ಪದ್ಯ ೧೪: ಶಲ್ಯನು ಕರ್ಣನನ್ನು ಹೇಗೆ ಹೊಗಳಿದನು?

ಲೇಸು ಮಾಡಿದೆ ಕರ್ಣ ಕೌರವ
ನೀಸುದಿನ ಸಾಕಿದ ಫಲವ ನೀ
ನೈಸಲೇ ತೋರಿದವನೀ ನೃಪಸೈನ್ಯಶರಧಿಯಲಿ
ಈಸು ಕಾಳೆಗವಾದುದೀ ಕ
ಟ್ಟಾಸುರದ ಸರಳೆಲ್ಲಿ ಗುಪ್ತಾ
ವಾಸವಾದುದು ಪೂತುರೆಂದನು ಶಲ್ಯನಿನಸುತನ (ಕರ್ಣ ಪರ್ವ, ೨೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಶಲ್ಯನು, ಭಲೇ ಕರ್ಣ ನೀನು ಒಳ್ಳೆಯ ಕೆಲಸವನ್ನೇ ಮಾಡಿದೆ ಕೌರವನು ಇಷ್ಟು ದಿನ ನಿನ್ನನ್ನು ಸಲಹಿದ್ದಕ್ಕೆ ತಕ್ಕ ಪ್ರತಿಫಲವನ್ನೇ ನೀಡುತ್ತಿರುವೆ, ಇಷ್ಟು ದಿನ ಮಹಾಯುದ್ಧವಾಯಿತು, ಈ ಅತಿಭಯಂಕರ ಅಸ್ತ್ರವನ್ನು ಎಲ್ಲಿ ಅಡಗಿಸಿಕೊಂಡಿದ್ದೆ? ಭಲೇ ಎಂದು ಶಲ್ಯನು ಕರ್ಣನನ್ನು ಹೊಗಳಿದನು.

ಅರ್ಥ:
ಲೇಸು: ಒಳಿತು; ಸಾಕು: ಸಲಹು; ಫಲ: ಫಲಿತಾಂಶ; ಐಸಲೇ: ಅಲ್ಲವೇ; ತೋರು: ಗೋಚರ; ನೃಪ: ರಾಜ; ಸೈನ್ಯ: ಸೇನೆ,ಬಲ; ಶರಧಿ: ಸಮುದ್ರ; ಕಾಳೆಗ: ಯುದ್ಧ; ಕಟ್ಟಾಸುರ: ಅತ್ಯಂತ ಭಯಂಕರ; ಸರಳು: ಬಾಣ; ಗುಪ್ತ: ರಹಸ್ಯ, ಗೌಪ್ಯ; ವಾಸ: ಇರುವಿಕೆ; ಗುಪ್ತಾವಾಸ: ಬಚ್ಚಿಟ್ಟುಕೊಳ್ಳು; ಪೂತು: ಭಲೇ; ಇನ: ಸೂರ್ಯ; ಸುತ: ಮಗ;

ಪದವಿಂಗಡಣೆ:
ಲೇಸು+ ಮಾಡಿದೆ +ಕರ್ಣ +ಕೌರವನ್
ಈಸುದಿನ +ಸಾಕಿದ +ಫಲವ +ನೀನ್
ಐಸಲೇ +ತೋರಿದವನ್+ಈ+ ನೃಪ+ಸೈನ್ಯ+ಶರಧಿಯಲಿ
ಈಸು +ಕಾಳೆಗವ್+ಆದುದ್+ಈ+ ಕ
ಟ್ಟಾಸುರದ +ಸರಳ್+ಎಲ್ಲಿ +ಗುಪ್ತಾ
ವಾಸವಾದುದು +ಪೂತುರ್+ಎಂದನು +ಶಲ್ಯನ್+ಇನ+ಸುತನ

ಅಚ್ಚರಿ:
(೧) ಕರ್ಣನನ್ನು ಕರೆದ ಬಗೆ – ಕರ್ಣ, ಇನಸುತ
(೨) ಕರ್ಣನನ್ನು ಹೊಗಳುವ ಪರಿ – ಕೌರವನೀಸುದಿನ ಸಾಕಿದ ಫಲವ ನೀನೈಸಲೇ ತೋರಿದವ

ಪದ್ಯ ೧೩: ಶಲ್ಯನು ಕರ್ಣನನ್ನು ಏಕೆ ಹೊಗಳಿದನು?

