ಪದ್ಯ ೪೬: ಅರ್ಜುನನು ಕೃಪ ಮತ್ತು ಅಶ್ವತ್ಥಾಮರನ್ನು ಹೇಗೆ ಯುದ್ಧಕ್ಕೆ ಕರೆದ?

ಇವರ ಹದನಿದು ಕರ್ಣನಾಡಿದ
ಕವಡಿಕೆಯ ಬೆಸುಗೊಳ್ಳಿರೈ ಕೌ
ರವನ ಸರ್ವಗ್ರಾಸಕಿವೆ ರಾಹುಗಳು ಲಟಕಟಿಸಿ
ನಿವಗೆ ಹರಿಬದೊಳೊಂದು ಮುಟ್ಟಿಗೆ
ರವಣವುಂಟೇ ಹಾಯ್ಕಿ ನಿಮ್ಮಾ
ಟವನು ನೋಡುವೆನೆಂದು ಕರೆದನು ಕೃಪನ ಗುರುಸುತನ (ಕರ್ಣ ಪರ್ವ, ೨೪ ಸಂಧಿ, ೪೬ ಪದ್ಯ)

ತಾತ್ಪರ್ಯ:
ಇವರ ಹಣೆಬರಹವು ಇಷ್ಟಾಯಿತು, ಕರ್ಣನ ಮೋಸದ ಮಾತೇನು ಕೇಳಿರಿ, ಕೌರವನ ಸರ್ವಸ್ವವನ್ನು ನುಂಗಲು ರಾಹುಗಳು ಆತುರದಿಂದಿವೆ. ಈ ಯುದ್ಧದಲ್ಲಿ ನಿಮ್ಮದೂ ಒಂದು ಪಣವಿದ್ದರೆ ಅದನ್ನು ಕಟ್ಟಿ ಆಟವಾಡಿ, ನಾನು ನೋಡುತ್ತೇನೆ ಎಂದು ಕೃಪ ಮತ್ತು ಅಶ್ವತ್ಥಾಮರನ್ನು ಅರ್ಜುನನು ಆಹ್ವಾನಿಸಿದನು.

ಅರ್ಥ:
ಹದ: ಸರಿಯಾದ ಸ್ಥಿತಿ; ಆಡು: ಮಾತಾಡು; ಕವಡಿಕೆ: ಮೋಸ; ಬೆಸುಗೊಳ್: ಕೇಳು, ಪ್ರಾರ್ಥಿಸು; ಸರ್ವ: ಎಲ್ಲಾ; ಗ್ರಾಸ:ತುತ್ತು, ಆಹಾರ, ಊಟ; ರಾಹು: ನವಗ್ರಹಗಳಲ್ಲಿ ಒಂದು; ಲಟಕಟಿಸು: ಉದ್ರೇಕಗೊಳ್ಳು, ಚಕಿತನಾಗು; ಹರಿಬ:ಯುದ್ಧ, ಕಾರ್ಯ; ಮುಟ್ಟಿಗೆ: ಮುಚ್ಚಿದ ಅಂಗೈ, ಮುಷ್ಟಿ, ಹಿಡಿ; ರವಣ: ಹಾಯ್ಕು: ಇಡು, ಇರಿಸು, ತೊಡು; ಆಟ: ಕ್ರೀಡೆ; ನೋಡು: ವೀಕ್ಷಿಸು; ಕರೆ: ಬರೆಮಾಡು; ಸುತ: ಮಗ; ಗುರು: ಆಚಾರ್ಯ;

ಪದವಿಂಗಡಣೆ:
ಇವರ+ ಹದನಿದು +ಕರ್ಣನಾಡಿದ
ಕವಡಿಕೆಯ +ಬೆಸುಗೊಳ್ಳಿರೈ+ ಕೌ
ರವನ +ಸರ್ವಗ್ರಾಸಕಿವೆ +ರಾಹುಗಳು +ಲಟಕಟಿಸಿ
ನಿವಗೆ +ಹರಿಬದೊಳ್+ಒಂದು +ಮುಟ್ಟಿಗೆ
ರವಣವುಂಟೇ +ಹಾಯ್ಕಿ +ನಿಮ್ಮಾ
ಟವನು +ನೋಡುವೆನೆಂದು +ಕರೆದನು +ಕೃಪನ +ಗುರುಸುತನ

ಅಚ್ಚರಿ:
(೧) ಪದಬಳಕೆ – ಕೌರವನ ಸರ್ವಗ್ರಾಸಕಿವೆ ರಾಹುಗಳು ಲಟಕಟಿಸಿ

ಪದ್ಯ ೪೫: ಓಡುತ್ತಿದ್ದ ಪರಾಕ್ರಮಿಗಳಿಗೆ ಅರ್ಜುನನು ಏನು ಹೇಳಿದ?

