ಪದ್ಯ ೪೮: ಕೃಷ್ಣನು ರಾಜರಿಗೇಕೆ ಗುರು?

ಅರಸನರಸನು ಕಾದಿ ಹಿಡಿದಾ
ದರಿಸಿ ಬಿಟ್ಟು ತದೀಯ ರಾಜ್ಯದೊ
ಳಿರಿಸಿದರೆ ಗುರುವಾತನಾತಂಗಿದುವೆ ಶೃತಿಸಿದ್ಧ
ಅರಸುಗಳನನಿಬರನು ಸೋಲಿಸಿ
ಮರಳಿ ರಾಜ್ಯದೊಳಿರಿಸನೇ ಮುರ
ಹರನು ಗುರುವಲ್ಲಾ ಮಹೀಶರಿಗೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೪೮ ಪದ್ಯ)

ತಾತ್ಪರ್ಯ:
ಒಬ್ಬ ರಾಜನನ್ನು ಯುದ್ಧದಲ್ಲಿ ಗೆದ್ದು ಸೋತ ರಾಜನನ್ನು ಮನ್ನಿಸಿ ಅವನ ರಾಜ್ಯದಲ್ಲೇ ಅವನನ್ನು ರಾಜ್ಯಭಾರ ಮಾಡಲು ಬಿಡುವವನು ರಾಜನಾದವನ ಗುರುವೆನಿಸಿಕೊಳ್ಳುತ್ತಾನೆ, ಇದು ವೇದಸಿದ್ಧ. ಹೀಗಿರುವಾಗ ಶ್ರೀಕೃಷ್ಣನು ಎಷ್ಟು ಜನ ರಾಜರನ್ನು ಸೋಲಿಸಿ ಮತ್ತೆ ರಾಜ್ಯದಲ್ಲಿಟ್ಟಿಲ್ಲ, ಶ್ರೀಕೃಷ್ಣನು ರಾಜರಿಗೆ ಗುರುವಲ್ಲವೇ ಎಂದು ಭೀಷ್ಮನು ಹೇಳಿದನು.

ಅರ್ಥ:
ಅರಸ: ರಾಜ; ಕಾದಿ: ಹೋರಾಡು; ಹಿಡಿ: ಬಂಧಿಸು; ಆದರ: ಮನ್ನಿಸು; ಬಿಟ್ಟು: ತೊರೆದು; ರಾಜ್ಯ: ರಾಷ್ಟ್ರ; ಇರಿಸು: ಇಡು; ಗುರು: ಆಚಾರ್ಯ; ಶೃತಿ: ವೇದ; ಅನಿಬರು: ಅಷ್ಟು; ಸೋಲಿಸು: ಪರಾಭವಗೊಳಿಸು; ಮರಳಿ: ಮತ್ತೆ; ಮುರಹರ: ಕೃಷ್ಣ; ಮಹೀಶ: ರಾಜ;

ಪದವಿಂಗಡಣೆ:
ಅರಸನ್+ಅರಸನು +ಕಾದಿ +ಹಿಡಿದ್
ಆದರಿಸಿ +ಬಿಟ್ಟು +ತದೀಯ +ರಾಜ್ಯದೊಳ್
ಇರಿಸಿದರೆ+ ಗುರುವಾತನ್+ಆತಂಗ್+ಇದುವೆ+ ಶೃತಿಸಿದ್ಧ
ಅರಸುಗಳನ್+ಅನಿಬರನು +ಸೋಲಿಸಿ
ಮರಳಿ+ ರಾಜ್ಯದೊಳ್+ಇರಿಸನೇ +ಮುರ
ಹರನು +ಗುರುವಲ್ಲಾ +ಮಹೀಶರಿಗ್+ಎಂದನಾ +ಭೀಷ್ಮ

ಅಚ್ಚರಿ:
(೧) ಅರಸನರಸ – ಪದ ಜೋಡಿಸಿರುವ ಬಗೆ

ಪದ್ಯ ೪೭: ಶಿಶುಪಾಲನು ಕೃಷ್ಣನನರಿಯಲೇಕ ಸಾಧ್ಯವಿಲ್ಲ?

ಗರುವ ಗರುವನನಖಿಳ ವಿದ್ಯಾ
ಪರಿಣತನ ಪರಿಣತನು ವೀರನು
ಧುರದ ವೀರನನರಿವನಿಂತಿದು ಲೋಕವಿಖ್ಯಾತ
ಗರುವನಲ್ಲ ಸುನೀತ ವಿದ್ಯಾ
ಪರಿಣತನು ತಾನಲ್ಲ ಘನಸಂ
ಗರದೊಳಿವನಾಳಲ್ಲ ಕೃಷ್ಣನನರಿವನೆಂತೆಂದ (ಸಭಾ ಪರ್ವ, ೯ ಸಂಧಿ, ೪೭ ಪದ್ಯ)

ತಾತ್ಪರ್ಯ:
ಸ್ವಾಭಿಮಾನಿಯಾದವನು ಸ್ವಾಭಿಮಾನಿಯನ್ನೂ, ವಿದ್ಯಾವಂತನು ವಿದ್ವಾಂಸನನ್ನು, ವೀರನು ಯುದ್ಧದಲ್ಲಿ ವೀರನನ್ನೂ ತಿಳಿದುಕೊಳ್ಳಬಲ್ಲನೆನ್ನುವುದು ಲೋಕಪ್ರಸಿದ್ಧಿಯಾದ ಮಾತು. ಶಿಶುಪಾಲನು ಅಭಿಮಾನಿಯೂ ಅಲ್ಲ, ವಿದ್ಯಾವಂತನೂ ಅಲ್ಲ, ಯುದ್ಧದಲ್ಲಿ ಮಹಾವೀರನೂ ಅಲ್ಲ, ಹೀಗಿರುವಾಗ ಇವನು ಕೃಷ್ಣನನ್ನು ತಿಳಿಯಲು ಹೇಗೆ ಸಾಧ್ಯವೆಂದು ಭೀಷ್ಮರು ಪ್ರಶ್ನಿಸಿದರು.