ಏನು ಸಾರಥಿ ಸರಳು ಪಾಂಡವ
ಸೇನೆಯನು ಗೆಲಲಹುದೆ ಪಾರ್ಥನ
ಮಾನಿನಿಗೆ ವೈಧವ್ಯದೀಕ್ಷಾವಿಧಿಯ ಕೊಡಲಹುದೆ
ಆನಲಮ್ಮುವರುಂಟೆ ನಿನಗಿದು
ಸಾನುರಾಗವೆ ಹೇಳೆನಲು ರವಿ
ಸೂನುವಿನ ರೌದ್ರಾಸ್ತ್ರವನು ಹೊಗಳಿದನು ಮಾದ್ರೇಶ (ಕರ್ಣ ಪರ್ವ, ೨೫ ಸಂಧಿ, ೧೩ ಪದ್ಯ)

ತಾತ್ಪರ್ಯ:
ಸರ್ಪಾಸ್ತ್ರವನ್ನು ಅರ್ಜುನನ ಮೇಲೆ ಹೂಡಿದ ನಂತರ ಶಲ್ಯನ ಕಡೆ ತಿರುಗಿ, ಏನು ಶಲ್ಯ ಈ ಅಸ್ತ್ರವು ಪಾಂಡವಸೇನೆಯನ್ನು ಗೆಲ್ಲಲು ಸಮರ್ಥವಾಗಿದೆಯೇ? ಅರ್ಜುನನ ಪತ್ನಿಗೆ ವೈಧವ್ಯದ ದೀಕ್ಷೆಯನ್ನು ಕೊಡಿಸಬಲ್ಲದೇ? ಇದನ್ನು ಇದಿರಿಸಬಲ್ಲವರು ಯಾರಾದರುಂಟೇ? ನಿನಗಿದು ಸಮ್ಮತವೇ? ಎಂದು ಕೇಳಲು ಶಲ್ಯನು ಕರ್ಣನ ಈ ಭಯಂಕರ ಅಸ್ತ್ರವನ್ನು ಹೊಗಳಿದನು.

ಅರ್ಥ:
ಸಾರಥಿ: ಸೂತ; ಸರಳು: ಬಾಣ; ಸೇನೆ: ಸೈನ್ಯ; ಗೆಲಲು: ಜಯ ಸಾಧಿಸಲು; ಮಾನಿನಿ: ಹೆಂಡತಿ, ಹೆಣ್ಣು; ವೈಧವ್ಯ: ಗಂಡನನ್ನು ಕಳೆದುಕೊಂಡಿರುವ ಸ್ಥಿತಿ; ದೀಕ್ಷೆ: ಮಂತ್ರೋಪದೇಶ; ವಿಧಿ: ನಿಯಮ; ಕೊಡು: ನೀಡು; ಆನು: ಯಾರಾದರು; ಅಮ್ಮು: ಸಾಮರ್ಥ್ಯ; ಸಾಧ್ಯ; ಸಾನುರಾಗ: ಪ್ರೀತಿಯಿಂದ ಕೂಡಿದ; ಹೇಳು: ತಿಳಿಸು; ರವಿ: ಸೂರ್ಯ; ಸೂನು: ಮಗ; ರೌದ್ರ: ಭಯಂಕರ; ಅಸ್ತ್ರ: ಶಸ್ತ್ರ, ಆಯುಧ; ಹೊಗಳು: ಪ್ರಶಂಶಿಸು; ಮಾದ್ರೇಶ: ಶಲ್ಯ;

ಪದವಿಂಗಡಣೆ:
ಏನು +ಸಾರಥಿ +ಸರಳು +ಪಾಂಡವ
ಸೇನೆಯನು +ಗೆಲಲ್+ಅಹುದೆ +ಪಾರ್ಥನ
ಮಾನಿನಿಗೆ+ ವೈಧವ್ಯ+ದೀಕ್ಷಾವಿಧಿಯ +ಕೊಡಲಹುದೆ
ಆನಲ್+ಅಮ್ಮುವರ್+ಉಂಟೆ +ನಿನಗಿದು
ಸಾನುರಾಗವೆ+ ಹೇಳ್+ಎನಲು +ರವಿ
ಸೂನುವಿನ +ರೌದ್ರಾಸ್ತ್ರವನು +ಹೊಗಳಿದನು+ ಮಾದ್ರೇಶ

ಅಚ್ಚರಿ:
(೧) ಪಾರ್ಥನು ಸಾಯುವನೇ ಎಂದು ಕೇಳಲು – ಪಾರ್ಥನ ಮಾನಿನಿಗೆ ವೈಧವ್ಯದೀಕ್ಷಾವಿಧಿಯ ಕೊಡಲಹುದೆ