ಪದ್ಯ ೧೨: ಯಾವ ಕಾರಣವು ದುರ್ಯೋಧನನನ್ನು ಕೋಪಗೊಳಿಸಿತು?

ಏನು ನಿನ್ನಂತಸ್ಥ ಹೃದಯ ಕೃ
ಶಾನು ಸಂಭವವೇಕೆ ನುಡಿ ದು
ಮ್ಮಾನ ಬೇಡೆನ್ನಾಣೆನುತ ಸಂತೈಸಿದನು ನೃಪನ
ಏನು ಭಯ ಬೇಡೆಂದೆನಲು ಯಮ
ಸೂನು ವೈಭವ ವಹ್ನಿದಗ್ಧ ಮ
ನೋನು ಭಾವನನೇಕೆ ನುಡಿಸುವಿರೆಂದನಾ ಭೂಪ (ಸಭಾ ಪರ್ವ, ೧೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಶಕುನಿಯು ದುರ್ಯೋಧನನ ಅಂತರಗವನ್ನು ತಿಳಿಯಲು, ನಿನ್ನ ಅಂತರಂಗದಲ್ಲೇನಿದೆ, ಹೃದಯಾಗ್ನಿಯು ಏಕೆ ಉದ್ಭವವಾಯಿತು? ಮಾನನಾಡು ನನ್ನಾಣೆ, ಯಾವ ಭಯವೂ ಇಲ್ಲದೆ ಹೇಳು ಎಂದು ಕೇಳಿದನು. ದುರ್ಯೋಧನನು ಯುಧಿಷ್ಠಿರನ ವೈಭವವು ನನ್ನ ಮನಸ್ಸನ್ನು ಸುಟ್ಟಿದೆ, ಇಂತಹ ನನ್ನನ್ನೇಕೆ ಮಾತನಾಡಿಸುವಿರಿ ಎಂದು ಹೇಳಿದನು.

ಅರ್ಥ:
ಕೃಶಾನು: ಅಗ್ನಿ; ಹೃದಯ: ಎದೆ; ಅಂತಸ್ಥ: ಅಂತರಂಗ; ಸಂಭವ: ಉತ್ಪತ್ತಿ; ನುಡಿ: ಮಾತು; ದುಮ್ಮಾನ: ದುಃಖ; ಬೇಡ: ಸಲ್ಲದು, ಕೂಡದು; ಆಣೆ: ಪ್ರಮಾಣ; ಸಂತೈಸು: ಸಾಂತ್ವನಗೊಳಿಸು, ಆದರಿಸು; ನೃಪ: ರಾಜ; ಭಯ: ಅಂಜಿಕೆ; ಸೂನು: ಮಗ; ವೈಭವ: ಶಕ್ತಿ, ಸಾಮರ್ಥ್ಯ; ವಹ್ನಿ: ಅಗ್ನಿ; ದಗ್ಧ: ದಹಿಸಿದುದು, ಸುಟ್ಟುದು; ಮನ: ಮನಸ್ಸು; ಊನ: ಕುಂದು ಕೊರತೆ; ಭಾವ: ಭಾವನೆ, ಚಿತ್ತವೃತ್ತಿ; ನುಡಿ: ಮಾತಾಡು; ಭೂಪ: ರಾಜ;

ಪದವಿಂಗಡಣೆ:
ಏನು +ನಿನ್ನಂತಸ್ಥ+ ಹೃದಯ +ಕೃ
ಶಾನು +ಸಂಭವವೇಕೆ+ ನುಡಿ+ ದು
ಮ್ಮಾನ +ಬೇಡ್+ಎನ್ನಾಣೆನುತ+ ಸಂತೈಸಿದನು +ನೃಪನ
ಏನು +ಭಯ +ಬೇಡೆಂದ್+ಎನಲು+ ಯಮ
ಸೂನು +ವೈಭವ +ವಹ್ನಿ+ ದಗ್ಧ +ಮನ
ಊನು+ ಭಾವನನ್+ಏಕೆ +ನುಡಿಸುವಿರೆಂದನಾ +ಭೂಪ

ಅಚ್ಚರಿ:
(೧) ನೃಪ, ಭೂಪ – ಸಮನಾರ್ಥಕ ಪದ

ಪದ್ಯ ೧೧: ದುರ್ಯೋಧನನು ಶಕುನಿಗೆ ಏನು ತಿಳಿಸಿದ?

