ಪದ್ಯ ೪: ಯಾಗದ ಸಮಯದಲ್ಲಿ ಯಾವ ಧ್ವನಿಯು ಕೇಳಿಬರುತ್ತಿತ್ತು?

ಅರಸ ಚಿತ್ತವಿಸೊಂದು ಲಕ್ಷದ
ಧರಣಿಯಮರರ ಭೋಜನಾಂತಕೆ
ಮೊರೆವುಯೊಂದೇ ಬಾರಿ ಶಂಖಧ್ವನಿ ಛಡಾಲದಲಿ
ಪರುಠವಣೆಯಿದು ರಾಜಸೂಯಾ
ಧ್ವರದ ಮೊದಲವಸಾನ ಪರಿಯಂ
ತರದೊಳೋರಂದದಲಿ ಹಗಲಿರುಳೂದಿತನವರತ (ಸಭಾ ಪರ್ವ, ೧೨ ಸಂಧಿ, ೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ರಾಜಸೂಯಯಾಗದಲ್ಲಿ ಒಂದು ಲಕ್ಷ ಬ್ರಾಹ್ಮಣರ ಸಂತರ್ಪಣೆ ಮುಗಿದರೆ ಒಂದು ಬಾರಿ ಶಂಖವನ್ನು ಊದುತ್ತಿದ್ದರು. ರಾಜಸೂಯಯಾಗ ಆರಂಭವಾಗಿ ಮುಗಿಯುವವರೆಗೂ ಹಗಲು ರಾತ್ರಿ ಎನ್ನದೆ ಶಂಖನಾದವು ಕೇಳಿಬರುತ್ತಿತ್ತು.

ಅರ್ಥ:
ಅರಸ: ರಾಜ; ಚಿತ್ತವಿಸು: ಗಮನವಿಟ್ಟು ಕೇಳು; ಧರಣಿ: ಭೂಮಿ; ಧರಣಿಯಮರ: ಬ್ರಾಹ್ಮಣ; ಭೋಜನ: ಊಟ; ಅಂತ: ಮುಕ್ತಾಯ; ಮೊರೆ: ದುಂಬಿಯ ಧ್ವನಿ, ಝೇಂಕಾರ; ಬಾರಿ: ಸಲ; ಶಂಖ: ಸಮುದ್ರದಲ್ಲಿ ಸಿಗುವ ಒಂದು ಬಗೆಯ ಚಿಪ್ಪು; ಧ್ವನಿ: ರವ, ಕೂಗು; ಛಡಾಳ: ಹೆಚ್ಚಳ, ಆಧಿಕ್ಯ; ಪರುಠವ: ವಿಸ್ತಾರ, ಹರಹು; ಅಧ್ವರ: ಯಾಗ; ಅವಸಾನ: ಕೊನೆ; ಪರಿ: ರೀತಿ; ಅಂತರ: ವ್ಯತ್ಯಾಸ, ಭೇದ; ಓರಂದ: ಒಂದೇ ರೀತಿ, ಸಮಾನ; ಹಗಲು: ಬೆಳಗ್ಗೆ; ಇರುಳು: ರಾತ್ರಿ; ಊದು: ಕೂಗು, ಧ್ವನಿ; ಅನವರತ: ಯಾವಾಗಲು;

ಪದವಿಂಗಡಣೆ:
ಅರಸ +ಚಿತ್ತವಿಸ್+ಒಂದು +ಲಕ್ಷದ
ಧರಣಿ+ಅಮರರ +ಭೋಜನಾಂತಕೆ
ಮೊರೆವು+ಒಂದೇ +ಬಾರಿ +ಶಂಖಧ್ವನಿ+ ಛಡಾಲದಲಿ
ಪರುಠವಣೆಯಿದು+ ರಾಜಸೂಯ
ಅಧ್ವರದ +ಮೊದಲ್+ಅವಸಾನ +ಪರಿಯಂ
ತರದೊಳ್+ಓರಂದದಲಿ +ಹಗಲ್+ಇರುಳ್+ಊದಿತ್+ಅನವರತ

ಅಚ್ಚರಿ:
(೧) ಅಂತ, ಅವಸಾನ – ಕೊನೆ ಎಂದು ಅರ್ಥೈಸುವ ಪದ

ಪದ್ಯ ೩: ಯಜ್ಞವು ಹೇಗೆ ಸಮಾಪ್ತವಾಯಿತು?

