ಪದ್ಯ ೩೧: ಯಾವ ಮಾರ್ಗದಲ್ಲಿ ನಡೆಯಲು ವ್ಯಾಸರು ಉಪದೇಶಿಸಿದರು?

ನುಡಿಯದಿರಸತ್ಯವನು ರಾಜ್ಯವ
ಬಿಡು ವಿಭಾಡಿಸಿ ನಿನ್ನ ವಧುವಿನ
ಮುಡಿಗೆ ಹಾಯ್ದರೆ ನೀನಧರ್ಮದ ತಡಿಯನಡರದಿರು
ಒಡಲುಗೂಡಿ ಸಮಸ್ತ ಧನವಿದು
ಕೆಡುವುದಗ್ಗದ ಮೋಕ್ಷಲಕ್ಷ್ಮಿಯ
ಮುಡಿಗೆ ಹಾಯ್ದೊಡೆ ಸತ್ಯವೊಂದನೆ ನಂಬು ನೀನೆಂದ (ಸಭಾ ಪರ್ವ, ೧೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ವೇದವ್ಯಾಸರು ಧರ್ಮಜನನ್ನು ಎಚ್ಚರಿಸುತ್ತಾ, ಅಸತ್ಯವನ್ನು ಎಂದಿಗೂ ಆಡಬೇಡ, ರಾಜ್ಯವನ್ನು ಕಳೆದುಕೊಳ್ಲಲು ಹೆದರಬೇಡ. ದ್ರೌಪದಿಯ ಮುಡಿಯನ್ನು ಹಿಡಿದೆಳೆದರೂ ನೀನು ಅಧರ್ಮಕ್ಕೆ ಮನಸ್ಸು ಕೊಡಬೇಡ. ಸಮಸ್ತ ಐಶ್ವರ್ಯವೂ ದೇಹವೂ ನಾಶವಾಗುವಂತಹವು. ಮೋಕ್ಷಲಕ್ಷ್ಮಿಯನ್ನು ಪಡೆಯಲು ಸತ್ಯವೊಂದೇ ಮಾರ್ಗ ಅದರ ಆಶ್ರಯವನ್ನು ಪಡೆ ಎಂದು ವ್ಯಾಸರು ತಿಳಿಸಿದರು.

ಅರ್ಥ:
ಅಸತ್ಯ: ಸುಳ್ಳು; ನುಡಿ: ಮಾತು; ರಾಜ್ಯ: ರಾಷ್ಟ್ರ; ಬಿಡು: ತೊರೆ; ವಿಭಾಡ: ನಾಶಮಾಡುವವನು, ಸೋಲಿಸುವವನು; ವಧು: ಹೆಣ್ಣು, ಹೆಂಡತಿ; ಮುಡಿ: ತಲೆ; ಹಾಯ್ಕು: ಹಾಕು; ಅಧರ್ಮ: ಧರ್ಮಕ್ಕೆ ವಿರುದ್ಧವಾದುದು, ನ್ಯಾಯವಲ್ಲದುದು; ತಡಿ:ದಡ, ತಟ, ದಂಡೆ; ಅಡರು: ಆಸರೆ; ಒಡಲು: ದೇಹ; ಸಮಸ್ತ: ಎಲ್ಲಾ; ಧನ: ಐಶ್ವರ್ಯ; ಕೆಡು: ಹಾಳಾಗು; ಅಗ್ಗ: ಶ್ರೇಷ್ಠ; ಮೋಕ್ಷ: ಬಿಡುಗಡೆ, ಮುಕ್ತಿ, ನಿರ್ವಾಣ; ಮುಡಿ: ಶಿರ, ತಲೆ; ಸತ್ಯ: ದಿಟ; ನಂಬು: ವಿಶ್ವಾಸವಿಡು;

