ಪದ್ಯ ೨: ಕುರುಸೈನ್ಯದ ಸ್ಥಿತಿ ಹೇಗಾಯಿತು?

ಕಳೆದ ಹೂವಿನ ಪರಿಮಳವೊ ಧರೆ
ಗಿಳಿದ ಸೂರ್ಯಪ್ರಭೆಯೊ ಶರದದ
ಹೊಳೆಯೊ ಮೇಘಸ್ಥಿತಿಯೊ ಸುರಪತಿ ಚಾಪ ವಿಭ್ರಮವೊ
ಇಳಿದ ಜವ್ವನದೊಲುಮೆಯೋ ಕುರು
ಬಲವ ಕಂಡೆನು ಜೀಯ ಜಯದ
ಗ್ಗಳಿಕೆಗಳ ಜಾರುಗಳ ನಿನ್ನ ಕುಮಾರನೊಡ್ಡಿನಲಿ (ಕರ್ಣ ಪರ್ವ, ೨೬ ಸಂಧಿ, ೨ ಪದ್ಯ)

ತಾತ್ಪರ್ಯ:
ಪರಿಮಳವನ್ನು ಕಳೆದುಕೊಂಡ ಹೂವು ಮುದುಡುವಹಾಗೆ, ಸೂರ್ಯನ ಅಸ್ತಂಗತನಾದ ಬಳಿಕೆ ಇಲ್ಲದ ಸೂರ್ಯನ ಪ್ರಭೆ, ಶರತ್ಕಾಲದ ಕಾಂತಿ, ಮೋಡಗಳ ಸ್ಥಿತಿ, ಕಾಮನಬಿಲ್ಲನ ಸೌಂದರ್ಯ, ಯೌವ್ವನವಿಳಿದ ಪ್ರೇಮ, ಹೀಗೆ ಕುರುಸೈನ್ಯವು ತನ್ನ ಪ್ರಭೆಯನ್ನು ಕಳೆದುಕೊಂಡಿತು.

ಅರ್ಥ:
ಕಳಿದ: ತೀರಿಹೋದ; ಹೂವು: ಪುಷ್ಪ; ಪರಿಮಳ: ಸುಗಂಧ; ಧರೆ: ಭೂಮಿ; ಇಳಿ: ಕೆಳಕ್ಕೆ ಹೋಗು; ಸೂರ್ಯ: ರವಿ; ಪ್ರಭೆ: ಕಾಂತಿ; ಸುರಪತಿ: ಇಂದ್ರ; ಚಾಪ: ಬಿಲ್ಲು; ಶರದ: ಶರತ್ಕಾಲ; ಹೊಳೆ: ಕಾಂತಿ; ಮೇಘ: ಮೋಡ; ಸ್ಥಿತಿ: ಇರವು, ಅಸ್ತಿತ್ವ; ವಿಭ್ರಮ: ಅಲೆದಾಟ, ಸುತ್ತಾಟ; ಜವ್ವನ: ಯೌವನ; ಒಲುಮೆ: ಪ್ರೀತಿ; ಬಲ: ಸೈನ್ಯ; ಕಂಡೆ: ನೋಡು; ಜೀಯ: ಒಡೆಯ; ಜಯ: ಗೆಲುವು; ಅಗ್ಗಳಿಕೆ: ಹಿರಿಮೆ; ಜಾರು: ಕೆಳಕ್ಕೆ ಬೀಳು; ಒಡ್ಡು: ಸೈನ್ಯ, ಗುಂಪು;

ಪದವಿಂಗಡಣೆ:
ಕಳೆದ +ಹೂವಿನ +ಪರಿಮಳವೊ +ಧರೆ
ಗಿಳಿದ +ಸೂರ್ಯಪ್ರಭೆಯೊ +ಶರದದ
ಹೊಳೆಯೊ +ಮೇಘಸ್ಥಿತಿಯೊ +ಸುರಪತಿ+ ಚಾಪ +ವಿಭ್ರಮವೊ
ಇಳಿದ +ಜವ್ವನದ್+ಒಲುಮೆಯೋ +ಕುರು
ಬಲವ +ಕಂಡೆನು +ಜೀಯ +ಜಯದ್
ಅಗ್ಗಳಿಕೆಗಳ+ ಜಾರುಗಳ+ ನಿನ್ನ +ಕುಮಾರನ್+ಒಡ್ಡಿನಲಿ

ಅಚ್ಚರಿ:
(೧) ಉಪಮಾನಗಳ ಸಾಲನ್ನು ಈ ಕವನದಲ್ಲಿ ಕಾಣಬಹುದು
(೨) ಮುಪ್ಪು ಎಂದು ಹೇಳಲು – ಇಳಿದ ಜವ್ವನ
(೩) ಕಾಮನಬಿಲ್ಲು ಎಂದು ಹೇಳಲು – ಸುರಪತಿ ಚಾಪ
(೪) ಜ ಕಾರದ ತ್ರಿವಳಿ ಪದ – ಜೀಯ ಜಯದಗ್ಗಳಿಕೆಗಳ ಜಾರುಗಳ

ಸಂಜಯನು ಯಾವ ಮಳೆಗಾಳ ಪ್ರಾರಂಭವಾಯ್ತೆಂದ?

ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳ ಜಯಸಿರಿ ಸರ್ಪಬಾಣದ
ಮೇಳೆಯದ ಸೀಮೆಯಲಿ ನಿಂದುದು ಹಲವು ಮಾತೇನು
ಹೇಳಿ ಫಲವೇನಿನ್ನು ಮುಂದಣ
ಕಾಳೆಗದ ಕರ್ಣಾಮೃತದ ಮಳೆ
ಗಾಲ ಮಾದು ವಿಲೋಚನದ ಮಳೆಗಾಲವಾಯ್ತೆಂದ (ಕರ್ಣ ಪರ್ವ, ೨೬ ಸಂಧಿ, ೧ ಪದ್ಯ)

ತಾತ್ಪರ್ಯ:
ಕೇಳು ಧೃತರಾಷ್ಟ್ರ, ಸರ್ಪಾಸ್ತ್ರದ ಪ್ರಭಾವ ವಿರುವ ವರೆಗು ಜಯಲಕ್ಷ್ಮಿಯು ಕರ್ಣನ ಕೊರಳನ್ನು ಅಲಂಕರಿಸಿದ್ದಳು, ಇನ್ನು ಹಲವು ಮಾತೇನು, ಸರ್ಪಾಸ್ತ್ರದ ಪ್ರಭಾವ ಮುಗಿದ ಬಳಿಕ ಕರ್ಣಾಮೃತವಾಗಿದ್ದ ಕಾಳಗದ ಮಳೆಗಾಲವು ಮುಗಿದು, ಕಣ್ಣೀರಿನ ಮಳೆಗಾಲ ಆರಂಭವಾಯಿತು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಅವನಿ: ಭೂಮಿ; ಆಳು: ಸೈನಿಕ; ಜಯ: ವಿಜಯ, ಗೆಲುವು; ಸಿರಿ: ಲಕ್ಷ್ಮೀ, ಐಶ್ವರ್ಯ; ಸರ್ಪ: ಹಾವು, ನಾಗ; ಬಾಣ: ಶರ; ಮೇಳೆ: ಗಂಟಲು ಮಣಿ, ಗೋನಾಳಿ; ಸೀಮೆ: ಎಲ್ಲೆ; ನಿಂದು: ನಿಲ್ಲು; ಹಲವು: ಬಹಳ; ಮಾತು: ವಾಣಿ, ನುಡಿ; ಹೇಳು: ತಿಳಿಸು; ಫಲ: ಪ್ರಯೋಜನ; ಮುಂದಣ: ಮುಂದಿನ; ಕಾಳೆಗ: ಯುದ್ಧ; ಅಮೃತ: ಸುಧೆ; ಮಳೆ: ವರ್ಷ; ಮಾದು: ಕಳೆದು; ವಿಲೋಚನ: ಕಣ್ಣು;

ಪದವಿಂಗಡಣೆ:
ಕೇಳು+ ಧೃತರಾಷ್ಟ್ರ+ಅವನಿಪ +ನಿ
ನ್ನಾಳ +ಜಯಸಿರಿ+ ಸರ್ಪಬಾಣದ
ಮೇಳೆಯದ +ಸೀಮೆಯಲಿ +ನಿಂದುದು +ಹಲವು +ಮಾತೇನು
ಹೇಳಿ+ ಫಲವೇನ್+ಇನ್ನು +ಮುಂದಣ
ಕಾಳೆಗದ +ಕರ್ಣಾಮೃತದ+ ಮಳೆ
ಗಾಲ +ಮಾದು +ವಿಲೋಚನದ +ಮಳೆಗಾಲವಾಯ್ತೆಂದ

ಅಚ್ಚರಿ:
(೧) ಕಣ್ಣೀರಿನ ಕಥೆ ಎಂದು ಹೇಳಲು – ಕರ್ಣಾಮೃತದ ಮಳೆಗಾಲ ಮಾದು ವಿಲೋಚನದ ಮಳೆಗಾಲವಾಯ್ತೆಂದ
(೨) ಕಿವಿಗೆ ಅಮೃತ