ಶ್ರುತಿ ವಿಧಾನದ ವಿಮಳ ಪೂರ್ಣಾ
ಹುತಿಯ ಪಾರಾಯಣದ ನಿಗಮ
ಪ್ರತತಿಗಳ ಪರಿಪೂತ ಪರಿಮಳಮಯ ದಿಶಾವಳಿಯ
ಕ್ರತು ಸಮಾಪ್ತಿಯಲವಭೃತದ ಭೂ
ಪತಿಯ ವಿಮಳಸ್ನಾನ ಪುಣ್ಯೋ
ಚಿತದಲೋಕುಳಿಯಾಡಿ ದಣಿದುದು ಲೋಕ ಸುರನರರ (ಸಭಾ ಪರ್ವ, ೧೨ ಸಂಧಿ, ೩ ಪದ್ಯ)

ತಾತ್ಪರ್ಯ:
ವೇದೋಕ್ತಿಗಳ ವಿಧಾನದಂತೆ ಪೂರ್ಣಾಹುತಿಯನ್ನು ಕೊಟ್ಟರು. ವೇದ ಮಂತ್ರಗಳು, ಹವಿಸ್ಸಿನ ಸುವಾಸನೆಗಳಿಂದ ದಿಕ್ಕುಗಳು ಸುಗಂಧದಿಂದ ತುಂಬಿದವು. ಯಜ್ಞಸಮಾಪ್ತಿಯ ನಂತರ ಅವಭೃತಸ್ನಾನವಾಯಿತು. ಓಕುಳಿಯಾಟದಿಂದ ಭೂಲೋಕ ದೇವಲೋಕಗಳು ತಣಿದವು.

ಅರ್ಥ:
ಶ್ರುತಿ: ವೇದ; ವಿಧಾನ: ರೀತಿ; ವಿಮಳ: ನಿರ್ಮಲ; ಪೂರ್ಣಾಹುತಿ: ಯಜ್ಞವನ್ನು ಪೂರ್ಣಗೊಳಿಸುವ ಆಹುತಿ; ಪಾರಾಯಣ: ಗ್ರಂಥಾದಿಗಳನ್ನು ಮೊದಲಿನಿಂದ ಕಡೆಯವರೆಗೆ ಓದುವುದು; ನಿಗಮ: ವೇದ, ಶ್ರುತಿ; ಪ್ರತತಿ: ಗುಂಪು, ಸಮೂಹ; ಪರಿಪೂತ: ಪವಿತ್ರ, ಶುದ್ಧವಾದ; ಪರಿಮಳ: ಸುಗಂಧದಿಂದ ಕೂಡಿದ ವಸ್ತು; ದಿಶ: ದಿಕ್ಕು; ಆವಳಿ: ಸಾಲು; ಕ್ರತು: ಯಜ್ಞ; ಸಮಾಪ್ತಿ: ಕೊನೆ; ಅವಭೃತ:ಯಾಗದ ಅನಂತರ ಮಾಡುವ ಮಂಗಳಸ್ನಾನ; ಭೂಪತಿ: ರಾಜ; ವಿಮಳ: ನಿರ್ಮಲ, ಶುಭ್ರ; ಸ್ನಾನ: ಅಭ್ಯಂಜನ; ಪುಣ್ಯ: ಸದಾಚಾರ, ಪರೋಪಕಾರ; ಓಕುಳಿ: ಬಣ್ಣದ ನೀರು; ದಣಿ: ಆಯಾಸ; ಲೋಕ: ಜಗತ್ತು; ಸುರ: ದೇವತೆ; ನರ: ಮಾನವ;

ಪದವಿಂಗಡಣೆ:
ಶ್ರುತಿ+ ವಿಧಾನದ +ವಿಮಳ +ಪೂರ್ಣಾ
ಹುತಿಯ +ಪಾರಾಯಣದ +ನಿಗಮ
ಪ್ರತತಿಗಳ+ ಪರಿಪೂತ+ ಪರಿಮಳಮಯ +ದಿಶಾವಳಿಯ
ಕ್ರತು+ ಸಮಾಪ್ತಿಯಲ್+ಅವಭೃತದ +ಭೂ
ಪತಿಯ +ವಿಮಳಸ್ನಾನ +ಪುಣ್ಯೋ
ಚಿತದಲ್+ಓಕುಳಿಯಾಡಿ +ದಣಿದುದು +ಲೋಕ +ಸುರ+ನರರ

ಅಚ್ಚರಿ:
(೧) ಪ ಕಾರದ ತ್ರಿವಳಿ ಪದ – ಪ್ರತತಿಗಳ ಪರಿಪೂತ ಪರಿಮಳಮಯ
(೨) ಶ್ರುತಿ, ನಿಗಮ – ಸಮನಾರ್ಥಕ ಪದ

ಪದ್ಯ ೨: ಯಜ್ಞದ ಅಗ್ನಿಯು ಹೇಗೆ ಉರಿಯಲಾರಂಭಿಸಿತು?