ಪದವಿಂಗಡಣೆ:
ನುಡಿಯದಿರ್+ಅಸತ್ಯವನು +ರಾಜ್ಯವ
ಬಿಡು +ವಿಭಾಡಿಸಿ+ ನಿನ್ನ+ ವಧುವಿನ
ಮುಡಿಗೆ +ಹಾಯ್ದರೆ +ನೀನ್+ಅಧರ್ಮದ +ತಡಿಯನ್+ಅಡರದಿರು
ಒಡಲುಗೂಡಿ +ಸಮಸ್ತ +ಧನವಿದು
ಕೆಡುವುದ್+ಅಗ್ಗದ +ಮೋಕ್ಷಲಕ್ಷ್ಮಿಯ
ಮುಡಿಗೆ +ಹಾಯ್ದೊಡೆ +ಸತ್ಯವೊಂದನೆ+ ನಂಬು +ನೀನೆಂದ

ಅಚ್ಚರಿ:
(೧) ಅಸತ್ಯ, ಸತ್ಯ – ವಿರುದ್ಧ ಪದಗಳು
(೨) ವಧುವಿನ ಮುಡಿಗೆ, ಮೋಕ್ಷಲಕ್ಷ್ಮಿಯ ಮುಡಿಗೆ – ಪದಗಳ ಬಳಕೆ

ಪದ್ಯ ೩೦: ವ್ಯಾಸರು ಧರ್ಮಜನಿಗೆ ಯಾವ ಉಪದೇಶವನ್ನು ನೀಡಿದರು?

ಅರಿದಿಹುದು ನೀನಾಪ್ತ ವಚನವ
ಮರೆಯದಿರು ವೇದೋಕ್ತ ಕರ್ಮದ
ಹೊರಿಗೆ ನಿನ್ನದು ನಿನ್ನ ಹೊದ್ದದು ಕಲುಷ ಕಲಿಮಲದ
ಕರುಬರೀ ಕೌರವರು ಮಖವಿದು
ಮೆರೆದುದದ್ಭುತವಾಗಿ ನಿನ್ನನು
ಮುರಿವರಲ್ಲದೆ ನಿಮ್ಮವರು ಸೈರಿಸುವರಲ್ಲೆಂದ (ಸಭಾ ಪರ್ವ, ೧೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ವ್ಯಾಸರು ತಮ್ಮ ಮಾತುಗಳನ್ನು ಮುಂದುವರಿಸುತ್ತಾ, ಈ ರಾಜಸೂಯ ಯಾಗವು ಅತ್ಯದ್ಭುತವಾಗಿ ನಡೆದಿದೆ. ಇದನ್ನು ನಿನ್ನ ದಾಯಾದಿಗಳಾದ ಕೌರವರು ಸಹಿಸರು, ಅವರು ಹೊಟ್ಟೆಕಿಚ್ಚಿನಿಂದ ನೊಂದಿದ್ದಾರೆ. ನಿನ್ನನ್ನು ಹೇಗಾದರೂ ಭಂಗಕ್ಕೊಳಪಡಿಸಿ ಮುರಿಯುತ್ತಾರೆ. ನಿನ್ನ ಏಳಿಗೆಯನ್ನು ಅವರು ಸೈರಿಸುವುದಿಲ್ಲ. ನೀನು ವೇದೋಕ್ತಕರ್ಮಾಅರಣೆಯನ್ನು ಬಿಡಬೇಡ. ಆಪ್ತವಾಕ್ಯವನ್ನು ಮರೆಯಬೇಡ. ಕಲಿಕಲ್ಮಷವು ನಿನ್ನ ಹತ್ತಿರಕ್ಕೂ ಸುಳಿಯುವುದಿಲ್ಲ ಎಂದು ಹೇಳಿದರು.

ಅರ್ಥ:
ಅರಿ: ತಿಳಿ;ಆಪ್ತ: ಹತ್ತಿರ; ವಚನ: ಮಾತು, ನುಡಿ; ಮರೆ: ನೆನಪಿನಿಂದ ದೂರ ತಳ್ಳು; ವೇದ: ಶೃತಿ; ಉಕ್ತಿ: ನುಡಿದ; ಕರ್ಮ: ಕೆಲಸ, ಕಾರ್ಯ; ಹೊರಿಗೆ: ಭಾರ, ಹೊರೆ; ಹೊದ್ದು: ಹೊಂದು, ಸೇರು, ತಬ್ಬಿಕೊ; ಕಲುಷ: ಕೆಟ್ಟ; ಮಲ: ಕೊಳೆ; ಪಾಪ; ಕರುಬು: ಹೊಟ್ಟೆಕಿಚ್ಚು ಪಡು; ಮಖ: ಯಾಗ; ಮೆರೆ: ಪ್ರಕಾಶಿಸು, ಹೊಳೆ; ಅದ್ಭುತ: ವಿಸ್ಮಯ, ಆಶ್ಚರ್ಯ; ಮುರಿ: ಸೀಳು; ಸೈರಿಸು: ತಾಳು, ಸಹಿಸು;

