ಪದ್ಯ ೩: ಯಾರು ಜಗತ್ತಿನಲ್ಲಿ ಶ್ರೇಷ್ಠರು?

ಘನ ರಜೋಗುಣದಲ್ಲಿ ಚತುರಾ
ನನ ತಮೋಗುಣದಲ್ಲಿ ಶಂಕರ
ನೆನಿಸಿ ಸತ್ವಗುಣಾನುಗತಿಯಲಿ ವಿಷ್ಣುವೆಂದೆನಿಸಿ
ಘನ ಜಗನ್ಮಯನಾಗಿ ಸರ್ವಾ
ತ್ಮನು ಮಹೇಶ್ವರನೆನಿಪನೀತನ
ನೆನಹನೀತನ ನಿಜವನರಿವ ಮಹಾತ್ಮರಾರೆಂದ (ಸಭಾ ಪರ್ವ, ೧೦ ಸಂಧಿ, ೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ರಜೋಗುಣದಲ್ಲಿ ಹಿರಣ್ಯಗರ್ಭ ಬ್ರಹ್ಮನು, ತಮೋ ಗುಣದಲ್ಲಿ ಶಂಕರನು, ಸತ್ವಗುಣದಲ್ಲಿ ಶ್ರೀಮನ್ನಾರಾಯಣನು, ಇವನೇ ಜಗತ್ತಾಗಿದ್ದಾನೆ, ಎಲ್ಲರ ಜೀವ ಉಸಿರಲ್ಲೂ ಇವನೇ ಇರುವವನು, ಇವನೇ ಮಹೇಶ್ವರನು, ಇವನ ಇಚ್ಛೆಯೇನು, ಇವನ ಸ್ವರೂಪವೇನು ಎನ್ನುವುದನ್ನು ತಿಳಿದವರು ಮಹಾತ್ಮರು ಎಂದು ಭೀಷ್ಮರು ತಿಳಿಸಿದರು.

ಅರ್ಥ:
ಘನ: ಶ್ರೇಷ್ಠ; ರಜ: ರಜಸ್ಸು, ಮೂರು ಗುಣಗಳಲ್ಲಿ ಒಂದು; ಚತುರ: ನಾಲ್ಕು; ಆನನ: ಮುಖ; ಚತುರಾನನ: ಬ್ರಹ್ಮ; ತಮ: ಕತ್ತಲೆ, ಅಂಧಕಾರ, ಗುಣಗಳಲ್ಲಿ ಒಂದು; ಶಂಕರ: ಶಿವ; ಸತ್ವ: ಒಳ್ಳೆಯ; ಗುಣ: ನಡತೆ, ಸ್ವಭಾವ; ಗತಿ: ಚಲನೆ; ವಿಷ್ಣು: ನಾರಾಯಣ; ಜಗ: ಜಗತ್ತು, ವಿಶ್ವ; ಮಯ: ಆವರಿಸು; ಸರ್ವಾತ್ಮ: ಎಲ್ಲರ ಜೀವ, ಉಸಿರು; ಮಹೇಶ್ವರ: ದೇವರ ದೇವ; ನೆನಹು: ಜ್ಞಾಪಿಸಿ, ಮನನ; ನಿಜ: ದಿಟ, ಸತ್ಯ; ಅರಿ: ತಿಳಿ; ಮಹಾತ್ಮ: ಶ್ರೇಷ್ಠ;

ಪದವಿಂಗಡಣೆ:
ಘನ +ರಜೋಗುಣದಲ್ಲಿ+ ಚತುರಾ
ನನ +ತಮೋಗುಣದಲ್ಲಿ+ ಶಂಕರನ್
ಎನಿಸಿ +ಸತ್ವಗುಣಾನು+ಗತಿಯಲಿ+ ವಿಷ್ಣುವೆಂದೆನಿಸಿ
ಘನ +ಜಗನ್ಮಯನಾಗಿ+ ಸರ್ವಾ
ತ್ಮನು +ಮಹೇಶ್ವರನ್+ಎನಿಪನ್+ಈತನ
ನೆನಹನ್+ಈತನ +ನಿಜವನರಿವ+ ಮಹಾತ್ಮರಾರೆಂದ

ಅಚ್ಚರಿ:
(೧) ಮೂರು ಗುಣಗಳ ವಿವರಣೆ
(೨) ಕೃಷ್ಣನ ಗುಣಗಾನ – ಜಗನ್ಮಯ, ಸರ್ವಾತ್ಮ, ಮಹೇಶ್ವರ

ಪದ್ಯ ೨: ಯಾವ ರೀತಿ ಭೀಷ್ಮರು ಕೃಷ್ಣನ ಲೀಲೆಯನ್ನು ಹೇಳುತ್ತೇನೆಂದರು?

ವರ ಋಷಿಗಳಾಜ್ಞೆಯಲಿ ವಿಶ್ವಂ
ಭರನ ವಿಷಯೀಕರಿಸಿ ರಾಜಾ
ಧ್ವರ ಸಮರ್ಥನ ಭವವಿನಾಶನ ಸುಪ್ರಯೋಜಕನ
ಅರಿವತೆರದಿಂದೆನ್ನ ಮತಿಗೋ
ಚರಿಸಿದುದ ಹೇಳುವೆನು ಕೃಷ್ಣನ
ಪರಮಲೀಲಾ ಲಲಿತ ಚರಿತವನೆಂದನಾ ಭೀಷ್ಮ (ಸಭಾ ಪರ್ವ, ೧೦ ಸಂಧಿ, ೨ ಪದ್ಯ)

ತಾತ್ಪರ್ಯ:
ಪರಮ ಶ್ರೇಷ್ಠ ಋಷಿ ಮುನಿಗಳ ಅಪ್ಪಣೆಯನ್ನು ಪಡೆದು, ವಿಶ್ವವನ್ನೇ ತುಂಬಿರುವವನನ್ನು, ವಿಷಯವನ್ನಾಗಿ ಮಾಡಿಕೊಳ್ಳುತ್ತೇನೆ, ಅವನ ಸ್ಮರಣೆ ಕೀರ್ತನೆಗಳಿಗೆ ಹುಟ್ಟು ಸಾವುಗಳ ವಿಷವರ್ತುಲವಾದ ಸಂಸರವು ಇಲ್ಲದಂತಾಗುವುದೇ ಪ್ರಯೋಜನ. ಅಂತಹವನನ್ನು ನನ್ನ ಮತಿಗೆ ತೋರಿದಂತೆ ನಾನು ತಿಳಿದಂತೆ ಶ್ರೀಕೃಷ್ಣನ ಸುಂದರವಾದ ಹೆಚ್ಚಿನದಾದ ಚರಿತ್ರೆಯನ್ನು ಹೇಳುತ್ತೇನೆ ಎಂದು ಭೀಷ್ಮರು ತಿಳಿಸಿದರು.

