ಪದ್ಯ ೩೩: ಆಸ್ಥಾನವು ಹೇಗೆ ಕಂಗೊಳಿಸುತ್ತಿತ್ತು?

ಹರಹಿನಲಿ ಹಿರಿದಾಯ್ತು ಕೆಂದಾ
ವರೆಯ ವನ ಬೇರೊಂದು ತಾಣದೊ
ಳುರವಣೆಯ ಬೆಳದಿಂಗಳೌಕಿದುದೊಂದು ತಾಣದಲಿ
ಹರಿವ ಯಮುನಾ ನದಿಯನಲ್ಲಿಗೆ
ತರಸಿದವರಾರೆನಲು ಮಣಿ ಬಂ
ಧುರದ ಬೆಳಗಿನಲಹರಿ ಮುರಿದುದು ತನ್ನ ಜಾಣುಮೆಯ (ಸಭಾ ಪರ್ವ, ೧೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ಇಂದ್ರಪ್ರಸ್ಥದಲ್ಲಿ ದುರ್ಯೋಧನನು ಕಂಡ ಆಲಯದ ವರ್ಣನೆಮಾಡಲು ಶುರುಮಾಡಿದ, ಒಂದು ಬದಿಯಲ್ಲಿ ಬಹಳ ವಿಶಾಲವಾದ ಕೆಂದಾವರೆಯ ವನವು ಕಾಣಿಸುತ್ತಿತ್ತು. ಇನ್ನೊಂದು ಕಡೆ ಬೆಳದಿಂಗಳು ಹರಡಿತ್ತು. ಹಸ್ತಿನಾಪುರದ ಬಳಿ ಹರಿಯುವ ಯಮುನಾ ನದಿಯನ್ನು ಇಲ್ಲಿಗೆ ಯಾರು ತರಿಸಿದರು ಎನ್ನುವ ಅನುಮಾನಬರುವಂತೆ ದಿವ್ಯರತ್ನಗಳ ಬೆಳಕು ಒಂದು ಕಡೆ ಬಿದ್ದಿರಲು, ನನ್ನ ಜಾಣ್ಮೆಯನ್ನು ನಾನು ಕಳೆದುಕೊಂಡೆ ಎಂದು ಹೇಳಿದನು.

ಅರ್ಥ:
ಹರಹು: ವಿಸ್ತಾರ, ವೈಶಾಲ್ಯ; ಹಿರಿ: ಹೆಚ್ಚು; ಕೆಂದಾವರೆ: ಕೆಂಪಾದ ಕಮಲ; ವನ: ಕಾಡು; ತಾಣ: ನೆಲೆ, ಬೀಡು; ಉರವಣೆ: ಆತುರ, ಆಧಿಕ್ಯ; ಬೆಳದಿಂಗಳು: ಪೂರ್ಣಚಂದ್ರ, ಹುಣ್ಣಿಮೆ; ಔಕು: ನೂಕು; ಹರಿವ: ಚಲಿಸುವ; ನದಿ: ಸರೋವರ; ತರಸು: ಬರೆಮಾಡು; ಮಣಿ: ಮುತ್ತು, ರತ್ನ; ಬಂಧುರ: ಬಾಗಿರುವುದು, ಮಣಿದಿರುವುದು; ಬೆಳಗಿನ: ದಿನದ; ಲಹರಿ: ರಭಸ, ಆವೇಗ; ಮುರಿ: ಸೀಳು; ಜಾಣು: ಬುದ್ಧಿವಂತಿಕೆ;