ಪದವಿಂಗಡಣೆ:
ಅರಿದಿಹುದು +ನೀನ್+ಆಪ್ತ +ವಚನವ
ಮರೆಯದಿರು+ ವೇದೋಕ್ತ +ಕರ್ಮದ
ಹೊರಿಗೆ+ ನಿನ್ನದು+ ನಿನ್ನ +ಹೊದ್ದದು +ಕಲುಷ +ಕಲಿಮಲದ
ಕರುಬರೀ+ ಕೌರವರು+ ಮಖವಿದು
ಮೆರೆದುದ್+ಅದ್ಭುತವಾಗಿ +ನಿನ್ನನು
ಮುರಿವರಲ್ಲದೆ+ ನಿಮ್ಮವರು +ಸೈರಿಸುವರಲ್ಲೆಂದ

ಅಚ್ಚರಿ:
(೧) ಕೌರವರ ಬಗ್ಗೆ ಎಚ್ಚರದ ನುಡಿ – ಕರುಬರೀ ಕೌರವರು; ನಿನ್ನನು ಮುರಿವರಲ್ಲದೆ ನಿಮ್ಮವರು ಸೈರಿಸುವರಲ್ಲೆಂದ

ಪದ್ಯ ೨೯: ಉತ್ಪಾತಗಳು ಏನನ್ನು ಸೂಚಿಸುತ್ತವೆ ಎಂದು ವ್ಯಾಸರು ನುಡಿದರು?

ಇದು ಕಣಾ ಕುರುರಾಯ ವಂಶಾ
ಭ್ಯುದಯ ವಿಗ್ರಹಪೂರ್ವ ಸೂಚಕ
ವಿದು ಸುಯೋಧನ ನೃಪನ ಕತಿಪಯ ಕಾಲ ಸುಖಬೀಜ
ಇದು ಸಮಸ್ತ ಕ್ಷತ್ರ ಕುಲ ವಾ
ರಿದ ಘಟೋಚ್ಚಾಟನ ಸಮೀರಣ
ವಿದರ ಫಲ ನಿಮಗಪಜಯಾವಹವೆಂದನಾ ಮುನಿಪ (ಸಭಾ ಪರ್ವ, ೧೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ವೇದವ್ಯಾಸರು, ಈ ಉತ್ಪಾತಗಳು ಕೌರವವಂಶದ ಅಭ್ಯುದಯಕ್ಕೆ ಬಂದೊದಗುವ ಕುತ್ತನ್ನು ಸೂಚಿಸುತ್ತವೆ. ದುರ್ಯೋಧನನು ಕೆಲವು ಕಾಲ ಸುಖದಿಮ್ದಿರುತ್ತಾನೆ, ಸಮಸ್ತ ಕ್ಷತ್ರಿಯ ಕುಲಗಳೆಂಬ ಮೋಡಗಳನ್ನು ಹಾರಿಸುವ ಬಿರುಗಾಳಿಯಿದು, ನಿಮಗೆ ಅಪಜಯವು ಕಾದಿದೆಯೆಂದು ಈ ಉತ್ಪಾತಗಳು ಸೂಚಿಸುತ್ತವೆ ಎಂದು ನುಡಿದರು.