ಅರ್ಥ:
ವರ: ಶ್ರೇಷ್ಠ; ಋಷಿ: ಮುನಿ; ಆಜ್ಞೆ: ಅಪ್ಪಣೆ; ವಿಶ್ವಂಭರ: ವಿಶ್ವವನ್ನು ತುಂಬಿದವ; ವಿಶ್ವ: ಜಗತ್ತು; ಅಂಬರ: ಆಕಾಶ; ವಿಷಯ: ವಿಚಾರ; ರಾಜ: ನೃಪ; ಅಧ್ವರ: ಯಜ್ಞ; ರಾಜಾಧ್ವರ: ರಾಜಸೂಯ ಯಜ್ಞ; ಸಮರ್ಥ: ಶಕ್ತಿಶಾಲಿಯಾದುದು; ಭವ: ಇರುವಿಕೆ, ಅಸ್ತಿತ್ವ; ವಿನಾಶ: ಹಾಳು; ಪ್ರಯೋಜಕ: ಉಪಯೋಗ; ಅರಿ: ತಿಳಿ; ಮತಿ: ಬುದ್ಧಿ; ಗೋಚರಿಸು: ತೋರು; ಹೇಳು: ತಿಳಿಸು; ಪರಮ: ಶ್ರೇಷ್ಠ; ಲೀಲಾ: ಮಾಯೆ; ಲಲಿತ: ಸುಂದರವಾದ; ಚರಿತ: ಕಥೆ;

ಪದವಿಂಗಡಣೆ:
ವರ +ಋಷಿಗಳ್+ಆಜ್ಞೆಯಲಿ +ವಿಶ್ವಂ
ಭರನ +ವಿಷಯೀಕರಿಸಿ+ ರಾಜ
ಅಧ್ವರ +ಸಮರ್ಥನ +ಭವವಿನಾಶನ+ ಸುಪ್ರಯೋಜಕನ
ಅರಿವ+ತೆರದಿಂದ್+ಎನ್ನ +ಮತಿಗೋ
ಚರಿಸಿದುದ +ಹೇಳುವೆನು +ಕೃಷ್ಣನ
ಪರಮಲೀಲಾ +ಲಲಿತ +ಚರಿತವನೆಂದನಾ +ಭೀಷ್ಮ

ಅಚ್ಚರಿ:
(೧) ಕೃಷ್ಣನನ್ನು ಹೊಗಳಿದ ಬಗೆ – ಭವವಿನಾಶನ, ಸುಪ್ರಯೋಜಕನ
(೨) ಭೀಷ್ಮರು ವಿನಯಗುಣ – ಅರಿವತೆರದಿಂದೆನ್ನ ಮತಿಗೋಚರಿಸಿದುದ ಹೇಳುವೆನು ಕೃಷ್ಣನ
ಪರಮಲೀಲಾ ಲಲಿತ ಚರಿತವನೆಂದನಾ ಭೀಷ್ಮ