ಮಾವ ನೀವ್ ಮರುಳಾದಿರೇ ನನ
ಗಾವ ರುಜೆಯಿಲ್ಲಂಗನೆಯರುಪ
ಜೀವಿಯೇ ನೀವರಿಯಿರೇ ಹಿಂದೀಸು ಕಾಲದಲಿ
ನೋವು ಬೇರಿಲ್ಲೆನಗೆ ನಿಳಯಕೆ
ನೀವು ಬಿಜಯಂಗೈವುದಂತ
ರ್ಭಾವ ವಹ್ನಿಯನೇಕೆ ಬೆದಕುವಿರೆಂದನಾ ಭೂಪ (ಸಭಾ ಪರ್ವ, ೧೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಶಕುನಿಯ ಮಾತುಗಳನ್ನು ಕೇಳಿ ದುರ್ಯೋಧನನು, ಮಾವ ನಿಮಗೆಲ್ಲೋ ಹುಚ್ಚು ಹಿಡಿದಿದೆಯೇ? ನನಗೆ ಯಾವ ರೋಗವೂ ಇಲ್ಲ. ನಾನು ಸ್ತ್ರೀಲೋಲನಲ್ಲವೆಂಬುದನ್ನು ನೀವು ಮೊದಲಿಂದಲೂ ತಿಳಿದಿದ್ದೀರಲ್ಲಾ? ನೀವು ನನ್ನ ಆಲಯಕ್ಕೆ ಬಂದು ಒಳಮನಸ್ಸಿನಲ್ಲಿ ಹುದುಗಿರುವ ಬೆಂಕಿಯನ್ನೇಕೆ ಕೆದರುವಿರಿ ಎಂದು ಹೇಳಿದನು.

ಅರ್ಥ:
ಮಾವ: ತಾಯಿಯ ಸಹೋದರ; ಮರುಳು: ಬುದ್ಧಿಭ್ರಮೆ, ಹುಚ್ಚು; ರುಜೆ: ರೋಗ; ಅಂಗನೆ: ಹೆಣ್ಣು; ಉಪಜೀವಿ: ಪರಾವಲಂಬನದಿಂದ ಜೀವಿಸುವ ಮನುಷ್ಯ; ಅರಿ: ತಿಳಿ; ಹಿಂದೆ: ಮೊದಲು; ಕಾಲ: ಸಮಯ; ನೋವು: ಬೇನೆ, ಶೂಲೆ; ನಿಳಯ: ಮನೆ; ಬಿಜಯಂಗೈ: ಆಗಮಿಸು; ಅಂತರ್ಭಾವ: ಒಳ ಅರ್ಥ; ವಹ್ನಿ: ಬೆಂಕಿ; ಬೆದಕು: ಕೆದಕು, ಕೆರೆತ, ಗೀರುವಿಕೆ; ಭೂಪ: ರಾಜ;

ಪದವಿಂಗಡಣೆ:
ಮಾವ +ನೀವ್ +ಮರುಳಾದಿರೇ+ ನನಗ್
ಆವ +ರುಜೆಯಿಲ್+ಅಂಗನೆಯರ್+ಉಪ
ಜೀವಿಯೇ +ನೀವ್+ಅರಿಯಿರೇ +ಹಿಂದ್+ಈಸು +ಕಾಲದಲಿ
ನೋವು +ಬೇರಿಲ್+ಎನಗೆ +ನಿಳಯಕೆ
ನೀವು+ ಬಿಜಯಂಗೈವುದ್+ಅಂತ
ರ್ಭಾವ +ವಹ್ನಿಯನೇಕೆ+ ಬೆದಕುವಿರೆಂದನಾ +ಭೂಪ

ಅಚ್ಚರಿ:
(೧) ತನ್ನ ಮನಸ್ಸು ಕುದಿಯುತ್ತಿದೆ ಎಂದು ಹೇಳುವ ಪರಿ – ಅಂತರ್ಭಾವ ವಹ್ನಿಯನೇಕೆ ಬೆದಕುವಿರೆಂದನಾ ಭೂಪ

ಪದ್ಯ ೧೦: ಶಕುನಿಯು ದುರ್ಯೋಧನನಿಗೆ ಏನು ಹೇಳಿದ?

