ಪದ್ಯ ೩೧: ಯಾರ್ಯಾರು ದೂರ ಸರಿದರು?

ದ್ಯುಮಣಿ ಕರ್ಣದ್ಯುಮಣಿಸಹಿತ
ಸ್ತಮಿಸೆ ಕಮಲಿನಿ ಕೌರವನ ಮುಖ
ಕಮಲ ಬಾಡಿತು ತಿಮಿರ ಹೆಚ್ಚಿತು ಶೋಕತಮದೊಡನೆ
ಅಮಳ ಚಕ್ರಾಂಗಕ್ಕೆ ಭೂಪೋ
ತ್ತಮನ ವಿಜಯಾಂಗನೆಗೆ ಅಗಲಿಕೆ
ಸಮನಿಸಿತು ಕೇಳಯ್ಯ ಜನಮೇಜಯ ಮಹೀಪಾಲ (ಕರ್ಣ ಪರ್ವ, ೨೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ಸೂರ್ಯನು, ಕರ್ಣಭಾಸ್ಕರನೂ ಅಸ್ತಂಗತರಾದರು, ತನ್ನ ಮಿತ್ರನನ್ನು ಕಾಣದೆ ಕಮಲ ಬಾಡಿದರೆ, ತನ್ನ ಆಪ್ತಮಿತ್ರನನ್ನು ಕಳೆದುಕೊಂಡ ದುಃಖದಿಂದ ದುರ್ಯೋಧನನ ಮುಖಕಮಲವು ಮುದುಡಿತು. ಅಂಧಕಾರವು ಹೆಚ್ಚುತ್ತಿದ್ದಂತೆ, ಕೌರವನ ಶೋಕದ ಅಂಧಕಾರವೂ ಹೆಚ್ಚಿತು. ಬಿಸುಲು ಹಕ್ಕಿಗೆ ಸೂರ್ಯನ ಅಗಲಿಕೆಯಾದರೆ, ಕೌರವನಿಗೆ ವಿಜಯಲಕ್ಷ್ಮಿಯ ಅಗಲಿಕೆ ಸಂಭವಿಸಿತು.

ಅರ್ಥ:
ದ್ಯುಮಣಿ: ಸೂರ್ಯ; ಸಹಿತ: ಜೊತೆ; ಅಸ್ತಮಿಸು: ಕಾಣಲಾಗು, ಸಾವು; ಕಮಲ: ಅಂಬುಜ; ಕಮಲಿನಿ: ತಾವರೆಯ ಬಳ್ಳಿ, ಕಮಲಗಳ ಗುಂಪು; ಮುಖ: ಆನನ; ಮುದುಡು: ಬಾಡು, ಸೊರಗು; ತಿಮಿರ: ಅಂಧಕಾರ; ಹೆಚ್ಚು: ಅಧಿಕವಾಗು; ಶೋಕ: ದುಃಖ; ಅಮಳ: ನಿರ್ಮಲ; ಚಕ್ರಾಂಗ: ಚಕ್ರವಾಕ ಪಕ್ಷಿ, ಬಿಸಿಲು ಹಕ್ಕಿ; ಭೂಪೋತ್ತಮ: ರಾಜರಲ್ಲಿ ಉತ್ತಮನಾದವ; ವಿಜಯಾಂಗನೆ: ವಿಜಯಲಕ್ಷ್ಮೀ; ಅಗಲಿಕೆ: ದೂರಹೋಗು; ಸಮನಿಸು: ಘಟಿಸು; ಕೇಳು: ಆಲಿಸು; ಮಹೀಪಾಲ: ರಾಜ;

ಪದವಿಂಗಡಣೆ:
ದ್ಯುಮಣಿ+ ಕರ್ಣದ್ಯುಮಣಿ+ಸಹಿತ್
ಅಸ್ತಮಿಸೆ +ಕಮಲಿನಿ+ ಕೌರವನ ಮುಖ
ಕಮಲ+ ಬಾಡಿತು +ತಿಮಿರ+ ಹೆಚ್ಚಿತು+ ಶೋಕತಮದೊಡನೆ
ಅಮಳ +ಚಕ್ರಾಂಗಕ್ಕೆ+ ಭೂಪೋ
ತ್ತಮನ +ವಿಜಯಾಂಗನೆಗೆ+ ಅಗಲಿಕೆ
ಸಮನಿಸಿತು +ಕೇಳಯ್ಯ +ಜನಮೇಜಯ +ಮಹೀಪಾಲ

ಅಚ್ಚರಿ:
(೧) ಅತ್ಯಂತ ಸುಂದರ ಪರಿಕಲ್ಪನೆಯ ಪದ್ಯ, ಎರಡು ವಿಷಯಗಳನ್ನು ಹೇಳುವ ಸಾಲುಗಳು
(೨) ಕರ್ಣನನ್ನು ಸೂರ್ಯನಿಗೆ ಹೋಲಿಸುವ ಪದ – ಕರ್ಣದ್ಯುಮಣಿ
(೩) ಮಹೀಪಾಲ, ಭೂಪ – ಸಮನಾರ್ಥಕ ಪದ
(೪) ಚಕ್ರಾಂಗ, ವಿಜಯಾಂಗ – ಪ್ರಾಸ ಪದ

ಪದ್ಯ ೩೦:ದುರ್ಯೋಧನನನ್ನು ಪಾಳೆಯಕ್ಕೆ ಹೇಗೆ ತಂದರು?

