ಪದ್ಯ ೩೨: ಆಗ್ನೇಯಾಸ್ತ್ರಕ್ಕೆ ಪ್ರತಿಯಾಗಿ ಅರ್ಜುನನು ಯಾವ ಬಾಣವನ್ನು ಬಿಟ್ಟನು?

ಆಹಹ ಬೆಂದುದು ಲೋಕವಿನ್ನಾ
ರಹಿಮುಖವ ಚುಂಬಿಸುವರೋ ವಿ
ಗ್ರಹದ ಫಲನಿಗ್ರಹವಲಾ ಶಿವ ಎನುತ ಸುರರುಲಿಯೆ
ವಹಿಲ ಮಿಗೆ ವರುಣಾಸ್ತ್ರದಲಿ ಹುತ
ವಹನ ಬಿಂಕವ ಬಿಡಿಸಿದನು ಜಯ
ವಹುದೆ ಪರರಿಗೆ ಪಾರ್ಥನಿರೆ ಜನನಾಥ ಕೇಳೆಂದ (ಕರ್ಣ ಪರ್ವ, ೨೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಓಹೋ ಲೋಕವು ಕರ್ಣನ ಆಗ್ನೇಯಾಸ್ತ್ರಕ್ಕೆ ಬೆಂದುಹೋಗುತ್ತದೆ ಕಾಳಸರ್ಪದ ಮುಖವನ್ನು ಚುಂಬಿಸುವವರಾರು? ಯುದ್ಧದ ಫಲವು ವಿನಾಶವಲ್ಲವೇ ಎಂದು ದೇವತೆಗಳು ಮಾತನಾಡುತ್ತಿರಲು, ಅರ್ಜುನನು ಅತಿವೇಗದಿಂದ ವರುಣಾಸ್ತ್ರವನ್ನು ಬಿಟ್ಟು ಅಗ್ನಿಯ ಆರ್ಭಟ, ಗರ್ವವನ್ನು ಮೊಟಕುಗೊಳಿಸಿದನು. ರಾಜ ಧೃತರಾಷ್ಟ್ರ ಅರ್ಜುನನಿರಲು ಎದುರಾಳಿಗೆ ಜಯವು ಲಭಿಸುವುದೇ ಎಂದು ಸಂಜಯನು ಹೇಳಿದನು.

ಅರ್ಥ:
ಅಹಹ: ಓಹೋ, ಅಬ್ಬ; ಬೆಂದು: ಸುಡು; ಲೋಕ: ಜಗತ್ತು; ಅಹಿ: ಹಾವು; ಮುಖ: ಆನನ; ಚುಂಬಿಸು: ಮುತ್ತಿಡು; ವಿಗ್ರಹ: ಯುದ್ಧ; ಫಲ: ಫಲಿತಾಂಶ, ಪರಿಣಾಮ; ನಿಗ್ರಹ: ಅಂಕೆ, ಹತೋಟಿ; ಶಿವ: ಮಹಾದೇವ; ಸುರ: ದೇವತೆ; ಉಲಿ: ಮಾತನಾಡು; ವಹಿಲ: ಬೇಗ, ತ್ವರೆ; ಮಿಗೆ: ಮತ್ತು; ವರುಣ: ನೀರಿನ ಅಧಿದೇವತೆ; ಅಸ್ತ್ರ: ಆಯುಧ; ಹುತ: ಹವಿಸ್ಸು; ಹುತವಹ: ಅಗ್ನಿ; ಬಿಂಕ: ಗರ್ವ, ಜಂಬ; ಬಿಡಿಸು: ಹೋಗಲಾಡಿಸು; ಜಯ: ಗೆಲುವು; ಪರರು: ಇತರರು; ಜನನಾಥ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆಹಹ +ಬೆಂದುದು +ಲೋಕವ್+ಇನ್ನಾರ್
ಅಹಿ+ಮುಖವ+ ಚುಂಬಿಸುವರೋ+ ವಿ
ಗ್ರಹದ+ ಫಲ+ನಿಗ್ರಹವಲಾ +ಶಿವ+ ಎನುತ +ಸುರರ್+ಉಲಿಯೆ
ವಹಿಲ +ಮಿಗೆ +ವರುಣಾಸ್ತ್ರದಲಿ +ಹುತ
ವಹನ+ ಬಿಂಕವ +ಬಿಡಿಸಿದನು+ ಜಯವ್
ಅಹುದೆ+ ಪರರಿಗೆ+ ಪಾರ್ಥನಿರೆ +ಜನನಾಥ +ಕೇಳೆಂದ

ಅಚ್ಚರಿ:
(೧) ಬೆಂಕಿಯನ್ನು ನಂದಿಸುವರಾರು ಎಂದು ಹೇಳಲು – ಚುಂಬಿಸು, ಮುತ್ತಿಡು ಪದದ ಬಳಕೆ – ಲೋಕವಿನ್ನಾರಹಿಮುಖವ ಚುಂಬಿಸುವರೋ
(೨) ಬೆಂಕಿಯನ್ನು ನಂದಿಸಿದನು ಎಂದು ಹೇಳಲು – ಬಿಂಕ ಪದದ ಬಳಕಿ – ವರುಣಾಸ್ತ್ರದಲಿ ಹುತವಹನ ಬಿಂಕವ ಬಿಡಿಸಿದನು

ನಿಮ್ಮ ಟಿಪ್ಪಣಿ ಬರೆಯಿರಿ