ಪದ್ಯ ೪೬: ಭೀಷ್ಮರು ಯುಧಿಷ್ಠಿರನಿಗೆ ಏನು ಹೇಳಿದರು?

ಎಲೆ ಮರುಳೆ ಭೂಪಾಲ ನೊರಜಿನ
ಕಳಕಳಕೆ ಕರಿ ಬೆಚ್ಚುವುದೆ ಮಂ
ಡಳಿಯ ಮರಿ ಮಿಡುಕಿದರೆ ಕಳವಳಿಸುವುದೆ ಕಲಿಸಿಂಹ
ಗಿಳಿಯ ಮುರಕಕೆ ಗಿಡಗನಗಿದ
ವ್ವಳಿಸುವುದೆ ಹರಿಗಿವನು ಗಣ್ಯನೆ
ಗಳಹನಿವನೊಡನಾವುದನುನಯವೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೪೬ ಪದ್ಯ)

ತಾತ್ಪರ್ಯ:
ಧರ್ಮರಾಯನು ಉತ್ತರೀಯವನ್ನು ಹಿಡಿದು ಶಿಶುಪಾಲನನ್ನು ತಡೆಯಲು, ಎಲೈ ರಾಜ ನಿನಗೆಲ್ಲೋ ಹುಚ್ಚು, ಚಿಕ್ಕ ಹುಳುವಿನ ಸದ್ದಿಗೆ ಆನೆಯು ಹೆದರುವುದೇ? ಬೆಕ್ಕಿನ ಮರಿಯು ಕಿರುಚಾಡಿದರೆ ಸಿಂಹಕ್ಕೆ ಕಳವಳವಾಗುತ್ತದೆಯೇ? ಗಿಳಿಯು ಜೋರು ಮಾಡಿದರೆ ಗಿಡುಗವು ಬೆದರುತ್ತದೆಯೇ? ಶ್ರೀಕೃಷ್ಣನಿಗೆ ಇವನೋಬ್ಬ ಲಿಕ್ಕವೇ? ಬಾಯಿಬಡುಕನಾದ ಇವನೊಡನೆ ಅನುನಯದ ಮಾತೇಕೆ ಎಂದು ಭೀಷ್ಮರು ನುಡಿದರು.

ಅರ್ಥ:
ಮರುಳ:ತಿಳಿಗೇಡಿ, ದಡ್ಡ, ಹುಚ್ಚ; ಭೂಪಾಲ: ರಾಜ; ನೊರಜು: ಸಣ್ಣ ಕೀಟ, ಅಲ್ಪ; ಕಳಕಳ: ಉದ್ವಿಘ್ನತೆ; ಕರಿ: ಆನೆ; ಬೆಚ್ಚು: ಭಯ, ಹೆದರಿಕೆ; ಮಂಡಲಿ: ಬೆಕ್ಕು; ಮರಿ: ಎಳೆಯದು, ಕೂಸು; ಮಿಡುಕು: ನಡುಕ, ಕಂಪನ; ಕಳವಳ: ಚಿಂತೆ; ಕಲಿ: ಶೂರ; ಸಿಂಹ: ಕೇಸರಿ; ಗಿಳಿ: ಶುಕ; ಮುರಕ: ಸೊಕ್ಕು, ಗರ್ವ; ಗಿಡುಗ: ಒಂದು ಬಗೆಯ ಹಕ್ಕಿ, ಹದ್ದು; ಅವ್ವಳಿಸು: ಆರ್ಭಟಿಸು; ಹರಿ: ಕೃಷ್ಣ; ಗಣ್ಯ: ಶ್ರೇಷ್ಠ; ಅನುನಯ: ನಯವಾದ ಮಾತುಗಳಿಂದ ಮನವೊಲಿಸುವುದು; ಗಳಹ: ಅತಿಯಾಗಿ ಹರಟುವ; ಒಡನೆ: ಜೊತೆ;

ಪದವಿಂಗಡಣೆ:
ಎಲೆ +ಮರುಳೆ +ಭೂಪಾಲ +ನೊರಜಿನ
ಕಳಕಳಕೆ +ಕರಿ+ ಬೆಚ್ಚುವುದೆ+ ಮಂ
ಡಳಿಯ +ಮರಿ +ಮಿಡುಕಿದರೆ+ ಕಳವಳಿಸುವುದೆ +ಕಲಿಸಿಂಹ
ಗಿಳಿಯ +ಮುರಕಕೆ+ ಗಿಡಗನಗಿದ್
ಅವ್ವಳಿಸುವುದೆ +ಹರಿಗಿವನು+ ಗಣ್ಯನೆ
ಗಳಹನ್+ಇವನೊಡನ್+ಆವುದ್+ಅನುನಯವ್+ಎಂದನಾ ಭೀಷ್ಮ

