ಪದ್ಯ ೪೪: ಕೃಷ್ಣನು ಅರ್ಜುನನನ್ನು ಯಾವುದಕ್ಕೆ ಪ್ರೇರೇಪಿಸಿದನು?

ಕೊಲ್ಲನೇ ಅಭಿಮನ್ಯುವನು ಹಗೆ
ಯಲ್ಲವೇ ಮಾರುತಿಯ ಕೊರಳನು
ಬಿಲ್ಲ ಕೊಪ್ಪಿನೊಳೆಳೆಯನೇ ಕೆಡೆಯೆಸನೆ ಧರ್ಮಜನ
ಖುಲ್ಲನೀತಿಯ ನೆನೆಯದಿರು ನೀ
ನೆಲ್ಲಿಯವನೀ ವೈರಿ ಕರ್ಣನ
ದೆಲ್ಲಿಯವನೆಸು ಮರುಳೆ ಎಂದನು ನಿಜವ ತೋರಿಸದೆ (ಕರ್ಣ ಪರ್ವ, ೨೬ ಸಂಧಿ, ೪೪ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ಕರ್ಣನು ನಿನ್ನ ಮಗ ಅಭಿಮನ್ಯುವನ್ನು ಕೊಲ್ಲಲಿಲ್ಲವೇ? ನಿಮ್ಮ ವೈರಿಯಲ್ಲವೇ? ಭೀಮನ ಕೊರಳನ್ನು ಬಿಲ್ಲಕೊಪ್ಪಿನಿಂದ ಎಳೆಯಲಿಲ್ಲವೇ? ಧರ್ಮಜನು ಬೀಳುವಂತೆ ಇವನು ಹೊಡೆಯಲಿಲ್ಲವೇ? ದುಷ್ಟ ನೀತಿಯನ್ನು ಅನುಸರಿಸಬೇಡ, ನೀನೆಲ್ಲಿ ಈ ಕರ್ಣನೆಲ್ಲಿ, ಬಾಣದಿಂದ ಹೊಡೆದು ಕೆಡುವು ಇವನನ್ನು ಎಂದು ಕೃಷ್ಣನು ಅರ್ಜುನನಿಗೆ ಹೇಳಿದನು.

ಅರ್ಥ:
ಕೊಲ್ಲು: ಸಾಯಿಸು; ಹಗೆ: ವೈರಿ; ಮಾರುತಿ: ಭೀಮ; ಕೊರಳು: ಗಂಟಲು; ಕೊಪ್ಪು: ಬಿಲ್ಲಿನ ಕೊನೆ; ಎಳೆ: ತನ್ನ ಕಡೆಗೆ ಸೆಳೆದುಕೊ; ಕೆಡೆ: ಕೆಟ್ಟದ್ದು; ಖುಲ್ಲ: ದುಷ್ಟ, ನೀಚ; ನೀತಿ: ಒಯ್ಯುವಿಕೆ; ನೆನೆ: ಜ್ಞಾಪಿಸಿಕೊ; ವೈರಿ: ಶತ್ರು; ಎಸು: ಬಾಣ ಬಿಡು; ಮರುಳು: ಹುಚ್ಚ; ನಿಜ: ದಿಟ; ತೋರು: ಗೋಚರಿಸು, ಪ್ರದರ್ಶಿಸು;

ಪದವಿಂಗಡಣೆ:
ಕೊಲ್ಲನೇ +ಅಭಿಮನ್ಯುವನು +ಹಗೆ
ಯಲ್ಲವೇ +ಮಾರುತಿಯ +ಕೊರಳನು
ಬಿಲ್ಲ +ಕೊಪ್ಪಿನೊಳ್+ಎಳೆಯನೇ+ ಕೆಡೆಯೆಸನೆ +ಧರ್ಮಜನ
ಖುಲ್ಲ+ನೀತಿಯ +ನೆನೆಯದಿರು +ನೀ
ನೆಲ್ಲಿ+ಅವನ್+ಈ+ ವೈರಿ +ಕರ್ಣನದ್
ಎಲ್ಲಿಯವನ್+ಎಸು +ಮರುಳೆ +ಎಂದನು +ನಿಜವ +ತೋರಿಸದೆ