ನುಡಿಮುತ್ತುಗಳು: ಕರ್ಣ ಪರ್ವ, ೨೬ ಸಂಧಿ

  • ಕರ್ಣಾಮೃತದ ಮಳೆಗಾಲ ಮಾದು ವಿಲೋಚನದ ಮಳೆಗಾಲವಾಯ್ತೆಂದ – ಪದ್ಯ ೧
  • ನಿನ್ನಾಳ ಜಯಸಿರಿ ಸರ್ಪಬಾಣದ ಮೇಳೆಯದ ಸೀಮೆಯಲಿ ನಿಂದುದು – ಪದ್ಯ ೧
  • ಕಳೆದ ಹೂವಿನ ಪರಿಮಳವೊ; ಧರೆಗಿಳಿದ ಸೂರ್ಯಪ್ರಭೆಯೊ; ಶರದದ ಹೊಳೆಯೊ; ಮೇಘಸ್ಥಿತಿಯೊ; ಸುರಪತಿ ಚಾಪ ವಿಭ್ರಮವೊ; ಇಳಿದ ಜವ್ವನದೊಲುಮೆಯೋ – ಪದ್ಯ ೨
  • ಅಸಹಾಯ ಶೂರಗೆ ಪರರ ಹಂಗೇಕೆ – ಪದ್ಯ ೩
  • ಹೋದೆ ಹೋಗಿನ್ನೆನುತ ಕಣೆಗಳ ಸಾದುಗಳ ತನಿವೀರರಸದಲಿ ತೇದು ಚಿತ್ರವ ಬರೆದನರ್ಜುನನಂಗಭಿತ್ತಿಯಲಿ – ಪದ್ಯ ೫
  • ನೀರಿಳಿಸುವೆನು ನೆತ್ತರಲಿ; ತಾಯ ಬಸುರಿಂಬಿಲ್ಲ ನೀನುಳಿವಾಯತಿಕೆಯಿನ್ನೆಂತು – ಪದ್ಯ ೮
  • ನರನ ಜಯವೆಲ್ಲಿಯದು ದೈವವ ಮರುಳುಮಾಡಿದರವರು – ಪದ್ಯ ೧೨
  • ಹರಿವ ಬಿಂಕದ ರಥದ ಗಾಲಿಯ ಗರುವತನ ಗಾಳಾಯ್ತಲೇ ಖೊಪ್ಪರಿಸಿ ತಗ್ಗಿತು ತೇರು ತಡೆದುದು ಭಟನ ಸಾಹಸವ – ಪದ್ಯ ೧೩
  • ಸೂಳವಿಸಿದರು ಭುಜವನೊದರಿತು ಬೆರಳ ಬಾಯ್ಗಳಲಿ – ಪದ್ಯ ೧೪
  • ಹಯತತಿ ತೂಳಿ ಸತ್ವದಲೌಕಿ ಸೆಳೆದವು ಕುಸಿದು ನಿಜಮುಖವ – ಪದ್ಯ ೧೪
  • ಮೂಗಿನಲಿ ಬೆರಳಿಟ್ಟು ಮಕುಟವ ತೂಗಿ ತೊನೆದನು – ಪದ್ಯ ೧
  • ಈಗಳಿದು ತಾನೇನು ವಿಧಿ ಬರೆದೋಗಟೆಯೊ ಕುರುವಂಶ ವಜ್ರದ ಬೇಗಡೆಯೊ – ಪದ್ಯ ೧
  • ಹರಿಯೆಂಬೆನೇ ಪಾಂಡವರ ಬಂಡಿಯ ಬೋವನ್ – ಪದ್ಯ ೧೬
  • ನಾಡೆ ಬಲ್ಲಿರಿ ಶಸ್ತ್ರ ಹೀನರಕೂಡೆ ವಾಹನಹೀನರಲಿ ಕೈಮಾಡಲನುಚಿತ – ಪದ್ಯ ೧೮
  • ಆಪತ್ತೆಸಗಿದಾಗಳೆ ಹಗೆಯ ಗೆಲುವುದು ವಸುಮತೀಶರ ನೀತಿ – ಪದ್ಯ ೨೦
  • ಗ್ಲಾನಿಯಲಿ ಮುಳುಗಿದನು ಮನದಭಿಮಾನ ಸರ್ಪನ ಕೆಡಹಿ ಧೈರ್ಯನಿಧಾನವನು ಕೈಸೂರೆಗೊಂಡುದು ಶೋಕವರ್ಜುನನ – ಪದ್ಯ ೨೧
  • ಅಹಿತನೊಳುಕ್ಕುವನುರಾಗದಲಿ ಕೊಂಡನು ಬಳಿಕ ವೀಳೆಯವ ಸಿಕ್ಕಿದನು ಕರುಣಾಲತಾಂಗಿಯ ತೆಕ್ಕೆಯಲಿ – ಪದ್ಯ ೨೨
  • ಹಾರವೇಕೈ ಕಂಗಳಲಿ ಕಸ್ತೂರಿಯೇಕೈ ಕದಪಿನಲಿ ಶೃಂಗಾರವಿದು ವಿಪರೀತವೇನೈ ಪಾರ್ಥ ಹೇಳೆಂದ – ಪದ್ಯ ೨೩
  • ಡಾಳನತಿ ಡೊಂಕಣಿಯ ಠಕ್ಕಿನ ಠೌಳಿಕಾರನು – ಪದ್ಯ ೨೭
  • ಧರೆಯ ಬಿಟ್ಟೆವು ಕುರುಪತಿಗೆ ನಾವರುವರೊಡವುಟ್ಟಿದರು ವಿಪಿನಾಂತರದೊಳಗೆ ಭಜಿಸುವೆವು ನಿನ್ನನು ಭಾವಶುದ್ಧಿಯಲಿ – ಪದ್ಯ ೨೯
  • ತೆರಳುವೀ ಸಿರಿಗೋಸುಗರ ಸೋದರನ ಕೊಲುವೆನೆ – ಪದ್ಯ ೨೯
  • ಕಲಿತನಕೀಸು ಮೊಲೆಗಳು ಮೂಡಿದವಲಾ ಪಾರ್ಥ ಸಮರದಲಿ – ಪದ್ಯ ೩೨
  • ನೀನಾಗಳೇರಿಸಿ ನುಡಿದ ಭಾಷೆಗೆ ಮೂಗುಹೋದುದೆ, ಮರೆದಲಾ ಮಾತುಗಳು ಹಳಸುವವೆ – ಪದ್ಯ ೩೫
  • ಅಕಟ ನಿಷ್ಕರುಣಿಯೆ ವೃಥಾ ಪಾತಕವಿದೇಕೈ, ಕುರುವಂಶದಲಿ ಯದುರಾಜಕರೊಡನೆ ಹಗೆಯಿಲ್ಲಲೇ – ಪದ್ಯ ೩೬
  • ಬಸುರ ಶಿಖಿ ಬಲುಹಾಯ್ತು ಕರ್ಣನ ಕೊಲುವನಲ್ಲೆಂದ – ಪದ್ಯ ೩೭
  • ತಳಿತ ದುಗುಡದ ಬಿಗಿದ ಬೆರಗಿನೊಳಿದ್ದುದಾಚೆಯಲಿ – ಪದ್ಯ ೩೯
  • ತೊಡಗಿತೇ ಕಕ್ಕುಲಿತೆ ಮನದಲಿ ಫಡ – ಪದ್ಯ ೪೬
  • ಪೃಥಿವಿ ನೆನದಪಕಾರ ಲೋಕ ಪ್ರಥಿತವಾಯಿತು ಸಾಕು ಬದುಕಲಿ ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ – ಪದ್ಯ ೪೭
  • ಕನಲಿದವು ನಿಸ್ಸಾಳ ರಿಪುನೃಪ ಜನವ ಬಯ್ದವು ಕಹಳೆ – ಪದ್ಯ ೪೮
  • ಬಲಿಮಥನ ಮಝ ಭಾಪು ಪಾಂಡವ ಬಲದಿಶಾಪಟ ರಾಯಮದನ ಪ್ರಳಯಹರ ಭಾಪೆಂದು ಹೊಗಳಿತು ವಂದಿಸಂದೊಹ – ಪದ್ಯ ೪೯
  • ತೆಬ್ಬಿ ತುಳುಕುವ ಕಣೆಯ ಕಣೆಯಲಿ ಹಬ್ಬಿ ಹರೆದುದು ತೋರದಲಿ ಬಲಿ ದುಬ್ಬುಗವಳದ ಕಣ್ಣುಗಳು ಕರ್ಣಾವಸಾನದಲಿ – ಪದ್ಯ ೫೧
  • ಬಲಜಲಧಿ ಸುಳಿಗೊಂಡು ಪಾರ್ಥನ ಬಳಿಗೆ ತೆಗೆದುದು ತೆಗೆದುದೀತನ ಕಲಿತನದ ವಿಕ್ರಮ ಧನಂಜಯನಾ ಧನಂಜಯನ – ಪದ್ಯ ೫೩