ಅರ್ಥ:
ರಾಯ: ರಾಜ; ವಂಶ: ಕುಲ; ಅಭ್ಯುದಯ: ಏಳಿಗೆ; ವಿಗ್ರಹ: ರೂಪ; ಪೂರ್ವ: ಮೊದಲು, ಹಿಂದೆ; ಸೂಚಕ: ಸೂಚನೆ; ನೃಪ: ರಾಜ; ಕತಿಪಯ: ಕೆಲವು; ಕಾಲ: ಸಮಯ; ಸುಖ: ಸಂತಸ, ನೆಮ್ಮದಿ; ಬೀಜ: ಮೂಲ; ಸಮಸ್ತ: ಎಲ್ಲಾ; ಕ್ಷತ್ರ: ಕ್ಷತ್ರಿಯ; ಕುಲ: ವಂಶ; ವಾರಿದ: ಮೋಡ; ಘಟ: ದೊಡ್ಡ; ಉಚ್ಚಾಟನ: ಹೊರಹಾಕು; ಸಮೀರ: ಗಾಳಿ, ವಾಯು; ಫಲ: ಪ್ರಯೋಜನ; ಅಪಜಯ: ಪರಾಭವ; ಆವಹಿಸು: ಕೂಗಿ ಕರೆ;

ಪದವಿಂಗಡಣೆ:
ಇದು+ ಕಣಾ +ಕುರುರಾಯ +ವಂಶ
ಅಭ್ಯುದಯ +ವಿಗ್ರಹ+ಪೂರ್ವ +ಸೂಚಕವ್
ಇದು +ಸುಯೋಧನ+ ನೃಪನ+ ಕತಿಪಯ+ ಕಾಲ +ಸುಖಬೀಜ
ಇದು+ ಸಮಸ್ತ +ಕ್ಷತ್ರ +ಕುಲ+ ವಾ
ರಿದ +ಘಟೋಚ್ಚಾಟನ+ ಸಮೀರಣವ್
ಇದರ+ ಫಲ+ ನಿಮಗ್+ಅಪಜಯ+ಆವಹವೆಂದನಾ +ಮುನಿಪ

ಅಚ್ಚರಿ:
(೧) ಉತ್ಪಾತದ ತೀವ್ರತೆ ಬಗ್ಗೆ ತಿಳಿಸಿದ ವ್ಯಾಸರು – ಇದು ಸಮಸ್ತ ಕ್ಷತ್ರ ಕುಲ ವಾ
ರಿದ ಘಟೋಚ್ಚಾಟನ ಸಮೀರಣ

ಪದ್ಯ ೨೮: ಧರ್ಮಜನು ವ್ಯಾಸರ ಬಳಿ ಏನನ್ನು ಕೇಳಿದನು?

ಆ ಮುಕುಂದನ ನೆನಹು ನಮಗೆ ನಿ
ರಾಮಯವು ನೀವಿರಲು ಚಿಂತಾ
ವೈಮನಸ್ಯದ ವೇಧೆ ಮುರಿದುದು ಸಾಕದಂತಿರಲಿ
ಈ ಮಹೋತ್ಪಾತ ಪ್ರಬಂಧ ವಿ
ರಾಮ ಕರ್ಮವ ಬೆಸಸಿಯೆನೆ ನಗು
ತಾ ಮುನೀಶ್ವರ ನುಡಿದನವನೀಪತಿ ಶಿರೋಮಣಿಗೆ (ಸಭಾ ಪರ್ವ, ೧೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ರಾಜರಲ್ಲಿ ಶ್ರೇಷ್ಠನಾದ ಧರ್ಮಜನಿಗೆ ಋಷಿಗಳಲ್ಲಿ ಶ್ರೇಷ್ಠರಾದ ವ್ಯಾಸಮಹರ್ಷಿಗಳನ್ನು ಉದ್ದೇಶಿಸುತ್ತಾ, ನೀವು ಇರುವುದರಿಂದ ನನಗಿದ್ದ ಚಿಂತೆ, ನೋವು ಮಾಯವಾಗಿದೆ. ಶ್ರೀಕೃಷ್ಣನ ನಾಮ ಸ್ಮರಣೆಯು ನಮಗೆ ಸದಾ ನೆಮ್ಮದಿಯನ್ನುಂಟುಮಾಡುತ್ತದೆ. ಅದು ಹಾಗಿರಲಿ, ಈ ಮಹಾ ಉತ್ಪಾತಗಳ ದುಷ್ಪರಿಣಾಮವನ್ನು ನಿಲ್ಲಿಸುವ ಕರ್ಮವನ್ನು ತಿಳಿಸಿ ಎಂದನು, ವ್ಯಾಸರು ಆಗ ಧರ್ಮಜನಿಗೆ ಹೀಗೆ ಹೇಳಿದರು.