ಇತ್ತ ಪರವಶವಾದ ರಾಯನ
ತೆತ್ತಿಗರು ದಂಡಿಗೆಯೊಳೀತನ
ನೆತ್ತಿ ತಂದರು ಪಾಳೆಯಕೆ ದುಃಸ್ಥಿತಿಯ ಮೇಳೆಯಕೆ
ತೆತ್ತನೇ ಮಗನಸುವನಕಟ ಎ
ನುತ್ತ ಚಿಂತಾರಾಗದಲಿ ಕಡ
ಲತ್ತ ಹಾಯ್ದನು ಬಿಸುಟನಂಬುಜಮಿತ್ರನಂಬರವ (ಕರ್ಣ ಪರ್ವ, ೨೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕರ್ಣನ ಸಾವನ್ನು ನೋಡಿ ದುಃಖಸಾಗರದಲ್ಲಿ ಮೂರ್ಛಿತನಾಗಿದ್ದ ದುರ್ಯೋಧನನನ್ನು ಪಲ್ಲಕ್ಕಿಯಲ್ಲಿ ಅವ್ಯವಸ್ಥೆಯಲ್ಲಿ ಕೂಡಿದ್ದ ಕೌರವರ ಪಾಳೆಯಕ್ಕೆ ತಂದರು, ಸೂರ್ಯನು ತನ್ನ ಮಗನ ಸಾವನ್ನು ವೀಕ್ಷಿಸಿ ದುಃಖಭರಿತನಾಗಿ ನನ್ನ ಮಗನು ದೇಹವನ್ನು ಬಿಟ್ಟನೇ ಎಂದು ಚಿಂತಿಸುತ್ತಾ ಸಮುದ್ರದಲ್ಲಿ ಧುಮುಕಲು ಹೋದನು.

ಅರ್ಥ:
ಪರವಶ:ಬೇರೆಯವರಿಗೆ ಅಧೀನವಾಗಿರುವಿಕೆ, ಅಧೀನತೆ; ರಾಯ: ರಾಜ; ತೆತ್ತು:ಸಂಬಂಧಿಸಿರು; ದಂಡಿಗೆ: ಪಲ್ಲಕ್ಕಿ; ಎತ್ತು: ಮೇಲಕ್ಕೆತ್ತು; ತಂದರು: ಬರೆಮಾಡು; ಪಾಳೆ: ಬಿಡಾರ; ದುಃಸ್ಥಿತಿ: ಅವ್ಯವಸ್ಥೆ; ಮೇಳಯ: ಗುಂಪು; ತೆತ್ತು: ಬಿಡು; ಮಗ: ಸುತ; ಅಸು: ಪ್ರಾಣ; ಅಕಟ: ಅಯ್ಯೋ; ಚಿಂತೆ; ಯೋಚನೆ; ಕಡಲು: ಸಾಗರ; ಹಾಯ್ದು: ಜಾರು, ಲಂಘಿಸು; ಬಿಸುಟ: ಹೊರಹಾಕು; ಅಂಬುಜ: ಕಮಲ; ಅಂಬುಜಮಿತ್ರ: ಸೂರ್ಯ; ಅಂಬರ: ಗಗನ;

ಪದವಿಂಗಡಣೆ:
ಇತ್ತ +ಪರವಶವಾದ +ರಾಯನ
ತೆತ್ತಿಗರು+ ದಂಡಿಗೆಯೊಳ್+ಈತನನ್
ಎತ್ತಿ +ತಂದರು +ಪಾಳೆಯಕೆ +ದುಃಸ್ಥಿತಿಯ +ಮೇಳೆಯಕೆ
ತೆತ್ತನೇ+ ಮಗನ್+ಅಸುವನ್+ಅಕಟ+ ಎ
ನುತ್ತ +ಚಿಂತಾರಾಗದಲಿ +ಕಡ
ಲತ್ತ +ಹಾಯ್ದನು +ಬಿಸುಟನ್+ಅಂಬುಜಮಿತ್ರನ್+ಅಂಬರವ

ಅಚ್ಚರಿ:
(೧) ಸೂರ್ಯನನ್ನು ಅಂಬುಜಮಿತ್ರ ಎಂದು ಕರೆದಿರುವುದು
(೨) ಸೂರ್ಯಾಸ್ತವಾಯಿತು ಎಂದು ಹೇಳಲು – ಕಡಲತ್ತ ಹಾಯ್ದನು ಬಿಸುಟನಂಬುಜಮಿತ್ರನಂಬರವ
(೩) ಕೌರವರ ಪಾಳೆಯವನ್ನು ವಿವರಿಸುವ ಪದ – ದುಃಸ್ಥಿತಿಯ ಮೇಳೆಯಕೆ
(೪) ಚಿಂತೆಯಲ್ಲೂ ಸಂಗೀತವನ್ನು ಹುಡುಕುವ ಕವಿಯ ಪದ ಪ್ರಯೋಗ – ಚಿಂತಾರಾಗ

ಪದ್ಯ ೨೯: ಕರ್ಣನ ಸಾವಿಗೆ ತ್ರಿಮೂರ್ತಿಗಳು ಏನೆಂದರು?

