡಣೆ:
ನಂಬಿಸಿದುದ್+ಒಂದೆಡೆಯ +ಬಾಗಿಲು
ಬಿಂಬಿಸಿತು+ ಭಿತ್ತಿಯಲಿ +ತತ್ಪ್ರತಿ
ಬಿಂಬವೆಂದ್+ಆನ್+ಅರಿಯದ್+ಒಡಹಾಯಿದೆನು+ ಚೌಕಿಗೆಯ
ಎಂಬೆನ್+ಏನನು+ ಹೊರಳಿ+ ನಗುವ+ ನಿ
ತಂಬಿನಿಯರನು +ಭೀಮ +ಪಾರ್ಥರ
ಡಂಬರವ+ ಕಂಡ್+ಅಸುವ +ಹಿಡಿದೆನು +ನೋಡಿಕೊಳ್ಳೆಂದ

ಅಚ್ಚರಿ:
(೧) ನಂಬಿ, ಬಿಂಬಿ, ನಿತಂಬಿ – ಪ್ರಾಸ ಪದಗಳು
(೨) ಬ ಕಾರದ ತ್ರಿವಳಿ ಪದ – ಬಾಗಿಲು ಬಿಂಬಿಸಿತು ಭಿತ್ತಿಯಲಿ