ಅಚ್ಚರಿ:
(೧) ಹಗೆ, ವೈರಿ – ಸಮನಾರ್ಥಕ ಪದ
(೨) ಅರ್ಜುನನಿಗೆ ಬುದ್ಧಿವಾದ ನೀಡುವ ಪರಿ – ಖುಲ್ಲನೀತಿಯ ನೆನೆಯದಿರು, ವೈರಿ ಕರ್ಣನ
ದೆಲ್ಲಿಯವನೆಸು ಮರುಳೆ ಎಂದನು ನಿಜವ ತೋರಿಸದೆ

ಪದ್ಯ ೪೩: ಅರ್ಜುನನಿಗೆ ಕರ್ಣನ ಯಾವ ಗುಣಗಳನ್ನು ಕೃಷ್ಣ ಹೇಳಿದ?

ಕೇಡಹೊತ್ತಿಸಿ ನಿಮ್ಮ ಬೇಂಟೆಯ
ನಾಡಿಸಿದನಿವ ಜೂಜನಾಡಿಸಿ
ನಾಡ ಕೊಳಿಸಿದ ಹಿಸುಣನಿವ ನಿಮ್ಮೆಲ್ಲರನು ಕೆಡಿಸಿ
ನಾಡ ಸಂಧಾನವನು ನಾವ್ ಮಾ
ತಾಡಲೆಮ್ಮನು ಬಿಗಿಯಲನುವನು
ಮಾಡಿಸಿದನೀ ಕರ್ಣ ನಿಮಗತಿಹಿತವನಹನೆಂದ (ಕರ್ಣ ಪರ್ವ, ೨೬ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕೃಷ್ಣನು ತನ್ನ ಮಾತನ್ನು ಮುಂದುವರಿಸುತ್ತಾ, ನಿಮ್ಮ ಕೌರವರ ನಡುವೆ ದ್ವೇಷವನ್ನು ಬೆಳೆಸಿ, ಇವನು ನಿಮ್ಮನ್ನು ಬೇಟೆಯಾಡಿಸಿದನು, ಕಪಟದ ಜೂಜಿನಲ್ಲಿ ನಿಮ್ಮ ರಾಜ್ಯವನ್ನು ಕೌರವನ ಕೈಗೆ ಕೊಡಿಸಿದ ಚಾಡಿಕೋರನಿವನು. ಸಂಧಾನಕ್ಕೆ ನಾನು ಹೋದಾಗ, ನನ್ನನ್ನು ಕಟ್ಟಿ ಹಾಕಲು ಸಿದ್ಧತೆ ಮಾಡಿಸಿದವನಿವನು. ಈ ಕರ್ಣನು ನಿನಗೆ ಈಗ ಬಹಳ ಹಿತವಾಗಿಬಿಟ್ಟನೇ? ಎಂದು ಅರ್ಜುನನನ್ನು ಕೇಳಿದನು.

ಅರ್ಥ:
ಕೇಡು: ಆಪತ್ತು, ಕೆಡಕು; ಹೊತ್ತಿಸು: ಹಚ್ಚು; ಬೇಂಟೆ: ಶಿಕಾರಿ, ಮೃಗಯೆ, ಬೇಟೆ; ಜೂಜು: ಏನಾದರು ಒತ್ತೆ ಇಟ್ಟು ಆಡುವುದು, ಪಂದ್ಯ; ಹಿಸುಣ: ಚಾಡಿಕೋರ; ಕೊಳಿ: ಬೀಳಿಸು, ಅಪಹಾರ ಮಾಡಿಸು; ಮಾತು: ವಾಕ್, ವಾಣಿ; ಸಂಧಾನ: ಹೊಂದಿಸುವುದು; ಬಿಗಿ: ಬಂಧಿಸು; ಅನುವು: ಆಸ್ಪದ, ಅನುಕೂಲ, ರೀತಿ; ಹಿತ: ಒಳ್ಳೆಯದು; ಅತಿ: ಬಹಳ;