ನುಡಿಮುತ್ತುಗಳು: ಸಭಾ ಪರ್ವ, ೧೦ ಸಂಧಿ

  • ಅರಿವತೆರದಿಂದೆನ್ನ ಮತಿಗೋಚರಿಸಿದುದ ಹೇಳುವೆನು ಕೃಷ್ಣನ ಪರಮಲೀಲಾ ಲಲಿತ ಚರಿತವನೆಂದನಾ ಭೀಷ್ಮ – ಪದ್ಯ ೨
  • ಹೊಳೆವುದಳಿವುದು ವಿಶ್ವವೀತನಸುಳಿವು ತೋರುವುದಿಲ್ಲ ಮಾಯಾಲಲನೆಯಿಕ್ಕಿದ ಮದ್ದು ಜೀವರಿಗೆಂದನಾ ಭೀಷ್ಮ – ಪದ್ಯ ೫
  • ಆತುರಿಯನಾತುರಿಯ ತುರಿಯಾತೀತ ಲಕ್ಷಣ ನಿತ್ಯ ನಿರ್ಮಳ ನೀತನಮಳ ವ್ಯಕ್ತಿ ಚಿನ್ಮಯನೆಂದನಾ ಭೀಷ್ಮ – ಪದ್ಯ ೬
  • ಕರ್ಮವಿರಾಮದಲಿ ಕುದಿದವರು ಮಾಯಾಕಾಮಿನಿಯ ಕೈಮಸಕದಲಿ ಮರುಳಾಗದಿರರೆಂದ – ಪದ್ಯ ೭
  • ಇರದೆ ತಿಲದಲಿ ತೈಲ ಕಾಷ್ಠದೊಳೆರವ ತಹರೇ ಹುತವಹನ – ಪದ್ಯ ೮
  • ಹೂಹೆಗಳು ಹೊಯ್ದಾಡವೇ ನಿರ್ವಾಹ ಸೂತ್ರದ ಕುಣಿಕೆಗಾರನ ಗಾಹಿನಲಿ – ಪದ್ಯ ೯
  • ಭೀತನೊಬ್ಬನು ಕನಸಿನಲಿ ತನ್ನಾತಲೆಯ ತಾನರಿದು ಪಿಡಿದುದನೇತರಿಂದಲಿ ಕಂಡನೈ – ಪದ್ಯ ೧೦
  • ಕುಮತಿ ಕಪಿಗೇಕಮಲ ಮಾಣಿಕ – ಪದ್ಯ ೧೧
  • ಭ್ರಮೆಯ ಭುಜಗನೆ ರಜ್ಜುವೋ ಜಂಗಮವೊ – ಪದ್ಯ ೧೧
  • ತೋರುವೀ ತೋರಿಕೆಯ ತುಷವನು ತೂರಿದರೆ – ಪದ್ಯ ೧೨
  • ನೆಳಲು ಜಲದಲಿ ನಡುಗಲಿನ ಮಂಡಲಕೆ ಕಂಪವೆ, ಧೂಮಶಿಖಿ ಕುಪ್ಪಳಿಸಿದರೆ ಕಂದುವದೆ ನಭ, ಕೆಂಧೂಳಿಯೊಡೆ ಮುರಿದು ಸುಳಿದರನಿಲನ ತೊಳೆವರೇ – ಪದ್ಯ ೧೪
  • ಕೊಲೆಯ ಕವತೆಯ ಕನಸಿನಲಿ ಕಳವಳಿಸಿದರೆ ದಿಟವೇ – ಪದ್ಯ ೧೬
  • ಮಹತ್ವದೊಳುರು ಮಹತ್ವದಲಿ ಎಸೆವನಣುವಿಂಗಣುವೆನಿ – ಪದ್ಯ ೨೦
  • ದೇವನ ರೋಮಕೂಪದೊಳಗಣಿತಾಮರ ನಿಕರವಿಹುದಿದನರಿವರಾರೆಂದ – ಪದ್ಯ ೨೩
  • ಪಾವನಕೆ ಪಾವನನು ಜೀವರ ಜೀವನನು ಮೃತ್ಯುವಿಗೆ ಮೃತ್ಯು – ಪದ್ಯ ೨೬
  • ಏಕೆ ಕನ್ನಡಿ ಕುರುಡರಿಗೆ, ಏಕೆ ಸಾಳಗ ಶುದ್ಧ ಬಧಿರರಿಗೆ, ಏಕೆ ಮೂರ್ಖಸಮಾಜದಲಿ ಸಾಹಿತ್ಯ ಸನ್ನಾಹ, ಏಕೆ ಖಳರಿಗೆ ನಯವಿಧಾನ ವ್ಯಾಕರಣ ಪಾಂಡಿತ್ಯ – ಪದ್ಯ ೩೬
  • ತಮನೆಂಬಸುರನನು ಕರಘಾತಿಯಿಂದವೆ ಕೆಡಹಿ ವೇದವನೀತ ತಂದನು ಮತ್ಸರೂಪಿನೊಳೆಂದನಾ ಭೀಷ್ಮ – ಪದ್ಯ ೩೮
  • ಹೇಳಲಜ ರುದ್ರಾಮರೇಂದ್ರರ ತಾಳಿಗೆಗಳೊಣಗಿದವು – ಪದ್ಯ ೪೧
  • ಆದುದಾವಿರ್ಭಾವ ಸಿಡಿಲಿನಸೋದರದ ಕಣ್ಣುಗಳ ಭಾಳದಬೀದಿಗಿಚ್ಚಿನ ರೌದ್ರದಲಿ ನರಸಿಂಹ ರೂಪಾಗಿ – ಪದ್ಯ ೪೩
  • ಭುಗಿ ಭುಗಿಲ್ ಭುಗಿಲೆಂದು ಕಬ್ಬೊಗೆ ನೆಗೆಯಲುರಿ ಡೆದಬುಜಜಾಂಡದ ಬಗರಗೆಯ ಭೇದಿಸಿತು – ಪದ್ಯ ೪೪
  • ಗೋವಿಂದನಾರೆಂದರಿಯೆಲಾ ಹರಿಯೊಡನೆ ಜಂಬುಕ ನೊರಲಿದರೆ ನಾನೇನ ಹೇಳುವೆನೆಂದನಾ ಭೀಷ್ಮ ಪದ್ಯ ೪
  • ಬಾಯಿಬಡುಕರು ಬಗುಳಿದರೆ ಹರಿಯಾಯತಿಕೆ ಪಾಸಟಿಯೆ ನಿಗಮದ ಬಾಯ ಬೀಯಗವೀ ಮುಕುಂದನನರಿವರಾರೆಂದ – ಪದ್ಯ ೪೭
  • ಹುಲುಮೊರಡಿ ಸೆಣಸುವುದೇ ಸುರಾದ್ರಿಯೊಳೆಂದನಾ ಭೀಷ್ಮ – ಪದ್ಯ ೪೯
  • ಹರಗಿರಿಯನೊಡಯೆತ್ತಿದುಬ್ಬಟೆಯರಸಲಾ ದಶವದನನಾತನ ಶಿರದುಪಾರವನಿಟ್ಟು ದಣಿಸನೆ ದೆಸೆಯ ದೇವಿಯರ – ಪದ್ಯ ೫೧
  • ಕೆಣಕಿದನು ದಾನವನನಾಗಳೆ ಹಣಿದವನ ಹೊಯ್ದಮಳ ಚಕ್ರದ ಗೊಣೆಯದಲಿ ಮೆರೆಸಿದನು ತಲೆಯನು ದಿವಿಜನಗರಿಯಲಿ – ಪದ್ಯ ೫೪
  • ಕರುಗಾದವನ ಕೈಯಿಂದ ಮಡಿದುದು ಕಂಸ ಪರಿವಾರ – ಪದ್ಯ ೫೬
  • ದಿವಿಜರಾಯನಲಾಯದಲಿ ಲಂಬಿಸಿದರಾ – ಪದ್ಯ ೬೧
  • ಇಂಗಿತಲರಿವುದು ಮಹಾತ್ಮರಿಗಂಗವಿದು; ಮಧ್ಯಮರು ಕರ್ಣಪ ಥಂಗಳಲಿ ಗೋಚರಿಸಲರಿವುದು ಲೋಕವೃತ್ತಿಯಿದು; ಕಂಗಳಲಿ ಕಂಡರಿವರಧಮರು – ಪದ್ಯ ೬೨
  • ಬೆಳದಿಂಗಳು ವಿಯೋಗಿಗೆ ವಿಷಮವೆಂದನು – ಪದ್ಯ ೬೩

ಪದ್ಯ ೧: ಭೀಷ್ಮರು ಕೃಷ್ಣನ ಲೀಲೆಯನ್ನು ಹೇಳಲು ಹೇಗೆ ಸಿದ್ಧರಾದರು?

