ಪದ್ಯ ೨೧: ಕೃಷ್ಣನು ಜರಾಸಂಧನಿಗೆ ಹೇಗೆ ಮೋಸ ಮಾಡಿದನೆಂದು ಶಿಶುಪಾಲ ಹೇಳಿದ?

ಕಪಟದಲಿ ಭೀಮಾರ್ಜುನರು ಸಹಿ
ತುಪಚಿತ ದ್ವಿಜವೇಷದಲಿ ನಿ
ಷ್ಕಪಟ ಮಗಧನ ಮನೆಯನದ್ವಾರದಲಿ ಹೊಕ್ಕನಲಾ
ಕೃಪಣರಿವದಿರು ವಿಪ್ರವೇಷದ
ಲಪಸದರು ಕಾದಿದರು ಭೀಷ್ಮಗೆ
ಜಪವಲಾ ಕಂಸಾರಿ ಮಾಡಿದ ಕಷ್ಟ ಕೃತಿಯೆಂದ (ಸಭಾ ಪರ್ವ, ೧೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಈ ಕೃಷ್ಣನು ಭೀಮಾರ್ಜುನರೊಡನೆ ಪೂಜ್ಯ ಬ್ರಾಹ್ಮಣ ವೇಷ ಹಾಕಿಕೊಂಡು ಜರಾಸಂಧನ ಮನೆಯನ್ನು ಹಿಂಬಾಗಿಲಿನಿಂದ ಹೊಕ್ಕನು. ಈ ಮೂವರು ದುಷ್ಟರು ಯುದ್ಧಮಾಡಿದರು. ಕೃಷ್ಣನು ಮಾಡಿದ ಈ ದುಷ್ಕೃತ್ಯಗಳೆಲ್ಲಾ ಭೀಷ್ಮನಿಗೆ ಮಹಾ ಸತ್ಕೃತಿಗಳು, ಅವೇ ಇವನಿಗೆ ಜಪಮಾಲೆ ಎಂದು ಭೀಷ್ಮರನ್ನು ಹಂಗಿಸಿದನು.

ಅರ್ಥ:
ಕಪಟ: ಮೋಸ; ಉಪಚಿತ: ಗೌರವಿಸಲ್ಪಟ್ಟ; ದ್ವಿಜ: ಬ್ರಾಹ್ಮಣ; ವೇಷ: ರೂಪ; ನಿಷ್ಕಪಟ: ಮೋಸವರಿಯದ; ಮಗಧ: ಜರಾಸಂಧ; ಮನೆ: ಆಲಯ; ದ್ವಾರ: ಕದ, ಬಾಗಿಲು; ಹೊಕ್ಕು: ಸೇರಿ; ಕೃಪಣ: ದೀನ, ಜಿಪುಣ; ಅಪಸದ: ನೀಚ, ಕೀಳು; ಕಾದು: ಹೋರಾಡು; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ಕಂಸಾರಿ: ಕೃಷ್ಣ; ಕಷ್ಟ: ತೊಂದರೆ; ಕೃತಿ: ಕೆಲಸ, ಕಾರ್ಯ;

ಪದವಿಂಗಡಣೆ:
ಕಪಟದಲಿ +ಭೀಮಾರ್ಜುನರು +ಸಹಿತ್
ಉಪಚಿತ+ ದ್ವಿಜವೇಷದಲಿ +ನಿ
ಷ್ಕಪಟ +ಮಗಧನ+ ಮನೆಯನ್+ಅದ್ವಾರದಲಿ+ ಹೊಕ್ಕನಲಾ
ಕೃಪಣರ್+ಇವದಿರು +ವಿಪ್ರ+ವೇಷದಲ್
ಅಪಸದರು +ಕಾದಿದರು+ ಭೀಷ್ಮಗೆ
ಜಪವಲಾ +ಕಂಸಾರಿ +ಮಾಡಿದ +ಕಷ್ಟ +ಕೃತಿಯೆಂದ

ಅಚ್ಚರಿ:
(೧) ಬಯ್ಯುವ ಪರಿ – ಕೃಪಣ, ಅಪಸದ
(೨) ಹಿಂಬಾಗಿಲೆಂದು ಹೇಳಲು – ಅದ್ವಾರ ಪದದ ಬಳಕೆ
(೩) ಜರಾಸಂಧನ ಪರವಾಗಿ ನಿಲ್ಲುವ ಪರಿ – ನಿಷ್ಕಪಟ ಮಗಧ
(೪) ಜರಾಸಂಧನ ವಧೆಯ ಬಗ್ಗೆ ಹೇಳುವ ಪರಿ – ಕಷ್ಟ ಕೃತಿ
(೫) ವಿಪ್ರ, ದ್ವಿಜ – ಸಮನಾರ್ಥಕ ಪದ

ಪದ್ಯ ೨೦: ಶಿಶುಪಾಲನು ಭೀಷ್ಮನಿಗೆ ಕೃಷ್ಣನ ಗುಣಗಾನವನ್ನು ನಿಲ್ಲಿಸಲು ಏಕೆ ಹೇಳಿದ?