ಪದ್ಯ ೪೫: ಅರ್ಜುನನು ಸರ್ಪಾಸ್ತ್ರವನ್ನು ಹೇಗೆ ಕಡಿದನು?

ಅರಸ ಕೇಳೈ ಕರ್ಣಶಕ್ತಿ
ಸ್ಫುರಣಸಹಿತೀ ಬಾಣವತಿ ದು
ರ್ಧರವದಲ್ಲದೆ ಬರಿಯ ವಿಷದುಬ್ಬರದ ಸಾಹಸವ
ನರನಲೇ ಕೈಕೊಳ್ಳದೀ ಬಹ
ಸರಳನೈದಂಬುಗಳಲೆಡೆಯಲಿ
ತರಿದು ಬಿಸುಟನು ವೀರನಾರಾಯಣನ ನೇಮದಲಿ (ಕರ್ಣ ಪರ್ವ, ೨೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನೇ ಕೇಳು, ಕರ್ಣನ ಶಕ್ತಿಯಿಂದೊಡಗೂಡಿದ ಬಾಣವು ಗೆಲ್ಲಲಸಾಧ್ಯವಾದುದು, ಆದರೀಗ ಬರಿಯ ವಿಷವನ್ನುಗುಳುತ್ತಾ ಬರುವ ಸರ್ಪಾಸ್ತ್ರವನ್ನು ಅರ್ಜುನನು ಶ್ರೀಕೃಷ್ಣನ ಅಪ್ಪಣೆಯಂತೆ ಐದು ಬಾಣಗಳಿಂದ ಕಡಿದು ಹಾಕಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಶಕ್ತಿ: ಬಲ; ಸ್ಫುರಣ: ನಡುಗುವುದು, ಕಂಪನ; ಸಹಿತ: ಜೊತೆ; ಬಾಣ: ಶರ; ದುರ್ಧರ: ಕಠಿಣವಾದ; ಬರಿ: ಕೇವಲ; ವಿಷ: ನಂಜು; ಉಬ್ಬರ: ಅತಿಶಯ; ಸಾಹಸ: ಪರಾಕ್ರಮ; ನರ: ಅರ್ಜುನ; ಕೈಕೊಳ್ಳು: ಸ್ವೀಕರಿಸು; ಬಹ: ದೊಡ್ಡ; ಸರಳು: ಬಾಣ; ಅಂಬು: ಬಾಣ; ಎಡೆ: ನಡುವೆ, ಮಧ್ಯ; ತರಿ: ಕಡಿ, ಕತ್ತರಿಸು; ಬಿಸುಟು: ಬಿಸಾಕು, ಹೊರಹಾಕು; ನೇಮ: ನಿಯಮ, ವ್ರತ;