ಕೇಳು ಜನಮೇಜಯ ಧರಿತ್ರೀ
ಪಾಲ ವಿರಚಿತ ಪದಯುಗ ಪ್ರ
ಕ್ಷಾಳನಾಚಮನೀಯ ತತ್ಪರಿಶುದ್ಧ ಭಾವದಲಿ
ಆ ಲಲಿತ ತಲ್ಪದ ಯಶೋದಾ
ಬಾಲಕಂಗಭಿನಮಿಸಿ ನಿಮಿಷನಿ
ಮೀಲಿತಾಕ್ಷನು ಕಂದೆರೆದು ಮುನಿಜನಕೆ ಕೈ ಮುಗಿದು (ಸಭಾ ಪರ್ವ, ೧೦ ಸಂಧಿ, ೧ ಪದ್ಯ)

ತಾತ್ಪರ್ಯ:
ಕೇಳು ಜನಮೇಜಯ ರಾಜ, ಭೀಷ್ಮನು ಶ್ರೀಕೃಷ್ಣನ ಲೀಲೆಗಳನ್ನು ಹೇಳುವುದಕ್ಕೂ ಮೊದಲು ತನ್ನ ಎರಡು ಪಾದಗಳನ್ನು ತೊಳೆದುಕೊಂಡು, ಆಚಮನವನ್ನು ಮಾಡಿ, ಪರಿಶುದ್ಧನಾಗಿ ಸುಂದರ ಹಾಸಿನಲ್ಲಿ ಮಲಗಿದ ಯಶೋದಾನಂದನನಿಗೆ ನಮಸ್ಕರಿಸಿ ಕಣ್ಣು ಮುಚ್ಚಿಕೊಂಡು, ತೆರೆದು ಮುನಿಗಳಿಗೆ ನಮಸ್ಕರಿಸಿದನು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ವಿರಚಿತ: ನಿರ್ಮಿಸಲ್ಪಟ್ಟ; ಪದ: ಪಾದ, ಚರಣ; ಪದಯುಗ: ಪಾದದ್ವಯ; ಪ್ರಕ್ಷಾಳ: ತೊಳೆದು; ಆಚಮನ:ಅಂಗೈಯಲ್ಲಿ ನೀರನ್ನು ಹಾಕಿಕೊಂಡು ಮಂತ್ರಪೂರ‍್ವಕವಾಗಿ ಸೇವಿಸುವುದು; ಪರಿಶುದ್ಧ: ನಿರ್ಮಲ; ಭಾವ: ಭಕ್ತಿಯ ರಹಸ್ಯ; ಲಲಿತ: ಚೆಲುವಾದ, ಸುಂದರವಾದ; ತಲ್ಪ: ಹಾಸಿಗೆ, ಶಯ್ಯೆ, ಸುಪ್ಪತ್ತಿಗೆ; ಬಾಲಕ: ಚಿಕ್ಕ ಹುಡುಗ; ಅಭಿನಮಿಸಿ: ನಮಸ್ಕರಿಸಿ; ನಿಮಿಷ: ಕಣ್ಣು ಮುಚ್ಚಿತೆಗೆಯುವಷ್ಟು ಕಾಲ; ನಿಮೀಲಿತಾಕ್ಷ: ಮುಚ್ಚಿದ ಕಣ್ಣುಳ್ಳವನು; ಕಂದೆರೆದು: ಕಣ್ಣನ್ನು ತೆರೆದು; ಮುನಿ: ಋಷಿ; ಜನ: ಸಮೂಹ; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಕೇಳು+ ಜನಮೇಜಯ +ಧರಿತ್ರೀ
ಪಾಲ +ವಿರಚಿತ +ಪದಯುಗ +ಪ್ರ
ಕ್ಷಾಳನ್+ಆಚಮನೀಯ +ತತ್+ಪರಿಶುದ್ಧ+ ಭಾವದಲಿ
ಆ +ಲಲಿತ+ ತಲ್ಪದ +ಯಶೋದಾ
ಬಾಲಕಂಗ್+ಅಭಿನಮಿಸಿ +ನಿಮಿಷ+ನಿ
ಮೀಲಿತಾಕ್ಷನು+ ಕಂದೆರೆದು+ ಮುನಿಜನಕೆ+ ಕೈ +ಮುಗಿದು

ಅಚ್ಚರಿ:
(೧) ಕೃಷ್ಣನ ವರ್ಣನೆ – ಆ ಲಲಿತ ತಲ್ಪದ ಯಶೋದಾಬಾಲಕಂಗಭಿನಮಿಸಿ
(೨) ಭಕ್ತಿ ಭಾವದ ವರ್ಣನೆ – ನಿಮಿಷನಿಮೀಲಿತಾಕ್ಷನು ಕಂದೆರೆದು

ಪದ್ಯ ೫೪:ಭೀಷ್ಮರು ಎಲ್ಲರಿಗು ಯಾವುದನ್ನು ಕೇಳಲು ಹೇಳ ತೊಡಗಿದರು?

ಕೇಳು ಧರ್ಮಜ ಸಕಲಋಷಿಗಳು
ಕೇಳಿರೈ ನೆರೆದವನಿಪಾಲರು
ಕೇಳಿರೈ ನೆರದಖಿಳಜನ ಚಿತ್ತಾವಧಾನದಲಿ
ಶ್ರೀಲತಾಂಗಿಯ ವಲ್ಲಭನ ಶ್ರುತಿ
ಮೌಳಿಮಂಡಿತ ಪಾದಪೀಠನ
ಲೀಲೆಯನು ಚಿತ್ತವಿಸಿ ಗದುಗಿನ ವೀರನಾರಯಣನ (ಸಭಾ ಪರ್ವ, ೯ ಸಂಧಿ, ೫೪ ಪದ್ಯ)

ತಾತ್ಪರ್ಯ:
ಧರ್ಮರಾಯನ ಕೋರಿಕೆಯ ಮೇರೆಗೆ ಭೀಷ್ಮರು ಸಮಸ್ತ ಋಷಿ ಪ್ರಮುಖರೆ, ಎಲ್ಲಾ ರಾಜರೇ, ಸಭೆಯಲ್ಲಿರುವ ಸಮಸ್ತರೂ ಮನಸ್ಸಿಟ್ಟು ಕೇಳಿರಿ, ಲಕ್ಷ್ಮೀವಲ್ಲಭನ, ವೇದಗಳ ಶಿಖರಪ್ರಾಯದಂತೆ ಅಲಂಕೃತನಾದ, ಉಪನಿಷತ್ ವಾಕ್ಯಮಂಡಿತ ಪಾದಪೀಠನೂ ಆದ ಶ್ರೀಕೃಷ್ಣನ ಲೀಲೆಯನ್ನು ಎಲ್ಲರೂ ಚಿತ್ತವಿಟ್ಟು ಕೇಳಿರಿ ಎಂದು ಹೇಳಿದರು.

