ಪದ್ಯ ೧: ಭೀಷ್ಮರು ಕೃಷ್ಣನ ಲೀಲೆಯನ್ನು ಹೇಳಲು ಹೇಗೆ ಸಿದ್ಧರಾದರು?

ಕೇಳು ಜನಮೇಜಯ ಧರಿತ್ರೀ
ಪಾಲ ವಿರಚಿತ ಪದಯುಗ ಪ್ರ
ಕ್ಷಾಳನಾಚಮನೀಯ ತತ್ಪರಿಶುದ್ಧ ಭಾವದಲಿ
ಆ ಲಲಿತ ತಲ್ಪದ ಯಶೋದಾ
ಬಾಲಕಂಗಭಿನಮಿಸಿ ನಿಮಿಷನಿ
ಮೀಲಿತಾಕ್ಷನು ಕಂದೆರೆದು ಮುನಿಜನಕೆ ಕೈ ಮುಗಿದು (ಸಭಾ ಪರ್ವ, ೧೦ ಸಂಧಿ, ೧ ಪದ್ಯ)

ತಾತ್ಪರ್ಯ:
ಕೇಳು ಜನಮೇಜಯ ರಾಜ, ಭೀಷ್ಮನು ಶ್ರೀಕೃಷ್ಣನ ಲೀಲೆಗಳನ್ನು ಹೇಳುವುದಕ್ಕೂ ಮೊದಲು ತನ್ನ ಎರಡು ಪಾದಗಳನ್ನು ತೊಳೆದುಕೊಂಡು, ಆಚಮನವನ್ನು ಮಾಡಿ, ಪರಿಶುದ್ಧನಾಗಿ ಸುಂದರ ಹಾಸಿನಲ್ಲಿ ಮಲಗಿದ ಯಶೋದಾನಂದನನಿಗೆ ನಮಸ್ಕರಿಸಿ ಕಣ್ಣು ಮುಚ್ಚಿಕೊಂಡು, ತೆರೆದು ಮುನಿಗಳಿಗೆ ನಮಸ್ಕರಿಸಿದನು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ವಿರಚಿತ: ನಿರ್ಮಿಸಲ್ಪಟ್ಟ; ಪದ: ಪಾದ, ಚರಣ; ಪದಯುಗ: ಪಾದದ್ವಯ; ಪ್ರಕ್ಷಾಳ: ತೊಳೆದು; ಆಚಮನ:ಅಂಗೈಯಲ್ಲಿ ನೀರನ್ನು ಹಾಕಿಕೊಂಡು ಮಂತ್ರಪೂರ‍್ವಕವಾಗಿ ಸೇವಿಸುವುದು; ಪರಿಶುದ್ಧ: ನಿರ್ಮಲ; ಭಾವ: ಭಕ್ತಿಯ ರಹಸ್ಯ; ಲಲಿತ: ಚೆಲುವಾದ, ಸುಂದರವಾದ; ತಲ್ಪ: ಹಾಸಿಗೆ, ಶಯ್ಯೆ, ಸುಪ್ಪತ್ತಿಗೆ; ಬಾಲಕ: ಚಿಕ್ಕ ಹುಡುಗ; ಅಭಿನಮಿಸಿ: ನಮಸ್ಕರಿಸಿ; ನಿಮಿಷ: ಕಣ್ಣು ಮುಚ್ಚಿತೆಗೆಯುವಷ್ಟು ಕಾಲ; ನಿಮೀಲಿತಾಕ್ಷ: ಮುಚ್ಚಿದ ಕಣ್ಣುಳ್ಳವನು; ಕಂದೆರೆದು: ಕಣ್ಣನ್ನು ತೆರೆದು; ಮುನಿ: ಋಷಿ; ಜನ: ಸಮೂಹ; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಕೇಳು+ ಜನಮೇಜಯ +ಧರಿತ್ರೀ
ಪಾಲ +ವಿರಚಿತ +ಪದಯುಗ +ಪ್ರ
ಕ್ಷಾಳನ್+ಆಚಮನೀಯ +ತತ್+ಪರಿಶುದ್ಧ+ ಭಾವದಲಿ
ಆ +ಲಲಿತ+ ತಲ್ಪದ +ಯಶೋದಾ
ಬಾಲಕಂಗ್+ಅಭಿನಮಿಸಿ +ನಿಮಿಷ+ನಿ
ಮೀಲಿತಾಕ್ಷನು+ ಕಂದೆರೆದು+ ಮುನಿಜನಕೆ+ ಕೈ +ಮುಗಿದು

ಅಚ್ಚರಿ:
(೧) ಕೃಷ್ಣನ ವರ್ಣನೆ – ಆ ಲಲಿತ ತಲ್ಪದ ಯಶೋದಾಬಾಲಕಂಗಭಿನಮಿಸಿ
(೨) ಭಕ್ತಿ ಭಾವದ ವರ್ಣನೆ – ನಿಮಿಷನಿಮೀಲಿತಾಕ್ಷನು ಕಂದೆರೆದು

ನಿಮ್ಮ ಟಿಪ್ಪಣಿ ಬರೆಯಿರಿ