ಪದವಿಂಗಡಣೆ:
ಅರಸ +ಕೇಳೈ +ಕರ್ಣಶಕ್ತಿ
ಸ್ಫುರಣಸಹಿತ+ಈ+ ಬಾಣವ್+ಅತಿ+ ದು
ರ್ಧರವದಲ್ಲದೆ+ ಬರಿಯ +ವಿಷದ್+ಉಬ್ಬರದ +ಸಾಹಸವ
ನರನಲೇ +ಕೈಕೊಳ್ಳದ್+ಈ+ ಬಹ
ಸರಳನ್+ಐದಂಬುಗಳಲ್+ಎಡೆಯಲಿ
ತರಿದು +ಬಿಸುಟನು +ವೀರನಾರಾಯಣನ +ನೇಮದಲಿ

ಅಚ್ಚರಿ:
(೧) ಈಗ ಈ ಬಾಣದ ಶಕ್ತಿ – ಬರಿಯ ವಿಷದುಬ್ಬರದ ಸಾಹಸವ

ಪದ್ಯ ೪೪: ಕೃಷ್ಣನು ಸರ್ಪಾಸ್ತ್ರದ ಪರಿಚಯ ಹೇಗೆ ಮಾಡಿದನು?

ಇವನ ಬಲ್ಲೈ ಪಾರ್ಥ ಚಕ್ಷು
ಶ್ರವನಿವನು ತಕ್ಷಕನ ಮಗ ಖಾಂ
ಡವದ ಬೇಳಂಬದಲಿ ಬದುಕಿದ ತಲೆಯೊಳಡಹಾಯ್ದು
ಇವನ ಮೂಡಿಗೆಯೊಳಗೆ ಶರವಾ
ಯ್ತಿವನು ತಾನೇ ಮರುಳಿದನು ನೀ
ನವಧರಿಸಿಕೊಳ್ಳೆನುತ ನುಡಿದನು ದೈತ್ಯರಿಪು ನಗುತ (ಕರ್ಣ ಪರ್ವ, ೨೫ ಸಂಧಿ, ೪೪ ಪದ್ಯ)

ತಾತ್ಪರ್ಯ:
ಬರುತ್ತಿರುವ ಸರ್ಪಾಸ್ತ್ರವನ್ನು ನೋಡಿ ಕೃಷ್ಣನು ಅರ್ಜುನನಿಗೆ ನುಡಿಯುತ್ತಾ, ಅರ್ಜುನ ಇವನನ್ನು ನೀನು ಬಲ್ಲೆಯಾ? ಇವನು ತಕ್ಷಕನ ಮಗನಾದ ಚಕ್ಷುಶ್ರವ. ಖಾಂಡವವನದಹನದಲ್ಲಿ ವಿಪತ್ತಿಗೊಳಗಾಗಿ ತಲೆಯೊಂದನ್ನೇ ಉಳಿಸಿಕೊಂಡು, ಕರ್ಣನ ಬತ್ತಳಿಕೆಯಲ್ಲಿ ಬಾಣವಾಗಿದ್ದನು. ಅವನೀಗ ಹಿಂದಿರುಗಿ ಬರುತ್ತಿದ್ದಾನೆ, ಗಮನವಿಟ್ಟು ನೋಡು ಎಂದು ಶ್ರೀಕೃಷ್ಣನು ಹೇಳಿದನು.

ಅರ್ಥ:
ಬಲ್ಲೆ: ಗೊತ್ತು, ತಿಳಿ; ಮಗ: ಸುತ; ಬೇಳಂಬ: ವಿಪತ್ತು; ಬದುಕು: ಜೀವಿಸು; ತಲೆ: ಶಿರ; ಹಾಯ್ದು: ಮೇಲೆಬೀಳು, ಚಾಚು; ಮೂಡಿಗೆ: ಬತ್ತಳಿಕೆ; ಶರ: ಬಾಣ; ಮರುಳಿದ: ಹಿಂದಿರುಗಿದ; ಅವಧರಿಸು: ಮನಸ್ಸಿಟ್ಟು ಕೇಳು; ನುಡಿ: ಮಾತಾಡು; ದೈತ್ಯರಿಪು: ರಾಕ್ಷಸರ ವೈರಿ (ಕೃಷ್ಣ); ನಗು: ಸಂತೋಷ;