ಹೋಗದಿರಿ ಹೋಗದಿರಿ ದಳಪತಿ
ಯಾಗುಹೋಗರಿಯದೆ ನೃಪಾಲನ
ಮೂಗನಾರಿಗೆ ಮಾರಿದಿರಿ ಕೊಂಬವರು ನಾವಲ್ಲ
ಈ ಗುರುವರೀ ಪರಿ ಪಲಾಯನ
ಯೋಗಸಿದ್ಧರೆ ಸಾಹಸಿಕರೈ
ಜಾಗೆನುತ ಬೆಂಬತ್ತಿ ಹುಡಿಗುಟ್ಟಿದ ಮಹಾರಥರ (ಕರ್ಣ ಪರ್ವ, ೨೪ ಸಂಧಿ, ೪೫ ಪದ್ಯ)

ತಾತ್ಪರ್ಯ:
ಓಡುತ್ತಿದ್ದ ಮಹಾರಥರ ಬೆನ್ನುಹತ್ತಿದ ಅರ್ಜುನನು ಹೋಗಬೇಡಿರಿ, ಹೋಗಬೇಡಿರಿ ನಿಲ್ಲಿರಿ, ನಿಮ್ಮ ಸೇನಾಪತಿ ಏನಾದನೆಂಬುದನ್ನು ಮರೆತು ಅರಸನ ಮೂಗನ್ನು ಯಾರಿಗೆ ಮಾರುತ್ತೀರಿ, ನಾವಂತೂ ಕೊಂಡುಕೊಳ್ಳುವುದಿಲ್ಲ, ಇಂಥ ವೀರರು ಪಲಾಯನ ಯೋಗಸಿದ್ಧರಾದಿರಾ ಭಲೇ ಎಂದು ಬೊಬ್ಬಿರಿದು ಅವರೆಲ್ಲರನ್ನು ಪುಡಿ ಪುಡಿ ಮಾಡಿದನು.

ಅರ್ಥ:
ಹೋಗು: ತೆರಳು; ದಳಪತಿ: ಸೇನಾಧಿಪತಿ; ಆಗುಹೋಗು: ವಿಚಾರ, ಸಮಾಚಾರ; ಅರಿ: ತಿಳಿ; ನೃಪಾಲ: ರಾಜ; ಮೂಗು: ನಾಸಿಕ; ಮಾರು: ವಿಕ್ರಯಿಸು; ಕೊಂಬು: ಕೊಂಡುಕೊಳ್ಳು; ಗರುವ: ದರ್ಪ, ಹಿರಿಯ, ಶ್ರೇಷ್ಠ; ಪರಿ: ರೀತಿ; ಪಲಾಯನ: ಓಟ; ಯೋಗ: ಏಕಾಗ್ರತೆ, ಧ್ಯಾನ, ಉಪಾಸನಾ ಭಾಗ; ಯೋಗಸಿದ್ಧ: ಯೋಗಿ; ಸಾಹಸಿಕ: ಪರಾಕ್ರಮಿ; ಜಾಗು: ಎಚ್ಚರ; ತಡಮಾಡು; ಬೆಂಬತ್ತು: ಹಿಂಬಾಲಿಸು; ಹುಡಿಗುಟ್ಟು: ಮಣ್ಣುಮಾಡು, ನಾಶಮಾಡು; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ಹೋಗದಿರಿ+ ಹೋಗದಿರಿ +ದಳಪತಿ
ಆಗುಹೋಗ್+ಅರಿಯದೆ+ ನೃಪಾಲನ
ಮೂಗನ್+ಆರಿಗೆ+ ಮಾರಿದಿರಿ+ ಕೊಂಬವರು +ನಾವಲ್ಲ
ಈ +ಗುರುವರ್+ಈ+ ಪರಿ+ ಪಲಾಯನ
ಯೋಗಸಿದ್ಧರೆ+ ಸಾಹಸಿಕರೈ
ಜಾಗೆನುತ +ಬೆಂಬತ್ತಿ +ಹುಡಿಗುಟ್ಟಿದ +ಮಹಾರಥರ

ಅಚ್ಚರಿ:
(೧) ಕೌರವರ ಸೈನಿಕರನ್ನು ಹಂಗಿಸುವ ಬಗೆ – ಈ ಗುರುವರೀ ಪರಿ ಪಲಾಯನ ಯೋಗಸಿದ್ಧರೆ ಸಾಹಸಿಕರೈ ಜಾಗೆನುತ

ಪದ್ಯ ೪೪: ಕುರುಸೈನಿಕರ ಸ್ಥಿತಿ ಹೇಗಿತ್ತು?

