ಪದ್ಯ ೩೦:ದುರ್ಯೋಧನನನ್ನು ಪಾಳೆಯಕ್ಕೆ ಹೇಗೆ ತಂದರು?

ಇತ್ತ ಪರವಶವಾದ ರಾಯನ
ತೆತ್ತಿಗರು ದಂಡಿಗೆಯೊಳೀತನ
ನೆತ್ತಿ ತಂದರು ಪಾಳೆಯಕೆ ದುಃಸ್ಥಿತಿಯ ಮೇಳೆಯಕೆ
ತೆತ್ತನೇ ಮಗನಸುವನಕಟ ಎ
ನುತ್ತ ಚಿಂತಾರಾಗದಲಿ ಕಡ
ಲತ್ತ ಹಾಯ್ದನು ಬಿಸುಟನಂಬುಜಮಿತ್ರನಂಬರವ (ಕರ್ಣ ಪರ್ವ, ೨೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕರ್ಣನ ಸಾವನ್ನು ನೋಡಿ ದುಃಖಸಾಗರದಲ್ಲಿ ಮೂರ್ಛಿತನಾಗಿದ್ದ ದುರ್ಯೋಧನನನ್ನು ಪಲ್ಲಕ್ಕಿಯಲ್ಲಿ ಅವ್ಯವಸ್ಥೆಯಲ್ಲಿ ಕೂಡಿದ್ದ ಕೌರವರ ಪಾಳೆಯಕ್ಕೆ ತಂದರು, ಸೂರ್ಯನು ತನ್ನ ಮಗನ ಸಾವನ್ನು ವೀಕ್ಷಿಸಿ ದುಃಖಭರಿತನಾಗಿ ನನ್ನ ಮಗನು ದೇಹವನ್ನು ಬಿಟ್ಟನೇ ಎಂದು ಚಿಂತಿಸುತ್ತಾ ಸಮುದ್ರದಲ್ಲಿ ಧುಮುಕಲು ಹೋದನು.

ಅರ್ಥ:
ಪರವಶ:ಬೇರೆಯವರಿಗೆ ಅಧೀನವಾಗಿರುವಿಕೆ, ಅಧೀನತೆ; ರಾಯ: ರಾಜ; ತೆತ್ತು:ಸಂಬಂಧಿಸಿರು; ದಂಡಿಗೆ: ಪಲ್ಲಕ್ಕಿ; ಎತ್ತು: ಮೇಲಕ್ಕೆತ್ತು; ತಂದರು: ಬರೆಮಾಡು; ಪಾಳೆ: ಬಿಡಾರ; ದುಃಸ್ಥಿತಿ: ಅವ್ಯವಸ್ಥೆ; ಮೇಳಯ: ಗುಂಪು; ತೆತ್ತು: ಬಿಡು; ಮಗ: ಸುತ; ಅಸು: ಪ್ರಾಣ; ಅಕಟ: ಅಯ್ಯೋ; ಚಿಂತೆ; ಯೋಚನೆ; ಕಡಲು: ಸಾಗರ; ಹಾಯ್ದು: ಜಾರು, ಲಂಘಿಸು; ಬಿಸುಟ: ಹೊರಹಾಕು; ಅಂಬುಜ: ಕಮಲ; ಅಂಬುಜಮಿತ್ರ: ಸೂರ್ಯ; ಅಂಬರ: ಗಗನ;

ಪದವಿಂಗಡಣೆ:
ಇತ್ತ +ಪರವಶವಾದ +ರಾಯನ
ತೆತ್ತಿಗರು+ ದಂಡಿಗೆಯೊಳ್+ಈತನನ್
ಎತ್ತಿ +ತಂದರು +ಪಾಳೆಯಕೆ +ದುಃಸ್ಥಿತಿಯ +ಮೇಳೆಯಕೆ
ತೆತ್ತನೇ+ ಮಗನ್+ಅಸುವನ್+ಅಕಟ+ ಎ
ನುತ್ತ +ಚಿಂತಾರಾಗದಲಿ +ಕಡ
ಲತ್ತ +ಹಾಯ್ದನು +ಬಿಸುಟನ್+ಅಂಬುಜಮಿತ್ರನ್+ಅಂಬರವ

ಅಚ್ಚರಿ:
(೧) ಸೂರ್ಯನನ್ನು ಅಂಬುಜಮಿತ್ರ ಎಂದು ಕರೆದಿರುವುದು
(೨) ಸೂರ್ಯಾಸ್ತವಾಯಿತು ಎಂದು ಹೇಳಲು – ಕಡಲತ್ತ ಹಾಯ್ದನು ಬಿಸುಟನಂಬುಜಮಿತ್ರನಂಬರವ
(೩) ಕೌರವರ ಪಾಳೆಯವನ್ನು ವಿವರಿಸುವ ಪದ – ದುಃಸ್ಥಿತಿಯ ಮೇಳೆಯಕೆ
(೪) ಚಿಂತೆಯಲ್ಲೂ ಸಂಗೀತವನ್ನು ಹುಡುಕುವ ಕವಿಯ ಪದ ಪ್ರಯೋಗ – ಚಿಂತಾರಾಗ

ನಿಮ್ಮ ಟಿಪ್ಪಣಿ ಬರೆಯಿರಿ