ಅರ್ಥ:
ಗರುವ: ಹಿರಿಯ, ಶ್ರೇಷ್ಠ, ಸೊಕ್ಕು; ಅಖಿಳ: ಎಲ್ಲಾ, ಸರ್ವ; ವಿದ್ಯ: ಜ್ಞಾನ; ಪರಿಣತ: ಪ್ರೌಢ, ನೈಪುಣ್ಯವುಳ್ಳ; ವೀರ: ಪರಾಕ್ರಮಿ; ಧುರ: ಯುದ್ಧ, ಕಾಳಗ; ಅರಿ: ತಿಳಿ; ಲೋಕ: ಜಗತ್ತು; ವಿಖ್ಯಾತ: ಪ್ರಸಿದ್ಧಿ; ಸುನೀತ: ಶಿಶುಪಾಲ; ಘನ: ಶ್ರೇಷ್ಠ; ಸಂಗರ: ಯುದ್ಧ;

ಪದವಿಂಗಡಣೆ:
ಗರುವ+ ಗರುವನನ್+ಅಖಿಳ+ ವಿದ್ಯಾ
ಪರಿಣತನ+ ಪರಿಣತನು+ ವೀರನು
ಧುರದ +ವೀರನನ್+ಅರಿವನ್+ಇಂತಿದು +ಲೋಕ+ವಿಖ್ಯಾತ
ಗರುವನಲ್ಲ +ಸುನೀತ +ವಿದ್ಯಾ
ಪರಿಣತನು+ ತಾನಲ್ಲ+ ಘನಸಂ
ಗರದೊಳ್+ಇವನಾಳಲ್ಲ +ಕೃಷ್ಣನನ್+ಅರಿವನೆಂತೆಂದ

ಅಚ್ಚರಿ:
(೧) ಜೋಡಿ ಪದಗಳು – ಗರುವ, ಪರಿಣತ, ವೀರ
(೨) ವಿದ್ಯಾ – ೧, ೪ ಸಾಲಿನ ಕೊನೆ ಪದ

ಪದ್ಯ ೪೬: ಭೀಷ್ಮರು ಯುಧಿಷ್ಠಿರನಿಗೆ ಏನು ಹೇಳಿದರು?

ಎಲೆ ಮರುಳೆ ಭೂಪಾಲ ನೊರಜಿನ
ಕಳಕಳಕೆ ಕರಿ ಬೆಚ್ಚುವುದೆ ಮಂ
ಡಳಿಯ ಮರಿ ಮಿಡುಕಿದರೆ ಕಳವಳಿಸುವುದೆ ಕಲಿಸಿಂಹ
ಗಿಳಿಯ ಮುರಕಕೆ ಗಿಡಗನಗಿದ
ವ್ವಳಿಸುವುದೆ ಹರಿಗಿವನು ಗಣ್ಯನೆ
ಗಳಹನಿವನೊಡನಾವುದನುನಯವೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೪೬ ಪದ್ಯ)

ತಾತ್ಪರ್ಯ:
ಧರ್ಮರಾಯನು ಉತ್ತರೀಯವನ್ನು ಹಿಡಿದು ಶಿಶುಪಾಲನನ್ನು ತಡೆಯಲು, ಎಲೈ ರಾಜ ನಿನಗೆಲ್ಲೋ ಹುಚ್ಚು, ಚಿಕ್ಕ ಹುಳುವಿನ ಸದ್ದಿಗೆ ಆನೆಯು ಹೆದರುವುದೇ? ಬೆಕ್ಕಿನ ಮರಿಯು ಕಿರುಚಾಡಿದರೆ ಸಿಂಹಕ್ಕೆ ಕಳವಳವಾಗುತ್ತದೆಯೇ? ಗಿಳಿಯು ಜೋರು ಮಾಡಿದರೆ ಗಿಡುಗವು ಬೆದರುತ್ತದೆಯೇ? ಶ್ರೀಕೃಷ್ಣನಿಗೆ ಇವನೋಬ್ಬ ಲಿಕ್ಕವೇ? ಬಾಯಿಬಡುಕನಾದ ಇವನೊಡನೆ ಅನುನಯದ ಮಾತೇಕೆ ಎಂದು ಭೀಷ್ಮರು ನುಡಿದರು.