ಪದವಿಂಗಡಣೆ:
ಕೇಡ+ಹೊತ್ತಿಸಿ +ನಿಮ್ಮ +ಬೇಂಟೆಯನ್
ಆಡಿಸಿದನ್+ಇವ+ ಜೂಜನಾಡಿಸಿ
ನಾಡ+ ಕೊಳಿಸಿದ +ಹಿಸುಣನಿವ +ನಿಮ್ಮೆಲ್ಲರನು +ಕೆಡಿಸಿ
ನಾಡ+ ಸಂಧಾನವನು +ನಾವ್ +ಮಾ
ತಾಡಲ್+ಎಮ್ಮನು +ಬಿಗಿಯಲ್+ಅನುವನು
ಮಾಡಿಸಿದನ್+ಈ+ ಕರ್ಣ +ನಿಮಗ್+ಅತಿ+ಹಿತವನಹನೆಂದ

ಅಚ್ಚರಿ:
(೧) ಹಿಸುಣ, ಬೇಂಟೆಯನಾಡಿಸಿದ, ಬಿಗಿಯಲನುಮಾಡಿಸಿದ – ಕರ್ಣನನ್ನು ಜರೆದ ಬಗೆ

ಪದ್ಯ ೪೨: ಕೃಷ್ಣನು ಅರ್ಜುನನು ಕರ್ಣನಿಗೇಕೆ ಸಮನಲ್ಲ ಎಂದು ಹೇಳಿದನು?

ಎಲೆ ಧನಂಜಯ ನೀನು ಹಿಮಕರ
ಕುಲದ ಸುಕುಮಾರಕನು ಲೋಕದ
ಕುಲವಿಹೀನನು ಕರ್ಣನಿವ ನಿನಗೆಂತು ಸರಿಯಹನು
ತಲೆಯ ಮಾರಿ ಶರೀರವನು ಸಲೆ
ಸಲಹಲೋಸುಗ ಕೌರವನ ತಂ
ಬುಲಕೆ ಕಯ್ಯಾಂತವನು ಬಂಧುವೆ ಪಾರ್ಥ ಹೇಳೆಂದ (ಕರ್ಣ ಪರ್ವ, ೨೬ ಸಂಧಿ, ೪೨ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ನೀನು ಚಂದ್ರವಂಶದ ರಾಜಕುಮಾರ, ಕರ್ಣನೋ ಲೋಕವೇ ಅರಿತಂತೆ ಕುಲಹೀನ. ಅವನು ನಿನಗೆ ಹೇಗೆ ಸಮಾನನಾದನು. ತನ್ನ ಶರೀರವನ್ನು ಸಲಹಲೆಂದು ತನ್ನ ತಲೆಯನ್ನೇ ಮಾರಿ ಕೌರವನ ತಂಬುಲಕ್ಕೆ ಕೈ ಹಿಡಿದವನು. ನಿನ್ನ ಬಂಧುವಾದಾನೇ ಎಂದು ಅರ್ಜುನನನ್ನು ಕೇಳಿದನು.

ಅರ್ಥ:
ಹಿಮಕರ: ಚಂದ್ರ; ಕುಲ: ವಂಶ; ಸುಕುಮಾರ: ಮಗ, ಪುತ್ರ; ಲೋಕ: ಜಗತ್ತು; ವಿಹೀನ: ಇಲ್ಲದ; ಸರಿ: ಸಮಾನ; ತಲೆ: ಶಿರ; ಮಾರಿ: ಎದುರಿಸು, ಅಡ್ಡಿಮಾಡು; ಶರೀರ: ತನು, ದೇಹ; ಸಲೆ: ಒಂದೇ ಸಮನೆ; ಸಲಹು: ಕಾಪಾಡು; ಓಸುಗ: ಓಸ್ಕರ; ತಂಬುಲ: ಅಡಿಕೆ; ಕೈ: ಕರ, ಹಸ್ತ; ಬಂಧು: ಸಂಬಂಧಿ; ಹೇಳು: ತಿಳಿಸು;