ಹೊಕ್ಕನೀತನು ಕೌರವೇಂದ್ರನ
ನೆಕ್ಕಟಿಯೊಳಿರೆ ಕಂಡು ನುಡಿಸಿದ
ನಕ್ಕಜದ ರುಜೆಯೇನು ಮಾನಸವೋ ಶರೀರಜವೋ
ಮುಕ್ಕುಳಿಸಿ ಕೊಂಡಿರದಿರಾರಿಗೆ
ಸಿಕ್ಕಿದೆಯೋ ಸೀಮಂತಿನಿಯರಿಗೆ
ಮಕ್ಕಳಾಟಿಕೆ ಬೇಡ ನುಡಿ ಧೃತರಾಷ್ಟ್ರನಾಣೆಂದ (ಸಭಾ ಪರ್ವ, ೧೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಶಕುನಿಯು ದುರ್ಯೋಧನ ಅರಮನೆಯನ್ನು ಪ್ರವೇಶಿಸಿದನು. ಏಕಾಂತದಲ್ಲಿದ್ದ ದುರ್ಯೋಧನನನ್ನು ಕಂಡು ಮಾತನಾಡಿಸಲು ಪ್ರಾರಂಭಿಸಿದನು, ಇದೇನು ಆಶ್ಚರ್ಯಕರವಾದ ರೋಗವೋ, ಇದು ಮನಸ್ಸಿನ ವ್ಯಾಧಿಯೋ ಅಥವ ಶರೀರದ ಕಲ್ಮಶವೋ, ಇದನ್ನು ಒಳಗಡೆಯೇ ಇಟ್ಟುಕೊಳ್ಳಬೇಡ, ಹೊರಹಾಕು, ಯಾರಾದರು ಹೆಂಗಸಿಗೆ ನಿನ್ನ ಮನಸ್ಸನ್ನು ತೆತ್ತೆಯೋ? ಇಂತಹ ಹುಡುಗಾಟ ಬೇಡ, ಮಾತಾಡು ನಿಮ್ಮ ತಂದೆಯಮೇಲಾಣೆ ಎಂದು ಶಕುನಿಯು ದುರ್ಯೋಧನನನ್ನು ಮಾತನಾಡಿಸಲು ಪ್ರಯತ್ನಿಸಿದನು.

ಅರ್ಥ:
ಹೊಕ್ಕು: ಸೇರು; ಎಕ್ಕಟಿ: ಏಕಾಂತ; ಕಂಡು: ನೋಡಿ; ನುಡಿಸು: ಮಾತನಾಡಿಸು; ಅಕ್ಕಜ: ಆಶ್ಚರ್ಯ; ರುಜೆ: ರೋಗ; ಮಾನಸ: ಮನಸ್ಸು; ಶರೀರ: ತನು, ದೇಹ; ಮುಕ್ಕುಳಿಸು: ಹೊರಹಾಕು; ಕೊಂಡು: ತೆಗೆದುಕೊಳ್ಳು; ಸಿಕ್ಕು: ವಶಪಡಿಸು; ಸೀಮಂತಿನಿ: ಹೆಣ್ಣು; ಮಕ್ಕಳಾಟ: ಹುಡುಗಾಟ; ಬೇಡ: ನಿಲ್ಲಿಸು; ನುಡಿ: ಮಾತಾಡು; ಆಣೆ: ಪ್ರಮಾಣ;

ಪದವಿಂಗಡಣೆ:
ಹೊಕ್ಕನ್+ಈತನು +ಕೌರವೇಂದ್ರನನ್
ಎಕ್ಕಟಿಯೊಳ್+ಇರೆ+ ಕಂಡು +ನುಡಿಸಿದನ್
ಅಕ್ಕಜದ +ರುಜೆಯೇನು+ ಮಾನಸವೋ +ಶರೀರಜವೋ
ಮುಕ್ಕುಳಿಸಿ+ ಕೊಂಡಿರದಿರ್+ಆರಿಗೆ
ಸಿಕ್ಕಿದೆಯೋ +ಸೀಮಂತಿನಿಯರಿಗೆ
ಮಕ್ಕಳಾಟಿಕೆ+ ಬೇಡ+ ನುಡಿ+ ಧೃತರಾಷ್ಟ್ರನ್+ಆಣೆಂದ

ಅಚ್ಚರಿ:
(೧) ಚಿಂತೆಯನ್ನು ಹೊರಹಾಕು ಎಂದು ಹೇಳುವ ಪರಿ – ಮುಕ್ಕುಳಿಸಿ
(೨) ಸ ಕಾರದ ಜೋಡಿ ಪದ – ಸಿಕ್ಕಿದೆಯೋ ಸೀಮಂತಿನಿಯರಿಗೆ

ಪದ್ಯ ೯: ಕೌರವನು ಯಾರನ್ನು ಬರಹೇಳೆಂದು ಅಪ್ಪಣೆಯಿಟ್ಟನು?