ಅಚ್ಚರಿ:
(೧) ಉಪಮಾನಗಳ ಬಳಕೆ – ನೊರಜಿನ ಕಳಕಳಕೆ ಕರಿ ಬೆಚ್ಚುವುದೆ, ಮಂಡಳಿಯ ಮರಿ ಮಿಡುಕಿದರೆ ಕಳವಳಿಸುವುದೆ ಕಲಿಸಿಂಹ, ಗಿಳಿಯ ಮುರಕಕೆ ಗಿಡಗನಗಿದ
ವ್ವಳಿಸುವುದೆ

ಪದ್ಯ ೪೫: ಧರ್ಮರಾಯನು ಶಿಶುಪಾಲನನ್ನು ಹೇಗೆ ಕರೆತಂದನು?

ಅರಿಯರೇ ಮುನಿ ಮುಖ್ಯರೀತನ
ನುರುವ ದೈವವಿದೆಂದು ನೀ ಕ
ಟ್ಟರಿತಗಾರನೆ ರಾಯರಿದೆಲಾ ಸಕಲ ಗುಣಯುತರು
ಕರುಬತನದಲಿ ನೀನಕಟ ತೆರ
ನರಿಯದೆಂಬರೆ ಬಾರೆನುತ ಮುಂ
ಜೆರಗ ಹಿಡಿದೆಳೆದವನ ತಂದನು ಭೂಪಜನ ಸಹಿತ (ಸಭಾ ಪರ್ವ, ೯ ಸಂಧಿ, ೪೫ ಪದ್ಯ)

ತಾತ್ಪರ್ಯ:
ಶಿಶುಪಾಲನೇ, ಇಲ್ಲಿರುವ ಪ್ರಮುಖ ಋಷಿಮುನಿಗಳು ಶೀಕೃಷ್ಣನು ಹೆಚ್ಚಿನ ದೇವರೆಂದು ತಿಳಿದಿಲ್ಲವೇ? ನೀಣು ಅಂತಹ ಮಹಾವೀರನೇ, ಸಕಲಗುಣಗಳನ್ನುಳ್ಳ ರಾಜರು ಸುಮ್ಮನೇ ಇಲ್ಲವೇ? ಹೊಟ್ಟೆಯಕಿಚ್ಚಿನಿಂದ ನೀನು ತಿಳಿಯದೇ ಮಾತನಾಡಬಹುದೇ? ಎನ್ನುತ್ತಾ ಧರ್ಮರಾಜನು ಶಿಶುಪಾಲನ ಉತ್ತರೀಯವನ್ನು ಹಿಡಿದೆಳೆದು ಉಳಿದ ರಾಜರೊಡನೆ ಹಿಂದಕ್ಕೆ ಕರೆತಂದನು.

ಅರ್ಥ:
ಅರಿ: ತಿಳಿ; ಮುನಿ: ಋಷಿ; ಮುಖ್ಯ: ಪ್ರಮುಖ; ಉರು: ಹೆಚ್ಚಾದ, ಶ್ರೇಷ್ಠ; ದೈವ: ಭಗವಮ್ತ; ಕಟ್ಟರಿತಗಾರ: ವಿಶೇಷಜ್ಞಾನವುಳ್ಳ; ರಾಯ: ರಾಜ; ಸಕಲ: ಎಲ್ಲಾ; ಗುಣ: ನಡತೆ, ಸ್ವಭಾವ; ಕರುಬು: ಹೊಟ್ಟೆಕಿಚ್ಚುಪಡು; ಅಕಟ: ಅಯ್ಯೋ; ತೆರ: ಪದ್ಧತಿ; ಅರಿ: ತಿಳಿ; ಎಂಬರೆ: ಹೇಳಿದರೆ; ಬಾ: ಆಗಮಿಸು; ಮುಂಜೆರಗ: ಉತ್ತರೀಯ; ಹಿಡಿದು: ಗ್ರಹಿಸು,ಕೈಕೊಳ್ಳು; ಎಳೆ: ತನ್ನ ಕಡೆಗೆ ಸೆಳೆದುಕೊ; ತಂದನು: ಬರೆಮಾಡು; ಭೂಪ: ರಾಜ; ಜನ: ಸಮುದಾಯ; ಸಹಿತ: ಜೊತೆ;

ಪದವಿಂಗಡಣೆ:
ಅರಿಯರೇ +ಮುನಿ +ಮುಖ್ಯರ್+ಈತನನ್
ಉರುವ +ದೈವವಿದೆಂದು +ನೀ +ಕ
ಟ್ಟರಿತಗಾರನೆ+ ರಾಯರ್+ಇದೆಲಾ +ಸಕಲ+ ಗುಣಯುತರು
ಕರುಬತನದಲಿ+ ನೀನ್+ಅಕಟ +ತೆರನ್
ಅರಿಯದ್+ಎಂಬರೆ+ ಬಾರೆನುತ +ಮುಂ
ಜೆರಗ+ ಹಿಡಿದೆಳೆದವನ+ ತಂದನು+ ಭೂಪಜನ +ಸಹಿತ

ಅಚ್ಚರಿ:
(೧) ಕಟ್ಟರಿತಗಾರ – ಪದದ ಬಳಕೆ

ಪದ್ಯ ೪೪: ಧರ್ಮರಾಯನು ಶಿಶುಪಾಲನನ್ನು ಹೇಗೆ ತಡೆದನು?