ಪದವಿಂಗಡಣೆ:
ಎಲೆ+ ಧನಂಜಯ +ನೀನು +ಹಿಮಕರ
ಕುಲದ +ಸುಕುಮಾರಕನು+ ಲೋಕದ
ಕುಲವಿಹೀನನು +ಕರ್ಣನ್+ಇವ+ ನಿನಗೆಂತು +ಸರಿಯಹನು
ತಲೆಯ+ ಮಾರಿ +ಶರೀರವನು+ ಸಲೆ
ಸಲಹಲೋಸುಗ +ಕೌರವನ+ ತಂ
ಬುಲಕೆ +ಕಯ್ಯಾಂತವನು +ಬಂಧುವೆ +ಪಾರ್ಥ +ಹೇಳೆಂದ

ಅಚ್ಚರಿ:
(೧) ಕರ್ಣನನ್ನು ಅವಹೇಳಿಸಿದ ಬಗೆ – ತಲೆಯ ಮಾರಿ ಶರೀರವನು ಸಲೆಸಲಹಲೋಸುಗ ಕೌರವನ ತಂಬುಲಕೆ ಕಯ್ಯಾಂತವನು ಬಂಧುವೆ ಪಾರ್ಥ ಹೇಳೆಂದ

ಪದ್ಯ ೪೧: ಅರ್ಜುನನನ್ನು ಪ್ರೇರೇಪಿಸಲು ಕೃಷ್ಣನು ಯಾವ ಮಾರ್ಗವನ್ನು ಪ್ರಯೋಗಿಸಿದನು?

ಮತ್ತೆ ಜರೆದನು ದನುಜರಿಪು ತಲೆ
ಗುತ್ತಿದನು ಕಲಿ ಪಾರ್ಥನಾತನ
ಕುತ್ತಿ ಬರಸೆಳೆದಂತೆ ಭಂಗಿಸಿದನು ಮುರಧ್ವಂಸಿ
ಒತ್ತುವವು ಫಲುಗುಣನ ನುಡಿ ಮಿಗೆ
ಕೆತ್ತುವವು ಹರಿವಚನವಾತನ
ಚಿತ್ತವನು ಸಂತೈಸಿ ಹರಿ ತಿಳುಹಿದನು ಸಾಮದಲಿ (ಕರ್ಣ ಪರ್ವ, ೨೬ ಸಂಧಿ, ೪೧ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮತ್ತೆ ಅರ್ಜುನನನ್ನು ಜರೆಯಲು ಅರ್ಜುನನು ತಲೆ ತಗ್ಗಿಸಿದನು. ಅವನನ್ನು ಹೊಡೆದೆಳೆದಂತೆ ಕೃಷ್ಣನು ಹಂಗಿಸಿದನು. ಕೃಷ್ಣನ ಮಾತುಗಳು ಾವನನ್ನು ಯುದ್ಧಮಾಡಲು ಪ್ರಚೋದಿಸಿದವು, ಅರ್ಜುನನ ಮಾತುಗಳು ಅದನ್ನು ನಿರಾಕರಿಸಿದವು, ಕೊನೆಗೆ ಕೃಷ್ಣನು ಸಾಮೋಪಾಯದಿಂದ ಅರ್ಜುನನನ್ನು ಒಡಂಬಡಿಸಲು ಯತ್ನಿಸಿದನು.

ಅರ್ಥ:
ಜರೆ: ಬಯ್ಯು; ದನುಜರಿಪು: ರಾಕ್ಷಸರ ವೈರಿ; ತಲೆ: ಶಿರ; ಕಲಿ: ಶೂರ; ಕುತ್ತು: ಹೊಡೆತ, ಪೆಟ್ಟು; ಬರಸೆಳೆ: ಹತ್ತಿರಕ್ಕೆ ಬರುವಂತೆ ಎಳೆ; ಭಂಗಿಸು: ಮುರಿ; ಮುರಧ್ವಂಸಿ: ಕೃಷ್ಣ; ಒತ್ತು: ಒತ್ತಡ ಹತ್ತಿರ; ನುಡಿ: ಮಾತು; ಮಿಗೆ: ಮತ್ತು; ಕೆತ್ತು:ನಡುಕ, ಸ್ಪಂದನ; ವಚನ: ನುಡಿ, ಮಾತು; ಚಿತ್ತ: ಮನಸ್ಸು; ಸಂತೈಸು: ಸಮಾಧಾನಪಡಿಸು; ತಿಳುಹು: ತಿಳಿಸು, ಹೇಳು; ಸಾಮ: ಶಾಂತಗೊಳಿಸುವಿಕೆ, ಕಾರ್ಯ ಸಾಧನೆಯ ಚತುರೋಪಾಯಗಳಲ್ಲಿ ಒಂದು;