ಅರಸ ನೀ ಸೈರಿಸಿದೆಲಾ ಶಂ
ಕರ ವಿರಿಂಚಾದಿಗಳು ಕರ್ಣನ
ಪರಮಸತ್ಯವ್ರತವ ಕೊಂಡಾಡಿದರು ಅಕಟೆನುತ
ಎರಡು ಥಟ್ಟಿನ ದುಃಖಮಯಸಾ
ಗರವ ಹವಣಿಸಲರಿಯೆನರ್ಜುನ
ತಿರುಗಿದನು ದುಮ್ಮಾನದಲಿ ಪಾಳೆಯಕೆ ಹರಿಸಹಿತ (ಕರ್ಣ ಪರ್ವ, ೨೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ನೀನು ಕರ್ಣನ ಸಾವಿನ ವೃತ್ತಾಂತವನ್ನು ಕೇಳಿ ಸಹಿಸಿಕೊಂಡಿರುವುದು ಆಶ್ಚರ್ಯ, ಶಿವ ಬ್ರಹ್ಮ ಮೊದಲಾದವರು ಕರ್ಣನ ಸಾವನ್ನು ಕಂಡು ಅಯ್ಯೋ ಎಂದು ಮರುಗಿದರು, ಕರ್ಣನ ಸತ್ಯವ್ರತವನ್ನು ಹೊಗಳಿದರು. ಎರಡು ಸೇನೆಗಳ ದುಃಖಸಾಗರದಲ್ಲಿ ಮುಳುಗಿದ್ದುದನ್ನು ನಾನು ವರ್ಣಿಸಲು ಅಶಕ್ತ, ಅರ್ಜುನನು ಅತೀವ ದುಃಖಭರಿತನಾಗಿ ಕೃಷ್ಣನೊಡನೆ ತನ್ನ ಪಾಳೆಯಕ್ಕೆ ಹಿಂದಿರುಗಿದನು.

ಅರ್ಥ:
ಅರಸ: ರಾಜ; ಸೈರಿಸು: ಸಹಿಸು; ಶಂಕರ: ಶಿವ, ಮಹಾದೇವ; ವಿರಿಂಚಿ: ಬ್ರಹ್ಮ; ಆದಿ: ಮುಂತಾದ; ಪರಮ: ಶ್ರೇಷ್ಠ; ಸತ್ಯವ್ರತ: ಸತ್ಯವಂತ; ಕೊಂಡಾಡು: ಹೊಗಳು; ಅಕಟ: ಅಯ್ಯೋ; ಥಟ್ಟು: ಗುಂಪು, ಸೇನೆ; ದುಃಖ: ಶೋಕ; ಸಾಗರ: ಸಮುದ್ರ; ಹವಣಿಸು: ಅಳತೆ ಮಾಡು, ತೂಗು; ಅರಿ: ತಿಳಿ; ತಿರುಗು: ಮರಳು; ದುಮ್ಮಾನ: ದುಃಖ; ಪಾಳೆ: ಬಿಡಾರ; ಹರಿ: ಕೃಷ್ಣ; ಸಹಿತ; ಜೊತೆ;

ಪದವಿಂಗಡಣೆ:
ಅರಸ+ ನೀ +ಸೈರಿಸಿದೆಲಾ+ ಶಂ
ಕರ+ ವಿರಿಂಚಾದಿಗಳು +ಕರ್ಣನ
ಪರಮ+ಸತ್ಯವ್ರತವ+ ಕೊಂಡಾಡಿದರು +ಅಕಟೆನುತ
ಎರಡು+ ಥಟ್ಟಿನ+ ದುಃಖಮಯ+ಸಾ
ಗರವ +ಹವಣಿಸಲ್+ಅರಿಯೆನ್+ಅರ್ಜುನ
ತಿರುಗಿದನು +ದುಮ್ಮಾನದಲಿ+ ಪಾಳೆಯಕೆ+ ಹರಿಸಹಿತ

ಅಚ್ಚರಿ:
(೧) ದುಃಖ, ದುಮ್ಮಾನ – ಸಮನಾರ್ಥಕ ಪದ
(೨) ದುಃಖದ ತೀವ್ರತೆ – ಅರಸ ನೀ ಸೈರಿಸಿದೆಲಾ, ದುಃಖಮಯಸಾಗರವ ಹವಣಿಸಲರಿಯೆ

ಪದ್ಯ ೨೮: ವಂದಿ ಮಾಗಧರು ಹೇಗೆ ದುಃಖಿಸಿದರು?

ಕಿತ್ತರೋ ಕಲ್ಪದ್ರುಮವ ಕೆಡೆ
ಗುತ್ತಿದರೊ ಸುರಧೇನುವನು ಕೈ
ವರ್ತಿಸಿದರೋ ಪರುಷವನು ಹಾ ಜಲಧಿ ಮಧ್ಯದಲಿ
ಎತ್ತಣದು ಭಾರತದ ರಣ ನಮ
ಗೆತ್ತಲರಸುತ ಬಂದುದಕಟಾ
ಮಿತ್ತುವೆಂದೊರಲಿದರು ವಂದಿಗಳೆರಡು ಥಟ್ಟಿನಲಿ (ಕರ್ಣ ಪರ್ವ, ೨೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ಎರಡೂ ಕಡೆಯ ವಂದಿ ಮಾಗಧರು ದುಃಖಪಟ್ಟರು, ಕಲ್ಪವೃಕ್ಷವನ್ನು ಕಿತ್ತು ಹಾಕಿದರು, ಕಾಮಧೇನುವನ್ನು ಇರಿದರು, ಸ್ಪರ್ಷಮಣಿಯನ್ನು ಸಮುದ್ರದ ಮಧ್ಯೆ ಎಸೆದರಲಾ, ಅಯ್ಯೋ ಈ ಮೃತ್ಯು ಸದೃಶವಾದ ಈ ಭಾರದ ಯುದ್ಧವೆಲ್ಲಿತ್ತೋ, ನಮ್ಮನ್ನು ಏಕೆ ಹುಡುಕಿಕೊಂಡು ಬಂದಿತೋ ಎಂದು ಗೋಳಿಟ್ಟರು.