ಪದವಿಂಗಡಣೆ:
ಹರಹಿನಲಿ +ಹಿರಿದಾಯ್ತು +ಕೆಂದಾ
ವರೆಯ +ವನ +ಬೇರೊಂದು +ತಾಣದೊಳ್
ಉರವಣೆಯ +ಬೆಳದಿಂಗಳ್+ಔಕಿದುದ್+ಒಂದು +ತಾಣದಲಿ
ಹರಿವ+ ಯಮುನಾ +ನದಿಯನ್+ಇಲ್ಲಿಗೆ
ತರಸಿದವರ್+ಆರೆನಲು +ಮಣಿ +ಬಂ
ಧುರದ +ಬೆಳಗಿನಲಹರಿ+ ಮುರಿದುದು +ತನ್ನ +ಜಾಣುಮೆಯ

ಅಚ್ಚರಿ:
(೧) ಹಿರಿದು, ಉರವಣೆ – ಸಾಮ್ಯಾರ್ಥ ಪದಗಳು
(೨) ದುರ್ಯೋಧನನು ತನ್ನ ಜಾಣ್ಮೆಯನ್ನು ಕಳೆದುಕೊಂಡ ಪರಿ – ಮಣಿ ಬಂಧುರದ ಬೆಳಗಿನಲಹರಿ ಮುರಿದುದು ತನ್ನ ಜಾಣುಮೆಯ

ಪದ್ಯ ೩೨: ಸಭಾಸ್ಥಾನವು ಹೇಗೆ ಕಂಗೊಳಿಸುತ್ತಿತ್ತು?

ಆ ಮಹಾಸಭೆ ದೇವ ನಿರ್ಮಿತ
ರಾಮಣೀಯಕ ವಿವಿಧ ರತ್ನ
ಸ್ತೋಮ ತೇಜಃ ಪುಂಜಭಂಜಿತ ನಯನ ವೀಧಿಯಲಿ
ಸಾಮದಲಿ ನಮ್ಮನು ಯುಧಿಷ್ಠಿರ
ಭೂಮಿಪತಿ ಕರೆಸಿದನು ತನ್ನು
ದ್ಧಾಮ ವಿಭವವನೆನಗೆ ತೋರಲು ತತ್ಸಭಾಸ್ಥಳಕೆ (ಸಭಾ ಪರ್ವ, ೧೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಆ ಸಭಾಸ್ಥಾನವಾದರೋ ದೇವತೆಗಳು ನಿರ್ಮಿಸಿದ ವಿವಿಧ ರತ್ನಗಳ ತೇಜಸ್ಸಿನಿಂದ ರಮಣೀಯವಾಗಿ, ಕಣ್ಣನ್ನು ಕೋರೈಸುತ್ತಿತ್ತು. ತನ್ನ ಅನುಪಮ ವೈಭವವನ್ನು ನನಗೆ ಪ್ರದರ್ಶಿಸಲು ಯುಧಿಷ್ಠಿರನು ನನ್ನನ್ನು ಆ ಸಭಾಸ್ಥಾನಕ್ಕೆ ಕರೆಸಿದನು.

ಅರ್ಥ:
ಮಹಾಸಭೆ: ದೊಡ್ಡ ಓಲಗ; ದೇವ: ಸುರ; ನಿರ್ಮಿತ: ರಚಿಸಿದ; ರಾಮಣೀಯಕ: ಮನೋಹರ, ಸುಂದರ; ವಿವಿಧ: ಹಲವಾರು; ರತ್ನ: ಬೆಲೆಬಾಳುವ ಮುತ್ತು; ಸ್ತೋಮ: ಗುಂಪು, ರಾಶಿ; ತೇಜ: ಪ್ರಕಾಶ; ಪುಂಜ: ಗುಂಪು; ಭಂಜಿತ: ಸೋತ, ಹೊಡೆಯಲ್ಪಟ್ಟ; ನಯನ: ಕಣ್ಣು; ವೀಧಿ: ಬೀದಿ, ಮಾರ್ಗ, ದಾರಿ; ಸಾಮ: ಶಾಂತಗೊಳಿಸುವಿಕೆ; ಭೂಮಿಪತಿ: ರಾಜ; ಕರೆಸು: ಬರೆಮಾದು; ಉದ್ಧಾಮ: ದೊಡ್ಡ; ವಿಭವ: ಸಿರಿ, ಸಂಪತ್ತು; ತೋರಲು: ಪ್ರದರ್ಶಿಸು, ವೀಕ್ಷಿಸು; ಸಭೆ: ಓಲಗ; ಸ್ಥಳ: ಜಾಗ;

