ಪದ್ಯ ೨: ಯಾವ ರೀತಿ ಭೀಷ್ಮರು ಕೃಷ್ಣನ ಲೀಲೆಯನ್ನು ಹೇಳುತ್ತೇನೆಂದರು?

ವರ ಋಷಿಗಳಾಜ್ಞೆಯಲಿ ವಿಶ್ವಂ
ಭರನ ವಿಷಯೀಕರಿಸಿ ರಾಜಾ
ಧ್ವರ ಸಮರ್ಥನ ಭವವಿನಾಶನ ಸುಪ್ರಯೋಜಕನ
ಅರಿವತೆರದಿಂದೆನ್ನ ಮತಿಗೋ
ಚರಿಸಿದುದ ಹೇಳುವೆನು ಕೃಷ್ಣನ
ಪರಮಲೀಲಾ ಲಲಿತ ಚರಿತವನೆಂದನಾ ಭೀಷ್ಮ (ಸಭಾ ಪರ್ವ, ೧೦ ಸಂಧಿ, ೨ ಪದ್ಯ)

ತಾತ್ಪರ್ಯ:
ಪರಮ ಶ್ರೇಷ್ಠ ಋಷಿ ಮುನಿಗಳ ಅಪ್ಪಣೆಯನ್ನು ಪಡೆದು, ವಿಶ್ವವನ್ನೇ ತುಂಬಿರುವವನನ್ನು, ವಿಷಯವನ್ನಾಗಿ ಮಾಡಿಕೊಳ್ಳುತ್ತೇನೆ, ಅವನ ಸ್ಮರಣೆ ಕೀರ್ತನೆಗಳಿಗೆ ಹುಟ್ಟು ಸಾವುಗಳ ವಿಷವರ್ತುಲವಾದ ಸಂಸರವು ಇಲ್ಲದಂತಾಗುವುದೇ ಪ್ರಯೋಜನ. ಅಂತಹವನನ್ನು ನನ್ನ ಮತಿಗೆ ತೋರಿದಂತೆ ನಾನು ತಿಳಿದಂತೆ ಶ್ರೀಕೃಷ್ಣನ ಸುಂದರವಾದ ಹೆಚ್ಚಿನದಾದ ಚರಿತ್ರೆಯನ್ನು ಹೇಳುತ್ತೇನೆ ಎಂದು ಭೀಷ್ಮರು ತಿಳಿಸಿದರು.

ಅರ್ಥ:
ವರ: ಶ್ರೇಷ್ಠ; ಋಷಿ: ಮುನಿ; ಆಜ್ಞೆ: ಅಪ್ಪಣೆ; ವಿಶ್ವಂಭರ: ವಿಶ್ವವನ್ನು ತುಂಬಿದವ; ವಿಶ್ವ: ಜಗತ್ತು; ಅಂಬರ: ಆಕಾಶ; ವಿಷಯ: ವಿಚಾರ; ರಾಜ: ನೃಪ; ಅಧ್ವರ: ಯಜ್ಞ; ರಾಜಾಧ್ವರ: ರಾಜಸೂಯ ಯಜ್ಞ; ಸಮರ್ಥ: ಶಕ್ತಿಶಾಲಿಯಾದುದು; ಭವ: ಇರುವಿಕೆ, ಅಸ್ತಿತ್ವ; ವಿನಾಶ: ಹಾಳು; ಪ್ರಯೋಜಕ: ಉಪಯೋಗ; ಅರಿ: ತಿಳಿ; ಮತಿ: ಬುದ್ಧಿ; ಗೋಚರಿಸು: ತೋರು; ಹೇಳು: ತಿಳಿಸು; ಪರಮ: ಶ್ರೇಷ್ಠ; ಲೀಲಾ: ಮಾಯೆ; ಲಲಿತ: ಸುಂದರವಾದ; ಚರಿತ: ಕಥೆ;

ಪದವಿಂಗಡಣೆ:
ವರ +ಋಷಿಗಳ್+ಆಜ್ಞೆಯಲಿ +ವಿಶ್ವಂ
ಭರನ +ವಿಷಯೀಕರಿಸಿ+ ರಾಜ
ಅಧ್ವರ +ಸಮರ್ಥನ +ಭವವಿನಾಶನ+ ಸುಪ್ರಯೋಜಕನ
ಅರಿವ+ತೆರದಿಂದ್+ಎನ್ನ +ಮತಿಗೋ
ಚರಿಸಿದುದ +ಹೇಳುವೆನು +ಕೃಷ್ಣನ
ಪರಮಲೀಲಾ +ಲಲಿತ +ಚರಿತವನೆಂದನಾ +ಭೀಷ್ಮ

ಅಚ್ಚರಿ:
(೧) ಕೃಷ್ಣನನ್ನು ಹೊಗಳಿದ ಬಗೆ – ಭವವಿನಾಶನ, ಸುಪ್ರಯೋಜಕನ
(೨) ಭೀಷ್ಮರು ವಿನಯಗುಣ – ಅರಿವತೆರದಿಂದೆನ್ನ ಮತಿಗೋಚರಿಸಿದುದ ಹೇಳುವೆನು ಕೃಷ್ಣನ
ಪರಮಲೀಲಾ ಲಲಿತ ಚರಿತವನೆಂದನಾ ಭೀಷ್ಮ

ನಿಮ್ಮ ಟಿಪ್ಪಣಿ ಬರೆಯಿರಿ