ಅರ್ಥ:
ಕಿತ್ತು: ಹೊರಹಾಕು; ಕಲ್ಪದ್ರುಮ: ಕಲ್ಪವೃಕ್ಷ; ಕೆಡೆ: ಬೀಳು, ಕುಸಿ; ಕುತ್ತು: ಚುಚ್ಚು, ತಿವಿ; ಸುರಧೇನು: ಕಾಮಧೇನು; ಕೈವರ್ತಿಸು: ಅಧೀನಗೊಳಿಸು; ಪರುಷ: ಸ್ಪರ್ಷಮಣಿ; ಜಲಧಿ: ಸಾಗರ; ಮಧ್ಯ: ನಡುವೆ; ಎತ್ತಣ: ಎಲ್ಲಿಯ; ರಣ: ಯುದ್ಧ; ಅರಸುತ: ಹುಡುಕು; ಬಂದುದು: ಆಗಮಿಸು; ಅಕಟ: ಅಯ್ಯೋ; ಒರಲು: ಗೋಳಿಡು; ವಂದಿ: ಹೊಗಳುಭಟ್ಟರು; ಥಟ್ಟು: ಗುಂಪು;

ಪದವಿಂಗಡಣೆ:
ಕಿತ್ತರೋ +ಕಲ್ಪದ್ರುಮವ +ಕೆಡೆ
ಗುತ್ತಿದರೊ +ಸುರಧೇನುವನು+ ಕೈ
ವರ್ತಿಸಿದರೋ +ಪರುಷವನು+ ಹಾ +ಜಲಧಿ+ ಮಧ್ಯದಲಿ
ಎತ್ತಣದು +ಭಾರತದ +ರಣ +ನಮ
ಗೆತ್ತಲ್+ಅರಸುತ+ ಬಂದುದ್+ಅಕಟಾ
ಮಿತ್ತುವ್+ಎಂದ್+ಒರಲಿದರು +ವಂದಿಗಳ್+ಎರಡು +ಥಟ್ಟಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಲ್ಪದ್ರುಮವ ಕೆಡೆಗುತ್ತಿದರೊ, ಸುರಧೇನುವನು ಕೈ ವರ್ತಿಸಿದರೋ, ಪರುಷವನು ಹಾ ಜಲಧಿ ಮಧ್ಯದಲಿ

ಪದ್ಯ ೨೭: ಕರ್ಣನ ಸಾವಿನ ದುಃಖವು ಯಾರನ್ನು ಆವರಿಸಿತು?

ನರರ್ಗೆ ಸೈರಣೆಯೆತ್ತಣದು ಕರಿ
ತುರಗ ಕಂಬನಿಗರೆದುದದ್ಭುತ
ತರದ ಶೋಕಾಂಬುಧಿಯ ಸುಳಿಯಲಿ ಸಿಲುಕಿತೀ ಸೇನೆ
ಅರಸ ಕೇಳಾಚೆಯಲಿ ಭೀಮನ
ನರ ನಕುಲ ಸಹದೇವ ಸಾತ್ಯಕಿ
ಧರಣಿಪನ ದ್ರೌಪದಿಯ ಚಿಂತೆ ದುರಂತವಾಯ್ತೆಂದ (ಕರ್ಣ ಪರ್ವ, ೨೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎರಡೂ ಸೇನೆಗಳ ಯೋಧರು ಮಾತ್ರವಲ್ಲ, ಆನೆ, ಕುದುರೆಗಳೂ ಕಂಬನಿಗರೆದವು. ಶೋಕ ಸಮುದ್ರದ ಸುಳಿಯಲ್ಲಿ ಸೇನೆಗಳು ಸಿಕ್ಕು ಹಾಕಿಕೊಂಡವು. ರಾಜ ಧೃತರಾಷ್ಟ್ರ ಕೇಳು ಪಾಂಡವರ ಪಾಳಯದಲ್ಲಿ, ಭೀಮ, ಅರ್ಜುನ, ನಕುಲ, ಸಹದೇವ, ಸಾತ್ಯಕಿ, ಧರ್ಮರಾಯ, ದ್ರೌಪದಿಯರೂ ಉರುತರವಾಗಿ ದುಃಖಿಸಿದರು.