ಪದವಿಂಗಡಣೆ:
ಆ +ಮಹಾಸಭೆ +ದೇವ +ನಿರ್ಮಿತ
ರಾಮಣೀಯಕ +ವಿವಿಧ +ರತ್ನ
ಸ್ತೋಮ +ತೇಜಃ +ಪುಂಜ+ಭಂಜಿತ +ನಯನ +ವೀಧಿಯಲಿ
ಸಾಮದಲಿ +ನಮ್ಮನು +ಯುಧಿಷ್ಠಿರ
ಭೂಮಿಪತಿ +ಕರೆಸಿದನು +ತನ್
ಉದ್ಧಾಮ +ವಿಭವವನ್+ಎನಗೆ +ತೋರಲು +ತತ್ಸಭಾ+ಸ್ಥಳಕೆ

ಅಚ್ಚರಿ:
(೧) ಕಣ್ಣಿನ ಹಾದಿಯಲಿ ಎಂದು ಹೇಳುವ ಪರಿ – ದೇವ ನಿರ್ಮಿತ ರಾಮಣೀಯಕ ವಿವಿಧ ರತ್ನ ಸ್ತೋಮ ತೇಜಃ ಪುಂಜಭಂಜಿತ ನಯನ ವೀಧಿಯಲಿ

ಪದ್ಯ ೩೧: ಧರ್ಮಜನ ಓಲಗವನ್ನು ಯಾರು ನಿರ್ಮಿಸಿದರು?

ಇದಕೆ ಕಾರಣವೇನು ಹಣೆ ನೊಂ
ದುದಕದೇನು ನಿಮಿತ್ತವೆನಲಾ
ಸದನದಲಿ ಮಯನಿತ್ತ ಸಭೆಯನು ದೇವರರಿಯರಲೆ
ಮುದದಿನಾ ಧರ್ಮಜನು ಘನ ಸಂ
ಪದದಲೋಲಗವಿತ್ತನಾ ದ್ರೌ
ಪದಿ ನಿಜಾನುಜ ಮಂತ್ರಿ ಸಚಿವ ಪಸಾಯಿತರು ಸಹಿತ (ಸಭಾ ಪರ್ವ, ೧೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಮಗನ ದುಃಖವನ್ನು ಕೇಳಿದ ಧೃತರಾಷ್ಟ್ರ, ಮಗನೇ ಇದಕ್ಕೆಲ್ಲಾ ಕಾರಣವೇನು, ನಿನ್ನ ಹಣೆಗೆ ಪೆಟ್ಟು ಹೇಗೆ ಬಿದ್ದಿತು ಎಂದು ಕೇಳಲು, ದುರ್ಯೋಧನನು, ಅಪ್ಪ, ಪಾಂಡವರಿಗೆ ಮಯನು ಸಭಾಸ್ಥಾನವನ್ನು ನಿರ್ಮಿಸಿಕೊಟ್ಟಿದ್ದು ನಿಮಗೆ ಗೊತ್ತಿದೆಯಲ್ಲವೇ? ಧರ್ಮರಾಯನು ತನ್ನ ತಮ್ಮಂದಿರು, ದ್ರೌಪದಿ, ಮಂತ್ರಿ, ಸಚಿವ, ಸಾಮಂತರಾಜರು ಮತ್ತಿತರ ಆಪ್ತರೊಡನೆ ಅಲ್ಲಿ ಮಹಾವೈಭವದಿಂದ ಓಲಗದಲ್ಲಿದ್ದನು ಎಂದು ದುರ್ಯೋಧನನು ಹೇಳಿದನು.