ತಳಿತು ತಿವಿದಾಡಿದವು ಮುರಿದೊಡ
ಗಲಸಿದವು ಹೊಗೆ ಸುತ್ತಿ ಸಿಮಿ ಸಿಮಿ
ಮೊಳಗಿ ಹೊದರೆದ್ದವು ಸಗಾಢದಲುಬ್ಬಿ ಭುಗುಭುಗಿಸಿ
ಸುಳಿಸುಳಿದು ಭೋರೆಂದು ಬಿಗಿದ
ವ್ವಳಿಸಿದವು ಘೃತ ಧಾರೆಗಳಿಗು
ಚ್ಚಳಿಸಿದವು ಹರಹಿನಲಿ ನಾಲಗೆ ಹವ್ಯವಾಹನನ (ಸಭಾ ಪರ್ವ, ೧೨ ಸಂಧಿ, ೨ ಪದ್ಯ)

ತಾತ್ಪರ್ಯ:
ಹೋಮಕುಂಡದಲ್ಲಿ ಯಜ್ಞೇಶ್ವರನ ಜ್ವಾಲೆಗಳು ಒಂದನ್ನೊಂದು ಕೂಡಿದವು. ಅಗ್ನಿ ಜ್ವಾಲೆಗಳು ತಿರುಗುತ್ತಾ ಬೇರೆ ಬೇರೆ ಚಾಚಿದವು. ಹವಿಸ್ಸನ್ನು ಪಚನಮಾಡಲು ಸಿಮಿಸಿಮಿಯೆಂದು ಸದ್ದು ಮಾಡಿ ಮೇಲೆದ್ದವು. ಭುಗಿಭುಗಿಸಿ ಭೋರೆಂದು ಸದ್ದು ಮಾಡಿದವು. ತುಪ್ಪದ ಧಾರೆಗಳು ಅಗ್ನಿಗೆ ನೀಡಿದಾಗ ಅವು ತುಪ್ಪವನ್ನು ಸ್ವೀಕರಿಸು ಅಗ್ನಿಯು ಮೇಲಕ್ಕೇಳಿತು.

ಅರ್ಥ:
ತಳಿತು: ಚಿಗುರು; ತಿವಿ: ಗುದ್ದು; ಮುರಿ: ಸೀಳು; ಅಗಲ: ವಿಸ್ತಾರ; ಹೊಗೆ: ಧೂಮ; ಸುತ್ತು: ತಿರುಗು; ಸಿಮಿ: ಬೆಂಕಿಯ ಸದ್ದನ್ನು ವರ್ಣಿಸುವ ಪದ; ಮೊಳಗು: ಧ್ವನಿ, ಸದ್ದು; ಹೊದರು: ತೊಡಕು, ತೊಂದರೆ; ಎದ್ದು: ಮೇಲೇಳು; ಸಗಾಢ: ಜೋರು, ರಭಸ; ಉಬ್ಬು: ಹೆಚ್ಚಾಗು; ಭುಗುಭುಗು: ಬೆಂಕಿಯು ಉರಿಯುವ ಶಬ್ದವನ್ನು ವಿವರಿಸುವ ಪದ; ಸುಳಿ: ಬೀಸು, ತೀಡು, ಆವರಿಸು; ಭೋರ್: ಅನುಕರಣ ಪದ; ಬಿಗಿ: ಕಟ್ಟು; ಅವ್ವಳಿಸು: ಆರ್ಭಟಿಸು; ಹರಹು: ವಿಸ್ತಾರ, ವೈಶಾಲ್ಯ; ನಾಲಗೆ: ಜಿಹ್ವೆ; ಹವ್ಯವಾಹನ: ಅಗ್ನಿ; ಉಚ್ಚಳಿಸು: ಮೇಲಕ್ಕೆ ಹಾರು;

ಪದವಿಂಗಡಣೆ:
ತಳಿತು +ತಿವಿದಾಡಿದವು +ಮುರಿದೊಡ್
ಅಗಲಸಿದವು +ಹೊಗೆ +ಸುತ್ತಿ +ಸಿಮಿ +ಸಿಮಿ
ಮೊಳಗಿ+ ಹೊದರ್+ಎದ್ದವು +ಸಗಾಢದಲ್+ಉಬ್ಬಿ +ಭುಗುಭುಗಿಸಿ
ಸುಳಿಸುಳಿದು+ ಭೋರೆಂದು +ಬಿಗಿದ್
ಅವ್ವಳಿಸಿದವು +ಘೃತ +ಧಾರೆಗಳಿಗ್
ಉಚ್ಚಳಿಸಿದವು +ಹರಹಿನಲಿ+ ನಾಲಗೆ +ಹವ್ಯವಾಹನನ