ಓಡಿ ಕೊಲಿಸಿದ ಕಾಲಯವನನ
ಮೂಡಿದವೆ ಹುಲುಕಲುಗಳಕಟಾ
ವೋಡುಕುಳಿ ಹೋದಲ್ಲಿ ಮಗಧನ ರಾಜಕಾರ್ಯದಲಿ
ಆಡಲರಿಯೆ ವಿಜಾತಿ ರತ್ನದ
ಖೋಡಿಗಳ ಹಳಿವಾತನೇ ಹರಿ
ತೋಡಿ ಬಡಿಸುವೆ ಕಿವಿಗರೋಚಕವಾಯ್ತು ತೆಗೆಯೆಂದ (ಸಭಾ ಪರ್ವ, ೧೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಈ ಕೃಷ್ಣನು ಓಡಿಹೋಗಿ ಕಾಲಯವನನನ್ನು ಮುಚುಕುಂದನಿಂದ ಕೊಲ್ಲಿಸಿದನಲ್ಲವೇ? ಜರಾಸಂಧನಿಗೆ ಹೆದರಿ ಓಡಿಹೋದ ದಾರಿಯಲ್ಲಿ ಇನ್ನಾದರೂ ಹುಲ್ಲು ಕಲ್ಲು ಇವೆಯೋ, ಅಥವ ನಿನ್ನ ಕಾಲುಸೋಕಿ ದಾರಿಯೇ ಹಾಳಾಯಿತೋ? ಅದನ್ನು ಹೇಳುವುದಿಲ್ಲ. ಬೇರೆ ಜಾತಿಯ ರತ್ನದ ದೋಷಗಳನ್ನು ಹಳಿಯುವ ಭೀಷ್ಮನೇ ಶ್ರೀಕೃಷ್ಣನ ಗುಣಗಳನ್ನು ತೋಡಿ ತೋಡಿ ಬಡಿಸುತ್ತೀಯೆ? ಕಿವಿಗಳು ಇದನ್ನು ಕೇಳಿ ಕಿವುಡಾಗಿವೆ, ಸಾಕು ನಿಲ್ಲಿಸು ಎಂದು ಶಿಶುಪಾಲನು ಜರೆದನು.

ಅರ್ಥ:
ಓಡು: ಪಲಾಯನ; ಕೊಲಿಸು: ಸಾಯಿಸು; ಮೂಡು: ಉದಯಿಸು, ತುಂಬು; ಹುಲುಕಲು: ಹುಲ್ಲು ಕಲ್ಲು; ಅಕಟ: ಅಯ್ಯೋ; ಓಡುಕುಳಿ: ಅಂಜುಪುರಕ; ಮಗಧ: ಜರಾಸಂಧ; ರಾಜಕಾರ್ಯ: ರಾಜಕಾರಣ; ಅರಿ: ತಿಳಿ; ವಿಜಾತಿ: ಬೇರೆ ಜಾತಿಯಿಂದ ಹುಟ್ಟಿದುದು; ರತ್ನ; ಬೆಲೆಬಾಳುವ ಮಣಿ, ಮಾಣಿಕ್ಯ; ಖೋಡಿ: ದುರುಳತನ; ಹಳಿ: ದೂಷಿಸು, ನಿಂದಿಸು; ಹರಿ: ವಿಷ್ಣು; ತೋಡು: ತೆಗೆ, ಹೊರಕ್ಕೆ ಹೋಗು, ವ್ಯಕ್ತಪಡಿಸು; ಬಡಿಸು: ಉಣಿಸು, ಇಡು; ಕಿವಿ: ಕರ್ಣ; ರೋಚಕ: ರೋಮಾಂಚನ; ತೆಗೆ: ಅತ್ತಸರಿ, ಬಿಡು; ಆಡಲು: ಹೇಳಲು;