ಅರ್ಥ:
ಕಾರಣ: ನಿಮಿತ್ತ, ಹೇತು; ಹಣೆ: ಲಲಾಟ; ನೊಂದು: ಪೆಟ್ಟು ನಿಮಿತ್ತ: ಕಾರಣ; ಸದನ: ನಿವಾಸ; ಸಭೆ: ಓಲಗ; ದೇವ: ಸುರರು, ಭಗವಂತ; ಮುದ: ಸಂತಸ; ಘನ: ಶ್ರೇಷ್ಠ; ಸಂಪದ: ಐಶ್ವರ್ಯ, ಸಂಪತ್ತು; ಓಲಗ: ದರ್ಬಾರು; ಅನುಜ: ತಮ್ಮ; ಮಂತ್ರಿ: ಸಚಿವ; ಪಸಾಯಿತ: ಸಾಮಂತರಾಜ; ಸಹಿತ: ಜೊತೆ;

ಪದವಿಂಗಡಣೆ:
ಇದಕೆ+ ಕಾರಣವೇನು+ ಹಣೆ +ನೊಂ
ದುದಕ್+ಅದೇನು +ನಿಮಿತ್ತವ್+ಎನಲ್+ಆ
ಸದನದಲಿ +ಮಯನ್+ಇತ್ತ +ಸಭೆಯನು +ದೇವರ್+ಅರಿಯರಲೆ
ಮುದದಿನ್+ಆ+ ಧರ್ಮಜನು+ ಘನ+ ಸಂ
ಪದದಲ್+ಓಲಗವ್+ಇತ್ತನಾ +ದ್ರೌ
ಪದಿ +ನಿಜಾನುಜ+ ಮಂತ್ರಿ +ಸಚಿವ +ಪಸಾಯಿತರು+ ಸಹಿತ

ಅಚ್ಚರಿ:
(೧) ಮುದ, ಸಂಪದ – ಸಮನಾರ್ಥಕ ಪದ

ಪದ್ಯ ೩೦: ದುರ್ಯೋಧನನು ಏಕೆ ಜರ್ಝರಿತನಾದ?

ನೆಗೆದ ಬುಗಟದೆ ಹಣೆಯಲವರೋ
ಲಗದ ಸಭೆಯಲಿ ನನೆದ ಸೀರೆಯ
ತೆಗಸಿ ಕೊಟ್ಟರು ತಮ್ಮ ಮಡಿವರ್ಗದ ನವಾಂಬರವ
ಬೆಗಡುಗೊಳಿಸಿದರೆನ್ನನವರೋ
ಲಗದ ಸೂಳೆಯರವರ ಸೂಳಿನ
ನಗೆಯ ನೆನೆನೆನೆದೆನ್ನ ಮನ ಜರ್ಝರಿತವಾಯ್ತೆಂದ (ಸಭಾ ಪರ್ವ, ೧೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ನಾನು ಅವರ ಆಸ್ಥಾನದಲ್ಲಿ ಎಡವಿ ಡಿಕ್ಕಿ ಹೊಡೆದು ಹಣೆಯಲ್ಲಿ ಎದ್ದಿರುವ ಬೊರೆ ಇನ್ನು ತಗ್ಗಿಲ್ಲ. ಆಸ್ಥಾನದ ನಡುವೆ ನನ್ನ ಬಟ್ಟೆಗಳು ತೊಯ್ದು ಹೋಗಲು ಅವರು ನನಗೆ ಹೊಸಬಟ್ಟೆಗಳನ್ನು ತೆಗಿಸಿಕೊಟ್ಟರು. ಅವರ ಆಸ್ಥಾನದ ವೇಶ್ಯೆಯರು ಮತ್ತೆ ಮತ್ತೆ ನನ್ನನ್ನು ನೋಡಿ ನಗುತ್ತಿರುವುದು ನನ್ನನ್ನು ದಿಗ್ಭ್ರಮೆಗೊಳಿಸಿದೆ. ಅವರ ನಗೆಯನ್ನು ಮತ್ತೆ ಮತ್ತೆ ನೆನೆದು ನನ್ನ ಎದೆ ಜರ್ಝರಿತವಾಗಿದೆ ಎಂದು ತನ್ನ ದುಃಖವನ್ನು ತೋಡಿಕೊಂಡನು.

