ಪದ್ಯ ೪೨: ಪ್ರಹ್ಲಾದನು ಯಾರನ್ನು ಸ್ತುತಿಮಾಡಿದನು?

ಆ ಹಿರಣ್ಯಾಕ್ಷನ ಸಹೋದರ
ನೀ ಹರಿಯನವಗಡಿಸಿ ದೈವ
ದ್ರೋಹಿ ಬಹುವಿಧ ವ್ಯಥೆಗಳಲಿ ಬೇಸರಿಸಿದನು ಮಗನ
ಆಹವದಲಚ್ಯುತ ಮುಕುಂದ ಮ
ಹಾಹಿತಲ್ಪ ಮಹೇಂದ್ರವಂದ್ಯ
ತ್ರಾಹಿಯೆಂದನವರತ ತುತಿಸಿದನಂದು ಪ್ರಹ್ಲಾದ (ಸಭಾ ಪರ್ವ, ೧೦ ಸಂಧಿ, ೪೨ ಪದ್ಯ)

ತಾತ್ಪರ್ಯ:
ಆ ಹಿರಣ್ಯಾಕ್ಷನ ಸಹೋದರನಾದ ಹಿರಣ್ಯಕಶಿಪುವು ದೈವದ್ರೋಹಿಯಾಗಿ ಶ್ರೀಹರಿಯನ್ನು ವಿರೋಧಿಸಿದನು. ಅವನ ಮಗ ಪ್ರಹ್ಲಾದನು ಹರಿಭಕ್ತ ಇವನ ಹರಿಭಕ್ತಿಯನ್ನು ತಡೆಯಲು ಹಿರಣ್ಯಕಶಿಪುವು ತನ್ನ ಮಗನನ್ನು ಅನೇಕ ಹಿಂಸೆಗಳಿಗೊಳಪಡಿಸಿ ಬೇಸರ ತರಿಸಿದನು. ಆಗ ತಂದೆಯೊಡನೆ ವಿರೋಧದಲ್ಲಿ ಪ್ರಹ್ಲಾದನು ಅಚ್ಯುತ, ಮುಕುಂದ, ಶೇಷಶಯ್ಯ, ದೇವೇಂದ್ರವಂದ್ಯನೆ ನನ್ನನ್ನು ಕಾಪಾಡು ಎಂದು ಶ್ರೀಹರಿಯನ್ನು ಸ್ತುತಿಸಿದನು.

ಅರ್ಥ:
ಸಹೋದರ: ಅಣ್ಣ/ತಮ್ಮ; ಹರಿ: ವಿಷ್ಣು; ಅವಗಡಿಸು: ಕಡೆಗಣಿಸು, ಸೋಲಿಸು; ದ್ರೋಹ: ವಿಶ್ವಾಸಘಾತ, ವಂಚನೆ; ದೈವ: ಭಗವಂತ; ಬಹು: ಬಹಳ; ವಿಧ: ರೀತಿ; ವ್ಯಥೆ: ನೋವು; ಬೇಸರ: ದುಃಖ; ಮಗ: ಪುತ್ರ; ಆಹವ: ಯುದ್ಧ, ವಿರುದ್ಧ; ಅಚ್ಯುತ: ಚ್ಯುತಿಯಿಲ್ಲದವ (ವಿಷ್ಣು); ಅಹಿ: ಹಾವು; ತಲ್ಪ: ಹಾಸಿಗೆ; ಮಹೇಂದ್ರ: ಇಂದ್ರ; ವಂದ್ಯ: ನಮಸ್ಕರಿಸಲ್ಪಟ್ಟ; ತ್ರಾಹಿ:ರಕ್ಷಿಸು, ಕಾಪಾಡು; ಅನವರತ: ಯಾವಾಗಲು, ನಿತ್ಯ; ತುತಿ: ಹೊಗಳಿಕೆ, ಸ್ತುತಿ, ಪ್ರಶಂಸೆ;

ಪದವಿಂಗಡಣೆ:
ಆ +ಹಿರಣ್ಯಾಕ್ಷನ +ಸಹೋದರನ್
ಈ+ ಹರಿಯನ್+ಅವಗಡಿಸಿ+ ದೈವ
ದ್ರೋಹಿ +ಬಹುವಿಧ +ವ್ಯಥೆಗಳಲಿ +ಬೇಸರಿಸಿದನು +ಮಗನ
ಆಹವದಲ್+ಅಚ್ಯುತ +ಮುಕುಂದ +ಮಹ
ಅಹಿತಲ್ಪ +ಮಹೇಂದ್ರವಂದ್ಯ
ತ್ರಾಹಿ+ಎಂದ್+ಅನವರತ+ ತುತಿಸಿದನ್+ಅಂದು +ಪ್ರಹ್ಲಾದ

ಅಚ್ಚರಿ:
(೧) ಪ್ರಹ್ಲಾದ ಸ್ತುತಿಸಿದ ಬಗೆ – ಅಚ್ಯುತ, ಮುಕುಂದ, ಮಹಾಹಿತಲ್ಪ , ಮಹೇಂದ್ರವಂದ್ಯ
(೨) ದ್ರೋಹಿ, ಅಹಿ, ತ್ರಾಹಿ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