ಬಿಡುದಲೆಯಲೋಡಿದರು ಬಿರುದಿನ
ತೊಡರ ಬಿಸುಟರು ವಾಹನಂಗಳ
ತೊಡಕ ಬಿಟ್ಟರು ನೆಲಕೆ ಕೈಯೆಡಗೊಟ್ಟು ಕೈದುಗಳ
ಅಡಸಿ ಕಾವ ನರಪ್ರತಾಪದ
ಕಡುವಿಸಿಲ ಬೇಗೆಯಲಿ ವೀರದ
ಮಡುಗಳುರೆ ಬತ್ತಿದವು ಮೋರೆಗಳೊಣಗಿ ಪಟುಭಟರ (ಕರ್ಣ ಪರ್ವ, ೨೪ ಸಂಧಿ, ೪೪ ಪದ್ಯ)

ತಾತ್ಪರ್ಯ:
ಕುರುವೀರರು ಬೆದರಿ ತಲೆ ಕೆದರಿಕೊಂಡು ಓಡಿಹೋದರು. ಬಿರುದಿನ ಆಭರಣಗಳನ್ನು ಕಿತ್ತೆಸೆದರು. ಆಯುಧಗಳನ್ನು ನೆಲಕ್ಕೆಸೆದು ವಾಹನಗಳಿಂದ ಧುಮುಕಿ ಓಡಿದರು. ಪಟುಭಟರ ಮೋರೆಗಳು ಒಣಗಿದವು. ಮುನ್ನುಗ್ಗಿ ಕಾದಾಡುವ ಅರ್ಜುನನ ಪ್ರತಾಪದ ಬಿಸಿಲಿಗೆ ಇದಿರಾಳಿಗಳ ಪರಾಕ್ರಮದ ಮಡುಗಳು ಬತ್ತಿದವು.

ಅರ್ಥ:
ಬಿಡುದಲೆ: ಬಿರಿಹೋಯ್ದ ಕೂದಲಿನ ತಲೆ; ಓಡು: ಪಲಾಯನ ಮಾಡು; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ತೊಡರು: ಸರಪಳಿ, ಬಂಧನ; ಆಭರಣ; ಬಿಸುಟು: ಬಿಸಾಕು; ವಾಹನ: ಒಯ್ಯುವ ಸಾಧನ; ತೊಡಕು: ಸಿಕ್ಕು, ಗೋಜು; ನೆಲ: ಭೂಮಿ; ಬಿಟ್ಟು: ತ್ಯಜಿಸು; ಕೈದು: ಕತ್ತಿ, ಆಯುಧ; ಕೈಯೆಡ: ವಶ; ಅಡಸು: ಬಿಗಿಯಾಗಿ ಒತ್ತು; ಕಾವ: ಬಿಸಿ, ಉಷ್ಣತೆ; ನರ:ಅರ್ಜುನ; ಪ್ರತಾಪ: ಪರಾಕ್ರಮ; ಕಡು: ಬಹಳ; ವಿಸಿಲ: ಬಿಸಿಲು; ಬೇಗೆ: ಬೆಂಕಿ, ಕಿಚ್ಚು; ವೀರ: ಪರಾಕ್ರಮ; ಮಡು: ತಗ್ಗು, ಗುಣಿ; ಉರೆ: ಅತಿಶಯವಾಗಿ; ಬತ್ತು: ಒಣಗು, ಆರು; ಮೋರೆ: ಮುಖ; ಒಣಗು: ಬತ್ತು; ಪಟು: ಸಮರ್ಥನಾದವನು; ಭಟ: ಸೈನಿಕ;

ಪದವಿಂಗಡಣೆ:
ಬಿಡು+ತಲೆಯಲ್+ಓಡಿದರು +ಬಿರುದಿನ
ತೊಡರ+ ಬಿಸುಟರು+ ವಾಹನಂಗಳ
ತೊಡಕ+ ಬಿಟ್ಟರು +ನೆಲಕೆ +ಕೈಯೆಡಗೊಟ್ಟು+ ಕೈದುಗಳ
ಅಡಸಿ+ ಕಾವ+ ನರ+ಪ್ರತಾಪದ
ಕಡುವಿಸಿಲ+ ಬೇಗೆಯಲಿ +ವೀರದ
ಮಡುಗಳುರೆ+ ಬತ್ತಿದವು+ ಮೋರೆಗಳ್+ಒಣಗಿ +ಪಟುಭಟರ

ಅಚ್ಚರಿ:
(೧) ತೊಡರ, ತೊಡಕ – ಪ್ರಾಸ ಪದ
(೨) ಉಪಮಾನದ ಪ್ರಯೋಗ – ಅಡಸಿ ಕಾವ ನರಪ್ರತಾಪದ ಕಡುವಿಸಿಲ ಬೇಗೆಯಲಿ ವೀರದ
ಮಡುಗಳುರೆ ಬತ್ತಿದವು ಮೋರೆಗಳೊಣಗಿ ಪಟುಭಟರ

ಪದ್ಯ ೪೩: ಕುರುಸೇನೆಯವರ ಆಟ ಏಕೆ ಹಾಸ್ಯಾಸ್ಪದವಾಯಿತು?

