ಪದ್ಯ ೧೩: ಯಾವ ಬಳ್ಳಿಯಂತೆ ಪಾಂಡವರ ಐಶ್ವರ್ಯವು ಹಬ್ಬಿದೆ?

ಹೇಳು ಹೇಳೇನೇನು ಪಾಂಡು ನೃ
ಪಾಲಪುತ್ರರ ವಿಭವ ವಹ್ನಿ
ಜ್ವಾಲೆಯಲಿ ಮನ ಬೆಂದುದೇ ಹರಹರ ವಿಚಿತ್ರವಲ
ಪಾಲಕನು ಧರ್ಮಜನು ಸಲೆ ಕ
ಟ್ಟಾಳುಗಳು ಭೀಮಾರ್ಜುನರು ಬೆ
ಳ್ಳಾಳ ಹಬ್ಬುಗೆಯೈಸಲೇ ಪಾಂಡವರ ಸಿರಿಯೆಂದ (ಸಭಾ ಪರ್ವ, ೧೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಶಕುನಿಯು ದುರ್ಯೋಧನನ ದುಗುಡವನ್ನು ತಿಳಿಯಲು ಕಾತುರನಾಗಿ, ಹೇಳು ಹೇಳು ದುರ್ಯೋಧನ, ಪಾಂಡವರ ವೈಭವದ ಬೆಂಕಿಯ ಜ್ವಾಲೆಯಲ್ಲಿ ನಿನ್ನ ಮನಸ್ಸು ಬೆಂದುಹೋಯಿತೇ? ಶಿವ ಶಿವಾ ಇದು ವಿಚಿತ್ರವಾಗಿದೆ, ಧರ್ಮರಾಯನು ಒಡೆಯ, ಭೀಮಾರ್ಜುನರು ಶೂರರು, ಅವನ ಕಟ್ಟಾಳುಗಳು, ಪಾಂಡವರ ಐಶ್ವರ್ಯವು ಲಾವಂಚದ ಬಳ್ಳಿಯಂತೆ ಹಬ್ಬಿದೆಯಲ್ಲವೇ ಎಂದು ಶಕುನಿಯು ದುರ್ಯೋಧನನಿಗೆ ಹೇಳಿದನು.

ಅರ್ಥ:
ನೃಪಾಲ: ರಾಜ; ಪುತ್ರ: ಮಕ್ಕಳು; ವಿಭವ:ಸಿರಿ, ಸಂಪತ್ತು; ವಹ್ನಿ: ಅಗ್ನಿ, ಬೆಂಕಿ; ಜ್ವಾಲೆ: ಬೆಂಕಿಯ ನಾಲಗೆ; ಮನ: ಮನಸ್ಸು; ಬೆಂದು: ಸುಟ್ಟು; ಹರ: ಶಿವ; ವಿಚಿತ್ರ: ಆಶ್ಚರ್ಯಕರವಾದುದು; ಪಾಲಕ: ರಕ್ಷಕ, ರಾಜ; ಸಲೆ: ಒಂದೇ ಸಮನೆ, ಏಕಪ್ರಕಾರವಾಗಿ; ಕಟ್ಟಾಳು: ಶೂರ, ನಂಬುಗೆಯ ಸೇವಕ; ಬೆಳ್ಳಾಳ: ಹರಡಿದ ಬಿಳಿಯ ಬಲೆ; ಹಬ್ಬುಗೆ: ವಿಸ್ತರಿಸು; ಐಸಲೆ: ಅಲ್ಲವೆ; ಸಿರಿ: ಐಶ್ವರ್ಯ;

ಪದವಿಂಗಡಣೆ:
ಹೇಳು +ಹೇಳ್+ಏನೇನು+ ಪಾಂಡು +ನೃ
ಪಾಲ+ಪುತ್ರರ +ವಿಭವ+ ವಹ್ನಿ
ಜ್ವಾಲೆಯಲಿ +ಮನ +ಬೆಂದುದೇ +ಹರಹರ+ ವಿಚಿತ್ರವಲ
ಪಾಲಕನು+ ಧರ್ಮಜನು+ ಸಲೆ+ ಕ
ಟ್ಟಾಳುಗಳು +ಭೀಮಾರ್ಜುನರು+ ಬೆ
ಳ್ಳಾಳ +ಹಬ್ಬುಗೆಯೈಸಲೇ+ ಪಾಂಡವರ+ ಸಿರಿಯೆಂದ

ಅಚ್ಚರಿ:
(೧) ಐಶ್ವರ್ಯವು ಹಬ್ಬಿದ ಬಗ್ಗೆ ಹೇಳುವ ಪರಿ – ಬೆಳ್ಳಾಳ ಹಬ್ಬುಗೆಯೈಸಲೇ ಪಾಂಡವರ ಸಿರಿಯೆಂದ

ನಿಮ್ಮ ಟಿಪ್ಪಣಿ ಬರೆಯಿರಿ