ಪದವಿಂಗಡಣೆ:
ಮತ್ತೆ +ಜರೆದನು +ದನುಜರಿಪು +ತಲೆ
ಗುತ್ತಿದನು+ ಕಲಿ +ಪಾರ್ಥನ್+ಆತನ
ಕುತ್ತಿ +ಬರಸೆಳೆದಂತೆ +ಭಂಗಿಸಿದನು +ಮುರಧ್ವಂಸಿ
ಒತ್ತುವವು +ಫಲುಗುಣನ+ ನುಡಿ +ಮಿಗೆ
ಕೆತ್ತುವವು +ಹರಿವಚನವ್+ಆತನ
ಚಿತ್ತವನು +ಸಂತೈಸಿ +ಹರಿ +ತಿಳುಹಿದನು +ಸಾಮದಲಿ

ಅಚ್ಚರಿ:
(೧) ಕುತ್ತು, ಒತ್ತು, ಕೆತ್ತು, – ಪದಗಳ ಬಳಕೆ
(೨) ಕಾರ್ಯಸಾಧನೆಯ ಹಲವು ಮಾರ್ಗಗಳನ್ನು ಉಪಯೋಗಿಸಿದ ಕೃಷ್ಣ
(೩) ದನುಜರಿಪು, ಮುರಧ್ವಂಸಿ, ಹರಿ; ನುಡಿ, ವಚನ – ಸಮನಾರ್ಥಕ ಪದ

ಪದ್ಯ ೪೦: ಸೈನ್ಯದಲ್ಲಿ ಯಾವ ಭಾವನೆ ಮೂಡಿದ್ದವು?

ಮೊದಲಲೆರಡೊಡ್ಡಿನಲಿ ಸುಮ್ಮಾ
ನದ ಸಘಾಡವ ದಂಡೆನೀಗಳು
ತುದಿಗೆ ಬರೆವರೆ ಕಂಡೆನಿವರವರೆರಡು ಥಟ್ಟಿನಲಿ
ತುದಿವೆರಳ ಕಂಬನಿಯ ಬಳಸಿದ
ಬೆದರುಗಳ ಕುಕ್ಕುಳಿಸಿದುತ್ಸಾ
ಹದ ವಿಘಾತಿಯ ನಟ್ಟ ಚಿಂತೆಯನರಸ ಕೇಳೆಂದ (ಕರ್ಣ ಪರ್ವ, ೨೬ ಸಂಧಿ, ೪೦ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ, ಕರ್ಣಾರ್ಜುನರ ಕಾಳಗ ಆರಂಭವಾದಗ ಎರಡು ಸೈನ್ಯಗಳಲ್ಲೂ ಸಂತಸ, ಸಂಭ್ರಮಗಳು ಕಾಣಿಸುತ್ತಿದ್ದವು. ಈಗಲೋ ಎರಡು ಸೈನ್ಯದಲ್ಲಿ ಬೆದರಿಕೆ, ಕಂಬನಿ, ಸಂತಸದ ಕುಸಿತ, ದುಗುಡ, ಯಾವುದೋ ತೊಂದರೆ, ಚಿಂತೆಗಳು ಅವರ ಮನಸ್ಸಿನಲ್ಲಿ ಕಂಡುಬರುತ್ತಿವೆ.

