ಪದ್ಯ ೨೨: ಶಕುನಿಯು ಧೃತರಾಷ್ಟ್ರನ ಬಳಿ ಏನು ತಿಳಿಸಿದ?

ಅಹುದು ಬಳೀಕೇನೆನುತ ಬಂದನು
ಕುಹಕಮತಿ ಧೃತರಾಷ್ಟ್ರನರಮನೆ
ಗಿಹ ಸಮಯದಲಿ ಹೊಕ್ಕನಂದೇಕಾಂತ ಮಂದಿರವ
ಬಹಳ ಖೇದವ್ಯಸನದಲಿ ದು
ಸ್ಸಹ ಮನೋವ್ಯಥೆಯಲಿ ಕುಮಾರಕ
ನಿಹುದನರಿಯಿರೆ ನೀವೆನುತ ಬಿಸುಸುಯ್ದನಾ ಶಕುನಿ (ಸಭಾ ಪರ್ವ, ೧೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ದುರ್ಯೋಧನನ ವಿಚಾರ ಒಳಿತಿದೆಂದು ಅರಿತು ಮೋಸದ ಬುದ್ಧಿಯುಳ್ಳ ಶಕುನಿಯು ಧೃತರಾಷ್ಟನ ಅರಮನೆಗೆ ಅವನು ಏಕಾಂತದಲ್ಲಿರುವಾಗ ಬಂದನು. ನಿಮ್ಮ ಮಗ ಬಹಯ ದುಃಖದಲ್ಲಿದ್ದಾನೆ, ಅವನು ಸಹಿಸಲಾಗದ ಮನೋವ್ಯಥೆಯನ್ನು ಅನುಭವಿಸುತ್ತಿರುವುದು ನಿಮಗೆ ತಿಳಿಯದೇ ಎಂದು ನಿಟ್ಟುಸಿರು ಬಿಡುತ್ತಾ ಕೇಳಿದನು.

ಅರ್ಥ:
ಬಳಿಕ: ನಂತರ; ಬಂದನು: ಆಗಮಿಸು; ಕುಹಕ: ಕುತಂತ್ರ, ಮೋಸ; ಮತಿ: ಬುದ್ಧಿ; ಅರಮನೆ: ರಾಜರ ಆಲಯ; ಇಹ: ಇರುವಿಕೆ; ಸಮಯ: ಕಾಲ; ಹೊಕ್ಕು: ಸೇರು; ಏಕಾಂತ: ಒಬ್ಬನೆ; ಮಂದಿರ: ಆಲಯ; ಬಹಳ: ತುಂಬ; ಖೇದ: ದುಃಖ; ವ್ಯಸನ: ದುಃಖ, ವ್ಯಥೆ, ಚಿಂತನೆ; ದುಸ್ಸಹ: ಸಹಿಸಲಾಗದ; ಮನೋವ್ಯಥೆ: ಮನಸ್ಸಿನ ದುಃಖ; ಕುಮಾರ: ಮಗ; ಅರಿ: ತಿಳಿ; ಬಿಸುಸುಯ್ದ: ನಿಟ್ಟುಸಿರುಬಿಡು;

ಪದವಿಂಗಡಣೆ:
ಅಹುದು+ ಬಳೀಕ್+ಏನ್+ಎನುತ +ಬಂದನು
ಕುಹಕಮತಿ+ ಧೃತರಾಷ್ಟ್ರನ್+ಅರಮನೆಗ್
ಇಹ +ಸಮಯದಲಿ +ಹೊಕ್ಕನಂದ್+ಏಕಾಂತ +ಮಂದಿರವ
ಬಹಳ+ ಖೇದ+ವ್ಯಸನದಲಿ +ದು
ಸ್ಸಹ +ಮನೋವ್ಯಥೆಯಲಿ+ ಕುಮಾರಕ
ನಿಹುದನ್+ಅರಿಯಿರೆ +ನೀವೆನುತ+ ಬಿಸುಸುಯ್ದನಾ +ಶಕುನಿ

ಅಚ್ಚರಿ:
(೧) ಅರಮನೆ, ಮಂದಿರ – ಸಾಮ್ಯಾರ್ಥ ಪದ
(೨) ಶಕುನಿಯನ್ನು ಕುಹಕಮತಿ ಎಂದು ಕರೆದಿರುವುದು

ಪದ್ಯ ೨೧: ದುರ್ಯೋಧನ ಶಕುನಿ ಏನು ಉಪಾಯವನ್ನು ಮಾಡಿದರು?