ಅರ್ಥ:
ಮರುಳ:ತಿಳಿಗೇಡಿ, ದಡ್ಡ, ಹುಚ್ಚ; ಭೂಪಾಲ: ರಾಜ; ನೊರಜು: ಸಣ್ಣ ಕೀಟ, ಅಲ್ಪ; ಕಳಕಳ: ಉದ್ವಿಘ್ನತೆ; ಕರಿ: ಆನೆ; ಬೆಚ್ಚು: ಭಯ, ಹೆದರಿಕೆ; ಮಂಡಲಿ: ಬೆಕ್ಕು; ಮರಿ: ಎಳೆಯದು, ಕೂಸು; ಮಿಡುಕು: ನಡುಕ, ಕಂಪನ; ಕಳವಳ: ಚಿಂತೆ; ಕಲಿ: ಶೂರ; ಸಿಂಹ: ಕೇಸರಿ; ಗಿಳಿ: ಶುಕ; ಮುರಕ: ಸೊಕ್ಕು, ಗರ್ವ; ಗಿಡುಗ: ಒಂದು ಬಗೆಯ ಹಕ್ಕಿ, ಹದ್ದು; ಅವ್ವಳಿಸು: ಆರ್ಭಟಿಸು; ಹರಿ: ಕೃಷ್ಣ; ಗಣ್ಯ: ಶ್ರೇಷ್ಠ; ಅನುನಯ: ನಯವಾದ ಮಾತುಗಳಿಂದ ಮನವೊಲಿಸುವುದು; ಗಳಹ: ಅತಿಯಾಗಿ ಹರಟುವ; ಒಡನೆ: ಜೊತೆ;

ಪದವಿಂಗಡಣೆ:
ಎಲೆ +ಮರುಳೆ +ಭೂಪಾಲ +ನೊರಜಿನ
ಕಳಕಳಕೆ +ಕರಿ+ ಬೆಚ್ಚುವುದೆ+ ಮಂ
ಡಳಿಯ +ಮರಿ +ಮಿಡುಕಿದರೆ+ ಕಳವಳಿಸುವುದೆ +ಕಲಿಸಿಂಹ
ಗಿಳಿಯ +ಮುರಕಕೆ+ ಗಿಡಗನಗಿದ್
ಅವ್ವಳಿಸುವುದೆ +ಹರಿಗಿವನು+ ಗಣ್ಯನೆ
ಗಳಹನ್+ಇವನೊಡನ್+ಆವುದ್+ಅನುನಯವ್+ಎಂದನಾ ಭೀಷ್ಮ

ಅಚ್ಚರಿ:
(೧) ಉಪಮಾನಗಳ ಬಳಕೆ – ನೊರಜಿನ ಕಳಕಳಕೆ ಕರಿ ಬೆಚ್ಚುವುದೆ, ಮಂಡಳಿಯ ಮರಿ ಮಿಡುಕಿದರೆ ಕಳವಳಿಸುವುದೆ ಕಲಿಸಿಂಹ, ಗಿಳಿಯ ಮುರಕಕೆ ಗಿಡಗನಗಿದ
ವ್ವಳಿಸುವುದೆ

ಪದ್ಯ ೪೫: ಧರ್ಮರಾಯನು ಶಿಶುಪಾಲನನ್ನು ಹೇಗೆ ಕರೆತಂದನು?

ಅರಿಯರೇ ಮುನಿ ಮುಖ್ಯರೀತನ
ನುರುವ ದೈವವಿದೆಂದು ನೀ ಕ
ಟ್ಟರಿತಗಾರನೆ ರಾಯರಿದೆಲಾ ಸಕಲ ಗುಣಯುತರು
ಕರುಬತನದಲಿ ನೀನಕಟ ತೆರ
ನರಿಯದೆಂಬರೆ ಬಾರೆನುತ ಮುಂ
ಜೆರಗ ಹಿಡಿದೆಳೆದವನ ತಂದನು ಭೂಪಜನ ಸಹಿತ (ಸಭಾ ಪರ್ವ, ೯ ಸಂಧಿ, ೪೫ ಪದ್ಯ)

ತಾತ್ಪರ್ಯ:
ಶಿಶುಪಾಲನೇ, ಇಲ್ಲಿರುವ ಪ್ರಮುಖ ಋಷಿಮುನಿಗಳು ಶೀಕೃಷ್ಣನು ಹೆಚ್ಚಿನ ದೇವರೆಂದು ತಿಳಿದಿಲ್ಲವೇ? ನೀಣು ಅಂತಹ ಮಹಾವೀರನೇ, ಸಕಲಗುಣಗಳನ್ನುಳ್ಳ ರಾಜರು ಸುಮ್ಮನೇ ಇಲ್ಲವೇ? ಹೊಟ್ಟೆಯಕಿಚ್ಚಿನಿಂದ ನೀನು ತಿಳಿಯದೇ ಮಾತನಾಡಬಹುದೇ? ಎನ್ನುತ್ತಾ ಧರ್ಮರಾಜನು ಶಿಶುಪಾಲನ ಉತ್ತರೀಯವನ್ನು ಹಿಡಿದೆಳೆದು ಉಳಿದ ರಾಜರೊಡನೆ ಹಿಂದಕ್ಕೆ ಕರೆತಂದನು.

ಅರ್ಥ:
ಅರಿ: ತಿಳಿ; ಮುನಿ: ಋಷಿ; ಮುಖ್ಯ: ಪ್ರಮುಖ; ಉರು: ಹೆಚ್ಚಾದ, ಶ್ರೇಷ್ಠ; ದೈವ: ಭಗವಮ್ತ; ಕಟ್ಟರಿತಗಾರ: ವಿಶೇಷಜ್ಞಾನವುಳ್ಳ; ರಾಯ: ರಾಜ; ಸಕಲ: ಎಲ್ಲಾ; ಗುಣ: ನಡತೆ, ಸ್ವಭಾವ; ಕರುಬು: ಹೊಟ್ಟೆಕಿಚ್ಚುಪಡು; ಅಕಟ: ಅಯ್ಯೋ; ತೆರ: ಪದ್ಧತಿ; ಅರಿ: ತಿಳಿ; ಎಂಬರೆ: ಹೇಳಿದರೆ; ಬಾ: ಆಗಮಿಸು; ಮುಂಜೆರಗ: ಉತ್ತರೀಯ; ಹಿಡಿದು: ಗ್ರಹಿಸು,ಕೈಕೊಳ್ಳು; ಎಳೆ: ತನ್ನ ಕಡೆಗೆ ಸೆಳೆದುಕೊ; ತಂದನು: ಬರೆಮಾಡು; ಭೂಪ: ರಾಜ; ಜನ: ಸಮುದಾಯ; ಸಹಿತ: ಜೊತೆ;

