ಪದ್ಯ ೧೪: ಶಕುನಿ ದುರ್ಯೋಧನನಿಗೆ ಯಾವ ವಿಚಾರ ಬೇಡವೆಂದು ಹೇಳಿದನು?

ಅವರು ಪಿತ್ರಾರ್ಜಿತದ ರಾಜ್ಯ
ಪ್ರವರಪಾತ್ರರು ನಿನ್ನಸೂಯೆಯ
ಕವಲು ಮನದ ಕುಠಾರ ಬುದ್ಧಿಯ ಕಲುಷ ಭಾವನೆಯ
ವಿವರಣೆಯನವರೆತ್ತ ಬಲ್ಲರು
ಶಿವ ಶಿವಾ ಭುವನೈಕಮಾನ್ಯರ
ನವಗಡಿಸಲಂಗೈಸಿದೈ ಮಾಣೆಂದನಾ ಶಕುನಿ (ಸಭಾ ಪರ್ವ, ೧೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ದುರ್ಯೋಧನನ ಮನಸ್ಥಿತಿಯನ್ನರಿತ ಶಕುನಿಯು ಅವನನ್ನು ಸಂತೈಸಿಸಲು, ಎಲೈ ದುರ್ಯೋಧನ ಅವರು ಪ್ರಿತ್ರಾರ್ಜಿತ ಆಸ್ತಿಗೆ ಹಕ್ಕುದಾರರು ನಿನ್ನ ಅಸೂಯೆಯಿಂದ ತುಂಬಿದ ಕೊಡಲಿ ಬುದ್ಧಿಯ, ಕವಲಾದ ಮನಸ್ಸಿನ ಕಲ್ಮಷದಿಂದ ತುಂಬಿದ ಭಾವನೆಯ ರೀತಿಯನ್ನು ಆವರೇನು ಬಲ್ಲರು? ಶಿವ ಶಿವಾ ಸಮಸ್ತಲೋಕಕ್ಕೂ ಮಾನ್ಯರಾದ ಪಾಂಡವರನ್ನು ಎದುರಿಸಲು ಸಿದ್ಧನಾದೆಯಲ್ಲವೇ? ಈ ಬುದ್ಧಿಯು ಬೇಡ, ಬಿಟ್ಟುಬಿಡು ಎಂದು ಶಕುನಿಯು ದುರ್ಯೋಧನನಿಗೆ ಹೇಳಿದನು.

ಅರ್ಥ:
ಪಿತ್ರಾರ್ಜಿತ: ತಂದೆಯಿಂದ ಬಂದ; ರಾಜ್ಯ: ರಾಷ್ಟ್ರ; ಪ್ರವರ: ಪ್ರಧಾನ ವ್ಯಕ್ತಿ; ಪಾತ್ರ: ಯೋಗ್ಯತೆ, ಅರ್ಹತೆ; ಅಸೂಯೆ:ಹೊಟ್ಟೆಕಿಚ್ಚು; ಕವಲು: ಕವಲೊಡೆದ ಕೊಂಬೆ, ಭಿನ್ನತೆ; ಮನ: ಮನಸ್ಸು; ಕುಠಾರ: ಕೊಡಲಿ, ಗುದ್ದಲಿ; ಬುದ್ಧಿ: ಜಾಣ್ಮೆ; ಕಲುಷ: ಕೆಟ್ಟ; ಭಾವನೆ: ಮನಸ್ಸಿನ ಅಭಿಪ್ರಾಯ, ಆಶಯ; ವಿವರಣೆ: ವಿಸ್ತರಿಸಿ ಹೇಳುವ ವಿಚಾರ; ಬಲ್ಲರು: ತಿಳಿದವರು; ಭುವನ: ಭೂಮಿ; ಮಾನ್ಯ: ಗೌರವ; ಅವಗಡಿಸು: ಕಡೆಗಣಿಸು; ಮಾಣು: ಬೇಡ;

ಪದವಿಂಗಡಣೆ:
ಅವರು +ಪಿತ್ರಾರ್ಜಿತದ +ರಾಜ್ಯ
ಪ್ರವರಪಾತ್ರರು +ನಿನ್ನ್+ಅಸೂಯೆಯ
ಕವಲು+ ಮನದ+ ಕುಠಾರ +ಬುದ್ಧಿಯ +ಕಲುಷ +ಭಾವನೆಯ
ವಿವರಣೆಯನ್+ಅವರೆತ್ತ+ ಬಲ್ಲರು
ಶಿವ ಶಿವಾ+ ಭುವನೈಕಮಾನ್ಯರನ್
ಅವಗಡಿಸಲ್+ಅಂಗೈಸಿದೈ +ಮಾಣೆಂದನಾ +ಶಕುನಿ

ಅಚ್ಚರಿ:
(೧) ದುರ್ಯೋಧನನ ಸ್ಥಿತಿಯನ್ನು ಹೇಳುವ ಪರಿ – ಅಸೂಯೆಯ ಕವಲು ಮನದ ಕುಠಾರ ಬುದ್ಧಿಯ ಕಲುಷ ಭಾವನೆಯ
(೨) ಶಕುನಿಯು ಬುದ್ಧಿ ಹೇಳುವ ಪರಿ – ಭುವನೈಕಮಾನ್ಯರನವಗಡಿಸಲಂಗೈಸಿದೈ ಮಾಣೆಂದನಾ ಶಕುನಿ

ನಿಮ್ಮ ಟಿಪ್ಪಣಿ ಬರೆಯಿರಿ