ಅರ್ಥ:
ಮೊದಲು: ಆದಿ; ಒಡ್ಡು: ಸೈನ್ಯ, ಗುಂಪು; ಸುಮ್ಮಾನ:ಸಂತೋಷ, ಹಿಗ್ಗು; ಸಘಾಡ: ರಭಸ, ವೇಗ; ಕಂಡು: ನೋಡು; ತುದಿ: ಅಗ್ರ, ಮುಂದೆ; ಬರೆವರೆ: ಬಂದರೆ; ತುದಿವೆರಳು: ಬೆರಳ ಕೊನೆ; ಕಂಬನಿ: ಕಣ್ಣೀರು; ಬಳಸು: ಆವರಿಸುವಿಕೆ; ಬೆದರು: ಭಯ, ಅಂಜಿಕೆ; ಕುಕ್ಕುಳಿಸು: ಕುದಿ, ತಳಮಳಿಸು; ಉತ್ಸಾಹ: ಶಕ್ತಿ, ಬಲ; ವಿಘಾತಿ: ಹೊಡೆತ, ವಿರೋಧ; ನಟ್ಟ: ನಡು, ಒಳಹೋಕು; ಚಿಂತೆ: ಯೋಚನೆ; ಅರಸ; ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮೊದಲಲ್+ಎರಡ್+ಒಡ್ಡಿನಲಿ+ ಸುಮ್ಮಾ
ನದ +ಸಘಾಡವ +ದಂಡೆನ್+ಈಗಳು
ತುದಿಗೆ+ ಬರೆವರೆ+ ಕಂಡೆನ್+ಇವರ್+ಅವರ್+ಎರಡು+ ಥಟ್ಟಿನಲಿ
ತುದಿವೆರಳ+ ಕಂಬನಿಯ +ಬಳಸಿದ
ಬೆದರುಗಳ +ಕುಕ್ಕುಳಿಸಿದ್+ಉತ್ಸಾ
ಹದ+ ವಿಘಾತಿಯ +ನಟ್ಟ+ ಚಿಂತೆಯನ್+ಅರಸ+ ಕೇಳೆಂದ

ಅಚ್ಚರಿ:
(೧) ಸುಮ್ಮಾನ, ಬೆದರು, ಉತ್ಸಾಹ, ವಿಘಾತ, ಚಿಂತೆ – ಭಾವನೆಗಳನ್ನು ವರ್ಣಿಸುವ ಪದಗಳು

ಪದ್ಯ ೩೯: ಪಾಂಡವರಲ್ಲಿ ಯಾವ ಸಂದೇಹ ಮೂಡಿತು?

ಬಳಿಕ ಭೀಮಾದಿಗಳ ಮನದಲಿ
ಸುಳಿದುದೈ ಸಂದೇಹವೀತನ
ಕೊಲುವುದೇನನುಚಿತವೊ ಮೇಣುಚಿತವೊ ಶಿವಾ ಎನುತ
ಅಳುಕಿದರು ದ್ರೌಪದಿ ಯುಧಿಷ್ಠಿರ
ರೊಳಗೊಳಗೆ ಸಂತಾಪಶಿಖಿಯಲಿ
ತಳಿತ ದುಗುಡದ ಬಿಗಿದ ಬೆರಗಿನೊಳಿದ್ದುದಾಚೆಯಲಿ (ಕರ್ಣ ಪರ್ವ, ೨೬ ಸಂಧಿ, ೩೯ ಪದ್ಯ)

ತಾತ್ಪರ್ಯ:
ಅರ್ಜುನನ ಮಾತುಗಳನ್ನು ಕೇಳಿ ಭೀಮನೇ ಮೊದಲಾದವರ ಮನಸ್ಸಿನಲ್ಲಿ ಕರ್ಣನನ್ನು ಕೊಲ್ಲುವುದು ಉಚಿತವೋ ಅಥವ ಅನುಚಿತವೋ ಎಂಬ ಗೊಂದಲು ಮೂಡಿತು, ಯುಧಿಷ್ಠಿರ, ದ್ರೌಪದಿಯರು ಹೆದರಿ ದುಃಖದ ಅಗ್ನಿಗಲ್ಲಿ ಮುಳುಗಿದರು. ಪಾಂಡವರ ಸೈನ್ಯವು ದುಃಖ ಮತ್ತು ಆಶ್ಚರ್ಯಗಳಿಂದ ನೊಂದಿತು.