ಕರೆದು ಬಾಗಿಲವರಿಗೆ ತನ್ನಯ
ಬರವನರುಹಿಸಲವರು ರಾಯನ
ಹೊರೆಗೆ ಬಂದರು ನುಡಿದರಂಗೈ ತಳದ ಬಾಯ್ಗಳಲಿ
ಅರಸ ಬಿನ್ನಹ ಮಾವದೇವರು
ದರುಶನಾರ್ಥಿಗಳೆನಲು ಮನದಲಿ
ಕುರುನೃಪತಿ ಚಿಂತಿಸುತ ಬರಹೇಳೆಂದು ನೇಮಿಸಿದ (ಸಭಾ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ದುರ್ಯೋಧನನ ಅರಮನೆಯ ಬಾಗಿಲನ್ನು ಕಾಯುತ್ತಿದ್ದ ಸೇವಕರನ್ನು ಕರೆದು ರಾಜನಿಗೆ ನಾನು (ಶಕುನಿ) ಬಂದಿರುವುದೆಂದು ತಿಳಿಸಲು ಶಕುನಿ ಹೇಳಿದನು. ದೂತರು ದುರ್ಯೋಧನನ ಬಳಿಗೆ ಬಂದು ಬಾಯಲ್ಲಿ ಅಂಗೈಯನ್ನಿಟ್ಟು, ಎಲೈ ರಾಜನೇ ನಿಮ್ಮ ಮಾವನವರು ನಿಮ್ಮನ್ನು ಕಾಣಲು ಬಂದಿದ್ದಾರೆ ಎಂದು ತಿಳಿಸಲು, ಚಿಂತಾಗ್ರಸ್ಥನಾಗಿದ್ದ ದುರ್ಯೋಧನನು ಅವರನ್ನು ಬರಹೇಳು ಎಂದು ಅಪ್ಪಣೆ ನೀಡಿದನು.

ಅರ್ಥ:
ಕರೆ: ಬರೆಮಾಡು; ಬಾಗಿಲು: ಕದ; ಬರವು: ಆಗಮನ; ಅರುಹು: ತಿಳಿಸು, ಹೇಳು; ರಾಯ: ರಾಜ; ಹೊರೆ: ಆಶ್ರಯ; ಬಂದು: ಆಗಮಿಸು; ನುಡಿ: ಹೇಳು, ಮಾತಾದು; ಅಂಗೈ: ಹಸ್ತ; ತಳದ: ಕೆಳಗು; ಬಾಯ್: ಮುಖದ ಒಂದು ಅಂಗ; ಅರಸ: ರಾಜ; ಬಿನ್ನಹ: ಕೋರಿಕೆ; ಮಾವ: ತಾಯಿಯ ತಮ್ಮ; ದರುಶನ: ನೋಡಲು; ಮನ: ಮನಸ್ಸು; ನೃಪ: ರಾಜ; ಚಿಂತಿಸು: ಯೋಚಿಸು; ನೇಮಿಸು: ಅಪ್ಪಣೆ ನೀಡು;

ಪದವಿಂಗಡಣೆ:
ಕರೆದು +ಬಾಗಿಲವರಿಗೆ+ ತನ್ನಯ
ಬರವನ್+ಅರುಹಿಸಲ್+ಅವರು +ರಾಯನ
ಹೊರೆಗೆ +ಬಂದರು +ನುಡಿದರ್+ಅಂಗೈ +ತಳದ +ಬಾಯ್ಗಳಲಿ
ಅರಸ+ ಬಿನ್ನಹ +ಮಾವದೇವರು
ದರುಶನಾರ್ಥಿಗಳ್+ಎನಲು +ಮನದಲಿ
ಕುರುನೃಪತಿ+ ಚಿಂತಿಸುತ+ ಬರಹೇಳೆಂದು +ನೇಮಿಸಿದ

ಅಚ್ಚರಿ:
(೧) ರಾಯ, ಅರಸ, ನೃಪತಿ – ಸಮನಾರ್ಥಕ ಪದಗಳು
(೨) ರಾಜನೊಂದಿಗೆ ಸೇವಕರು ಮಾತನಾಡುವ ಪರಿ – ರಾಯನ ಹೊರೆಗೆ ಬಂದರು ನುಡಿದರಂಗೈ ತಳದ ಬಾಯ್ಗಳಲಿ
(೩) ಶಕುನಿಯನ್ನು ಸೇವಕರು ಕರೆದ ಬಗೆ – ಮಾವದೇವರು

ಪದ್ಯ ೮: ಕೌರವನ ಮಂತ್ರಿಗಳು ಏನೆಂದು ಚಿಂತಿಸಿದರು?