ಅರ್ಥ:
ನರ: ಮನುಷ್ಯ; ಸೈರಣೆ: ತಾಳ್ಮೆ, ಸಹನೆ; ಎತ್ತಣ:ಎಲ್ಲಿಯದು; ಕರಿ: ಆನೆ; ತುರಗ: ಅಶ್ವ; ಕಂಬನಿ: ಕಣ್ಣೀರು; ಎರೆದು: ಚೆಲ್ಲಿ; ಅದ್ಭುತ: ಆಶ್ಛರ್ಯ; ಶೋಕ: ದುಃಖ; ಅಂಬುಧಿ: ಸಾಗರ; ಸುಳಿ: ಚಕ್ರ; ಸಿಲುಕು: ಬಂಧಿಸು, ಕಟ್ಟಿಹಾಕು; ಸೇನೆ: ಸೈನ್ಯ; ಅರಸ: ರಾಜ; ಕೇಳು: ಆಲಿಸು; ನರ: ಅರ್ಜುನ; ಧರಣಿಪ: ರಾಜ (ಧರ್ಮರಾಯ); ಚಿಂತೆ: ಯೋಚನೆ; ದುರಂತ: ಕೊನೆಯಿಲ್ಲದುದು;

ಪದವಿಂಗಡಣೆ:
ನರರ್ಗೆ+ ಸೈರಣೆ+ಎತ್ತಣದು +ಕರಿ
ತುರಗ +ಕಂಬನಿಗರೆದುದ್+ಅದ್ಭುತ
ತರದ +ಶೋಕಾಂಬುಧಿಯ +ಸುಳಿಯಲಿ +ಸಿಲುಕಿತೀ +ಸೇನೆ
ಅರಸ+ ಕೇಳ್+ಆಚೆಯಲಿ +ಭೀಮನ
ನರ+ ನಕುಲ+ ಸಹದೇವ +ಸಾತ್ಯಕಿ
ಧರಣಿಪನ+ ದ್ರೌಪದಿಯ+ ಚಿಂತೆ +ದುರಂತವಾಯ್ತೆಂದ

ಅಚ್ಚರಿ:
(೧) ನರ ಪದದ ಬಳಕೆ – ಮನುಷ್ಯ ಮತ್ತು ಅರ್ಜುನ ಎಂದು ಹೇಳುವ ಪರಿ
(೨) ಹೆಚ್ಚಿನ ದುಃಖವನ್ನು ವಿವರಿಸುವ ಬಗೆ – ಅದ್ಭುತ ತರದ ಶೋಕಾಂಬುಧಿಯ ಸುಳಿಯಲಿ ಸಿಲುಕಿತೀ ಸೇನೆ

ಪದ್ಯ ೨೬: ಕರ್ಣನ ಸಾವನ್ನು ದುರ್ಯೋಧನನು ಹೇಗೆ ದುಃಖಿಸಿದನು -೨?

ರಾಯ ಹಮ್ಮೈಸಿದನು ಹಾ ರಾ
ಧೇಯ ಹಾ ರಾಧೇಯ ಹಾ ರಾ
ಧೇಯ ಹಾ ಎನ್ನಾನೆ ಬಾರೈ ನಿನ್ನ ತೋರೆನುತ
ಬಾಯಬಿಟ್ಟುದು ಕಯ್ಯ ಕೈದುವ
ಹಾಯಿಕಿತು ಕಂಬನಿಯ ಕಡಲೊಳು
ಹಾಯಿದೆದ್ದುದು ಹೊರಳುತಿರ್ದುದು ಕೂಡೆ ಪರಿವಾರ (ಕರ್ಣ ಪರ್ವ, ೨೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕರ್ಣನ ಸಾವು ದುರ್ಯೋಧನನಿಗೆ ಬಹಳ ದುಃಖವು ತಂದಿತು, ಅವನು ಗೋಳಾಡುತ್ತ, ಹಾ ಕರ್ಣಾ ಹಾ ರಾಧೇಯ ಹಾ ರಾಧೇಯ, ನನ್ನ ಬಲವೇ, ನನ್ನ ತಂದೆ, ಮೇಲೇಳು, ನನ್ನ ಮುಂದೆ ಕಾಣಿಸಿಕೋ ಎಂದು ಹೇಳುತ್ತಿರಲು ಉಳಿದ ಪರಿವಾರದವರು ಅವರ ಕೈಯಲ್ಲಿದ್ದ ಆಯುಧಗಳನ್ನು ಕೆಳಕ್ಕೆಸೆದು ಬಾಯಿ ಬಾಯಿ ಬಿಟ್ಟು ಕಣ್ಣೀರಿನ ಸಾಗರದಲ್ಲಿ ಹೊರಳಾಡಿದರು.

ಅರ್ಥ:
ರಾಯ: ರಾಜ, ಒಡೆಯ; ಹಮ್ಮೈಸು: ಗೋಳಾಡು, ದುಃಖಿಸು, ಮೂರ್ಛೆ ಹೋಗು; ರಾಧೇಯ: ಕರ್ಣ; ಎನ್ನಾನೆ: ನನ್ನ ಶಕ್ತಿಯೇ; ಬಾರೈ: ಬಾ, ಆಗಮಿಸು; ತೋರು: ಪ್ರಕಟಿಸು; ಬಾಯಿ: ಮುಖದ ಅಂಗ; ಬಿಟ್ಟು: ತೆರೆದು; ಕಯ್ಯ: ಹಸ್ತ; ಕೈದು: ಆಯುಧ; ಹಾಯಿಕು: ಎಸೆ, ಹೊರಹಾಕು; ಕಂಬನಿ: ಕಣ್ಣೀರು; ಕಡಲು: ಸಾಗರ; ಹಾಯಿ: ಮೇಲೆಬೀಳು, ಚಾಚು; ಎದ್ದು: ಮೇಲೇಳು; ಹೊರಳು: ಉರುಳಾದು; ಕೂಡೆ: ಜೊತೆ; ಪರಿವಾರ: ಸಂಬಂಧಿಕರು;