ಅರ್ಥ:
ಕೇಳು: ಆಲಿಸು; ಸಕಲ: ಎಲ್ಲಾ; ಋಷಿ: ಮುನಿ; ನೆರೆದ: ಸೇರಿದ; ಅವನಿಪಾಲ: ರಾಜ; ಅಖಿಳ: ಎಲ್ಲಾ; ಜನ: ಮನುಷ್ಯರು; ಚಿತ್ತ: ಮನಸ್ಸು; ಅವಧಾನ: ಏಕಚಿತ್ತತೆ; ಶ್ರೀಲತಾಂಗಿ: ಲಕ್ಷ್ಮಿ; ವಲ್ಲಭ: ಗಂಡ, ಪತಿ; ಶ್ರುತಿ: ವೇದ; ಮೌಳಿ: ಶಿರ; ಮಂಡಿತ: ಅಲಂಕೃತವಾದ; ಪಾದ: ಚರಣ;ಪೀಠ: ಆಸನ; ಲೀಲೆ: ಆನಂದ, ಸಂತೋಷ, ವಿಲಾಸ; ಚಿತ್ತವಿಸಿ: ಗಮನವಿಟ್ಟು ಕೇಳಿ;

ಪದವಿಂಗಡಣೆ:
ಕೇಳು +ಧರ್ಮಜ +ಸಕಲ+ಋಷಿಗಳು
ಕೇಳಿರೈ+ ನೆರೆದ್+ಅವನಿಪಾಲರು
ಕೇಳಿರೈ+ ನೆರದ್+ಅಖಿಳ+ಜನ +ಚಿತ್ತ+ಅವಧಾನದಲಿ
ಶ್ರೀಲತಾಂಗಿಯ +ವಲ್ಲಭನ +ಶ್ರುತಿ
ಮೌಳಿ+ಮಂಡಿತ+ ಪಾದ+ಪೀಠನ
ಲೀಲೆಯನು +ಚಿತ್ತವಿಸಿ+ ಗದುಗಿನ+ ವೀರನಾರಯಣನ

ಅಚ್ಚರಿ:
(೧) ಕೇಳು, ಕೇಳಿರೈ – ೧-೩ ಸಾಲಿನ ಮೊದಲ ಪದ
(೨) ಲಕ್ಷ್ಮಿಯನ್ನು ಶ್ರೀಲತಾಂಗಿ ಎಂದು ಕರೆದಿರುವುದು
(೩) ಕೃಷ್ಣನ ಗುಣವಾಚಕಗಳು – ಶ್ರೀಲತಾಂಗಿಯ ವಲ್ಲಭ, ಶ್ರುತಿಮೌಳಿಮಂಡಿತ ಪಾದಪೀಠ;

ಪದ್ಯ ೫೩: ಧರ್ಮಜನು ಭೀಷ್ಮರಲ್ಲಿ ಏನು ಕೋರಿದ?

ಕರುಣಿಸೈ ಗಾಂಗೇಯ ಕೃಷ್ಣನ
ಚರಿತವನು ಶಿಶುಪಾಲ ಭೂಪನ
ಕರಣವೃತ್ತಿಯ ಕದಡು ತಿಳಿಯಲಿ ದೈವ ದೂರನಲೇ
ದುರುಳನಿವನ ದುರುಕ್ತಿಗಳ ಕೇ
ಳ್ದರಿಗೆ ಪ್ರಾಯಶ್ಚಿತ್ತವಿದು ವಿ
ಸ್ತರಿಸಬೇಹುದು ಸಕಲ ಜನಮತವೆಂದನಾ ಭೂಪ (ಸಭಾ ಪರ್ವ, ೯ ಸಂಧಿ, ೫೩ ಪದ್ಯ)

ತಾತ್ಪರ್ಯ:
ಧರ್ಮಜನು ಭೀಷ್ಮರಲ್ಲಿ ಕೇಳಿದನು, ಎಲೈ ಗಂಗಾಪುತ್ರ ಭೀಷ್ಮರೇ, ಶ್ರೀ ಕೃಷ್ಣನ ಚರಿತೆಯನ್ನು ಹೇಳಿರಿ, ಅದನ್ನು ಕೇಳಿ ದೈವದಿಂದ ದೂರನಾಗಿರುವ ಶಿಶುಪಾಲನ ಮನಸ್ಸಿನ ಕದಡು ತಿಳಿಯಾಗಲಿ, ಈ ದುಷ್ಟನ ದುರುಕ್ತಿಗಳನ್ನು ಕೇಳಿದ ತಪ್ಪಿಗೆ ಶ್ರೀಕೃಷ್ಣನ ಅರಿತೆಯನ್ನು ಕೇಳುವುದೇ ಪ್ರಾಯಶ್ಚಿತ್ತ, ಸಮಸ್ತರೂ ಅದನ್ನು ಕೇಳಲು ಕಾತುರರಾಗಿದ್ದಾರೆ ಎಂದನು.