ನೀನರುಹು ನಿನ್ನಯ್ಯ ಮನಗೊ
ಟ್ಟಾ ನರೇಂದ್ರರ ಕರೆಸಿ ಕೊಟ್ಟರೆ
ಮಾನನಿಧಿಯೇ ಸಕಲ ಧರೆಯನು ಸೇರಿಸುವೆ ನಿನಗೆ
ನೀನು ಹೋಗಿಯೆ ಎನ್ನ ಕಡು ದು
ಮ್ಮಾನವನು ಬೊಪ್ಪಂಗೆ ನುಡಿದರೆ
ತಾನೆ ಕರೆಸುವನರುಹುವೆನು ಜನಕಂಗೆ ನಿಜಮತವ (ಸಭಾ ಪರ್ವ, ೧೩ ಸಂಧಿ, ೨೧ ಪದ್ಯ)

ತಾತ್ಪರ್ಯ:
ಶಕುನಿಯು ತನ್ನ ಅಳಿಯನಿಗೆ ತನ್ನ ಕುತಂತ್ರದ ಬುದ್ಧಿಯನ್ನು ಹೇಳುತ್ತಾ, ದುರ್ಯೋಧನ ನಿನ್ನ ತಂದೆಗೆ ನೀನೇ ಹೇಳು, ಆತನು ಅದಕ್ಕೊಪ್ಪಿ ಪಾಂಡವರನ್ನು ಕರೆಸಿಕೊಟ್ಟರೆ, ಸಮಸ್ತ ಭೂಮಿಯನ್ನೂ ನಿನಗೇ ಸಿಕ್ಕುವಂತೆ ಮಾಡುತ್ತೇನೆ ಎನ್ನಲು ಕೌರವನು ಮಾವ ನೀವೇ ಹೋಗಿ ನನ್ನ ದುಃಖವನ್ನು ನನ್ನ ತಂದೆಗೆ ತಿಳಿಸಿ, ಆಗ ಅವರೇ ನನ್ನನ್ನು ಕರೆಸುತ್ತಾರೆ ಆಗ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ ಎಂದು ದುರ್ಯೋಧನನು ಹೇಳಿದನು.

ಅರ್ಥ:
ಅರುಹು: ತಿಳಿಸು, ಹೇಳು; ಅಯ್ಯ: ತಂದೆ; ಮನ: ಮನಸ್ಸು; ನರೇಂದ್ರ: ರಾಜ; ಕರೆಸು: ಬರೆಮಾಡು; ಮಾನನಿಧಿ: ಗೌರವಯುತನಾದ; ಸಕಲ: ಎಲ್ಲಾ; ಧರೆ: ಭೂಮಿ; ಸೇರಿಸು: ಜೋಡಿಸು; ಕಡು: ತುಂಬ; ದುಮ್ಮಾನ: ದುಃಖ; ಬೊಪ್ಪ: ತಂದೆ; ನುಡಿ: ಮಾತಾಡು, ತಿಳಿಸು; ಕರೆಸು: ಬರೆಮಾದು; ಜನಕ: ತಂದೆ; ನಿಜ: ನೈಜ, ವಸ್ತುಸ್ಥಿತಿ; ಮತ: ವಿಚಾರ;

ಪದವಿಂಗಡಣೆ:
ನೀನ್+ಅರುಹು +ನಿನ್+ಅಯ್ಯ +ಮನಗೊ
ಟ್ಟ್ + ಆ+ ನರೇಂದ್ರರ +ಕರೆಸಿ+ ಕೊಟ್ಟರೆ
ಮಾನನಿಧಿಯೇ +ಸಕಲ+ ಧರೆಯನು+ ಸೇರಿಸುವೆ +ನಿನಗೆ
ನೀನು +ಹೋಗಿಯೆ +ಎನ್ನ +ಕಡು+ ದು
ಮ್ಮಾನವನು+ ಬೊಪ್ಪಂಗೆ +ನುಡಿದರೆ
ತಾನೆ +ಕರೆಸುವನ್+ಅರುಹುವೆನು +ಜನಕಂಗೆ +ನಿಜಮತವ

ಅಚ್ಚರಿ:
(೧) ಅಯ್ಯ, ಬೊಪ್ಪ, ಜನಕ – ಸಮನಾರ್ಥಕ ಪದಗಳು
(೨) ಶಕುನಿಯ ಭರವಸೆ – ನರೇಂದ್ರರ ಕರೆಸಿ ಕೊಟ್ಟರೆ ಮಾನನಿಧಿಯೇ ಸಕಲ ಧರೆಯನು ಸೇರಿಸುವೆ ನಿನಗೆ
(೩) ದುರ್ಯೋಧನನನ್ನು ಮಾನನಿಧಿ ಎಂದು ಶಕುನಿ ಕರೆದು ಹುರಿದುಂಬಿಸುತ್ತಿರುವುದು

ಪದ್ಯ ೨೦: ದುರ್ಯೋಧನನು ಶಕುನಿಗೆ ಏನು ಹೇಳಿದ?