ಅರ್ಥ:
ನೆನಹು: ನೆನಪು; ನಿರಾಮಯ: ನೆಮ್ಮದಿ, ಸಂತೋಷ; ಚಿಂತೆ: ಯೋಚನೆ; ವೈಮನಸ್ಯ: ಅಪಾರವಾದ ದುಃಖ; ವೇಧೆ: ಕಷ್ಟ, ಬಾಧೆ; ಮುರಿ: ಸೀಳು; ಸಾಕು: ನಿಲ್ಲಿಸು, ತಡೆ; ಮಹಾ: ದೊಡ್ಡ; ಉತ್ಪಾತ: ಅಪಶಕುನ; ಪ್ರಬಂಧ: ಬಾಂಧವ್ಯ, ಕಟ್ಟು, ವ್ಯವಸ್ಥೆ; ವಿರಾಮ: ಬಿಡುವು, ವಿಶ್ರಾಂತಿ; ಕರ್ಮ: ಕಾರ್ಯ, ಕೆಲಸ; ಬೆಸಸು: ಹೇಳು, ಆಜ್ಞಾಪಿಸು; ನಗು: ಸಂತಸ; ಮುನಿ: ಋಷಿ; ನುಡಿ: ಮಾತಾಡು, ವಾಕ್; ಅವನೀಪತಿ: ರಾಜ; ಶಿರೋಮಣಿ: ಶ್ರೇಷ್ಠನಾದ;

ಪದವಿಂಗಡಣೆ:
ಆ+ ಮುಕುಂದನ+ ನೆನಹು +ನಮಗೆ +ನಿ
ರಾಮಯವು +ನೀವಿರಲು +ಚಿಂತಾ
ವೈಮನಸ್ಯದ+ ವೇಧೆ +ಮುರಿದುದು +ಸಾಕ್+ಅದಂತಿರಲಿ
ಈ +ಮಹ+ಉತ್ಪಾತ +ಪ್ರಬಂಧ +ವಿ
ರಾಮ +ಕರ್ಮವ +ಬೆಸಸಿಯೆನೆ+ ನಗು
ತಾ +ಮುನೀಶ್ವರ+ ನುಡಿದನ್+ಅವನೀಪತಿ+ ಶಿರೋಮಣಿಗೆ

ಅಚ್ಚರಿ:
(೧) ವ್ಯಾಸರನ್ನು ಮುನೀಶ್ವರ, ಧರ್ಮಜನನ್ನು ಅವನೀಪತಿ ಶಿರೋಮಣಿ ಎಂದು ಹೇಳಿರುವುದು
(೨) ನ ಕಾರದ ಸಾಲು ಪದ – ನೆನಹು ನಮಗೆ ನಿರಾಮಯವು ನೀವಿರಲು

ಪದ್ಯ ೨೭: ವ್ಯಾಸರು ಧರ್ಮಜನನ್ನು ಹೇಗೆ ಸಂತೈಸಿದರು?

