ಪದ್ಯ ೧೨: ಯಾಗದ ನಂತರ ಶ್ರೀಕೃಷ್ಣನು ಪಾಂಡವರನ್ನು ಹೇಗೆ ವಿಚಾರಿಸಿದನು?

ಕರೆಸಿದನು ಹರಿ ಪಾಂಡುಪುತ್ರರ
ನರಸಿ ಸಹಿತೇಕಾಂತಭವನ ದೊ
ಳುರುತರ ಪ್ರೇಮೈಕ ರಸ ಸಂಸಿಕ್ತ ವಚನದಲಿ
ಭರಿತವಾಯಿತೆ ರಾಜಸೂಯಾ
ಧ್ವರ ಸದಾಹುತಿ ತೃಪ್ತ್ಯಮಾಣಾ
ಮರ ಮಹೀಶ್ವರ ವಿಭವ ವಿಳಸಿತ ಪಾಂಡುಪದವೆಂದ (ಸಭಾ ಪರ್ವ, ೧೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಎಲ್ಲಾ ರಾಜರು ತೆರಳಿದ ನಂತರ, ಶ್ರೀಕೃಷ್ಣನು ಪಾಂಡವರನ್ನು ಮತ್ತು ದ್ರೌಪದಿಯನ್ನು ಏಕಾಂತಭವನಕ್ಕೆ ಕರೆಸಿದನು. ಅವರು ಬಂದ ಮೇಲೆ ಪ್ರೀತಿಯಿಂದ ಮಾತುಗಳನ್ನಾಡಿ, ಒಳ್ಳೆಯ ಆಹಿತಿಯಿಂದ ದೇವತೆಗಳಿಗೆ ತೃಪ್ತಿಯನ್ನು ನೀಡಿದ ರಾಜಸೂಯ ಯಾಗವು ಸಂಪನ್ನವಾಯಿತೆ ಎಂದು ಕೇಳುತ್ತಾ, ನಿಮ್ಮ ತಂದೆ ಪಾಂಡುರಾಜನು ಈ ಯಾಗದ ಸಮಾಪ್ತಿಯಿಂದ ವೈಭವದಿಂದ ದೇವೇಂದ್ರನ ಆಸ್ಥಾನವನ್ನು ಸೇರಿದನೇ ಎಂದು ಕೇಳಿದನು.

ಅರ್ಥ:
ಕರೆಸು: ಬರೆಮಾಡು; ಹರಿ: ಕೃಷ್ಣ; ಪುತ್ರ: ಮಗ; ಅರಸಿ: ರಾಣಿ; ಸಹಿತ: ಜೊತೆ; ಏಕಾಂತ: ಒಂಟಿಯಾದ; ಭವನ: ಆಲಯ; ಉರುತರ: ಅತಿಶ್ರೇಷ್ಠ; ಪ್ರೇಮ: ಒಲವು; ರಸ: ಸಾರ; ಸಂಸಕ್ತ: ಆಸಕ್ತ; ವಚನ: ನುಡಿ, ಮಾತು; ಭರಿತ: ತುಂಬಿದ; ಅಧ್ವರ: ಯಾಗ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ತೃಪ್ತ: ಸಂತುಷ್ಟಿ; ಅಮರ: ದೇವತೆ; ಮಹೀಶ್ವರ: ರಾಜ; ವಿಭವ: ಸಿರಿ, ಸಂಪತ್ತು; ವಿಳಸಿತ: ಮನೋಹರವಾದ; ಪದ: ಸ್ಥಾನ;

ಪದವಿಂಗಡಣೆ:
ಕರೆಸಿದನು+ ಹರಿ+ ಪಾಂಡುಪುತ್ರರನ್
ಅರಸಿ +ಸಹಿತ+ಏಕಾಂತ+ಭವನ+ ದೊಳ್
ಉರುತರ+ ಪ್ರೇಮೈಕ +ರಸ+ ಸಂಸಿಕ್ತ +ವಚನದಲಿ
ಭರಿತವಾಯಿತೆ +ರಾಜಸೂಯ
ಅಧ್ವರ +ಸದ್+ಆಹುತಿ+ ತೃಪ್ತ್ಯಮಾಣ
ಅಮರ +ಮಹೀಶ್ವರ+ ವಿಭವ +ವಿಳಸಿತ+ ಪಾಂಡುಪದವೆಂದ

ಅಚ್ಚರಿ:
(೧) ಪ್ರೀತಿಯ ಭಾವ – ಉರುತರ ಪ್ರೇಮೈಕ ರಸ ಸಂಸಿಕ್ತ ವಚನದಲಿ
(೨) ದ್ರೌಪದಿಯನ್ನು ಅರಸಿ ಎಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