ಪದವಿಂಗಡಣೆ:
ರಾಯ +ಹಮ್ಮೈಸಿದನು +ಹಾ +ರಾ
ಧೇಯ +ಹಾ +ರಾಧೇಯ+ ಹಾ +ರಾ
ಧೇಯ +ಹಾ +ಎನ್ನಾನೆ+ ಬಾರೈ +ನಿನ್ನ+ ತೋರೆನುತ
ಬಾಯಬಿಟ್ಟುದು+ ಕಯ್ಯ+ ಕೈದುವ
ಹಾಯಿಕಿತು +ಕಂಬನಿಯ +ಕಡಲೊಳು
ಹಾಯಿದ್+ಎದ್ದುದು+ ಹೊರಳುತಿರ್ದುದು +ಕೂಡೆ +ಪರಿವಾರ

ಅಚ್ಚರಿ:
(೧) ರಾಧೇಯ – ೩ ಬಾರಿ ಪ್ರಯೋಗ
(೨) ನೋವನ್ನು ಚಿತ್ರಿಸಲು ಹಾ ಪದದ ಬಳಕೆ
(೩) ದುಃಖದ ಅಪಾರತೆಯನ್ನು ಹೇಳಲು – ಕಂಬನಿಯ ಕಡಲೊಳು ಹಾಯಿದೆದ್ದುದು ಹೊರಳುತಿರ್ದುದು

ಪದ್ಯ ೨೫: ಕರ್ಣನ ಸಾವನ್ನು ದುರ್ಯೋಧನನು ಹೇಗೆ ದುಃಖಿಸಿದನು?

ಕರ್ಣ ಹಾ ಹಾ ಸೂತಸುತ ಹಾ
ಕರ್ಣ ಹಾ ರಾಧಾತನುಜ ಹಾ
ಕರ್ಣ ಹಾ ಎನ್ನಾನೆ ಹಾ ಬಹಿರಂಗ ಜೀವನವೆ
ನಿರ್ಣಯವು ಕುರುಕುಲಕೆ ಹಾ ಹಾ
ಕರ್ಣ ಮಡಿದೈ ತಂದೆಯೆನುತವೆ
ನಿನ್ನ ಮಗ ರಥದಿಂದ ಧೊಪ್ಪನೆ ಕೆಡೆದನವನಿಯಲಿ (ಕರ್ಣ ಪರ್ವ, ೨೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕರ್ಣನ ಸಾವನ್ನು ಕಂಡ ದುರ್ಯೋಧನನು ದುಃಖತಪ್ತನಾದನು, ಅಯ್ಯೋ ಕರ್ಣ ಸೂತಪುತ್ರನೇ, ರಾಧಾ ಸುತನೇ, ನನ್ನ ಪ್ರಿಯ ಸಖನೆ, ನನ್ನ ಬಲವೇ, ನನ್ನ ಬಲಗೈಯಾಗಿದ್ದವನೇ, ಹಾ ಹಾ ನನ್ನ ದೇಹದ ಹೊರಗಿದ್ದ ನನ್ನ ಜೀವನವೇ ಹೋಯಿತೇ, ಕುರುಕುಲದ ನಾಶವು ನಿರ್ಣಯವಾಯಿತು, ಕರ್ಣಾ ನನ್ನಪ್ಪಾ ಮಡಿದೆಯಾ ಎಂದು ದುಃಖಿಸುತ್ತಾ ಧೊಪ್ಪನೆ ಭೂಮಿಗೆ ಬಿದ್ದನು ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದ.

ಅರ್ಥ:
ಸೂತ: ರಥವನ್ನು ಓಡಿಸುವವ; ಸುತ: ಮಗ; ತನುಜ: ಮಗ; ಎನ್ನಾನೆ: ನನ್ನ ಬಲಗೈಬಂಟ; ಬಹಿರಂಗ: ಹೊರಗಡೆ; ಜೀವನ: ಬದುಕು; ನಿರ್ಣಯ: ನಿರ್ಧಾರ; ಕುಲ: ವಂಶ; ಮಡಿ: ಸಾವು; ತಂದೆ: ಅಪ್ಪ; ಮಗ: ಪುತ್ರ; ರಥ: ಬಂಡಿ; ಧೊಪ್ಪನೆ: ಬೀಳುವ ಪರಿ, ಒಂದೇ ಬಾರಿ; ಕೆಡೆ: ಬೀಳು; ಅವನಿ: ಭೂಮಿ;

ಪದವಿಂಗಡಣೆ:
ಕರ್ಣ +ಹಾ +ಹಾ +ಸೂತಸುತ+ ಹಾ
ಕರ್ಣ +ಹಾ +ರಾಧಾತನುಜ+ ಹಾ
ಕರ್ಣ +ಹಾ +ಎನ್ನಾನೆ+ ಹಾ+ ಬಹಿರಂಗ +ಜೀವನವೆ
ನಿರ್ಣಯವು+ ಕುರುಕುಲಕೆ+ ಹಾ +ಹಾ
ಕರ್ಣ +ಮಡಿದೈ+ ತಂದೆ+ಎನುತವೆ
ನಿನ್ನ +ಮಗ+ ರಥದಿಂದ +ಧೊಪ್ಪನೆ +ಕೆಡೆದನ್+ಅವನಿಯಲಿ

ಅಚ್ಚರಿ:
(೧) ಮಗ, ಸುತ, ತನುಜ – ಸಮನಾರ್ಥಕ ಪದ
(೨) ಬೀಳುವುದನ್ನು ಚಿತ್ರಿಸುವ ಪದ – ಧೊಪ್ಪನೆ ಕೆಡೆದನವನಿಯಲಿ

ಪದ್ಯ ೨೪:ಬಿದ್ದ ಕರ್ಣನ ಶಿರವು ಹೇಗೆ ಕಂಡಿತು?