ಪದವಿಂಗಡಣೆ:
ಅರಿಯರೇ +ಮುನಿ +ಮುಖ್ಯರ್+ಈತನನ್
ಉರುವ +ದೈವವಿದೆಂದು +ನೀ +ಕ
ಟ್ಟರಿತಗಾರನೆ+ ರಾಯರ್+ಇದೆಲಾ +ಸಕಲ+ ಗುಣಯುತರು
ಕರುಬತನದಲಿ+ ನೀನ್+ಅಕಟ +ತೆರನ್
ಅರಿಯದ್+ಎಂಬರೆ+ ಬಾರೆನುತ +ಮುಂ
ಜೆರಗ+ ಹಿಡಿದೆಳೆದವನ+ ತಂದನು+ ಭೂಪಜನ +ಸಹಿತ

ಅಚ್ಚರಿ:
(೧) ಕಟ್ಟರಿತಗಾರ – ಪದದ ಬಳಕೆ

ಪದ್ಯ ೪೪: ಧರ್ಮರಾಯನು ಶಿಶುಪಾಲನನ್ನು ಹೇಗೆ ತಡೆದನು?

ಶಿವಶಿವಾ ತಪ್ಪಾಯ್ತು ನಮ್ಮು
ತ್ಸವಕೆ ಬಂದವನಿಪನ ಗುಣ ದೋ
ಷವನು ನಾವೀಕ್ಷಿಸುವುದನುಚಿತವೆಂದು ವಿನಯದಲಿ
ಅವನಿಪತಿ ಬೆಂಬತ್ತಿ ಗಮನಕೆ
ತವಕಿಸುವ ಶಿಶುಪಾಲಕನ ಹಿಡಿ
ದವುಚಿದನು ಮಧುರೋಕ್ತಿಯಲಿ ನುಡಿಸಿದನು ಬೋಳೈಸಿ (ಸಭಾ ಪರ್ವ, ೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅಯ್ಯೋ ಭಗವಂತಾ, ನಮ್ಮ ಯಾಗಕ್ಕೆ ಬಂದ ರಾಜನ ಗುಣದೋಷಗಳನ್ನು ಎತ್ತಿ ಆಡುವುದು ಅನುಚಿತ, ತಪ್ಪಾಯಿತು, ಎಂದುಕೊಂಡು ಹೋಗಲು ಮುಂದಾಗಿದ್ದ ಶಿಶುಪಾಲನನ್ನು ತಡೆದು ಅಪ್ಪಿಕೊಂಡು ತಲೆಯನ್ನು ಸವರಿ ಮಧುರವಾಣಿಗಳಿಂದ ಮಾತಾಡಿಸಿದನು.

ಅರ್ಥ:
ತಪ್ಪು: ಸರಿಯಲ್ಲದ; ಉತ್ಸವ; ಸಮಾರಂಭ; ಬಂದ: ಆಗಮಿಸು; ಅವನಿಪ: ರಾಜ; ಗುಣ: ನಡತೆ, ಸ್ವಭಾವ; ದೋಷ: ಕುಂದು, ಕಳಂಕ; ಈಕ್ಷೀಸು: ನೋಡು; ಅನುಚಿತ: ಸರಿಯಲ್ಲದ; ವಿನಯ: ಒಳ್ಳೆಯತನ, ಸೌಜನ್ಯ; ಬೆಂಬತ್ತು: ಹಿಂಬಾಲಿಸು; ಗಮನ: ಹೋಗುವುದು; ತವಕ: ಆತುರ; ಹಿಡಿ: ಬಂಧಿಸು; ಅವುಚು: ಅಪ್ಪು; ಮಧುರ: ಸಿಹಿ; ಉಕ್ತಿ: ಮಾತು, ವಾಣಿ; ನುಡಿಸು: ಮಾತಾಡಿಸು; ಬೋಳೈಸು: ಸಂತೈಸು, ಸಮಾಧಾನ ಮಾಡು

ಪದವಿಂಗಡಣೆ:
ಶಿವಶಿವಾ +ತಪ್ಪಾಯ್ತು +ನಮ್ಮ
ಉತ್ಸವಕೆ +ಬಂದ್+ಅವನಿಪನ +ಗುಣ +ದೋ
ಷವನು +ನಾವ್+ಈಕ್ಷಿಸುವುದ್+ಅನುಚಿತವೆಂದು +ವಿನಯದಲಿ
ಅವನಿಪತಿ+ ಬೆಂಬತ್ತಿ+ ಗಮನಕೆ
ತವಕಿಸುವ+ ಶಿಶುಪಾಲಕನ +ಹಿಡಿದ್
ಅವುಚಿದನು +ಮಧುರ+ಉಕ್ತಿಯಲಿ +ನುಡಿಸಿದನು +ಬೋಳೈಸಿ

ಅಚ್ಚರಿ:
(೧) ಸರಿಯಲ್ಲದ ಕ್ರಮ – ಉತ್ಸವಕೆ ಬಂದವನಿಪನ ಗುಣ ದೋಷವನು ನಾವೀಕ್ಷಿಸುವುದನುಚಿತ
(೨) ಸಮಾಧಾನ ಪಡಿಸುವ ಬಗೆ – ಅವುಚಿದನು ಮಧುರೋಕ್ತಿಯಲಿ ನುಡಿಸಿದನು ಬೋಳೈಸಿ

ಪದ್ಯ ೪೩: ಶಿಶುಪಾಲನು ಸಭೆಯಿಂದ ಹೇಗೆ ಹೊರಟನು?