ಅರಸ ಕೇಳೈ ದೈತ್ಯ ದಾನವ
ರುರವಣೆಯ ಯದುನಾಯಕರು ನಿ
ಸ್ತರಿಸಲಿರಿಯರು ಕೃಷ್ಣನಿಲ್ಲದೆ ಭೀತಿ ದ್ವಾರಕಿಗೆ
ಕರುಣ ನಿಮ್ಮಲಿ ಕಿರಿದೆ ನಿಮ್ಮೊಳ
ಗೆರಕವಲ್ಲವೆ ಚಿಂತೆ ಸಾಕಂ
ತಿರಲಿಯೆಂದವನೀಶನನು ಸಂತೈಸಿದನು ಮುನಿಪ (ಸಭಾ ಪರ್ವ, ೧೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ ದ್ವಾರಕೆಯಲ್ಲಿ ಶ್ರೀಕೃಷ್ಣನಿಲ್ಲದಿದ್ದರೆ ಅತಿಶಯರಾದ ದಾನವರು ಆಕ್ರಮಣವನ್ನು ಮಾಡಿದರೆ ಉಳಿದ ಯಾದವ ನಾಯಕರು ಆ ಆಕ್ರಮಣವನ್ನು ಎದುರಿಸಲಾಗದು. ಅವನಿಲ್ಲದೆ ದ್ವಾರಕೆಗೆ ಭೀತಿಯು ತಪ್ಪುವುದಿಲ್ಲ. ಶ್ರೀಕೃಷ್ಣನಿಗೆ ನಿಮ್ಮ ಮೇಲಿರುವ ಕರುಣೆಯು ಸ್ವಲ್ಪವೇ? ಅವನು ನಿಮ್ಮನ್ನು ಪ್ರೀತಿಮಾಡುವುದಿಲ್ಲವೇ, ಆದುದರಿಂದ ನೀನು ಚಿಂತೆ ಬಿಡು ಎಂದು ಸಂತೈಸಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ದಾನವ: ರಾಕ್ಷಸ; ದೈತ್ಯ: ಅತಿಶಯವಾದ; ಉರವಣೆ: ಆತುರ, ಅವಸರ; ನಾಯಕ: ಒಡೆಯ; ನಿಸ್ತರಿಸು: ಸೈರಿಸು; ಅರಿ: ತಿಳಿ; ಭೀತಿ: ಭಯ; ಕರುಣ: ದಯೆ; ಕಿರಿದು: ಕಡಿಮೆ; ಎರಕ: ಪ್ರೀತಿ, ಅನುರಾಗ; ಚಿಂತೆ: ಯೋಚನೆ; ಸಾಕು: ನಿಲ್ಲಿಸು; ಅವನೀಶ; ರಾಜ; ಸಂತೈಸು: ಸಮಾಧಾನ ಪಡಿಸು; ಮುನಿ: ಋಷಿ;

ಪದವಿಂಗಡಣೆ:
ಅರಸ +ಕೇಳೈ +ದೈತ್ಯ +ದಾನವರ್
ಉರವಣೆಯ +ಯದುನಾಯಕರು +ನಿ
ಸ್ತರಿಸಲಿರಿಯರು+ ಕೃಷ್ಣನ್+ಇಲ್ಲದೆ +ಭೀತಿ +ದ್ವಾರಕಿಗೆ
ಕರುಣ+ ನಿಮ್ಮಲಿ+ ಕಿರಿದೆ+ ನಿಮ್ಮೊಳಗ್
ಎರಕವಲ್ಲವೆ +ಚಿಂತೆ +ಸಾಕಂ
ತಿರಲಿ+ಎಂದ್+ಅವನೀಶನನು+ ಸಂತೈಸಿದನು +ಮುನಿಪ

ಅಚ್ಚರಿ:
(೧) ಅರಸ, ಅವನೀಶ – ಸಮನಾರ್ಥಕ ಪದ
(೨) ಕೃಷ್ಣನಿಗೆ ಪಾಂಡವರ ಮೇಲಿರುವ ಪ್ರೀತಿ – ಕರುಣ ನಿಮ್ಮಲಿ ಕಿರಿದೆ ನಿಮ್ಮೊಳಗೆರಕವಲ್ಲವೆ

ಪದ್ಯ ೨೬: ಧರ್ಮಜನ ಅಳಲೇನು?