ಅರ್ಥ:
ಬಳಿಕ: ನಂತರ; ಆದಿ: ಮುಂತಾದವರು; ಮನ: ಮನಸ್ಸು; ಸುಳಿ: ಗೋಚರವಾಗು; ಸಂದೇಹ: ಸಂಶಯ; ಕೊಲು: ಸಾಯಿಸು; ಅನುಚಿತ: ಸರಿಯಿಲ್ಲದ್ದು; ಉಚಿತ: ಸರಿಯಾದದ್ದು; ಅಳುಕು: ಹೆದರು; ಒಳಗೊಳಗೆ: ಅಂತರ್ಯದಲ್ಲಿ; ಸಂತಾಪ: ದುಃಖ; ಶಿಖಿ: ಬೆಂಕಿ; ತಳಿತ: ಚಿಗುರಿದ; ದುಗುಡ: ದುಃಖ; ಬಿಗಿ: ಭದ್ರ, ಗಟ್ಟಿ; ಬೆರಗು: ಆಶ್ಚರ್ಯ;

ಪದವಿಂಗಡಣೆ:
ಬಳಿಕ +ಭೀಮಾದಿಗಳ +ಮನದಲಿ
ಸುಳಿದುದೈ+ ಸಂದೇಹವ್+ಈತನ
ಕೊಲುವುದೇನ್+ಅನುಚಿತವೊ +ಮೇಣ್+ಉಚಿತವೊ+ ಶಿವಾ +ಎನುತ
ಅಳುಕಿದರು +ದ್ರೌಪದಿ +ಯುಧಿಷ್ಠಿರರ್
ಒಳಗೊಳಗೆ +ಸಂತಾಪ+ಶಿಖಿಯಲಿ
ತಳಿತ+ ದುಗುಡದ+ ಬಿಗಿದ+ ಬೆರಗಿನೊಳ್+ಇದ್ದುದ್+ಆಚೆಯಲಿ

ಅಚ್ಚರಿ:
(೧) ತೀವ್ರ ದುಃಖದಲ್ಲಿದ್ದರು ಎಂದು ಹೇಳಲು – ಅಳುಕಿದರು ದ್ರೌಪದಿ ಯುಧಿಷ್ಠಿರರೊಳಗೊಳಗೆ ಸಂತಾಪಶಿಖಿಯಲಿ
(೨) ದುಗುಡ ಮತ್ತು ಆಶ್ಚರ್ಯಕ್ಕೂ ಚಿಗುರಿತು ಎಂಬ ಪದ ಪ್ರಯೋಗ – ತಳಿತ ದುಗುಡದ ಬಿಗಿದ ಬೆರಗಿನೊಳಿದ್ದುದಾಚೆಯಲಿ

ಪದ್ಯ ೩೮: ಅರ್ಜುನನು ಏಕೆ ಕರ್ಣನನು ಕೊಲ್ಲುವುದಿಲ್ಲವೆಂದ -೩?

ಗುರುವನೆಸುವಡೆ ಮೇಣು ಭೀಷ್ಮನ
ಸರಳ ತಡಿಕೆಗೆ ಚಾಚುವಡೆ ಧಿ
ಕ್ಕರಿಸುವಡೆ ಕೃಪ ಶಲ್ಯ ಸೈಮ್ಧವ ಮುಖ್ಯ ಬಾಂಧವರ
ತೆರಳಿದೆನೆ ತೇರೈಸಿದೆನೆ ಹೇ
ವರಿಸಿದೆನೆ ಹೋರಿದೆನೆ ಕಲಿತನ
ಕರಗಿತೇನೆಂದರಿಯೆ ಕರ್ಣನ ಕೊಲುವನಲ್ಲೆಂದ (ಕರ್ಣ ಪರ್ವ, ೨೬ ಸಂಧಿ, ೩೮ ಪದ್ಯ)