ನುಡಿಯದದು ಮೌನಗ್ರಹದ ಹೆಡ
ಗುಡಿಯಲಿದ್ದುದು ರಾಯ ಕುಲವವ
ಗಡೆಯನೆದ್ದನು ಸಿಂಹಪೀಠದಿ ನೋಡಿ ಕೆಲಬಲನ
ಕಡೆಯ ಝಣಝಣರವ ಮಸಗಲಿವ
ನೊಡನೆ ಹೊರವೊಂಟುದು ನೃಪಾಲಕ
ರೊಡಮುರುಚಿದರು ಹಿಡಿದ ಸಚಿವ ಪಸಾಯ್ತ ಮಂತ್ರಿಗಳ (ಸಭಾ ಪರ್ವ, ೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಸಭಾಸನದಲ್ಲಿದ್ದ ರಾಜರಾರು ಮಾತಾಡಲಿಲ್ಲ. ಮೌನದ ಭೂತಹಿಡಿದು ಮಾತು ಕತ್ತಿನ ಹಿಂಭಾಗದಲ್ಲಿ ನಿಂತಿತು ಶಿಶುಪಾಲನು ಸಿಂಹಾಸನದಿಂದ ಮೇಲೆದ್ದು ಕಡಗ ಝಣಝಣವೆಂದು ಸದ್ದು ಮಾಡಲು ರಾಜರೊಡನೆ ಸಭಾಸ್ಥಾನವನ್ನು ಬಿಟ್ಟು ಹೊರಹೊರಟನು. ಅವನ ಜೊತೆಯ ರಾಜರು ತಮ್ಮನ್ನು ತಡೆಯುವ ಮಂತ್ರಿಗಳನ್ನು ಹಿಂದಕ್ಕೆ ದಬ್ಬಿದರು.

ಅರ್ಥ:
ನುಡಿ: ಮಾತು; ಮೌನ: ಮಾತನಾಡದಿರುವಿಕೆ, ನೀರವತೆ; ಹೆಡಗುಡಿ: ಹೆಡಮುರಿಗೆ, ಹಿಂಭಾಗ; ರಾಯ: ರಾಜ; ಕುಲ: ವಂಶ; ಅವಗಡೆ: ಅಸಡ್ಡೆ; ಕಡೆ: ಪಕ್ಕ, ಕೊನೆ; ಸಿಂಹಪೀಠ: ಆಸನ; ನೋಡು: ವೀಕ್ಷಿಸು; ಕೆಲ: ಸ್ವಲ್ಪ; ಬಲ: ನೆರವು, ಸಹಾಯ, ಸೈನ್ಯ; ಕಡೆಯ: ಕಡಗ, ಕಾಲು ಅಥವಾ ಕೈಗೆ ತೊಡುವ ಆಭರಣ; ಝಣಝಣ: ಆಭರಣದ ಶಬ್ದ; ರವ: ಧ್ವನಿ; ಮಸಗು: ಹರಡು; ಹೊರವೊಂಟ: ತೆರಳು; ನೃಪಾಲ: ರಾಜ; ಮುರುಚು: ಹಿಂತಿರುಗಿಸು; ಪಸಾಯ್ತ: ಸಾಮಂತರಾಜ; ಮಂತ್ರಿ: ಸಚಿವ; ಹಿಡಿ: ಅವಲಂಬಿಸು;

ಪದವಿಂಗಡಣೆ:
ನುಡಿಯದದು+ ಮೌನಗ್ರಹದ+ ಹೆಡ
ಗುಡಿಯಲ್+ಇದ್ದುದು +ರಾಯ +ಕುಲವ್+ಅವ
ಗಡೆಯನ್+ಎದ್ದನು +ಸಿಂಹಪೀಠದಿ+ ನೋಡಿ +ಕೆಲಬಲನ
ಕಡೆಯ +ಝಣಝಣರವ+ ಮಸಗಲ್+ಇವ
ನೊಡನೆ +ಹೊರವೊಂಟುದು+ ನೃಪಾಲಕರ್
ಒಡ+ಮುರುಚಿದರು +ಹಿಡಿದ +ಸಚಿವ +ಪಸಾಯ್ತ +ಮಂತ್ರಿಗಳ

ಅಚ್ಚರಿ:
(೧) ನುಡಿಯದು, ಮೌನ – ಸಾಮ್ಯಾರ್ಥ ಪದ
(೨) ನೃಪ, ರಾಯ;ಸಚಿವ, ಮಂತ್ರಿ; – ಸಮನಾರ್ಥಕ ಪದ

ಪದ್ಯ ೪೨: ಸಹದೇವನು ಏನೆಂದು ಗರ್ಜಿಸಿದನು?