ಅರ್ಥ:
ಕರುಣಿಸು: ದಯಪಾಲಿಸು; ಗಾಂಗೇಯ: ಭೀಷ್ಮ; ಚರಿತ: ಚಾರಿತ್ರ, ಕಥೆ; ಭೂಪ: ರಾಜ; ಕರಣ: ಕಿವಿ; ವೃತ್ತಿ: ಕೆಲಸ; ಕರಣವೃತ್ತಿ: ಕೇಳುವ ಕಾಯಕ; ಕದಡು:ಕಲಕು; ತಿಳಿ: ಅರಿ; ದೈವ: ಭಗವಂತ; ದೂರ: ಅಂತರ; ದುರುಳ: ದುಷ್ಟ; ದುರುಕ್ತಿ: ಕೆಟ್ಟ ಮಾತು; ಕೇಳು: ಆಲಿಸು; ಪ್ರಾಯಶ್ಚಿತ್ತ: ತಾನು ಮಾಡಿದ ತಪ್ಪಿಗಾಗಿ ವ್ಯಥೆ ಪಟ್ಟು ಪರಿಹಾರ ಮಾಡಿಕೊಳ್ಳುವ ಕರ್ಮ ವಿಧಿ; ವಿಸ್ತರಿಸು: ಹರಡು; ಸಕಲ: ಎಲ್ಲಾ; ಜನಮತ: ಜನರ ಅಭಿಪ್ರಾಯ;

ಪದವಿಂಗಡಣೆ:
ಕರುಣಿಸೈ +ಗಾಂಗೇಯ +ಕೃಷ್ಣನ
ಚರಿತವನು +ಶಿಶುಪಾಲ +ಭೂಪನ
ಕರಣವೃತ್ತಿಯ +ಕದಡು +ತಿಳಿಯಲಿ +ದೈವ +ದೂರನಲೇ
ದುರುಳನ್+ಇವನ +ದುರುಕ್ತಿಗಳ+ ಕೇ
ಳ್ದರಿಗೆ +ಪ್ರಾಯಶ್ಚಿತ್ತವಿದು+ ವಿ
ಸ್ತರಿಸ+ಬೇಹುದು +ಸಕಲ+ ಜನಮತವೆಂದನಾ +ಭೂಪ

ಅಚ್ಚರಿ:
(೧) ದುರುಳ, ದುರುಕ್ತಿ, ಕರಣವೃತ್ತಿ – ಪದಗಳ ಬಳಕೆ
(೨) ದ ಕಾರದ ಸಾಲು ಪದಗಳು – ದೈವ ದೂರನಲೇ ದುರುಳನಿವನ ದುರುಕ್ತಿಗಳ

ಪದ್ಯ ೫೨: ಭೀಷ್ಮರು ಕೃಷ್ಣನ ಗುಣಗಾನವನ್ನು ಹೇಗೆ ಮಾಡಿದರು?

ಈತ ಸಚರಾಚರದ ಗುರು ವಿ
ಖ್ಯಾತ ಋತ್ವಿಜನೀತನಾಚಾ
ರ್ಯಾತಿಶಯನೀತನು ಮಹಾಪ್ರಿಯನೀತ ನೃಪನೀತ
ಸ್ನಾತಕ ವ್ರತಿಯೀತನೀತನ
ಮಾತು ನಿನಗೆತ್ತಣದು ನವಖ
ದ್ಯೋತಕೆತ್ತಣ ಸೂರ್ಯಮಂಡಲವೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೫೨ ಪದ್ಯ)

ತತ್ಪರ್ಯ:
ಭೀಷ್ಮನು ಕೃಷ್ಣನ ಗುಣಗಾನವನ್ನು ಮಾಡುತ್ತಾ, ಶಿಶುಪಾಲ ನೀನೆಲ್ಲಿ, ಈ ಕೃಷ್ಣನೆಲ್ಲಿ? ಶ್ರೀಕೃಷ್ಣನು ಸಚರಾಚರದ ಗುರು, ಅತ್ಯಂತ ಪ್ರಸಿದ್ಧನಾದ ಋತ್ವಿಜ, ಆಚಾರ್ಯರಲ್ಲೆಲ್ಲಾ ಹೆಚ್ಚಿನವನು. ಇವನು ಮಹಾ ಪ್ರಿಯ, ಇವನು ರಾಜ, ಸ್ನಾತಕವ್ರತಿ, ಇವನ ಮಾತು ನಿನಗೇನು ಗೊತ್ತು, ದೀಪದ ಹುಳದ ಮರಿಯೆಲ್ಲಿ ಸೂರ್ಯಮಂಡಲವೆಲ್ಲಿ ಎಂದನು.

ಅರ್ಥ:
ಚರಾಚರ: ಚಲಿಸುವ ಮತ್ತು ಚಲಿಸದಿರುವ; ಗುರು: ಆಚಾರ್ಯ; ವಿಖ್ಯಾತ: ಪ್ರಸಿದ್ಧ; ಋತ್ವಿಜ: ಯಜ್ಞ ಮಾಡುವವ; ಆಚಾರ್ಯ: ಗುರು, ಆದ್ಯ ಪ್ರವರ್ತಕ; ಅತಿಶಯ: ಅಧಿಕ, ಹೆಚ್ಚು; ಮಹಾ: ಶ್ರೇಷ್ಠ; ಪ್ರಿಯ: ಒಲವು; ನೃಪ: ರಾಜ; ಸ್ನಾತಕ: ಗುರುಕುಲದಲ್ಲಿ ವಿದ್ಯಾರ್ಜನೆ ಮುಗಿಸಿ ಗೃಹಸ್ಥಾಶ್ರಮಕ್ಕೆ ಸೇರುವವನು; ವ್ರತಿ: ಯೋಗಿ, ತಪಸ್ವಿ; ಮಾತು: ವಾಣಿ; ಎತ್ತಣ: ಎಲ್ಲಿಯ; ಖದ್ಯೋತ: ಸೂರ್ಯ; ನವ: ಹೊಸ; ಸೂರ್ಯ: ರವಿ; ಮಂಡಲ: ಗುಂಡಾಗಿರುವುದು;

ಪದವಿಂಗಡನೆ:
ಈತ +ಸಚರಾಚರದ+ ಗುರು +ವಿ
ಖ್ಯಾತ +ಋತ್ವಿಜನ್+ಈತನ್+ಆಚಾ
ರ್ಯ+ಅತಿಶಯನ್+ಈತನು +ಮಹಾಪ್ರಿಯನ್+ಈತ+ ನೃಪನ್+ಈತ
ಸ್ನಾತಕ+ ವ್ರತಿ+ಈತನ್+ಈತನ
ಮಾತು +ನಿನಗ್+ಎತ್ತಣದು +ನವ+ಖ
ದ್ಯೋತಕ್+ಎತ್ತಣ+ ಸೂರ್ಯ+ಮಂಡಲವೆಂದನಾ+ ಭೀಷ್ಮ

ಅಚ್ಚರಿ:
(೧) ಕೃಷ್ಣನ ಗುಣಗಾನಗಳು – ಸಚರಾಚರದ ಗುರು, ವಿಖ್ಯಾತ ಋತ್ವಿಜ, ಆಚಾರ್ಯಾತಿಶಯ, ಮಹಾಪ್ರಿಯ, ನೃಪ, ಸ್ನಾತಕ ವ್ರತಿ

ಪದ್ಯ ೫೧: ರಾಕ್ಷಸರು ಯಾವಜ್ಞಾನದಲ್ಲಿ ನಿಪುಣರು?

