ಪದ್ಯ ೧೦: ಶಕುನಿಯು ದುರ್ಯೋಧನನಿಗೆ ಏನು ಹೇಳಿದ?

ಹೊಕ್ಕನೀತನು ಕೌರವೇಂದ್ರನ
ನೆಕ್ಕಟಿಯೊಳಿರೆ ಕಂಡು ನುಡಿಸಿದ
ನಕ್ಕಜದ ರುಜೆಯೇನು ಮಾನಸವೋ ಶರೀರಜವೋ
ಮುಕ್ಕುಳಿಸಿ ಕೊಂಡಿರದಿರಾರಿಗೆ
ಸಿಕ್ಕಿದೆಯೋ ಸೀಮಂತಿನಿಯರಿಗೆ
ಮಕ್ಕಳಾಟಿಕೆ ಬೇಡ ನುಡಿ ಧೃತರಾಷ್ಟ್ರನಾಣೆಂದ (ಸಭಾ ಪರ್ವ, ೧೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಶಕುನಿಯು ದುರ್ಯೋಧನ ಅರಮನೆಯನ್ನು ಪ್ರವೇಶಿಸಿದನು. ಏಕಾಂತದಲ್ಲಿದ್ದ ದುರ್ಯೋಧನನನ್ನು ಕಂಡು ಮಾತನಾಡಿಸಲು ಪ್ರಾರಂಭಿಸಿದನು, ಇದೇನು ಆಶ್ಚರ್ಯಕರವಾದ ರೋಗವೋ, ಇದು ಮನಸ್ಸಿನ ವ್ಯಾಧಿಯೋ ಅಥವ ಶರೀರದ ಕಲ್ಮಶವೋ, ಇದನ್ನು ಒಳಗಡೆಯೇ ಇಟ್ಟುಕೊಳ್ಳಬೇಡ, ಹೊರಹಾಕು, ಯಾರಾದರು ಹೆಂಗಸಿಗೆ ನಿನ್ನ ಮನಸ್ಸನ್ನು ತೆತ್ತೆಯೋ? ಇಂತಹ ಹುಡುಗಾಟ ಬೇಡ, ಮಾತಾಡು ನಿಮ್ಮ ತಂದೆಯಮೇಲಾಣೆ ಎಂದು ಶಕುನಿಯು ದುರ್ಯೋಧನನನ್ನು ಮಾತನಾಡಿಸಲು ಪ್ರಯತ್ನಿಸಿದನು.

ಅರ್ಥ:
ಹೊಕ್ಕು: ಸೇರು; ಎಕ್ಕಟಿ: ಏಕಾಂತ; ಕಂಡು: ನೋಡಿ; ನುಡಿಸು: ಮಾತನಾಡಿಸು; ಅಕ್ಕಜ: ಆಶ್ಚರ್ಯ; ರುಜೆ: ರೋಗ; ಮಾನಸ: ಮನಸ್ಸು; ಶರೀರ: ತನು, ದೇಹ; ಮುಕ್ಕುಳಿಸು: ಹೊರಹಾಕು; ಕೊಂಡು: ತೆಗೆದುಕೊಳ್ಳು; ಸಿಕ್ಕು: ವಶಪಡಿಸು; ಸೀಮಂತಿನಿ: ಹೆಣ್ಣು; ಮಕ್ಕಳಾಟ: ಹುಡುಗಾಟ; ಬೇಡ: ನಿಲ್ಲಿಸು; ನುಡಿ: ಮಾತಾಡು; ಆಣೆ: ಪ್ರಮಾಣ;

ಪದವಿಂಗಡಣೆ:
ಹೊಕ್ಕನ್+ಈತನು +ಕೌರವೇಂದ್ರನನ್
ಎಕ್ಕಟಿಯೊಳ್+ಇರೆ+ ಕಂಡು +ನುಡಿಸಿದನ್
ಅಕ್ಕಜದ +ರುಜೆಯೇನು+ ಮಾನಸವೋ +ಶರೀರಜವೋ
ಮುಕ್ಕುಳಿಸಿ+ ಕೊಂಡಿರದಿರ್+ಆರಿಗೆ
ಸಿಕ್ಕಿದೆಯೋ +ಸೀಮಂತಿನಿಯರಿಗೆ
ಮಕ್ಕಳಾಟಿಕೆ+ ಬೇಡ+ ನುಡಿ+ ಧೃತರಾಷ್ಟ್ರನ್+ಆಣೆಂದ

ಅಚ್ಚರಿ:
(೧) ಚಿಂತೆಯನ್ನು ಹೊರಹಾಕು ಎಂದು ಹೇಳುವ ಪರಿ – ಮುಕ್ಕುಳಿಸಿ
(೨) ಸ ಕಾರದ ಜೋಡಿ ಪದ – ಸಿಕ್ಕಿದೆಯೋ ಸೀಮಂತಿನಿಯರಿಗೆ

ನಿಮ್ಮ ಟಿಪ್ಪಣಿ ಬರೆಯಿರಿ