ನಿನ್ನನೆನ್ನೆನು ಚೈದ್ಯ ಕೃಷ್ಣನ
ಮನ್ನಣೆಗೆ ಸೆಣಸುವರಿಗಿದೆ ತೊಡ
ರೆನ್ನ ಪಾದದಲೆನುತ ಧರಣಿಯನೊದೆದನಂಘ್ರಿಯಲಿ
ಇನ್ನು ನೀನು ಸುಲೋಚನಾಂಧಕ
ನಿನ್ನೊಡನೆ ಫಲವೇನು ಕದನಕೆ
ಬನ್ನಿ ಮಿಡುಕುಳ್ಳವರೆನುತ ಗಜರಿದನು ಸಹದೇವ (ಸಭಾ ಪರ್ವ, ೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಸಹದೇವನು ಶಿಶುಪಾಲನೆದುರು ಗರ್ಜಿಸುತ್ತಾ, ಎಲವೋ ಶಿಶುಪಾಲ, ನಿನಗೇ ನಾನು ಹೇಳುತ್ತಿಲ್ಲ, ಕೃಷ್ಣನನ್ನು ನಾವು ಅಗ್ರಪೂಜೆಯಿಂದ ಮನ್ನಿಸುವೆವು, ಅದನ್ನು ವಿರೋಧಿಸುವರಿಗೆ ನನ್ನ ಪಾದವೇ ಉತ್ತರಕೊಡುತ್ತದೆ ಎಂದು ಭೂಮಿಯನ್ನು ಪಾದದಿಂದ ಹೊಡೆದನು. ಶಿಶುಪಾಲ ನೀನು ಕಣ್ಣಿದ್ದು ಕುರುಡ ನಿನ್ನ ಹತ್ತಿರ ಮಾತಾಡಿ ಫಲವೇನು, ನೆರೆದಿರುವ ರಾಜರೇ ನಿಮ್ಮಲ್ಲಿ ಶಕ್ತಿ, ಧೈರ್ಯ ಇದ್ದವರು ಯುದ್ಧಕ್ಕೆ ಬನ್ನಿ ಎಂದು ಗರ್ಜಿಸಿದನು.

ಅರ್ಥ:
ಚೈದ್ಯ: ಶಿಶುಪಾಲ; ಮನ್ನಣೆ: ಗೌರವ; ಸೆಣಸು: ಹೋರಾದು; ತೊಡರು: ಸರಪಳಿ, ಬಂಧನ; ಪಾದ: ಚರಣ; ಧರಣಿ: ಭೂಮಿ; ಒದೆ: ನೂಕು, ತಳ್ಳು; ಅಂಘ್ರಿ: ಪಾದ; ಸುಲೋಚನ: ಒಳ್ಳೆಯ ಕಣ್ಣುಳ್ಳವ; ಅಂಧ: ಕುರುಡ; ಫಲ: ಪ್ರಯೋಜನ; ಕದನ: ಯುದ್ಧ; ಬನ್ನಿ: ಆಗಮಿಸು; ಮಿಡುಕು:ನಡುಕ, ಕಂಪನ, ಭಯಪಡು; ಗಜರು: ಗರ್ಜಿಸು;

ಪದವಿಂಗಡಣೆ:
ನಿನ್ನನ್+ಎನ್ನೆನು +ಚೈದ್ಯ +ಕೃಷ್ಣನ
ಮನ್ನಣೆಗೆ+ ಸೆಣಸುವರಿಗಿದೆ +ತೊಡರ್
ಎನ್ನ +ಪಾದದಲೆನುತ +ಧರಣಿಯನ್+ಒದೆದನ್+ಅಂಘ್ರಿಯಲಿ
ಇನ್ನು +ನೀನು +ಸುಲೋಚನ+ಅಂಧಕ
ನಿನ್ನೊಡನೆ +ಫಲವೇನು +ಕದನಕೆ
ಬನ್ನಿ+ ಮಿಡುಕುಳ್ಳವರ್+ಎನುತ+ ಗಜರಿದನು +ಸಹದೇವ

ಅಚ್ಚರಿ:
(೧) ಜರಾಸಂಧನನ್ನು ಬಯ್ಯುವ ಬಗೆ – ಇನ್ನು ನೀನು ಸುಲೋಚನಾಂಧಕ ನಿನ್ನೊಡನೆ ಫಲವೇನು

ಪದ್ಯ ೪೧: ಸಹದೇವನು ಮುಕುಂದನ ಗುಣಗಾನ ಹೇಗೆ ಮಾಡಿದ?

ಧರಣಿಪತಿಯೇ ಸಕಲ ಧರ್ಮದ
ಪರಮ ಸೀಮೆ ಮುಕುಂದನೇ ಮಾ
ನ್ಯರಿಗೆ ಗುರು ವಂದ್ಯರಿಗೆ ವಂದ್ಯನು ದೈವಕಧಿದೈವ
ಸುರನದೀನಂದನನು ಸಾಕ್ಷಾ
ತ್ಪರಮಶಿವನೀ ಯಜ್ಞಲೋಕೋ
ತ್ತರದ ಮಖವಿದು ನಿನ್ನ ಕುಮತಿಗೆ ಸಾಧ್ಯವಲ್ಲೆಂದ (ಸಭಾ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ಸಹದೇವನು ತನ್ನ ಮಾತನ್ನು ಮುಂದುವರಿಸುತ್ತಾ, ಯುಧಿಷ್ಠಿರನು ಸಕಲ ಧರ್ಮದ ಎಲ್ಲೆಯನ್ನು ಬಲ್ಲವನು, ಶ್ರೀಕೃಷ್ಣನು ಮಾನ್ಯರಿಗೆ ಮಾನ್ಯನು, ಪೂಜ್ಯಗೊಳ್ಳುವವರಲ್ಲಿ ಅಗ್ರಗಣ್ಯನು, ದೇವರಲ್ಲಿ ಆದಿ ದೇವನು, ಗಂಗಾಪುತ್ರ ಭೀಷ್ಮರು ಸಾಕ್ಷಾತ್ ಪರಮಶಿವ, ಇಂತಹ ಯಜ್ಞ ಲೋಕದಲ್ಲಿ ಎಂದು ಆಗಿರಲಿಲ್ಲ ಇದು ಲೋಕಕಲ್ಯಾಣಕ್ಕಾಗಿದೆ. ಜರಾಸಂಧ, ನಿನ್ನಂತಹ ದುರ್ಬುದ್ಧಿಯುಳ್ಳವರಿಗೆ ಇದು ತಿಳಿಯಲಾಗುವುದಿಲ್ಲ ಎಂದು ಹೇಳಿದನು.