ಪದವಿಂಗಡಣೆ:
ಇವನ +ಬಲ್ಲೈ +ಪಾರ್ಥ +ಚಕ್ಷು
ಶ್ರವನಿವನು +ತಕ್ಷಕನ+ ಮಗ +ಖಾಂ
ಡವದ +ಬೇಳಂಬದಲಿ +ಬದುಕಿದ+ ತಲೆಯೊಳಡಹಾಯ್ದು
ಇವನ +ಮೂಡಿಗೆಯೊಳಗೆ +ಶರವಾಯ್ತ್
ಇವನು+ ತಾನೇ +ಮರುಳಿದನು +ನೀನ್
ಅವಧರಿಸಿಕೊಳ್ಳೆನುತ +ನುಡಿದನು +ದೈತ್ಯರಿಪು +ನಗುತ

ಅಚ್ಚರಿ:
(೧) ಸರ್ಪಾಸ್ತ್ರದ ಪರಿಚಯ – ಚಕ್ಷುಶ್ರವನಿವನು ತಕ್ಷಕನ ಮಗ ಖಾಂಡವದ ಬೇಳಂಬದಲಿ ಬದುಕಿದ ತಲೆಯೊಳಡಹಾಯ್ದು

ಪದ್ಯ ೪೩: ಸರ್ಪಾಸ್ತ್ರವು ಯಾರ ಮೇಲೆ ಮತ್ತೆ ಧಾಳಿ ಮಾಡಿತು?

ಕಂಡುದೀ ವ್ಯತಿಕರವನೀತನ
ನಂಡಲೆದು ಫಲವಿಲ್ಲಲಾ ಕೈ
ಕೊಂಡು ನೋಡುವೆನೆನ್ನ ಸಾಮರ್ಥ್ಯದ ಸಘಾಡದಲಿ
ಚಂಡಿಯಾದೆನು ತಾನೆನುತ ಖತಿ
ಗೊಂಡು ಮರಳಿತು ಸರ್ಪಶರವಾ
ಖಂಡಳಾತ್ಮಜನತ್ತ ಹಾಳಾಹಳದ ಚೂಣಿಯಲಿ (ಕರ್ಣ ಪರ್ವ, ೨೫ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕರ್ಣನು ಮತ್ತೆ ಸರ್ಪಾಸ್ತ್ರವನ್ನು ತೊಡುವುದಿಲ್ಲವೆಂದು ತಿಳಿದ ಬಳಿಕ ಮತ್ತೆ ಕರ್ಣನಲ್ಲಿ ಬೇಡಿಕೊಳ್ಳುವುದರಲ್ಲಿ ಪ್ರಯೋಜನವಿಲ್ಲವೆಂದು ತಿಳಿದು ನನ್ನ ಸಾಮರ್ಥ್ಯದಿಂದಲೇ ಅರ್ಜುನನನ್ನು ಸಂಹರಿಸಲು ಯತ್ನಿಸುತ್ತೇನೆ ಎಂದು ಯೋಚಿಸಿ ಕೋಪದಿಂದ ಅರ್ಜುನನತ್ತ ವಿಷವನ್ನುಗುಳುತ್ತಾ ಹೋಯಿತು.

ಅರ್ಥ:
ಕಂಡು: ನೋಡಿ; ವ್ಯತಿಕರ: ತೊಂದರೆ, ಆಪತ್ತು; ಅಂಡಲೆ: ಕಾಡು, ಪೀಡಿಸು; ಫಲ: ಪ್ರಯೋಜನ; ಸಾಮರ್ಥ್ಯ: ಶಕ್ತಿ; ಸಘಾಡ: ರಭಸ, ವೇಗ; ಚಂಡಿ: ಛಲ, ಉಗ್ರ; ಖತಿ: ಕೋಪ, ದೋಷ; ಮರಳು: ಹಿಂದಿರುಗು; ಸರ್ಪ: ಹಾವು, ನಾಗ; ಶರ: ಬಾಣ; ಆತ್ಮಜ: ಮಗ; ಅಖಂಡ: ಇಂದ್ರ, ಪೂರ್ತಿಯಾದ; ಹಾಳಹಳ: ವಿಷ; ಚೂಣಿ: ಮುಂಭಾಗ, ತುದಿ;

ಪದವಿಂಗಡಣೆ:
ಕಂಡುದ್+ಈ+ ವ್ಯತಿಕರವ್+ಈತನನ್
ಅಂಡಲೆದು +ಫಲವಿಲ್ಲಲಾ+ ಕೈ
ಕೊಂಡು +ನೋಡುವೆನ್+ಎನ್ನ +ಸಾಮರ್ಥ್ಯದ +ಸಘಾಡದಲಿ
ಚಂಡಿಯಾದೆನು +ತಾನೆನುತ+ ಖತಿ
ಗೊಂಡು +ಮರಳಿತು+ ಸರ್ಪ+ಶರವ
ಅಖಂಡಳ್+ಆತ್ಮಜನತ್ತ +ಹಾಳಾಹಳದ+ ಚೂಣಿಯಲಿ

ಅಚ್ಚರಿ:
(೧) ಸರ್ಪಾಸ್ತ್ರವು ಅರ್ಜುನ ಬಳಿ ಹೋದ ಬಗೆ – ಸರ್ಪಶರವಾಖಂಡಳಾತ್ಮಜನತ್ತ ಹಾಳಾಹಳದ ಚೂಣಿಯಲಿ

ಪದ್ಯ ೪೨: ಶಲ್ಯನು ರಥದಿಂದ ಏಕೆ ಹಾರಿದನು?