ಎನ್ನ ಬಹುಮಾನಾವಮಾನವು
ನಿನ್ನದೈಸಲೆ ಮಾವ ನೀ ಸಂ
ಪನ್ನ ಕೃತ್ರಿಮವಿದ್ಯನಾದರೆ ತೊಡಚು ಸಾಕದನು
ಅನ್ನಿಗರಿಗರುಹದಿರು ನಮ್ಮವ
ರೆನ್ನದಿರು ವಿದುರಾದಿಗಳನುಪ
ಪನ್ನ ಮಂತ್ರವನರುಹು ಬೊಪ್ಪಂಗೆಂದನವನೀಶ (ಸಭಾ ಪರ್ವ, ೧೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಮಾವ ನನ್ನ ಗೌರವ, ಅಗೌರವೆರಡೂ ನಿನ್ನದೇ, ನೀನು ಮೋಸದಾಟದಲ್ಲಿ ಪಾರಂಗತನಾದರೆ, ಅದನ್ನು ಈಗಲೇ ಪ್ರಾರಂಭಮಾಡು. ವಿದುರನೇ ಮೊದಲಾದವರು ನಮ್ಮವರೆಂದು ತಿಳಿಯಬೇಡ. ಕೆಲಸವಾಗಲು ಅಗತ್ಯವಾದ ಆಲೋಅನೆಯನ್ನು ತಂದೆಗೆ ಬೋಧಿಸು, ಬೇರೆಯವರಿಗೆ ಹೇಳಬೇಡ ಎಂದು ಶಕುನಿಗೆ ತಿಳಿಸಿದನು.

ಅರ್ಥ:
ಬಹುಮಾನ: ಗೌರವ; ಅವಮಾನ: ಅಗೌರವ; ಐಸಲೆ: ಅಲ್ಲವೆ; ಮಾವ: ತಾಯಿಯ ಸಹೋದರ; ಸಂಪನ್ನ: ಶ್ರೀಮಂತ, ಧನಿಕ; ಕೃತ್ರಿಮ: ಮೋಸ; ತೊಡಚು: ಕಟ್ಟು, ಬಂಧಿಸು; ಸಾಕು: ಬೆಳೆಸು, ಪೋಷಿಸು; ಅನ್ನಿಗರು: ಅನ್ಯರು; ಅರುಹ: ಅರ್ಹ; ಆದಿ: ಮುಂತಾದ; ಉಪಪನ್ನ: ಹಣವಂತ, ಉಂಟಾದ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅರುಹು: ತಿಳಿಸು, ಹೇಳು; ಬೊಪ್ಪ: ತಂದೆ; ಅವನೀಶ; ರಾಜ;

ಪದವಿಂಗಡಣೆ:
ಎನ್ನ +ಬಹುಮಾನ+ಅವಮಾನವು
ನಿನ್ನದ್+ಐಸಲೆ +ಮಾವ +ನೀ +ಸಂ
ಪನ್ನ +ಕೃತ್ರಿಮವಿದ್ಯನಾದರೆ+ ತೊಡಚು +ಸಾಕದನು
ಅನ್ನಿಗರಿಗ್+ಅರುಹದಿರು +ನಮ್ಮವ
ರೆನ್ನದಿರು+ ವಿದುರಾದಿಗಳನ್+ಉಪ
ಪನ್ನ +ಮಂತ್ರವನ್+ಅರುಹು +ಬೊಪ್ಪಂಗ್+ಎಂದನ್+ಅವನೀಶ

ಅಚ್ಚರಿ:
(೧) ದುರ್ಯೋಧನನು ಶಕುನಿಗೆ ನೀಡಿದ ಸ್ವಾತಂತ್ರ್ಯ – ನೀ ಸಂಪನ್ನ ಕೃತ್ರಿಮವಿದ್ಯನಾದರೆ ತೊಡಚು ಸಾಕದನು; ಅನ್ನಿಗರಿಗರುಹದಿರು ನಮ್ಮವರೆನ್ನದಿರು

ಪದ್ಯ ೧೯: ಶಕುನಿಯು ಹೇಗೆ ಜಯವನ್ನು ಪಡೆಯುತ್ತೇನೆ ಎಂದನು?