ಅರ್ಥ:
ಧರಣಿ: ಭೂಮಿ; ಧರಣೀಪತಿ: ರಾಜ; ಸಕಲ: ಎಲ್ಲಾ; ಧರ್ಮ: ಧಾರಣೆ ಮಾಡಿದುದು, ಆಚಾರ; ಪರಮ: ಶ್ರೇಷ್ಠ; ಸೀಮೆ: ಎಲ್ಲೆ; ಮಾನ್ಯ: ಮನ್ನಣೆ, ಪೂಜ್ಯ; ಗುರು: ಆಚಾರ್ಯ; ವಂದ್ಯ: ಪೂಜನೀಯ; ದೈವ: ಭಗವಂತ; ಅಧಿದೈವ: ಶ್ರೇಷ್ಠವಾದ, ಮುಖ್ಯವಾದ ದೈವ; ಸುರನದಿ: ಗಂಗೆ; ನಂದನ: ಮಗ; ಸಾಕ್ಷಾತ್: ಪ್ರತ್ಯಕ್ಷವಾಗಿ; ಪರಮಶಿವ: ಶಂಕರ; ಯಜ್ಞ: ಯಾಗ; ಲೋಕ: ಜಗತ್ತು; ಲೋಕೋತ್ತರ: ಜಗತ್ತಿನ್ನು ಅಭಿವೃದ್ಧಿಯತ್ತ ಒಯ್ಯುವ, ಒಳಿತಾದ; ಉತ್ತರ: ಅಭಿವೃದ್ಧಿ, ಉತ್ತಮ; ಮಖ: ಯಜ್ಞ; ಕುಮತಿ: ದುಷ್ಟಬುದ್ಧಿ; ಸಾಧ್ಯ: ಲಭ್ಯವಾಗುವ;

ಪದವಿಂಗಡಣೆ:
ಧರಣಿಪತಿಯೇ+ ಸಕಲ+ ಧರ್ಮದ
ಪರಮ +ಸೀಮೆ +ಮುಕುಂದನೇ+ ಮಾ
ನ್ಯರಿಗೆ+ ಗುರು +ವಂದ್ಯರಿಗೆ+ ವಂದ್ಯನು +ದೈವಕ್+ಅಧಿದೈವ
ಸುರನದೀನಂದನನು+ ಸಾಕ್ಷಾತ್
ಪರಮಶಿವನ್+ಈ+ ಯಜ್ಞ+ಲೋಕೋ
ತ್ತರದ+ ಮಖವಿದು+ ನಿನ್ನ +ಕುಮತಿಗೆ+ ಸಾಧ್ಯವಲ್ಲೆಂದ

ಅಚ್ಚರಿ:
(೧) ಯಜ್ಞ, ಮಖ – ಸಮನಾರ್ಥಕ ಪದ
(೨) ಕೃಷ್ಣನ ಗುಣಗಾನ – ಮುಕುಂದನೇ ಮಾನ್ಯರಿಗೆ ಗುರು ವಂದ್ಯರಿಗೆ ವಂದ್ಯನು ದೈವಕಧಿದೈವ

ನುಡಿಮುತ್ತುಗಳು: ಸಭಾ ಪರ್ವ, ೯ ಸಂಧಿ

  • ಮುಕುಂದನೇ ಮಾನ್ಯರಿಗೆ ಗುರು ವಂದ್ಯರಿಗೆ ವಂದ್ಯನು ದೈವಕಧಿದೈವ – ಪದ್ಯ ೪೧
  • ಮೌನದಜಲಧಿಯಾಯ್ತಾಸ್ಥಾನದಿದಿರಲಿಪದ್ಯ ೪೦
  • ಅವುಚಿದನು ಮಧುರೋಕ್ತಿಯಲಿ ನುಡಿಸಿದನು ಬೋಳೈಸಿ – ಪದ್ಯ ೪೪
  • ನೊರಜಿನ ಕಳಕಳಕೆ ಕರಿ ಬೆಚ್ಚುವುದೆ, ಮಂಡಳಿಯ ಮರಿ ಮಿಡುಕಿದರೆ ಕಳವಳಿಸುವುದೆ ಕಲಿಸಿಂಹ, ಗಿಳಿಯ ಮುರಕಕೆ ಗಿಡಗನಗಿದ – ಪದ್ಯ ೪೬
  • ಗರುವ ಗರುವನನಖಿಳ ವಿದ್ಯಾ ಪರಿಣತನ ಪರಿಣತನು ವೀರನು ಧುರದ ವೀರನನರಿವನಿಂತಿದು ಲೋಕವಿಖ್ಯಾತ – ಪದ್ಯ ೪೭
  • ಜ್ಞಾನವೃದ್ಧನು ಕೃಷ್ಣನ್ – ಪದ್ಯ ೫೦
  • ನಿಶಾಟರು ಮೆಚ್ಚರಗ್ಗದ ಭಾನುರಶ್ಮಿಯನಂಧಕಾರ ಜ್ಞಾನನಿಷ್ಠರು ನಿಪುಣರೈಸಲೆ – ಪದ್ಯ ೫೧

ಪದ್ಯ ೪೦: ಸಹದೇವನು ಜರಾಸಂಧನಿಗೆ ಏನು ಹೇಳಿದ?

