ಪದ್ಯ ೨೮: ಅರ್ಜುನನು ಕರ್ಣನಾರೆಂದು ಕೃಷ್ಣನಲ್ಲಿ ಕೇಳಿದನು – ೫?

ಋಷಿಗಳನುಮತದಿಂದ ಕುಂತಿಯ
ಬಸುರಲೇನುದಯಿಸನಲೇ ನೀ
ನಸುರರಿಪು ಬಹು ಕಪಟನಾಟಕ ಸೂತ್ರಧಾರನಲೆ
ವಸುಮತಿಯ ಭಾರವನು ಸಲೆ ಹಿಂ
ಗಿಸುವ ಕೃತ್ಯವು ನಿನ್ನದೆನಗು
ಬ್ಬಸವಿದೇನೆಂದರಿಯೆನಕಟಾ ಕರ್ಣನಾರೆಂದ (ಕರ್ಣ ಪರ್ವ, ೨೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ನನ್ನ ತಾಯಿಗೆ ಮುನಿಗಳು ನೀಡಿದ ವರದಿಂದ ಇವನು ನನ್ನ ತಾಯಿಯ ಗರ್ಭದಲ್ಲಿ ಹುಟ್ಟಿದವನೇ? ನೀನು ದಾನವವೈರಿ, ಕಪಟನಾಟಕ ಸೂತ್ರಧಾರ, ಭೂಭಾರವನ್ನಿಳಿಸುವದೇ ನಿನ್ನ ಪ್ರತಿಜ್ಞೆ, ನನಗೇಕೆ ಈಗ ಸಂಕಟವಾಗುತ್ತಿದೆ? ಅಯ್ಯೋ ಕೃಷ್ಣ ಕರ್ಣನಾರು ಎಂದು ದಯವಿಟ್ಟು ತಿಳಿಸು ಎಂದು ಅರ್ಜುನನು ಬೇಡಿದನು.

ಅರ್ಥ:
ಋಷಿ: ಮುನಿ; ಮತ: ವಿಚಾರ ; ಅನು: ರೀತಿ, ಕ್ರಮ; ಬಸುರ: ಗರ್ಭ; ಉದಯಿಸು: ಹುಟ್ಟು; ಅಸುರರಿಪು: ರಾಕ್ಷಸವೈರಿ; ಬಹು: ತುಂಬ; ಕಪಟ: ಮೋಸ; ಕಪಟನಾಟಕ: ಸೃಷ್ಟಿ ಮುಂತಾದವುಗಳ ಬಂಧನವಿಲ್ಲದೆ, ಅವುಗಳನ್ನು ನಡೆಸುವವ; ಸೂತ್ರಧಾರ: ನಿರೂಪಕ, ಆಡಿಸುವವ; ವಸುಮತಿ: ಭೂಮಿ; ಭಾರ: ಹೊರೆ, ತೂಕ; ಸಲೆ: ವಿಸ್ತೀರ್ಣ; ಕೃತ್ಯ: ಕೆಲಸ; ಉಬ್ಬಸ: ಸಂಕಟ, ಮೇಲುಸಿರು; ಅರಿ: ತಿಳಿ; ಅಕಟಾ: ಅಯ್ಯೋ;

ಪದವಿಂಗಡಣೆ:
ಋಷಿಗಳ್+ಅನುಮತದಿಂದ+ ಕುಂತಿಯ
ಬಸುರಲೇನ್+ಉದಯಿಸನಲೇ +ನೀನ್
ಅಸುರರಿಪು +ಬಹು +ಕಪಟನಾಟಕ+ ಸೂತ್ರಧಾರನಲೆ
ವಸುಮತಿಯ +ಭಾರವನು +ಸಲೆ +ಹಿಂ
ಗಿಸುವ +ಕೃತ್ಯವು +ನಿನ್ನದ್+ಎನಗ್
ಉಬ್ಬಸವಿದೇನೆಂದ್+ಅರಿಯೆನ್+ಅಕಟಾ +ಕರ್ಣನಾರೆಂದ

ಅಚ್ಚರಿ:
(೧) ಕೃಷ್ಣನನ್ನು ಕರೆಯುವ ಬಗೆ – ಅಸುರರಿಪು ಕಪಟನಾಟಕ ಸೂತ್ರಧಾರ; ವಸುಮತಿಯ ಭಾರವನು ಸಲೆ ಹಿಂಗಿಸುವ ಕೃತ್ಯವು ನಿನ್ನದೆ

ನಿಮ್ಮ ಟಿಪ್ಪಣಿ ಬರೆಯಿರಿ