ಮರುಳಲಾ ಮಾದ್ರೇಶ ಮರಳಿದ
ಶರವ ತೊಡುವೆನೆ ಸೈರಿಸೆನೆ ಕಾ
ತರಿಸಿ ವಾಘೆಯ ಬಿಸುಟು ಕಿಡಿಕಿಡಿವೋಗಿ ಖಾತಿಯಲಿ
ಅರಸನೊಲಿದಂತಾಗಲೆನ್ನದು
ಮರುಳುತನ ಕುಲಹೀನನಲಿ ಗುಣ
ವರಸಲೇಕೆಂದೆನುತ ಧುಮ್ಮಿಕ್ಕಿದನು ಧಾರುಣಿಗೆ (ಕರ್ಣ ಪರ್ವ, ೨೫ ಸಂಧಿ, ೪೨ ಪದ್ಯ)

ತಾತ್ಪರ್ಯ:
ಶಲ್ಯನ ಮಾತಿಗೆ ಕರ್ಣನು, ಎಲೈ ಶಲ್ಯ ನಿನಗೆಲ್ಲೋ ಮರುಳು, ಹಿಂದಿರುಗಿ ಬಂದ ಬಾಣವನ್ನು ನಾನು ತೊಟ್ಟೇನೇ? ಸಮಾಧಾನದಿಂದಿರು ಎನ್ನಲು, ಶಲ್ಯನು ಉದ್ವಿಗ್ನನಾಗಿ, ಕೈಯಲ್ಲಿದ್ದ ಹಗ್ಗವನ್ನು ಕೆಳಗೆಸೆದು ಕಿಡಿಕಿಡಿಯಾಗಿ ಸಿಟ್ಟಿನಿಂದ ದ್ರ್ಯೋಧನನು ಏನನ್ನಾದರೂ ಮಾಡಲಿ, ಕುಲಹೀನನಲ್ಲಿ ಗುಣವನ್ನು ನಿರೀಕ್ಷೆಮಾಡಿದುದು ನನ್ನ ಬೆಪ್ಪುತನ ಎಂದು ರಥದಿಂದ ಭೂಮಿಗೆ ಧುಮ್ಮಿಕ್ಕಿದನು.

ಅರ್ಥ:
ಮರುಳು: ಬುದ್ಧಿಭ್ರಮೆ, ಹುಚ್ಚು; ಮಾದ್ರೇಶ: ಶಲ್ಯ; ಮರಳು: ಹಿಂದಿರುಗಿದ; ಶರ: ಬಾಣ; ತೊಡು: ಧರಿಸು; ಸೈರಿಸು: ಸಮಾಧಾನದಿಂದಿರು; ಕಾತರ: ಕಳವಳ; ವಾಘೆ: ಲಗಾಮು; ಬಿಸುಟು: ಚೆಲ್ಲು, ಬಿಸಾಕು; ಕಿಡಿ: ಉದ್ವಿಗ್ನನಾಗಿ; ಖಾತಿ: ಕೋಪ; ಅರಸ: ರಾಜ; ಒಲಿ: ಬಯಸು, ಒಪ್ಪು; ಮರುಳು: ಬೆಪ್ಪು; ಕುಲ: ವಂಶ; ಹೀನ: ನೀಚ; ಗುಣ: ನಡತೆ; ಅರಸು: ಹುಡುಕು; ಧುಮ್ಮಿಕ್ಕು: ಕೆಳಗೆ ಹಾಗು; ಧಾರುಣಿ: ಭೂಮಿ;

ಪದವಿಂಗಡಣೆ:
ಮರುಳಲಾ+ ಮಾದ್ರೇಶ +ಮರಳಿದ
ಶರವ +ತೊಡುವೆನೆ +ಸೈರಿಸ್+ಎನೆ +ಕಾ
ತರಿಸಿ +ವಾಘೆಯ +ಬಿಸುಟು +ಕಿಡಿಕಿಡಿವೋಗಿ +ಖಾತಿಯಲಿ
ಅರಸನ್+ಒಲಿದಂತಾಗಲ್+ಎನ್ನದು
ಮರುಳುತನ +ಕುಲಹೀನನಲಿ +ಗುಣ
ವರಸಲೇಕ್+ಎಂದೆನುತ+ ಧುಮ್ಮಿಕ್ಕಿದನು +ಧಾರುಣಿಗೆ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮರುಳಲಾ ಮಾದ್ರೇಶ ಮರಳಿದ
(೨) ಕರ್ಣನನ್ನು ಹೀಯಾಳಿಸಿದ ಬಗೆ – ಕುಲಹೀನನಲಿ ಗುಣವರಸಲೇಕೆಂದೆನುತ ಧುಮ್ಮಿಕ್ಕಿದನು ಧಾರುಣಿಗೆ

ಪದ್ಯ ೪೧: ಕರ್ಣನು ತನ್ನ ಮನಸ್ಸಿನಲ್ಲಿ ಏನೆಂದು ಕೊಂಡನು?