ತಾತ್ಪರ್ಯ:
ಆಚಾರ್ಯ ದ್ರೋಣರ ಮೇಲೆ ಬಾಣ ಬಿಡಲು ಹಿಂಜರಿದೆನೇ? ಭೀಷ್ಮನನ್ನು ಶರ ಮಂಚದ ಮೇಲೆ ಮಲಗಿಸಲು ವಿರೋಧಿಸಿದೆನೇ? ಕೃಪಾಚಾರ್ಯರ ಮೇಲೆ ಯುದ್ಧ ಮಾಡಲು ಮುಂದೆಬರಲಿಲ್ಲವೇ? ಶಲ್ಯ, ಸೈಂಧವನೇ ಮೊದಲಾದ ಹತ್ತಿರದ ಸಂಬಂಧಿಗಳನ್ನು ಧಿಕ್ಕರಿಸಲು, ನಾನು ಬೇಡವೆಂದನೆ? ತವಕತೋರದೆ ಅವರ ಮೇಲೆ ಯುದ್ಧ ಮಾಡಲಿಲ್ಲವೇ? ಹಠಹಿಡಿದೆನೆ? ಏಕೋ ಏನೋ ನನ್ನ ಪರಾಕ್ರಮ ಕರಗಿ ಹೋಯಿತು, ಕರ್ಣನನ್ನು ಕೊಲ್ಲುವುದಿಲ್ಲ ಎಂದು ಅರ್ಜುನನು ಕೃಷ್ಣನಿಗೆ ಹೇಳಿದ.

ಅರ್ಥ:
ಗುರು: ಆಚಾರ್ಯ; ಎಸು: ಬಾಣಬಿಡು; ಮೇಣ್: ಅಥವ; ಸರಳ: ಬಾಣ; ತಡಿಕೆ: ಚಪ್ಪರ, ಹಂದರ, ಹಾಸಿಗೆ; ಚಾಚು: ಹರಡು; ಧಿಕ್ಕರಿಸು: ತಿರಸ್ಕರಿಸು; ಮುಖ್ಯ: ಪ್ರಮುಖ; ಬಾಂಧವ: ಸಂಬಂಧಿ; ತೆರಳು: ಹೊರಡು; ತೇರು: ರಥ; ಐಸು; ಅಷ್ಟು; ಹೇವರಿಸು: ಹೇಸಿಗೆಪಟ್ಟುಕೋ; ಹೋರು: ಸೆಣಸು, ಕಾದಾಡು; ಕಲಿ: ಶೂರ; ಕರಗು: ಮಾಯವಾಗು; ಅರಿ: ತಿಳಿ; ಕೊಲು: ಸಾಯಿಸು;

ಪದವಿಂಗಡಣೆ:
ಗುರುವನ್+ಎಸುವಡೆ +ಮೇಣು +ಭೀಷ್ಮನ
ಸರಳ+ ತಡಿಕೆಗೆ+ ಚಾಚುವಡೆ +ಧಿ
ಕ್ಕರಿಸುವಡೆ +ಕೃಪ +ಶಲ್ಯ +ಸೈಂದವ+ ಮುಖ್ಯ +ಬಾಂಧವರ
ತೆರಳಿದೆನೆ+ ತೇರೈಸಿದೆನೆ +ಹೇ
ವರಿಸಿದೆನೆ +ಹೋರಿದೆನೆ+ ಕಲಿತನ
ಕರಗಿತ್+ಏನೆಂದ್+ಅರಿಯೆ +ಕರ್ಣನ +ಕೊಲುವನಲ್ಲೆಂದ

ಅಚ್ಚರಿ:
(೧) ಬಾಣದ ಹಾಸಿಗೆ ಎಂದು ಹೇಳಲು – ಸರಳ ತಡಿಕೆಗೆ ಚಾಚು
(೨) ಪ್ರಾಸ ಪದಗಳು – ತೆರಳಿದೆನೆ, ತೇರೈಸಿದೆನೆ, ಹೇವರಿಸಿದೆನೆ, ಹೋರಿದೆನೆ
(೩) ಪ್ರಾಸ ಪದಗಳು – ಎಸುವಡೆ, ಚಾಚುವಡೆ, ಧಿಕ್ಕರಿಸುವಡೆ