ಪದವಿಂಗಡಣೆ:
ಓಡಿ+ ಕೊಲಿಸಿದ +ಕಾಲಯವನನ
ಮೂಡಿದವೆ +ಹುಲುಕಲುಗಳ್+ಅಕಟಾ
ವೋಡುಕುಳಿ+ ಹೋದಲ್ಲಿ +ಮಗಧನ +ರಾಜಕಾರ್ಯದಲಿ
ಆಡಲ್+ಅರಿಯೆ +ವಿಜಾತಿ +ರತ್ನದ
ಖೋಡಿಗಳ +ಹಳಿವಾತನೇ +ಹರಿ
ತೋಡಿ +ಬಡಿಸುವೆ +ಕಿವಿಗ್+ಅರೋಚಕವಾಯ್ತು +ತೆಗೆಯೆಂದ

ಅಚ್ಚರಿ:
(೧) ಕೃಷ್ಣನ ಗುಣಗಾನ ಸಾಕೆನ್ನುವ ಪರಿ – ಕಿವಿಗರೋಚಕವಾಯ್ತು ತೆಗೆಯೆಂದ

ಪದ್ಯ ೧೯: ಕೃಷ್ಣನ ಯಾವ ಪರಾಕ್ರಮವನ್ನು ವರ್ಣಿಸಲಿಲ್ಲ ಎಂದು ಶಿಶುಪಾಲ ಹೇಳಿದ?

ಆದರಿಸಿ ಬಣ್ಣಿಸಿದೆ ನಾಚದೆ
ಯಾದವನ ಕೌಳಿಕ ಪರಾಕ್ರಮ
ವಾದಿಯಾದ ಸಮಸ್ತಗುಣ ವಿಸ್ತಾರ ವೈಭವವ
ಆದರಾ ಗೋವಳರ ಹೆಂಡಿರ
ಹಾದರದ ಹೆಕ್ಕಳವ ಬಣ್ಣಿಸ
ದಾದೆ ನಿನಗೇಕಕಟ ನಾಚಿಕೆಯೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಎಲೈ ಭೀಷ್ಮ ನೀನು ಈ ಯಾದವನ ಸಮಸ್ತ ಪರಾಕ್ರಮದ ಮೋಸದ ಕೃತ್ಯಗಳನ್ನೆಲ್ಲಾ ವಿವರವಾಗಿ ವೈಭವಪೂರ್ಣವಾಗಿ ಹೇಳಿದ, ಆದರೆ ಗೋವಳರ ಹೆಂಡಿರ ಜೊತೆಗೆ ಇವನು ಮಾಡಿದ ಹಾದರವನ್ನು ಏಕೆ ವಿವರಿಸಲಿಲ್ಲ, ಅಯ್ಯೋ ನೀನಗೇಕೆ ನಾಚಿಕೆ ಎಂದು ಶಿಶುಪಾಲನು ಮೂದಲಿಸಿದನು.

ಅರ್ಥ:
ಆದರಿಸು: ಗೌರವಿಸು; ಬಣ್ಣಿಸು: ವರ್ಣಿಸು; ನಾಚು: ನಾಚಿಕೆಪಡು, ಸಿಗ್ಗಾಗು; ಕೌಳಿಕ:ಕಟುಕ, ಕಸಾಯಿಗಾರ, ಮೋಸ; ಪರಾಕ್ರಮ: ಶೌರ್ಯ; ವಾದಿ: ತರ್ಕಮಾಡುವವನು; ಸಮಸ್ತ: ಎಲ್ಲಾ; ಗುಣ: ನಡತೆ, ಸ್ವಭಾವ; ವಿಸ್ತಾರ: ವೈಶಾಲ್ಯ; ವೈಭವ: ಶಕ್ತಿ, ಸಾಮರ್ಥ್ಯ, ಆಡಂಬರ; ಗೋವಳ: ಗೋಪಾಲಕ; ಹೆಂಡಿರ: ಭಾರ್ಯ; ಹಾದರ: ವ್ಯಭಿಚಾರ, ಜಾರತನ; ಹೆಕ್ಕಳ: ಹೆಚ್ಚಳ, ಅತಿಶಯ; ಅಕಟ: ಅಯ್ಯೋ; ನಾಚಿಕೆ: ಲಜ್ಜೆ, ಸಿಗ್ಗು; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ಆದರಿಸಿ +ಬಣ್ಣಿಸಿದೆ +ನಾಚದೆ
ಯಾದವನ +ಕೌಳಿಕ +ಪರಾಕ್ರಮವ್
ಆದಿಯಾದ +ಸಮಸ್ತಗುಣ +ವಿಸ್ತಾರ +ವೈಭವವ
ಆದರ್+ಆ+ ಗೋವಳರ +ಹೆಂಡಿರ
ಹಾದರದ +ಹೆಕ್ಕಳವ +ಬಣ್ಣಿಸ
ದಾದೆ+ ನಿನಗೇಕ್+ಅಕಟ +ನಾಚಿಕೆ+ಎಂದನಾ +ಚೈದ್ಯ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೆಂಡಿರ ಹಾದರದ ಹೆಕ್ಕಳವ
(೨) ಬಣ್ಣಿಸಿದೆ, ಬಣ್ಣಿಸದಾದೆ – ಪದಗಳ ಬಳಕೆ
(೩) ಆದರಾ, ಹಾದರ – ಪದಗಳ ಬಳಕೆ

ಪದ್ಯ ೧೮: ಕಂಸನನ್ನು ಯಾರು ಕೊಂದರು?