ಅಚ್ಚರಿ:
(೧) ಜೋಡಿ ಪದಗಳು – ಸಿಮಿಸಿಮಿ, ಭುಗುಭುಗಿಸಿ, ಸುಳಿಸುಳಿ
(೨) ಬೆಂಕಿಯ ವರ್ಣನೆ – ತಳಿತು ತಿವಿದಾಡಿದವು ಮುರಿದೊಡ
ಗಲಸಿದವು ಹೊಗೆ ಸುತ್ತಿ ಸಿಮಿ ಸಿಮಿ ಮೊಳಗಿ ಹೊದರೆದ್ದವು ಸಗಾಢದಲುಬ್ಬಿ ಭುಗುಭುಗಿಸಿ

ನುಡಿಮುತ್ತುಗಳು: ಸಭಾ ಪರ್ವ, ೧೨ ಸಂಧಿ

  • ತಳಿತು ತಿವಿದಾಡಿದವು ಮುರಿದೊಡ ಗಲಸಿದವು ಹೊಗೆ ಸುತ್ತಿ ಸಿಮಿ ಸಿಮಿ ಮೊಳಗಿ ಹೊದರೆದ್ದವು ಸಗಾಢದಲುಬ್ಬಿ ಭುಗುಭುಗಿಸಿ – ಪದ್ಯ ೨
  • ಏಸು ಭಕ್ಷ್ಯೋದನದ ಪರ್ವತ ರಾಶಿ ದಧಿ ಘೃತ ದುಗ್ಧ ಮಧು ವಾರಾಸಿಯೊಡ್ಡಣೆ ಮೆರೆದುದಿಂದ್ರ ಪ್ರಸ್ಥ ನಗರಿಯಲಿ – ಪದ್ಯ ೫
  • ಶಿಶುವೊರಲಿದರೆ ಕಂಬದಲಿ ತೋರಿಸಿದ ಕರುಣಾ ಜಲಧಿಯೇ ಪಾಲಿಸಿದೆಲಾ ಪಾಂಡವರನೆಂದಳು ಹೊರಳಿ ಚರಣದಲಿ – ಪದ್ಯ ೧೫
  • ಪರಿತೋಷಾಶ್ರುಪೂರ್ಣ ವಿಶಾಲ ಲೋಚನ ನೋಡಿದನು ತನ್ನವರನೊಲವಿನಲಿ – ಪದ್ಯ ೧೬
  • ವಿಷಾದ ವಿಡಂಬ ಹರುಷಂಗಳಲಿ ನೀನಿಹುದೇಕ ಚಿತ್ತದಲಿ – ಪದ್ಯ ೧೭
  • ಪತಿವ್ರತೆಯೆಂಬರಿಗೆ ಗುರುನೀ – ಪದ್ಯ ೧೭
  • ಸೋತು ನಡೆವುದು ಹಿರಿಯರಲಿ ಸಂಪ್ರೀತಿಯನು ಸುಜನರಲಿ ನಿರ್ಮಳ ನೀತಿಯನು ಪರಿವಾರ ಪುರಜನ ನಾಡು ಬೀಡಿನಲಿ – ಪದ್ಯ ೧೯
  • ಈಸು ಮಹಿಮೆಯ ಮರೆಸಿ ಲೋಕವಿಳಾಸ ಚೇಷ್ಟೆಯನನುಸರಿಸಿ ನರವೇಷವನು ನಟಿಸಿದನು ಹೂಳಿದು ನಿಜೋನ್ನತಿಯ – ಪದ್ಯ ೨೩
  • ಇದು ಸಮಸ್ತ ಕ್ಷತ್ರ ಕುಲ ವಾರಿದ ಘಟೋಚ್ಚಾಟನ ಸಮೀರಣ – ಪದ್ಯ ೨೯
  • ಅಜ್ಞರರಿಗಳು ನಿಪುಣರಿಗೆ ವರಯಾಜ್ಞಿಕರಿಗಾಚಾರಹೀನರಭಿಜ್ಞಮತವಿದು ತಪ್ಪದೆಂದನು ಮುನಿ ನೃಪಾಲಂಗೆ – ಪದ್ಯ ೩೨
  • ಬೆದರದಿರು ವಿಗಡಿಸುವ ವಿಷಯಾಸ್ಪದದೊಳೆಂದು; ಸರ್ವಾಂಗದಲಿ ನಿನ್ನಯ ಮರೆಯದಿರು – ಪದ್ಯ ೩
  • ಸುಯೋಧನನು ಹೃತ್ತಾಮಸದ ಚಾವಡಿಯ ಝಾಡಿಯ ರೋಷ ಪಾವಕದ ಧೂಮಮುಖನೈತಂದು – ಪದ್ಯ ೩