ಕಪಟವನು ನೆರೆ ಮಾಡಿ ಜೂಜಿನೊ
ಳು ಪರಿಕಾರ್ಯವ ಜೈಸಿ ಕೊಡುವೆನು
ನಿಪುಣರೆನ್ನಂದದಲಿ ಲೋಕದೊಳಿಲ್ಲ ಕೈತವದ
ಅಪದೆಸೆಗೆ ಭಯಗೊಳ್ಳದಿರು ನಿ
ಷ್ಕೃಪೆಯಲಿರು ಗುರು ಭೀಷ್ಮ ವಿದುರಾ
ದ್ಯಪಸದರ ಕೈಕೊಳ್ಳದಿರು ನೀನೆಂದನಾ ಶಕುನಿ (ಸಭಾ ಪರ್ವ, ೧೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ಶಕುನಿಯು ತನ್ನ ಮಾತನ್ನು ಮುಂದುವರಿಸುತ್ತಾ, ದುರ್ಯೋಧನ ಜೂಜಿನಲ್ಲಿ ಕಪಟವನ್ನು ಮಾಡಿ ನಾನು ನಿನಗೆ ಜಯವನ್ನು ದೊರಕಿಸಿಕೊಡುತ್ತೇನೆ. ಮೋಸದಲ್ಲಿ ನನ್ನಷ್ಟು ನಿಪುಣರಾದವರು ಈ ಲೋಕದಲ್ಲೇ ಇಲ್ಲ. ಅಪಕೀರ್ತಿಗೆ ನೀನು ಹೆದರಬೇಡ. ನಿಷ್ಕರುಣೆಯಿಂದ ವರ್ತಿಸು. ಭೀಷ್ಮ ವಿದುರ ಮೊದಲಾದ ಅಯೋಗ್ಯರನ್ನು ನೀನು ಅನುಸರಿಸಬೇಡ ಎಂದನು.

ಅರ್ಥ:
ಕಪಟ: ಮೋಸ; ನೆರೆ: ಹೆಚ್ಚು; ಜೂಜು: ದ್ಯೂತ ಕ್ರೀಡೆ; ಪರಿ: ಪರಿಹರಿಸು, ನಾಶಮಾಡು, ಚಲಿಸು; ಕಾರ್ಯ: ಕೆಲಸ; ಜೈಸಿ: ಗೆದ್ದು; ನಿಪುಣ: ಚಾಣಾಕ್ಷ; ಲೋಕ: ಜಗತ್ತು; ಕೈತವ: ಕಪಟ, ವಂಚನೆ; ಅಪದೆಸೆ: ದುರದೃಷ್ಟ; ಭಯ: ಅಂಜಿಕೆ; ನಿಷ್ಕೃಪೆ; ದಯೆಯಿಲ್ಲದ; ಗುರು: ಆಚಾರ್ಯ; ಆದಿ: ಮುಂತಾದ; ಸದರ: ಸಲಿಗೆ, ಸಸಾರ; ಕೈಕೊಳ್ಳು: ಪಡೆ, ದೊರಕು, ಸ್ವೀಕರಿಸು;

ಪದವಿಂಗಡಣೆ:
ಕಪಟವನು +ನೆರೆ +ಮಾಡಿ +ಜೂಜಿನೊ
ಳು +ಪರಿಕಾರ್ಯವ +ಜೈಸಿ +ಕೊಡುವೆನು
ನಿಪುಣರೆನ್ನಂದದಲಿ+ ಲೋಕದೊಳಿಲ್ಲ+ ಕೈತವದ
ಅಪದೆಸೆಗೆ+ ಭಯಗೊಳ್ಳದಿರು +ನಿ
ಷ್ಕೃಪೆಯಲಿರು+ ಗುರು +ಭೀಷ್ಮ +ವಿದುರಾ
ದ್ಯಪ+ಸದರ+ ಕೈಕೊಳ್ಳದಿರು +ನೀನೆಂದನಾ +ಶಕುನಿ

ಅಚ್ಚರಿ:
(೧) ಶಕುನಿಯ ನಿಪುಣತೆ – ನಿಪುಣರೆನ್ನಂದದಲಿ ಲೋಕದೊಳಿಲ್ಲ ಕೈತವದ

ಪದ್ಯ ೧೮ : ಶಕುನಿಯು ಕೌರವನಿಗೆ ತಾನು ಯಾವುದರಲ್ಲಿ ಪ್ರವೀಣನೆಂದು ಹೇಳಿದನು?