ಅಕಟ ಕೌರವರಾಯ ರಾಜ
ನ್ಯಕ ಶಿರೋಮಣಿಯಿರಲು ಧರೆ ರಾ
ಜಕ ವಿಹೀನ ವಿಡಂಬವಾಯ್ತೇ ಶಿವ ಶಿವಾಯೆನುತ
ಸಕಲದಳ ನಾಯಕರು ಮಂತ್ರಿ
ಪ್ರಕರ ಚಿಂತಾಂಬುಧಿಯೊಳದ್ದಿರೆ
ಶಕುನಿ ಬಂದನು ಕೌರವೇಂದ್ರನ ರಾಜಮಂದಿರಕೆ (ಸಭಾ ಪರ್ವ, ೧೩ ಸಂಧಿ, ೮ ಪದ್ಯ)

ತಾತ್ಪರ್ಯ:
ದುರ್ಯೋಧನನ ಏಕಾಂಗಿ ಸ್ಥಿತಿಯನ್ನು ನೋಡಿದ ಅವನ ಆಪ್ತ ಸಚಿವರು, ಅಯ್ಯೋ ಇದೇನು ರಾಜಕುಲಶಿರೋಮಣಿಯಾದ ಕೌರವರಾಯನೂ ಇದ್ದೂ ಇಂದು ರಾಜ್ಯವು ರಾಜನಿಲ್ಲದ ಹಾಗಾಗಿದೆ ಎಂದು ಚಿಂತಾಸಾಗರದಲ್ಲಿ ಮುಳುಗಿದರು. ಆಗ ಶಕುನಿಯು ಕೌರವನನ್ನು ನೋಡಲು ದುರ್ಯೋಧನನ ಅರಮನೆಗೆ ಬಂದನು.

ಅರ್ಥ:
ಅಕಟ: ಅಯ್ಯೋ; ರಾಜ: ರಾಜ; ರಾಜ:ಒಡೆಯ; ಶಿರೋಮಣಿ: ಶ್ರೇಷ್ಠ; ಧರೆ: ಭೂಮಿ; ರಾಜನ್ಯಕ: ಅರಸರ ಸಮೂಹ; ವಿಹೀನ: ಇಲ್ಲದೆ; ವಿಡಂಬ: ಸೋಗು, ನಟನೆ, ಆಡಂಬರ; ಶಿವ: ಶಂಕರ; ಸಕಲ: ಎಲ್ಲಾ; ದಳ: ಸೈನ್ಯ; ನಾಯಕ: ಒಡೆಯ; ಮಂತ್ರಿ: ಸಚಿವ; ಪ್ರಕರ: ಗುಂಪು, ಸಮೂಹ; ಚಿಂತೆ: ಯೋಚನೆ; ಅಂಬುಧಿ: ಸಾಗರ; ರಾಜಮಂದಿರ: ಆರಮನೆ; ಅದ್ದು: ತೋಯ್ದು, ಒದ್ದೆಯಾಗು;

ಪದವಿಂಗಡಣೆ:
ಅಕಟ +ಕೌರವರಾಯ +ರಾಜ
ನ್ಯಕ +ಶಿರೋಮಣಿಯಿರಲು+ ಧರೆ+ ರಾ
ಜಕ +ವಿಹೀನ +ವಿಡಂಬವಾಯ್ತೇ +ಶಿವ +ಶಿವಾಯೆನುತ
ಸಕಲ+ದಳ+ ನಾಯಕರು +ಮಂತ್ರಿ
ಪ್ರಕರ +ಚಿಂತಾಂಬುಧಿಯೊಳ್+ಅದ್ದಿರೆ
ಶಕುನಿ+ ಬಂದನು +ಕೌರವೇಂದ್ರನ +ರಾಜಮಂದಿರಕೆ

ಅಚ್ಚರಿ:
(೧) ಚಿಂತೆಯ ತೀವ್ರತೆಯನ್ನು ಹೇಳುವ ಬಗೆ – ಸಕಲದಳ ನಾಯಕರು ಮಂತ್ರಿ ಪ್ರಕರ ಚಿಂತಾಂಬುಧಿಯೊಳದ್ದಿರೆ
(೨) ದುರ್ಯೋಧನನನ್ನು ಹೊಗಳುವ ಪರಿ – ರಾಜನ್ಯಕ ಶಿರೋಮಣಿ