ನಿಲಿಸಿದನು ಕಳವಳವನೀ ಯದು
ಬಲವ ತೆಗೆದನು ಮತ್ತೆ ಮೌನದ
ಜಲಧಿಯಾಯ್ತಾಸ್ಥಾನದಿದಿರಲಿ ನಿಂದು ಸಹದೇವ
ಎಲೆ ಸುನೀತ ವೃಥಾ ವಿರೋಧ
ಸ್ಖಲಿತನಾದೆ ಮುರಾರಿ ಮಾನ್ಯರ
ತಿಲಕನೀತನ ಪೂಜೆ ಯಾಗಕೆ ಕಳಸವಾಯ್ತೆಂದ (ಸಭಾ ಪರ್ವ, ೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಭೀಷ್ಮರು ಯಾದವರ ಸೈನ್ಯದಲ್ಲಾದ ಕಳವಳವನ್ನು ನಿಲ್ಲಿಸಲು ಅವರ ಸೈನ್ಯವು ಹಿಂದಕ್ಕೆ ಹೋಯಿತು. ಆಸ್ಥಾನದಲ್ಲಿ ಮೌನವು ಆವರಿಸಿತು. ಆಗ ಸಹದೇವನು ಎದ್ದುನಿಂತು ಶಿಶುಪಾಲನಿಗೆ, ಎಲವೋ ಸುನೀತ, ಕೃಷ್ಣನ ಮೇಲಿನ ವಿರೋಧದಿಂದ ವೃಥಾ ಆರೋಪ ಮಾದಿ ಜಾರಿ ಬೀಳುತ್ತಿರುವೆ, ಶ್ರೀಕೃಷ್ಣನು ಮಾನ್ಯರಲ್ಲಿ ತಿಲಕಪ್ರಾಯನಾದವನು, ಈತನ ಪೂಜೆಯು ಈ ಮಹಾಯಜ್ಞಕ್ಕೆ ಕಳಶಪ್ರಾಯವಿದ್ದಂತೆ ಎಂದನು.

ಅರ್ಥ:
ನಿಲಿಸು: ತಡೆ; ಕಳವಳ: ಗೊಂದಲ; ಬಲ: ಸೈನ್ಯ; ತೆಗೆ: ಈಚೆಗೆ ತರು, ಹೊರತರು; ಮತ್ತೆ; ಪುನಃ; ಮೌನ: ನಿಶ್ಯಬ್ದ, ಸದ್ದಿಲ್ಲದೆ ಇರುವುದು, ನೀರವತೆ; ಜಲಧಿ; ಸಾಗರ; ಆಸ್ಥಾನ: ದರ್ಬಾರು, ಓಲಗ; ಇದಿರು: ಎದುರು; ನಿಂದು: ನಿಲ್ಲು; ವೃಥಾ: ಸುಮ್ಮನೆ; ವಿರೋಧ: ವೈರ; ಸ್ಖಲಿತ: ಜಾರಿಬಿದ್ದ, ಕಳಚಿ ಬಿದ್ದಿರುವ; ಮುರಾರಿ: ಕೃಷ್ಣ; ಮಾನ್ಯ: ಗೌರವ, ಮನ್ನಣೆ; ತಿಲಕ: ಶ್ರೇಷ್ಠ; ಪೂಜೆ: ಆರಾಧನೆ; ಯಾಗ: ಯಜ್ಞ; ಕಳಸ: ಶ್ರೇಷ್ಠ, ಗಣ್ಯವ್ಯಕ್ತಿ, ಹಿರಿಯ;

ಪದವಿಂಗಡಣೆ:
ನಿಲಿಸಿದನು +ಕಳವಳವನ್+ಈ+ ಯದು
ಬಲವ +ತೆಗೆದನು+ ಮತ್ತೆ+ ಮೌನದ
ಜಲಧಿಯಾಯ್ತ್+ ಆಸ್ಥಾನದ್+ಇದಿರಲಿ+ ನಿಂದು +ಸಹದೇವ
ಎಲೆ +ಸುನೀತ +ವೃಥಾ +ವಿರೋಧ
ಸ್ಖಲಿತನಾದೆ +ಮುರಾರಿ +ಮಾನ್ಯರ
ತಿಲಕನ್+ಈತನ +ಪೂಜೆ +ಯಾಗಕೆ +ಕಳಸವಾಯ್ತೆಂದ

ಅಚ್ಚರಿ:
(೧) ಮೌನದ ಗಾಢತೆಯನ್ನು ವಿವರಿಸುವ ಪದ – ಮೌನದಜಲಧಿಯಾಯ್ತಾಸ್ಥಾನದಿದಿರಲಿ
(೨) ಕೃಷ್ಣನ ಗುಣಗಾನ – ಮುರಾರಿ ಮಾನ್ಯರ ತಿಲಕನೀತನ ಪೂಜೆ ಯಾಗಕೆ ಕಳಸವಾಯ್ತೆಂದ