ಅಸುರರಿಪು ಕೃಪೆಯಿಂದ ನಿರ್ವಾ
ಹಿಸಿದ ನೀ ಯಜ್ಞವನು ಪೂರ್ವದ
ವಸುಮತೀಶರ ಪಾಡಿಗೆಣೆಯೆಂದೆನ್ನ ಪತಿಕರಿಸಿ
ಬಿಸುಟು ಬಿಜಯಂಗೈದ ನೀ ಯು
ಬ್ಬಸವನಾರೊಡನುಸುರುವೆನು ಹಿಂ
ದೆಸೆವ ಗೋಕುಲವಾಯ್ತು ಪುರವಿದು ಕೃಷ್ಣವಿರಹದಲಿ (ಸಭಾ ಪರ್ವ, ೧೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕೃಷ್ಣನು ದ್ವಾರಕೆಗೆ ಪ್ರಯಾಣ ಬಳಸಲು, ಧರ್ಮಜನು ಅತೀವ ದುಃಖತಪ್ತನಾದನು. ನಾನು ಹಿಂದಿನ ಚಕ್ರವರ್ತಿಗಳಿಗೆ ಸರಿಸಮಾನನೆಂದು ಕೃಪೆಮಾಡಿ ಈ ರಾಜಸೂಯ ಯಜ್ಞವನ್ನು ನೆರವೇರಿಸಿಕೊಟ್ಟನು. ಈಗ ನಮ್ಮನ್ನು ಬಿಟ್ಟು ದ್ವಾರಕೆಗೆ ಹೊರಟು ಹೋದನು. ಈ ಸಂಕಟವನ್ನು ಯಾರಿಗೆ ಹೇಳಿಕೊಳ್ಳಲಿ? ಹಿಂದೆ ಶ್ರೀಕೃಷ್ಣನು ಮಧುರಾ ನಗರಿಗೆ ಹೊರಟು ಹೋದಾಗ ಗೋಕುಲಕ್ಕೆ ಬೇಸರವುಂಟಾದಂತೆ ಈ ಇಂದ್ರಪ್ರಸ್ಥ ನಗರವೂ ದುಃಖದಿಂದ ತುಂಬಿಹೋಗಿದೆ ಎಂದು ಧರ್ಮಜನು ತನ್ನ ಅಳಲನ್ನು ತೋಡಿಕೊಂಡನು.

ಅರ್ಥ:
ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ಕೃಪೆ: ದಯೆ; ನಿರ್ವಹಿಸು: ಮಾಡು, ಪೂರೈಸು; ಯಜ್ಞ: ಕ್ರತು, ಅಧ್ವರ; ಪೂರ್ವ: ಹಿಂದೆ; ವಸುಮತೀಶ: ರಾಜ; ವಸುಮತಿ: ಭೂಮಿ; ಪಾಡು: ಸ್ಥಿತಿ, ಅವಸ್ಥೆ; ಎಣೆ:ಸಮ, ಸಾಟಿ; ಪತಿಕರಿಸು: ದಯೆತೋರು, ಅನುಗ್ರಹಿಸು; ಬಿಸುಟು: ಹೊರಹಾಕು; ಬಿಜಯಂಗೈ: ಪ್ರಯಾಣ ಮಾಡುವಂತೆ ಮಾಡು; ಉಬ್ಬಸ: ಕಷ್ಟ; ಉಸುರು:ಮಾತನಾಡು; ಹಿಂದೆ: ಪೂರ್ವ; ಎಸೆವ: ತೋರುವ; ಪುರ: ಊರು; ವಿರಹ: ವಿಯೋಗ;

ಪದವಿಂಗಡಣೆ:
ಅಸುರರಿಪು +ಕೃಪೆಯಿಂದ +ನಿರ್ವಾ
ಹಿಸಿದ +ನೀ +ಯಜ್ಞವನು +ಪೂರ್ವದ
ವಸುಮತೀಶರ+ ಪಾಡಿಗ್+ಎಣೆಯೆಂದ್+ಎನ್ನ +ಪತಿಕರಿಸಿ
ಬಿಸುಟು +ಬಿಜಯಂಗೈದನ್ +ಈ+
ಉಬ್ಬಸವನ್+ಆರೊಡನ್+ಉಸುರುವೆನು +ಹಿಂದ್
ಎಸೆವ +ಗೋಕುಲವಾಯ್ತು +ಪುರವಿದು+ ಕೃಷ್ಣ+ವಿರಹದಲಿ

ಅಚ್ಚರಿ:
(೧) ಕೃಷ್ಣ, ಅಸುರರಿಪು – ಕೃಷ್ಣನಿಗೆ ಬಳಸಿದ ಪದಗಳು, ಪದ್ಯದ ಮೊದಲ ಮತ್ತು ಕೊನೆಯ ಪದ
(೨) ಪೂರ್ವ, ಹಿಂದೆ – ಸಾಮ್ಯಾರ್ಥ ಪದಗಳು