ಪದ್ಯ ೨೯: ಅರ್ಜುನನು ಕರ್ಣನಾರೆಂದು ಕೃಷ್ಣನಲ್ಲಿ ಕೇಳಿದನು – ೬?

ಧರೆಯ ಬಿಟ್ಟೆವು ಕುರುಪತಿಗೆ ನಾ
ವರುವರೊಡವುಟ್ಟಿದರು ವಿಪಿನಾಂ
ತರದೊಳಗೆ ಭಜಿಸುವೆವು ನಿನ್ನನು ಭಾವಶುದ್ಧಿಯಲಿ
ತೆರಳುವೀ ಸಿರಿಗೋಸುಗರ ಸೋ
ದರನ ಕೊಲುವೆನೆ ಕೃಷ್ಣ ಕರುಣಿಸು
ಕರುಣಿಸಕಟಾ ಕೃಷ್ಣ ಕರುಣಿಸು ಕರ್ಣನಾರೆಂದ (ಕರ್ಣ ಪರ್ವ, ೨೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕೃಷ್ಣ ನಾವು ಈ ಭೂಮಿಯನ್ನು ಕೌರವನಿಗೆ ಬಿಟ್ಟು ಬಿಡುತ್ತೇವೆ, ನಾವಾರು ಜನ ಅರಣ್ಯಕ್ಕೆ ಹೋಗಿ ನಿನ್ನನ್ನು ಭಾವಶುದ್ಧತೆಯಿಂದ ಭಜಿಸುತ್ತೇವೆ, ಹೀಗೆ ಬಂದು ಹೀಗೆ ಹೋಗುವ ಐಶ್ವರ್ಯ ಸಂಪಾದನೆಗಾಗಿ ನನ್ನ ಸೋದರ ಕರ್ಣನನ್ನು ಕೊಲ್ಲಲ್ಲಾದೀತೇ? ಅಯ್ಯ ಕೃಷ್ಣ ದಯವಿಟ್ಟು ಕರುಣೆದೋರಿ ಕರ್ಣನು ಯಾರೆಂದು ಹೇಳು ಎಂದು ಅಂಗಲಾಚಿ ಬೇಡಿಕೊಂಡನು.

ಅರ್ಥ:
ಧರೆ: ಭೂಮಿ; ಬಿಟ್ಟೆವು: ತೊರೆ; ಅರುವರು: ಆರುಜನ; ಒಡವುಟ್ಟು: ಅಣ್ಣ ತಮ್ಮಂದಿರು, ಒಟ್ಟಿಗೆ ಜನಿಸಿದವರು; ವಿಪಿನ: ಅರಣ್ಯ, ಕಾಡು; ಅಂತರ: ಒಳಗೆ; ಭಜಿಸು: ಪೂಜಿಸು; ಭಾವ:ಮನಸ್ಸು, ಚಿತ್ತ; ಶುದ್ಧ: ಪವಿತ್ರವಾದ; ತೆರಳು: ಹೋಗು; ಸಿರಿ: ಐಶ್ವರ್ಯ; ಓಸುಗ: ಓಸ್ಕರ, ಕಾರಣ; ಸೋದರ: ಅಣ್ಣ ತಮ್ಮ; ಕೊಲು: ಕೊಲ್ಲು; ಕರುಣಿಸು: ದಯಪಾಲಿಸು; ಅಕಟ: ಅಯ್ಯೋ;

ಪದವಿಂಗಡಣೆ:
ಧರೆಯ +ಬಿಟ್ಟೆವು +ಕುರುಪತಿಗೆ +ನಾ
ವರುವರ್+ಒಡವುಟ್ಟಿದರು +ವಿಪಿನಾಂ
ತರದೊಳಗೆ +ಭಜಿಸುವೆವು +ನಿನ್ನನು +ಭಾವ+ಶುದ್ಧಿಯಲಿ
ತೆರಳುವ್+ಈ+ ಸಿರಿಗೋಸುಗರ +ಸೋ
ದರನ +ಕೊಲುವೆನೆ+ ಕೃಷ್ಣ +ಕರುಣಿಸು
ಕರುಣಿಸಕಟಾ +ಕೃಷ್ಣ +ಕರುಣಿಸು+ ಕರ್ಣನಾರೆಂದ

ಅಚ್ಚರಿ:
(೧) ಕ ಕಾರದ ಸಾಲು ಪದಗಳು – ಕೊಲುವೆನೆ ಕೃಷ್ಣ ಕರುಣಿಸು ಕರುಣಿಸಕಟಾ ಕೃಷ್ಣ ಕರುಣಿಸು ಕರ್ಣನಾರೆಂದ
(೨) ವೇದಾಂತಿಯಂತೆ ಅರ್ಜುನನ ಮಾತು – ತೆರಳುವೀ ಸಿರಿಗೋಸುಗರ ಸೋದರನ ಕೊಲುವೆನೆ

ನಿಮ್ಮ ಟಿಪ್ಪಣಿ ಬರೆಯಿರಿ