ಆದರಿವನನು ತುತಿಸುವೊಡೆ ಮೇ
ಲಾದ ಕಷ್ಟವನೇನ ಹೇಳುವೆ
ನೀ ದುರಾತ್ಮಕ ಸಾಕಿದೊಡೆಯನನಿರಿದ ಸಬಳವಲೇ
ಸೋದರಿಯಲಾ ಕೃಷ್ಣನವ್ವೆ ವಿ
ವಾದವೇ ಸಾಕಿದನಲಾ ಕೈ
ಗಾದನೇ ಕಂಸಂಗೆ ಮುನಿವುದಿದಾವ ಘನವೆಂದ (ಸಭಾ ಪರ್ವ, ೧೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ಈ ಕೃಷ್ಣನನ್ನು ಹೊಗಳೋಣವೆಂದರೆ ಆಗ ಬರುವ ತೊಂದರೆಗಳನ್ನು ಏನೆಂದು ಹೇಳಲಿ, ಈ ದುಷ್ಟನು ಇವನನ್ನು ಸಾಕಿದ ಒಡೆಯನನ್ನು ಕೊಂದ ಈಟಿಯಂತಹವನು. ಕಂಸನು ಕೃಷ್ಣನ ಅಮ್ಮ ದೇವಕಿಯ ಅಣ್ಣನಲ್ಲವೇ? ಅವಳನ್ನು ಸಾಕಿದವ, ತಾಯಿಯನ್ನು ಸಾಕಿದವನೆಂದಾದರೂ ಸೋದರಮಾವ ಕಂಸನನ್ನು ಇವನು ಉಳಿಸಿದನೇ?

ಅರ್ಥ:
ತುತಿ: ಹೊಗಳಿಕೆ, ಸ್ತುತಿ; ಮೇಲಾದ: ಹಿಂದೆ ಹೇಳಿದ; ಕಷ್ಟ: ಬೇನೆ, ನೋವು, ತೊಂದರೆ; ಹೇಳು: ತಿಳಿಸು; ದುರಾತ್ಮ: ಕೆಟ್ಟವ; ಸಾಕು: ಸಲಹು; ಒಡೆಯ: ದೊರೆ; ಅರಿ: ತಿವಿ, ಸೀಳು; ಸಬಳ:ಈಟಿ, ಭರ್ಜಿ; ಸೋದರಿ: ತಂಗಿ; ಅವ್ವೆ: ತಾಯಿ; ವಿವಾದ: ವಾಗ್ದಾನ, ಚರ್ಚೆ, ಕಲಹ; ಸಾಕು: ಸಲಹು; ಮುನಿ: ಕೋಪ; ಘನ: ಶ್ರೇಷ್ಠ; ಕೈಗಾಯ್: ರಕ್ಷಿಸು;

ಪದವಿಂಗಡಣೆ:
ಆದರ್+ಇವನನು+ ತುತಿಸುವೊಡೆ +ಮೇ
ಲಾದ +ಕಷ್ಟವನ್+ಏನ +ಹೇಳುವೆನ್
ಈ +ದುರಾತ್ಮಕ +ಸಾಕಿದ್+ಒಡೆಯನನ್+ಇರಿದ+ ಸಬಳವಲೇ
ಸೋದರಿಯಲಾ+ ಕೃಷ್ಣನ್+ಅವ್ವೆ+ ವಿ
ವಾದವೇ +ಸಾಕಿದನಲಾ+ ಕೈ
ಗಾದನೇ +ಕಂಸಂಗೆ +ಮುನಿವುದ್+ಇದಾವ +ಘನವೆಂದ

ಅಚ್ಚರಿ:
(೧) ಕೃಷ್ಣನನ್ನು ಈಟಿಗೆ ಹೋಲಿಸುವ ಪರಿ – ದುರಾತ್ಮಕ ಸಾಕಿದೊಡೆಯನನಿರಿದ ಸಬಳವಲೇ

ಪದ್ಯ ೧೭: ಕೃಷ್ಣನು ಹೇಗೆ ಕೊಲ್ಲುವವನೆಂದು ಶಿಶುಪಾಲನು ಹಂಗಿಸಿದನು?