ಗೆಲುವೆ ನಾನಂಜದಿರು ಪಾಂಡವ
ರಳವಳವ ನಾನರಿವೆ ನೃಪನ
ಗ್ಗಳದ ಧರ್ಮಜ್ಞನು ವಿಶೇಷ ದ್ಯೂತ ಲೋಲುಪನು
ಗೆಲುವ ಮೋಡಿಯನರಿಯನಾತನ
ನೆಲೆಯ ಬಲ್ಲೆನು ಜೂಜುಗಾರರ
ಕುಲಶಿರೋಮಣಿ ತಾನೆಯೆಂದನು ಶಕುನಿ ಕೌರವಗೆ (ಸಭಾ ಪರ್ವ, ೧೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಶಕುನಿಯು ಕೌರವನನ್ನು ಸಮಾಧಾನಿಸುತ್ತಾ, ದುರ್ಯೋಧನ ಅಂಜಿಕೆ ಬಿಡು, ನಾನು ಪಾಂಡವರನ್ನು ಗೆಲ್ಲುತ್ತೇನೆ, ಯುಧಿಷ್ಠಿರನು ಧರ್ಮವನ್ನರಿತವನು. ಆದರೆ ಅವನು ಜೂಜಿನಲ್ಲಿ ಅತೀವ ಪ್ರೀತಿಯುಳ್ಳವನು. ಜೂಜಿನಲ್ಲಿ ಗೆಲ್ಲುವುದನ್ನು ಅವನು ತಿಳಿದಿಲ್ಲ. ಅವನ ಮನಸ್ಸು ನನಗೆ ಗೊತ್ತು, ನಾನಾದರೋ ಜೂಜುಗಾರರ ಕುಲಕ್ಕೆ ಶಿರೋಮಣಿ ಎಂದು ಹೇಳಿದನು.

ಅರ್ಥ:
ಗೆಲುವು: ಜಯ; ಅಂಜು: ಹೆದರು; ಅಳವಳ: ಸಾಹಸ, ಸಾಮರ್ಥ್ಯ; ಅರಿ: ತಿಳಿ; ನೃಪ: ರಾಜ; ಅಗ್ಗ: ಶ್ರೇಷ್ಠ; ಧರ್ಮಜ್ಞ: ಧರ್ಮದ ಬಗ್ಗೆ ತಿಳುವಳಿಕೆ ಇರುವ; ವಿಶೇಷ: ಸಾಮಾನ್ಯವಾದ, ವಿಶಿಷ್ಟವಾದ; ದ್ಯೂತ: ಜೂಜು; ಲೋಲುಪ: ಅತಿಯಾಸೆಯುಳ್ಳವನು, ಲಂಪಟ; ಮೋಡಿ: ರೀತಿ, ಶೈಲಿ; ನೆಲೆ: ಆಶ್ರಯ, ಆಧಾರ; ಬಲ್ಲೆ: ತಿಳಿದಿರುವೆ; ಕುಲ: ವಂಶ; ಶಿರೋಮಣಿ: ಶ್ರೇಷ್ಠ;

ಪದವಿಂಗಡಣೆ:
ಗೆಲುವೆ +ನಾನ್+ಅಂಜದಿರು +ಪಾಂಡವರ್
ಅಳವಳವ +ನಾನರಿವೆ +ನೃಪನ್
ಅಗ್ಗಳದ +ಧರ್ಮಜ್ಞನು+ ವಿಶೇಷ +ದ್ಯೂತ +ಲೋಲುಪನು
ಗೆಲುವ +ಮೋಡಿಯನ್+ಅರಿಯನ್+ಆತನ
ನೆಲೆಯ +ಬಲ್ಲೆನು +ಜೂಜುಗಾರರ
ಕುಲಶಿರೋಮಣಿ +ತಾನೆಯೆಂದನು+ ಶಕುನಿ+ ಕೌರವಗೆ

ಅಚ್ಚರಿ:
(೧) ಶಕುನಿಯು ತನ್ನನ್ನು ವರ್ಣಿಸಿದ ಬಗೆ – ಜೂಜುಗಾರರ ಕುಲಶಿರೋಮಣಿ ತಾನೆಯೆಂದನು ಶಕುನಿ
(೨) ಧರ್ಮಜನ ನ್ಯೂನತೆಯ ವಿವರ – ಧರ್ಮಜ್ಞನು ವಿಶೇಷ ದ್ಯೂತ ಲೋಲುಪನು

ಪದ್ಯ ೧೭: ದುರ್ಯೋಧನನು ಸಾಯುತ್ತೇನೆ ಎಂದು ಏಕೆ ಹೇಳಿದನು?

