ಪದ್ಯ ೫೦: ಭೀಷ್ಮರು ಶಿಶುಪಾಲನಿಗೆ ಹೇಗೆ ಉತ್ತರಿಸಿದರು?

ಕುಮತಿ ಕೇಳ್ ಬೊಬ್ಬುಲಿಯ ಬನದಲಿ
ರಮಿಸುವುದೆ ಕಳಹಂಸ ಮಾಯಾ
ಭ್ರಮಿತರಲಿ ಯಾಚಿಸುವನೇ ವರಯೋಗಿ ನಿಜಪದವ
ಸಮರ ಪಟುಭಟ ದರ್ಪಪಿತ್ತ
ಭ್ರಮ ವಿಸಂಸ್ಥುಲ ಚಪಳ ಚಿತ್ತ
ಸ್ಥಿಮಿತ ಭೂಪರ ಬಗೆವೆನೇ ತಾನೆಂದನಾ ಭೀಷ್ಮ (ಸಭಾ ಪರ್ವ, ೧೧ ಸಂಧಿ, ೫೦ ಪದ್ಯ)

ತಾತ್ಪರ್ಯ:
ಶಿಶುಪಾಲನ ಮಾತುಗಳನ್ನು ಕೇಳಿದ ಭೀಷ್ಮರು, ಎಲವೋ ಶಿಶುಪಾಲ, ದುರ್ಬುದ್ಧಿಯುಳ್ಳವನೇ, ಹೆಬ್ಬುಲಿಯ ವನದಲ್ಲಿ ಹಂಸ ಪಕ್ಷಿಗಳು ಆನಂದವಾಗಿ ವಿಹರಿಸಬಹುದೇ? ಮಾಯೆಯಿಂದ ಭ್ರಾಂತಿಗೊಳಗಾದವರ ಬಳಿ ಯೋಗಿಯು ಜೀವನ್ಮುಕ್ತಿಯನ್ನು ಬೇಡುವನೇ? ಯುದ್ಧದಲ್ಲಿ ವೀರರೆಂಬ ದರ್ಪದ ಆವೇಶವು ತಲೆಗೇರಿ, ಚಂಚಲವಾದ ಬುದ್ಧಿಯುಳ್ಳ ಚಪಲಚಿತ್ತರಾದ ರಾಜರನ್ನು ನಾನು ಲೆಕ್ಕಿಸುವೆನೇ? ಎಂದು ಭೀಷ್ಮರು ಕಟುವಾಗಿ ಉತ್ತರಿಸಿದರು.

ಅರ್ಥ:
ಕುಮತಿ: ದುಷ್ಟಬುದ್ಧಿ; ಬೊಬ್ಬುಲಿ: ಹೆಬ್ಬುಲಿ, ವ್ಯಾಘ್ರ; ಬನ: ಕಾಡು; ರಮಿಸು: ಆನಂದಿಸು; ಹಂಸ: ಒಂದು ಬಿಳಿಯ ಬಣ್ಣದ ಪಕ್ಷಿ; ಮಾಯ: ಗಾರುಡಿ, ಇಂದ್ರಜಾಲ; ಭ್ರಮಿತ: ಭ್ರಾಂತಿ; ಯಾಚಿಸು: ಕೇಳು, ಬೇಡು; ವರ: ಶ್ರೇಷ್ಠ; ಯೋಗಿ: ಮುನಿ; ಪದ: ಮೋಕ್ಷ; ನಿಜ: ದಿಟ; ಸಮರ: ಯುದ್ಧ; ಪಟುಭಟ: ಪರಾಕ್ರಮಿ; ದರ್ಪ: ಅಹಂಕಾರ; ಪಿತ್ತ: ಕೋಪ, ಸಿಟ್ಟು; ಭ್ರಮ: ಭ್ರಾಂತು; ವಿಸಂಸ್ಥುಲ: ಅತಿ ಚಂಚಲವಾದ; ಚಪಳ: ಚಂಚಲ ಸ್ವಭಾವದವನು; ಚಿತ್ತ: ಬುದ್ಧಿ; ಸ್ಥಿಮಿತ: ಸ್ಥಿರ; ಭೂಪ: ರಾಜ; ಬಗೆ:ಆಲೋಚನೆ;

ಪದವಿಂಗಡಣೆ:
ಕುಮತಿ +ಕೇಳ್ +ಬೊಬ್ಬುಲಿಯ +ಬನದಲಿ
ರಮಿಸುವುದೆ +ಕಳಹಂಸ +ಮಾಯಾ
ಭ್ರಮಿತರಲಿ+ ಯಾಚಿಸುವನೇ +ವರಯೋಗಿ +ನಿಜಪದವ
ಸಮರ +ಪಟುಭಟ+ ದರ್ಪ+ಪಿತ್ತ
ಭ್ರಮ +ವಿಸಂಸ್ಥುಲ+ ಚಪಳ +ಚಿತ್ತ
ಸ್ಥಿಮಿತ +ಭೂಪರ+ ಬಗೆವೆನೇ +ತಾನ್+ಎಂದನಾ +ಭೀಷ್ಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೊಬ್ಬುಲಿಯ ಬನದಲಿ ರಮಿಸುವುದೆ ಕಳಹಂಸ, ಮಾಯಾ ಭ್ರಮಿತರಲಿ ಯಾಚಿಸುವನೇ ವರಯೋಗಿ ನಿಜಪದವ
(೨) ಶಿಶುಪಾಲನನ್ನು ಬಯ್ಯುವ ಪರಿ – ಕುಮತಿ

ನಿಮ್ಮ ಟಿಪ್ಪಣಿ ಬರೆಯಿರಿ