ಏನ ಹೇಳ್ವುದು ಧರ್ಮತತ್ವ ನಿ
ಧಾನದಲಿ ಮುನಿ ಮುಖ್ಯರಿವರ
ಜ್ಞಾನಿಗಳು ಶಿಶುಪಾಲ ತತ್ವಜ್ಞಾನ ಪಂಡಿತನು
ಆ ನಿಶಾಟರು ಮೆಚ್ಚರಗ್ಗದ
ಭಾನುರಶ್ಮಿಯನಂಧಕಾರ
ಜ್ಞಾನನಿಷ್ಠರು ನಿಪುಣರೈಸಲೆಯೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೫೧ ಪದ್ಯ)

ತಾತ್ಪರ್ಯ:
ಭೀಷ್ಮರು ತಮ್ಮ ಮಾತನ್ನು ಮುಂದುವರಿಸುತ್ತಾ, ಧರ್ಮತತ್ತ್ವದ ನೆಲೆಯನ್ನರಿಯುವುದರಲ್ಲಿ ಈ ಋಷಿಮುಖ್ಯರು ಅಜ್ಞಾನಿಗಳು, ಶಿಶುಪಾಲನೇ ತತ್ತ್ವಜ್ಞಾನಿ, ಇದಕ್ಕೆ ಏನೆಂದು ಹೇಳೋಣ? ರಾಕ್ಷಸರು ಸೂರ್ಯನ ಬೆಳಕನ್ನು ಮೆಚ್ಚುವುದಿಲ್ಲ ಏಕೆಂದರೆ ಅವರು ಅಂಧಕಾರಜ್ಞಾನದಲ್ಲಿ ನಿಪುಣರಲ್ಲವೇ ಎಂದು ಭೀಷ್ಮರು ಹೇಳಿದರು.

ಅರ್ಥ:
ಹೇಳು: ತಿಳಿಸು; ಧರ್ಮ: ಧಾರಣೆ ಮಾಡಿದುದು, ಆಚಾರ, ಪುಣ್ಯ; ನಿಧಾನ: ಸಂಪತ್ತು, ಸಾವಕಾಶ; ಮುನಿ:ಋಷಿ; ಮುಖ್ಯ: ಪ್ರಮುಖ; ಅಜ್ಞಾನಿ: ತಿಳಿಯದವ; ತತ್ವ:ಅರ್ಥ, ತಾತ್ಪರ್ಯ; ಪಂಡಿತ: ಕೋವಿದ; ನಿಶಾಟರು: ರಾತ್ರಿಯಲ್ಲಿ ತಿರುಗುವ; ಮೆಚ್ಚು: ಒಲುಮೆ, ಪ್ರೀತಿ; ಅಗ್ಗ: ಶ್ರೇಷ್ಠ; ಭಾನು: ಸೂರ್ಯ; ರಶ್ಮಿ: ಕಿರಣ; ಅಂಧಕಾರ: ಕತ್ತಲು; ನಿಷ್ಠ: ಶ್ರದ್ಧೆಯುಳ್ಳವನು; ನಿಪುಣ: ಪಾರಂಗತ, ಪ್ರವೀಣ; ಐಸಲೇ: ಅಲ್ಲವೇ;

ಪದವಿಂಗಡಣೆ:
ಏನ +ಹೇಳ್ವುದು +ಧರ್ಮತತ್ವ +ನಿ
ಧಾನದಲಿ+ ಮುನಿ +ಮುಖ್ಯರ್+ಇವರ್
ಅಜ್ಞಾನಿಗಳು+ ಶಿಶುಪಾಲ+ ತತ್ವಜ್ಞಾನ +ಪಂಡಿತನು
ಆ +ನಿಶಾಟರು +ಮೆಚ್ಚರ್+ಅಗ್ಗದ
ಭಾನುರಶ್ಮಿಯನ್+ಅಂಧಕಾರ
ಜ್ಞಾನ+ನಿಷ್ಠರು+ ನಿಪುಣರ್+ಐಸಲೆ+ಎಂದನಾ ಭೀಷ್ಮ

ಅಚ್ಚರಿ:
(೧) ಶಿಶುಪಾಲನನ್ನು ತೆಗಳುವ ಪರಿ – ಮುನಿ ಮುಖ್ಯರಿವರ ಜ್ಞಾನಿಗಳು ಶಿಶುಪಾಲ ತತ್ವಜ್ಞಾನ ಪಂಡಿತನು
(೨) ರಾಕ್ಷಸರನ್ನು ತೆಗಳುವ ಪರಿ – ನಿಶಾಟರು ಮೆಚ್ಚರಗ್ಗದ ಭಾನುರಶ್ಮಿಯನಂಧಕಾರ ಜ್ಞಾನನಿಷ್ಠರು ನಿಪುಣರೈಸಲೆ

ಪದ್ಯ ೫೦: ಕೃಷ್ಣನು ಯಾವುದರಲ್ಲಿ ವೃದ್ಧನು?

ಜ್ಞಾನವೃದ್ಧರು ವಿಪ್ರರಲಿ ಸ
ನ್ಮಾನನೀಯರು ಶೌರ್ಯವೃದ್ಧರು
ಮಾನವೇಂದ್ರರೊಳಧಿಕವಿದು ಪೌರಾಣ ಸಿದ್ಧವಲೆ
ಜ್ಞಾನವೃದ್ಧನು ಕೃಷ್ಣನಾಹವ
ದೀನನೇ ಘನ ಶೌರ್ಯನೆಂಬುದ
ತಾನರಿಯನೇ ಚೈದ್ಯ ಭೂಪತಿ ಎಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ಬ್ರಾಹ್ಮಣರಲ್ಲಿ ಜ್ಞಾನವಿರುವವರು ವೃದ್ಧರು, ಕ್ಷತ್ರಿಯರಲ್ಲಿ ಶೌರ್ಯದಿಂದ ವೃದ್ಧರಾಗುತ್ತಾರೆ, ಇದು
ಹಿಂದಿನಿಂದಲೂ ಬಂದ ವಾಡಿಕೆ. ಕೃಷ್ಣನು ಜ್ಞಾನವೃದ್ಧನು. ಅವನು ಮಹಾಶೂರನೆಂಬುದು ಶಿಶುಪಾಲನಿಗೆ ತಿಳಿದಿಲ್ಲವೇ ಎಂದು ಭೀಷ್ಮನು ಪ್ರಶ್ನಿಸಿದನು.