ಮಾವ ಕೇಳತಿಬಲರು ಫಲುಗುಣ
ಪಾವಮಾನಿಗಳೈವರಿಗೆ ತಾ
ಜೀವಸಖ ಗೋವಿಂದನನಿಬರ ಗೆಲುವು ಗೋಚರವೆ
ಸಾವುದಲ್ಲದೆ ತನಗೆ ಬೇರಿ
ನ್ನಾವ ಪರಿಯಲಿ ಸಮತೆ ಸೇರದು
ಜೀವಿತವ್ಯವನಮರ ನಿಕರದೊಳರಸಿಕೊಳ್ಳೆಂದ (ಸಭಾ ಪರ್ವ, ೧೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಶಕುನಿಯ ಬಳಿ ತನ್ನ ಅಳಲನ್ನು ತೋಡಿಕೊಳ್ಳುತ್ತಾ, ಮಾವ ಭೀಮಾರ್ಜುನರು ಅತಿ ಬಲವಂತರು, ಈ ಪಂಚಪಾಂಡವರಿಗೆ ಕೃಷ್ಣನು ಪರಮಾಪ್ತನು, ಅವರನ್ನು ನಾನು ಗೆಲ್ಲಲು ಅಸಾಧ್ಯ ಆದ್ದರಿಂದ ಸಾಯುವುದೊಂದೆ ನನಗೆ ಉಳಿದ ದಾರಿ, ಇನ್ನಾವ ರೀತಿಯಿಂದಲೂ ನನಗೆ ಸಮಾಧಾನ ಸಿಗದು. ನನ್ನ ಜೀವವನ್ನು ನೀನು ದೇವತೆಗಳ ನಡುವೆ ಹುಡುಕಿಕೋ ಎಂದು ದುರ್ಯೋಧನನು ಹೇಳಿದನು.

ಅರ್ಥ:
ಮಾವ: ತಾಯಿಯ ಸಹೋದರ; ಬಲರು: ಪರಾಕ್ರಮಿಗಳು; ಪಾವಮಾನಿ: ಭೀಮ; ಸಖ: ಗೆಳೆಯ; ಗೋವಿಂದ: ಕೃಷ್ಣ; ಅನಿಬರು: ಅಷ್ಟು ಜನ; ಗೆಲುವು: ಜಯ; ಗೋಚರ: ತೋರು; ಸಾವು: ಮರಣ; ಬೇರೆ: ಅನ್ಯ; ಪರಿ: ರೀತಿ; ಸಮತೆ: ಸಾದೃಶ್ಯ, ಸಮಾನತೆಯ ಭಾವನೆ; ಸೇರದು: ತಲುಪು, ಮುಟ್ಟು; ಜೀವಿತ: ಬದುಕು;

ಪದವಿಂಗಡಣೆ:
ಮಾವ +ಕೇಳ್+ಅತಿಬಲರು+ ಫಲುಗುಣ
ಪಾವಮಾನಿಗಳ್+ಐವರಿಗೆ +ತಾ
ಜೀವ+ಸಖ +ಗೋವಿಂದನ್+ಅನಿಬರ +ಗೆಲುವು +ಗೋಚರವೆ
ಸಾವುದಲ್ಲದೆ+ ತನಗೆ +ಬೇರಿ
ನ್ನಾವ +ಪರಿಯಲಿ +ಸಮತೆ +ಸೇರದು
ಜೀವಿತವ್ಯವನ್+ಅಮರ +ನಿಕರದೊಳ್+ಅರಸಿಕೊಳ್ಳೆಂದ

ಅಚ್ಚರಿ:
(೧) ಸಾಯುತ್ತೇನೆ ಎಂದು ಹೇಳುವ ಪರಿ – ಜೀವಿತವ್ಯವನಮರ ನಿಕರದೊಳರಸಿಕೊಳ್ಳೆಂದ