ಮಾತೆಗಿತ್ತೆನು ಭಾಷೆಯನು ನಿ
ನ್ನಾತಗಳೊಳೈವರೊಳಗಾರಿದಿ
ರಾತಡೆಯು ತಲೆಗಾದು ಬಿಡುವೆನು ಕೊಲುವುದಿಲ್ಲೆಂದು
ಮಾತುಗಳು ಕವಲಾದ ಬಳಿಕಿ
ನ್ನೇತಕೀ ತನುವಿದನು ಪಾರ್ಥನ
ಖಾತಿಗೊಪ್ಪಿಸಿ ಕಳೆವೆನೆಂದನು ತನ್ನ ಮನದೊಳಗೆ (ಕರ್ಣ ಪರ್ವ, ೨೫ ಸಂಧಿ, ೪೧ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಮನಸ್ಸಿನಲ್ಲಿ ಆಲೋಚಿಸುತ್ತಾ, ನನ್ನ ತಾಯಿಗೆ ಒಂದು ಭಾಷೆಯನ್ನು ನೀಡಿದ್ದೆ, ನಿನ್ನ ಐವರು ಮಕ್ಕಳಲ್ಲಿ ಯಾರು ಇದಿರಾದರೂ ತಲೆ ಕಾಯುತ್ತೇನೆ, ಕೊಲ್ಲುವುದಿಲ್ಲವೆಂದು, ಆದರೆ ಈಗ ಕೊಟ್ಟ ಮಾತಿಗೆ ತಪ್ಪಿದ ಮೇಲೆ ನಾನು ಈ ದೇಹವನ್ನು ಹಿಡಿದು ಏನು ಫಲ? ಅರ್ಜುನನ ಕೋಪಕ್ಕೆ ನನ್ನ ದೇಹವನ್ನು ಒಪ್ಪಿಸುತ್ತೇನೆ ಎಂದು ತನ್ನ ಮನಸ್ಸಿನಲ್ಲಿ ಕರ್ಣನು ಆಲೋಚಿಸಿದನು.

ಅರ್ಥ:
ಮಾತೆ: ತಾಯಿ; ಇತ್ತೆನು: ನೀಡು; ಭಾಷೆ: ಮಾತು; ನಿನ್ನಾತ: ನಿನ್ನ ಮಕ್ಕಳು; ಇದಿರು: ಎದುರು; ತಲೆ: ಶಿರ; ಕಾದು: ಕಾಪಾಡು; ಬಿಡು: ತೊರೆ; ಕೊಲುವು: ಸಾಯಿಸು, ಕೊಲ್ಲು; ಕವಲು: ಭಿನ್ನತೆ; ಬಳಿಕ: ನಂತರ; ತನು: ದೇಹ; ಖಾತಿ: ಕೋಪ; ಒಪ್ಪಿಸು: ಅಂಗೀಕರಿಸು, ಸಮ್ಮತಿಸು; ಕಳೆ:ತೊರೆ; ಮನ: ಮನಸ್ಸು;

ಪದವಿಂಗಡಣೆ:
ಮಾತೆಗ್+ಇತ್ತೆನು+ ಭಾಷೆಯನು ನಿ
ನ್ನಾತಗಳೊಳ್+ಐವರೊಳಗ್+ಆರ್+ಇದಿರ್
ಆತಡೆಯು +ತಲೆ +ಕಾದು +ಬಿಡುವೆನು+ ಕೊಲುವುದಿಲ್ಲೆಂದು
ಮಾತುಗಳು +ಕವಲಾದ +ಬಳಿಕಿನ್
ಏತಕ್+ಈ+ ತನುವ್+ಇದನು +ಪಾರ್ಥನ
ಖಾತಿಗೊಪ್ಪಿಸಿ+ ಕಳೆವೆನೆಂದನು +ತನ್ನ +ಮನದೊಳಗೆ

ಅಚ್ಚರಿ:
(೧) ಕರ್ಣನ ಭಾಷೆ: ನಿನ್ನಾತಗಳೊಳೈವರೊಳಗಾರಿದಿರಾತಡೆಯು ತಲೆಗಾದು ಬಿಡುವೆನು ಕೊಲುವುದಿಲ್ಲೆಂದು
(೨) ಮಾತು ತಪ್ಪಿದೆ ಎಂದು ಹೇಳಲು – ಮಾತುಗಳು ಕವಲಾದ ಬಳಿಕ