ಅರ್ಥ:
ವೃದ್ಧ: ಗೌರವಾರ್ಹ, ಪೂಜ್ಯ, ಪಂಡಿತ, ವಯಸ್ಸಾದವ; ಜ್ಞಾನ: ತಿಳುವಳಿಕೆ, ವಿದ್ಯೆ; ವಿಪ್ರ: ಬ್ರಾಹ್ಮಣ; ಶೌರ್ಯ: ಪರಾಕ್ರಮ; ಪೌರಾಣ: ಪುರಾಣ, ಹಿಂದಿನ ದಾಖಲೆ; ಸಿದ್ಧ: ಅಣಿಯಾದ; ಆಹವ: ಯುದ್ಧ; ದೀನ: ಬಡವ, ದರಿದ್ರ; ಘನ: ಶ್ರೇಷ್ಠ; ಅರಿ: ತಿಳಿ; ಚೈದ್ಯ: ಶಿಶುಪಾಲ; ಭೂಪತಿ: ರಾಜ;

ಪದವಿಂಗಡಣೆ:
ಜ್ಞಾನವೃದ್ಧರು +ವಿಪ್ರರಲಿ +ಸ
ನ್ಮಾನನೀಯರು +ಶೌರ್ಯವೃದ್ಧರು
ಮಾನವೇಂದ್ರರೊಳ್+ಅಧಿಕವಿದು+ ಪೌರಾಣ+ ಸಿದ್ಧವಲೆ
ಜ್ಞಾನವೃದ್ಧನು+ ಕೃಷ್ಣನ್+ಆಹವ
ದೀನನೇ +ಘನ+ ಶೌರ್ಯನ್+ಎಂಬುದ
ತಾನ್+ಅರಿಯನೇ +ಚೈದ್ಯ +ಭೂಪತಿ +ಎಂದನಾ +ಭೀಷ್ಮ

ಅಚ್ಚರಿ:
(೧) ಕೃಷ್ಣನ ಪರಿಣತಿ – ಜ್ಞಾನವೃದ್ಧನು ಕೃಷ್ಣನ್
(೨) ಜ್ಞಾನವೃದ್ಧ, ಶೌರ್ಯವೃದ್ಧ – ಪದಗಳ ಬಳಕೆ

ಪದ್ಯ ೪೯: ಯಾರ ಮಕ್ಕಳು ಕೃಷ್ಣನಿಂದ ಪಟ್ಟಾಭಿಷಿಕ್ತರಾದರು?

ಮಗಧಸುತನೀ ಸಾಲ್ವ ಹಂಸನ
ಮಗ ನಿಶುಂಭನ ಸೂನು ನರಕನ
ಮಗನು ಪೌಂಡ್ರಕ ದಂತವಕ್ತ್ರನ ತನುಜರಿವರೆಲ್ಲ
ಹಗೆಯ ಮಾಡಿ ಮುರಾಂತಕನ ಕಾ
ಳಗದೊಳೆಲ್ಲರನಿಕ್ಕಿ ಪಟ್ಟವ
ಬಿರಿಸಿಕೊಂಡವರಲ್ಲವೇ ಹೇಳೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೪೯ ಪದ್ಯ)

ತಾತ್ಪರ್ಯ:
ಜರಾಸಂಧನ ಮಗ, ಸಾಲ್ವ, ಹಂಸ, ನಿಶುಂಭ, ನರಕ, ಪೌಂಡ್ರಕ, ದಂತವಕ್ತ್ರ ಇವರ ಮಕ್ಕಳೂ ಯುದ್ಧದಲ್ಲಿ ಕೃಷ್ಣನಿಂದ ತಮ್ಮ ತಂದೆಯರನ್ನು ಕಳೆದುಕೊಂಡ ನಂತರ ಕೃಷ್ಣನಿಂದಲೇ ಪಟ್ಟಕ್ಕೆ ಬಂದವರಲ್ಲವೇ ಎಂದು ಭೀಷ್ಮರು ಕೇಳಿದರು.

ಅರ್ಥ:
ಸುತ: ಮಗ; ಮಗಧಸುತ: ಜರಾಸಂಧ; ಹಗೆ: ವೈರತ್ವ; ಮುರಾಂತಕ: ಕೃಷ್ಣ; ಕಾಳಗ: ಯುದ್ಧ;ಇಕ್ಕು: ಸಾಯಿಸು; ಪಟ್ಟ: ಪದವಿ; ಬಿರಿಸು: ಕಟ್ಟು; ಹೇಳು: ತಿಳಿಸು;

ಪದವಿಂಗಡಣೆ:
ಮಗಧಸುತನ್+ಈ+ ಸಾಲ್ವ +ಹಂಸನ
ಮಗ +ನಿಶುಂಭನ+ ಸೂನು +ನರಕನ
ಮಗನು +ಪೌಂಡ್ರಕ +ದಂತವಕ್ತ್ರನ+ ತನುಜರ್+ಇವರೆಲ್ಲ
ಹಗೆಯ +ಮಾಡಿ +ಮುರಾಂತಕನ+ ಕಾ
ಳಗದೊಳ್+ಎಲ್ಲರನ್+ಇಕ್ಕಿ +ಪಟ್ಟವ
ಬಿರಿಸಿಕೊಂಡವರ್+ಅಲ್ಲವೇ +ಹೇಳೆಂದನಾ +ಭೀಷ್ಮ

ಅಚ್ಚರಿ:
(೧) ಮಗ, ಸೂನು, ತನುಜ – ಸಮನಾರ್ಥಕ ಪದ
(೨) ಮಗ – ೧-೩ ಸಾಲಿನ ಮೊದಲ ಪದ