ಅರ್ಥ:
ನೆಗೆ:ನೆಗೆತ, ಜಿಗಿತ; ಬುಗುಟು: ತಲೆಯ ಮೇಲಿನ ಬೊರೆ, ಗಾಯ; ಹಣೆ: ಲಲಾಟ, ಭಾಳ; ಓಲಗ: ದರ್ಬಾರು; ಸಭೆ: ಗೋಷ್ಠಿ; ನನೆ: ಒದ್ದೆ, ತೋಯ್ದ; ಸೀರೆ: ಬಟ್ಟೆ; ತೆಗೆಸಿ: ಬಿಚ್ಚಿ; ಕೊಟ್ಟರು: ನೀಡಿದರು; ಮಡಿ: ಸ್ವಚ್ಛ; ನವ: ಹೊಸ; ಅಂಬರ: ಬಟ್ಟೆ; ಬೆಗಡು: ಆಶ್ಚರ್ಯ, ಬೆರಗು; ಸೂಳೆ: ವೇಶ್ಯೆ; ನಗೆ: ಹರ್ಷ, ಸಂತೋಷ; ನೆನೆ: ಜ್ಞಾಪಿಸು; ಮನ: ಮನಸ್ಸು; ಜರ್ಝರಿತ: ಭಗ್ನ, ಚೂರುಚೂರು;

ಪದವಿಂಗಡಣೆ:
ನೆಗೆದ +ಬುಗಟದೆ+ ಹಣೆಯಲ್+ಅವರ್
ಓಲಗದ +ಸಭೆಯಲಿ +ನನೆದ +ಸೀರೆಯ
ತೆಗಸಿ+ ಕೊಟ್ಟರು+ ತಮ್ಮ +ಮಡಿವರ್ಗದ +ನವ+ಅಂಬರವ
ಬೆಗಡು+ಗೊಳಿಸಿದರ್+ಎನ್ನನ್+ಅವರ್+
ಓಲಗದ +ಸೂಳೆಯರ್+ಅವರ +ಸೂಳಿನ
ನಗೆಯ +ನೆನೆನೆನೆದ್+ಎನ್ನ +ಮನ +ಜರ್ಝರಿತವಾಯ್ತೆಂದ

ಅಚ್ಚರಿ:
(೧) ಓಲಗ, ಸಭೆ – ಸಮನಾರ್ಥಕ ಪದ
(೨) ನೆನೆನೆನೆದು – ಮತ್ತೆ ಮತ್ತೆ ಜ್ಞಾಪಿಸಿಕೊಂಡು ಎಂದು ಹೇಳುವ ಪರಿ

ಪದ್ಯ ೨೯: ದುರ್ಯೋಧನನು ಮುಂದೆ ಹೇಗೆ ಬಾಳುವೆನೆಂದು ದುಃಖವನ್ನು ತೋಡಿಕೊಂಡನು?