ಶಿವಶಿವಾ ತಪ್ಪಾಯ್ತು ನಮ್ಮು
ತ್ಸವಕೆ ಬಂದವನಿಪನ ಗುಣ ದೋ
ಷವನು ನಾವೀಕ್ಷಿಸುವುದನುಚಿತವೆಂದು ವಿನಯದಲಿ
ಅವನಿಪತಿ ಬೆಂಬತ್ತಿ ಗಮನಕೆ
ತವಕಿಸುವ ಶಿಶುಪಾಲಕನ ಹಿಡಿ
ದವುಚಿದನು ಮಧುರೋಕ್ತಿಯಲಿ ನುಡಿಸಿದನು ಬೋಳೈಸಿ (ಸಭಾ ಪರ್ವ, ೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅಯ್ಯೋ ಭಗವಂತಾ, ನಮ್ಮ ಯಾಗಕ್ಕೆ ಬಂದ ರಾಜನ ಗುಣದೋಷಗಳನ್ನು ಎತ್ತಿ ಆಡುವುದು ಅನುಚಿತ, ತಪ್ಪಾಯಿತು, ಎಂದುಕೊಂಡು ಹೋಗಲು ಮುಂದಾಗಿದ್ದ ಶಿಶುಪಾಲನನ್ನು ತಡೆದು ಅಪ್ಪಿಕೊಂಡು ತಲೆಯನ್ನು ಸವರಿ ಮಧುರವಾಣಿಗಳಿಂದ ಮಾತಾಡಿಸಿದನು.

ಅರ್ಥ:
ತಪ್ಪು: ಸರಿಯಲ್ಲದ; ಉತ್ಸವ; ಸಮಾರಂಭ; ಬಂದ: ಆಗಮಿಸು; ಅವನಿಪ: ರಾಜ; ಗುಣ: ನಡತೆ, ಸ್ವಭಾವ; ದೋಷ: ಕುಂದು, ಕಳಂಕ; ಈಕ್ಷೀಸು: ನೋಡು; ಅನುಚಿತ: ಸರಿಯಲ್ಲದ; ವಿನಯ: ಒಳ್ಳೆಯತನ, ಸೌಜನ್ಯ; ಬೆಂಬತ್ತು: ಹಿಂಬಾಲಿಸು; ಗಮನ: ಹೋಗುವುದು; ತವಕ: ಆತುರ; ಹಿಡಿ: ಬಂಧಿಸು; ಅವುಚು: ಅಪ್ಪು; ಮಧುರ: ಸಿಹಿ; ಉಕ್ತಿ: ಮಾತು, ವಾಣಿ; ನುಡಿಸು: ಮಾತಾಡಿಸು; ಬೋಳೈಸು: ಸಂತೈಸು, ಸಮಾಧಾನ ಮಾಡು

ಪದವಿಂಗಡಣೆ:
ಶಿವಶಿವಾ +ತಪ್ಪಾಯ್ತು +ನಮ್ಮ
ಉತ್ಸವಕೆ +ಬಂದ್+ಅವನಿಪನ +ಗುಣ +ದೋ
ಷವನು +ನಾವ್+ಈಕ್ಷಿಸುವುದ್+ಅನುಚಿತವೆಂದು +ವಿನಯದಲಿ
ಅವನಿಪತಿ+ ಬೆಂಬತ್ತಿ+ ಗಮನಕೆ
ತವಕಿಸುವ+ ಶಿಶುಪಾಲಕನ +ಹಿಡಿದ್
ಅವುಚಿದನು +ಮಧುರ+ಉಕ್ತಿಯಲಿ +ನುಡಿಸಿದನು +ಬೋಳೈಸಿ

ಅಚ್ಚರಿ:
(೧) ಸರಿಯಲ್ಲದ ಕ್ರಮ – ಉತ್ಸವಕೆ ಬಂದವನಿಪನ ಗುಣ ದೋಷವನು ನಾವೀಕ್ಷಿಸುವುದನುಚಿತ
(೨) ಸಮಾಧಾನ ಪಡಿಸುವ ಬಗೆ – ಅವುಚಿದನು ಮಧುರೋಕ್ತಿಯಲಿ ನುಡಿಸಿದನು ಬೋಳೈಸಿ

ಪದ್ಯ ೪೩: ಶಿಶುಪಾಲನು ಸಭೆಯಿಂದ ಹೇಗೆ ಹೊರಟನು?