ಸೀಳಿದನು ಸಮರಥರ ಸುಳಿಗೊಂ
ಡಾಳ ಸದೆದನು ಸವರಿದನು ಭೂ
ಪಾಲಪುತ್ರರನಖಿಳದೇಶದ ರಾಜಸಂತತಿಯ
ಆಳು ಮುರಿದುದು ಮಾನಹಾನಿಯ
ಹೇಳುವಡೆ ನಗೆಯದನು ಕುರುಬಲ
ಜಾಲದಲಿ ಜಳ್ಳುಗರು ಬಿದ್ದುದು ಭಂಗ ಶರಧಿಯಲಿ (ಕರ್ಣ ಪರ್ವ, ೨೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ಅರ್ಜುನನು ಸಮರಥರನ್ನು ಸೀಳಿದನು, ಸುತ್ತುವರಿದವರನ್ನು ಸದೆದನು. ಎಲ್ಲ ದೇಶದ ರಾಜರನ್ನು ರಾಜಪುತ್ರರನ್ನು ಸಂಹರಿಸಿದನು. ಕುರುಸೇನೆ ಮಾನಹಾನಿಯಿಂದ ಭಂಗಗೊಂಡಿತು. ಕುರುಸೇನೆಯ ವೀರರ ಆಟೋಪ ಹಾಸ್ಯಾಸ್ಪದವಾಯಿತು.

ಅರ್ಥ:
ಸೀಳು: ಕತ್ತರಿಸು, ಚೂರು, ತುಂಡು; ಸಮರಥ: ಪರಾಕ್ರಮಿ; ಸುಳಿ:ಆವರಿಸು, ಮುತ್ತು; ಆಳು: ಸೇವಕ, ಸೈನಿಕರು; ಸದೆ: ಹೊಡೆ, ಸಾಯಿಸು; ಸವರು: ನಿವಾರಿಸು, ನಾಶಮಾಡು; ಭೂಪಾಲ: ರಾಜ; ಪುತ್ರ: ಮಕ್ಕಳು; ಅಖಿಳ: ಎಲ್ಲಾ; ದೇಶ: ರಾಷ್ಟ್ರ; ಸಂತತಿ:ವಂಶ; ಆಳು: ಸೈನಿಕ; ಮುರಿ: ಸೀಳು; ಮಾನ: ಮರ್ಯಾದೆ, ಗೌರವ; ಹಾನಿ: ಹಾಳು; ಹೇಳು: ತಿಳಿಸು; ನಗೆ: ಸಂತಸ; ಕುರುಬಲ: ಕೌರವರ ಸೈನ್ಯ; ಜಾಲ: ಬಲೆ, ಸಮೂಹ; ಜಳ್ಳುಗ: ಶಕ್ತಿಹೀನ; ಬಿದ್ದು: ಕೆಳಗೆ ಬೀಳು; ಭಂಗ: ಮುರಿಯುವಿಕೆ, ಚೂರು ಮಾಡು; ಶರಧಿ: ಸಮುದ್ರ;

ಪದವಿಂಗಡಣೆ:
ಸೀಳಿದನು +ಸಮರಥರ+ ಸುಳಿಗೊಂಡ್
ಆಳ +ಸದೆದನು +ಸವರಿದನು+ ಭೂ
ಪಾಲ+ಪುತ್ರರನ್+ಅಖಿಳ+ದೇಶದ+ ರಾಜ+ಸಂತತಿಯ
ಆಳು +ಮುರಿದುದು +ಮಾನಹಾನಿಯ
ಹೇಳುವಡೆ+ ನಗೆಯದನು +ಕುರುಬಲ
ಜಾಲದಲಿ +ಜಳ್ಳುಗರು +ಬಿದ್ದುದು +ಭಂಗ +ಶರಧಿಯಲಿ

ಅಚ್ಚರಿ:
(೧) ಸ ಕಾರಸ ಸಾಲು ಪದಗಳು – ಸೀಳಿದನು ಸಮರಥರ ಸುಳಿಗೊಂಡಾಳ ಸದೆದನು ಸವರಿದನು