ಏನನೆಂಬೆನು ಬೊಪ್ಪ ಕುಂತೀ
ಸೂನುಗಳ ಸಾಮರ್ಥ್ಯ ಪಣವನು
ದಾನವಾರಿಯ ಹಾಸುಹೊಕ್ಕಿನ ಸೌಖ್ಯ ಸಂಗತಿಯ
ತಾ ನಪುಂಸಕನಾದ ಪರಿಯನ
ದೇನ ವಿಸ್ತರಿಸುವೆನು ಲಜ್ಜಾ
ಮಾನಿನಿಗೆ ತನ್ನೊಕ್ಕತನ ವಿಂದಿಳಿದು ಹೋಯ್ತೆಂದ (ಸಭಾ ಪರ್ವ, ೧೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ತಂದೆ, ನಾನು ಪಾಂಡವರ ಸಾಮರ್ಥ್ಯದ ಹೆಚ್ಚಳವನ್ನು ಏನೆಂದು ಹೇಳಲಿ, ಕೃಷ್ಣನಿಗೂ ಅವರಿಗೂ ಬಿಗಿಯಾದ ಹೊಂದಾಣಿಕೆ ಇದೆ, ಅದರಿಂದಾಗಿರುವ ಸಂತೋಷಗಳನ್ನು ಏನೆಂದು ಹೇಳಲಿ, ಅವರೆದುರಿನಲ್ಲಿ ನಾನು ನಪುಂಸಕನಾಗಿ ಲಜ್ಜೆ ಎಂಬ ಹೆಣ್ಣಿನೊಡನೆ ನಾನು ನಾಚಿಕೆಗೀಡಾಗಿ ಬಾಳುವಂತಾಯಿತು, ನನ್ನ ಯೋಗ್ಯತೆ ಕುಂದಿದಂತಾಗಿದೆ ಎಂದನು.

ಅರ್ಥ:
ಎಂಬೆನು: ಹೇಳುವೆನು; ಬೊಪ್ಪ: ತಂದೆ; ಸೂನು: ಮಕ್ಕಳು; ಸಾಮರ್ಥ್ಯ: ಪೌರುಷ; ಪಣ: ಪಂದ್ಯ; ದಾನವಾರಿ: ರಾಕ್ಷಸರ ವೈರಿ (ಕೃಷ್ಣ); ಹಾಸುಹೊಕ್ಕು: ಬಿಗಿಯಾದ ಹೊಂದಿಕೆ; ಸೌಖ್ಯ: ಸುಖ, ನೆಮ್ಮದಿ; ಸಂಗತಿ: ಸಹವಾಸ, ಒಡನಾಟ; ನಪುಂಸಕ: ನಿರ್ವೀರ್ಯನಾದವನು, ಷಂಡ; ಪರಿ: ರೀತಿ; ವಿಸ್ತರಿಸು: ವಿಸ್ತಾರವಾಗಿ ಹೇಳು; ಲಜ್ಜೆ:ನಾಚಿಕೆ; ಮಾನಿನಿ: ಹೆಣ್ಣು; ಒಕ್ಕತನ: ಸಂಸಾರ; ಇಳಿ: ಕೆಳಕ್ಕೆ ಹೋಗು;

ಪದವಿಂಗಡಣೆ:
ಏನನೆಂಬೆನು +ಬೊಪ್ಪ +ಕುಂತೀ
ಸೂನುಗಳ+ ಸಾಮರ್ಥ್ಯ +ಪಣವನು
ದಾನವಾರಿಯ +ಹಾಸುಹೊಕ್ಕಿನ+ ಸೌಖ್ಯ +ಸಂಗತಿಯ
ತಾ +ನಪುಂಸಕನಾದ+ ಪರಿಯನದ್
ಏನ +ವಿಸ್ತರಿಸುವೆನು+ ಲಜ್ಜಾ
ಮಾನಿನಿಗೆ+ ತನ್ನೊಕ್ಕತನವ್ + ಇಂದಿಳಿದು +ಹೋಯ್ತೆಂದ

ಅಚ್ಚರಿ:
(೧) ಲಜ್ಜೆ ಎಂಬ ಹೆಣ್ಣೊಡನೆ ಬಾಳುವಂತಾಗಿದೆ ಎಂಬ ದೃಷ್ಟಾಂತ – ಲಜ್ಜಾ
ಮಾನಿನಿಗೆ ತನ್ನೊಕ್ಕತನ ವಿಂದಿಳಿದು ಹೋಯ್ತೆಂದ