ಕಳಚಿ ದುರಿಯೋಧನನ ಬೆಳುಗೊಡೆ
ನೆಲಕೆ ಬೀಳ್ವಂದದಲಿ ಕೌರವ
ಕುಲದ ನಿಖಿಳೈಶ್ವರ್ಯವಿಳೆಗೊರ್ಗುಡಿಸಿ ಕೆಡೆವಂತೆ
ಥಳಥಳಿಪ ನಗೆಮೊಗದ ಗಂಟಿಕಿ
ಬಲಿದ ಹುಬ್ಬಿನ ಬಿಟ್ಟ ಕಂಗಳ
ಹೊಳೆವ ಹಲುಗಳ ಕರ್ಣಶಿರ ಕೆಡೆದುದು ಧರಿತ್ರಿಯಲಿ (ಕರ್ಣ ಪರ್ವ, ೨೭ ಸಂಧಿ, ೨೪ ಪದ್ಯ)

ತಾತ್ಪರ್ಯ:
ಅಂಜಲಿಕಾಸ್ತ್ರವು ಕರ್ಣನ ಕೊರಳನ್ನು ನಾಟಲು, ದುರ್ಯೋಧನನ ಶ್ವೇತ ಛತ್ರವು ಮುರಿದು ಕೆಳಗೆ ಬಿದ್ದಂತೆ, ಕುರುಕುಲದ ಸಮಸ್ತ ಐಶ್ವರ್ಯವೂ ಒಮ್ಮೆಯೇ ಭೂಮಿಗೆ ಬಿದ್ದಂತೆ ಗೋಚರಿಸಿತು. ಇತ್ತ ಕರ್ಣನ ಶಿರವು ಬಾಣದ ಪ್ರಭಾವದಿಂದ ಧರೆಗೆ ಉರುಳಿರಲು ಅದರಲ್ಲಿ ಹೊಳೆಹೊಳೆವ ನಗುಮುಖ, ಗಂಟಿಟ್ಟ ಹುಬ್ಬು, ಬಿಟ್ಟ ಕಣ್ಣುಗಳು, ಹೊಳೆಯುವ ಹಲ್ಲು ತೋರುತ್ತಿತ್ತು.

ಅರ್ಥ:
ಕಳಚು: ಕೆಳಕ್ಕೆ ಬೀಳು; ಬೆಳು: ಬಿಳಿ, ಶ್ವೇತ; ಕೊಡೆ: ಛತ್ರಿ; ನೆಲ: ಭೂಮಿ; ಬೀಳು: ಕುಸಿ; ಕುಲ: ವಂಶ; ನಿಖಿಳ: ಎಲ್ಲಾ, ಅಖಿಲ; ಐಶ್ವರ್ಯ: ಸಿರಿ, ಸಂಪತ್ತು; ಇಳೆ: ಭೂಮಿ; ಒರ್ಗುಡಿಸಿ: ಒಟ್ಟಿಗೆ; ಕೆಡೆ: ತಳ್ಳು, ನೂಕು; ಥಳಥಳ: ಹೊಳಪು; ನಗೆ: ಸಂತಸ; ಮೊಗ: ಮುಖ; ಗಂಟು: ಸೇರಿಸಿ ಕಟ್ಟಿದುದು; ಬಲಿ: ಗಟ್ಟಿ; ಹುಬ್ಬು: ಕಣ್ಣಿನ ಮೇಲಿರುವ ಕೂದಲು; ಬಿಟ್ಟ: ತೆರೆದ; ಕಂಗಳು: ನಯನ್; ಹೊಳೆ: ಪ್ರಕಾಶ, ಕಾಂತಿ; ಹಲು: ದಂತ; ಶಿರ: ತಲೆ; ಕೆಡೆ: ಬೀಳು, ಕುಸಿ; ಧರಿತ್ರಿ: ಭೂಮಿ;

ಪದವಿಂಗಡಣೆ:
ಕಳಚಿ +ದುರಿಯೋಧನನ+ ಬೆಳು+ಕೊಡೆ
ನೆಲಕೆ +ಬೀಳ್ವಂದದಲಿ +ಕೌರವ
ಕುಲದ+ ನಿಖಿಳ+ಐಶ್ವರ್ಯವ್+ಇಳೆಗ್+ಒರ್ಗುಡಿಸಿ +ಕೆಡೆವಂತೆ
ಥಳಥಳಿಪ +ನಗೆಮೊಗದ +ಗಂಟಿಕಿ
ಬಲಿದ+ ಹುಬ್ಬಿನ +ಬಿಟ್ಟ +ಕಂಗಳ
ಹೊಳೆವ +ಹಲುಗಳ +ಕರ್ಣ+ಶಿರ+ ಕೆಡೆದುದು +ಧರಿತ್ರಿಯಲಿ

ಅಚ್ಚರಿ:
(೧) ನಗುತ್ತಾ ಪ್ರಾಣ ಬಿಟ್ಟನು – ಥಳಥಳಿಪ ನಗುಮೊದಗ
(೨) ಕರ್ಣನ ಸಾವು ತಂದ ಅಪಾರ ಹಾನಿ – ಕೌರವ ಕುಲದ ನಿಖಿಳೈಶ್ವರ್ಯವಿಳೆಗೊರ್ಗುಡಿಸಿ ಕೆಡೆವಂತೆ

ಪದ್ಯ ೨೩: ಕರ್ಣನ ದೇಹವು ಹೇಗೆ ತೋರಿತು?