ಅಸಗನನು ಕೆಡೆತಿವಿದು ಕಂಸನ
ವಸನವೆಲ್ಲವ ಸೆಳೆದಗಡ ಮಾ
ಣಿಸಿದನೈ ದಿಟಘಟ್ಟಿವಾಳ್ತಿಯ ಮೈಯಮೂಹೊರಡ
ಮಸಗಿ ಬೀಸುವ ಕಂಸನಾನೆಯ
ನಸುಬಡಿದ ಗಡ ಮಲ್ಲರನು ಮ
ರ್ದಿಸಿದನೇ ಡೊಳ್ಳಾಸದಲಿ ಡಾವರಿಗನಹನೆಂದ (ಸಭಾ ಪರ್ವ, ೧೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಅಗಸನು ಬಟ್ಟೆಗಳನ್ನು ಒಗೆಯುವ ರೀತಿ, ಈತನು ಕಂಸನ ಬಟ್ಟೆಗಳನ್ನೆಲ್ಲಾ ಸೆಳೆದುಕೊಂಡನೋ? ಮೂರುಡೊಂಕಿದ್ದ ತ್ರಿಕುಬ್ಜೆಯ ಗೂನನ್ನು ಸರಿಪಡಿಸಿದನೋ? ಕಂಸನ ಆನೆಯನ್ನು ಕೊಂದನೇ? ಮೋಸದಿಂದ ತಿವಿದು ಕೊಲ್ಲುವವನಲ್ಲವೇ ಈತ ಎಂದು ಕೃಷ್ಣನನ್ನು ಹಂಗಿಸಿದನು.

ಅರ್ಥ:
ಅಸಗ: ಅಗಸ, ರಜಕ; ಕೆಡೆ: ಬೀಳು; ತಿವಿ: ಚುಚ್ಚು; ವಸನ: ಬಟ್ಟೆ; ಸೆಳೆ: ಜಗ್ಗು, ಎಳೆ; ಗಡ: ಅಲ್ಲವೇ; ಮಾಣಿಸು: ನಿಲ್ಲುವಂತೆ ಮಾಡು; ದಿಟ: ಸತ್ಯ, ನೈಜ; ಘಟ್ಟಿ: ಹೆಪ್ಪುಗಟ್ಟಿದುದು, ಘನರೂಪವಾದುದು; ಮೈಯ: ತನು, ದೇಹ; ಮೂಹೊರಡು: ಮೂರುಡೊಂಕು; ಮಸಗು: ಹರಡು, ಕೆರಳು; ಬೀಸು: ಹೊಡೆ; ಆನೆ: ಕರಿ; ಅಸು: ಪ್ರಾಣ: ಬಡಿ: ಹೊಡೆ; ಮಲ್ಲ: ಕುಸ್ತಿಪಟು, ಜಟ್ಟಿ; ಮರ್ದಿಸು: ಕೊಲ್ಲು; ಡೊಳ್ಳಾಸ: ಮೋಸ, ಕಪಟ; ಡಾವರಿಗ: ಶೌರ್ಯ, ಶೂರ;

ಪದವಿಂಗಡಣೆ:
ಅಸಗನನು +ಕೆಡೆತಿವಿದು+ ಕಂಸನ
ವಸನವೆಲ್ಲವ +ಸೆಳೆದ+ಗಡ+ ಮಾ
ಣಿಸಿದನೈ +ದಿಟಘಟ್ಟಿವಾಳ್ತಿಯ +ಮೈಯ+ಮೂಹೊರಡ
ಮಸಗಿ+ ಬೀಸುವ +ಕಂಸನ+ಆನೆಯನ್
ಅಸುಬಡಿದ +ಗಡ +ಮಲ್ಲರನು +ಮ
ರ್ದಿಸಿದನೇ +ಡೊಳ್ಳಾಸದಲಿ +ಡಾವರಿಗನಹನೆಂದ

ಅಚ್ಚರಿ:
(೧) ಸಾಯಿಸು ಎಂದು ಹೇಳಲು – ಅಸುಬಡಿದ ಪದದ ಬಳಕೆ
(೨) ಜೋಡಿ ಪದಗಳು – ಮಲ್ಲರನು ಮರ್ದಿಸಿದನೇ; ಡೊಳ್ಳಾಸದಲಿ ಡಾವರಿಗನಹನೆಂದ