ನುಡಿಯದದು ಮೌನಗ್ರಹದ ಹೆಡ
ಗುಡಿಯಲಿದ್ದುದು ರಾಯ ಕುಲವವ
ಗಡೆಯನೆದ್ದನು ಸಿಂಹಪೀಠದಿ ನೋಡಿ ಕೆಲಬಲನ
ಕಡೆಯ ಝಣಝಣರವ ಮಸಗಲಿವ
ನೊಡನೆ ಹೊರವೊಂಟುದು ನೃಪಾಲಕ
ರೊಡಮುರುಚಿದರು ಹಿಡಿದ ಸಚಿವ ಪಸಾಯ್ತ ಮಂತ್ರಿಗಳ (ಸಭಾ ಪರ್ವ, ೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಸಭಾಸನದಲ್ಲಿದ್ದ ರಾಜರಾರು ಮಾತಾಡಲಿಲ್ಲ. ಮೌನದ ಭೂತಹಿಡಿದು ಮಾತು ಕತ್ತಿನ ಹಿಂಭಾಗದಲ್ಲಿ ನಿಂತಿತು ಶಿಶುಪಾಲನು ಸಿಂಹಾಸನದಿಂದ ಮೇಲೆದ್ದು ಕಡಗ ಝಣಝಣವೆಂದು ಸದ್ದು ಮಾಡಲು ರಾಜರೊಡನೆ ಸಭಾಸ್ಥಾನವನ್ನು ಬಿಟ್ಟು ಹೊರಹೊರಟನು. ಅವನ ಜೊತೆಯ ರಾಜರು ತಮ್ಮನ್ನು ತಡೆಯುವ ಮಂತ್ರಿಗಳನ್ನು ಹಿಂದಕ್ಕೆ ದಬ್ಬಿದರು.

ಅರ್ಥ:
ನುಡಿ: ಮಾತು; ಮೌನ: ಮಾತನಾಡದಿರುವಿಕೆ, ನೀರವತೆ; ಹೆಡಗುಡಿ: ಹೆಡಮುರಿಗೆ, ಹಿಂಭಾಗ; ರಾಯ: ರಾಜ; ಕುಲ: ವಂಶ; ಅವಗಡೆ: ಅಸಡ್ಡೆ; ಕಡೆ: ಪಕ್ಕ, ಕೊನೆ; ಸಿಂಹಪೀಠ: ಆಸನ; ನೋಡು: ವೀಕ್ಷಿಸು; ಕೆಲ: ಸ್ವಲ್ಪ; ಬಲ: ನೆರವು, ಸಹಾಯ, ಸೈನ್ಯ; ಕಡೆಯ: ಕಡಗ, ಕಾಲು ಅಥವಾ ಕೈಗೆ ತೊಡುವ ಆಭರಣ; ಝಣಝಣ: ಆಭರಣದ ಶಬ್ದ; ರವ: ಧ್ವನಿ; ಮಸಗು: ಹರಡು; ಹೊರವೊಂಟ: ತೆರಳು; ನೃಪಾಲ: ರಾಜ; ಮುರುಚು: ಹಿಂತಿರುಗಿಸು; ಪಸಾಯ್ತ: ಸಾಮಂತರಾಜ; ಮಂತ್ರಿ: ಸಚಿವ; ಹಿಡಿ: ಅವಲಂಬಿಸು;

ಪದವಿಂಗಡಣೆ:
ನುಡಿಯದದು+ ಮೌನಗ್ರಹದ+ ಹೆಡ
ಗುಡಿಯಲ್+ಇದ್ದುದು +ರಾಯ +ಕುಲವ್+ಅವ
ಗಡೆಯನ್+ಎದ್ದನು +ಸಿಂಹಪೀಠದಿ+ ನೋಡಿ +ಕೆಲಬಲನ
ಕಡೆಯ +ಝಣಝಣರವ+ ಮಸಗಲ್+ಇವ
ನೊಡನೆ +ಹೊರವೊಂಟುದು+ ನೃಪಾಲಕರ್
ಒಡ+ಮುರುಚಿದರು +ಹಿಡಿದ +ಸಚಿವ +ಪಸಾಯ್ತ +ಮಂತ್ರಿಗಳ

ಅಚ್ಚರಿ:
(೧) ನುಡಿಯದು, ಮೌನ – ಸಾಮ್ಯಾರ್ಥ ಪದ
(೨) ನೃಪ, ರಾಯ;ಸಚಿವ, ಮಂತ್ರಿ; – ಸಮನಾರ್ಥಕ ಪದ