ಬಲುವಿಡಿಯ ಬಿಲು ವಾಮದಲಿ ಬೆರ
ಳೊಲಗೆ ಸವಡಿಸಿ ತೆಗೆವ ತಿರುವಿನ
ಹಿಳುಕು ನಿಮಿರಿದ ತೋಳ ತೋರಿಕೆ ಬಲದ ಭಾಗದಲಿ
ಬಲಿದ ಮಂಡಿಯ ಬಾಗಿದೊಡಲಿನ
ಹೊಳೆವ ತನುಕಾಂತಿಯ ಮಹೀಪತಿ
ತಿಲಕ ಕೇಳೈ ಕರ್ಣನೆಸೆದನು ರಥದ ಮಧ್ಯದಲಿ (ಕರ್ಣ ಪರ್ವ, ೨೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ಎಲೈ ರಾಜ ಕೇಳು, ತನ್ನ ಎಡಕೈಯಲ್ಲಿ ದೃಢವಾಗಿ ಹಿಡಿದ ಬಿಲ್ಲು, ಬೆರಳನ್ನು ಜೋಡಿಸಿ ತನ್ನ ದೇಹಕ್ಕೆ ನಾಟಿದ ಬಾಣವನ್ನು ತೆಗೆಯುತ್ತಿದ್ದ ಉಬ್ಬಿದ ಬಲಗೈ, ಮಂಡಿಯನ್ನೂರಿ ಹೊಳೆಯುತ್ತಿರುವ ದೇಹವನ್ನು ಬಾಗಿಸಿದ ಭಂಗಿ ರಥದ ಮಧ್ಯದಲ್ಲಿ ಕರ್ಣನ ದೇಹವು ರಾರಾಜಿಸಿತು

ಅರ್ಥ:
ಬಲು: ಬಲವಾಗಿ, ದೃಢ; ವಿಡಿ: ಹಿಡಿ; ಬಿಲು: ಬಿಲ್ಲು; ವಾಮ: ಎಡ; ಬೆರಳು: ಅಂಗುಲಿ; ಸವಡಿಸು: ಕೂಡಿಸು; ತೆಗೆ: ಹೊರಹಾಕು; ತಿರುವು: ಸುತ್ತು, ಸುರುಳಿ; ಹಿಳುಕು: ಬಾಣದ ಹಿಂಭಾಗ; ನಿಮಿರು: ನೆಟ್ಟಗಾಗು, ಎದ್ದುನಿಲ್ಲು; ತೋಳು: ಭುಜ; ತೋರು: ಗೋಚರಿಸು; ಬಲ: ದಕ್ಷಿಣ ಪಾರ್ಶ್ವ; ಭಾಗ: ಕಡೆ; ಬಲಿ: ಗಟ್ಟಿ; ಮಂಡಿ: ಮೊಳಕಾಲು; ಬಾಗು: ಬಗ್ಗು, ಮಣಿ; ಒಡಲು: ದೇಹ; ಹೊಳೆ: ಪ್ರಕಾಶಿಸು; ತನು: ದೇಹ; ಕಾಂತಿ: ಹೊಳಪು; ಮಹೀಪತಿ: ರಾಜ; ತಿಲಕ: ಶ್ರೇಷ್ಠ; ಕೇಳು: ಆಲಿಸು; ಎಸೆ: ತೋರು; ರಥ: ಬಂಡಿ, ತೇರು; ಮಧ್ಯ: ನಡು;

ಪದವಿಂಗಡಣೆ:
ಬಲುವಿಡಿಯ+ ಬಿಲು +ವಾಮದಲಿ +ಬೆರ
ಳೊಳಗೆ +ಸವಡಿಸಿ +ತೆಗೆವ +ತಿರುವಿನ
ಹಿಳುಕು+ ನಿಮಿರಿದ+ ತೋಳ +ತೋರಿಕೆ +ಬಲದ +ಭಾಗದಲಿ
ಬಲಿದ+ ಮಂಡಿಯ +ಬಾಗಿದ್+ಒಡಲಿನ
ಹೊಳೆವ +ತನುಕಾಂತಿಯ +ಮಹೀಪತಿ
ತಿಲಕ+ ಕೇಳೈ +ಕರ್ಣನ್+ಎಸೆದನು+ ರಥದ+ ಮಧ್ಯದಲಿ

ಅಚ್ಚರಿ:
(೧) ಜೋಡಿ ಪದಗಳು – ತೆಗೆವ ತಿರುವಿನ; ತೋಳ ತೋರಿಕ; ಬಲದ ಭಾಗದಲಿ ಬಲಿದ; ಬಲುವಿಡಿಯ ಬಿಲು